ನೂರಾರು ಪ್ರಕರಣಗಳ ನಡುವೆ ಗೌರಿ ಪ್ರಕರಣವನ್ನೂ ವಿಚಾರಣೆ ನಡೆಸುವ ಬದಲಾಗಿ, ಈ ಪ್ರಕರಣದ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಧೀಶರನ್ನು ನಿಯೋಜಿಸಬಹುದಿತ್ತು. ಆದರೆ, ಆಗಲಿಲ್ಲ...
ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಇಂದಿಗೆ (ಸೆ.5) ಎಂಟು ವರ್ಷಗಳು ಕಳೆದಿವೆ. ಗೌರಿಯ ದಿಟ್ಟತೆ ಇಂದಿಗೂ ಹೋರಾಟಗಾರು ಮತ್ತು ಯುವ ಪತ್ರಕರ್ತರನ್ನು ಪ್ರಭಾವಿಸುತ್ತಿವೆ. ಸ್ಪೂರ್ತಿ ನೀಡುತ್ತಿವೆ. ಆದರೆ, ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಮತ್ತು ನ್ಯಾಯಾಂಗದ ನಿಷ್ಕ್ರಿಯತೆ, ವೈಫಲ್ಯಗಳು ಗೌರಿ ಹತ್ಯೆ ಪ್ರಕರಣದ ತನಿಖೆ/ವಿಚಾರಣೆಯ ಅತೀ ವಿಳಂಬಕ್ಕೆ ಕಾರಣವಾಗಿವೆ.
ಸೆಪ್ಟೆಂಬರ್ 3ರಂದು ಬೆಂಗಳೂರಿನಲ್ಲಿ ‘ದಿ ನ್ಯೂಸ್ ಮಿನಿಟ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ಶಿವಸುಂದರ್ ಮತ್ತು ಪತ್ರಕರ್ತ, ಲೇಖಕ ರೊಲ್ಲೊ ರೋಮಿಗ್ ಅವರು ಗೌರಿ ಪ್ರಕರಣದ ವಿಚಾರಣೆಯ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದ್ದಾರೆ. ಕಳೆದ 8 ವರ್ಷಗಳಲ್ಲಿ ಆಡಳಿತ ನಡೆಸಿರುವ ಸರ್ಕಾರಗಳ ನಿಷ್ಕ್ರಿಯತೆಯು ವಿಚಾರಣೆಯ ವಿಳಂಬ ಮತ್ತು ಹೊಣೆಗಾರಿಕೆ ತಪ್ಪಿಸಿಕೊಳ್ಳುವಲ್ಲಿ ಹೇಗೆಲ್ಲ ಕಾರ್ಯನಿರ್ವಹಿಸಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.
”ವಿಚಾರಣೆಯನ್ನು ವಿಳಂಬ ಮಾಡಲು ಮತ್ತು ದಾರಿ ತಪ್ಪಿಸಲು ಹಲವಾರು ವಿಭಿನ್ನ ಪಟ್ಟಭದ್ರ ಶಕ್ತಿಗಳು ಕೆಲಸ ಮಾಡುತ್ತಿವೆ. ಅವುಗಳ ಅನುಸರಿಸುತ್ತಿರುವ ಮಾರ್ಗವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಎಂಬಂತೆ ಕಾಣುತ್ತದೆ. ಸರ್ಕಾರವು ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದೆ. ಆದರೆ, ಅವರು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಬದಲಾಗಿ, ವಿಚಾರಣೆಯು ವಿಳಂಬವಾಗುತ್ತಿದೆ. ಈ ವಿಳಂಬವು ಸರಿಯಲ್ಲ ಎಂಬ ಸೂಕ್ಷ್ಮತೆ ಇರಬೇಕು” ಎಂದು ರೋಮಿಗ್ ಹೇಳಿದ್ದಾರೆ.
ಗೌರಿ ಪ್ರಕರಣದಲ್ಲಿ 2021ರ ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಅದಾದ, ಎಂಟು ತಿಂಗಳ ನಂತರ, (2022ರ ಜುಲೈ 4) ವಿಚಾರಣೆ ಆರಂಭವಾಯಿತು. ಬಿ.ಕೆ. ಸಿಂಗ್ ನೇತೃತ್ವದ ಎಸ್‌ಐಟಿ ಗೌರಿ ಹತ್ಯೆಗೈದವರು ಮಾತ್ರವಲ್ಲದೆ, ಪ್ರಕರಣದಲ್ಲಿ ಸಂಘಟಿತ ಅಪರಾಧ ಸಿಂಡಿಕೇಟ್‌ನಂತೆ ಕಾರ್ಯನಿರ್ವಹಿಸಿದ್ದ 18 ಶಂಕಿತರ ವಿರುದ್ಧ ಆರೋಪ ಹೊರಿಸಿತ್ತು. ಅವರಲ್ಲಿ ಹದಿನೇಳು ಜನರನ್ನು ಬಂಧಿಸಲಾಯಿತು. ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಈವರೆಗೆ ಪತ್ತೆಯಾಗಿಲ್ಲ.
ಆರೋಪಿಗಳಲ್ಲಿ ಒಬ್ಬರಾದ ಮೋಹನ್ ನಾಯಕ್ ಅವರು ಕರ್ನಾಟಕ ಹೈಕೋರ್ಟ್ ಮುಂದೆ ‘ಸಂಘಟಿತ ಅಪರಾಧದ ಆರೋಪ’ಕ್ಕೂ ತನಗೂ ಸಂಬಂಧವಿಲ್ಲ. ಈ ಆರೋಪದಲ್ಲಿ ನನ್ನ ಪಾತ್ರವೇ ಇಲ್ಲವೆಂದು ವಾದಿಸಿದರು. ತನ್ನ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ದಾಖಲಾಗಿಲ್ಲ ಎಂಬುದನ್ನು ತನ್ನ ವಾದದಲ್ಲಿ ಮಂಡಿಸಿದರು. ಆತನ ವಾದ ಆಲಿಸಿದ ಹೈಕೋರ್ಟ್, ಆತನ ಪರವಾಗಿ ಆದೇಶ ನೀಡಿತು.
“ಹೈಕೋರ್ಟ್‌ನ ಆ ತೀರ್ಪು ಹೆಚ್ಚಿನ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶ ನೀಡಬಹುದು. ಜಾಮೀನು ನೀಡುವುದು ಪ್ರಕರಣದ ವಿಚಾರಣೆಯನ್ನು ತೀವ್ರವಾಗಿ ಸಂಕೀರ್ಣಗೊಳಿಸುತ್ತದೆ. ಶಂಕಿತರನ್ನು ಒಂದೇ ವಿಚಾರಣೆಯ ಬದಲು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಇದು ಬಹುತೇಕ ಸಂಪೂರ್ಣ ಪ್ರಕರಣವು ವಿಳಂಬವಾಗಲು ಮತ್ತು ಪ್ರಕರಣದ ತನಿಖೆಯಲ್ಲಿನ ಹಿಡಿತ ಕುಸಿಯಲು ಕಾರಣವಾಗುತ್ತದೆ” ಎಂದು ರೋಮಿಂಗ್ ಅವರು 2022ರಲ್ಲಿ ಬರೆದಿದ್ದರು.
ಆ ಸಮಯದಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಬಿಜೆಪಿ ಸರ್ಕಾರವು ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು 90 ದಿನಗಳ ಕಾಲಾವಕಾಶ ಹೊಂದಿತ್ತು. ಆದರೆ, ಸರ್ಕಾರ ಮೇಲ್ಮನವಿ ಸಲ್ಲಿಸಲಿಲ್ಲ. ಬಳಿಕ, ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಿತು. ಪ್ರಕರಣವನ್ನು ಮುಂದುವರೆಸಲು ಸೂಚಿಸಿತು. ಆ ಸಂದರ್ಭದಲ್ಲಿ, ‘ಆರೋಪಪಟ್ಟಿಯನ್ನು ರದ್ದುಗೊಳಿಸುವಲ್ಲಿ ಹೈಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದು ಸ್ಪಷ್ಟವಾಗಿದೆ’ ಎಂದು ರೋಮಿಂಗ್ ಹೇಳುತ್ತಾರೆ.
ಆದಾಗ್ಯೂ, ಪ್ರಕರಣದಲ್ಲಿ ಬಂಧಿಸಲಾಗಿದ್ದ 17 ಮಂದಿಗೂ 2023ರ ಡಿಸೆಂಬರ್ ಮತ್ತು 2025ರ ಜನವರಿ ನಡುವೆ ಜಾಮೀನು ದೊರೆತಿದೆ. 18ನೇ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಪ್ರಮುಖ ಆರೋಪಿಗಳಾದ ಪರಶುರಾಮ್ ವಾಗ್ಮೋರೆ ಮತ್ತು ಮತ್ತೊಬ್ಬ ಆರೋಪಿ ಮನೋಹರ್ ಯಾದವ್‌ನನ್ನು 2024ರ ಅಕ್ಟೋಬರ್‌ನಲ್ಲಿ ಸಂಘ ಪರಿವಾರ ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರು ವಿಜಯಪುರದಲ್ಲಿ ಸನ್ಮಾನಿಸಿದರು. ಆಪಾದಿತ ಹಂತಕರನ್ನು ವಿಜೃಂಭಿಸಿದರು.
‘ದಿ ನ್ಯೂಸ್ ಮಿನಿಟ್’ ಚರ್ಚೆಯಲ್ಲಿ ರೋಮಿಂಗ್ ಅವರು, “ಪ್ರಕರಣದ ವಿಚಾರಣೆಯನ್ನು ನಿಧಾನಗೊಳಿಸುವ ಒಂದು ಅಧಿಕಾರಶಾಹಿ ಮಾರ್ಗವಾಗಿದೆ. ಅವರು ಬಹಿರಂಗವಾಗಿ ಹೊರಬಂದು ವಿಚಾರಣೆಯನ್ನು ಸ್ಥಗಿತಗೊಳಿಸಬೇಕಾಗಿಲ್ಲ. ಕೆಲವು ದಾಖಲೆಗಳನ್ನು ಸಲ್ಲಿಸಲು ವಿಳಂಬ ಮಾಡುವುದು ಅಥವಾ ಮರೆಮಾಚುವ ಕೆಲಸ ಮಾಡುತ್ತಾರೆ. ಇಂತಹ ವಿಳಂಬವನ್ನು ವಿವರಿಸಲು ಕಷ್ಟ. ಆದರೆ, ಇದೇ ವಿಳಂಬದ ಫಲಿತಾಂಶವು ವಿಚಾರಣೆ ತೆವಳುವಿಕೆಯಲ್ಲಿ ಕಾಣಿಸುತ್ತದೆ. ಅತಿಯಾದ ವಿಳಂಬವು ನ್ಯಾಯ ದೊರೆಯದೇ ಇರುವುದಕ್ಕೂ ಕಾರಣವಾಗಿಬಿಡುತ್ತದೆ” ಎಂದಿದ್ದಾರೆ.
ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ, 2021ರ ಡಿಸೆಂಬರ್ 6ರಂದು ವಿಚಾರಣೆ ಪ್ರಾರಂಭವಾಗಬೇಕಿತ್ತು. ಆದರೆ, ಅದನ್ನು ಮುಂದೂಡಲಾಯಿತು. ಅಂತಿಮವಾಗಿ, ಆರು ತಿಂಗಳ ನಂತರ, ಜುಲೈ 4, 2022 ರಂದು ವಿಚಾರಣೆ ಪ್ರಾರಂಭವಾಯಿತು ಈ ಆರು ತಿಂಗಳ ವಿಳಂಬಕ್ಕೆ ಹೊಣೆ ಯಾರು? ಆ ಹೊಣೆಯನ್ನು ಸರ್ಕಾರ/ನ್ಯಾಯಾಂಗ ಯಾರೂ ಹೊರುವುದಿಲ್ಲ.
ಸರ್ಕಾರದ ನಿರ್ಲಕ್ಷ್ಯ ಮಾತ್ರವಲ್ಲ, ನ್ಯಾಯಾಂಗದ ಅಸಹಕಾರವೂ ವಿಚಾರಣೆಯ ವಿಳಂಬಕ್ಕೆ ಕಾರಣ ಎನ್ನುತ್ತಾರೆ ಶಿವಸುಂದರ್, ”ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2018 ಮತ್ತು 2022ರ ನಡುವೆ ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬಗೊಳಿಸಿತ್ತು. ಆದರೆ, ವಿಚಾರಣೆ ಪ್ರಾರಂಭವಾದ ನಂತರ, ತನಿಖೆ/ವಿಚಾರಣೆಯ ಸಂಪೂರ್ಣ ಜವಾಬ್ದಾರಿ ನ್ಯಾಯಾಂಗದ ಮೇಲಿರುತ್ತದೆ. ಆದರೆ, ನ್ಯಾಯಾಂಗದ ಅಧಿಕಾರಿಗಳು ವಿಚಾರಣೆಗೆ ಪ್ರತಿ ತಿಂಗಳು ಮೂರರಿಂದ ಐದು ದಿನಗಳವರೆಗೆ ಮಾತ್ರ ಮೀಸಲಿಡುತ್ತಿದ್ದರು. ನೂರಾರು ಪ್ರಕರಣಗಳ ನಡುವೆ ಗೌರಿ ಪ್ರಕರಣವನ್ನೂ ವಿಚಾರಣೆ ನಡೆಸುವ ಬದಲಾಗಿ, ಈ ಪ್ರಕರಣದ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಧೀಶರನ್ನು ನಿಯೋಜಿಸಬಹುದಿತ್ತು. ಆದರೆ, ಅದು ಆ ಸಂದರ್ಭದಲ್ಲಿ ಆಗಲೇ ಇಲ್ಲ” ಎಂದು ಶಿವಸುಂದರ್ ವಿವರಿಸಿದ್ದಾರೆ.
”ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ (ಪ್ರತ್ಯೇಕ ನ್ಯಾಯಾಧೀಶರು) ರಚಿಸಬೇಕೆಂಬ ಬೇಡಿಕೆಯೊಂದಿಗೆ ಕವಿತಾ ಲಂಕೇಶ್ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದರು. ಅವರ ಅರ್ಜಿಯನ್ನು ಸರ್ಕಾರದ ‘ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ’ಯು ನ್ಯಾಯಾಂಗಕ್ಕೆ ರವಾನಿಸಿತು. ಆದರೆ, ‘ತ್ವರಿತ ವಿಚಾರಣೆ ನಡೆಸಲು ಮತ್ತು ವಿಶೇಷ ನ್ಯಾಯಾಲಯವನ್ನು ರಚಿಸಲು ಸಾಧ್ಯವಿಲ್ಲ’ ಎಂದು ನ್ಯಾಯಾಂಗ ಹೇಳಿತು. ಇದು ನ್ಯಾಯಾಂಗದ ಅಸಹಕಾರ” ಎಂದು ತಿಳಿಸಿದ್ದಾರೆ.
”ಈ ನ್ಯಾಯಾಂಗದ ಅಸಹಕಾರ ಏಕೆ? ಉಮರ್ ಖಾಲಿದ್ ಪ್ರಕರಣದಲ್ಲಿ ನ್ಯಾಯಾಲಯಗಳ ತೀರ್ಪುಗಳನ್ನು ನೋಡಿದಾಗ, ಇಂತಹ ಅಸಹಕಾರಕ್ಕೆ ರಾಜಕೀಯ ಮತ್ತು ಸೈದ್ಧಾಂತಿಕ ಕಾರಣಗಳಿವೆ ಎಂಬುದು ಗೊತ್ತಾಗುತ್ತದೆ” ಎಂದು ಶಿವಸುಂದರ್ ಹೇಳಿದ್ದಾರೆ.
ಪ್ರಕರಣದ ಪ್ರಸ್ತುತ ಸ್ಥಿತಿ
ಪ್ರಕರಣವು 18 ಆರೋಪಿಗಳು ಗೌರಿಯನ್ನು ಕೊಲೆ ಮಾಡಿದ್ದಾರೆ ಎಂದು ಮಾತ್ರವಲ್ಲದೆ, ಆರೋಪಿಗಳು ‘ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ’ಯಡಿ ವಿವರಿಸುವಂತೆ ಸಂಘಟಿತ ಅಪರಾಧ ಸಿಂಡಿಕೇಟ್‌ನ ಭಾಗವಾಗಿದ್ದರು ಎಂಬುದನ್ನು ಪ್ರಾಸಿಕ್ಯೂಷನ್ ಮಂಡಿಸಿದೆ. ಅದನ್ನು ಸಾಬೀತು ಮಾಡುತ್ತಿದೆ.
ಆರೋಪಪಟ್ಟಿಯ ಪ್ರಕಾರ, 18 ಆರೋಪಿಗಳು 2016ರ ಜೂನ್‌ನಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಕೊಲೆಗೆ ಯೋಜನೆ ರೂಪಿಸಿದ್ದರು. ಅವರಲ್ಲಿ ಕೆಲವರು ಬೆಳಗಾವಿಯ ಮನೆಯೊಂದರಲ್ಲಿ ಸಭೆ ಸೇರಿ ಸಂಚು ರೂಪಿಸಲು ಯೋಜನೆ ರೂಪಿಸಿದ್ದರು.
ಇದರ ನಂತರವೇ ಅವರು ಯೋಜನೆಯನ್ನು ಕಾರ್ಯರೂಪಕ್ಕೆ ತರುವ ತಂತ್ರ ಹೆಣೆಯಲು ಪ್ರಾರಂಭಿಸಿದರು. ಪ್ರಮುಖ ಆರೋಪಿ ಎಂದು ಪರಿಗಣಿಸಲಾದ ಅಮೋಲ್ ಕಾಳೆ, ಹಂತಕರಿಗೆ ಮೋಟಾರ್ ಸೈಕಲ್ ವ್ಯವಸ್ಥೆ ಮಾಡುವುದು, ಗೌರಿ ಅವರ ಕಚೇರಿ ವಿಳಾಸವನ್ನು ಕಂಡುಹಿಡಿಯುವುದು, ಆಕೆಯ ದಿನಚರಿಯನ್ನು ಗಮನಿಸುವುದು, ಬೆಂಗಳೂರಿನಲ್ಲಿ ಮೂರು ಬಾಡಿಗೆ ಮನೆಗಳನ್ನು ಪಡೆಯುವುದು, ಬೆಳಗಾವಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಹಾಗೂ ಶಾರ್ಪ್ ಶೂಟ್ (ನಿಖರ ಗುರಿ) ಅಭ್ಯಾಸವನ್ನು ಆಯೋಜಿಸುವುದು, ಜೀವಂತ ಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಹಾಗೂ ಮೊಬೈಲ್ ಫೋನ್‌ಗಳು-ಸಿಮ್ ಕಾರ್ಡ್‌ಗಳನ್ನು ಖರೀದಿಸುವುದು ಸೇರಿದಂತೆ ನಿರ್ದಿಷ್ಟ ಕೆಲಸಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ 18 ಆರೋಪಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ, ಕರ್ನಾಟಕದಾದ್ಯಂತ ಬೆಳಗಾವಿ, ದಾವಣಗೆರೆ, ದಕ್ಷಿಣ ಕನ್ನಡ, ವಿಜಯನಗರ, ಬೆಂಗಳೂರು, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಿಗೆ ಪ್ರಯಾಣ ಬೆಳೆಸಿದ್ದರು.
ಆರೋಪಿಗಳು ಬೆಳಗಾವಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದ ಸ್ಥಳದಲ್ಲಿ ದೊರೆತ ಗುಂಡುಗಳು, ಅವರು ಬಾಡಿಗೆಗೆ ಪಡೆದ ಮನೆಗಳಲ್ಲಿ ಕಂಡುಬಂದ ಕೂದಲು ಹಲ್ಲುಜ್ಜುವ ಬ್ರಷ್‌ಗಳಿಂದ ಪಡೆದ ಡಿಎನ್‌ಎ ಮಾದರಿ ಹಾಗೂ ಗೌರಿ ಅವರ ಮನೆಯ ಹೊರಗಿನಿಂದ ಸೆರೆಹಿಡಿಯಲಾದ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಹಲವು ಸ್ಥಳಗಳಿಂದ ಪೊಲೀಸರು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಹೋರಾಟದ ಸಂಗಾತಿ ಗೌರಿಗೊಂದು ಪ್ರೀತಿಯ ಪತ್ರ
ಪ್ರಾಸಿಕ್ಯೂಷನ್ ಮೂಲತಃ 530 ಸಾಕ್ಷಿಗಳನ್ನು ಪಟ್ಟಿ ಮಾಡಿತ್ತು. ಆದಾಗ್ಯೂ, ಅಂತಿಮವಾಗಿ ನೂರಕ್ಕೂ ಹೆಚ್ಚು ಸಾಕ್ಷಿಗಳನ್ನು ಕೈಬಿಟ್ಟಿತು. ಇಲ್ಲಿಯವರೆಗೆ, 193 ಸಾಕ್ಷಿಗಳು ಸಾಕ್ಷ್ಯಗಳ ಹೇಳಿಕೆಯನ್ನು ನ್ಯಾಯಾಲಯದ ಎದುರು ದಾಖಲಿಸಲಾಗಿದೆ. ಇನ್ನೂ, ಸುಮಾರು 80 ಜನರು ಸಾಕ್ಷ್ಯ ಹೇಳುವುದು ಬಾಕಿ ಉಳಿದಿದೆ.
ಇಲ್ಲಿಯವರೆಗೆ ಸಾಕ್ಷ್ಯ ನುಡಿದವರಲ್ಲಿ ಹೆಚ್ಚಿನವರು ಖಾಸಗಿ ಸಾಕ್ಷಿಗಳು. ಇವರಲ್ಲಿ ಆರೋಪಿಗಳಿಗೆ ಮನೆ ಬಾಡಿಗೆಗೆ ನೀಡಿದ್ದ ಮಾಲೀಕರು ಮತ್ತು ಮಹಜರ್ ಮಾಡುವ ಸಂದರ್ಭದಲ್ಲಿ ಹತ್ಯೆಯ ಲಾಜಿಸ್ಟಿಕಲ್ ಅಂಶಗಳನ್ನು ದೃಢೀಕರಿಸಲು ಪೊಲೀಸರು ಬಳಸಿಕೊಂಡಿದ್ದ ಜನರು ಸೇರಿದ್ದಾರೆ. (ಶೋಧ ಅಥವಾ ವಶಪಡಿಸಿಕೊಳ್ಳುವ ಕಾರ್ಯಾಚರಣೆಯ ನಡೆಸುವಾಗಿ ಪೊಲೀಸರು ಸಿದ್ದಪಡಿಸಿರುವ ದಾಖಲೆಯನ್ನು ಮಹಜರು ಎನ್ನಲಾಗುತ್ತದೆ. ಈ ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದವರನ್ನು ಮಹಜರು ಸಾಕ್ಷಿಗಳಾಗಿ ಪಟ್ಟಿ ಮಾಡಲಾಗುತ್ತದೆ). ಅಲ್ಲದೆ, ಇಲ್ಲಿಯವರೆಗೆ, ಮೂವರು ಸಾಕ್ಷಿಗಳು ಪ್ರಕರಣಕ್ಕೆ ವಿರುದ್ಧವಾಗಿ (ಆರೋಪಿಗಳಿಗೆ ಸಹಾಯವಾಗುವ) ಹೇಳಿಕೆ ನೀಡಿದ್ದಾರೆ.
ಇನ್ನು, ಗೌರಿ ಕೊಲೆ ಪ್ರಕರಣದಲ್ಲಿ ಆರೋಪಿ ರಾಜೇಶ್ ಬಂಗೇರ ಪಾತ್ರದ ಬಗ್ಗೆ ಸಾಕ್ಷ್ಯ ನುಡಿದಿದ್ದ ಕೊಡಗು ಜಿಲ್ಲೆಯ ಒಬ್ಬ ಸಾಕ್ಷಿಯ ವಿರುದ್ಧ ನಕಲಿ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಗೌರಿ ಪ್ರಕರಣದ ಆರೋಪಿ ರಾಜೇಶ್ ಬಂಗೇರ ಎಂಬಾತ ಭರತ್ ಕುರಾನೆ ಎಂಬಾತನೊಂದಿಗೆ ಶಸ್ತ್ರಾಸ್ತ್ರ ತರಬೇತಿಗಾಗಿ ಜೀವಂತ ಗುಂಡುಗಳನ್ನು ಖರೀದಿಸಿದ್ದರು. ಮತ್ತೊಬ್ಬ ಆರೋಪಿ ಅಮಿತ್ ದೇಗ್ವೇಕರ್ ಜೊತೆಗೆ ಶಸ್ತ್ರಾಸ್ತ್ರ ತರಬೇತುದಾರರಾಗಿ ಕೆಲಸ ಮಾಡಿದ್ದರು. ಗೌರಿ ಮೇಲೆ ಗುಂಡು ಹಾರಿಸಿದ ಆರೋಪ ಹೊತ್ತಿರುವ ಪರಶುರಾಮ್ ವಾಗ್ಮೋರೆಯನ್ನು ಬೈಕ್‌ನಲ್ಲಿ ಕರೆದೊಯ್ಡಿದ್ದ ಗಣೇಶ್ ಮಿಸ್ಕಿನ್‌ಗೆ ಬಂಗೇರಾ ಖುದ್ದು ತರಬೇತಿ ನೀಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಪ್ರಾಸಿಕ್ಯೂಷನ್ ವಿವರಿಸಿದೆ.
ಡಿಎನ್‌ಎ ಮುಂತಾದ ವೈದ್ಯಕೀಯ ಪುರಾವೆಗಳನ್ನು ವಿಶ್ಲೇಷಿಸಿದ ವಿಧಿವಿಜ್ಞಾನ ಪ್ರಯೋಗಾಲಯ (ಫೋರೆನ್ಸಿಕ್) ತಜ್ಞರು ಈಗಾಗಲೇ ಸಾಕ್ಷ್ಯ ನುಡಿದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಬ್ಯಾಲಿಸ್ಟಿಕ್ಸ್ ಸೇರಿದಂತೆ ಇತರ ವೈಜ್ಞಾನಿಕ ಪುರಾವೆಗಳನ್ನು ವಿಶ್ಲೇಷಿಸಿರುವ ಪ್ರಮುಖ ತಜ್ಞರು ಸಾಕ್ಷಿ ಹೇಳುವುದು ಬಾಕಿ ಇದೆ. ಅವರಿಗೆ ಸಾಕ್ಷಿ ಹೇಳಲು ಬರುವಂತೆ ಈವರೆಗೆ ಸಮನ್ಸ್ ನೀಡಲಾಗಿಲ್ಲ.
ಈ ವರ್ಷದ ಜೂನ್‌ನಲ್ಲಿ, ಪ್ರಕರಣದ ಸಾಕ್ಷಿಯೊಬ್ಬರು ತನಗೆ ಬೆದರಿಕೆ ಬಂದಿದೆ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಆದರೂ, ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಶಿವಸುಂದರ್ ತಿಳಿಸಿದ್ದಾರೆ.
ಕೃಪೆ: ದಿ ನ್ಯೂಸ್ ಮಿನಿಟ್




