ಕತ್ತಲಕೂಪದಿಂದ ಬೆಳಕಿನೆಡೆಗೆ; ಸುಧಾ ಭಾರದ್ವಾಜ್‌ ಜೈಲು ದಿನಚರಿ

Date:

ಸುಧಾ ತಮ್ಮ ಆ ಕಠಿಣ ಜೈಲು ಜೀವನದಲ್ಲೂ ಕಾಣಿಸಿಕೊಳ್ಳುವ ಚಿಕ್ಕ ಚಿಕ್ಕ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಮಾನವೀಯತೆಯನ್ನು ಕಾಣುತ್ತಾರೆ. ಉದಾಹರಣೆಗೆ ಬಟ್ಟೆ ಇಡುವುದಕ್ಕಾಗಿ ಸಹಬಂಧಿಯೊಬ್ಬಳು ತನ್ನ ಚೀಲವನ್ನು ನೀಡಿದ ಕ್ಷಣವನ್ನೂ ನೆನೆಯುತ್ತಾರೆ. ಈ ದೃಷ್ಟಿ ಈ ದಿನಚರಿಯನ್ನು ಮಹತ್ವಪೂರ್ಣವಾಗಿಸಲು, ಕಲಾತ್ಮಕವಾಗಿಸಲು ಕಾರಣವಾಗಿದೆ.

ಭಾರತೀಯ ಟ್ರೇಡ್ ಯೂನಿಯನ್ ನಾಯಕಿ, ಮಾನವ ಹಕ್ಕುಗಳ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ, ವಿಶೇಷವಾಗಿ ಛತ್ತೀಸ್‌ಗಢದಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ; ಸುಧಾ ಭಾರದ್ವಾಜ್ 2018ರಲ್ಲಿ ಭೀಮಾ-ಕೋರೆಗಾಂವ್ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿ (UAPA ಅಡಿ) ಜೈಲುವಾಸ ಅನುಭವಿಸಿ, 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು. ಅವರು ತಮ್ಮ ಜೈಲಿನ ಅನುಭವಗಳ ಕುರಿತು “From Phansi Yard” ಎಂಬ ಪುಸ್ತಕ ಬರೆದಿದ್ದಾರೆ.

ಭಾರತೀಯ ಜೈಲುಗಳ ಒಳಗಿನ ವಾಸ್ತವಿಕ ಜೀವನ ಹೇಗಿರುತ್ತದೆ ಎಂಬ ವಿವರಗಳು ನಮ್ಮ ಸಾಮಾಜಿಕ ವಲಯದಲ್ಲಿ ಬಹಳ ಅಪರೂಪ. ಸುಧಾ ಭಾರದ್ವಾಜ್ ತಮ್ಮ ಜೈಲು ದಿನಚರಿ ‘ಫಾಂಸಿ ಯಾರ್ಡ್‌ನಿಂದ’ ನಲ್ಲಿ ಆ ನಾಲ್ಕು ಗೋಡೆಗಳ ಹಿಂದೆ ನಡೆಯುವ ಸಾಮಾಜಿಕ ಭೇದಭಾವದ ಸ್ವರೂಪವನ್ನು, ಯಾತನೆಯ ಎಷ್ಟು ಪದರಗಳು ಅಲ್ಲಿ ಇವೆಂಬುದನ್ನು, ಒಂದು ಯಾತನೆ ಹೇಗೆ ಇನ್ನೊಂದನ್ನು ಗಾಢಗೊಳಿಸುತ್ತದೆ ಎಂಬುದನ್ನು ವಿವರವಾಗಿ ದಾಖಲಿಸುತ್ತಾರೆ. ಅದರಲ್ಲೂ ಮಹಿಳೆಯರ ಜೀವನ ! 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುಧಾ ತಮ್ಮ ಆ ಕಠಿಣ ಜೈಲು ಜೀವನದಲ್ಲೂ ಕಾಣಿಸಿಕೊಳ್ಳುವ ಚಿಕ್ಕ ಚಿಕ್ಕ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಮಾನವೀಯತೆಯನ್ನು ಕಾಣುತ್ತಾರೆ. ಉದಾಹರಣೆಗೆ ಬಟ್ಟೆ ಇಡುವುದಕ್ಕಾಗಿ ಸಹಬಂಧಿಯೊಬ್ಬಳು ತನ್ನ ಚೀಲವನ್ನು ನೀಡಿದ ಕ್ಷಣವನ್ನೂ ನೆನೆಯುತ್ತಾರೆ. ಈ ದೃಷ್ಟಿ ಈ ದಿನಚರಿಯನ್ನು ಮಹತ್ವಪೂರ್ಣವಾಗಿಸಲು, ಕಲಾತ್ಮಕವಾಗಿಸಲು ಕಾರಣವಾಗಿದೆ.

ಸುಪ್ರೀಂಕೋರ್ಟ್ ಪುನಃ ಉಮರ್ ಖಾಲಿದ್‍ಗೆ ಜಾಮೀನು ನಿರಾಕರಿಸಿದ ಸಧ್ಯದ ಪರಿಸ್ಥಿತಿಯಲ್ಲಿ ಮನಸ್ಸು ಭಾರವಾಗಿದೆ. ಕೇವಲ ಪತ್ರಕರ್ತರು, ಹೋರಾಟಗಾರರು ಬರೆಹಗಾರರು, ಅಧ್ಯಾಪಕರು, ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಜೀವಂತ ಗೋರಿಯಾಗಿಸುತ್ತಿರುವ ಈ ಅನಿಷ್ಟ ಯುಎಪಿಎ ಕಾನೂನನ್ನೇ ರದ್ದುಗೊಳಿಸಬೇಕೆನ್ನುವ ದನಿಗಳೂ ಕೇಳಿಬರತೊಡಗಿವೆ. ಈ ಸಮಯದಲ್ಲಿ ಜೈಲು ಜೀವನದ ಬಗ್ಗೆ ಸುಧಾ ಅವರ ಈ ಪುಸ್ತಕ ಕುತೂಹಲ ಹುಟ್ಟಿಸಿತು. ಅದರ ಒಂದು ಭಾಗ ಇಲ್ಲಿದೆ  ಓದಿ ನೀವೂ.

ಅಕ್ಟೋಬರ್ 2018ರಲ್ಲಿ ಫರೀದಾಬಾದ್‌ನ ನನ್ನ ಮನೆಯಲ್ಲಿ ನಡೆದ ಎರಡು ತಿಂಗಳ ಗ್ರಹಬಂಧನದ ವಾಸ ಅಂತ್ಯವಾಯಿತು. ನನ್ನನ್ನು ಪುಣೆಗೆ ಕರೆದೊಯ್ಯಲಾಯಿತು ಮತ್ತು 6 ನವೆಂಬರ್ 2018ರವರೆಗೆ ಹತ್ತು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.

ಪುಣೆ ನಗರದ ಫರಾಸ್ಖಾನಾ ಪೊಲೀಸ್ ಠಾಣೆಗೆ ಅಂಟಿಕೊಂಡಿರುವ ಫರಾಸ್ಖಾನಾ ಲಾಕ್‌ಅಪ್ ತುಂಬಾ ಕೆಟ್ಟ ಸ್ಥಿತಿಯಲ್ಲಿತ್ತು. ಮೇಲ್ಚಾವಣಿಯಿಂದ ಜೇಡರಬಲೆಗಳು ಜೋತುಬಿದ್ದಿದ್ದವು. ಕಪ್ಪುಮಸಿಯಂತಹ ಬಲೆ ಹುಳಜಾಲಗಳು ತೂಗಿ ನಿಂತಿದ್ದವು, ಗೋಡೆಗಳು  ಪಾನ್ ಮತ್ತು ತಂಬಾಕಿನ ಕೆಂಪು ಕಲೆಗಳಿಂದ ಗಲೀಜಾಗಿದ್ದವು. ಕಂಬಳಿಗಳು ತಗಣಿಗಳಿಂದ ತುಂಬಿದ್ದವು, ಶೌಚಾಲಯಗಳಲ್ಲಿ ಕಸ ತೊಳೆಯಲು ಒಂದು ಬಕೆಟ್ ಸಹ ಇರಲಿಲ್ಲ. ನಾನು ಮನಸಲ್ಲಿ, “ದೇವರೇ, ನಾನು ಇಲ್ಲಿ ಹೇಗೆ ಬದುಕುವೆ?” ಎಂದುಕೊಂಡೆ.

ಪ್ರತಿದಿನ ಹೊಸ ಹೊಸ ಮಹಿಳೆಯರು ಬರುತ್ತಿದ್ದರು, ಹೋಗುತ್ತಿದ್ದರು. ಒಬ್ಬ ಒಳ್ಳೆಯ ಸಿಪಾಯಿ ನನಗೆ ಬಕೆಟ್ ಮತ್ತು ಮಗ್ಗನ್ನು ತರಿಸಿಕೊಡಲು ಸಹಾಯ ಮಾಡಿದ. ದಿನದಲ್ಲಿ ಸಹಾಯಕ ಪೋಲಿಸ್ ಆಯುಕ್ತರ ಕಚೇರಿಗೆ ವಿಚಾರಣೆಗೆ ಕರೆದೊಯ್ಯುತ್ತಿದ್ದರು. ಆದರೆ ಅಲ್ಲಿ ಯಾವೊಂದು ವಿಚಾರಣೆ  ಏನೂ ನಡೆಯದೆ, ಹೇಗೋ ಆ ಹತ್ತು ದಿನಗಳು ಕಳೆಯುತ್ತವೆ.

ಯೆರವಡಾ ಮಹಿಳಾ ಜೈಲಿಗೆ ನಾನು ಪ್ರವೇಶಿಸಿದ ಸಂಜೆ

ಅಲ್ಲಿ ಕತ್ತಲು ಮತ್ತು ಚಳಿ ಹೊಮ್ಮುತ್ತಿತ್ತು. ದುರ್ಗದಂತೆ ಕಾಣುವ ಎತ್ತರದ ಗೋಡೆಗಳು. ಹೊರಗಿನ ಗೋಡೆಗಳು ಮತ್ತು ಬ್ಯಾರಕ್‌ಗೆ ಹೋಗುವ ಬೃಹತ್ ಕಬ್ಬಿಣದ ಗೇಟ್ ನಡುವಿನ ಲಾಬಿ ತರಹದ ಜಾಗದಲ್ಲಿ, ಅದನ್ನು ನಾನು ನಂತರ ‘ಗೇಟ್’ ಎಂದು ಕರೆಯಲು ಕಲಿತೆ, ಸಿಪಾಯಿಗಳು ನನ್ನ ಚೀಲದಿಂದ ಸಾಮಾನುಗಳನ್ನು ಹೊರತೆಗೆದು ಕಲ್ಲಿನ ನೆಲದ ಮೇಲೆ ಹಾಗೆಯೇ ಎಸೆದರು ಮತ್ತು ನನ್ನ ಹೆಚ್ಚಿನ ವಸ್ತುಗಳನ್ನು ಹೊರಗೆ ಹಾಕಿದರು. ಟಿ-ಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಲು ಅನುಮತಿಯಿಲ್ಲ. ಕೇವಲ ಸಲ್ವಾರ್-ಕುರ್ತಾ ಅಥವಾ ಸೀರೆಗಳನ್ನು ಧರಿಸಬೇಕು, ಕೂದಲಿಗೆ ಯಾವುದೇ ಕ್ಲಚರ್ ಇಲ್ಲ.

ಟಿ-ಶರ್ಟ್ ಅಥವಾ ಟ್ರ್ಯಾಕ್ ಪ್ಯಾಂಟ್ ಧರಿಸಲು ಅನುಮತಿ ಇಲ್ಲ, ಕೇವಲ ಸಲವಾರ-ಕುರ್ತಾ ಅಥವಾ ಸೀರೆ ಧರಿಸಬೇಕು. ಕೂದಲಿಗೆ ಕ್ಲಚ್ಚರ್ ಬಳಸುವುದಕ್ಕೂ ಅನುಮತಿ ಇಲ್ಲ.

ಒಬ್ಬ ದಪ್ಪ, ಒರಟು ಮಹಿಳೆಯ ಕಟ್ಟುನಿಟ್ಟಾದ ಕಣ್ಗಾವಲಿನಲ್ಲಿ ನನ್ನ ಪಕ್ಕದ ಕೊಳಕು ಕೋಣೆಯಲ್ಲಿ ಬಟ್ಟೆ ಬಿಚ್ಚಲು ಹೇಳಲಾಯಿತು. ‘ಹೌದು ಎಲ್ಲವನ್ನೂ ಬಿಚ್ಚು’, ‘ಕುಳಿತುಕೋ’, ‘ನಿನ್ನ ಕೂದಲು ಬಿಚ್ಚು’, ಎಂದು ಆಕೆಯ ಆದೇಶಗಳು. ನಾನು ಕೇವಲ ದೇಹದಿಂದ ಮಾತ್ರವಲ್ಲ, ಎಲ್ಲ ರೀತಿಯಿಂದಲೂ ನಗ್ನಳಾದಂತೆ ಭಾಸವಾಯಿತು. ನಾನು ಮತ್ತೆ ಬಟ್ಟೆಗಳನ್ನು ಧರಿಸಿದೆ ಮತ್ತು ಈಗ ನನಗೆ ನನ್ನ ಮೂಲಭೂತ ಲೌಕಿಕ ವಸ್ತುಗಳನ್ನು ಹಸ್ತಾಂತರಿಸಲಾಯಿತು: ಹಾಸಿಗೆ – ಒಂದು ಕಿರಿದಾದ ಹಾಸಿಗೆ, ತೆಳುವಾದ ದರಿ, ಘೋಂಘ್ರಿ ಎಂದು ಕರೆಯಲ್ಪಡುವ ಹೆಣೆದ ದಪ್ಪ ಕಂಬಳಿ, ಒಂದು ಬೆಡ್‌ಶೀಟ್ ಮತ್ತು ನನ್ನ ಪಾತ್ರೆಗಳು – ಅಲ್ಯೂಮಿನಿಯಂ ಪ್ಲೇಟ್, ಬಟ್ಟಲು ಮತ್ತು ಮಗ್ಗು.

ನನ್ನ ಮೊದಲ (ನಿದ್ರೆಯಿಲ್ಲದ) ರಾತ್ರಿ

ಅದು ಆಸ್ಪತ್ರೆ ಬ್ಯಾರಕ್‌ನಲ್ಲಿ ಕಳೆಯಿತು,

ಅಲ್ಲಿ ಯಾರಿಗೂ ವಿಶೇಷವಾಗಿ ಇಷ್ಟವಿಲ್ಲದ ಮಹಿಳೆಯ ಪಕ್ಕದಲ್ಲಿ ನನಗೆ ಮನವಿಲ್ಲದೆ ಜಾಗ ನೀಡಲಾಗಿತ್ತು.

ಆಕೆಯ ಹಾಸು ಕೂಡ ನನ್ನಷ್ಟೇ ಕಿರಿಯಾಗಿತ್ತು.

ಇಲ್ಲಿ ಶೌಚಾಲಯಗಳು ಬಹಳ ಸ್ವಚ್ಛವಾಗಿವೆ ಎಂಬುದು ನನಗೆ ಸ್ವಲ್ಪ ಧೈರ್ಯ ನೀಡಿತು.

***

ಮರುದಿನ ಬೆಳಿಗ್ಗೆ

ಬೆಳಗ್ಗೆ 5.30ಕ್ಕೆ, ‘ಬೆಳಗಿನ ಪಾಳಿ’ಯಲ್ಲಿ (ಹೌದು, ನಾನು ಹೊಸ ಹೊಸ ಜೈಲು ಪದಗಳನ್ನು ಕಲಿಯುತ್ತಿದ್ದೆ),

ಸ್ತ್ರೀಯರು ಸಾಲುಸಾಲಾಗಿ ತಂಪಾದ ಕಲ್ಲಿನ ನೆಲದ ಮೇಲೆ ಚಕ್ಕಳಮಕ್ಕಳ ಹಾಕಿಕೊಂಡು ಕೂತಿದ್ದರು.

ಅಲ್ಲಿ ಕೈದಿಗಳ ಎಣಿಕೆ ನಡೆಯುತ್ತದೆ.

ಸಂಕೋಚದಿಂದ ನಾನು ಅವರ ಬಳಿಗೆ ಸೇರಿದೆ.

ಹಳದಿ ಸೀರೆ ತೊಟ್ಟಿದ್ದ ಒಬ್ಬ ವಾರ್ಡರ್,

ನಗುತ ನಗುತ ಬೆಳಗಿನ ಪಾಳಿಗೆ ಬಂದ ಸಿಪಾಯಿಗಳತ್ತ ತೋರಿಸುತ್ತಾ ಹೇಳಿದಳು.

“ಇದು ಮಾವೋವಾದಿ”.

(ಪ್ರಾರಂಭದಲ್ಲಿ ಆಕೆಯನ್ನು ಜೈಲು ಅಧಿಕಾರಿನಿ ಎಂದುಕೊಂಡಿದ್ದೆ. ನಂತರ ಆಕೆ ಕೂಡ ಶಿಕ್ಷಿತ ಕೈದಿ ಎಂಬುದು ನನಗೆ ಗೊತ್ತಾಯಿತು.)

ಬೆಳಗ್ಗೆ 7 ಗಂಟೆಗೆ ಬ್ಯಾರಕ್‌ನ ಬಾಗಿಲು ತೆರೆಯಲಾಗುತ್ತದೆ ಮತ್ತು ಎಲ್ಲರೂ ಹೊರಗೆ ಓಡಿಹೋಗುತ್ತಾರೆ.

ನಾನು ಬ್ಯಾರಕ್‌ ಹಿಂಭಾಗದಲ್ಲಿರುವ ಒಂದೇ ಒಂದು ಕಂಬಿಯಲ್ಲಿ ಬಟ್ಟೆ ಒಣಗಿಸಲು ಹಾಕುತ್ತಿದ್ದಾಗ, ಒಬ್ಬ ಕೈದಿ ಗದರಿಸಿದಳು.

“ಅಯ್ಯೋ, ನೀನು ನಿನ್ನ ಬಟ್ಟೆಗಳನ್ನು ಅಲ್ಲಿ ಒಣಗಿಸೋಕಾಗುವುದಿಲ್ಲ!”

ನಂತರ  ತಿಳಿದುಬಂದದ್ದು ಏನೆಂದರೆ, ಆ ಕಂಬಿಯ ವಿವಿಧ ಭಾಗಗಳು ಬೇರೆ–ಬೇರೆ ಕೈದಿಗಳಿಗೆ ‘ರಿಸರ್ವ್’ ಮಾಡಲಾಗಿರುವವು.

ಜೈಲಿನ ಜೀವನದಲ್ಲಿರುವ ಅನೇಕ ನಿರ್ಬಂಧಗಳು—

ಅಧೀನತೆಯ ಒಂದು ಬೇರೆ ರೀತಿ ರುಚಿಯನ್ನು ನೀಡುತ್ತವೆ.

ಸ್ವಲ್ಪದರಲ್ಲೇ, ಹೊಸದಾಗಿ ಬಂದ ಕೈದಿಯರ ನಡುವೆ,

ನನ್ನ ‘ವಿಚಾರಾಧೀನ’ (UT – ಅಂಡರ್‌ಟ್ರಯಲ್) ಗುರುತುಪಟ್ಟಿಯನ್ನು ಎದೆಯ ಮೇಲೆ ಹಿಡಿದು

ಗೇಟಿನ ಬಳಿ ಸಾಲಿನಲ್ಲಿ ನಿಂತುಕೊಂಡೆ.

(ಈ ಜೈಲು ಗುರುತುಪಟ್ಟಿಯಲ್ಲಿ ಫೋಟೋ ಇರುವುದಿಲ್ಲ. ಕೇವಲ ಅಪರಾಧ ಸಂಖ್ಯೆ ಮತ್ತು ಕಾನೂನು ವಿಧಿಗಳ ಉಲ್ಲೇಖ ಮಾತ್ರ)

ಜೈಲು ಅಧೀಕ್ಷಕರು ಮತ್ತು ಅವರ ಒಳಾಧಿಕಾರಿಗಳು ಸಾಲನ್ನು ಪರಿಶೀಲಿಸುತ್ತಾ ಮುಂದಕ್ಕೆ ಸಾಗುತ್ತಿದ್ದರು. ಕೆಲವರಿಗೆ ‘ಒಳ್ಳೆಯ ವರ್ತನೆ’ಗಾಗಿ ಉಪದೇಶದ ಭಾಷಣವನ್ನು ಮಾಡುತ್ತಿದ್ದರು.

ನನ್ನನ್ನು ದಟ್ಟಿಸಿ ನೋಡಿ “ಹ್ಮ್” ಎಂದು ಹೇಳಿ ಮುಂದೆ ಸಾಗಿಬಿಟ್ಟರು.

ಯಾವ ದಿನ ಸೂರ್ಯ ಮೂಡಿ ಬೆಚ್ಚಗಿನ ಬಿಸಿಲು ಹರಡಿದಂದು ಪರಿಸ್ಥಿತಿ ಅಷ್ಟೊಂದು ಕೆಟ್ಟದಾಗಿದೆ ಅನಿಸುವುದಿಲ್ಲ. ಕಪ್ಪು ಹೆಂಚಿನ ಚಾವಣಿಯ ಒಂದು ಮಹಡಿಯ ಬ್ಯಾರಕ್‌,ಮರಗಳು ಮತ್ತು ಹೂತೋಟಗಳು, ಆಡುವ ಮಕ್ಕಳು, ಹಸಿರು ಸೀರೆ ತೊಟ್ಟು ಬೆಳಗಿನ ಕೆಲಸಗಳಲ್ಲಿ ತೊಡಗಿರುವ ಮಹಿಳೆಯರನ್ನು ಕಂಡು ನನ್ನ ಮನಸ್ಸಿಗೆ ಇದು ಯಾವುದೋ ಆಶ್ರಮವಾಗಿರಬೇಕು ಎನಿಸಿತು.

ನಂತರ ಗೊತ್ತಾಯ್ತು  –  ಹಸಿರು ಸೀರೆ ತೊಡುವವರು ಹತ್ಯೆ ಪ್ರಕರಣಗಳಲ್ಲಿ ವಿಚಾರಣಾಧೀನ ಅಥವಾ ಶಿಕ್ಷಿತ ಕೈದಿಯರೇ.

ನಾನು ಒಬ್ಬ ಕೈದಿಯೊಂದಿಗೆ ಮಾತನಾಡಲು ಪ್ರಯತ್ನಿಸಿದೆ.

ಒಬ್ಬ ಯುವತಿ ನನ್ನನ್ನು ರಕ್ಷಿಸುವ ಶೈಲಿಯಲ್ಲಿ ಸಲಹೆ ನೀಡಿದಳು.

“ಯಾರನ್ನೂ ಅವರ ಕೇಸ್‌ ಬಗ್ಗೆ ಕೇಳಬೇಡಿ.

ಇಲ್ಲಿ ಹಾಗೆ ಕೇಳುವುದು ಸರಿಯಲ್ಲ.”

ಒಬ್ಬ ವಯಸ್ಕ ಕೈದಿ ನನಗೆ ಒಂದು ಬಟ್ಟೆಯ ಚೀಲ ಕೊಟ್ಟಳು.

ಅವಳು ಹೇಳಿದಳು, “ಇದರಲ್ಲೇ ನಿನ್ನ ಬಟ್ಟೆಗಳನ್ನು ಇಟ್ಟುಕೋ”.

ಅವಳು ಮುಂದುವರಿಸಿದಳು, “ಇಲ್ಲಿ ಎಲ್ಲರಿಗೂ ಒಂದೊಂದು ಡ್ಯೂಟಿ ಇರುತ್ತದೆ. ತಲೆಯ ಮೇಲೆ ಹೊತ್ತು ಅನ್ನ (ಊಟ) ತರುವುದು, ಬ್ಯಾರಕ್‌ನಲ್ಲಿ ಕಸಗುಡಿಸುವುದು, ನೆಲವರೆಸುವುದು. ನಿನ್ನ ಕೆಲಸವನ್ನು ನಾನು ಮಾಡಿಕೊಡುವೆ…”. ಅದರಲ್ಲಿ ಅಸ್ಪಷ್ಟವಾಗಿ ಅಡಗಿರುವ ಸಂಗತಿಯೇನೆಂದರೆ —ಇದೇನು ಉಚಿತ ಸೇವೆಯಲ್ಲ. ಯಾರಾದರೂ ನಿನ್ನ ಕೆಲಸ ಮಾಡಿಕೊಟ್ಟರೆ ಅವರ ಪರಿಶ್ರಮದ ಬದಲಿಗೆ ಕ್ಯಾಂಟೀನ್‌ನಿಂದ ವಸ್ತುಗಳನ್ನು ಕೊಂಡುಕೊಡುವುದೇ ಪಾವತಿ. ಅನುಭವಿಗಳ ಪ್ರಕಾರ, ಅವರು ನನ್ನನ್ನು ಮಧ್ಯಮ ವರ್ಗದವಳು, ಭೋಳೇ ಸ್ವಭಾವದವಳು ಎಂದು ಘೋಷಿಸಿದ್ದರು.

ಭೇಟಿ ಕಕ್ಷೆಯಿಂದ ನನ್ನ ಹೆಸರನ್ನು ಕೂಗಿದರು.

ನನ್ನ ಮಗಳು ಮಾಯಿಶಾ ಬಂದಿದ್ದಾಳೆ, ಟೆಲಿಫೋನ್‌ ಮೂಲಕ ನನ್ನೊಂದಿಗೆ ಮಾತನಾಡುತ್ತಾ ಅವಳು ಅತ್ತುಬಿಡುತ್ತಾಳೆ.

ನಾವು ಇಬ್ಬರೂ ಪರಸ್ಪರದ ಸ್ಪರ್ಶವನ್ನು ಅನುಭವಿಸಲು ನಮ್ಮ ನಡುವೆ ನಿಂತಿರುವ ಗಾಜಿನ ಮೇಲೆ ಹಸ್ತಸ್ಪರ್ಶ ಮಾಡುತ್ತೇವೆ. ಅವಳ ಜೊತೆಯಲ್ಲಿ ಬಂದಿದ್ದ ಯೂನಿಯನ್‌ನ ನನ್ನ ಸಂಗಾತಿಗಳು ನನ್ನನ್ನು ಭೇಟಿಯಾಗಲು ಸಾಧ್ಯವಿಲ್ಲ. ಯುಎಪಿಎ ಅಡಿಯಲ್ಲಿ ಬಂಧಿತರಾಗಿರುವವರಿಗೆ ಇತರ ಕೈದಿಗಳಿಗಿಂತ ಹೆಚ್ಚಿನ ನಿರ್ಬಂಧಗಳಿವೆ.

ನಮಗೆ ಕೇವಲ ರಕ್ತಸಂಬಂಧಿಗಳು ಮತ್ತು ವಕೀಲರನ್ನು ಮಾತ್ರ ಭೇಟಿ ಮಾಡುವ ಅನುಮತಿ.

ಆಸ್ಪತ್ರೆ ಬ್ಯಾರಕ್‌ನ ಜೀವನಕ್ಕೆ ನಾನು ನಿಧಾನವಾಗಿ ಹೊಂದಿಕೊಳ್ಳತೊಡಗಿದ್ದೇನೆ. ಕೆಲವು ಸ್ನೇಹಿತರನ್ನೂ ಮಾಡಿಕೊಂಡಿದ್ದೇನೆ. ಮತ್ತು ಜೈಲಿನ ಭತ್ತಾ (ಊಟ) ತಿನ್ನುವ ಅಭ್ಯಾಸವಾಗುತ್ತಿದೆ.

ವಾರ್ಡರ್ ಬ್ಯಾರಕ್‌ಗೆ ತಂದು ಇಡುವ ಮರಾಠಿ ಪತ್ರಿಕೆಯನ್ನಿಟ್ಟಿರುವ ಆ ಗುಪ್ತ ಸ್ಥಳವನ್ನೂ ನಾನು ಕಂಡುಕೊಂಡಿದ್ದೇನೆ— ಅದರಿಂದ ನನಗೆ ಓದಲು ಏನಾದರೂ ಸಿಗುತ್ತದೆ, ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ಅಕಸ್ಮಾತ್ ಒಂದು ಸಂಜೆ, ನಮ್ಮನ್ನು ಒಳಕ್ಕೆ ಹಾಕುವ ಸಮಯ ಬರುತ್ತಿದ್ದಂತೆ ಸುಮಾರು 4:30ಕ್ಕೆ, ಒಬ್ಬ ಸಿಪಾಯಿ ಖಡಕ್‌ ಧ್ವನಿಯಲ್ಲಿ ನನ್ನ ಜೋಳಿಗೆಯೊಟ್ಟಿಗೆ ಹೊರಗೆ ಬರಲು ಆದೇಶಿಸಿದ್ದಳು. ಅವರು ನನ್ನನ್ನು ಫಾಂಸಿ ಯಾರ್ಡ್‌ವರೆಗೆ ಕರೆದುಕೊಂಡು ಹೋದರು. ಸಿಪಾಯಿ ‘ಒಬ್ಬ ಕೈದಿಗೆ ಮಾತ್ರ ಇರುವಂತಹ ಒಂದು ಪ್ರತ್ಯೇಕ ಕೊಠಡಿಯ ಬಾಗಿಲು ತೆರೆದಳು.

ನಾನು ಒಳಗೆ ಪ್ರವೇಶಿಸುತ್ತಿದ್ದಂತೆಯೇ ಧಡಾಕ್ ಗೇಟ್‌ ಜೋರುವಾಗಿ ಮುಚ್ಚಿತು ಮತ್ತು ಬೀಗ ಹಾಕಲಾಯಿತು.

ಮನೆ ಬಿಟ್ಟ ನಂತರ ಮೊದಲ ಬಾರಿಗೆ ಈ ಅನ್ಯಾಯದ ವರ್ತನೆಯಿಂದ ನನ್ನ ಕಣ್ಣಲ್ಲಿ ಕಣ್ಣೀರು ತುಂಬಿ ಬಂದವು. ನಾನು ನನ್ನ ಹಾಸಿಗೆ (ಪಟ್ಟಿ) ಹಾಸಿಕೊಳ್ಳಲೂ ಆಗದೇ ಬೇಗ ತಂಪಾದ ಕಲ್ಲಿನ ನೆಲದ ಮೇಲೆ ಮಲಗಿ ಬಿಟ್ಟೆ. ಅದೇ ಸಮಯದಲ್ಲಿ, ಗೋಡೆಯ ಆಚೆಯಿಂದ ಒಂದು ಧ್ವನಿ ಕೇಳಿಸಿತು.

“ಸುಧಾ, ನೀನು ಚೆನ್ನಾಗಿದ್ದೀಯಾ?”

ಅದು ಪ್ರೊಫೆಸರ್ ಶೋಮಾ ಸೇನ್ ಅವರ ಧ್ವನಿ.

ನಾವು ಒಬ್ಬರನ್ನೊಬ್ಬರು ಗುರುತಿಸುತ್ತಿದ್ದರೂ  ಅಷ್ಟು ಆತ್ಮೀಯತೆ ಇರಲಿಲ್ಲ. ಅವರು ಕರ್ತವ್ಯದಲ್ಲಿದ್ದ ಗಾರ್ಡ್‌ ಮೂಲಕ ತಮ್ಮ ಊಟದ ಸ್ವಲ್ಪ ಭಾಗವನ್ನು ನನಗೆ ಕಳುಹಿಸಿದರು. ನನಗೆ ನನ್ನ ಭಾಗದ ಊಟ ತರಲು  ಸಮಯವೇ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಇದೇ ಸ್ನೇಹ ನಮ್ಮ ಮುಖ್ಯ ಆಧಾರವಾಯಿತು.

“ಹೌದು, ನಾನು ಚೆನ್ನಾಗಿದ್ದೇನೆ!” ಎಂದು ನಾನು ಕೂಗಿ ಉತ್ತರಿಸಿದೆ.

ನಿಯಮ — ನಿಯಮ — ನಿಯಮ

ಜೈಲಿನಲ್ಲೊಬ್ಬ ವ್ಯಕ್ತಿ ಸಿಕ್ಕಾಪಟ್ಟೆ ಮೊದಲಿಗೆ ಕಲಿಯುವುದು ನಿಯಮಗಳನ್ನು ಪಾಲಿಸುವುದೇ. ಅವು ಬರವಣಿಗೆಯಲ್ಲಿರಬೇಕೆಂದೇನು ಇಲ್ಲ,  ಒಗ್ಗೂಡಿರಬೇಕೆಂದು ಇಲ್ಲ, ಕಾನೂನುಬದ್ಧವಾಗಿರಬೇಕೆಂದೂ ಇಲ್ಲ, ಕಾಲಕ್ಕೊಪ್ಪದ, ಅಸಂಬದ್ಧವಾದವುಗಳೂ ಆಗಿರಬಹುದು.

ಇದನ್ನೇ ನಾನು ಆರಂಭದಲ್ಲೇ ಅರಿತುಕೊಂಡೆ.

ಒಬ್ಬ ಮಹಿಳಾ ಸಿಪಾಯಿ ಹವಾಲಾತಿನಲ್ಲಿದ್ದ ಕೈದಿಯ ಮೇಲೆ ಕಿರುಚುತ್ತಿದ್ದರು.

“ಇಲ್ಲಿ ಯಾರೂ ಕ್ಲಚ್ಚರ್ ಹಾಕೋ ಹಾಗಿಲ್ಲ!”

ಇಂತಹ ನಿಷೇಧಪಟ್ಟಿ ತುಂಬಾ ದೀರ್ಘ… ನೆಲ್‌ಕಟರ್, ಕತ್ತರಿ, ಸೂಜಿ, ಚಮಚ, ಸೇಫ್ಟಿ ಪಿನ್, ಪ್ಲಾಸ್ಟಿಕ್ ಖಾಲಿ ಚೀಲಗಳು, ಕೂದಲಿಗೆ ಹಾಕುವ ಕ್ಲಿಪ್. ಯಾವುದೇ ಹುದುಗು ಬರುವ ಆಹಾರ (ವಿಷ ಮಿಶ್ರಣದ ಭಯದಿಂದ), ಡಿಸ್ಪೆನ್ಸರಿಯಿಂದ ತಂದ ಔಷಧದಿಂದ ದೂರವಿರುವುದು… ಪಟ್ಟಿ ಇನ್ನೂ ಮುಂದುವರಿಯುತ್ತದೆ. ಜೈಲಿನಲ್ಲಿ ತಮ್ಮನ್ನು ಅಥವಾ ಇತರರನ್ನು ಹಾನಿಗೊಳಿಸಲು “ಆಯುಧ”ವಾಗಿ ಬಳಸಬಹುದಾದ ಯಾವುದೇ ವಸ್ತುವನ್ನು ಬಳಸಲು ಖಡಕ್ ನಿಷೇಧವಿದೆ.

——

ನಾನು ಕೇಳಿರುವುದೇನೆಂದರೆ, ಪುರುಷರ ಜೈಲುಗಳಲ್ಲಿ, ಅಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿರುವ ಸ್ಥಳಗಳಲ್ಲಿ ಪ್ರಭಾವಿ ಅಥವಾ ಶ್ರೀಮಂತ ಕೈದಿಗಳಿಗೆ ಡ್ರಗ್ಸ್, ಮೊಬೈಲ್‌ ಫೋನ್‌, ವಿಶೇಷ ಆಹಾರ ಸೇರಿ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತವೆ. ಆದರೆ ನಿಜವಾಗಿ ಹೇಳುವುದಾದರೆ, ಮಹಿಳಾ ಜೈಲುಗಳಲ್ಲಿ ಸಣ್ಣಪುಟ್ಟ ಪಕ್ಷಪಾತದ ವರ್ತನೆ ಹೊರತುಪಡಿಸಿ ಇಂತಹ ವಿಶೇಷ ಅನುಕೂಲಗಳನ್ನು ಯಾರಾದರೂ ಪಡೆಯುತ್ತಿರುವುದನ್ನು ನಾನು ನೋಡಲಾಗಿಲ್ಲ.

ಇಲ್ಲಿ ಯಾವಾಗ, ಯಾವ ನಿಯಮವನ್ನು, ಯಾರ ಮೇಲೆ ಅನ್ವಯಿಸಬೇಕು ಎಂಬುದಕ್ಕೂ ಒಂದು ಗೂಢವಾದ ಶ್ರೇಣಿ ಕ್ರಮವಿದೆ. ಮೇಲೆ ಹಿರಿಯ ಮ್ಯಾಡಮ್. ಅಂದರೆ ಜೈಲರ್ ಮತ್ತು ಅವರ ಸಹಾಯಕರು; ಅವರ ಕೆಳಗೆ ಹವಾಲ್ದಾರ್ ಮತ್ತು ಸಿಪಾಯಿಗಳು, ಅಂದರೆ ಬಾಯಿಗಳು; ಅವರ ಕೆಳಗೆ ವಾರ್ಡರ್‌ಗಳು, ಅಂದರೆ ತಾಯಿಗಳು, ಇವರು 1500 ರೂಪಾಯಿ ಮಾಸಿಕ ವೇತನ ಪಡೆದಿರುವ, ಮೇಲ್ವಿಚಾರಕಿಯ ಜವಾಬ್ದಾರಿ ನೀಡಲ್ಪಟ್ಟಿದ್ದರೂ ಸ್ವತಃ ಕೈದಿಗಳೇ ಆಗಿದ್ದಾರೆ; ಹಳದಿ ಸೀರೆಗಳಿಂದ ಇವರನ್ನು ಗುರುತಿಸಲಾಗುತ್ತದೆ.

ಇವರ ಕೆಳಗೆ ಜೈಲಿನಲ್ಲಿ ದಿನಗೂಲಿ ಕೆಲಸ ಮಾಡುವ ಕೈದಿಗಳು ಬರುತ್ತಾರೆ; ಕೆಲವೊಮ್ಮೆ ಉಚಿತವಾಗಿ ಸಹ “ಸಹಾಯ” ಮಾಡುತ್ತಾರೆ. ತಾಯಿಗಳು ಮತ್ತು ಬಾಯಿಗಳಿಂದ ಸಿಗುವ ಸಣ್ಣ ಪ್ರಯೋಜನಗಳಿಗಾಗಿ ಇವರು ಇತರ ಕೈದಿಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಹೀಗೆ ಪದರದ ಮೇಲೊಂದು ಪದರವಾಗಿ ನಿರ್ಮಿತವಾದ ಈ ನಿಗಾವ್ಯವಸ್ಥೆ ಕೈದಿಗಳ ನಡುವಿನ ಏಕತೆಯನ್ನು ಒಡೆದುಹಾಕುತ್ತದೆ ಮತ್ತು ಪ್ರತಿಯೊಬ್ಬ ಕೈದಿ ಮತ್ತೊಬ್ಬಳ ಬಗ್ಗೆ ಸಂಶಯಪಡುವ ಸ್ಥಿತಿಯನ್ನು ಉಂಟುಮಾಡುತ್ತದೆ.

ಈ ಶಾಂತವಾಗಿ ಕಾಣುವ ಕೆರೆಯೊಳಗೆ ಒಂದೇ ಒಂದು ಚಿಕ್ಕ ಕಲ್ಲು ಬಿದ್ದರೂ ದೊಡ್ಡ ಕೋಲಾಹಲವನ್ನುಂಟುಮಾಡುತ್ತದೆ. ’ಅ’ ಯಾಕೆ ’ಬ’ ಜತೆ ಮಾತನಾಡಿದರು? ’ಸ’ ಕ್ಯಾಂಟೀನ್‌ನಿಂದ ಯಾವ ವಸ್ತುವನ್ನು ’ದ’ ಗೆ ಕೊಟ್ಟರು? ’ಯ’ ಯಾಕೆ ’ರ’ ಅವರ ಬಟ್ಟೆಗಳನ್ನು ಧರಿಸಿದ್ದಾರೆ!! ಕೆಲಕಾಲ ಜೈಲಿನ ತುಂಬೆಲ್ಲ ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ. ನಂತರ, ದಿನಗಳು ಸಾಗಿದಂತೆ ಆ ಒತ್ತಡ ಹಗುರವಾಗತೊಡಗುತ್ತದೆ. ಜನರು ಮತ್ತೆ ಪರಸ್ಪರ ಮಾತನಾಡುವುದು, ನಗು–ಚೇಷ್ಟೇ ಮಾಡುವುದು ಮತ್ತು ನಿಯಮಗಳನ್ನು ಚಾಲಾಕಿನಿಂದ ಉಲ್ಲಂಘಿಸುವ ಮಾನವೀಯ ಪ್ರವೃತ್ತಿಯತ್ತ ಸಹಜವಾಗಿ ಹಿಂದಿರುಗುತ್ತಾರೆ.

ಯರ್‌‌ವಾಡಾದಲ್ಲಿ ಕೆಲವು ವಾರಗಳಾದ ಮೇಲೆ, ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮನಬಂದಂತೆ ಮಾಡುತ್ತಿರುವ ದೊಡ್ಡ ವಿಷಯವೆಂದರೆ—ಮ್ಯಾಡಮ್‌, ಗಾರ್ಡ್‌ ಅಥವಾ ವಾರ್ಡರ್‌ ಬದಲಾಗುವಂತೆ ನಿಯಮಗಳೂ ಬದಲಾಗುತ್ತವೆ.

‘ಗೇಟ್‌ಗೆ ಹೋಗುವಾಗ ದುಪಟ್ಟಾ ಹಾಕ್ಕೊಳ್ಳು.’

‘ನಿನ್ನ ಚಪ್ಪಲಿ ಅಲ್ಲಿ ಇಡು.’

‘ಗೊರಕೆ ಹೊಡೀಬೇಡ ’ (ನನ್ನ ಅನುಭವಕ್ಕೆ ಇದು ಪಾಲಿಸುವುದು ತುಂಬಾ ಕಷ್ಟ)

‘ವಾರ್ಡನ್‌ ತಾಯಿ ಓದಿ ಮುಗಿಸುವವರೆಗೂ ಬೈರಕ್‍ಗೆ ಬಂದಿರುವ ಪತ್ರಿಕೆಯನ್ನು ಓದಲು ಆಗಲ್ಲ.’

‘ನಿನ್ನ ಬ್ಯಾರಕ್‌ನ ತೋಟದ ದಾರಿಯನ್ನು ದಾಟ್ಬೇಡ.’

‘ಅಲ್ಲಿ ಯಾರು ಕುಳಿತು ಪಟ್ಟಾಂಗ ಹೊಡಿತಿರೋದು?’

‘ಓಹ್‌, ಈ ಮೆಟ್ಟಿಲುಗಳು (ವೇದಿಕೆಗೇರಲು) ನೀವು ಹೆಂಗಸರು ಬಿಸಿಲು ಕಾಸಿಕೊಳ್ಳಲಿಕ್ಕೆನಾ ಇರೋದು? ಕೆಳಗಿಳೀರಿ ತಕ್ಷಣ!’

‘ಅವಳ ಜೊತೆಗೆ ಮಾತಾಡ್ಬೇಡ.’

‘ನಿನ್ನ ಬಟ್ಟೆಗಳನ್ನು ಅಲ್ಲಿ ಒಣಗಿಸ್ಬೇಡ.’

ಆದರೆ ಕೆಲವು ಸಮಯಗಳಲ್ಲಿ, ಹೆಂಗಸರು ಬ್ಯಾರಕ್‌ ಹೊರಗೆ ಕೂಡಿ ಗಲಗಲ ಮಾತಾಡುತ್ತಾ–ಒಂದೆರಡು ಬಾರಿ ಜೋರಾಗಿ ಜಗಳವಾಡುತ್ತಾ–ನಗುತ್ತಾ, ಲಾಕ್‌ಅಪ್‌ ಸಮಯವಾಗಿದ್ದರೂ ಒಳಗೆ ಹೋಗುವುದನ್ನು ವಿಳಂಬ ಮಾಡ್ತಿರುವಾಗ, ಅವರನ್ನು ಒಳಕ್ಕೆ ನೂಕುವ ಯತ್ನದಲ್ಲಿರುವ ಸಿಬ್ಬಂದಿಯ ಧ್ವನಿಯಲ್ಲಿನ ಆತಂಕ, ಗಾಬರಿ ಮತ್ತು ಚಿಂತೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವರ ಆದೇಶಗಳು ಕ್ಷಣಕ್ಷಣಕ್ಕೂ ಗಟ್ಟಿಯಾಗುತ್ತವೆ.

‘ಏ! ನೀನು! ಶಾಂತವಾಗಿ ಒಳಗೆ ಹೋಗು!’

‘ಸಾಲಿನಲ್ಲಿ ನಿಲ್ಲು!’

‘ಸುಮ್ಮನಿರು… ಶಾಂತವಾಗಿರಿ!’

ಕೊನೆಗೆ ಹೇಳುವುದೆಂದರೆ, ನಿಯಮಗಳ ಬೇಡಿಕೆ ಎಂಬುದು ಭಯದಿಂದ ಹುಟ್ಟಿದ್ದು, ಅಪರಿಚಿತ ಸಮೂಹಶಕ್ತಿಯ ಸಾಧ್ಯತೆ ಕುರಿತ ಭಯ.

‘ಇಲ್ಲಿ ಜಗಳ ಬದುಕೋ ಒಂದು ವಿಧಾನ’

ಶೋಮಾ ದೀ ಹೇಳುವಂತೆ, ‘ಇಲ್ಲಿ ಜಗಳವೆಂದರೆ ಬದುಕೋ ವಿಧಾನ’. ಹಾಗಾದರೆ ಬೇರೆ ಏನು ನಿರೀಕ್ಷಿಸಬಹುದು?

ಒಂದೇ ಬ್ಯಾರಕ್‌ನಲ್ಲಿ ಐವತ್ತು–ಅರವತ್ತು ಹೆಂಗಸರು ತುಂಬಿಕೊಂಡಿರುವಾಗ, ಅವರಲ್ಲಿ ಹಲವರು ಕಠಿಣ ಸ್ವಭಾವದವರು, ಕೆಲವರು ಕಟುವಾಗಿ ಮಾತಾಡುವವರು, ಕೆಲವರು ಕುಂಠಿತರು, ಕೆಲವರು ಸದಾ ಅತ್ತು–ದುಃಖಪಡುತ್ತಿದ್ದವರು…

ಎಲ್ಲರೂ ಕಲ್ಲಿನ ನೆಲದ ಮೇಲೆ ಹತ್ತಿರ–ಹತ್ತಿರ ಹಾಸಿದ ಪಟ್ಟಿಗಳಲ್ಲಿ ಮಲಗುತ್ತಾ, ಒಬ್ಬರ ನಿದ್ರೆಯನ್ನು ಮತ್ತೊಬ್ಬರ ಗೊರಕೆ, ಮಕ್ಕಳ ಅಳುವಿಕೆ, ದುಸ್ವಪ್ನಗಳು, ಶೌಚಾಲಯಕ್ಕೆ ಹೋಗಲು ಎದ್ದು ಹೋಗುವವರು ಬರುವವರು… ಇವೆಲ್ಲ ಅಡ್ಡಿಪಡಿಸುತ್ತಿರುವಾಗ…

ಯಾರೋ ಮತ್ಯಾರಿಗೋ ಚಪ್ಪಲಿ, ಬಿಸ್ಕೆಟ್‌, ‘ಒಳ್ಳೆಯ ಹಸಿರು ಸೀರೆ’, ‘ಒಳ್ಳೇ ಪಾತ್ರೆ’ ಕಳ್ಳತನ ಮಾಡಿದೀಯೆಂದು ಆರೋಪಿಸುತ್ತಿರುತ್ತಾರೆ.

ಯಾರು ಇಂದು ಕಸ ಗುಡಿಸುವುದು, ನೆಲವರೆಸುವುದು, ಭತ್ಯೆ ತರುವುದು, ಕಸದ ಡಬ್ಬಿ ಖಾಲಿ ಮಾಡುವುದು. ಇವೆಲ್ಲದರ ಬಗ್ಗೆ ಜಗಳವು ನಿತ್ಯ.

ಪ್ರತಿ ವ್ಯಕ್ತಿಯೂ–ತಮ್ಮ ಪ್ರದೇಶ, ಭಾಷೆ, ಸಮುದಾಯ ಅಥವಾ ತಮ್ಮ ಮೇಲೆ ಇರುವ ಪ್ರಕರಣದ ಆಧಾರದ ಮೇಲೆ (ಉದಾಹರಣೆಗೆ NDPS ಗುಂಪು ನಾರ್ಕೋಟಿಕ್‌ ಡ್ರಗ್ಸ್‌ ಮತ್ತು ಸೈಕೋಟ್ರೋಪಿಕ್‌ ಪದಾರ್ಥಗಳ ಕಾಯ್ದೆಯಡಿ ಆರೋಪಿತರಾದವರು) ಗುಂಪುಗಳನ್ನು ಕಟ್ಟಿಕೊಳ್ಳುತ್ತಾರೆ. ಯಾಕೆಂದರೆ ತಮ್ಮ ಆಕ್ರೋಶವನ್ನು ಹೊರಹಾಕಲು, ಇತರರನ್ನು ಬೈದು, ಪರಸ್ಪರ ವಿರೋಧಗಳನ್ನು ಕಟ್ಟಿಕೊಳ್ತಾರೆ. ಹೀಗಾಗಿ, ಜಗಳಗಳು ಇಲ್ಲಿನ ದೈನಂದಿನ ಜೀವನದ ಅವಿಭಾಜ್ಯ ಭಾಗ. ಸಾಮಾನ್ಯವಾಗಿ ಈ ಜಗಳಗಳಲ್ಲಿ ಕಿರುಚಾಟ, ಬೈಗುಳ ಎಲ್ಲವೂ ಇರುತ್ತದೆ. ಸಿಪಾಯಿ ಮಧ್ಯೆ ಬಂದು ಅವರನ್ನು ಬಿಡಿಸುತ್ತಾರೆ, ನಂತರ ಎಲ್ಲರೂ ತಮ್ಮ–ತಮ್ಮ ಶಿಬಿರಗಳಿಗೆ ಹಿಂತಿರುగి ‘ಪೋಸ್ಟ್‌ಮಾರ್ಟಂ’ ಮತ್ತು ಮುಂದಿನ ಯುದ್ಧದ ಯೋಜನೆ ಶುರುಮಾಡುತ್ತಾರೆ.

ಒಂದು ಸಲ ರಾತ್ರಿಯ ಮಧ್ಯದಲ್ಲಿ, ವಿಚಾರಣೆಯಲ್ಲಿರುವ ಕೈದಿಗಳ ಬ್ಯಾರಕ್‌ನಲ್ಲಿ ಹಠಾತ್‌ ಗದ್ದಲ ಎದ್ದಿತು. ಕಿರುಚಾಟ, ತಳ್ಳಾಟ, ಹೊಡೆದಾಟ. ಅದರ ಪ್ರತಿಧ್ವನಿ ನಮ್ಮ ಕೊಠಡಿಗಳವರೆಗೂ ಹರಡಿತು. ನಾವು ಕಬ್ಬಿಣದ ಕಿಟಕಿಗಳ ಬಳಿಯಲ್ಲಿ ನಿಂತು, ಸಿಪಾಯಿಗಳು ಓಡಾಡುತ್ತಾ ಗೊಂದಲವನ್ನು ನಿಯಂತ್ರಿಸಲು ಯತ್ನಿಸುವುದನ್ನು ನೋಡುತ್ತಿದ್ದೇವೆ. ಹಿರಿಯ ಜೈಲರ್ ಮ್ಯಾಡಮ್‌ಗೆ, ವೈದ್ಯರಿಗೆ ತಕ್ಷಣ ಕರೆ ಹೋಗುತ್ತದೆ. ಜಗಳ ಶುರು ಮಾಡಿದವರನ್ನು ಎಳೆಯುತ್ತಾ ಗೇಟ್ ಬಳಿ ಇರುವ ಕಚೇರಿಗೆ ಕರೆದುಕೊಂಡು ಬರಲಾಗುತ್ತದೆ. ಅವರು ಬಂದರೂ ಅವರ ಚರ್ಚೆಯ ಬಿಸಿ ಇಳಿಯುವುದೇ ಇಲ್ಲ. ಅದೃಷ್ಟವಶಾತ್‌ ಯಾರಿಗೂ ದೊಡ್ಡ ಗಾಯವಾಗುವುದಿಲ್ಲ. ಡಿಸ್ಪೆನ್ಸರಿಯಲ್ಲಿ ಪರೀಕ್ಷೆ ಆಗಿ, ವೈದ್ಯರು ಹಿಂತಿರುಗುತ್ತಾರೆ. ಆ ಬ್ಯಾರಕ್‌ನ ಜನರ ಮೇಲೆ ಸಾಮೂಹಿಕ ಗದರಿಕೆ ಬೀಳುತ್ತದೆ. ಅದರ ಮೇಲ್ವಿಚಾರಣೆಯಲ್ಲಿದ್ದ ಸಿಪಾಯಿಗಳಿಗೆ “ಇನ್ನೂ ಹೆಚ್ಚು ಎಚ್ಚರಿಕೆಯಿಂದಿರಿ” ಎಂಬ ಕಠಿಣ ಆದೇಶ.

ಜೈಲು ಮತ್ತೆ ಮೌನಕ್ಕೆ ಜಾರುತ್ತದೆ. ಆದರೆ ಇದರ ಮುಂದಿನ ಕತೆ ಮರುದಿನ ಶುರುವಾಗುತ್ತದೆ. ಸಂಜೆ 5 ಗಂಟೆಗೆ, ಬೀಗ ಹಾಕುವ ಸಮಯದ ಮುಂಚೇ, ಒಂದು ಆಘಾತಕಾರಿ ಘೋಷಣೆ. ಸುಮಾರು ಐವತ್ತು ಹೆಂಗಸರುಳ್ಳ ಬ್ಯಾರಕ್‌ 4 ಹಾಗೂ ಬ್ಯಾರಕ್‌ 2 ಪರಸ್ಪರ ಜಾಗ ಬದಲಿಸಬೇಕೆಂದು ಆದೇಶ.

ಹೆಂಗಸರು ತಮ್ಮ ಹಾಸಿಗೆ, ಆಲ್ಯುಮಿನಿಯಂ ಪಾತ್ರೆ, ನೀರಿನ ಬಾಟಲಿ, ಎಲ್ಲ ತರಹದ ಆಕಾರ ಪ್ರಕಾರದ ತಮ್ಮ ಬಟ್ಟೆಗಳ ಗಂಟುಗದಡಿ ಹಾಗೂ ಒಲ್ಲದ ಮಕ್ಕಳನ್ನು ಎಳೆಯುತ್ತಾ, ಎರಡೂ ದಿಕ್ಕುಗಳಿಂದ ಮುರಿದ, ಸೊಟ್ಟಪಟ್ಟ ಸಾಲುಗಳಲ್ಲಿ ಹೊಸ ಬ್ಯಾರಕ್‌ ಕಡೆ  ಸಾಗುತ್ತಾರೆ. ಈ ಶಿಕ್ಷೆ ಯಾವಾಗಲೂ ಎಚ್ಚರಿಕೆ ಇಲ್ಲದೆ, ಹಠಾತ್ತಾಗಿ ಜಾರಿಗೊಳ್ಳುತ್ತದೆ. ಕೈದಿಗಳಿಗೆ ಒಳಗೊಳಗೆ ಕೋಪ ವ್ಯಕ್ತಪಡಿಸುವುದನ್ನು, ಶಪಿಸುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ. ಅರ್ಧ ಗಂಟೆಯಲ್ಲಿ ಈ ಅದಲು ಬದಲಿನ ಕಾರ್ಯಕ್ರಮ ಮುಗಿಯುತ್ತದೆ. ಪ್ರಶ್ನೆಗೆ ಜಾಗವಿಲ್ಲ.

ಇದು ಜೈಲು.

ಮತ್ತೆ ಹೊಸ ಬ್ಯಾರಕ್‌, ಹೊಸ ಅಸಹನೆಗಳು, ಹೊಸ ನೆರೆಹೊರೆಯವರು, ಹೊಸ ಜಗಳಗಳು, ಹೊಸ ಒತ್ತಡಗಳು… ಹೊಸ ಯೋಜನೆಗಳು, ಜೀವನ ಮತ್ತೆ ಮೊದಲಿಂದ ಶುರು. “ಹೇಗೂ ನಾಳೆ ಮತ್ತೊಂದು ಹೊಸ ದಿನ ಬರುತ್ತದೆ.” (ಸ್ಕಾರ್ಲೆಟ್ ಓ’ಹಾರಾ ಹೇಳಿದ ಮಾತಿಗೆ ನನ್ನ ಗೌರವ ಸಮೇತ)

(ಕೃಪೆ : The Wire)  
https://thewirehindi.com/315794/book-excerpt-from-phansi-yard-by-sudha-bharadwaj/

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...