ರಸಗೊಬ್ಬರ ನೀಡಿ ಎಂದು ರೈತರು ಸರ್ಕಾರದ ಮುಂದೆ ಅಂಗಲಾಚುವ ಪರಿಸ್ಥಿತಿಯಲ್ಲಿದ್ದಾರೆ. ಇದು ತಪ್ಪಬೇಕು ಅಂದರೆ ಮಣ್ಣಿನ ಫಲವತ್ತತೆ ಹೆಚ್ಚಿಸಲು ಮತ್ತು ಬೆಳೆಗಳ ಬೆಳವಣಿಗೆಗೆ ಪೋಷಕಾಂಶಗಳನ್ನು ಒದಗಿಸಲು ಸಾವಯವ ಗೊಬ್ಬರ ಕಡೆ ಮುಖ ಮಾಡಬೇಕು ಎನ್ನುತ್ತಾರೆ ಪ್ರಗತಿಪರ ರೈತರು ಮತ್ತು ಕೃಷಿ ತಜ್ಞರು.
ರಾಜ್ಯದ ರೈತರು ರಸಗೊಬ್ಬರ ನೀಡಿ ಎಂದು ಅಂಗಲಾಚುವ ಪರಿಸ್ಥಿತಿಯಲ್ಲಿದ್ದಾರೆ. ಯೂರಿಯಾ ಗೊಬ್ಬರಕ್ಕಾಗಿ ಬಹುತೇಕ ರೈತರು ಮೊರೆ ಇಡುತ್ತಿದ್ದು, ಸೊಸೈಟಿಗಳ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಕೇಂದ್ರದಿಂದ ಯೂರಿಯಾ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆಯಾಗಿದೆ. ಈ ಸಲ 1.36 ಲಕ್ಷ ಮೆಟ್ರಿಕ್ ಟನ್ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ. ಮುಂಗಾರು ಬೇಗ ಪ್ರಾರಂಭವಾಗಿ ಉತ್ತಮ ಮಳೆಯಾಗಿದ್ದು, 2 ಲಕ್ಷ ಹೆಕ್ಟೇರ್ ಹೆಚ್ಚುವರಿ ಮುಸುಕಿನ ಜೋಳ ಬಿತ್ತನೆಯಾಗಿದೆ. ರಾಗಿಯೂ ಬೆಳೆದು ನಿಂತಿದೆ. ಹೀಗಾಗಿ ಯೂರಿಯಾ ಬೇಡಿಕೆ ಹಠಾತ್ ಏರಿಕೆಗೆ ಕಾರಣವಾಗಿದೆ.
ದಾವಣಗೆರೆ, ಹೊಳಲ್ಕೆರೆ, ಚಿತ್ರದುರ್ಗ, ಚನ್ನಗಿರಿ, ಗದಗ, ಬಾಗಲಕೋಟೆ, ಕೊಪ್ಪಳ, ಧಾರವಾಡ, ಯಾದಗಿರಿ ಸೇರಿದಂತೆ ಹಲವಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತರು ಪ್ರತಿಭಟಿಸಿದ್ದಾರೆ.
“ಉತ್ತಮ ಮಳೆಯ ನಂತರ ಬಿತ್ತನೆ ಚಟುವಟಿಕೆಗಳು ಭರದಿಂದ ಸಾಗುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಯೂರಿಯಾ ಹಂಚಿಕೆಯನ್ನು ಕಡಿಮೆ ಮಾಡಿದೆ. ಇದರಿಂದ ಕೊರತೆ ಉಂಟಾಗಿದೆ. ಇದು ಈ ನಿರ್ಣಾಯಕ ಅವಧಿಯಲ್ಲಿ ರೈತರ ಮೇಲೆ ತೀವ್ರ ಪರಿಣಾಮ ಬೀರುತ್ತದೆ” ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಿಜೆಪಿಯಿಂದ ಪ್ರತಿಭಟನೆ
ರಾಜ್ಯದಲ್ಲಿ ತಲೆದೋರಿರುವ ರಸಗೊಬ್ಬರ ಅಭಾವ ವಿರುದ್ಧ ಸೋಮವಾರ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಸಜ್ಜಾಗಿದೆ. ಬೆಂಗಳೂರಿನಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡೋದಾಗಿ ಘೋಷಿಸಿದ್ದಾರೆ.
“ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರೈತ ಮೋರ್ಚಾ ವತಿಯಿಂದ ಬಿಜೆಪಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ.ಮುಂಗಾರು ಶೀಘ್ರ ಆರಂಭವಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಮುಂಚೆಯೇ ಸಿದ್ಧತೆ ಮಾಡಿಕೊಂಡಿಲ್ಲ, ಮುಂಚೆಯೇ ಕೇಂದ್ರಕ್ಕೆ ಪತ್ರ ಬರೆಯಬೇಕಿತ್ತು. ಈಗ ಪತ್ರ ಬರೆಯೋದಲ್ಲ” ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಸಿಎಂ, “ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಾಜ್ಯಕ್ಕೆ ಬೇಕು. ಏಪ್ರಿಲ್ ನಿಂದ ಜುಲೈ ವರೆಗೆ 6.81 ಲಕ್ಷ ಮೆಟ್ರಿಕ್ ಟನ್ ಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಸರಬರಾಜು ಮಾಡಿದ್ದು ಕೇವಲ 5.17 ಲಕ್ಷ ಮೆಟ್ರಿಕ್ ಟನ್. ಈ ವರ್ಷ 2 ಲಕ್ಷ ಹೆಕ್ಟೇರ್ ಮುಸುಕಿನ ಜೋಳ ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ಹಾಗಾಗಿ, ಹೆಚ್ಚಿನ ಬೇಡಿಕೆ ಇದೆ. ಆದರೆ, ಯೂರಿಯಾ ಸರಬರಾಜನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ನಮಗೆ ಬರಬೇಕಾದ ಯೂರಿಯಾ ಪ್ರಮಾಣದಲ್ಲಿ 1.66 ಲಕ್ಷ ಮೆಟ್ರಿಕ್ ಟನ್ ಕಡಿಮೆ ಆಗಿದೆ. ಆದರೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ದುರುದ್ದೇಶದಿಂದ ಮತ್ತು ನಾಚಿಕೆಗೇಡಿನ ಸಂಗತಿ” ಎಂದು ತಿರುಗೇಟು ನೀಡಿದ್ದಾರೆ.
“ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ 3 ಮುಂಗಾರು ಹಂಗಾಮಿನಲ್ಲಿ ಇದೇ ಸರ್ಕಾರ ಅಧಿಕಾರದಲ್ಲಿದೆ. ನಾನೇ ಕೃಷಿ ಸಚಿವನಾಗಿ ಇದ್ದೇನೆ. ಈವರೆಗೆ ಉಂಟಾಗದ ಸಮಸ್ಯೆ ಈಗೇಕೆ ಎಂಬುದನ್ನು ವಿಶ್ಲೇಷಿಸಬೇಕಾಗಿದೆ. ರಸಗೊಬ್ಬರಗಳ ಪೂರೈಕೆ ಕಾಪು ದಾಸ್ತಾನಿಗೆ ಇರಿಸಲಾಗಿದ್ದ ಗ್ಯಾರಂಟಿ ಹಣ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಹಿಂದೆ ಇದ್ದದ್ದು ಬಿಜೆಪಿ ಸರ್ಕಾರ ಅವರೇ ನಿಗದಿಪಡಿಸಿದ್ದ 400 ಕೋಟಿ ರೂ. ಹಣವನ್ನು ನಾವು ಯಥಾಸ್ಥಿತಿಯಲ್ಲಿ ಮುಂದುವರೆಸಿದ್ದೇವೆ. ಇನ್ನೂ 600 ಕೋಟಿ ರೂ. ಹೆಚ್ಚವರಿ ಹಣ ನೀಡಲು ರಾಜ್ಯ ಸರ್ಕರ ಸಿದ್ಧವಿದೆ. ಪ್ರತಿಯಾಗಿ ಬಿಜೆಪಿ ನಾಯಕರು ಗೊಬ್ಬರ ಒದಗಿಸಲು ಸಾಧ್ಯವೇ” ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
“ರಸಗೊಬ್ಬರ ಅದರಲ್ಲೂ ಮುಖ್ಯವಾಗಿ ಯೂರಿಯಾ ಮತ್ತು ಡಿ.ಎ.ಪಿ. ಪೂರೈಕೆ ಕೋರಿ ಜುಲೈ 7 ರಂದು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆ ನಂತರ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ಕೇಂದ್ರ ರಸಗೊಬ್ಬರ ಖಾತೆ ಸಚಿವರ ಭೇಟಿಗಾಗಿ ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದ್ದು, ಅವಕಾಶ ಸಿಕ್ಕರೆ ಭೇಟಿ ಮಾಡಿ, ರಾಜ್ಯದ ಪರಿಸ್ಥಿತಿ ವಿವರಿಸಿ ಮನವಿ ಮಾಡಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.
ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಪರ್ಯಾಯ ಸಾಧ್ಯತೆಗಳತ್ತ ನೋಟ
ಮಣ್ಣಿನ ಫಲವತ್ತತೆ ಹೆಚ್ಚಿಸಲು ಮತ್ತು ಬೆಳೆಗಳ ಬೆಳವಣಿಗೆಗೆ ಪೋಷಕಾಂಶಗಳನ್ನು ಒದಗಿಸಲು ಸಾವಯವ ಗೊಬ್ಬರ ಕಡೆ ಮುಖ ಮಾಡಬೇಕು ಎನ್ನುತ್ತಾರೆ ಪ್ರಗತಿಪರ ರೈತರು ಮತ್ತು ಕೃಷಿ ತಜ್ಞರು. ಸಾವಯವ ಗೊಬ್ಬರದಿಂದ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಸುಧಾರಿಸುತ್ತದೆ. ತೇವವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಸ್ಯಗಳ ಬೇರುಗಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಸಗಣಿ ಗೊಬ್ಬರವು ಮಣ್ಣಿನ ಬಿಗಿತನವನ್ನು ಕಾಪಾಡುತ್ತದೆ ಮತ್ತು ಮಳೆ, ಗಾಳಿ, ನೀರಿನಿಂದ ಉಂಟಾಗುವ ಸವಕಳಿಯನ್ನು ಕಡಿಮೆ ಮಾಡುತ್ತದೆ. ಸಾವಯವ ಗೊಬ್ಬರವು ಮಣ್ಣಿನಲ್ಲಿ ಸಾವಯವ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸುವುದಲ್ಲದೇ ಮಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿದೆ.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ ಕಮ್ಮರಡಿ ಅವರು ‘ಈ ದಿನ.ಕಾಂ’ ಜೊತೆ ಮಾತನಾಡಿ, “ಸುಸ್ಥಿರ ಕೃಷಿ ಪದ್ಧತಿಯನ್ನು ನಮ್ಮ ರೈತರು ದೂರ ತಳ್ಳಿದ ಪರಿಣಾಮ ಯೂರಿಯಾ ಗೊಬ್ಬರದ ಮೇಲೆ ನಾವಿಂದು ಅವಲಂಭಿತರಾಗಿದ್ದೇವೆ. ಯೂರಿಯಾ ಮೇಲೆ ಇಷ್ಟು ಅವಲಂಬಿತರಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಭೂಮಿ ಮತ್ತು ಬೆಳೆಗಳಿಗೆ ಸಮತೋಲಿತ ನ್ಯೂಟ್ರಿಷಿಯನ್ ಬೇಕು. ಈಗ ಕೃಷಿಗೆ ಅನಿಶ್ಚಿತತೆ ಎಂಬುದು ಹೊಸದಲ್ಲ. ಮಳೆ ಯಾವಾಗ ಬೇಕಾದರೂ ಬರಬಹುದು ಅಥವಾ ಬರದೆಯೂ ಇರಬಹುದು. ಇದಕ್ಕೆ ರೈತ ಸಜ್ಜಾಗಬೇಕು. ಈ ಭಾರಿ ಮಳೆ ಪೂರ್ವ ಮುಂಗಾರಿನಲ್ಲೇ ಚೆನ್ನಾಗಿ ಸುರಿಯಿತು. ರೈತ ಬೇಗನೇ ಕೃಷಿ ಚಟುವಟಿಕೆ ಆರಂಭಿಸಿದ. ಈಗ ಬೆಳೆಗೆ ಗೊಬ್ಬರ ಬೇಕಿದೆ. ನನ್ನ ಪಶ್ನೆ ಇರುವುದು ನಾವು ಸರ್ಕಾರದ ಮೇಲೆಯೇ ಪೂರ್ಣ ಅವಲಂಭಿತರಾಗುವುದು ಬೇಡ ಎಂಬುದು” ಎಂದರು.
“ಕೃಷಿ ವಿಜ್ಞಾನದಲ್ಲಿ ಇಂದು ಹೊಸ ಬಗೆಯ ಸಂಶೋಧನೆಗಳು ಆಗಬೇಕಿದೆ. ದೀರ್ಘಾವಧಿ ಬೆಳೆಯ ಬೀಜಗಳ ಬದಲು ಅಲ್ವಾವಧಿಗೆ ಉತ್ತಮ ಇಳುವರಿ ನೀಡುವ ಬೀಜಗಳನ್ನು ಕೃಷಿ ವಿಶ್ವವಿದ್ಯಾಲಯಗಳು ಕಂಡುಹಿಡಿಯಬೇಕು. ಅಂದಾಗ ಹೆಚ್ಚಿನ ಮಳೆಯ ವೈಪರೀತ್ಯವನ್ನು ಸರಿದೂಗಿಸಿಕೊಂಡು ಹೋಗಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ನೂರಕ್ಕೆ ನೂರರಷ್ಟು ರೈತರಿಗೆ ಒಳ್ಳೆಯದು ಮಾಡುತ್ತವೆ ಅಂತ ಕೈಕಟ್ಟಿ ಕುಳಿತುಕೊಳ್ಳುವುದಕ್ಕಿಂತ ಸುಸ್ಥಿರ ಕೃಷಿ ಕಡೆ ಮುಖ ಮಾಡಿದರೆ ಹೀಗೆ ಸರ್ಕಾರದ ಮುಂದೆ ಕೈಚಾಚಿ ಗೊಬ್ಬರ ಕೊಡಿ ಎಂದು ಕೇಳುವುದು ತಪ್ಪುತ್ತದೆ” ಎಂದು ಹೇಳಿದರು.

ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಅವರು ಮಾತನಾಡಿ, “ಯೂರಿಯಾ ಗೊಬ್ಬರದ ಕೃತಕ ಅಭಾವನ್ನು ಉದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರ ಸೃಷ್ಟಿಸಿದೆ. ಇದರ ಹಿಂದೆ ನ್ಯಾನೋ ಗೊಬ್ಬರವನ್ನು ಪ್ರಮೋಟ್ ಮಾಡುವ ತಂತ್ರಗಾರಿಕೆಯೂ ಇದೆ. ಯೂರಿಯಾ ಇದ್ದರೆ ಅದನ್ನು ಬೆಳೆಗಳಿಗೆ ಹಾಕಲು ಒಬ್ಬ ಸಾಕು. ಆದರೆ ನ್ಯಾನೋ ಗೊಬ್ಬರ ಬಂದ್ರೆ ಅದಕ್ಕೆ ಸಿಂಪಡನೆ ಯಂತ್ರ ಬೇಕು, ಆಳುಗಳು ಬೇಕು. ಹಾಗೆಯೇ ಅದರ ದರವೂ ಯೂರಿಯಾ ಗೊಬ್ಬರದ ದರಕ್ಕಿಂತ ಹೆಚ್ಚು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ರೈತರನ್ನು ಎತ್ತಿಕಟ್ಟಲು ಉದ್ದೇಶಪೂರ್ವಕವಾಗಿ ಗೊಬ್ಬರದ ಅಭಾವ ಸೃಷ್ಟಿಸಲಾಗಿದೆ” ಎಂದು ಆರೋಪಿಸಿದರು.
“ರೈತರೇ ಈಗ ಸ್ವಲ್ಪ ಜಾಗೃತವಾಗಬೇಕಿದೆ. ಎಲ್ಲ ಪ್ರದೇಶದಲ್ಲಿಯೂ ಜಾನುವಾರು ಸಾಕುವುದು ಕಷ್ಟವಿದೆ. ಸಾಧ್ಯವಾದಷ್ಟು ರೈತ ಕುಟುಂಬಗಳು ಜಾನುವಾರುಗಳನ್ನು ಹೊಂದಿದರೆ ಸರ್ಕಾರದಿಂದಾಗುವ ಈ ಗೊಬ್ಬರದ ಕೃತಕ ಅಭಾವವನ್ನು ಸರಿದೂಗಿಸಿಕೊಳ್ಳಬಹುದು. ಮೊದಲಿನ ತರ ಕೃಷಿ ಈಗ ಲಾಭದಾಯಕವಾಗಿಲ್ಲ. ರೈತ ಬೆಳದೆ ಬೆಳೆ ಮಾರುವವ ಇಂದು ಉದ್ಧಾರ ಆಗುತ್ತಿದ್ದಾನೆ. ಮನೆಗೆ ಅಷ್ಟೇ ಹಾಲು ಸಾಕು, ಯಾಕೆಮ ಹಸುಗಳು ಬೇಕು ಎನ್ನುವವರು ಇದ್ದಾರೆ. ಇದಕ್ಕೆ ಕೃಷಿಯಲ್ಲಾದ ಬದಲಾವಣೆಯೂ ಕಾರಣವಿದೆ. ಒಂದಕ್ಕೊಂದು ಪೂರಕವಾಗಿ ಎಲ್ಲವೂ ಲಭ್ಯವಿದ್ದಾಗ ಜಾನುವಾರು ಸಾಕಾಣಿಕೆ ಸರಳ. ಎಲ್ಲವೂ ಬಾಡಿಗೆಗೆ ಸಿಗುವಾಗ ದನಕರುಗಳನ್ನು ಸಾಕುವುದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ” ಎಂದರು.





