ಇದನ್ನು ಬರೆಯುವಾಗ ಕಣ್ಣು ತುಂಬಿ ಬರುತ್ತದೆ. ಇಂಥ ಕರಾರುಗಳೇ ಇಲ್ಲದ ಗೆಳತಿಯಾಗಿದ್ದಳು ಅವಳು. ಊಟ ಆಯ್ತಾ ಅಂತಿಲ್ಲದೆ ಮಾತೇ ಇಲ್ಲ. ಅವಳ ಲೈಬ್ರರಿಯಿಂದ ಯಾವುದಾದರೂ ಪುಸ್ತಕ ಕೇಳಿದರೆ ಮಾತ್ರ, “ಏ ಆ ಪುಸ್ತಕಾನ…! ತರಿಸಿಕೊಡ್ತೀನಿ ಬಿಡು, ಅಪ್ಪನ ಲೈಬ್ರರಿಯಿಂದ ಪುಸ್ತಕ ಕಮ್ಮಿ ಮಾಡೋದು ಬೇಡ” ಎನ್ನುವ ಅವಳ ನಿಲುವಿಗೆ ನನ್ನ ಪ್ರತಿರೋಧವೇನೂ ಇರಲಿಲ್ಲ.

ಪ್ರೀತಿ ಇಲ್ಲದೆ ಗೆಳೆತನವೆಲ್ಲಿ? ಆದರೆ ಪ್ರೀತಿಯ ಅಭಿವ್ಯಕ್ತಿ ಎಲ್ಲರಿಗೂ ಸುಲಭವಲ್ಲ. ಗೌರಿಗೆ ಇದು ಸಿದ್ಧಿಸಿತ್ತು. ಅವಳೇನು ಹೆಚ್ಚು ಮಾತಿನವಳಲ್ಲ. ಆದರೆ ಆಡುವ ಕೆಲವೇ ಮಾತುಗಳಲ್ಲಿ ಅವಳ ಪ್ರೀತಿ ನಮ್ಮನ್ನು ತಟ್ಟಿ ಮುಟ್ಟುವಂಥದಾಗಿತ್ತು. ಅವಳ ನೋಟವೊಂದರಲ್ಲಿ ತನ್ನ ಪ್ರೀತಿಯನ್ನು ಅಸಹನೆಯನ್ನು ಅನಾಯಾಸವಾಗಿ ಮುಟ್ಟಿಸಬಲ್ಲವಳಾಗಿದ್ದಳು. ಅವಳ ರಾಜಕೀಯ ಹೋರಾಟದ ಹೊರ ಜಗತ್ತು ಸಾಹಿತ್ಯದ ನನ್ನ ಒಳ ಜಗತ್ತು ಮೇಲ್ನೋಟಕ್ಕೆ ಹೊಂದಲಾರದ ಹೋಲಿಕೆಯಾಗಿತ್ತು. ಈ ಕುಡುಮಿ ಅಕಾಡೆಮೀಷಿಯನ್‌ಗೂ ಗೌರಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಹಲವರನ್ನು ಕಾಡಿದ್ದಿತ್ತು. ಆದರೆ, ನಾವೋ ಜನ್ಮಾಂತರದ ಗೆಳತಿಯರಂತೆ ಬದುಕಿನ ಎಲ್ಲ ಕಷ್ಟ ಸುಖಗಳನ್ನೂ ಹಂಚಿಕೊಳ್ಳುತ್ತಿದ್ದವು.
ಅವಳೊಂದು ಶುಭ್ರ ಹೂವಿನಂತೆ. ಏಕೆಂದರೆ ಅವಳಲ್ಲಿ ಹೊರಗೊಂದು ಒಳಗೊಂದು ಎನ್ನುವುದು ಇರಲೇ ಇಲ್ಲ. ಏನಿದ್ದರೂ ನೇರಾ ನೇರಾ (ತಮಾಷೆಗೆಂದು ಒಂದು ಪ್ರಸಂಗ ಹೇಳಬಹುದೇನೋ… ಥ ನೀನು ಇನ್ನಂಚೂರು ಎತ್ತರ ಇದ್ದಿದ್ದ, ಎಂಥ ಬ್ಯೂಟಿ ಗೊತ್ತೇನೇ ನೀನು ಮೊಂಡ ಮೂಗಿನ ಸುಂದರಿ ಕಣೆ ನೀನು ಎಂದು ಅವಳು ಹೇಳಿದಾಗಲೆಲ್ಲ, ನಿನಗೆಂಥ ತಲೆ ಕೆಟ್ಟಿದ್ದೇನೆ, ನಿನಗೆ ನನ್ನನ್ನ ಕಂಡ್ರೆ ಪ್ರೀತಿ ಅಲ್ಲಾ ಅದಕ್ಕೆ ನಿನಗೆ ಹೀಗನ್ನಿಸುತ್ತೆ ಎನ್ನುತ್ತಿದ್ದೆ… ಏ ಕೂತೊ ಸುಮೆ ಎಂದು ಅವಳು ಗೊಣಗುವುದರೊಂದಿಗೆ ಈ ಮಾತುಕತೆ ಮುಗಿಯುತ್ತಿತ್ತು. ಈ ಪ್ರಸಂಗವನ್ನು ಉಲ್ಲೇಖಿಸಿದ್ದಕ್ಕಾಗಿ ಯಾರೂ ಅನ್ಯಥಾ ಭಾವಿಸಬಾರದು) ನಾನು ಕಂಪ್ಯೂಟರ್ ಕಲಿಯುವ ತನಕ ಅವಳದು ಒಂದೇ ಗಲಾಟೆ, “ಮೊದಲು ಕಲಿ ಅಪ್ಡೇಟ್ ಆಗಿರಬೇಕು ಕಣೆ ಈ ಲೋಕದಲ್ಲಿ” ಎಂದು ಹೇಳಿ ಹೇಳಿಯೇ ನಾನು ಕಲಿತೆ.
“ಅದ್ಯಾಕೆ ಜೀವನಾನೆಲ್ಲ ಈ ರಾಜಕಾರಣಿಗಳ ತಪ್ಪುಗಳ ಪಟ್ಟಿ ಮಾಡೋದ್ರಲ್ಲಿ ಕಳೀಬೇಕು, ಬೇಂದ್ರೆ, ಕುವೆಂಪುನ ಓದಬೇಕು ನೀನು” ಅಂದ್ರೆ, “ಇವಳೊಬ್ಳು ಕೆರಕೊಳೋಕೆ ಪುರುಸೊತ್ತಿಲ್ಲ, ಬೇಂದ್ರೆನ ಓದೋಕೆ ಟೈಮೆಲ್ಲಿಂದ ತರಲಿ” ಅನ್ನುವುದು ಅವಳ ಸಿದ್ಧ ಉತ್ತರ.
ಆದರೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಯಾವ ಸಂದರ್ಭ ಬಂದರೂ ಮೊದಲು ಫೋನ್ ಮಾಡ್ತಾ ಇದ್ದದ್ದೇ ನನಗೆ. “ಹೂಂ ಹೇಳಮ್ಮ, ಈ ಪುಸ್ತಕದ ಕತೆ ಏನು” ಅಂತ ಶುರುವಾಗೋದು. ಸಿಂಪಲ್ಲಾಗಿ ನನಗೆ ಅರ್ಥ ಆಗೋಹಂಗೆ ಹೇಳಬೇಕು. ದೊಡ್ಡ ದೊಡ್ಡ ಪದ ಎಲ್ಲ ಬಳಸಬೇಡ ಅನ್ನೋಳು. ನಾನು ಅವಳ ಆಫೀಸಿಗೆ ಹೋದ ಕೂಡಲೇ ಹುಡುಗರನ್ನ ಕರೆದು ಮೊದಲು ಕಾಫಿ ತಂದುಬಿಡಪ್ಪ ಇವಳಿಗೆ, ಆಮೇಲೆ ಮುಂದಿನ ಮಾತು ಎನ್ನುವ ಪ್ರೀತಿಯ ಮಾತು ಈಗಲೂ ನನ್ನ ಕಿವಿಯಲ್ಲಿದೆ.
ಇದನ್ನು ಬರೆಯುವಾಗ ಕಣ್ಣು ತುಂಬಿ ಬರುತ್ತದೆ. ಇಂಥ ಕರಾರುಗಳೇ ಇಲ್ಲದ ಗೆಳತಿಯಾಗಿದ್ದಳು ಅವಳು. ಊಟ ಆಯ್ತಾ ಅಂತಿಲ್ಲದೆ ಮಾತೇ ಇಲ್ಲ. ಅವಳ ಲೈಬ್ರರಿಯಿಂದ ಯಾವುದಾದರೂ ಪುಸ್ತಕ ಕೇಳಿದರೆ ಮಾತ್ರ, “ಏ ಆ ಪುಸ್ತಕಾನ, ತರಿಸಿಕೊಡ್ತೀನಿ ಬಿಡು, ಅಪ್ಪನ ಲೈಬ್ರರಿಯಿಂದ ಪುಸ್ತಕ ಕಮ್ಮಿ ಮಾಡೋದು ಬೇಡ” ಎನ್ನುವ ಅವಳ ನಿಲುವಿಗೆ ನನ್ನ ಪ್ರತಿರೋಧವೇನೂ ಇರಲಿಲ್ಲ.
ತುಟಿಯಲ್ಲಿ ಸದಾ ಉರಿಯುವ ಸಿಗರೇಟು ಮತ್ತು ತುಟಿಯಂಚಿನಲ್ಲಿ ಕಿರುನಗೆ ಅವಳಲ್ಲಿದ್ದ ಮಾನವೀಯ ಕಾಳಜಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಅವಳ ತೋಟದ ಕುಟುಂಬ, ಆಫೀಸಿನ ಹುಡುಗರಿಂದ ಹಿಡಿದು ಸಮುದಾಯದ ಎಲ್ಲ ದಮನಿತರಿಗೆ ತಾನು ದನಿಯಾಗಬೇಕು, ಅವರ ಬದುಕಿನಲ್ಲಿ ಬೆಳಕು ಮೂಡಿಸಬೇಕು ಎನ್ನುವುದು ಅವಳ ನಿರಂತರವಾದ ಕಾಳಜಿಯಾಗಿತ್ತು. ಇದಕ್ಕಾಗಿ ಎಂಥಾ ರಿಸ್ಕುಗಳನ್ನು ತೆಗೆದುಕೊಳ್ಳಲೂ ಅವಳು ಹಿಂಜರಿಯಲಿಲ್ಲ. ಆದರೆ ಇದು ಅವಳ ಜೀವವನ್ನೇ ತೆಗೆದುಕೊಳ್ಳುವಂಥ ರಿಸ್ಕ್ ಎನ್ನುವುದರ ಅನುಮಾನ ನಮ್ಮೆಲ್ಲರಲ್ಲೂ ಇದ್ದೇ ಇತ್ತು. ಬೇಡ ಬೇಡ ಎಂದು ಎಷ್ಟು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಯಾರೇನೇ ಹೇಳಲಿ, ನಾನು ಆವತ್ತಿನಿಂದ ಹೇಳುತ್ತಲೇ ಇದ್ದೇನೆ, ಇವಳ ಜೀವ ಮಾತ್ರ ಅಪಾಯಕ್ಕೀಡಾಯಿತು ಎಂದು. ಹಾಗಾಗದೆ ಇರುವ ಹಾಗೆ ನೋಡಿಕೊಳ್ಳಬೇಕಾಗಿತ್ತು. “ಸತ್ರೆ ಸಾಯ್ತಿನಿ ಬಿಡೆ…” ಎನ್ನುವ ಮಾತೂ ಅವಳಿಂದ ಒಮ್ಮೆ ಬಂದಿತ್ತು. ವಾರ ಮಾತಾಡಿರಲಿಲ್ಲ ಕೋಪಕ್ಕೆ.
ಮಹಾ ಹೋಳಿಗೆ ಪ್ರಿಯೆ ಗೌರಿ, ಅವಳನ್ನೊಮ್ಮೆ ಮನೆಗೆ ಊಟಕ್ಕೆ ಕರೆದಿದ್ದೆ. ಹೋಳಿಗೆ ಬಿಟ್ಟು ಮಿಕ್ಕದ್ದೆಲ್ಲ ಬಡಿಸಿದ್ದೆ. “ಮಾರಾಯ್ತಿ ಆಫೀಸ್ ಕೆಲಸ ಬಿಟ್ಟು ಬಂದಿರೋದೇ ಹೋಳಿಗೆ ತಿನ್ನೋಕೆ ಮೊದಲು ಬಡಿಸು ಅದನ್ನ” ಎಂದು ನಕ್ಕವಳ ಮುಖ ಈಗಲೂ ನನ್ನ ಕಣ್ಣಲ್ಲಿದೆ. ಅಮಾನುಷವಾದ ಜಗತ್ತಿನಲ್ಲಿ ಮಾನುಷಿಯಾಗಿದ್ದವಳು ನನ್ನ ಗೌರಿ.
ಇದನ್ನೂ ಓದಿ ಹೋರಾಟದ ಸಂಗಾತಿ ಗೌರಿಗೊಂದು ಪ್ರೀತಿಯ ಪತ್ರ

ಡಾ. ಎಂ.ಎಸ್. ಆಶಾದೇವಿ
ಅನುವಾದಕಿ, ವಿಮರ್ಶಕಿ ಆಶಾದೇವಿ ಮೂಲತಃ ದಾವಣಗೆರೆ ಜಿಲ್ಲೆಯವರು. ಸ್ತ್ರೀಮತವನುತ್ತರಿಸಲಾಗದೇ (ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು), ಉರಿಚಮ್ಮಾಳಿಗೆ (ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ), ವಚನ ಪ್ರವೇಶ (ಸಂಪಾದನೆ), ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು.




