ಸ್ವಾತಂತ್ರ್ಯ ಬಂದ ಮೇಲೆ ರೂಪುಗೊಂಡ ಸಮಾನತಾ ಆಶಯ ಇವತ್ತು ಸನಾತನದ ಹೆಸರಲ್ಲಿ ಅದೇ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕರಾಳ ಅಧ್ಯಾಯವನ್ನು ತೆರೆಯುತ್ತಿದೆ. ಹಾಗಾಗಿ ಗೋಡ್ಸೆ ಗುಂಡು ಹಾರಿಸಿದ್ದು ಗಾಂಧಿ ಎದೆಯ ಮೇಲಷ್ಟೇ ಅಲ್ಲ, ಅದು ಭಾರತದ ಸಮಾನತಾ ತತ್ವಕ್ಕೆ, ಸಹಬಾಳ್ವೆಗೆ, ಹಂಚಿ ತಿನ್ನುವ ತತ್ವಕ್ಕೆ ಗುಂಡು ಹಾರಿಸಿದಾಗಿತ್ತು.
ಸಮಾಜವಾದಿ ನಾಯಕ ಲೋಹಿಯಾ ಸರ್ಕಾರಿ ಗಾಂಧೀವಾದ, ಆಶ್ರಮ ಗಾಂಧೀವಾದ ಹಾಗೂ ಬಂಡಾಯ ಗಾಂಧೀವಾದದಲ್ಲಿ ಬಂಡಾಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿದ್ದರು. ಈಗಿನ ಕೇಂದ್ರ ಬಿಜೆಪಿ ಸರ್ಕಾರ ಗಾಂಧಿ ಹೆಸರಿಂದ ಹಿಡಿದು ಆಶ್ರಮದವರೆಗೆ ಅವರ ಹೆಸರನ್ನು ಹಾಳು ಮಾಡಲು ಜನರ ಮನಸ್ಸಿನಿಂದ ಕಿತ್ತಾಕಲು ಸಾಕಷ್ಟು ಶ್ರಮಿಸುತ್ತಿದೆ. ಇದು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ನಾಥೂರಾಮ್ ಗೋಡ್ಸೆ ಹೆಸರು ಬರುವಂತೆ ಜಿ ರಾಮ್ ಎಂದು ಮಾಡಿದೆ.
ಮಹಾತ್ಮ ಗಾಂಧಿಯವರನ್ನು ಕೊಂದ ಸಿದ್ದಾಂತದ ಭಾಗವಾಗಿ ಇರುವ ರಾಜಕೀಯ ಪಕ್ಷ ಕೇಂದ್ರದ ಅಧಿಕಾರದಲ್ಲಿದೆ. ಇವತ್ತು ಗ್ರಾಮ ಭಾರತದಲ್ಲಿ ಕಾಣುವ ದಾರಿದ್ರ್ಯ, ಸಾಲಸೋಲದ ಬದುಕು, ವ್ಯವಸಾಯದಿಂದ ನಿತ್ರಾಣಗೊಂಡ ಪರಿಸ್ಥಿತಿ ನಿಜಕ್ಕೂ ಸುಧಾರಿಸುವ ನಿಟ್ಟಿನಲ್ಲಿ ಸಣ್ಣ ಹೆಜ್ಜೆಯಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಜಾರಿ ಮಾಡಿತ್ತು ಮನಮೋಹನ್ ಸಿಂಗ್ ಸರ್ಕಾರ. ಆದರೆ ಇವತ್ತಿನ ಗೋಡ್ಸೆ ವಿಚಾರಗಳ ಸರ್ಕಾರ ಸಂಪೂರ್ಣವಾಗಿ ಗ್ರಾಮಭಾರತವನ್ನು ನಿರ್ಮೂಲನೆ ಮಾಡಲು ಹೊರಟಿದೆ. ಆಧುನಿಕತೆ ತಂದೊಡ್ಡುವ ಅಪಾಯಗಳ ಬಗ್ಗೆ ಗಾಂಧೀಜಿ ತಮ್ಮ ಹಿಂದ್ ಸ್ವರಾಜ್‌ನಲ್ಲಿ ಕೂಲಂಕಷವಾಗಿ ಚರ್ಚಿಸಿದ್ದರು. ಹಾಗಾಗಿ ಸ್ವತಂತ್ರ ಭಾರತ ಬ್ರಿಟಿಷ್ ಆಳ್ವಿಕೆಯ ನಕಲು ಆಗದೆ ದೇಸಿ ಮೌಲ್ಯಗಳನ್ನು, ಸೌಹಾರ್ದತೆಯನ್ನು, ಭಾತೃತ್ವವನ್ನು, ಸ್ವಾವಲಂಬಿ ಬದುಕನ್ನು ಬದುಕುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಸ್ವತಂತ್ರನಾಗಬೇಕೆಂದು ಗಾಂಧಿ ಬಯಕೆಯಾಗಿತ್ತು.
ಹಾಗಂತ ಗಾಂಧಿ ಯಂತ್ರ ವಿರೋಧಿ ಏನಾಗಿರಲಿಲ್ಲ. ಮನುಷ್ಯರ ಕೌಶಲ್ಯವನ್ನು, ದುಡಿಮೆಯನ್ನು ಕಸಿಯುವ ಯಂತ್ರಗಳು ಬೇಡ ಎಂದಷ್ಟೆ ಅವರ ಪ್ರತಿಪಾದನೆಯಾಗಿತ್ತು. ಇವತ್ತು ಜಗತ್ತಿನ ವಿಜ್ಞಾನಿಗಳು, ಉದ್ಯಮಿಗಳು ಕೃತಕ ಬುದ್ದಿಮತ್ತೆ(ಎಐ) ಇಡೀ ಜಗತ್ತಿನ ಉದ್ಯೋಗ ಕಸಿದು ಜಗತ್ತನ್ನೇ ಸರ್ವನಾಶದ ಎಡೆಗೆ ಒಯ್ಯುತ್ತಿದೆ ಎಂದು ಹೇಳುತ್ತಿದೆ. ಇನ್ನು ಆಧುನಿಕ ಆಲೋಚನೆಗಳು ಭೂಮಿಯನ್ನು ಬರಿದು ಮಾಡುವುದಷ್ಟೆ ಅಲ್ಲ. ಬೇರೆ ರಾಷ್ಟ್ರಗಳ ಭೂಮಿ ಸಂಪತ್ತನ್ನು ತನ್ನದಾಗಿ ಮಾಡಿಕೊಳ್ಳಲು ಅಮೆರಿಕದಂತಹ ರಾಷ್ಟ್ರಗಳು ವೆನೆಜುವೆಲಾದಂತಹ ಸ್ವತಂತ್ರ ರಾಷ್ಟ್ರದ ಮೇಲೆ ಗೂಂಡಾ ರೀತಿ ಮುಗಿಬಿದ್ದು ಅಲ್ಲಿನ ಅಧ್ಯಕ್ಷನನ್ನು ವಶಕ್ಕೆ ಪಡೆಯುತ್ತದೆ. ಈ ಸಂಪತ್ತಿನ ಲೂಟಿ ಜಗತ್ತಿನ ಮೂರನೇ ಮಹಾಯುದ್ದಕ್ಕೆ ಪ್ರೇರೇಪಿಸುತ್ತಿದೆ. ಇಂತಹ ದಿನಗಳು ಬರುತ್ತದೆಂದು ಗಾಂಧೀ ಆಧುನಿಕ ಲೋಲುಪತೆಯಲ್ಲಿ ಕಳೆದು ನಾಶವಾಗಿದ್ದ ಗ್ರೀಕ್ ಮುಂತಾದ ರಾಷ್ಟ್ರಗಳ ಉದಾಹರಣೆ ಕೊಟ್ಟು ಹೇಳಿದ್ದರು. ಆದರೆ ಈ ಗಾಂಧೀ ಆಲೋಚನೆಗೆ ಪ್ರತಿಸ್ಪರ್ಧೆಯನ್ನು ಒಡ್ಡುವ ಹಾಗೆ ವರ್ತಿಸುತ್ತಿರುವ ಸಾವರ್ಕರ್, ಗೋಡ್ಸೆ ಪ್ರಣೀತ ಕೇಂದ್ರ ಸರ್ಕಾರವಾದರೂ ಮಾಡುತ್ತಿರುವುದೇನು? ಎಲ್ಲಾ ಸರ್ಕಾರಿ ಆಸ್ತಿಗಳನ್ನು ಖಾಸಗಿ ಬಂಡವಾಳಶಾಹಿಗೆ ಮಾರಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಬಿಟ್ಟಿರುವುದು.
ಇಂದಿರಾಗಾಂಧಿಯಂತವರು ಗಾಂಧಿಯಿಂದ, ಜಯಪ್ರಕಾಶ್ ನಾರಾಯಣರಿಂದ ಪ್ರೇರಿತರಾಗಿ ರೂಪಿಸಿದ ಗರೀಬ್ ಹಠಾವೋ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಉಳುವವನೆ ಭೂಮಿಯ ಒಡೆಯ ಮುಂತಾದ ಸಮಾಜವಾದಿ ಆಲೋಚನೆಗಳು ಇಂದು ಯೋಚಿಸಲು ಸಾಧ್ಯವಿಲ್ಲವೆಂಬಂತೆ ಸಂಪತ್ತು ಕೇವಲ ಒಂದು ಪ್ರತಿಶತ ಬಹುಕೋಟಿಯುಳ್ಳ ಜನರಲ್ಲಿ ಜಮೆಯಾಗುತ್ತಿದೆ. ಸ್ವಾತಂತ್ರ್ಯ ಬಂದ ಮೇಲೆ ರೂಪುಗೊಂಡ ಸಮಾನತಾ ಆಶಯ ಇವತ್ತು ಸನಾತನದ ಹೆಸರಲ್ಲಿ ಅದೇ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕರಾಳ ಅಧ್ಯಾಯವನ್ನು ತೆರೆಯುತ್ತಿದೆ. ಹಾಗಾಗಿ ಗೋಡ್ಸೆ ಗುಂಡು ಹಾರಿಸಿದ್ದು ಗಾಂಧಿ ಎದೆಯ ಮೇಲಷ್ಟೆ ಅಲ್ಲ ಅದು ಭಾರತದ ಸಮಾನತಾ ತತ್ವಕ್ಕೆ, ಸಹಬಾಳ್ವೆಗೆ, ಹಂಚಿ ತಿನ್ನುವ ತತ್ವಕ್ಕೆ ಗುಂಡು ಹಾರಿಸಿದಾಗಿತ್ತು.
ಗಾಂಧೀಜಿ ದೇಶ ವಿಭಜನೆ ತಡೆಯಲು ಜಿನ್ನಾನನ್ನೇ ಪ್ರಧಾನಿ ಮಾಡಿ ಎಂದು ಹಠ ಹಿಡಿದವರು. ಅದಾಗಿ ಕೆಲವೇ ತಿಂಗಳಲ್ಲಿ ಭಾರತ, ಪಾಕಿಸ್ತಾನ ವಿಭಜನೆಯಾಗಿ ಅನಾರೋಗ್ಯದಿಂದ ಜಿನ್ನಾ ಕೂಡ ನಿಧನರಾಗುತ್ತಾರೆ. ಆದರೆ ಸಾವರ್ಕರ್ ಮುಂತಾದವರು ದ್ವಿರಾಷ್ಟ್ರ ಕಲ್ಪನೆಯ ಮೂಲಕ ದೇಶ ವಿಭಜನೆಯಲ್ಲಿ ಆಸಕ್ತಿ ಹೊಂದಿದ್ದನ್ನು ಮುಚ್ಚಿ ಹಾಕಿ ಗೋಡ್ಸೆ ಅನುಯಾಯಿಗಳು ವಿಭಜನೆಗೆ ಗಾಂಧಿಯೇ ಕಾರಣ ಎಂಬಂತೆ ಸುಳ್ಳು ಹಬ್ಬಿಸುತ್ತಾರೆ. ಒಂದು ಹಂತದಲ್ಲಿ ಗಾಂಧಿಯನ್ನು ಕಾಂಗ್ರೆಸ್ ಕಡೆಗಣಿಸಲು ಶುರು ಮಾಡಿದಾಗಲೆಲ್ಲ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಕಮಲಾದೇವಿ ಚಟ್ಟೋಪಧ್ಯಾಯ ಮುಂತಾದ ಸಮಾಜವಾದಿಗಳು ಕಾಂಗ್ರೆಸ್ ನೀತಿಗಳನ್ನು ಗಾಂಧಿ ಆಲೋಚನೆಗೆ ಒಗ್ಗಿಸಲು ಪ್ರತಿಭಟನೆಗೆ ಇಳಿಯುತ್ತಾರೆ. ಹಾಗಾಗಿ ಗಾಂಧೀಜಿ ಆಲೋಚನೆ ಎಂಬುದು ಕಾಂಗ್ರೆಸ್ ಸರ್ಕಾರವನ್ನು ಮೀರಿದ ಗ್ರಾಮಭಾರತದಲ್ಲಿದೆ. ಸಮಾನತೆಯನ್ನು ಬಯಸುವ ಮನಸ್ಥಿತಿಯಲ್ಲಿದೆ. ಗ್ರಾಮಭಾರತ ನಿಜಕ್ಕೂ ಭಾರತವನ್ನು ಕಾಪಾಡುವ ಮೂಲ ಬೀಜವಾಗಿದೆ. ಇಂದು ಅದರ ಕೃಷಿ ಪ್ರಧಾನ ಚಟುವಟಿಕೆಗಳು, ಪ್ರಕೃತಿ ಸಂಪದ್ಬರಿತ ನೆಲ, ಕೆರೆ ಕಟ್ಟೆಗಳು ಆಧುನಿಕ ಭಾರತದಿಂದ ಬಸವಳಿದ ದೊಡ್ಡ ದೊಡ್ಡ ಪಟ್ಟಣಗಳನ್ನು ಪೊರೆಯುವಂತಿದೆ. ಹಾಗಾಗಿ ಗ್ರಾಮ ಭಾರತದವನ್ನು ಆರ್ಥಿಕ ಸ್ವಾವಲಂಬಿ ಮಾಡಲು, ಸಾವಯವ ಕೃಷಿಗೆ ಹಿಂತಿರುಗಿಸಿ, ಅಲ್ಲಿನ ಕೆರೆ ಕಟ್ಟೆಗಳನ್ನು ಉಳಿಸಿ, ಗುಡಿ ಕೈಗಾರಿಕೆಯಂಥವನ್ನು ಉತ್ತೇಜಿಸಿದರೆ ಗಾಂಧೀಜಿ ಗ್ರಾಮ ಭಾರತ ಪ್ರಪಂಚಕ್ಕೆ ಪರ್ಯಾಯ ಸಾಧ್ಯತೆಯನ್ನು ಬೋಧಿಸುವಷ್ಟು ತನ್ನ ಕಸುವನ್ನು ಇನ್ನು ಅದು ತನ್ನ ಬೇರುಗಳಲ್ಲಿ ಹಿಡಿದಿಟ್ಟುಕೊಂಡಿದೆ.
ನಿಮಗೆ ತತ್ವಪದಕಾರರಾಗಲಿ, ಜನಪದರಾಗಲಿ, ಮಂಟೇಸ್ವಾಮಿ, ಮಹದೇಶ್ವರ ಕಾವ್ಯ ಹೇಳುವವರು, ಪುರಾತನ ಕಾವ್ಯಗಳನ್ನು ಗಮಕದಲ್ಲಿ ಹೇಳುವವರು ಇವತ್ತು ಹಳ್ಳಿಗಳಲ್ಲಿ ಸಿಗುತ್ತಾರೆ. ಇದು ಇಡೀ ಭಾರತದ ಗ್ರಾಮಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿದೆ. ಇಂಥ ಸ್ವರ್ಗವನ್ನು ಗ್ರಾಮದಲ್ಲಿ ಕಾಣುವ ಮೂಲಕ ಹೊಸ ಭಾರತವನ್ನು ನಿರ್ಮಾಣ ಮಾಡಬೇಕು. ಅಧಿಕಾರ ವಿಕೇಂದ್ರೀಕರಣದ ಮೂಲಕ ಗ್ರಾಮವೇ ಅಧಿಕಾರದ ಹೆಚ್ಚಿನ ಪಾಲು ಪಡೆಯಬೇಕೆಂದು ಗ್ರಾಮ ಸ್ವರಾಜ್ಯದಂತಹ ಆಲೋಚನೆಯನ್ನು ಗಾಂಧೀಜಿ ರೂಪಿಸಿದ್ದರು. ಅಲ್ಲದೆ ಸ್ಥಳೀಯ ಭಾಷೆ, ಸಂಸ್ಕೃತಿ, ಜೀವನ ವಿಧಾನಕ್ಕೆ ಒತ್ತುಕೊಟ್ಟಿದ್ದರು. ಈಗ ಭಾರತ ಇಂಥ ಗ್ರಾಮಗಳನ್ನು ಖಾಸಗಿಯವರಿಗೆ ಮಾರಿ ಅವರ ಜೀತ ಮಾಡಿಕೊಂಡಿರಲು ಅಲ್ಲಿನ ಸ್ಥಳೀಯ ಜನರಿಗೆ ಪ್ರೇರೇಪಿಸುತ್ತಿದೆ. ಹಾಗಾಗಿ ಅರಾವಳಿಯಂತಹ ಸಂಪದ್ಭರಿತ ಸಸ್ಯಸಮೂಹ, ಬೆಟ್ಟಗಳನ್ನೆಲ್ಲ ಖಾಸಗಿಯವರ ಧನದಾಹಕ್ಕೆ ಮೀಸಲಿಡುತ್ತಿದೆ. ಹಾಗಾದರೆ ದೇಶವನ್ನು ಮಾರಿ ಖಾಸಗಿಯವರಿಗೆ ಒಪ್ಪಿಸುವುದೇ ಗೋಡ್ಸೆ ಸಿದ್ದಾಂತವೇ. ಗಾಂಧಿ ಆಲೋಚನೆಯ ಗ್ರಾಮಭಾರತವನ್ನು ನಿರ್ನಾಮ ಮಾಡುವುದೇ ಗೋಡ್ಸೆ ಸಿದ್ದಾಂತಿಗಳ ಹುನ್ನಾರವೇ. ಗೋಡ್ಸೆಯಂತಹ ಚಿತ್ಪಾವನ ಬ್ರಾಹ್ಮಣರ ಜಾತಿ ಶ್ರೇಷ್ಠತೆ ಕೇವಲ ಗಾಂಧಿಯನ್ನಷ್ಟೇ ಕೊಲ್ಲಲಿಲ್ಲ. ಇಡೀ ಗ್ರಾಮಭಾರತದ ಸಹಬಾಳ್ವೆಯ ಆಲೋಚನೆಯನ್ನೆ ಕೊಂದು ಹಾಕಲು ಪ್ರಯತ್ನಿಸಿತು. ಆದರೆ ಭಾರತದಲ್ಲಿ ಇನ್ನು ಸ್ವಾತಂತ್ರ್ಯ ಚಳವಳಿಯ ಆಶಯಗಳು ಜೀವಂತವಾಗಿವೆ. ಹಾಗಾಗಿ ರೈತರು ವರ್ಷಗಟ್ಟಲೆ ದೆಹಲಿಯಲ್ಲಿ ಜೀವವನ್ನೇ ಲೆಕ್ಕಿಸದೆ ಪ್ರತಿಭಟಿಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಬಲಿದಾನವನ್ನು ಕೊಟ್ಟ ಹಲವಾರು ಹಿಂದೂಗಳ ಜೊತೆ ಮುಸಲ್ಮಾನರು ಇದ್ದರು. ದೇಶಕ್ಕಾಗಿ ಪ್ರಾಣಕೊಟ್ಟ ಮುಸ್ಲಿಂ ಸಮುದಾಯವನ್ನು ಸಿ.ಎ.ಎ, ಎನ್.ಆರ್.ಸಿ ಮೂಲಕ ನಾಗರಿಕ ಹಕ್ಕನ್ನು ಪ್ರಶ್ನಿಸಿ ದೇಶದಿಂದ ಓಡಿಸುವ ಅಥವಾ ಹಿಟ್ಲರ್ ಗ್ಯಾಸ್ ಚೇಂಬರ್‌ನಲ್ಲಿ ಇಟ್ಟಂತೆ ಅವರ ಬದುಕನ್ನು ನರಕ ಸದೃಶ್ಯ ಮಾಡುವ ಹುನ್ನಾರವನ್ನು ಜಾತಿ, ಧರ್ಮವನ್ನು ಲೆಕ್ಕಿಸದೆ ಇಡೀ ದೇಶವೇ ಪ್ರತಿಭಟಿಸಿ ಆ ಕಾಯ್ದೆಯನ್ನು ವಾಪಸ್ಸು ಪಡೆಯುವಂತೆ ಮಾಡಿತ್ತು.
ದೆಹಲಿಯ ಸತ್ಯಾಗ್ರಾಹಕ್ಕೆ ಗಾಂಧಿಯೇ ಪ್ರೇರಣೆ, ಈಗಾಗಲೇ ಐದು ವರ್ಷದಿಂದ ಜೈಲಿನಲ್ಲಿರುವ ಸಿ.ಎ.ಎ ವಿರುದ್ದ ಹೋರಾಟಕ್ಕಿಳಿದ ಉಮ್ಮರ್ ಖಾಲಿದ್ ಕೂಡ ಗಾಂಧೀಜಿಯ ಅಹಿಂಸೆಯ ಬಗ್ಗೆಯೇ ಮಾತಾಡಿದ್ದರು. ಪರಿಸರ ತಜ್ಞ ಹಾಗೂ ಲಡಾಕ್ ನ ರಾಜ್ಯದ ಮಾನ್ಯತೆಗಾಗಿ ಹೋರಾಡಿ ಈಗ ಜೈಲು ಪಾಲಾಗಿರುವ ಸೋನಮ್ ವಾಂಗ್ಚುಕ್ ಅಂಥವರಿಗೂ ಗಾಂಧೀಜಿಯೇ ಪ್ರೇರಣೆ ಹೀಗೆ ಮೇಧಾ ಪಾಟ್ಕರ್ ನಿಂದ ಹಿಡಿದು ಹಲವರು ಗಾಂಧಿ ನಡೆನುಡಿಯನ್ನು ಸರ್ಕಾರಗಳಿಗೆ ಮನವರಿಕೆ ಮಾಡುತ್ತಿದ್ದಾರೆ. ಕರ್ನಾಟಕದ ರಾಜ್ಯ ರೈತಸಂಘ ಗಾಂಧಿ ವಿಚಾರಗಳ ಬಂಡಾಯ ಗಾಂಧಿವಾದವನ್ನು ಅಳವಡಿಸಿಕೊಂಡಿತ್ತು. ದಲಿತ ಸಂಘರ್ಷ ಸಮಿತಿಯಲ್ಲಿದ್ದ ದೇವನೂರು ಮಹದೇವ, ಸಿದ್ದಯ್ಯ, ಗೋವಿಂದಯ್ಯ ಮುಂತಾದ ನಾಯಕರು ಗಾಂಧಿ-ಅಂಬೇಡ್ಕರ್ ಬೆಸೆಯುವ ನಿಟ್ಟಿನಲ್ಲಿ ಆಲೋಚಿಸಿದ್ದರು. ಇಡೀ ಕರ್ನಾಟಕದ ಸಮಾಜವಾದಿ ಆಂದೋಲನವೇ ಗಾಂಧಿ, ಲೋಹಿಯಾ ಪ್ರೇರಣೆಯಿಂದ ಮುಂದುವರೆದಿತ್ತು. ಇಂಥ ಆಲೋಚನೆಗಳೇ ಗೋಡ್ಸೆ ಪಕ್ಷವನ್ನು ಕರ್ನಾಟಕದಲ್ಲಿ ಬರದಂತೆ ತಡೆದಿದೆ. ಹಾಗಾಗಿ ಗಾಂಧಿಯಂತೆಯೇ ಕೊಲ್ಲಲ್ಪಟ್ಟ ಗೌರಿ, ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ಆಗಲಿ ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರರಾಗಲಿ ಇಂಥ ಆಲೋಚನೆಗಳಿಗೆ ತಮ್ಮ ಪ್ರಾಣವನ್ನೆ, ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಹಾಗಾಗಿ ಗೋಡ್ಸೆ, ಸಾವರ್ಕರ್ ಹೆಸರಲ್ಲಿ ಕೇಂದ್ರ ಸರ್ಕಾರ ಜನರ ಜೀವನದ ಮೇಲೆ, ಬದುಕಿನ ಮೇಲೆ, ಸಹಬಾಳ್ವೆಯ ಮೇಲೆ ಎಷ್ಟೇ ದಾಳಿ ಮಾಡಿದರೂ ಗಾಂಧಿ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತಾರೆ.
ಇದನ್ನೂ ಓದಿ ಪ್ಯಾಲೆಸ್ತೀನ್ ಸಿನಿಮಾಗಳನ್ನು ಪ್ರದರ್ಶನ ಮಾಡುವ ನಿಲುವು ತೆಗೆದುಕೊಳ್ಳಿ- ಸಿಎಂ ಗೆ ಪ್ರಕಾಶ್ ರೈ ಒತ್ತಾಯ
ಹಾಗಾಗಿಯೇ ಸ್ವಾತಂತ್ರ್ಯ ಚಳವಳಿಯ ಆಶಯಗಳು ಅಂಬೇಡ್ಕರ್ ಸಂವಿಧಾನದ ಮೂಲಕ ದೇಶಕ್ಕೆ ಅರ್ಪಣೆಯಾಗಿ ಜಾತ್ಯತೀತ, ಸಮಾಜವಾದಿ ತತ್ವಗಳ ಆಧಾರದಲ್ಲಿ ಸಂವಿಧಾನವನ್ನು ಕಟ್ಟಿಕೊಂಡಿದ್ದೇವೆ. ಇಂತಹ ಗಾಂಧಿ ಭಾರತವನ್ನು ಮರೆತು ಗೋಡ್ಸೆ ಸಿದ್ದಾಂತಕ್ಕೆ ಮಣಿದರೆ ಗ್ರಾಮ ಭಾರತ ನಾಶವಾಗಿ, ಅಲ್ಲಿನ ವೈವಿಧ್ಯತೆ ನಾಶವಾಗಿ ಕೇವಲ ಧೂಳು, ನದಿಗಳ ಕಲುಷಿತ ವಾತಾವರಣ, ಉಸಿರಾಡಲು ಸಾಧ್ಯವಾಗದ ಗಾಳಿಯಲ್ಲಿ ನಮ್ಮ ಪ್ರಾಣವನ್ನೆ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಗೋಡ್ಸೆ ಕೊಂದ ಈ ದಿನವನ್ನು ಗಾಂಧಿಯವರ ನಡೆಯ ಒಂದು ಭಾಗವನ್ನಾದರೂ ನಾವು ನಡೆಯಲು ಪ್ರಯತ್ನಿಸಿದರೂ ನಿಜಕ್ಕೂ ಸ್ವಚ್ಛ ಗಾಳಿಯ, ಸ್ವಚ್ಛ ನೀರಿನ, ಸ್ವಚ್ಛ ಮನಸ್ಸಿನ ಭಾರತ ನಮ್ಮದಾಗಲಿದೆ.





