ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಬಹುಬೇಗನೆ ವಿಡಿಯೊ ಗೇಮ್‌ಗಳಿಗೆ ಮನಸೋಲುತ್ತಿದ್ದಾರೆ. ಅದರಲ್ಲೂ ಕೆಲವು ಹಿಂಸಾತ್ಮಕ ವಿಡಿಯೋ ಗೇಮ್‌ಗಳು ಅವರನ್ನು ಹೆಚ್ಚು ಸೆಳೆಯುತ್ತಿವೆ. ಈಗೀನ ಮಕ್ಕಳಿಗೆ ಮೈದಾನದಲ್ಲಿ ಹೋಗಿ ಆಡುವುದಕ್ಕಿಂತ ಗ್ಯಾಜೆಟ್‌ಗಳಲ್ಲಿ ಆಡುವುದೇ ಪ್ರಿಯವಾಗಿದೆ.
‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ – ದೇಶದ ಭವಿಷ್ಯವು ಇಂದಿನ ಮಕ್ಕಳ ಶಿಕ್ಷಣ, ಸಂಸ್ಕಾರ ಮತ್ತು ಆರೋಗ್ಯದ ಮೇಲೆ ಅವಲಂಬಿತವಾಗಿದೆ ಎಂದು ಸಾರುವ ಮಹತ್ವದ ನಾಣ್ಣುಡಿ. ಪ್ರತಿಯೊಂದು ದೇಶದ ಭವಿಷ್ಯವು ಆ ದೇಶದ ಮಕ್ಕಳು ಮತ್ತು ಯುವಕರ ಕೈಯಲ್ಲಿದೆ ಎಂಬುದು ಅಕ್ಷರಶಃ ಸತ್ಯ. ಆದರೆ, ಇಂದಿನ ಕಾಲಮಾನದಲ್ಲಿ ಆ ಭವಿಷ್ಯವೇ ನಿಧಾನವಾಗಿ ಮೊಬೈಲ್ ಪರದೆ ಹಿಂದೆ ಸಿಲುಕುತ್ತಿರುವುದು ಆತಂಕಕಾರಿ ಸಂಗತಿ. ಮೊಬೈಲ್ ಇಲ್ಲದೇ ಊಟ ಸೇವಿಸುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಮಕ್ಕಳು ಮೊಬೈಲ್ ದಾಸರಾಗಿದ್ದಾರೆ. ಆಟ, ಸಂಭಾಷಣೆ, ಕಲಿಕೆ – ಎಲ್ಲವೂ ಮೊಬೈಲ್ ಪರದಿಯಾಚೆಗೆ ಸರಿದಿರುವ ಈ ಕಾಲಘಟ್ಟದಲ್ಲಿ ಮಕ್ಕಳ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆ ಗಂಭೀರ ಅಪಾಯದ ಅಂಚಿನಲ್ಲಿದೆ.
ಅಂಗೈಯಲ್ಲಿ ಇಡೀ ಜಗತ್ತನ್ನು ತೋರಿಸುವ ಸ್ಮಾರ್ಟ್ ಫೋನ್‌ಗಳು ನಮ್ಮ ಬದುಕಿನ ಭಾಗವೇ ಆಗಿಹೋಗಿವೆ. ಸಂವಹನದ ಪ್ರಾಥಮಿಕ ಉದ್ದೇಶದೊಂದಿಗೆ ಅಭಿವೃದ್ಧಿಗೊಂಡ ಮೊಬೈಲ್‌ಗಳು ಇದೀಗ ಸ್ಮಾರ್ಟ್ ಫೋನ್‌ಗಳಾಗಿ ರೂಪಾಂತರಗೊಂಡು ನಮ್ಮ ಬದಕನ್ನು ಸ್ಮಾರ್ಟ್ ಆಗಿಸಿವೆ. ಆದರೆ, ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆ ಮತ್ತು ಅದು ಒದಗಿಸುವ ಅಪರಿಮಿತ ಸೌಲಭ್ಯ, ಗೇಮಿಂಗ್ ಎಲ್ಲವೂ ಇಂದಿನ ಯುವಜನತೆಯನ್ನು ಅಡಿಕ್ಟ್ ಆಗುವಂತೆ ಮಾಡಿವೆ. ಸಕಾರಾತ್ಮಕ ಉದ್ದೇಶಕ್ಕೆ ಬಳಕೆಯಾಗಬೇಕಿದ್ದ ಈ ಸ್ಮಾರ್ಟ್‌ಫೋನ್‌ಗಳು, ವಿಡಿಯೊ ಗೇಮ್‌ಗಳಿಂದಾಗಿ ಅನೇಕರ ಜೀವವನ್ನು ತೆಗೆಯುವ ಸಾಧನಗಳಾಗಿ ಬದಲಾಗುತ್ತಿರವುದು ದುರಂತ.
ಹೌದು, ಪಬ್ ಜಿ, ಬ್ಲೂ ವೇಲ್, ಕೊರಿಯನ್ ಆನ್‌ಲೈನ್ ಗೇಮ್‌ಗಳಂತಹ ಅಪಾಯಕಾರಿ ಮೊಬೈಲ್ ಗೇಮ್‌ಗಳ ಗೀಳಿಗೆ ಸಿಲುಕಿ ನೈಜ ಬದುಕಿನಿಂದ ಡಿಜಿಟಲ್ ಜಗತ್ತಿಗೆ ಮಕ್ಕಳು ದಾಸರಾಗುತ್ತಿದ್ದಾರೆ. ನೈಜ ಜೀವನದಿಂದ ದೂರವಾಗುತ್ತಿದ್ದಾರೆ. ಆಟವೆಂದು ಆರಂಭವಾದ ಈ ವ್ಯಸನ, ಕ್ರಮೇಣ ಮಾನಸಿಕ ಒತ್ತಡ, ಒಂಟಿತನ ಮತ್ತು ಭ್ರಮೆಗಳಾಗಿ ಮಾರ್ಪಟ್ಟು, ಅನೇಕ ಮಕ್ಕಳ ಅಮೂಲ್ಯ ಜೀವವನ್ನೇ ಕಿತ್ತುಕೊಳ್ಳುತ್ತಿದೆ. ಇದು ಕೇವಲ ಆಟದ ಸಮಸ್ಯೆಯಲ್ಲ, ಮಕ್ಕಳ ಜೀವನದ ಮೇಲಿನ ಮೌನ ದಾಳಿಯಾಗಿದೆ.
ಆನ್‌ಲೈನ್ ಗೇಮಿನ ಗೀಳಿಗೆ ಒಳಗಾಗಿ ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ಪ್ರಾಣವನ್ನು ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶದ ಘಾಜಿಯಾಬಾದನಲ್ಲಿ ನಡೆದಿದೆ. ಮೂವರು ಸಹೋದರಿಯರು ಗಾಜಿಯಾಬಾದ್‌ನ ತಿಲಾ ಮಾಡ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಭಾರತ್ ಸಿಟಿ ಸೊಸೈಟಿಯ ಬಿ 1 ಟವರ್‌ನಲ್ಲಿ ವಾಸಿಸುತ್ತಿದ್ದರು.

ಮೃತ ಬಾಲಕಿಯರನ್ನು ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದೆ. ಟಾಸ್ಕ್ ಆಧಾರಿತ ಆನ್‌ಲೈನ್ ಕೊರಿಯನ್ ಲವ್ ಗೇಮ್‌ನ ಚಟಕ್ಕೆ ಬಿದ್ದಿದ್ದ ಮೂವರು ಸಹೋದರಿಯರು ಕೊರಿಯಾದ ಬಗ್ಗೆ ತೀವ್ರವಾದ ಹುಚ್ಚು ಅಂಟಿಸಿಕೊಂಡಿದ್ದರು.
ಮಕ್ಕಳ ಅತಿಯಾದ ಮೊಬೈಲ್ ವೀಕ್ಷಣೆಗೆ ಬೇಸತ್ತಿದ್ದ ಪೋಷಕರು ಮಕ್ಕಳಿಗೆ ಮೊಬೈಲ್ ಅತಿಯಾಗಿ ಬಳಸದಂತೆ ಇತ್ತೀಚೆಗೆ ನಿರ್ಬಂಧಿಸಿದ್ದರು. ಇದರಿಂದ ಕಿರಿಕಿರಿಗೊಂಡ ಮೂವರು ಸಹೋದರಿಯರು ಬುಧವಾರ ನಸುಕಿನ 2.45ರ ವೇಳೆಗೆ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸುತ್ತದೆ.
ಮತ್ತೊಂದು ವರದಿಯ ಪ್ರಕಾರ, ಕೊರಿಯನ್ ಗೇಮ್‌ನ ಕೊನೆಯ ಮತ್ತು 50ನೇ ಆಟ ಆತ್ಮಹತ್ಯೆಯಾಗಿತ್ತು. ಈ ಕಾರಣಕ್ಕೇ ಮಕ್ಕಳು ಆತ್ಮಹತ್ಮೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ನೀರು ಕುಡಿಯುವ ನೆಪದಲ್ಲಿ ಎದ್ದು ಮತ್ತೆ ರೂಮ್‌ನ ಬೀಗ ಹಾಕಿಕೊಂಡ ಮಕ್ಕಳು ಬಾಲ್ಕ್‌ನಿಯಿಂದ ಕೆಳಗೆ ಹಾರಿದ್ದಾರೆ. ಇಬ್ಬರು ಸಹೋದರಿಯರು ಪರಸ್ಪರ ಕೈ ಹಿಡಿದು ಒಟ್ಟಿಗೆ ಕೆಳಗೆ ಜಿಗಿದಿದ್ದರೇ, ಮೂರನೆಯವಳು ಮನೆಯ ಪ್ರಾರ್ಥನಾ ಕೋಣೆಯ ಕಿಟಕಿಯಿಂದ ಒಂಟಿಯಾಗಿ ಹಾರಿದ್ದಾಳೆ ಎಂದು ತನಿಖೆ ವೇಳೆ ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಹೋದರಿಯರನ್ನ ಹತ್ತಿರದ ಕಾಲೋನಿಯಲ್ಲಿರುವ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಅವರನ್ನು ಪರೀಕ್ಷಿಸಿದ ವೈದ್ಯರು, ಇವರೆಲ್ಲ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಈ ಘಟನೆ ಘಾಜಿಯಾಬಾದ್ನಲ್ಲಿ ಸಂಚಲನ ಸೃಷ್ಟಿಸಿದೆ. ಹಲವು ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ಆನ್‌ಲೈನ್ ವ್ಯಸನದ ಅಪಾಯಗಳು ಮತ್ತು ಯುವ ಮನಸ್ಸುಗಳ ಮೇಲೆ ಅದರ ಪ್ರಭಾವದ ಬಗ್ಗೆ ಅವರೆಲ್ಲ ಚಿಂತಿತರಾಗಿದ್ದಾರೆ.
‘ಟ್ರು ಲೈಫ್ ಸ್ಟೋರಿ, ಇಸ್ ಡೈರಿ ಮೇ ಜೋ ಕುಚ್ ಭೀ ಲಿಖಾ ಹೇ, ವೊ ಸಬ್ ಫಡ್ಲೊ, ಕ್ಯುಂಕಿ ಯೆ ಸಬ್ ಸಚ್ ಹೇ. ರೀಡ್ ನೌ… ಐ ಆಮ್ ರೀಯಲಿ ಸಾರಿ… ಸಾರಿ ಪಪ್ಪಾ…’ಎಂದು ಬರೆದ ಚಿಕ್ಕ ಪುಟದ ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿದೆ. ಆ ಡೆತ್ನೋಟ್ನಲ್ಲಿ ಕಣ್ಣೀರಿನ ಎಮೋಜಿಯನ್ನು ಸಹ ಬರೆಯಲಾಗಿದೆ. ಸದ್ಯ ಪೊಲೀಸರು ಡೆತ್ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ರೂಮಿನಲ್ಲಿ ನೆಲದ ಮೇಲೆ ಹರಡಿದ್ದ ಕುಟುಂಬ ಸದಸ್ಯರ ಫೋಟೋಗಳು ಸಹ ಕಂಡುಬಂದಿವೆ.
ಮಕ್ಕಳು ಬರೆದಿಟ್ಟ 8 ಪುಟಗಳಲ್ಲಿದ್ದ ಡೈರಿಯಲ್ಲಿ, ಪಾಪಾ ಕ್ಷಮಿಸಿ, ಹಮ್ ಕೊರಿಯಾ ನಹಿ ಛೋಡ್ ಸಕ್ತೇ. ಕೊರಿಯಾ ಹಮಾರಿ ಜಿಂದಗಿ ಹೈ, ಕೊರಿಯಾ ಹಮಾರಿ ಜಾನ್ ಹೈ, ಔರ್ ಆಪ್ ಹಮೇ ನಹಿ ಛುಡಾ ಸಕ್ತೇ. ಕ್ಷಮಿಸಿ, ಹಮ್ ಜಾನ್ ದೇ ರಹೇ ಹೈ” (ಪಪ್ಪಾ, ಕ್ಷಮಿಸಿ. ನಾವು ಕೊರಿಯಾವನ್ನು ಬಿಡಲು ಸಾಧ್ಯವಿಲ್ಲ. ಕೊರಿಯಾ ನಮ್ಮ ಜೀವನ, ಕೊರಿಯಾ ನಮ್ಮ ಆತ್ಮ, ಮತ್ತು ನೀವು ಅದರಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಕ್ಷಮಿಸಿ, ನಾವು ನಮ್ಮ ಜೀವನವನ್ನು ತ್ಯಜಿಸುತ್ತಿದ್ದೇವೆ) ಎಂದು ಬರೆದುಕೊಂಡಿದ್ದಾರೆ.

“ಮನೆಯಲ್ಲಿ ಹುಡುಗಿಯರು ಬಳಸುತ್ತಿದ್ದ ವಸ್ತುಗಳನ್ನು ಪರಿಶೀಲಿಸುತ್ತಿದ್ದಾಗ ಈ ಡೈರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರು ಸಹೋದರಿಯರು ಕಳೆದ ಎರಡು ವರ್ಷಗಳಿಂದ ಶಾಲೆಗೆ ಹೋಗಿಲ್ಲ, ಮನೆಯಲ್ಲಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಥಿಕ ಸಮಸ್ಯೆಯ ಕಾರಣ, ತಂದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಎಂದಿಗೂ ತಲೆಕೆಡಿಸಿಕೊಂಡಿರಲಿಲ್ಲ. ಕೊರಿಯನ್ ಕಾರ್ಯಕ್ರಮಗಳನ್ನು ನೋಡದಂತೆ ಒತ್ತಡ ಹೇರಿದ್ದ ತಮ್ಮ ತಂದೆಯ ಮೇಲೆ ಅಸಮಾಧಾನಗೊಂಡಿದ್ದರು ಎಂದು ಡೈರಿ ಬಹಿರಂಗಪಡಿಸುತ್ತದೆ.
ಮೂವರು ಸಹೋದರಿಯರು ಪರಸ್ಪರ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಸ್ನಾನ ಮಾಡುವುದು, ಊಟ ತಿಂಡಿ ಮಾಡುವುದು, ಶಾಲೆಗೆ ಹೋಗುವುದು, ಮಲಗುವುದು ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು. ವರದಿಗಳ ಪ್ರಕಾರ, ಮೂವರು ಸಹೋದರಿಯರು COVID-19 ಸಮಯದಲ್ಲಿ ಆನ್‌ಲೈನ್ ಆಟಗಳನ್ನು ಆಡುವ ಅಭ್ಯಾಸವನ್ನು ಬೆಳೆಸಿಕೊಂಡರು. ಅವರು ಟಾಸ್ಕ್ ಆಧಾರಿತ ಆನ್‌ಲೈನ್ ‘ಕೊರಿಯನ್ ಲವ್ ಗೇಮ್’ ಆಡುತ್ತಿದ್ದರು ಎಂದು ತಿಳಿದು ಬಂದಿದೆ.
“ಹೆಣ್ಣುಮಕ್ಕಳು ಅಪಾಯಕಾರಿ ಆನ್‌ಲೈನ್ ಆಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಬಗ್ಗೆ ಅನುಮಾನವೇ ಇರಲಿಲ್ಲ. ಅವರು ಕೊರಿಯನ್ ಆಟ ಆಡುತ್ತಿದ್ದರ ಬಗ್ಗೆ ನಮಗೆ ತಿಳಿದಿರಲಿಲ್ಲ. ಮಕ್ಕಳು ನಮಗೆ ಏನನ್ನೂ ಹೇಳಿಲ್ಲ. ಆದರೆ, ಆಗಾಗ ಅವರನ್ನ ಕೊರಿಯನ್‌ಗೆ ಕರೆದುಕೊಂಡು ಹೋಗುವಂತೆ ಕೇಳುತ್ತಿದ್ದರು” ಎಂದು ಮೃತ ಮಕ್ಕಳ ತಂದೆ ಚೇತನ್ ಕುಮಾರ್ ಹೇಳಿದ್ದಾರೆ.
“ಸುಮಾರು 2-2.5 ವರ್ಷಗಳಿಂದ ನನ್ನ ಮಕ್ಕಳು ಆನ್‌ಲೈನ್ ಗೇಮ್ ಆಡುತ್ತಿದ್ದರು. ಪರಸ್ಪರ ಕೊರಿಯನ್ ಹೆಸರುಗಳಿಂದ ಕರೆಯುವ ಜತೆಗೆ ಪ್ರಾಚಿ ತನ್ನನ್ನು ತಾನು ಬಾಸ್ ಎಂದು ಕರೆದುಕೊಳ್ಳುತ್ತಿದ್ದಳು. ಅವಳ ಆಜ್ಞೆಗಳನ್ನು ಇನ್ನುಳಿದ ಮಕ್ಕಳು ಪಾಲಿಸುತ್ತಿದ್ದರು. ಆದರೆ, ಆ ಗೇಮ್‌ನಲ್ಲಿ ಅಪಾಯಕಾರಿ ಸವಾಲು (ಟಾಸ್ಕ್) ಇದ್ದ ಬಗ್ಗೆ ತಿಳಿದಿರಲಿಲ್ಲ” ಎಂದಿದ್ದಾರೆ.
ಶಾಲಿಮಾರ್ ಗಾರ್ಡನ್ನ ಸಹಾಯಕ ಪೊಲೀಸ್ ಆಯುಕ್ತ, ಅತುಲ್ ಕುಮಾರ್ ಸಿಂಗ್ ಮಾತನಾಡಿ, “ಸಹೋದರಿಯರು ಕೊರಿಯನ್ ಟಾಸ್ಕ್ ಆಧಾರಿತ ಸಂವಾದಾತ್ಮಕ ಲವ್ ಗೇಮ್‌ನ ವ್ಯಸನಿಯಾಗಿದ್ದರು. ಕಳೆದ ಕೆಲವು ದಿನಗಳಿಂದ ಅವರ ಪೋಷಕರು ತಮ್ಮ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಿದ್ದರು. ಅದು ಅವರನ್ನು ಅಸಮಾಧಾನಗೊಳಿಸಿತ್ತು. ಇದು ಅವರು ಇಂತಹ ಅನಾಹುತಕಾರಿ ನಿರ್ಧಾರ ಕೈಗೊಳ್ಳಲು ಕಾರಣವಾಗಿದೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಥೈರಾಯ್ಡ್ ಅಂದ್ರೆ ಭಯವೇ? ವೈದ್ಯರು ಏನಂತಾರೆ ಗೊತ್ತಾ?
ಮೂವರು ಸಹೋದರಿಯರು ಕೊರಿಯನ್ ಹೆಸರುಗಳಾದ ಮಾರಿಯಾ, ಅಲಿಜಾ ಮತ್ತು ಸಿಂಡಿ ಬಳಸಿಕೊಂಡು ಸಾಮಾಜಿಕ ಮಾಧ್ಯಮ ಖಾತೆ ಹೊಂದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದರು.
ಈ ಕೊರಿಯನ್ ಲವ್ ಗೇಮ್‌ನ ಪ್ರಭಾವಕ್ಕೆ ಒಳಗಾಗಿದ್ದ ಮಕ್ಕಳು ತಾವು ಭಾರತೀರಲ್ಲ. ಬದಲಾಗಿ ಕೊರಿಯನ್ನರು ಎಂಬ ಭಾವನೆ ಬೆಳೆಸಿಕೊಂಡಿದ್ದರು. ಕೊರಿಯನ್ ಲವ್ ಗೇಮ್ ಎಂದು ಕರೆಯಲಾಗುತ್ತಿರುವ ಈ ಗೇಮ್‌ನ ನಿಜವಾದ ಹೆಸರು ಏನೆಂದು ಅಧಿಕಾರಿಗಳು ಈವರೆಗೆ ಖಚಿತಪಡಿಸಿಲ್ಲ. ಮೂಲಗಳ ಪ್ರಕಾರ, ಈ ಆ್ಯಪ್‌ನಲ್ಲಿ ದಿನಕ್ಕೊಂದರಂತೆ 50 ಸವಾಲುಗಳನ್ನು ಹಾಕಲಾಗುತ್ತದೆ. ಆ ಸವಾಲುಗಳನ್ನು ಒಂದೊಂದಾಗಿ ಸಾಧಿಸುತ್ತ ಹೋಗಬೇಕು. ಇನ್ನು ಮಕ್ಕಳ ಸಾವಿಗೆ ಇದೇ ಆ್ಯಪ್‌ನ ಸವಾಲು ಪ್ರೇರೇಪಿಸಿರುವ ಶಂಕೆಯಿದೆ.
ಹೆಣ್ಣುಮಕ್ಕಳ ತಂದೆ ಚೇತನ್ ಕುಮಾರ್ ಎರಡು ಮದುವೆಯಾಗಿದ್ದರು. ಮೊದಲ ಹೆಂಡತಿಗೆ ಮಕ್ಕಳಾಗಿಲ್ಲ ಎಂದು ಚೇತನ್ ಪತ್ನಿಯ ತಂಗಿಯನ್ನೇ ಮದುವೆಯಾಗಿದ್ದರು. ಎರಡನೇ ಹೆಂಡತಿಗೆ ಮೂವರು ಮಕ್ಕಳು. ಇದೇ ವೇಳೆ ಮೊದಲನೇ ಹೆಂಡತಿಗೆ ಇಬ್ಬರು ಮಕ್ಕಳಾಗಿದ್ದಾರೆ. ಒಬ್ಬ ಗಂಡ, ಇಬ್ಬರು ಹೆಂಡತಿಯರು, ಐವರು ಮಕ್ಕಳು ಒಂದೇ ಮನೆಯಲ್ಲಿ ವಾಸವಾಗಿದ್ದರು. ಈ ಪೈಕಿ ಮೊದಲ ಹೆಂಡತಿಯ ಒಬ್ಬಳು ಮಗಳು, ಎರಡನೇ ಹೆಂಡತಿಯ ಇಬ್ಬರು ಪುತ್ರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು 2017ರಲ್ಲಿ ‘ಬ್ಲ್ಯೂವೇಲ್’ ಎಂಬ ರಷ್ಯಾ ಮೂಲದ ಗೇಮ್ ಕೂಡ ಜಗತ್ತಿನಾದ್ಯಂತ ಭಾರೀ ವೈರಲ್ ಆಗಿತ್ತು. ಅದರಲ್ಲೂ ಕೂಡ ದಿನಕ್ಕೊಂದು ಸವಾಲು ನೀಡುವುದು ಮತ್ತು ಅಂತಿಮವಾಗಿ ಸಾವನ್ನಪ್ಪುವ ಟಾಸ್ಕ್ ನೀಡಲಾಗುತ್ತಿತ್ತು. ಇದಕ್ಕೆ ರಷ್ಯಾ ಮೊದಲಾದ ದೇಶಗಳಲ್ಲಿ 130ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮುಂಬೈನಲ್ಲೂ ಬಾಲಕನೊಬ್ಬ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಬಹುಬೇಗನೆ ವಿಡಿಯೊ ಗೇಮ್‌ಗಳಿಗೆ ಮನಸೋಲುತ್ತಿದ್ದಾರೆ. ಅದರಲ್ಲೂ ಕೆಲವು ಹಿಂಸಾತ್ಮಕ ವಿಡಿಯೋ ಗೇಮ್‌ಗಳು ಅವರನ್ನು ಹೆಚ್ಚು ಸೆಳೆಯುತ್ತಿವೆ. ಈಗೀನ ಮಕ್ಕಳಿಗೆ ಮೈದಾನದಲ್ಲಿ ಹೋಗಿ ಆಡುವುದಕ್ಕಿಂತ ಗ್ಯಾಜೆಟ್‌ಗಳಲ್ಲಿ ಆಡುವುದೇ ಪ್ರಿಯವಾಗಿದೆ.
ಪೋಷಕರಿಗೆ ಎಷ್ಟೇ ಕೆಲಸದ ಒತ್ತಡವಿದ್ದರೂ, ಏನೇ ಸಮಸ್ಯೆಗಳಿದ್ದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ನಡುವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ, ನೈತಿಕ ಮೌಲ್ಯಗಳು ಮತ್ತು ಸೌಲಭ್ಯಗಳನ್ನು ನೀಡಿ, ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ.




