ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಆರಂಭಿಸಿದ ಪರಿಣಾಮ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಸಂಘರ್ಷದಲ್ಲಿ ಸಿಲುಕಿದೆ. ದಾಳಿ-ಪ್ರತಿದಾಳಿಗಳಿಂದಾಗಿ ಇಡೀ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಮಾತ್ರವಲ್ಲ, ಜಾಗತಿಕ ಆರ್ಥಿಕತೆ ಮತ್ತು ವಹಿವಾಟು ಹಾಗೂ ತೈಲ ಮಾರುಕಟ್ಟೆ ಮೇಲೂ ಗಂಭೀರ ಪರಿಣಾಮ ಬೀರಿದೆ. ಆದರೆ, ಟಿಆರ್‌ಪಿ ಗೀಳಿಗೆ ಬಿದಿರುವ ಹಲವಾರು ಸುದ್ದಿ ವಾಹಿನಿಗಳು ಯುದ್ಧದ ಉದ್ವಿಗ್ನತೆಯನ್ನೇ ಬಂಡವಾಳ ಮಾಡಿಕೊಂಡಿವೆ. ಸಂವೇದನೆರಹಿತ ಮತ್ತು ಊಹಾತ್ಮಕ ವಿಷಯವನ್ನು ಪ್ರಸಾರ ಮಾಡುತ್ತಿವೆ. ಮಾಧ್ಯಮಗಳ ಈ ಪ್ರಚೋದನಾಕಾರಿ, ಉಹಾತ್ಮಕ, ಸಂವೇದನೆಯಿಲ್ಲದ ಸುದ್ದಿಗಳು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರ ಕುಟುಂಬಗಳು ಮತ್ತು ಬಂಧುಗಳಲ್ಲಿ ಆತಂಕ ಹುಟ್ಟುಹಾಕುತ್ತಿವೆ. ಇದೆಲ್ಲವನ್ನೂ ಗಮನಿಸಿರುವ ಮಾಹಿತಿ ಮತ್ತು ಪ್ರಚಾರ ಸಚಿವಾಲಯವು, ‘ನಾಲ್ಕು ವಾರಗಳ ಕಾಲ ಟಿಆರ್‌ಪಿ ವರದಿಯನ್ನು ಪ್ರಕಟಿಸದಂತೆ ನಿರ್ದೇಶನ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಟಿಆರ್‌ಪಿ ವರದಿ ಮಾಡುವುದನ್ನು ತಕ್ಷಣವೇ ತಡೆಹಿಡಿಯುವಂತೆ ಮೆಸರ್ಸ್ ಬಾರ್ಕ್‌ಗೆ ನಿರ್ದೇಶಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಈ TRP ಎಂದರೇನು?
ಟಿಆರ್‌ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್ ಅಥವಾ ಗುರಿಯಿಟ್ಟು ದರ ನಿರ್ಧರಿಸುವ ಅಂಶ ಎಂದರ್ಥ. ಖಾಸಗಿ ವಾಹಿನಿಗಳ ಜನಪ್ರಿಯತೆಯನ್ನು ಅಳೆಯುವ ಒಂದು ಮಾನದಂಡವೇ ಈ ಟಿಆರ್‌ಪಿ.
ಯಾರು ಈ ಟಿಆರ್‌ಪಿಯನ್ನು ನಿರ್ಧರಿಸುತ್ತಾರೆ?
ʼಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ʼ ಎನ್ನುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯೊಂದು ಖಾಸಗಿ ದೃಶ್ಯ ವಾಹಿನಿಗಳ ಟಿಆರ್‌ಪಿಯನ್ನು ನಿರ್ಧರಿಸುತ್ತದೆ. ಈ BARC ಸಂಸ್ಥೆಯು ತಾನು ನೇರವಾಗಿ ಟಿಆರ್‌ಪಿಯನ್ನು ನಿರ್ಧರಿಸುವುದಿಲ್ಲ. ಕಳೆದ ನಾಲ್ಕಾರು ವರ್ಷಗಳ ಹಿಂದೆ ಈ ಕೆಲಸವನ್ನು ಹನ್ಸಾ ರಿಸರ್ಚ್ ಎನ್ನುವ ಮತ್ತೊಂದು ಖಾಸಗಿ ಸಂಸ್ಥೆಗೆ ವಹಿಸುತ್ತಿತ್ತು.
ಟಿಆರ್‌ಪಿ ನಿರ್ಧರಿಸುವ ಬಗೆ ಯಾವುದು?
ಜನರು ತಮ್ಮ ತಮ್ಮ ಮನೆಗಳಲ್ಲಿ ಯಾವಯಾವ ಖಾಸಗಿ ವಾಹಿನಿಗಳನ್ನು ಎಷ್ಟು ಸಮಯ ಅಥವಾ ಅವಧಿಯವರೆಗೆ ವಿಕ್ಷಿಸುತ್ತಾರೆ ಎಂಬ ಅಂಕಿಅಂಶಗಳನ್ನು ಪ್ರಾಥಮಿಕವಾಗಿ ಸಂಗ್ರಹಿಸಲಾಗುತ್ತದೆ. ದೇಶದಲ್ಲಿರುವ ಎಲ್ಲಾ ಮನೆಗಳ ಅಂಕಿಅಂಶಗಳನ್ನು ಸಂಗ್ರಹಿಸುವುದು ಕಷ್ಟಸಾಧ್ಯ. ಆದ್ದರಿಂದ ಆಯ್ದ 44,000 ಮನೆಗಳ Set Top Box ಒಂದು ಅಳತೆಯ ಸಾಧನವನ್ನು (Bor-O-meter) ಗುಪ್ತವಾಗಿ ಅಳವಡಿಸಲಾಗುತ್ತದೆ. ವಿಶೇಷ ಸಂದರ್ಭ ಹಾಗೂ ಚುನಾವಣಾ ಸಮಯದಲ್ಲಿ ವಾಹಿನಿಗಳು Exit Pol ಫಲಿತಾಂಶವನ್ನು ಆಯ್ದ ಕೆಲವೇ ಕೆಲವು ಮತದಾರರ ಅಭಿಪ್ರಾಯದ ಆಧಾರದ ಮೇಲೆ ಹೇಗೆ ಪ್ರಕಟಿಸುತ್ತವೆಯೋ, ಅದೇ ಮಾದರಿಯಲ್ಲಿ ದೇಶದ ವಿವಿಧ ಭಾಗಗಳ ಗ್ರಾಮೀಣ ಪ್ರದೇಶ ನಗರ ಪ್ರದೇಶ ಹಾಗೂ ವಿಭಿನ್ನ ಸಾಮಾಜಿಕ, ಆರ್ಥಿಕ ಹಿನ್ನೆಲೆಯ ಕುಟುಂಬಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಮನೆಯವರು ಎಷ್ಟು ಸಮಯದ ತನಕ ಯಾವ ಯಾವ ವಾಹಿನಿಗಳನ್ನು ನೋಡುತ್ತಾರೆ ಎಂಬ ಮಾಹಿತಿಯ ಆಧಾರದ ಮೇಲೆ ವಾರದ ಕೊನೆಗೆ ಟಿಆರ್‌ಪಿಯನ್ನು ಘೋಷಿಸಲಾಗುತ್ತದೆ.
ಟಿಆರ್‌ಪಿಯಿಂದ ದೃಶ್ಯ ವಾಹಿನಿಗಳಿಂದ ಏನು ಲಾಭ?
ಒಂದು ದೃಶ್ಯ ವಾಹಿನಿಯು ಅತಿ ಹೆಚ್ಚು ಜನರು ನೋಡುತ್ತಾರೆಂದರೆ ಅದರ ಟಿಆರ್‌ಪಿ ಅಗ್ರಶ್ರೇಣಿಯಲ್ಲಿದೆ ಎಂದರ್ಥ. ಅಂದರೆ ದೃಶ್ಯ ವಾಹಿನಿಯೊಂದು ಬಹಳಷ್ಟು ಜನರು ವೀಕ್ಷಿಸುತ್ತಾರೆ ಎನ್ನುವಂತಾದರೆ ಅದು ಬಹಳ ಜನಪ್ರಿಯ ವಾಹಿನಿ ಎಂದು ನಿರ್ಧರಿಸಲಾಗುತ್ತದೆ. ಒಂದು ದೃಶ್ಯವಾಹಿನಿಯನ್ನು ಹೆಚ್ಚು ಜನರು ವೀಕ್ಷಿಸುತ್ತಾರೆ ಎಂದು ನಿರ್ಧಾರವಾದರೆ ಆ ದೃಶ್ಯವಾಹಿನಿಯು ಸಾಮಾನ್ಯವಾಗಿ ಖಾಸಗಿ ಕಂಪನಿಗಳ ಜಾಹೀರಾತನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಬಲ್ಲದು. ಆ ದೃಶ್ಯವಾಹಿನಿಯಲ್ಲಿ ಪ್ರಸಾರವಾಗುವ ಜಾಹೀರಾತುಗಳು ಹೆಚ್ಚು ಜನರಿಗೆ ಮುಟ್ಟಿದರೆ ತಮ್ಮ ಉತ್ಪನ್ನಗಳ ಮಾರುಕಟ್ಟೆ ವಿಸ್ತಾರವಾಗುತ್ತದೆ ಎಂದು ಉತ್ಪಾದಕರು ತಮ್ಮ ಜಾಹೀರಾತುಗಳನ್ನು ಅಂತಹ ಜನಪ್ರಿಯ ವಾಹಿನಿಗಳಿಗೆ ನೀಡುತ್ತಾರೆ. ಜಾಹೀರಾತು ಮೂಲಗಳಿಂದ ದೃಶ್ಯವಾಹಿನಿಗಳಿಗೆ ಅಪಾರ ಪ್ರಮಾಣದ ಹಣ ಹರಿದು ಬರುತ್ತದೆ.
ಟಿಆರ್‌ಟಿ-ಜಾಹೀರಾತು ನಡುವಿನ ಸಂಬಂಧವೇನು?
ಜಾಹೀರಾತುದಾರರಿಗೆ ತಮ್ಮ ಉತ್ಪನ್ನಗಳನ್ನು ಹೆಚ್ಚು ಜನರಿಗೆ ತಲುಪಬೇಕು ಎಂಬುದೇ ಮೊದಲ ಮಾನದಂಡ. ಆದ್ದರಿಂದ, ಅವರು ಹೆಚ್ಚು ಜನರು ವೀಕ್ಷಿಸುವ ಅಥವಾ ಹೆಚ್ಚು ಜನರನ್ನು ತಲುಪುವ ವಾಹಿನಿ/ಪತ್ರಿಕೆಗಳಿಗೆ ಹೆಚ್ಚು ಜಾಹೀರಾತು ನೀಡುತ್ತಾರೆ. ಸುದ್ದಿವಾಹಿನಿಗಳ ವಿಚಾರದಲ್ಲಿ ಒಂದು ಚಾನೆಲ್‌ಅನ್ನು ಹೆಚ್ಚು ಜನರು ವೀಕ್ಷಿಸುತ್ತಾರೆ ಎಂಬುದನ್ನು ಸೂಚಿಸುವುದೇ ಟಿಆರ್‌ಪಿ ಆಗಿರುವುದರಿಂದ, ಯಾವ ವಾಹಿನಿಗೆ ಜಾಹೀರಾತುದಾರರು ಹೆಚ್ಚು ಜಾಹೀರಾತು ಮತ್ತು ಹಣ ನೀಡಬೇಕು ಎಂಬುದನ್ನು ಟಿಆರ್‌ಪಿ ಆಧಾರದಲ್ಲಿಯೇ ನಿರ್ಧಾರವಾಗುತ್ತದೆ. ಹೆಚ್ಚು TRP ಇರುವ ಚಾನಲ್‌ಗಳಲ್ಲಿ ಜಾಹೀರಾತು ನೀಡಲು ಹೆಚ್ಚು ಹಣ ಪಾವತಿಸುತ್ತಾರೆ. ಹೀಗಾಗಿ, TRP ಹೆಚ್ಚಾದಷ್ಟೂ ಜಾಹೀರಾತು ಆದಾಯ ಹೆಚ್ಚುತ್ತದೆ.
ಭಾರತದಲ್ಲಿ ಟಿವಿ ಚಾನಲ್‌ಗಳು ತಮ್ಮ ಆದಾಯದ ದೊಡ್ಡ ಭಾಗವನ್ನು ಜಾಹೀರಾತಿನಿಂದ ಪಡೆಯುತ್ತವೆ. TRP ಆಧಾರಿತ ಜಾಹೀರಾತು ವೆಚ್ಚದ ಒಟ್ಟು ಗಾತ್ರವು ಟಿವಿ ಜಾಹೀರಾತು ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ. 2024ರಲ್ಲಿ ಭಾರತದ ಟಿವಿ ಜಾಹೀರಾತು ಆದಾಯ ಸುಮಾರು 29,400 ಕೋಟಿ ರೂ.ಗಳಾಗಿತ್ತು ಎಂದು ವರದಿಗಳು ಹೇಳುತ್ತವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದು ಕುಸಿಯುತ್ತಿದೆ, ಉದಾಹರಣೆಗೆ 2023ರಿಂದ 2024ಕ್ಕೆ ಟಿವಿ ಜಾಹೀರಾತು ಆದಾಯ 6-11%ರಷ್ಟು ಇಳಿಕೆ ಕಂಡಿದೆ ಎಂದು ಹಲವು ವರದಿಗಳು ಹೇಳುತ್ತಿವೆ.
ಈ ಲೇಖನ ಓದಿದ್ದೀರಾ?: ಇರಾನ್ ನಾಯಕನ ಆಯ್ಕೆಯಲ್ಲಿ ಅಮೆರಿಕದ ಹಸ್ತಕ್ಷೇಪ; ಮುಂದುವರಿದ ಟ್ರಂಪ್ ದುಷ್ಟಬುದ್ಧಿ
ಟಿವಿ ಮಾಧ್ಯಮದ ಜಾಹೀರಾತು ಆದಾಯದಲ್ಲಿ ಒಟ್ಟು ಜಾಹೀರಾತು ಮಾರುಕಟ್ಟೆಯ ಪಾಲು ಗಣನೀಯವಾಗಿ ಕುಸಿದಿದೆ. 2024ರಲ್ಲಿ ಡಿಜಿಟಲ್ ಮಾಧ್ಯಮವು ಟಿವಿ ವಾಹಿನಿಗಳನ್ನು ಮೀರಿ ಜಾಹೀರಾತು ಪಾಲನ್ನು ಪಡೆದುಕೊಂಡಿದೆ. ಡಿಜಿಟಲ್ ಮಾಧ್ಯಮದಲ್ಲಿನ ಜಾಹೀರಾತು ಆದಾಯವು ಸುಮಾರು 80,200 ಕೋಟಿ ರೂ.ಗಳಾಗಿದೆ ಎಂದು ಹೇಳಲಾಗಿದೆ.
ಖಾಸಗಿ ವಾಹಿನಿಗಳು ಹೇಗೆ ಟಿಆರ್‌ಪಿಯನ್ನು ತಿರುಚುತ್ತವೆ?
- ಟಿಆರ್‌ಪಿ ನಿರ್ಧರಿಸಲು BARC ನೇಮಿಸಿದ್ದ ಖಾಸಗಿ ಸಂಸ್ಥೆಯ ನಿವೃತ್ತ ನೌಕರನಿಗೆ ಲಂಚದ ಆಮಿಷವೊಡ್ಡುವ ಮೂಲಕ ಸೆಟ್‌ಟಾಪ್ ಬಾಕ್ಸ್‌ಗಳಲ್ಲಿ ಅಳವಡಿಸಲಾದ ಗ್ರಾಹಕರ ಮನೆಗಳನ್ನು ಖಾಸಗಿ ವಾಹಿನಿಗಳು ಮೊದಲು ಗುರುತಿಸುತ್ತವೆ. ಸ್ಥಳೀಯ ಕೇಬಲ್ ಆಪರೇಟರ್ಗಳನ್ನು ಬುಕ್ ಮಾಡಿಕೊಂಡು ಆ ಮನೆಯವರಿಗೆ ಪ್ರತಿ ದಿನ ಇಂತಿಷ್ಟು ಎಂದು ಹಣವನ್ನು ಪಾವತಿಸಿ ದಿನಾಲು ತಮ್ಮ ವಾಹಿನಿಯನ್ನು ಮಾತ್ರ ವೀಕ್ಷಿಸುವಂತೆ ಹಾಗೂ ಟಿವಿ ನೋಡದಿರುವ ಸಮಯದಲ್ಲೂ ಕೂಡ ಟಿವಿಯನ್ನು ಆನ್ ಮಾಡಿ ಇಡಲು ಮನವಿ ಮಾಡಲಾಗುತ್ತದೆ.
- ಕೇಬಲ್ ಆಪರೇಟರ್‌ಗಳ ಸಹಾಯದಿಂದ ತಮಗೆ ಯಾವ ದೃಶ್ಯವಾಹಿನಿ ಪ್ರತಿಸ್ಪರ್ಧಿಯಾಗಿದೆಯೊ ಆ ವಾಹಿನಿಯ ಪ್ರಸಾರವನ್ನು ಪ್ರೈಮ್ ಟೈಂನಲ್ಲಿ ಪ್ರಸಾರವಾಗದಂತೆ ತಡೆಯುವುದು, ಕೇಬಲ್ ನೆಟ್‌ವರ್ಕ್ ಪಟ್ಟಿಯಿಂದ ಅಂತಹ ವಾಹಿನಿಗಳನ್ನು ಕೈಬಿಡುವುದು ಅಥವಾ ಆ ಪ್ರೈಮ್ ಸಮಯದಲ್ಲಿ ಪ್ರತಿಸ್ಪರ್ಧಿ ವಾಹಿನಿಯ ಆಡಿಯೋನಲ್ಲಿ ಒಂದು ಬಗೆಯ ಗೊಂದಲ ಅಥವಾ ತೊಂದರೆಯಾಗುವಂತೆ ನೋಡಿಕೊಂಡು ಆ ಮೂಲಕ ಜನರು ಆ ವಾಹಿನಿಯನ್ನು ನೋಡದಂತೆ ಮಾಡಲಾಗುತ್ತದೆ.
- ಗ್ರಾಹಕರು ಟಿವಿ ಆನ್ ಮಾಡಿದ ತಕ್ಷಣ ಮೊದಲು ತಮ್ಮದೇ ವಾಹಿನಿ ಕಾಣಿಸಿಕೊಳ್ಳುವಂತೆ ಅಡ್ಜಸ್ಟ್ ಮಾಡಿಸಲಾಗುತ್ತದೆ. ಅಂದರೆ ಟಿವಿ ಆನ್ ಮಾಡಿದ ಕೂಡಲೇ ಆ ಸೆಟ್‌ಟಾಪ್ ಬಾಕ್ಸ್ ನಲ್ಲಿ ತಮ್ಮ ವಾಹಿನಿ ಮೊದಲು ಕಾಣಿಸಿಕೊಳ್ಳುವಂತೆ ಕೇಬಲ್ ಆಪರೇಟರ್‌ಗಳ ಮೂಲಕ ಡಿಫಾಲ್ಟ್ ಸೆಟ್ಟಿಂಗ್ ಮಾಡಿಸಲಾಗುತ್ತದೆ.ಮನರಂಜನೆ, ಹಿಂದಿ ಸುದ್ದಿ ವಾಹಿನಿ, ಇಂಗ್ಲಿಷ್ ಸುದ್ಧಿ ವಾಹಿನಿ… ಹೀಗೆ ಬೇರೆ ಬೇರೆ ಎಲ್ಲ ಬಗೆಯ ವಿಭಾಗಗಳಲ್ಲಿ ತಮ್ಮ ವಾಹಿನಿಯ ಸಂಖ್ಯೆಯನ್ನು ಅಳವಡಿಸಲು ಕೇಬಲ್ ಆಪರೇಟರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇದನ್ನು ಡ್ಯುಯಲ್ ಲಾಜಿಕಲ್ ನಂಬರ್ ಎಂದು ಕರೆಯುತ್ತಾರೆ. ಹೀಗೆ ಎಲ್ಲ ಕೆಟಗರಿಗಳಲ್ಲಿ ಒಂದು ವಾಹಿನಿಯ ನಂಬರ್ ಪುನಃ ಪುನಃ ಅಳವಡಿಸುವಂತೆ ಮಾಡಲಾಗುತ್ತದೆ. ಗ್ರಾಹಕರು ಮನೆಗಳಲ್ಲಿ ಟಿವಿ ನೋಡುವಾಗ ತಮ್ಮ ರಿಮೋಟ್ ಓಡಿಸುವ ಸಂದರ್ಭದಲ್ಲಿ ಅಡ್ಡಡ್ಡಲಾಗಿ ಪ್ರತಿ ಸಲ ಅದೇ ವಾಹಿನಿ ಓಪನ್ ಆಗುವಂತೆ ಅಡ್ಜಸ್ಟ್ ಮಾಡಲಾಗುತ್ತದೆ. ಹಾಗೆ ಮಾಡಿದಾಗ ಒಂದಷ್ಟು ವಾಚ್ ಟೈಂ ಆ ವಾಹಿನಿಯ ಖಾತೆಗೆ ಹೋಗುತ್ತದೆ.
ಸುದ್ದಿ ಮತ್ತು ಮನರಂಜನಾ ವಾಹಿನಿಗಳು ಟಿಆರ್‌ಪಿ ಹೆಚ್ಚಳಕ್ಕೆ ಅಡ್ಡದಾರಿ ಹಿಡಿದಿವೆ
ಸುದ್ದಿ ಚಾನಲ್‌ಗಳು ಮತ್ತು ಮನರಂಜನಾ ಚಾನಲ್‌ಗಳು TRP ಹೆಚ್ಚಿಸಿಕೊಳ್ಳಲು ಅನೇಕ ಅನೈತಿಕ ಮತ್ತು ಅಪಾಯಕಾರಿ ವಿಧಾನಗಳನ್ನು ಅನುಸರಿಸುತ್ತವೆ. ಸುದ್ದಿ ಚಾನಲ್‌ಗಳು ಸಂವೇದನಾಶೀಲ ವಿಷಯಗಳು, ದ್ವೇಷ ಹುಟ್ಟಿಸುವ ಚರ್ಚೆಗಳು, ಅತಿಯಾದ ಡ್ರಾಮಾ, ಸ್ಪೆಕ್ಯುಲೇಟಿವ್ ವರದಿಗಳು, ಮೀಡಿಯಾ ಟ್ರಯಲ್‌ಗಳನ್ನು ಮಾಡುತ್ತವೆ. ಮನರಂಜನಾ ಚಾನಲ್‌ಗಳು ಸ್ಟಂಟ್‌ಗಳು, ವಿವಾದಾಸ್ಪದ ಕಂಟೆಂಟ್, ಅತಿಯಾದ ಭಾವನಾತ್ಮಕ ಡ್ರಾಮಾ ಬಳಸುತ್ತವೆ. 2020ರಲ್ಲಿ Republic TV ಸೇರಿದಂತೆ ಕೆಲವು ಚಾನಲ್‌ಗಳ ಮೇಲೆ TRP ಮ್ಯಾನಿಪ್ಯುಲೇಷನ್ ಆರೋಪಗಳು ಬಂದಿದ್ದವು.
ಟಿಆರ್‌ಪಿ ತಿರುಚುವಿಕೆ, ರಿಪಬ್ಲಿಕ್ ವಾಹಿನಿ ಮತ್ತು ಅರ್ನಬ್ ಗೋಸ್ವಾಮಿ
ಆರು ವರ್ಷಗಳ ಹಿಂದೆ, ಮುಂಬೈ ಪೊಲೀಸ್ ಆಯುಕ್ತರು ಹಿಂದಿ ರಿಪಬ್ಲಿಕ್ ವಾಹಿನಿಯ ಮೇಲೆ ಗುಮಾನಿ ವ್ಯಕ್ತಪಡಿಸಿ, ಟಿಆರ್‌ಪಿ ತಿರುಚುವಿಕೆ ಪ್ರಕರಣವನ್ನು ದಾಖಲಿಸಿ, ಹೆಚ್ಚಿನ ತನಿಖೆ ಮಾಡುವುದಾಗಿ ಹೇಳಿದ್ದನ್ನು ನೀವೆಲ್ಲ ಓದಿರುತ್ತೀರಿ. ಹಿಂದಿ ರಿಪಬ್ಲಿಕ್ ವಾಹಿನಿಯ ಮೇಲಿನ ಟಿಆರ್‌ಪಿ ತಿರುಚುವಿಕೆ ಆರೋಪ ತುಂಬಾ ಹಳೆಯದು. 2017ರಲ್ಲೂ ಕೂಡ ಇಂತಹದ್ದೇ ವಂಚನೆಯ ಪ್ರಕರಣ ಈ ದೃಶ್ಯ ವಾಹಿನಿಯ ಮೇಲೆ ದಾಖಲಾಗಿತ್ತು. ಪ್ರಮುಖವಾಗಿ ಈ ವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಎನ್ನುವ ವ್ಯಕ್ತಿ ಬಿಜೆಪಿಗೆ ನಿಷ್ಠವಾಗಿರುವ ಕೌಟುಂಬಿಕ ಹಿನ್ನೆಲೆಯುಳ್ಳವರು. ಈತ ವಿಶೇಷವಾಗಿ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳಲ್ಲಿ ಹುಟ್ಟು ಹಾಕಿರುವ ಅನೈತಿಕ ಪರಂಪರೆ ಹಾಗೂ ಕೂಗುಮಾರಿ ಮಾದರಿಯು ಮಾಧ್ಯಮ ಕ್ಷೇತ್ರದಲ್ಲಿ ಈತ ಒಂದು ಕಪ್ಪುಚುಕ್ಕೆ ಎಂದೇ ಪ್ರಾಜ್ಞರು ಮಾತನಾಡುತ್ತಾರೆ. ಈತನ ಅಸಭ್ಯ ಚೀರಾಟ, ಅನಗತ್ಯ ಅರಚಾಟ, ಪಕ್ಷಪಾತ ಪೂರಿತ ಸುದ್ಧಿ ಪ್ರಸಾರ, ದ್ವೇಷ ಹರಡುವಿಕೆಯ ಕಾರ್ಯಕ್ರಮಗಳು ಇಡೀ ಭಾರತೀಯ ಮಾಧ್ಯಮ ಕ್ಷೇತ್ರವನ್ನು ಇನ್ನಿಲ್ಲದಂತೆ ಕುಲಗೆಡಿಸಿದೆ.
ಈತನನ್ನು ಮಾದರಿಯಾಗಿಟ್ಟುಕೊಂಡು ಈತನಂತೆ ನಕಲು ಮಾಡಲು ಪ್ರಯತ್ನಿಸುವ ಅದೆಷ್ಟೊ ಪ್ರಾದೇಶಿಕ ವಾಹಿನಿಗಳ ಸುದ್ಧಿವಾಚಕರು ಆತನಂತೆಯೇ ಅನೈತಿಕ ಮತ್ತು ಆತ್ಮಹತ್ಯಾತ್ಮಕ ಹಾದಿಯನ್ನು ತುಳಿದಿದ್ದು ನೀವು ಗಮನಿಸಿರುತ್ತೀರಿ. ಕನ್ನಡದ ದೃಶ್ಯ ಮಾಧ್ಯಮಗಳಲ್ಲೂ ಕೂಡ ಒಬ್ಬಿಬ್ಬರು ಸುದ್ದಿವಾಚಕರು ಗೋಸ್ವಾಮಿಯನ್ನು ನಕಲು ಮಾಡುತ್ತಾರೆ ಹಾಗೂ ತಮ್ಮನ್ನು ತಾವು ರಾಷ್ಟ್ರೀಯವಾದಿ ಪತ್ರಕರ್ತರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಿಕೊಳ್ಳುತ್ತಾರೆ. ಇಂತಹ ಮತಿಗೇಡಿ, ಕೋಮುವಾದಿ, ಪಕ್ಷಪಾತಿ ಪತ್ರಕರ್ತರನ್ನು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಏಜೆಂಟ್ ಎಂದು ಟ್ರೋಲ್ ಮಾಡುವುದನ್ನು ನೀವೆಲ್ಲ ನೋಡಿರಬಹುದು. ಬಹುಶಃ ಈ ದಶಕದುದ್ದಕ್ಕೂ ರಾಜಕಾರಣಿಗಳಿಂತ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಹಾಗೂ ಅಪಹಾಸ್ಯಕ್ಕೆ ಗುರಿಯಾದವರು ಈ ಬಗೆಯ ಸುದ್ದಿವಾಚಕರು ಎನ್ನುವುದು ವಿಶೇಷ ಸಂಗತಿ.




