ದೇಶದ ಯಾವುದೇ ಭಾಗಕ್ಕೆ ಹೋದರೂ ರೈತರ ಪಾಡು ಒಂದೇ ತರನದ್ದು. ಬೆಳೆ ಬಂದರೆ ಬೆಲೆ ಇರದು, ಬೆಳೆಗೆ ಮಾರುಕಟ್ಟೆ ಸಿಗದು. ಜಮ್ಮು ಕಾಶ್ಮೀರದಂತಹ ಅಧಿಕ ಪ್ರಕೃತಿ ವಿಕೋಪಗಳನ್ನು ಎದುರಿಸುವ ಪ್ರದೇಶದಿಂದ ಬೇರೆಡೆಗೆ ಸರಕು ಸಾಗಿಸಲು ಸರಿಯಾದ ವ್ಯವಸ್ಥೆಯೂ ಇಲ್ಲ. ಹವಾಮಾನ ಕೈಕೊಟ್ಟಾಗ ಕೈ ಹಿಡಿಯಬೇಕಾದ ಸರ್ಕಾರ ಸಹಾಯಹಸ್ತ ಚಾಚುತ್ತಿಲ್ಲ.
ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ, ಅಲ್ಲಲ್ಲಿ ಮೇಘಸ್ಫೋಟವಾಗುತ್ತಿದ್ದು ಸಾಕಷ್ಟು ಹಾನಿ ಉಂಟಾಗಿದೆ. ಅದರಲ್ಲೂ ಜಮ್ಮು ಪ್ರವಾಹದಿಂದಾಗಿ ಹಲವು ರಾಷ್ಟ್ರೀಯ ಹೆದ್ದಾರಿಗಳೇ ಮುಚ್ಚಿಹೋಗಿವೆ. ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಭೀಕರ ಮಳೆ, ಪ್ರವಾಹಕ್ಕೆ 50ಕ್ಕೂ ಅಧಿಕ ಮಂದಿ ಬಲಿಯಾಗಿದ್ದು ಆಸ್ತಿ ಪಾಸ್ತಿಗಳಿಗೆ ಸಾಕಷ್ಟು ಹಾನಿಯುಂಟಾಗಿದೆ. ಇವೆಲ್ಲವುದರ ನಡುವೆ ಕೋಟ್ಯಂತರ ರೂಪಾಯಿ ನಷ್ಟದಲ್ಲಿರುವ ಹಣ್ಣು ಬೆಳೆಗಾರರ, ವ್ಯಾಪಾರಿಗಳ ಕಣ್ಣೀರು ಒರೆಸುವವರಾರು? ಅವರ ನಷ್ಟ ತುಂಬಿಸುವವರಾರು?
ತೀವ್ರ ಮಳೆಯ ಕಾರಣದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್-44) ಬಹುತೇಕ ಹಾನಿಯಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ರಸ್ತೆಯುದ್ದಕ್ಕೂ ಹಣ್ಣಿನಿಂದ ತುಂಬಿದ ಸ್ಥಳೀಯ ವಾಹನಗಳು, ಟ್ರಕ್‌ಗಳು ಸಾಲುಗಟ್ಟಿ ನಿಂತಿವೆ. ಈಗಾಗಲೇ ಕೋಟ್ಯಂತರ ರೂಪಾಯಿ ನಷ್ಟ ಕಂಡಿರುವ ರೈತರಿಗೆ ಇನ್ನಷ್ಟು ಹಾನಿ ತಪ್ಪಿಸುವ ನಿಟ್ಟಿನಲ್ಲಿ ಹಣ್ಣುಗಳನ್ನು ದೆಹಲಿಗೆ ಸಾಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು, ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ರೈಲು ಮಾರ್ಗವೂ ಪ್ರವಾಹ, ಭೂಕುಸಿತದಿಂದ ಸಿಲುಕಿವೆ, ಹಲವು ರೈಲುಗಳು ರದ್ದಾಗಿವೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಭಾರೀ ಮಳೆಯಿಂದಾಗಿ ಪ್ರವಾಹ; ಮೂವರ ಸಾವು
ಕಳೆದ ವಾರದಲ್ಲಿ ಜಮ್ಮು ಪ್ರವಾಹ ಸ್ಥಿತಿಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಎನ್‌ಎಚ್-44ರ ರಿಪೇರಿ ಕಾರ್ಯ ಪೂರ್ಣವಾಗಲು ಇನ್ನೂ ಮೂರು ವಾರಗಳು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಈಗಾಗಲೇ ಕೊಯ್ಲಾಗಿ ದೆಹಲಿಗೆ ಸಾಗಿಸಲು ಟ್ರಕ್ ಏರಿರುವ ಹಣ್ಣುಗಳು ಕೊಳೆತು ಹೋಗುತ್ತಿದೆ, ಇದರಿಂದಾಗಿ ರೈತರಿಗೆ ಭಾರೀ ನಷ್ಟವಾಗುತ್ತಿದೆ ಎಂದು ಕಾಶ್ಮೀರ ಹಣ್ಣುಗಳ ಬೆಳೆಗಾರರು ಮತ್ತು ಮಾರಾಟಗಾರರ ಸಂಘಟನೆಯ ಅಧ್ಯಕ್ಷ ಅಹ್ಮದ್ ಬಶೀರ್ ಹೇಳಿದ್ದಾರೆ.
ಹಣ್ಣುಗಳ ಸೀಸನ್‌ನಲ್ಲಿ ರೈತರು ಕಂಗಾಲು
ಭಾರತದಲ್ಲಿ ಹಣ್ಣು ಉತ್ಪಾದಿಸುವ ಪ್ರದೇಶಗಳಲ್ಲಿ ಜಮ್ಮು ಕೂಡಾ ಒಂದು. ಸಮಶೀತೋಷ್ಣ ಮತ್ತು ಉಪೋಷ್ಣವಲಯದ ಹಣ್ಣುಗಳನ್ನು ಒಳಗೊಂಡಿರುವ ವೈವಿಧ್ಯಮಯ ತೋಟಗಾರಿಕೆಗೆ ಜಮ್ಮು ಹೆಸರುವಾಸಿ. ಸೇಬು, ಮರಸೇಬು, ಚೆರಿ, ಲಿಚಿ, ಮಾವು, ಡ್ರ್ಯಾಗನ್ ಹಣ್ಣು, ಬಾದಾಮಿ, ಅಂಜೂರ ಮೊದಲಾದವುಗಳನ್ನು ಜಮ್ಮುವಿನಲ್ಲಿ ಬೆಳೆಯಲಾಗುತ್ತದೆ. ಈ ಪೈಕಿ ಬಹುತೇಕ ಹಣ್ಣುಗಳ ಕಟಾವಿನ ಸೀಸನ್ ಇದಾಗಿದೆ. ಭಾರೀ ಮಳೆ, ಪ್ರವಾಹದ ನಡುವೆ ನಷ್ಟವಾದರೂ ಹೇಗೋ ಕೊಯ್ಲಾಗಿ ಟ್ರಕ್ ಸೇರಿದ ಹಣ್ಣುಗಳು ಇದೀಗ ಗಮ್ಯ ತಲುಪಲಾಗದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಾಕಿಯಾಗಿವೆ. ಅದೆಷ್ಟೋ ಟ್ರಕ್‌ಗಳು ಮತ್ತೆ ಗೋದಾಮಿನತ್ತ ಮುಖ ಮಾಡಿದೆ. ಕೊಳೆತ ಹಣ್ಣುಗಳನ್ನು ಗೊಬ್ಬರಕ್ಕೆ ಚೆಲ್ಲಲಾಗುತ್ತಿದೆ.
#WATCH || Trucks loaded with apples and pears bound for the fruit mandi in Shopian remain stranded due to the closure of the Jammu–Srinagar National Highway.
— KNS (@KNSKashmir) September 4, 2025
The disruption has caused losses worth crores of rupees to fruit growers and traders in the region, according to… pic.twitter.com/AahpHAD7T3
ಕಾಶ್ಮೀರದಲ್ಲಿ ತೋಟಗಾರರಿಗೆ ಸೆಪ್ಟೆಂಬರ್ ಅಧಿಕವಾಗಿ ಸುಗ್ಗಿಯ ಕಾಲ. ಕಣಿವೆ ಪ್ರದೇಶದ ಹಣ್ಣು ಬೆಳೆಗಾರರು ಮತ್ತು ವ್ಯಾಪಾರಿಗಳ ಅತಿದೊಡ್ಡ ಸಂಘಟನೆಯಾದ ಕಾಶ್ಮೀರ ಕಣಿವೆ ಹಣ್ಣು ಬೆಳೆಗಾರರ ಒಕ್ಕೂಟ (ಕೆವಿಎಫ್‌ಜಿಡಿಯು) ಅಂದಾಜಿನ ಪ್ರಕಾರ, ಹೈಬ್ರಿಡ್ ಪ್ರಭೇದದ ಸೇಬು ಮತ್ತು ಸ್ಥಳೀಯ ಮರಸೇಬುಗಳನ್ನು ಹೊತ್ತ ಸುಮಾರು 400 ಟ್ರಕ್‌ಗಳು ಪ್ರತಿದಿನ ಪಿರ್ ಪಂಜಾಲ್ ಪರ್ವತಗಳಲ್ಲಿರುವ ಖಾಜಿಗುಂಡ್ ಸುರಂಗವನ್ನು ಜಮ್ಮು ಮೂಲಕ ದಾಟಿ ಸಾಗುತ್ತದೆ. ಆದರೆ ಇದೀಗ ಪ್ರವಾಹ, ಭೂಕುಸಿತದಿಂದಾಗಿ ಹಣ್ಣುಗಳ ಸಾಗಣೆಗೆ ಅಡೆತಡೆ ಉಂಟಾಗಿದೆ. ಈಗಾಗಲೇ ದೇಶದ ಇತರೆ ಭಾಗಗಳಿಗೆ ತಲುಪಬೇಕಾದ ಮರಸೇಬು(Pear) ಕೊಳೆತು ಹೋಗುವ ಸ್ಥಿತಿಗೆ ತಲುಪುತ್ತಿದೆ ಎನ್ನುತ್ತಾರೆ ಕೆವಿಎಫ್‌ಜಿಡಿಯು ಅಧ್ಯಕ್ಷ ಬಶೀರ್ ಅಹ್ಮದ್ ಬಶೀರ್.
“ಟ್ರಕ್‌ಗಳು ಹಲವು ದಿನಗಳವರೆಗೆ (ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ) ಸಿಲುಕಿಕೊಂಡಿರುವುದರಿಂದ ಕೊಳೆಯುತ್ತಿರುವ ಮರಸೇಬುಗಳು ಈಗ ಮಾರುಕಟ್ಟೆಗಳಿಗೆ ತಲುಪುತ್ತಿವೆ. ಅನೇಕ ರೈತರು ಮಾರುಕಟ್ಟೆ ತಲುಪುವ ಮುನ್ನವೇ ಟ್ರಕ್‌ನಲ್ಲಿರುವ ತಮ್ಮ ಕೊಳೆಯುತ್ತಿರುವ ಹಣ್ಣುಗಳನ್ನು ಎಸೆಯಬೇಕಾದ ಸ್ಥಿತಿ ಎದುರಾಗಿದೆ. ಹವಾಮಾನವು ಸಾವಿರಾರು ರೈತರ ಜೀವನೋಪಾಯವನ್ನು ಅಪಾಯದಲ್ಲಿ ಸಿಲುಕಿಸಿದೆ” ಎಂದು ಅಹ್ಮದ್ ಬಶೀರ್ ಹೇಳಿದ್ದಾರೆ.
Closure of Srinagar-Jammu Highway Hits Apple Trade; MP @MianAltafAhmad shab Larvi Urges Use of Mughal@JKNC_ #jammukashmir pic.twitter.com/59OfHo5OMl
— Nc kalakote Sunderbani (@NCkalakote) September 3, 2025
“ಟ್ರಕ್‌ಗಳ ಸುಗಮ ಸಂಚಾರಕ್ಕೆ ಅವಕಾಶ ಸಿಗದಿದ್ದರೆ ನಮ್ಮ ರೈತರಿಗೆ 200 ಕೋಟಿ ರೂಪಾಯಿ ನಷ್ಟವಾಗಲಿದೆ. ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ ಉಂಟಾಗಿ ಒಂದು ವಾರ ಕಳೆದಿದೆ. ಇದು ಕೇವಲ ಒಂದು ಮಾರುಕಟ್ಟೆಯ ಪರಿಸ್ಥಿತಿ. ಒಟ್ಟಾರೆ ನಷ್ಟ ನೂರಾರು ಕೋಟಿ ರೂಪಾಯಿಗಳಾಗಬಹುದು” ಎಂದು ಎನ್ನುತ್ತಾರೆ ಏಷ್ಯಾದ ಎರಡನೇ ಅತಿದೊಡ್ಡ ಹಣ್ಣಿನ ಮಾರುಕಟ್ಟೆಯಾದ ಸೋಪೋರ್ ಫ್ರೂಟ್ ಮಂಡಿಯ ಅಧ್ಯಕ್ಷ ಫಯಾಜ್ ಅಹ್ಮದ್ ಮಲಿಕ್.
ಹಾಗೆಯೇ ಟ್ರಕ್‌ಗಳು ಕಾಶ್ಮೀರದಿಂದ ನಿರ್ಗಮಿಸಲು ಮೊಘಲ್ ರಸ್ತೆಯನ್ನು ಬಳಸಲು ಸರ್ಕಾರ ಅವಕಾಶ ನೀಡಬೇಕು ಎಂಬ ಆಗ್ರಹವೂ ಇದೆ. ಮೊಘಲ್ ರಸ್ತೆ ಪರ್ಯಾಯ ಆದರೆ ಕಿರಿದಾದ ರಸ್ತೆಯಾಗಿದ್ದು, ಇದು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯನ್ನು ಜಮ್ಮು ವಿಭಾಗದ ಪೂಂಚ್ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ. ಈ ಮಾರ್ಗವೊಂದೇ ಸದ್ಯ ರೈತರನ್ನು ಉಳಿಸಬಲ್ಲದು. ಹಾಗಾಗಿ ಇಲ್ಲಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬುದು ಸ್ಥಳೀಯರ ಆಗ್ರಹ.
Jammu-Srinagar Highway Shut for Fifth Day Amid Rains and Landslides
— Kashmir Life (@KashmirLife) September 4, 2025
Heavy rains have triggered landslides and flash floods along NH-44, keeping the Jammu–Srinagar National Highway closed for the fifth consecutive day. Over 2,000 vehicles remain stranded as essential supplies run… pic.twitter.com/5NBtrqDraX
ದೇಶದ ಯಾವುದೇ ಭಾಗಕ್ಕೆ ಹೋದರೂ ರೈತರ ಪಾಡು ಒಂದೇ ತರನದ್ದು. ಬೆಳೆ ಬಂದರೆ ಬೆಲೆ ಇರದು, ಬೆಳೆಗೆ ಮಾರುಕಟ್ಟೆ ಇಲ್ಲ. ಜಮ್ಮು ಕಾಶ್ಮೀರದಂತಹ ಅಧಿಕ ಪ್ರಕೃತಿ ವಿಕೋಪಗಳನ್ನು ಎದುರಿಸುವ ಪ್ರದೇಶದಿಂದ ಬೇರೆಡೆಗೆ ಸರಕು ಸಾಗಿಸಲು ಸರಿಯಾದ ವ್ಯವಸ್ಥೆಯೂ ಇಲ್ಲ. ಹವಾಮಾನ ಕೈಕೊಟ್ಟಾಗ ಕೈ ಹಿಡಿಯಬೇಕಾದ ಸರ್ಕಾರ ಸಹಾಯಹಸ್ತ ಚಾಚುತ್ತಿಲ್ಲ. ತಾವು ಕಷ್ಟಪಟ್ಟು ಬೆಳೆಸಿದ ಬೆಳೆ ಮಾರುಕಟ್ಟೆ ಸೇರಿ ಅಲ್ಲಿಂದ ಗ್ರಾಹಕರ ಕೈ ಸೇರುವ ಖುಷಿ ಕಾಣಬೇಕಾದ ರೈತರು ತಮ್ಮ ಬೆಳೆ ಕೊಳೆಯುವುದನ್ನು ಕಂಡು ನೋವುನ್ನುತ್ತಿದ್ದಾರೆ. ಈ ರೈತರ ಕಣ್ಣೀರು ಒರೆಸುವವರಾರು?
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಸದ್ಯ ರೈತರತ್ತ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡೂ ಗಮನ ಹರಿಸಬೇಕಾದ ಅಗತ್ಯವಿದೆ. ರೈತರ ನಷ್ಟಕ್ಕೆ ಪರಿಹಾರ, ಸದ್ಯ ಕಟಾವಿಗೆ ಸಿದ್ಧವಾಗಿರುವ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲು ಸರಿಯಾದ ವ್ಯವಸ್ಥೆಯನ್ನು ಮಾಡುವುದು ಸರ್ಕಾರದ ಜವಾಬ್ದಾರಿಯೂ ಹೌದು. ಇದು ರೈತರ ಬದುಕಿನ ಮಾತ್ರವಲ್ಲ ಹಣ್ಣು ವ್ಯಾಪಾರ ಮಾರುಕಟ್ಟೆಯ ಸರಳ ವಹಿವಾಟಿನ ಪ್ರಶ್ನೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




