ಗಿರಿಧರ್‌ ಖಾಸನೀಸ್‌ ಕೃತಿಗಳು : ತಲಸ್ಪರ್ಶಿ, ದೃಶ್ಯಸ್ಪರ್ಶಿ ಅನುಭವ-ಅನುಭಾವಗಳ ಮೆರವಣಿಗೆ

Date:

ಓದಿದ ನಂತರ ಮನಸ್ಸಿನಲ್ಲಿ ಅನುಭವವನ್ನು ಅನುಭಾವ ಎನ್ನುವ ಭಾವ ಮೂಡಿಸುವ ಗಿರಿಧರ್‌ ಖಾಸನೀಸ್‌ ಅವರ ಬರಹ ಕನ್ನಡದಲ್ಲಿ ಸದ್ಯದ ಸ್ಥಿತಿಯಲ್ಲಂತೂ, ಪ್ರಯೋಗಾತ್ಮಕವಾಗಿ ಕಾಣಿಸುತ್ತದೆ. ಪದ್ಯ-ಗದ್ಯಗಳ ನಡುವಿದ್ದ ತೆಳುಗೆರೆಯನ್ನು ಮತ್ತಷ್ಟು ಮಂಕಾಗಿಸಿದ- ಗಪದ್ಯದಂಥ ʼಬಹುರೂಪದರ್ಶಕʼದಲ್ಲಿ ಕಾಣಿಸುವ ಚಿತ್ರಪಟ್ಟಿಕೆಗಳು ಒಂದರ್ಥದಲ್ಲಿ ಕೆ.ವಿ.ತಿರುಮಲೇಶ್‌ ಅವರ ಪ್ರಯೋಗಶೀಲ ಮನಸ್ಸಿನ ಮುಂದುವರಿಕೆಯಂತೆ ಕಾಣಿಸುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಸಮಕಾಲೀನ ಬರವಣಿಗೆಯಲ್ಲಿ ಕೊಂಚ ಕದಲಿಕೆ ಕಂಡಂಥ ಅನುಭವನ್ನು, ತಮ್ಮ ಸಣ್ಣ ಕಥೆ, ಅತಿ ಸಣ್ಣ ಕಥೆ ಮತ್ತು ಗ-ಪದ್ಯಗಳ ಮೂಲಕ ಕಟ್ಟಿಕೊಟ್ಟವರು ಗಿರಿಧರ್‌ ಖಾಸನೀಸ್‌. ಪದ್ಯ-ಗದ್ಯಗಳ ನಡುವಿದ್ದ ತೆಳುಗೆರೆಯನ್ನು ಮತ್ತಷ್ಟು ಮಂಕಾಗಿಸಿದ ಗಪದ್ಯದಂಥ ʼಬಹುರೂಪದರ್ಶಕʼದಲ್ಲಿ (ಕೆಲೈಡೋಸ್ಕೋಪ್‌) ಕಾಣಿಸುವ ಚಿತ್ರಪಟ್ಟಿಕೆಗಳು. ಅವರ ಬರಹ ಒಂದರ್ಥದಲ್ಲಿ ಕೆ.ವಿ.ತಿರುಮಲೇಶ್‌ ಅವರ ಪ್ರಯೋಗಶೀಲ ಮನಸ್ಸಿನ ಮುಂದುವರಿಕೆಯಂತೆ ಕಂಡರೆ ಅದು ಓದುಗರ ಕಾಣ್ಕೆ. ಏಕೆಂದರೆ ಓದಿದ ನಂತರ ಮನಸ್ಸಿನಲ್ಲಿ ಅನುಭವವನ್ನು ಅನುಭಾವ ಎನ್ನುವ ಭಾವ ಮೂಡಿಸುವ ಅವರ ಬರಹ ಕನ್ನಡದಲ್ಲಿ ಸದ್ಯದ ಸ್ಥಿತಿಯಲ್ಲಂತೂ, ಪ್ರಯೋಗಾತ್ಮಕವಾಗಿ ಕಾಣಿಸುತ್ತದೆ.

ಹೀಗನ್ನಿಸಿದ್ದು ಎರಡು ವರ್ಷಗಳ ಹಿಂದೆ ಗಿರಿಧರ್‌ ಖಾಸನೀಸ್‌ ಅವರ ʻಎಲ್ಲಿಂದಲೋ ಹಾರಿ ಬಂದು-ಎಂಬ ಸಣ್ಣ ಕಥೆಗಳು, ಅತಿ ಸಣ್ಣ ಕಥೆಗಳು, ಗಪದ್ಯಗಳು ಎಂಬ ಕೃತಿಯನ್ನು ಓದಿದಾಗ (ಪ್ರಕಟಣೆ: ನವಕರ್ನಾಟಕ ಪ್ರಕಾಶನ). ಈಗ ಅವರು ಮತ್ತೆರಡು ಕೃತಿಗಳನ್ನು ಬರೆದಿದ್ದಾರೆ. ಮೊದಲಿನ ಮಾದರಿಯದೇ ಆದ; ʻಇಡೀ ರಾತ್ರಿ ಸುರಿದ ಮಳೆʼ-ಸಣ್ಣ ಕಥೆಗಳು, ಅತಿ ಸಣ್ಣ ಕಥೆಗಳು, ಗಪದ್ಯಗಳು ಹಾಗೂ ʻಕಾಣುತ್ತ, ಕಾಣುತ್ತ ಕೇಳುತ್ತ, ಕೇಳುತ್ತ ಆರು ತೆರೆಯ ನೋಡಂಬಿಗ-ಐವತ್ತು ಅತಿ ಸಣ್ಣ ನಾಟಕಗಳು. ಈ ಎರಡು ಕೃತಿಗಳನ್ನು ಕೂಡ ನವಕರ್ನಾಟಕ ಪ್ರಕಾಶನ ಈ ವರ್ಷ ಪ್ರಕಟಿಸಿ, ಓದುಗರ ಕೈ ತಲುಪಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಶಿಷ್ಟ, ವಿಕ್ಷಿಪ್ತ

ಈ ಪೈಕಿ ʻಕಾಣುತ್ತ, ಕಾಣುತ್ತ ಕೇಳುತ್ತ, ಕೇಳುತ್ತ ಆರು ತೆರೆಯ ನೋಡಂಬಿಗ- ಕನ್ನಡ ರಂಗಸಾಹಿತ್ಯದಲ್ಲಿ ವಿಶಿಷ್ಟವೆನಿಸುವ ಸಣ್ಣ ನಾಟಕಗಳ ಸಂಕಲನವಿದು. ಸರಳ ಸಂಭಾಷಣೆ, ಸೀಮಿತ ಪಾತ್ರಗಳು ಮತ್ತು ಕನಿಷ್ಠ ರಂಗಪರಿಕರಗಳ ಅಗತ್ಯವಿರುವ ಈ ನಾಟಕಗಳು ಪ್ರಯೋಗಶೀಲತೆ ಮತ್ತು ಸೃಜನಶೀಲತೆಯನ್ನು ಬಿಂಬಿಸುತ್ತವೆ. ಮಾನವ ಸಹಜ ಸ್ಥಿತಿ, ಅಸ್ತಿತ್ವ, ಸಂಬಂಧಗಳು ಮತ್ತು ಆಧುನಿಕ ಬದುಕಿನ ಸಂಕೀರ್ಣತೆಗಳನ್ನು ಧ್ವನಿಪೂರ್ಣವಾಗಿ ನಿರೂಪಿಸುತ್ತವೆ. “ಬಹುತೇಕ ನಾಟಕಗಳ ಕೊನೆಯಲ್ಲಿ ಸ್ಫೋಟಿಸುವ ನಿಗೂಢತೆ, ಅನಿರೀಕ್ಷಿತ ತಿರುವುಗಳು ಮತ್ತು ಮಿಂಚಿನಂತೆ ಥಟ್ಟನೆ ಹೊಳೆದು ಮಾಯವಾಗುವ ಜೀವನ ದರ್ಶನ, ರಂಗಭೂಮಿಯ ಪಠ್ಯವನ್ನು ಓದುವವರನ್ನು ಬೆಚ್ಚಿಬೀಳಿಸುತ್ತದೆ” ಎನ್ನುತ್ತಾರೆ ಈ ಕೃತಿಗೆ ಬೆನ್ನುಡಿ ಬರೆದಿರುವ ಡಾ. ಕೆ. ಪುಟ್ಟಸ್ವಾಮಿ. ಕೇವಲ ಅರ್ಧ ನಿಮಿಷದಿಂದ ಎಂಟು ನಿಮಿಷಗಳ ಒಳಗೆ ಪ್ರದರ್ಶಿಸಬಹುದಾದ ಈ ಅತಿ ಸಣ್ಣ ನಾಟಕಗಳ ಗುಚ್ಛ ಕನ್ನಡ ರಂಗಭೂಮಿಗೆ ಗಿರಿಧರ್‌ ಖಾಸನೀಸ್‌ ಅವರ ಒಂದು ಅಪರೂಪದ ಕೊಡುಗೆ ಎಂದರೆ ತಪ್ಪಾಗಲಾರದು.

ಕನ್ನಡ ರಂಗಭೂಮಿಯ ಹೊಸ ಪ್ರಯೋಗ

ಈ ಕೃತಿಗೆ ಘನತೆ ತಂದುಕೊಟ್ಟಿರುವುದು ದೃಶ್ಯಗಳನ್ನು ಕಟ್ಟಿಕೊಡುವ ಅಕ್ಕಮಹಾದೇವಿ, ಮುಕ್ತಾಯಕ್ಕನ ವಚನ ಹಾಗೂ ಪುರಂದರದಾಸರ ಕೀರ್ತನೆಯ ಸಾಲುಗಳು. ಇದರ ಜೊತೆಯಲ್ಲಿ Thierry Cardon ಎಂಬ ಫ್ರೆಂಚ್‌ ಛಾಯಾಗ್ರಾಹಕ ಗಿರಿಧರ್‌ ಖಾಸನೀಸ್‌ ಅವರಿಗೆಂದು ರಚಿಸಿಕೊಟ್ಟಿರುವ ರೇಖಾ ಚಿತ್ರ. ಪುಸ್ತಕವನ್ನು ಕೈಗೆತ್ತಿಕೊಳ್ಳುವ ಮುನ್ನ ಓದುಗರು ಅದನ್ನು ಗಮನಿಸಿದರೆ, ಕೃತಿಯ ಮಹತ್ವ ಅರಿವಾಗುತ್ತದೆ. ಈ ನಾಟಕ ಕೃತಿಯ ಮೂಲಕ ಗಿರಿಧರ್‌ ತಮ್ಮ ಪ್ರಯೋಗಶೀಲತೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಗಿರಿಧರ್‌ ಅವರ ಆಸಕ್ತಿ ಕ್ಷೇತ್ರವೂ ಹೌದು. ಅವರು ಹಿಂದೆ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಡಾ ಕೆ ಪುಟ್ಟಸ್ವಾಮಿ ಅವರು ಹೇಳುವ ಪ್ರಕಾರ ಕನ್ನಡದಲ್ಲಿ ಇದುವರೆಗೂ ಇಂಥ ಸಣ್ಣ ನಾಟಕಗಳ ರಚನೆ ನಡೆದಿಲ್ಲ. ಜಗತ್ತಿನ ಸಾಹಿತ್ಯದಲ್ಲಿ ಇಂಥ ಸಣ್ಣ ನಾಟಕಗಳ ಪರಂಪರೆ ಪ್ರಾಚೀನ ಕಾಲದಿಂದ ಇದೆ. ಗಿರಿಧರ್‌ ಅವರ ಈ ಸೀಮಿತ ಸಂಖ್ಯೆಯ ಪಾತ್ರಗಳು, ಸಣ್ಣ ಸಂಭಾಷಣೆಗಳು, ಬೆರಳೆಣಿಕೆಯಷ್ಟು ರಂಗಪರಿಕರಗಳು ಮತ್ತು ಅಲ್ಪಾವಧಿಯಲ್ಲಿ ನಡೆಯುವ ಅತಿಸಣ್ಣ ನಾಟಕಗಳು ಬರಹಗಾರ ಮತ್ತು ನಿರ್ದೇಶಕ ಇಬ್ಬರಿಗೂ ಕಠಿಣ ಸವಾಲೊಡ್ಡುತ್ತದೆ. ಗಿರಿಧರ್‌ ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಗಿರಿಧರ್‌ ಅವರ ಅಧ್ಯಯನದ ಆಸಕ್ತಿ ಕಲಾಮಾಧ್ಯಮದ ವಿವಿಧ ಪ್ರಕಾರಗಳಿಗೆ ವಿಸ್ತರಿಸಿರುವುದರಿಂದ ಇಲ್ಲಿನ ನಾಟಕಗಳು ಅಂಥ ಅನೇಕ ಮೂಲಗಳಿಗೆ ಋಣಿಯಾಗಿವೆ. ಸಿನಿಮಾ ಜಗತ್ತನ್ನು ಅಪಾರ ಗೌರವದಿಂದ ಕಾಣುವ ಲೇಖಕ, ಈ ನಾಟಕಗಳಲ್ಲಿ ಹಿಚ್ ಕಾಕ್‌, ತ್ರೂಫೋ, ಕಪ್ಪೋಲ ಚಲನಚಿತ್ರಗಳಲ್ಲಿ ತೋರುವ ಪರಿಣಾಮವನ್ನು ತಮ್ಮ ನಾಟಕಗಳಲ್ಲಿ ತುಂಬಿದ್ದಾರೆ. ಈ ಪುಸ್ತಕದ ಎರಡು ನಾಟಕಗಳಲ್ಲಿನ ಸಾವಿನ ಉಲ್ಲೇಖಗಳು ಬರ್ಗ್‌ ಮನ್‌, ಅವರ ʼದ ಸೆವೆಂತ್‌ ಸೀಲ್‌ʼ ಚಿತ್ರದಲ್ಲಿನ ನೈಟ್‌ ಮತ್ತು ಮೃತ್ಯುವಿನ ನಡುವಿನ ಸೆಣೆಸಾಟವನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಿದ್ದಾರೆ ಎಂದು ಪುಟ್ಟಸ್ವಾಮಿ ಗುರುತಿಸಿರುವುದನ್ನು ಕಂಡಾಗ ಸಂತೋಷವೂ ಆಗುತ್ತದೆ.

all book covers ೧

ಹಾಗೆಯೇ ʻಎಲ್ಲಿಂದಲೋ ಹಾರಿ ಬಂದುʼ ರೀತಿಯಲ್ಲಿಯೇ ; ʻಇಡೀ ರಾತ್ರಿ ಸುರಿದ ಮಳೆʼ-ಕೂಡ ಬದುಕನ್ನು ಕಾಣುವ, ಬಗೆಯುವ ಹೊಸ ಸಾಧ್ಯತೆಗಳನ್ನು ಹೊಳೆಯಿಸುವುದರ ಜೊತೆಗೆ ಓದುಗರ ಚಿಂತನೆಗೂ ಒಂದು ʼಕಾಲಾವಕಾಶʼ ಕಲ್ಪಿಸುತ್ತದೆ. ಪದವಿಟ್ಟಳಿಪದೊಂದಗ್ಗಳಿಕೆ ಎನ್ನುವಂತೆ ಅಳೆದು-ತೂಗಿ ಪದಬಳಕೆ ಮಾಡುವ ಮೂಲಕ ಮಿನಿಮಲಿಸ್ಟ್ ರೀತಿಯ ಬೃಹದ್‌ ಕ್ಯಾನ್ವಾಸ್‌ ಅನ್ನು ಗಿರಿಧರ್‌ ಸೃಷ್ಟಿಸುತ್ತಾರೆ. ಒಂದು ರೀತಿಯಲ್ಲಿ ಇದು, ಎ.ಕೆ. ರಾಮಾನುಜನ್‌ ಅವರ ಪರಂಪರೆಯ ಮುಂದುವರಿಕೆಯಂತಿದೆ ಎನ್ನುವ ಪ್ರೊ. ಎಂ.ಎಸ್.‌ ಶ್ರೀರಾಮ್‌, “ಎಷ್ಟೋ ಬಾರಿ ಮರು ಓದಿಗೆ ಮತ್ತೊಂದು ಅರ್ಥವನ್ನು ಸ್ಫುರಿಸುವಂಥ ಬರೆಹ, ಮತ್ತು ಅದರ ಓಳ ನೋಟಗಳು ತೊಂಬಾ ಅನನ್ಯವಾದುದು “ಎಂದೂ ಅವರು ಹೇಳಿರುವುದು ನಿಜಕ್ಕೂ ಅರ್ಥಪೂರ್ಣ.

ಅತಿ ಸಣ್ಣ ಕತೆಗಳು ಎಂದಾಕ್ಷಣ ನೆನಪಾಗುವುದು, ಕನ್ನಡದ ಖ್ಯಾತ ಲೇಖಕ, ವಿಮರ್ಶಕ, ಕಲಾವಿದ ಮನಸ್ಸಿನ ಎಸ್.‌ ದಿವಾಕರ್.‌ ಅವರ ʻಕನ್ನಡದ ಅತಿ ಸಣ್ಣ ಕತೆಗಳುʼ ಮತ್ತು, ಜಗತ್ತಿನ ಅತಿ ಸಣ್ಣ ಕತೆಗಳುʼ ನೆನಪಾಗುತ್ತದೆ. ಆದರೆ ಇದರದೇ ಮತ್ತೊಂದು ಸ್ವರೂಪ ಗಿರಿಧರ್‌ ಖಾಸನೀಸ್ ಅವರ ಕೃತಿಗಳು ಎನ್ನಲಾಗುವುದಿಲ್ಲ.

ಹೆಡ್‌ ಅಂಡ್‌ ಟೇಲ್‌

ʻಎಲ್ಲಿಂದಲೋ ಹಾರಿ ಬಂದುʼ ನೂರಾ ಅರುವತ್ತು ಪುಟಗಳಲ್ಲಿ ಮೂರು ಭಾಗಗಳಾಗಿ ಹರಡಿಕೊಂಡಿದೆ. ʻಯಾರಿಗೆ ಯಾರುಂಟು…ʼ ʻಜಟಿಲ ಕಾನನದ ಕುಟಿಲ ಪಥಗಳಲ್ಲಿʼ, ಹಾಗೂ ʻನೀ ಮಾಯೆಯೊಳಗೋʼ… ಹೀಗೆ ಭಾಗಗಳ ಶೀರ್ಷಿಕೆಗಳೇ ಪುಸ್ತಕವನ್ನು ಕೈಗೆತ್ತಿಕೊಂಡರೆ, ಮುಗಿಸುವವರೆಗೂ ಕಾಡುತ್ತಲೇ, ಮುಂದೇನಿದೆ? ಆ ಅಚ್ಚರಿಗಳೇನು ಎಂದು ಕೆಣಕುತ್ತಾ, ಪುಸ್ತಕವನ್ನು ಕೈಯಿಂದ ಕೆಳಗಿಳಿಸದಂತೆ, ಕಾಡಿ, ಓದಿಸಿ, ಕೊನೆಯಲ್ಲಿ ಎಂದೂ ಅರಿಯದಂಥ ವಿಷಾದವೊಂದನ್ನು ಸೃಷ್ಟಿಸಿ, ಅನುಭಾವ ಲೋಕದಿಂದ ಧೊಪ್ಪೆಂದು, ಪ್ರಸ್ತುತಕ್ಕೆ ಎಸೆದು, ಚಿಮ್ಮಿದ ನಾಣ್ಯ ʻಹೆಡ್‌ʼ ಅಥವಾ ʻಟೈಲ್‌ʼ ಎಂದೂ ತೀಳಿಯಂತೆ ನೆಟ್ಟಗೆ ನಿಂತು, ಮತ್ತೆ ಗೊಂದಲದಲ್ಲಿ ಸಿಲುಕಿಸಿಬಿಡುತ್ತದೆ. ಇದನ್ನು ಗಿರಿಧರ್‌ ಅವರ ಶಕ್ತಿಯೇ ಯುಕ್ತಿಯೇ ಎರಡೂ ಅರ್ಥವಾಗದಂಥ ಮನಸ್ಥಿತಿಯಲ್ಲಿ ಓದುಗ ಸ್ತಬ್ದ.

ಸಾಲುಗಳ ನಡುವಿನ ಹೊಸ ಲೋಕ ದರ್ಶನ

ʻಎಲ್ಲಿಂದಲೋ ಹಾರಿ ಬಂದುʼ ರೀತಿಯಲ್ಲಿಯೇ; ʻಇಡೀ ರಾತ್ರಿ ಸುರಿದ ಮಳೆʼ-ಓದುತ್ತಿದ್ದರೆ. ಎರಡು ಸಾಲುಗಳ ನಡುವಿನ ಅರ್ಥವನ್ನು ಭಿನ್ನರೀತಿಯಲ್ಲಿ ಗ್ರಹಿಸುವ ರೀತಿಯಂತೆಯೂ ನೋಡಬಹುದು ಎಂಬುದು ಮನವರಿಕೆಯಾಗುತ್ತದೆ. ಹಿಂದಿ ಕವಿ ರಾಜೇಶ್‌ ಜೋಶಿ ಬರೆದ ʻದೋ ಪಂಕ್ತಿಯೋಂಕೆ ಬೀಚ್‌ʼ ಜಯಶ್ರೀನಿವಾಸರಾವ್‌ ಅವರ ಕನ್ನಡ ಅನುವಾದ  ಕವಿತೆಯ ʻಎರಡು ಸಾಲುಗಳ ನಡುವೆʼ  ನೆನಪಾಗುತ್ತದೆ. ಗಿರಿಧರ್‌ ಅವರ ಸಣ್ಣಕಥೆ ಅತಿಸಣ್ಣ ಕಥೆ, ಗಪದ್ಯಗಳನ್ನು ಓದುತ್ತಿದ್ದರೆ, ಅದು ಎರಡು ಸಾಲುಗಳ ಮಧ್ಯದ ಖಾಲಿ ಖಾಲಿಯಾಗುವ ಅವಕಾಶದಂತೆ ಕಂಡರೂ, ಅಲ್ಲಿ ಬರಹಗಾರನ ಅದೃಶ್ಯ ನೆರಳಿನ ಸುತ್ತಾಟದ ಅರಿವಾಗುತ್ತದೆ. ಎಷ್ಟೊಂದು ಆಕಾರಗಳು, ಅಜ್ಞಾತ ಲೋಕದ ಅನುಭವಗಳು, ಮಾತುಕತೆಗಳ ನಡುವೆ ಇದ್ದಕ್ಕಿದ್ದಂತೆ ಬರುವ ಮೌನದಂತೆ, ಬಳಸಿದ ಪದಗಳ ಎತ್ತರದ ಗೋಡೆಗಳ ನಡುವೆ ಕಾಣುವ ತೆರೆದ ಆಗಸದಂತೆ, ಅವರ ಬರಹದ ಮಾಂತ್ರಿಕ ಮಂತ್ರ ಜಪ ಪದಗಳ ಉಗಮದ ರಹಸ್ಯಗಳನ್ನು ʻಕೇಳಿಸುವʼ ಪ್ರಯತ್ನದಂತೆ ಭಾಸವಾಗುತ್ತದೆ. ಹೊಸ ಕಾಲಕ್ಕೆ ತಕ್ಕ ಹೊಸ ಪರಿಭಾಷೆಯ ಕಥನ ಶೈಲಿ ಎಂದೆನ್ನಬಹುದೇನೋ!.

ʻಎಲ್ಲಿಂದಲೋ ಹಾರಿ ಬಂದುʼ ಪುಸ್ತಕದ ಪುಟಗಳನ್ನು ತಿರುವುತ್ತಿದ್ದಂತೆ, ಅವು ಜಗತ್ತಿನ ಸಾಹಿತ್ಯ, ಕಲೆ, ತತ್ವಜ್ಞಾನ ಎಲ್ಲವನ್ನೂ ನೆನಪಿಗೆ ತಂದು ಅನಂತ ಸಾಧ್ಯತೆಗಳ ಬಹುರೂಪಿ ಚಿತ್ರಗಳನ್ನು ನಮ್ಮ ಮುಂದೆ ಹರಡುತ್ತವೆ. ಇಲ್ಲಿ ಬೋರ್ಹೆಸ್‌ ನ ಮಾಯಾಲೋಕ, ಕಲಾವಿದ ಕೀಪರ್‌ ಕತೆಗಾರ, ಅಕುತಗವನ ಭೀಭತ್ಸಲೋಕ, ಕಾಫ್ಕ ಹಾಗೂ ಬಾಷೆವಿ ಸಿಂಗರ್‌ ನ ಅಸಂಗತ ಲೋಕ-ಹೀಗೆ ಹಲವು ದರ್ಶನಗಳನ್ನು ಕಟ್ಟಿಕೊಡುತ್ತವೆ. ಹಕ್ಕಿಯ ರೆಕ್ಕೆ ಬಡಿತ ಮೂಡಿಸುವ ಸುಳಿಗಾಳಿಯ ಸೌಂದರ್ಯದಿಂದ ಅಣುಬಾಂಬಿನ ಅಣಬೆ ಮೋಡದ ಭಯಾನಕತೆಯವರೆಗೆ ಇಲ್ಲಿನ ಬರಹಗಳು ವ್ಯಾಪಿಸಿವೆ. ಕೆಲವು ಕತೆಗಳನ್ನು ಓದಿದಾಗ ಜೆನ್‌ ಕಥೆ-ಕಾವ್ಯ ಹಾಗೂ ಹೈಕುಗಳು ನೆನಪಾಗುತ್ತವೆ. ಕೆಲವು ತತ್ವಪದಗಳಂತಿದ್ದರೆ, ಅವುಗಳ ಸನಿಹದಲ್ಲಿಯೇ ಕುರಸಾವನ ʼರಾಶೋಮನ್‌ʼ ಚಲನಚಿತ್ರವನ್ನು ನೆನಪಿಸುವ ಬಹು-ದೃಷ್ಟಿಕೋನಗಳ, ಬಹು ಅರ್ಥಗಳ ಬರಹಗಳು ಕಣ್ಣುಮುಂದೆ ಮೂಡುತ್ತವೆ. ಕೆಲವು ರಚನೆಗಳ ಅಂತ್ಯದಲ್ಲಿ ಹೊರಡುವ ನಿಗೂಢ ಸತ್ಯ ಬೆಚ್ಚಿ ಬೀಳಿಸುತ್ತವೆ. ಕಟ್ಟಕಡೆಯ ಸಾಲುಗಳಲ್ಲಿಯೇ ಈ ಕೃತಿಯ ಶಕ್ತಿ ಅಡಗಿದೆ ಎಂದರೆ ಉತ್ಪ್ರೇಕ್ಷೆಯಂತೂ ಅಲ್ಲ. ʻಹಾಗೂ ಹೀಗೂ ಬೆಟ್ಟ ಹತ್ತಿದೆʼ ಎಂಬ ಹತ್ತೊಂಭತ್ತು ಸಾಲಿನ ಕಥೆಯಲ್ಲಿ ಬದುಕೆಂದರೆ ಅದೊಂದು ಆಟ, ಬದುಕುವುದೂ ಒಂದರ್ಥದಲ್ಲಿ ಸಿಗರೇಟ್‌ ಸೇದಿ ಬಿಸುಟಂತೆ, ಪ್ರಶ್ನೆಗಳಿಗಿಂತ ಉತ್ತರವೇ ಘನ, ಪ್ರಶ್ನೆಯೊಂದಿಗೆ ಹೆಣೆದ ಉತ್ತರ-ತಂತ್ರ ಅಚ್ಚರಿ ಮೂಡಿಸುತ್ತದೆಯಲ್ಲದೆ, ಕಮುವಿನ Myth of Sysiphus  ನೆನಪಿಸುತ್ತದೆ. ಕಾರ್ನಾಡರ “ನೋಯುವ ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ ಹೊರಳುವಂತೆ” ಮಾತನ್ನು ಹಲವು ಕಥೆಗಳು ನೆನಪಿಸುತ್ತವೆ.

ಗಿರಿ ಫೋಟೋಸ್‌
ಗಿರಿಧರ್‌ ಸೆರೆಹಿಡಿದ ಛಾಯಾಚಿತ್ರ

ಶೀರ್ಷಿಕೆಯೇ ಇಲ್ಲ!

ಈ ರೀತಿಯ ಮಾದರಿಯೇ ಅವರ ʻಇಡೀ ರಾತ್ರಿ ಸುರಿದ ಮಳೆʼ ಯಲ್ಲಿಯೂ ಮುಂದುವರೆದಿದೆ. ಈ ಕೃತಿಯೂ ಕೂಡ ಮೂರು ಭಾಗಗಳನ್ನೊಳಗೊಂಡು ನೂರಾ ಅರವತ್ತು ಪುಟಗಳಲ್ಲಿ ವಿಸ್ತರಿಸಿಕೊಂಡಿದೆ. ಇದರ ವೈಶಿಷ್ಟ್ಯವೆಂದರೆ, ಪ್ರತಿ ಭಾಗವೂ, ಕನ್ನಡ ಚಲನಚಿತ್ರಗೀತೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಭಾವಗೀತೆಗಳ ಭಾವದ ಹಾಡುಗಳ ಸಾಲುಗಳ ಮೂಲಕದ ಜೀವ ತುಂಬುವ ಯತ್ನವಾಗಿದೆ. ಮೊದಲನೆಯದು “ಬೀಸುವ ತಂಗಾಳಿಯು ತಂಪರೆಯುವ ಬದಲು”, ನಂತರದ್ದು; “ಕಣ್ಣ ನೀರಿನಲಿ, ಮಣ್ಣ ದೋಣಿಯಲಿ”, ಕೊನೆಯದು, “ಸುಳಿಗೆ ದೋಣಿ ಸಿಲುಕಿದಾಗ”…

ತಮ್ಮ ವಿಲಕ್ಷಣ ಶೈಲಿಯ ಬರಹಕ್ಕೆ ಹೆಸರಾದ ಇಪ್ಪತ್ತನೇ ಶತಮಾನದ ಖ್ಯಾತ ಆಂಗ್ಲ ಲೇಖಕ ತತ್ವಜ್ಞಾನಿ, ಕವಿ, ಪತ್ರಕರ್ತ ಗಿಲ್ಬರ್ಟ್‌ ಕೀತ್‌ ಚೆಸರ್‌ಟನ್‌ ಸಾಲುಗಳನ್ನು ಅವರು ಪ್ರೀತಿಸಿದಂತೆ ಕಾಣುತ್ತದೆ. ಈ ಚೆಸರ್‌ಟನ್‌ ಹೇಳುವುದು ಹೀಗೆ: With every step of our lives  we enter into the middle of some story which we are certain to ‘misunderstand’

ಗಿರಿಧರರ ಅತಿ ಸಣ್ಣ ಕಥೆಯ ಝಲಕ್‌ ಹೇಗಿರುತ್ತದೆ ಎಂಬುದಕ್ಕೆ ಇಲ್ಲೊಂದು ಕಥೆ ಇದೆ:

ಸುಳ್ಳು ಹೇಳಬಾರದು ಪುಟ್ಟ

ಗುಮ್ಮಾ ಬರ್ತಾನೆ ಅಂತ ಅಮ್ಮ ಅನ್ನುತ್ತಿದ್ದಳು. ಸುಳ್ಳು ಹೇಳಿದಾಗಲೆಲ್ಲ ಅಮ್ಮನ ನೆನಪಾಗುತ್ತದೆ. ಗುಮ್ಮ ಬರಲಿಲ್ಲ. ಅಮ್ಮ, ನನಗೇಕೆ ಸುಳ್ಳು ಹೇಳಿದೆ?

ಗಿರಿಧರರ ಕಥೆಗಳಲ್ಲಿ ಶೀರ್ಷಿಕೆಯೇ ಇಲ್ಲ. ಮೊದಲ ಸಾಲೇ ದಪ್ಪ ಅಕ್ಷರಗಳಲ್ಲಿ ಮುದ್ರಿತವಾಗಿರುವುದರಿಂದ; ಅದು ಶೀರ್ಷಿಕೆಯೂ ಹೌದು, ಕಥೆಯ ಆರಂಭವೂ ಹೌದು ಎನ್ನುವಂಥ ಕಥನ ಕ್ರಿಯೆ. ʼಒಂದು ಮುಂಜಾನೆ ಹಾಸಿಗೆಯಲ್ಲಿʼ‌ ಕಮುವಿನ ʼದ ಮೆಟಾಮಾರ್ಫಸಿಸ್‌ʼ ನೆನಪಿಸುತ್ತದೆ. “ನಾನಾಗ ಚಿಕ್ಕ ಹುಡುಗ ಯಾಕೆ ಅಂತ ಅರ್ಥವಾಗಲಿಲ್ಲ”, “ಅವನಾರು”, ಕೋಗಿಲೆ ಕುಂಚ ಕಲಾವಿದನಾಯಿತು, ಹಾಡುವುದು ನಿಂತಿತು” ಎನ್ನುವಂಥ ಒಗಟಿನಂಥ ಕೊನೆಯ ಸಾಲುಗಳು ಹೊಸದೊಂದು ಲೋಕವನ್ನು ಓದುಗರ ಮುಂದೆ  ಬಿಚ್ಚಿಟ್ಟು, ಮುಂದಿನ ಕತೆ ಓದಲು ಒಂದು ರೀತಿಯ ʻಬಿಡುವುʼ ಒದಗಿಸಿ, ಯೋಚಿಸುವಂತೆ ಮಾಡುತ್ತವೆ.

ರಾಘವೇಂದ್ರ ಖಾಸನೀಸರ ನೆನಪು

ಗಿರಿಧರ್‌ ಖಾಸನೀಸ್‌ ಎಂದ ತಕ್ಷಣ ನೆನಪಾಗುವುದು ಹದಿನೆಂಟು ವರ್ಷಗಳ ಹಿಂದೆ ಕನ್ನಡದ ಓದುಗರನ್ನು ʻತಬ್ಬಲಿʼ ಮಾಡಿದ ರಾಘವೇಂದ್ರ ಖಾಸನೀಸರು. ʻತಬ್ಬಲಿಗಳುʼ ಹಾಗೂ ʻಹೀಗೂ ಇರಬಹುದುʼ ಕಥೆಯ ಮೂಲಕ ಕನ್ನಡ ಓದುಗರ ಅಂತರಂಗವನ್ನು ಪ್ರವೇಶಿಸಿದ, ನಮ್ಮ ಸುತ್ತಮುತ್ತಲೂ ನಡೆಯುವುದೆಲ್ಲ ಪೂರ್ವ ನಿಯೋಜಿತ ಘಟನೆಗಳು” ಎಂದು ತಮ್ಮ ಕಥೆಗಳ ಮೂಲಕ, ಅನುಭವವಾಗಿಸಿದ ರಾಘವೇಂದ್ರ ಖಾಸನೀಸರು ನೆನಪಾದರು. “ನಿಮಗೂ ರಾಘವೇಂದ್ರ ಖಾಸನೀಸರಿಗೂ ಯಾವ ರೀತಿಯ ಸಂಬಂಧ?” ಎಂದು ಗಿರಿಧರ ಅವರನ್ನು ಕೇಳಿದರೆ. “ನನಗೆ ರಾಘವೇಂದ್ರ ಖಾಸನೀಸರು ಗೊತ್ತು. ಅವರ ಕಥೆಗಳನ್ನು ಓದಿದ್ದೇನೆ. ಆದರೆ ನನಗೂ ಅವರಿಗೂ ಯಾವ ಬಾದರಾಯಣ ಸಂಬಂಧವೂ ಇಲ್ಲ. ಆದರೆ ಅವರ ಕಥೆಗಳು ನನಗೆ ತುಂಬಾ ಇಷ್ಟ” ಎನ್ನುತ್ತಾರೆ ಗಿರಿಧರ್‌.

ಮಾತು, ಭೂಗೋಲದ ಮೇಲೊಂದು ಸುತ್ತು

ಗಿರಿಧರರ ಜೊತೆಗೆ ಮಾತನಾಡುವುದೆಂದರೆ, ಒಮ್ಮೆ ಭೂಗೋಲದ ಮೇಲೊಂದು ಸುತ್ತು ಹಾಕಿದಂತೆ. ಅವರ ಮಾತುಗಳೆಂದರೆ ಅದೊಂದು ರೀತಿಯ ಕಥೆಗಳೇ. ʼಈ ದಿನʼಕ್ಕಾಗಿ ಅವರನ್ನು ಮಾತಿಗೆಳೆದಾಗ; “ಬರೆಯುವುದೆಂದರೆ ನನಗೆ ಚಿಕ್ಕಂದಿನಿಂದಲೂ ಪ್ರೀತಿ. ನನ್ನ ಶಾಲಾ ದಿನಗಳಲ್ಲಿ, ಕಾಲೇಜು ದಿನಗಳಲ್ಲಿ ಪದ್ಯ, ಗದ್ಯ ನಾಟಕಗಳನ್ನು ಬರೆಯುತ್ತಿದ್ದೆ. ಆದರೆ ಮೂವತ್ತೈದು ವರ್ಷಗಳ ಹಣಕಾಸಿನ ಬ್ಯಾಂಕಿಂಗ್‌ ಜಗತ್ತಿಗೆ ಅಂಟಿಕೊಂಡ ಕಾರಣ ಬರವಣಿಗೆಗೆ ಕಾಲ ಹೊಂದಿಸುವುದು ಕಷ್ಟವಾಯಿತು. ಇಪ್ಪತ್ತೊಂದು ವರ್ಷಗಳ ಹಿಂದೆ ಐಡಿಬಿಐ ಹಣಕಾಸು ಸಂಸ್ಥೆಯಲ್ಲಿ  ಜನರಲ್‌ ಮ್ಯಾನೇಜರ್‌ ಆಗಿ ನಿವೃತ್ತನಾದ ನಂತರ ದೃಶ್ಯಕಲೆಯ ಬಗ್ಗೆ ಬರೆಯುತ್ತಾ ಕಲಾ ವಿಮರ್ಶಕ ಎನ್ನಿಸಿಕೊಂಡೆ. ಬರೆದದ್ದೆಲ್ಲ ಹೆಚ್ಚೂ ಕಡಿಮೆ ಇಂಗ್ಲಿಷ್‌ ನಲ್ಲಿಯೇ ಎಂದು ಹೇಳಬಹುದು. ಕನ್ನಡ ಲೋಕದ ಅದರಲ್ಲಿಯೂ ಸಾಹಿತ್ಯ ಲೋಕದ ಸಂಬಂಧ ಕ್ಷೀಣವಾಯಿತು. ಕೋವಿಡ್‌ ಕಾಲಾವಧಿಯಲ್ಲಿ ಜಗತ್ತು ಸ್ಥಗಿತಗೊಂಡಾಗ ನನ್ನನೊಳಗಿನ ಬರಹಗಾರನಿಗೆ ಮತ್ತೆ ಎಚ್ಚರವಾಗಿರಬೇಕು. ಮತ್ತೆ ಅಂದಿನಂತೆ ಬರೆಯಲು ಸಾಧ್ಯವೇ ಎಂದು ಯೋಚಿಸಿದೆ. ನನಗೆ ನಾನೇ ಸವಾಲು ಹಾಕಿಕೊಂಡೆ. ಒಂದು ದಿನಕ್ಕೆ ಒಂದು ಪುಟವನ್ನಾದರೂ ಬರೆಯಬೇಕೆಂಬ ನಿಯಮವನ್ನು ನಾನೇ ಹೇರಿಕೊಂಡೆ. ಆಗ ಎಲ್ಲವೂ ಮತ್ತೆ ಹಳಿಗೆ ಬಂತು” ಎಂದು ತಮ್ಮ ಬಿಳಿಗಡ್ಡವನ್ನು ಕೆರೆಯುತ್ತಾ, ಕನ್ನಡಕದೊಳಗಿನ ಕಣ್ಣಲ್ಲಿ ನಕ್ಕರು.

ಗಿರಿ

ಹೈಕು ಶೈಲಿಯ ಪದ್ಯಗಳೆಂದರು…

ನಾಲ್ಕೂವರೆ ದಶಕದ ನಂತರ ಬರೆದಾಗ. ಅದು ಬರಹವಾಗಿದೆಯೋ ಇಲ್ಲವೋ ಎಂಬ ಜಿಜ್ಞಾಸೆ ನನ್ನನ್ನು ಕಾಡತೊಡಗಿತು. ಬರೆಯುವಾಗ ಯಾವುದೇ ಚೌಕಟ್ಟು, ಹಾಕಿಕೊಳ್ಳದೆ, ಇದು ಸಾಹಿತ್ಯದ ಯಾವ ಜೀನರ್‌ ಗೆ ಸೇರುತ್ತದೆ ಎಂದೆಲ್ಲ ಯೋಚಿಸಲಿಲ್ಲ. ನನ್ನ ನೆನಪು ಮತ್ತು ಅನುಭವವನ್ನು ಆಧರಿಸಿ ಬರೆಯತೊಡಗಿದೆ. ಬದುಕೆನ್ನುವುದು ಕೇವಲ ಒಂದು ಸರಳ ರೇಖೆಯಂಥದ್ದಲ್ಲ. ಅನುಭವ –ಅನುಭಾವಗಳ ಒಂದು ವಿಕ್ಷಿಪ್ತ ಲೋಕವದು, surrealism ಹಾಗೂ unrealism ವ್ಯಕ್ತಿಯನ್ನು ರೂಪಿಸುತ್ತದೆ ಎಂದು ನಾನು ನಂಬಿದ್ದೇನೆ. ನನ್ನ ಕಥೆಗಳಲ್ಲಿ ಕಾಣಿಸುವುದು ಆ ಭಾವಗಳೇ.  ನನ್ನ ಬರಹಗಳನ್ನು ಓದಿದ  ಕೆಲವು ಸ್ನೇಹಿತರು. ಕೆಲವರು ಇದನ್ನು ಜಪಾನಿನ ʼಹೈಕುʼ ಶೈಲಿಯ ಪದ್ಯಗಳೆಂದರು. ಇನ್ನು ಕೆಲವರು ಇವನ್ನು ಗಪದ್ಯವೆಂದರು. ಬರೆಯಲು ಅರಂಭಿಸಿದಾಗ ನನ್ನನ್ನು ಬೆರಗುಗೊಳಿಸಿದ್ದು ಅನುಭಾವದಂಥ ಕಥನ, ಅದು ಕೂಡ ಕೆಲವು ಸಾಲುಗಳಲ್ಲಿ. ನಿಮಗೆ ನಿಜ ಹೇಳಬೇಕೆಂದರೆ, ನಾನು ಬರೆದದ್ದು ಗದ್ಯವೋ ಪದ್ಯವೋ ಎಂಬುದು ಕೂಡ ನನಗೆ ಗೊತ್ತಿಲ್ಲ. ನಮ್ಮ ಮನೆಯ ಕೆಲಸದವಳು ನನ್ನ ಕಥೆಗಳಲ್ಲಿ ಕಾಣಿಸಿಕೊಳ್ಳತೊಡಗಿದಳು. ಅವಳಿಂದಲೇ ಹಲವು ಕಥೆಗಳು ಹುಟ್ಟಿಕೊಂಡವೆಂದರೆ ತಪ್ಪಾಗಲಿಕ್ಕಿಲ್ಲ. ಹೊರ ಜಗತ್ತನ್ನು ನನ್ನ ಒಳಜಗತ್ತಿನೊಂದಿಗೆ ಒಟ್ಟಾಗಿಸಿದವಳು ಆಕೆ. ಬರಹಗಾರರಾಗಿ ನಮಗೆ ಸಿಕ್ಕುವುದು second hand information. ಆದರೆ ಆಕೆ ನಿಜಕಾಲಘಟ್ಟದಲ್ಲಿ ನನಗೆ ಮಾಹಿತಿಗಳನ್ನು ನೀಡುತ್ತಿದ್ದಳು. ನನ್ನ ತಂದೆಯ ಅಗಲಿಕೆ. ನನ್ನನ್ನು ಗಾಢವಾಗಿ ಕಾಡಿದ ಅಗಲಿಕೆಯಿಂದ ಹೊರಬರಲು ನನಗೆ ಸಾಕಷ್ಟು ಕಾಲವೇ ಬೇಕಾಯಿತು. ಹಾಗಾಗಿ ನನ್ನ ಕಥೆಗಳಲ್ಲಿ ನನ್ನ ತಂದೆಯ ಛಾಯೆ ಕಾಣಿಸಿಕೊಳ್ಳುತ್ತದೆ. ಆದರೆ ಬೇರೆ ಬೇರೆ ರೂಪಗಳಲ್ಲಿ. ನನ್ನ ಪ್ರಕಾರ ಕಲೆಯ ಎಲ್ಲ ಪ್ರಕಾರಗಳೂ ಒಂದಲ್ಲ ಒಂದು ಅರ್ಥದಲ್ಲಿ ಆತ್ಮಕಥನಗಳ ಪ್ರತಿರೂಪ. ನನ್ನ ವಿವರಣೆ ತೀರಾ ದೀರ್ಘವಾಯಿತೇನೋ ಅಲ್ಲವೇ? ಎಂದು ಕೆಣಕಿದರು.

ಹಕ್ಕಿ ಹೇಳಿದ ಕಥೆಗಳು

ʼಎಲ್ಲಿಂದಲೋ ಹಾರಿ ಬಂದುʼ ಹುಟ್ಟಿದ ಕ್ಷಣವನ್ನು ಅವರು ನೆನೆಯುವುದು ಹೀಗೆ… “ಕೋವಿಡ್‌ ಕಾಲಾವಧಿಯಲ್ಲಿ ಹೊರಗೆ ಕಾಲಿಡಲೂ ಸಾಧ್ಯವಿಲ್ಲದ ಸಂದರ್ಭದಲ್ಲಿ ನನ್ನ ಮೆಚ್ಚಿನ ಜಾಗ ಸಂಜಯ ನಗರದಲ್ಲಿರುವ ನಮ್ಮ ಕಟ್ಟಡದ ತಾರಸಿ. ಅಲ್ಲೊಂದು ಹೊಸ ಪ್ರಪಂಚವೇ ನನ್ನ ಕಣ್ಣಮುಂದೆ ತೆರೆದುಕೊಂಡಿತು. ಎಲ್ಲೆಲ್ಲಿಂದಲೋ ಹಾರಿಬಂದ ಹಕ್ಕಿಗಳು  ಅಲ್ಲಿ ತಮ್ಮ ಸಂಸಾರ ನಡೆಸುತ್ತಿದ್ದವು. ಮೊದಮೊದಲು ಅವುಗಳಿಗೆ ಕಿರಿಕಿರಿ ಸಿಟ್ಟು ಎಲ್ಲ ಬರುತ್ತಿತ್ತು. ಭಯವೂ ಆಗುತ್ತಿದ್ದಂತೆ ಕಾಣುತ್ತಿತ್ತು. ದಿನಕಳೆದಂತೆ ಅವು ಗೆಳೆಯರಂತಾದವು. ನಾನು ಅವುಗಳೊಂದಿಗೆ ನಿಧಾನವಾಗಿ ಸಂವಾದಕ್ಕೆ ತೊಡಗಿದೆ. ನನ್ನಿಂದ ತುಸು ದೂರದಲ್ಲಿ ಕೂತು ನಿಂತು ಅವು ನನ್ನೊಂದಿಗೆ ಮಾತನಾಡುತ್ತಿದಂತೆ ಅನ್ನಿಸತೊಡಗಿತು. ಅವುಗಳೊಂದಿಗೆ ನನಗೆ ಅರಿವಿಲ್ಲದಂತೆ ಹಲವು ಕತೆಗಳಿಗೆ ಅವೇ ಸ್ಫೂರ್ತಿ. ಹಾಗಾಗಿ ಈ ಕಥೆಗಳೆಲ್ಲ ಅವುಗಳಿಗೆ ಅರ್ಪಿಸಬೇಕು. ಹಾಗಾಗಿ ನನ್ನ ಮೊದಲ ಪುಸ್ತಕಕ್ಕೆ ʼಎಲ್ಲಿಂದಲೋ ಹಾರಿ ಬಂದುʼ ಎಂಬ ಹಣೆಪಟ್ಟಿ ಹಚ್ಚಿದೆ….” ಎಂದರು.

Two is company PHOTO BY GIRIDHAR KHASNIS
ಗಿರಿಧರ್‌ ಸೆರೆಹಿಡಿದ ಛಾಯಾಚಿತ್ರ

ಛಾಯಾಚಿತ್ರ ಲೋಕದೊಳಗೊಂದು ಸುತ್ತು

ಗಿರಿಧರ ಖಾಸನೀಸ್‌ ಅವರು ತೆಗೆದು ಚಿತ್ರಗಳ ಕುರಿತು ಮಾತನಾಡಿದ್ದು, ಅವರ ಛಾಯಾಚಿತ್ರಗಳ ಪ್ರದರ್ಶನ “Of Silence, Solitude, and Slow Time” ಸಂದರ್ಭದಲ್ಲಿ ಅವರ ಕಪ್ಪು ಬಿಳುಪಿನ ಛಾಯಾಚಿತ್ರ ತೋರಿಸುತ್ತಾ ಅವರು “Imitation is the best form of flattery” (ಅನುಕರಿಸುವುದು ಮೆಚ್ಚುಗೆಯ ಇನ್ನೊಂದು ರೂಪ) ಎಂದರು. ಇಡೀ ಪ್ರದರ್ಶನ ರಘುರಾಯ್‌ ಅವರಿಂದ ಪಡೆದ ಸ್ಫೂರ್ತಿ ಎಂದು ಅವರು ಒಪ್ಪಿಕೊಂಡರು. ಆದರೆ ಈ ಯಾವುದೇ ಚಿತ್ರವನ್ನು ನಾನು ಉದ್ದೇಶಪೂರ್ವಕವಾಗಿ ಸೆರೆ ಹಿಡಿದದ್ದಲ್ಲ. ಅವು ಘಟಿಸಿದವು ಅಷ್ಟೇ. ಎಂದರು. “ನನ್ನ ಪ್ರಕಾರ ಒಂದು ಒಳ್ಳೆ ಛಾಯಾಚಿತ್ರದ ಸ್ವರೂಪ ಮತ್ತು ಮೌಲ್ಯಗಳಲ್ಲಿ ಸೂಕ್ಷ್ಮವಾದ ಲಯವಿರುತ್ತದೆ. ರಘುರಾಯ್‌ ಅವರ ಮಾತುಗಳಲ್ಲೇ ಹೇಳಬಹುದಾದರೆ, “ಚಿತ್ರವೊಂದು ಸಾವಿರ ಶಬ್ದಕ್ಕೆ ಸಮ ಎಂಬ ಮಾತಿದೆ. ಸಾವಿರ ಶಬ್ದವೆಂದರೆ ಗದ್ದಲ. ಒಪ್ಪಿಕೊಳ್ಳಬಹುದಾದ ಮಾತೆಂದರೆ ಚಿತ್ರದಲ್ಲಿ ಕಾಣಿಸುವ ಕೇಳಿಸುವ ಮೌನ” ಎಂದು ಪರೋಕ್ಷವಾಗಿ ರಘುರಾಯ್‌ ತಮ್ಮ ಗುರುವೆಂದು ಒಪ್ಪಿಕೊಳ್ಳುತ್ತಾರೆ.

ಅವರ ಆ ಪ್ರದರ್ಶನದಲ್ಲಿದ್ದ ಚಿತ್ರಗಳು ಡಿಜಿಟಲ್‌ ಕ್ಯಾಮೆರಾ ಬರುವ ಮುಂಚಿನ ಅನಲಾಗ್‌ ಕಾಲದ್ದು. ನಮ್ಮ ಕಾಲದ ಡಾರ್ಕ್‌ ರೂಮ್‌ ನಲ್ಲಿ ನಮ್ಮ ಕೈಚಳಕದಿಂದ ರೂಪಗೊಂಡದ್ದು”.. ಹೈಸ್ಕೂಲ್‌ ನಲ್ಲಿ ಕಲಿಯುತ್ತಿದ್ದಾಗ ನನ್ನ ಸೋದರ ಸಂಬಂಧಿಯೊಬ್ಬ ನನಗೆ Click III ಕ್ಯಾಮೆರಾ ಕೊಡುಗೆ ನೀಡಿದ. ಅದರಲ್ಲಿ ತೆಗೆದ ಕೆಲವು ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಅಂದಿನಿಂದ ಇಂದಿನವೆರಗೂ ಈ ರೀತಿ ನಿರುದ್ದಿಶ್ಯವಾಗಿ ಛಾಯಾ ಚಿತ್ರಗಳನ್ನು ತೆಗೆಯುವುದು ನನ್ನ ಬದುಕಿನ ಭಾಗವಾಗಿದೆ. ಅದರ ಪರಿಣಾಮವೇ ಈ ಛಾಯಾಚಿತ್ರ ಪ್ರದರ್ಶನ “ ಎಂದರು.

“ಕೆಲವು ವರ್ಷಗಳ ಹಿಂದೆ ರಘುರಾಯ್‌ ಅವರನ್ನು ಇಂಗ್ಲಿಷ್‌ ಪತ್ರಿಕೆಗಳಿಗಾಗಿ ಸಂದರ್ಶಿಸಿದೆ. ಆಗ ಅವರೊಂದಿಗೆ ಮಾತನಾಡುತ್ತಾ…ʼನಾನು ಒಂದು ಕಾಲದಲ್ಲಿ ಮನೆಯಿಂದ ಓಡಿ ಬಂದು ನಿಮ್ಮೊಂದಿಗೆ ಛಾಯಾಗ್ರಹಣ ಸಹಾಯಕನಾಗಿ ಕೆಲಸ ಕಲಿಯಬೇಕೆಂದು ಯೋಚಿಸಿದ್ದೆ. ಆದರೆ ಬದುಕು ಎಲ್ಲೆಲ್ಲೋ ಕವಲೊಡೆದು, ಇನ್ಯಾವುದೋ ದಡಕ್ಕೆ ಎಸೆಯಿತು. ಇಂದು ನಿಮ್ಮೊಂದಿಗೆ ಮಾತನಾಡಿ ಸಂದರ್ಶಿಸಲು ಕುಳಿತಿದ್ದೇನೆʼ ಎಂದೆ. ಆಗ ರಘುರಾಯ್‌ ʼಈಗಲೂ ತಡವಾಗಿಲ್ಲ. ದೆಹಲಿಯ ಸಮೀಪವಿರುವ ನನ್ನ ತೋಟದ ಮನೆಯ ಸ್ಟೂಡಿಯೋ ಬಾಗಿಲು ನಿನಗಾಗಿ ತೆರೆದಿದೆ. ನಾನಿಲ್ಲದಿದ್ದರೂ, ನೀನು ಅಲ್ಲಿ ಬಂದು ಇರಬಹುದು ನಿನಗನ್ನಿಸಿದ್ದನ್ನು ಮಾಡಬಹುದು. ನಿನಗೆ ಛಾಯಾಗ್ರಾಹಕನ ಕಣ್ಣು, ಒಳನೋಟ ಹಾಗೂ ಮನುಷ್ಯನ ಅಂತರಂಗವನ್ನು ತೆರೆದಿಡುವ ಕಲೆ ಸಿದ್ಧಿಸಿದೆ….ʼ ಎಂದರು. ನಾನು ಮೌನಕ್ಕೆ ಜಾರಿದೆ” ಎಂದು ಗಿರಿಧರ ಖಾಸನೀಸ್‌ ತಮ್ಮ ಸಹಿಯಂಥ ಸಿಹಿಯಾದ ಮುಗುಳ್ನಗೆಯ ಕಪ್ಪು ಬಿಳುಪಿನ ಚಿತ್ರ ನೀಡಿದರು.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...