ರೈತರ ಜೀವನಾಡಿ ತುಂಗಭದ್ರಾ ಅಣೆಕಟ್ಟೆ ಬಗ್ಗೆ ಗೊತ್ತಿರಬೇಕಾದ ಕುತೂಹಲಕಾರಿ ಸಂಗತಿಗಳು

Date:

64 ವರ್ಷಗಳಲ್ಲಿ ತುಂಗಭದ್ರಾ ಜಲಾಶಯದಲ್ಲಿ ಈಗ ಸಮಸ್ಯೆಗಳು ತಲೆದೋರುತ್ತಿವೆ. ತುಂಗಭದ್ರಾ ಜಲಾಶಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರಸ್ಟ್‌ಗೇಟ್‌ವೊಂದು ದಿಢೀರ್‌ ಕೊಚ್ಚಿ ಹೋಗಿದೆ. ಎರಡು ರಾಜ್ಯಗಳ ಸಹಭಾಗಿತ್ವದಿಂದ ನಿರ್ಮಾಣವಾದ ಜಲಾಶಯ ಹಿನ್ನೆಲೆ ಏನು? ರೈತರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ತುಂಗಭದ್ರಾ ಅಣೆಕಟ್ಟೆ ಬಗ್ಗೆ ಗೊತ್ತಿರಬೇಕಾದ ಒಂದಿಷ್ಟು ಸಂಗತಿ ಇಲ್ಲಿದೆ...

ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೋಟ್ಯಂತರ ರೈತರ ಜೀವನಾಡಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಅಣೆಕಟ್ಟು ಅಪಾಯಕ್ಕೆ ಸಿಲುಕಿರುವ ಬೆಳವಣಿಗೆಯೊಂದು ಏಕಾಏಕಿ ಘಟಿಸಿದೆ.

64 ವರ್ಷದ ಹಳೆಯದಾದ ತುಂಗಭದ್ರಾ ಜಲಾಶಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರಸ್ಟ್‌ಗೇಟ್‌ವೊಂದು ದಿಢೀರ್‌ ಕೊಚ್ಚಿ ಹೋಗಿದೆ. ಕೊಚ್ಚಿ ಹೋಗಿರುವ 19ನೇ ಕ್ರಸ್ಟ್‌ಗೇಟಿನ ಮೂಲಕ ಅಪಾರ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಗೇಟಿನ ಒತ್ತಡ ಕಡಿಮೆ ಮಾಡಲು 33 ಕ್ರಸ್ಟ್‌ಗೇಟ್‌ಗಳನ್ನು ತೆರೆಯಲಾಗಿದೆ. ಪರಿಣಾಮ ಅಪಾಯದ ಮಟ್ಟ ಮೀರಿ ತುಂಗಭದ್ರಾ ನದಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳಲ್ಲಿ ಅಲರ್ಟ್‌ ಘೋಷಿಸಲಾಗಿದೆ.

ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗುವ ಮೂಲಕ ರಾಜ್ಯ ಮತ್ತು ದೇಶದ ಗಮನ ಸೆಳೆದಿರುವ ತುಂಗಭದ್ರಾ ಜಲಾಶಯ ಯಾಕಿಷ್ಟು ಪ್ರಾಮುಖ್ಯತೆ ಪಡೆದಿದೆ? ಎರಡು ರಾಜ್ಯಗಳ ಸಹಭಾಗಿತ್ವದಿಂದ ನಿರ್ಮಾಣವಾದ ಜಲಾಶಯ ಹಿನ್ನೆಲೆ ಏನು? ರೈತರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ತುಂಗಭದ್ರಾ ಅಣೆಕಟ್ಟೆ ಬಗ್ಗೆ ಗೊತ್ತಿರಬೇಕಾದ ಒಂದಿಷ್ಟು ಸಂಗತಿಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ಕೃಷಿಕರ ಬದುಕನ್ನು ಹಸನಾಗಿಸಿದ್ದು ಅಣೆಕಟ್ಟುಗಳು. ಇವುಗಳ ಮಹತ್ವ ಅರಿತೇ ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರೂ ಅವರು, “ಅಣೆಕಟ್ಟುಗಳು ಆಧುನಿಕ ಭಾರತದ ನವ ದೇಗುಲಗಳು” ಎಂದು ಬಣ್ಣಿಸಿದ್ದರು. ಕೃಷಿ ಭೂಮಿಗೆ ನೀರುಣಿಸುವ ಉದ್ದೇಶದೊಂದಿಗೆ ತುಂಗಭದ್ರ ಅಣೆಕಟ್ಟನ್ನು ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದು ಕರ್ನಾಟಕದ ಹೊಸಪೇಟೆ ನಗರದಿಂದ 5 ಕಿ.ಮೀ ಹತ್ತಿರದಲ್ಲಿದ್ದು, ಇದನ್ನು ‘ಪಂಪ ಸಾಗರ’ ಎಂತಲೂ ಕರೆಯುತ್ತಾರೆ. ಕರ್ನಾಟಕ-ಆಂಧ್ರಪ್ರದೇಶ ಸರ್ಕಾರಗಳು ಜಂಟಿಯಾಗಿ 1953ರಲ್ಲಿ ನಿರ್ಮಿಸಿರುವ ತುಂಗಭದ್ರಾ ಅಣೆಕಟ್ಟೆ ರಾಜ್ಯದ ಅತಿ ದೊಡ್ಡ ಅಣೆಕಟ್ಟು ಎನ್ನುವ ಹಿರಿಮೆಗೂ ಪಾತ್ರವಾಗಿದೆ.

2,441ಮೀಟರ್ ಉದ್ದ ಹಾಗೂ 49.38 ಮೀಟರ್ ಎತ್ತರ ಹಾಗೂ 33 ಕ್ರಸ್ಟ್‌ಗೇಟ್‌ಗಳನ್ನು ಹೊಂದಿರುವ ತುಂಗಭದ್ರಾ ಅಣೆಕಟ್ಟು ಮುಖ್ಯವಾಗಿ ಕೃಷಿ ಭೂಮಿಗೆ ನೀರುಭಿಸುವ ಉದ್ದೇಶದಿಂದ ನಿರ್ಮಾಣಗೊಂಡಿದೆ. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಜಿಲ್ಲೆಗಳ ಒಂದು ಕೋಟಿಗೂ ಅಧಿಕ ಜನರು ತುಂಗಭದ್ರಾ ಅಣೆಕಟ್ಟಿನ ನೀರನ್ನು ಬಳಸುತ್ತಿದ್ದಾರೆ. ಅನೇಕ ಸಕ್ಕರೆ ಕಾರ್ಖಾನೆಗಳು, ಅಕ್ಕಿಯ ಗಿರಣಿಗಳು, ವಿವಿಧ ಕೈಗಾರಿಕೋದ್ಯಮಗಳು ಈ ಜಿಲ್ಲೆಗಳಲ್ಲಿ ನೆಲೆಯೂರಿವೆ. ಮೀನುಗಾರಿಕೆ ಒಂದು ದೊಡ್ಡ ಉದ್ಯಮವಾಗಿದೆ. ವಿದ್ಯುತ್‌ ತಯಾರಿಕೆ ಉದ್ದೇಶ ಕೂಡ ಈ ಜಲಾಶಯಕ್ಕಿದೆ. ನದಿ ಪಾತ್ರದ ಸಾಮಾಜಿಕ-ಆರ್ಥಿಕ ಅಭಿವೃದ್ಥಿಗೆ ತುಂಗಭದ್ರಾ ಅಣೆಕಟ್ಟು ಮಹತ್ವದ ಪಾತ್ರವಹಿಸಿದೆ.

ಜವಹರಲಾಲ್‌ ನೆಹರು ಅವರು ತುಂಗಭದ್ರಾ ಅಣೆಕಟ್ಟಿನ ಕಾಮಗಾರಿ ಪರಿಶೀಲಿಸುತ್ತಿರುವುದು. (29 ಸೆಪ್ಟೆಂಬರ್ 1952)

ಅಣೆಕಟ್ಟು ನಿರ್ಮಾಣದ ಹಿನ್ನೆಲೆಯೇನು?

ದಕ್ಷಿಣ ಭಾರತದಲ್ಲಿ, ಅದೂ ಆಂಧ್ರದಲ್ಲಿ 1876ರಲ್ಲಿ ಭೀಕರ ಬರ ಎದುರಾಯಿತು. ಮಳೆ ಅಭಾವದಿಂದ ಬೆಳೆ ನಾಶವಾಯಿತು. ಈ ಅವಧಿಯಲ್ಲಿ ಬಳ್ಳಾರಿ, ರಾಯಚೂರು, ಕರ್ನೂಲು ಸೇರಿದಂತೆ ದಕ್ಷಿಣ ಭಾರತವನ್ನೇ ನಲುಗಿಸಿದ್ದ ಭೀಕರ ಬರಕ್ಕೆ 50 ಲಕ್ಷಕ್ಕೂ ಹೆಚ್ಚು ಜನ ಬಲಿಯಾದರು.

ಜನರ ಜೊತೆ ಜಾನುವಾರುಗಳೂ ಅನ್ನ ನೀರಿಲ್ಲದೇ ಮೂಳೆ ಚಕ್ಕಳಗಳಾಗಿ, ಜೀವಂತ ಅಸ್ಥಿಪಂಜರದಂತಾಗಿ ಪ್ರಾಣ ಬಿಟ್ಟವು. ಮಲೇರಿಯಾ, ಕಾಲರಾ, ಪ್ಲೇಗು ರೋಗಗಳ ಕಾಟದಿಂದಾಗಿ ಸತ್ತ ಜನರಿಂದ ಊರು ಕೇರಿಗಳು ತುಂಬಿದ್ದವು. ಸತ್ತವರ ಸಂಸ್ಕಾರಕ್ಕೂ ಜನರಿಲ್ಲದೇ, ನರಿ-ನಾಯಿ, ರಣಹದ್ದು, ಕಾಗೆಗಳಿಗೆ ಆಹಾರವಾಗಿ ಹೋದರು. ಇಡೀ ದಕ್ಷಿಣ ಭಾರತದಲ್ಲಿ ಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆ ಆ ಭೀಕರ ಬರದಿಂದ ಅಳಿದುಹೋಯಿತು.

ಬಳ್ಳಾರಿ, ರಾಯಚೂರು, ಕರ್ನೂಲು, ಅನಂತಪುರ ಪ್ರಾಂತ್ಯದ ಜನರ ಬರವನ್ನು ಶಾಶ್ವತವಾಗಿ ಅಳಿಸಿ ಹಾಕಬೇಕೆಂದರೆ ತುಂಗಭದ್ರಾ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನು ಹೊಸಪೇಟೆಯ ಪಕ್ಕದಲ್ಲಿ ನಿರ್ಮಿಸಬೇಕೆಂದು ಬ್ರಿಟಿಷ್ ನೀರಾವರಿ ತಜ್ಞ ‘ಆರ್ಥರ್ ಕಾಟನ್’ ಮೊದಲ ಬಾರಿಗೆ ವರದಿಯೊಂದನ್ನು ಸಿದ್ದಪಡಿಸಿ ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆರ್ಥರ್ ಕಾಟನ್ ಆಗ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದೆಲ್ಲೆಡೆ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿ ಒದಗಿಸಿ ಪ್ರಸಿದ್ಧರಾಗಿದ್ದರು.

ಬರ ಪರಿಹಾರಕ್ಕಾಗಿ ಸರ್ಕಾರ ಖರ್ಚು ಮಾಡುವ ಹಣದ ಸ್ವಲ್ಪ ಮೊತ್ತದಲ್ಲೇ ತುಂಗಭದ್ರಾ ಅಣೆಕಟ್ಟು ಹಾಗೂ ಕಾಲುವೆಗಳನ್ನು ನಿರ್ಮಿಸಿ ಆ ಭಾಗದ ಶಾಶ್ವತ ಬರವನ್ನು ನೀಗಬಹುದು ಎಂದು ಆರ್ಥರ್ ಕಾಟನ್ ಸಲಹೆ ನೀಡಿದ್ದರು. ಆದರೆ, ಬ್ರಿಟಿಷ್ ಸರ್ಕಾರ ಹಣಕಾಸಿನ ಕೊರತೆ ನೆಪದಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಮುಂದಕ್ಕೆ ಹಾಕಿತು.

ಇಂದಿರಾ ಗಾಂಧಿ 1

1902ರಲ್ಲಿ ಕರ್ನಲ್ ಸ್ಮಾರ್ಟ್ ಅವರಿಂದ ಅಣೆಕಟ್ಟು ನಿರ್ಮಾಣಕ್ಕೆ ವಿವರ ವರದಿ ಸಲ್ಲಿಕೆ

1902ರಲ್ಲಿ ಮದ್ರಾಸ್ ಸರ್ಕಾರದ ಮುಖ್ಯ ಎಂಜಿನಿಯರ್ ಆಗಿದ್ದ ಕರ್ನಲ್ ಸ್ಮಾರ್ಟ್ ತುಂಗಭದ್ರಾ ಅಣೆಕಟ್ಟಿನ ನಿರ್ಮಾಣಕ್ಕಾಗಿ ವಿವರವಾದ ವರದಿಯನ್ನು ಸಿದ್ಧಪಡಿಸಿ, ಅದೇ ತಾನೇ ರಚಿಸಲಾಗಿದ್ದ ನೀರಾವರಿ ಆಯೋಗಕ್ಕೆ ಸಲ್ಲಿಸುತ್ತಾರೆ. ನಂತರ ಬಂದ ಮಕೆಂಜೀ ಎಂಬ ಮುಖ್ಯ ಎಂಜಿನಿಯರ್ ಹೊಸಪೇಟೆ ಪಕ್ಕದಲ್ಲಿದ್ದ ಮಲ್ಲಾಪುರದಲ್ಲಿ ಎರಡು ಗುಡ್ಡಗಳ ನಡುವೆ ಅಣೆಕಟ್ಟನ್ನು ನಿರ್ಮಿಸಿ, ಅಲ್ಲಿಂದ ಈ ಜಿಲ್ಲೆಗಳಿಗೆ ವಿವಿಧ ಕಾಲುವೆಗಳ ಮೂಲಕ ನೀರು ಒದಗಿಸಬೇಕು ಎಂದು ವರದಿ ನೀಡಿದರು. ಆಗ ಹೈದರಾಬಾದ್ ನಿಜಾಮರ ಸರ್ಕಾರದ ಅಧಿಕಾರಿಗಳು ನದಿಯ ಮೇಲೆ ತಮಗೂ ಹಕ್ಕಿದೆ ಎಂದು ತಮ್ಮ ಪ್ರದೇಶದಲ್ಲಿಯೇ ಅಣೆಕಟ್ಟು ನಿರ್ಮಿಸಲು ಹಕ್ಕೊತ್ತಾಯ ಮಂಡಿಸಿದರು.

ನಂತರ ಮುಂಬಯಿ ಪ್ರಾಂತ್ಯ, ಮೈಸೂರು‌ ಒಡೆಯರ್, ಹೈದರಾಬಾದ್ ನಿಜಾಮ ಹಾಗೂ ಮದ್ರಾಸ್ ಪ್ರಾಂತೀಯ ಸರ್ಕಾರ ಹೀಗೆ ನಾಲ್ಕೂ ಸರ್ಕಾರಗಳು ತಮ್ಮ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಿದವು. ಇದರಿಂದ ಅಣೆಕಟ್ಟಿನ ನಿರ್ಮಾಣ ಕಾರ್ಯ ಮತ್ತೆ ನನೆಗುದಿಗೆ ಬಿತ್ತು.

1940ರಲ್ಲಿ ಮದ್ರಾಸ್ ಸರ್ಕಾರ ಮತ್ತೆ ಯೋಜನೆ ಕೈಗೆತ್ತಿಕೊಂಡಿತು. ಆಗಿನ ಮುಖ್ಯ ಎಂಜಿನಿಯರ್ ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ಒಂದು ವಸ್ತುನಿಷ್ಠ ಕಾರ್ಯಯೋಜನಾ ವರದಿ ತಯಾರಿಸಲು ನೇಮಿಸಲಾಯಿತು. ನಿಜಾಮರ ಸರ್ಕಾರ ಸಿ ಸಿ ದಲಾಲ್ ಎಂಬ ಎಂಜಿನಿಯರ್‌ರನ್ನು ನೇಮಿಸಿ ಪ್ರತ್ಯೇಕ ವರದಿ ಸಿದ್ಧಪಡಿಸಿ ಸಲ್ಲಿಸಿತು. ಆದರೆ ಎರಡೂ ವರದಿಗಳನ್ನು ಅಳೆದು ತೂಗಿ ನೋಡಿದ ಬ್ರಿಟಿಷ್ ಸರ್ಕಾರ, 1942ರಲ್ಲಿ ತಿರುಮಲೆ ಅಯ್ಯಂಗಾರ್ ನೀಡಿದ ವರದಿಯೇ ಅತ್ಯಂತ ಪ್ರಶಸ್ತವಾದುದು ಎಂದು ನಿರ್ಧರಿಸಿ, ಈಗಿನ ಹೊಸಪೇಟೆ ಹತ್ತಿರ ಆಗ ಇದ್ದ ಮಲ್ಲಾಪುರದ ಬಳಿ 133 ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಯಿತು.

1945ರಲ್ಲಿ ಅಣೆಕಟ್ಟು ನಿರ್ಮಾಣ ಕಾರ್ಯಆರಂಭ

1945 ಫೆಬ್ರುವರಿ 28ರಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಹೈದರಾಬಾದ್ ನಿಜಾಮ ಇತ್ತ ಹೊಸಪೇಟೆಯ ಕಡೆ ಮದ್ರಾಸ್ ಪ್ರಾಂತೀಯ ಸರ್ಕಾರದ ಗವರ್ನರ್ ಆಗಿದ್ದ ಸರ್ ಆರ್ಥರ್ ಹೋಪ್ ಅಡಿಗಲ್ಲನ್ನು ಹಾಕಿ ಯೋಜನೆ ಉದ್ಘಾಟಿಸಿದರು. ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ನಿರ್ಮಾಣ ಕಾರ್ಯ ಭರದಿಂದ ಆರಂಭವಾಯಿತು. ಆದರೆ, ನಿರ್ಮಾಣ ವಸ್ತುಗಳ ಬಳಕೆಯ ವಿವಾದ, ನಿಜಾಮರ ಆಳ್ವಿಕೆಯ ಅಂತ್ಯ, ದೇಶಕ್ಕೆ ದೊರೆತ ಸ್ವಾತಂತ್ರ್ಯ, ಬದಲಾದ ಆಡಳಿತ ಮುಂತಾದ ಕಾರಣಗಳಿಂದ ಯೋಜನೆ ಮತ್ತೆ ಕುಂಟುತ್ತಾ ಸಾಗಿತು.

ಸರ್ ಎಂ. ವಿಶ್ವೇಶ್ವರಯ್ಯ ಪ್ರವೇಶ

1953ರಲ್ಲಿ ಕರ್ನಾಟಕ ಸರ್ಕಾರ ಹಾಗೂ ಆಂಧ್ರಪ್ರದೇಶ ಸರ್ಕಾರ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿತು. ಭಾರತದ ಗಣ್ಯ ಎಂಜಿನಿಯರ್‌ ಸರ್ ಎಂ ವಿಶ್ವೇಶ್ವರಯ್ಯ ನೇತೃತ್ವದ ಎಂಜಿನಿಯರ್‌ಗಳ ಮಂಡಳಿಯ ಮೇಲ್ವಿಚಾರಣೆಯಲ್ಲಿ ಪುನಃ ನಿರ್ಮಾಣ ಕಾರ್ಯ ಭರದಿಂದ ಸಾಗಿತು. 90 ಗ್ರಾಮಗಳು ಮುಳುಗಡೆಯಾಗಿ, ಸುಮಾರು 55 ಸಾವಿರ ಜನರನ್ನು ಸ್ಥಳಾಂತರಿಸಲಾಯಿತು. ನೂರಾರು ಕಿಲೋ ಮೀಟರ್ ಉದ್ದದ ಮೂರು ಕಾಲುವೆಗಳ ನಿರ್ಮಾಣವೂ ಮುಂದುವರೆದು, 1960ರ ವೇಳೆಗೆ ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿತು.

ತುಂಗಭದ್ರ ಅಣೆಕಟ್ಟು ಒಟ್ಟು101 ಟಿಎಂಸಿ ಅಡಿ ಶೇಖರಣಾ ಸಾಮರ್ಥ್ಯದ ದೊಡ್ಡ ಜಲಾಶಯ. 378 ಚದರ ಕಿ.ಮೀ. ಪ್ರದೇಶವನ್ನು ಆಕ್ರಮಿಸಿ ತುಂಗಭದ್ರ ನದಿಯ ದೊಡ್ಡ ಜಲಾಶಯ ಸೃಷ್ಟಿಸುತ್ತದೆ. ಅಣೆಕಟ್ಟು ತನ್ನ ಆಳದ/ತಳಮಟ್ಟದ ಅಡಿಪಾಯದ ಮೇಲೆ 49.5 ಮೀಟರ್‌ಗಳಷ್ಟು ಎತ್ತರವಿದೆ. ರಾಜ್ಯದ ಅತಿದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಕಾಲುವೆಗಳ ಮೂಲಕ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ, ಹಾವೇರಿ ಮತ್ತು ಆಂಧ್ರಪ್ರದೇಶದ ಕರ್ನೂಲ್, ಮೆಹಬೂಬ್​ನಗರ ಜಿಲ್ಲೆಗಳು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ.

ವಿಶ್ವೇಶ್ವರಯ್ಯ 1

ಜಲಾಶಯದ ಎಡದಂಡೆ ಕಾಲುವೆಗಳು ಸಂಪೂರ್ಣವಾಗಿ ಕರ್ನಾಟಕ ರಾಜ್ಯದಲ್ಲಿ ನೀರಾವರಿ ಸರಬರಾಜು ಮಾಡುವುದು. ಕಡಿಮೆ ಮಟ್ಟದಲ್ಲಿ ಒಂದು ಮತ್ತು ಎತ್ತರ ಮಟ್ಟದಲ್ಲಿ ಒಂದು ಎರಡು ಬಲದಂಡೆಯ ಕಾಲುವೆಗಳು ಇವೆ. ಮೊದಲ ಕಾಲುವೆ ಆಂಧ್ರ ಪ್ರದೇಶದ ರಾಯಲಸೀಮ ಪ್ರದೇಶಕ್ಕೆ ಮತ್ತು ಎತ್ತರದ ಕಾಲುವೆ ಕರ್ನಾಟಕಕ್ಕೆ ನೀರಾವರಿ ಒದಗಿಸುತ್ತದೆ.

64 ವರ್ಷಗಳಲ್ಲಿ ತುಂಗಭದ್ರಾ ಜಲಾಶಯದಲ್ಲಿ ಈಗ ಸಮಸ್ಯೆಗಳು ತಲೆದೋರುತ್ತಿವೆ. ಅಣೆಕಟ್ಟು ಕಟ್ಟಡದಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿಗಳು ಆಗಾಗ ಕೇಳಿಬರುತ್ತವೆ. ಆದರೆ, ಜಲಾಶಯದ ತಾಂತ್ರಿಕ ತಂಡದವರು ಎಲ್ಲ ಊಹಾಪೋಹಗಳನ್ನು ಅಲ್ಲಗಳೆದಿದ್ದಾರೆ.

ಜಲಾನಯನ ಪ್ರದೇಶದಲ್ಲಿನ ಕೃಷಿ ಚಟುವಟಿಕೆ, ಅರಣ್ಯ ನಾಶ, ಅವೈಜ್ಞಾನಿಕ ಕೃಷಿ ಚಟುವಟಿಕೆ, ಅಪಾರ ರಸಗೊಬ್ಬರಗಳ ಬಳಕೆ, ದ್ರವ ಹಾಗೂ ಘನತ್ಯಾಜ್ಯವನ್ನು ನದಿಗೆ ಹರಿಸುವುದು, ಕೈಗಾರಿಕಾ ತ್ಯಾಜ್ಯಗಳ ವಿಲೇವಾರಿ ಮುಂತಾದ ಕಾರಣಗಳಿಂದ ಜಲಾಶಯದಲ್ಲಿ ಹೂಳು ಹೆಚ್ಚುತ್ತಿದೆ. 133 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯಕ್ಕೆ 30 ಟಿಎಂಸಿಯಷ್ಟು ಹೂಳು ತುಂಬಿದೆ ಎಂದು ಹೇಳಲಾಗುತ್ತಿದೆ.

ಹಂಪಿಗೆ ಭೇಟಿ ನೀಡುವ ಪ್ರವಾಸಿಗರು ಟಿಬಿ ಅಣೆಕಟ್ಟೆಗೂ ಭೇಟಿ

ತುಂಗಾಭದ್ರಾ ಅಣೆಕಟ್ಟು (ಟಿಬಿ ಅಣೆಕಟ್ಟು) ಹಲವು ಪ್ರವಾಸಿ ಆಕರ್ಷಣೆ ಹೊಂದಿದೆ. ಹಂಪಿಗೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ಟಿಬಿ ಅಣೆಕಟ್ಟಿಗೂ ಭೇಟಿ ನೀಡುತ್ತಾರೆ. ಟಿಬಿ ಡ್ಯಾಮ್ ರಾತ್ರಿಯಲ್ಲಿ ಬೆಳಕಿನ ಅಲಂಕಾರದಿಂದ ಪ್ರಕಾಶಿಸುವಾಗ ವೀಕ್ಷಿಸಲು ಬಹಳ ಸುಂದರವಾಗಿ ಕಾಣುತ್ತದೆ. ಪ್ರತಿ ವರ್ಷ ಆಗಸ್ಟ್‌ 15ರಂದು 33 ಕ್ರೆಸ್ಟ್ ಗೇಟ್‌ಗಳಿಂದ ಧುಮ್ಮಿಕ್ಕುವ ನೀರಿಗೆ ವಿಭಿನ್ನ ಬಣ್ಣಗಳ ಬೆಳಕಿನ ದೀಪ ಅಳವಡಿಸಲಾಗುತ್ತದೆ. ಆ ವರ್ಣರಂಜಿತ ದೃಶ್ಯ ವೈಭವ ಕಣ್ಮನ ಸೆಳೆಯುತ್ತದೆ. ಟಿಬಿ ಅಣೆಕಟ್ಟು ಬಳಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನಗಳಿದ್ದು ವಿಶ್ರಾಂತಿ ಪಡೆಯಲು ಉತ್ತಮ ಸ್ಥಳವಾಗಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...