ಕೆಲವು ವರ್ಷಗಳ ಹಿಂದೆ ಮುಟ್ಟಿನ ಕಪ್ ಬಳಸುವ ಯುವತಿಯರೆಡೆ ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಇದು ಸ್ವತಃ ನಾನು ಬಳಸಿದಾಗಲೂ ಅನುಭವಕ್ಕೆ ಬಂದಿರುವುದು. "ಹೋ ನೀನು ಮುಟ್ಟಿನ ಕಪ್ ಬಳಸುತ್ತೀಯಾ? ಆದರೆ ಅದು ಲೈಂಗಿಕವಾಗಿ ಸಕ್ರಿಯವಾಗಿದ್ದವರಿಗೆ ಮಾತ್ರ ಬಳಸಲು ಸಾಧ್ಯವಲ್ಲವೆ" ಎಂಬ ತಪ್ಪು ಕಲ್ಪನೆಗಳನ್ನು ಒಳಗೊಂಡ ಯುವತಿಯರ ಪ್ರಶ್ನೆಗೆ ವೈಜ್ಞಾನಿಕವಾಗಿ ಉತ್ತರಿಸಬೇಕಾಗಿತ್ತು.
‘ಮುಟ್ಟಿನ ಕಪ್’ ಸದ್ಯ ಮತ್ತೆ ಚರ್ಚೆಯ ವಿಷಯವಾಗಿದೆ. ಅದಕ್ಕೆ ಕಾರಣ ಸರ್ಕಾರದ ಹೊಸ ಯೋಜನೆ. ರಾಜ್ಯ ಸರ್ಕಾರವು ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ಒದಗಿಸುವ ಯೋಜನೆಯೊಂದನ್ನು ಪ್ರಾಯೋಗಿಕವಾಗಿ ಆರಂಭಿಸಲು ನಿರ್ಧರಿಸಿದೆ. ಆರಂಭದಲ್ಲಿ ಆಯ್ದ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ನೀಡಿ ಬಳಿಕ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಸದ್ಯ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ (ಕೆಎಸ್‌ಎಂಎಸ್‌ಸಿಎಲ್) ಮೂಲಕ 61 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ 10,38,912 ಮುಟ್ಟಿನ ಕಪ್ ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಸರ್ಕಾರವು 6ರಿಂದ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ಈ ಹಿಂದಿನಂತೆ ಸ್ಯಾನಿಟರಿ ಪ್ಯಾಡ್‌ಗಳ ವಿತರಣೆ ಮಾಡಲಿದೆ. 9 ರಿಂದ 12 ನೇ ತರಗತಿಯ ಹಿರಿಯ ವಿದ್ಯಾರ್ಥಿನಿಯರಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುಟ್ಟಿನ ಕಪ್‌ಗಳನ್ನು ನೀಡಲಾಗುತ್ತದೆ. ಪ್ರಸ್ತುತ ಆರ್ಥಿಕ ವರ್ಷದ ಬಾಕಿ ಉಳಿದ ತಿಂಗಳುಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನೇ ವಿತರಿಸಲು ಜಿಲ್ಲಾ ಮಟ್ಟದಲ್ಲಿ ಖರೀದಿಗೆ ಅನುಮೋದಿಸಲಾಗಿದೆ.
ಇದನ್ನು ಓದಿದ್ದೀರಾ? ಮೈತ್ರಿ ಮುಟ್ಟಿನ ಕಪ್ ಯೋಜನೆ: ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ದಿನೇಶ್ ಗುಂಡೂರಾವ್
ಸರ್ಕಾರ ಮುಟ್ಟಿನ ಕಪ್ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಮಕ್ಕಳಿಗೆ ತರಬೇತಿ ನೀಡಲು ಸರ್ಕಾರ ಸಿದ್ಧತೆ ನಡೆಸಿದೆಯೇ? ತನ್ನ ದೇಹ ರಚನೆಯ ಬಗ್ಗೆಯೇ ಸರಿಯಾಗಿ ಅರಿವಿಲ್ಲದೆ ಮಕ್ಕಳಿಗೆ ಮುಟ್ಟಿನ ಕಪ್ ಬಳಕೆ ಬಗ್ಗೆ ತಿಳಿಸುವುದು ಮುಖ್ಯವಲ್ಲವೇ?
ಕೆಲವು ವರ್ಷಗಳ ಹಿಂದೆ ಮುಟ್ಟಿನ ಕಪ್ ಬಳಸುವ ಯುವತಿಯರೆಡೆ ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಇದು ಸ್ವತಃ ನಾನು ಬಳಸಿದಾಗಲೂ ಅನುಭವಕ್ಕೆ ಬಂದಿರುವುದು. “ಹೋ ನೀನು ಮುಟ್ಟಿನ ಕಪ್ ಬಳಸುತ್ತೀಯಾ? ಆದರೆ ಅದು ಲೈಂಗಿಕವಾಗಿ ಸಕ್ರಿಯವಾಗಿದ್ದವರಿಗೆ ಮಾತ್ರ ಬಳಸಲು ಸಾಧ್ಯವಲ್ಲವೆ” ಎಂಬ ತಪ್ಪು ಕಲ್ಪನೆಗಳನ್ನು ಒಳಗೊಂಡ ಯುವತಿಯರ ಪ್ರಶ್ನೆಗೆ ವೈಜ್ಞಾನಿಕವಾಗಿ ಉತ್ತರಿಸಬೇಕಾಗಿತ್ತು. ಈ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲ ಎಂಬ ಭಯದಿಂದಲೇ ಅದೆಷ್ಟೋ ಹೆಣ್ಣುಮಕ್ಕಳು ಮುಟ್ಟಿನ ಕಪ್‌ಗಳಿಂದ ದೂರ ಉಳಿದಿದ್ದೂ ಇದೆ. ಇದೀಗ ಆ ಮಿಥ್ಯಗಳಿಗೆ ತೆರೆಬೀಳುವಂತಹ ಯೋಜನೆ ಮುಟ್ಟಿನ ಕಪ್ ವಿತರಣೆ ಯೋಜನೆ. ವಿದ್ಯಾರ್ಥಿನಿಯರಿಗೆ ಈ ಮಿಥ್ಯಗಳ ಹಿಂದಿರುವ ಸತ್ಯಗಳನ್ನು ತಿಳಿಸಿ ಯೋಜನೆ ಮುಂದುವರೆಸಿದರೆ ಮಾತ್ರ ಯೋಜನೆ ಯಶಸ್ವಿಯಾದೀತು.
ಮುಟ್ಟಿನ ಕಪ್ ಬಗ್ಗೆಗಿನ ಮಿಥ್ಯಗಳೇನು?
ಮಿಥ್ಯ 1: ಕನ್ಯತ್ವಕ್ಕೆ ಧಕ್ಕೆಯಾಗುತ್ತದೆ
ಸತ್ಯ: ಕನ್ಯತ್ವ ಎಂಬ ಕಲ್ಪನೆಯೇ ತಪ್ಪಾಗಿದ್ದು. ಹಲವರು ಈ ಕನ್ಯತ್ವ ಎಂದು ಭಾವಿಸುವ ‘ಹೈಮೆನ್’ ಯೋನಿಯ ದ್ವಾರವನ್ನು ಪೂರ್ಣವಾಗಿ ಮುಚ್ಚಿರುವ ಒಂದು ಪೊರೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ಅದು ಯೋನಿಯ ದ್ವಾರದ ಸುತ್ತಲಿರುವ ಒಂದು ತೆಳುವಾಗ ಅಂಗಾಂಶವಷ್ಟೇ. ಇದು ಮೊದಲ ಲೈಂಗಿಕ ಸಂಪರ್ಕದ ಸಮಯದಲ್ಲಿ ಹರಿಯುತ್ತದೆ ಎಂಬುದು ತಪ್ಪು ಕಲ್ಪನೆ. ಸೈಕ್ಲಿಂಗ್, ಈಜು, ಜಿಮ್ ಮಾಡುವಾಗ ಹೈಮೆನ್ ಸ್ವಲ್ಪ ಹಿಗ್ಗಬಹುದು ಅಥವಾ ಹರಿಯಬಹುದು. ಹಾಗೆಯೇ ಮುಟ್ಟಿನ ಕಪ್ ಬಳಸುವಾಗಲೂ ಹೈಮೆನ್ ಹಿಗ್ಗಬಹುದು ಅಥವಾ ಹರಿಯಬಹುದು. ಆದರೆ ಇದು ಕನ್ಯತ್ವವನ್ನು ಕಳೆದುಕೊಂಡಂತೆ ಅಲ್ಲ.
ಮಿಥ್ಯ 2: ಕಪ್ ಹೊಟ್ಟೆಯೊಳಗೆ ಹೋಗಿ ಕಾಣೆಯಾಗಬಹುದು
ಸತ್ಯ: ಯೋನಿ ಮಾರ್ಗವು ಗರ್ಭಕಂಠದ ಬಳಿ ಕೊನೆಗೊಳ್ಳುತ್ತದೆ. ಇದು ಸಣ್ಣ ದ್ವಾರವಾಗಿದ್ದು ಇದರ ಮೂಲಕ ಕಪ್ ಗರ್ಭಕೋಶದೊಳಗೆ ಹೋಗಲು ಸಾಧ್ಯವಿಲ್ಲ. ಹೊಟ್ಟೆಯೊಳಗೆ ಹೋಗುತ್ತದೆ ಎಂಬುದು ಮಿಥ್ಯ.
ಇದನ್ನು ಓದಿದ್ದೀರಾ? ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!
ಮಿಥ್ಯ 3: ಮೂತ್ರ ವಿಸರ್ಜನೆಗೆ ಕಷ್ಟವಾಗುತ್ತದೆ
ಸತ್ಯ: ಹಲವು ಹೆಣ್ಣುಮಕ್ಕಳಿಗೆ ತಮ್ಮ ದೇಹದಲ್ಲಿರುವ ಭಾಗಗಳ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದೇ ಈ ತಪ್ಪುಕಲ್ಪನೆಗೆ ಕಾರಣ. ಹೆಣ್ಣುಮಕ್ಕಳಲ್ಲಿ ಮೂತ್ರ ವಿಸರ್ಜನೆಯ ದ್ವಾರ ಬೇರೆ ಮತ್ತು ಯೋನಿ ಮಾರ್ಗ ಬೇರೆ. ಕಪ್ ಅನ್ನು ನಾವು ಯೋನಿ ಮಾರ್ಗದಲ್ಲಿ ಇಟ್ಟಿರುತ್ತೇವೆ. ಹಾಗಿರುವಾಗ ಮೂತ್ರ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಮಲ ಮಾಡುವಾಗಲೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಮಿಥ್ಯ 4: ಕಪ್ ಧರಿಸುವುದರಿಂದ ನೋವು ಹೆಚ್ಚಾಗುತ್ತದೆ.
ಸತ್ಯ: ಕಪ್‌ಗಳನ್ನು ಮೆಡಿಕಲ್ ಗ್ರೇಡ್ ಸಿಲಿಕೋನ್‌ನಿಂದ ತಯಾರಿಸಲಾಗುತ್ತದೆ. ಆದ್ದರಿಂದ ಇದು ಮೃದುವಾಗಿರುತ್ತದೆ. ಸರಿಯಾದ ಗಾತ್ರದ ಕಪ್ ಆರಿಸಿ, ನಾವು ಯಾವುದೇ ಒತ್ತಡಕ್ಕೆ ಒಳಗಾಗದೆ ಆರಾಮವಾಗಿ ಕಪ್ ಧರಿಸಿದರೆ ನೋವು ಆಗುವುದೇ ಇಲ್ಲ. ನಾವು ಕಪ್ ಧರಿಸಿದ್ದೇವೆ ಎಂಬ ಅನುಭವವೂ ಆಗುವುದಿಲ್ಲ.
ಮಿಥ್ಯ 5: ಕಪ್‌ನಿಂದ ಸೋಂಕು ಉಂಟಾಗುತ್ತದೆ
ಸತ್ಯ: ಸ್ಯಾನಿಟರಿ ಪ್ಯಾಡ್‌ಗಳಿಗೆ, ಬಟ್ಟೆಗಳಿಗೆ ಹೋಲಿಸಿದರೆ ಮುಟ್ಟಿನ ಕಪ್‌ಗಳು ಹೆಚ್ಚು ನೈರ್ಮಲ್ಯಕರವಾಗಿರುತ್ತವೆ. ಆದರೆ ಪ್ರತಿ ಬಾರಿ ಬಳಸುವ ಮುನ್ನ ಮತ್ತು ನಂತರ ಕುದಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬೇಕು. ಯಾವುದೇ ಕಾರಣಕ್ಕೆ ಸೋಪು, ಶಾಂಪು ಮೊದಲಾದವುಗಳನ್ನು ಬಳಸಿ ಕಪ್ ಶುಚಿಗೊಳಿಸಬಾರದು. ನಾವು ಕಪ್ ಯೋನಿಯೊಳಗೆ ಹಾಕುವುದರಿಂದಾಗಿ ಸೋಪಿನ ರಾಸಾಯನಿಕಗಳಿಂದ ಸೋಂಕು ಉಂಟಾಗಬಹುದು. ಕಪ್‌ನ ಬಾಳಿಕೆಯೂ ಕಡಿಮೆಯಾಗಬಹುದು. ಅನೇಕ ತಯಾರಕರು ನಿರ್ದಿಷ್ಟವಾಗಿ ಮುಟ್ಟಿನ ಕಪ್‌ಗಳಿಗಾಗಿಯೇ ವಿಶೇಷ ಕ್ಲೆನ್ಸರ್‌ಗಳನ್ನು ಶಿಫಾರಸು ಮಾಡುತ್ತಾರೆ. ಅದನ್ನು ಬಳಸಬಹುದು.
ಮಿಥ್ಯ 6: ಹೆಚ್ಚಿನ ರಕ್ತಸ್ರಾವವಿದ್ದರೆ ಮುಟ್ಟಿನ ಕಪ್ ಸಾಲದು
ಸತ್ಯ: ಪ್ಯಾಡ್‌ಗಳಿಗಿಂತ ಮುಟ್ಟಿನ ಕಪ್ ಹೆಚ್ಚಿನ ಪ್ರಮಾಣದ ರಕ್ತವನ್ನು ಸಂಗ್ರಹಿಸಬಲ್ಲದು. ಅಧಿಕ ರಕ್ತಸ್ರಾವವಿದ್ದರೆ ನಮಗೆ ಮೂತ್ರ ವಿಸರ್ಜನೆ ಮಾಡುವಾಗ ಕಪ್ ಭಾರವಾಗಿದೆ ಎಂಬ ಅನುಭವವಾಗುತ್ತದೆ. ಆ ವೇಳೆ ಕಪ್ ಶುಚಿಗೊಳಿಸಿ ಮತ್ತೆ ಹಾಕಿಕೊಳ್ಳಬಹುದು. ನಾವು ಮುಟ್ಟಿನ ಕಪ್ ಧರಿಸಿ ಈಜು, ವ್ಯಾಯಾಮ ಅಥವಾ ಯೋಗ ಯಾವ ದೈಹಿಕ ಚಟುವಟಿಕೆಗಳನ್ನೂ ಆರಾಮವಾಗಿ ಮಾಡಿಕೊಳ್ಳಬಹುದು.
ಮುಟ್ಟಿನ ಕಪ್‌ನ ಪ್ರಯೋಜನಗಳೇನು?
ಮುಟ್ಟಿನ ಕಪ್‌ಗಳು ಸಾಮಾನ್ಯ ಸ್ಯಾನಿಟರಿ ಪ್ಯಾಡ್‌ಗಳಿಗಿಂತ ಅಧಿಕ ನೈರ್ಮಲ್ಯಕರವಾದದ್ದು. ಮುಟ್ಟಿನ ಕಪ್‌ಗಳನ್ನು 8 ರಿಂದ 12 ಗಂಟೆಗಳ ಕಾಲ ಬಳಸಬಹುದು. ಇದರಿಂದಾಗಿ ಕಾಲೇಜು-ಉದ್ಯೋಗಗಳಿಗೆ ಹೋಗುವ ಮಹಿಳೆಯರು ದಿನಪೂರ್ತಿ ಪ್ಯಾಡ್‌ಗಳನ್ನು ಬದಲಿಸಬೇಕಾದ ಸಮಸ್ಯೆಯಿಲ್ಲ. ಅಷ್ಟು ಮಾತ್ರವಲ್ಲದೆ ಒಮ್ಮೆ 500 ರೂಪಾಯಿಯ ಒಳಗೆ ಹಣ ನೀಡಿ ಖರೀದಿಸಿದರೆ ಮುಟ್ಟಿನ ಕಪ್ ಅನ್ನು 2ರಿಂದ 10 ವರ್ಷಗಳ ಕಾಲ ಬಳಸಬಹುದು. ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್‌ಗಾಗಿ ಹಣ ವಿನಿಯೋಗಿಸಬೇಕಾಗಿಲ್ಲ. ಜತೆಗೆ ವಿಲೇವಾರಿ ಸಮಸ್ಯೆಗಳನ್ನು ತಪ್ಪಿಸುತ್ತದೆ. ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.
ಇದನ್ನು ಓದಿದ್ದೀರಾ? ಮುಟ್ಟಿನ ರಜೆ | ಮಹಿಳಾ ಸಮಸ್ಯೆಗಳ ಕುರಿತ ವಿ’ಸ್ಮೃತಿ’ಗೆ ಕೊನೆಯೆಲ್ಲಿ?
ಸದ್ಯ ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜುಗಳಲ್ಲಿ ಮುಟ್ಟಿನ ಕಪ್ ವಿತರಿಸುವ ಬಗ್ಗೆ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿರುವ ವೈದ್ಯೆ, ಲೇಖಕಿ ಡಾ. ಎಚ್ ಎಸ್ ಅನುಪಮಾ, “ಸರ್ಕಾರವು ಮಕ್ಕಳಿಗೆ ಮುಟ್ಟಿನ ಕಪ್ ನೀಡುವುದಕ್ಕೂ ಮುನ್ನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಯಾವುದೇ ಸಂಕೋಚವಿಲ್ಲದೆಯೇ ತಮ್ಮ ದೇಹ ರಚನೆ ಬಗ್ಗೆ ತಿಳಿಸಬೇಕು. ಹೆಣ್ಣು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು. ಲೈಂಗಿಕ ಶಿಕ್ಷಣವೆಂದರೆ ಬರಿ ಸಂಭೋಗವಲ್ಲ. ಬದಲಾಗಿ ಹೆಣ್ಣುಮಕ್ಕಳ ಶರೀರ ರಚನೆ, ಶರೀರ ಕ್ರಿಯೆ, ಪ್ರಜನನ ಕ್ರಿಯೆ ಮೊದಲಾದವುಗಳ ಬಗ್ಗೆ ಪ್ರಾಥಮಿಕ ಮಾಹಿತಿ ನೀಡುವುದು. ಈ ಶಿಕ್ಷಣವನ್ನು ನೀಡದೆಯೇ ಸರ್ಕಾರ ಮುಟ್ಟಿನ ಕಪ್ ವಿತರಿಸಿದರೆ ಅದು ಮೂಲೆ ಸೇರಬಹುದು, ಅದರ ಬಳಕೆಯಾಗುವುದು ಅನುಮಾನ. ಸರ್ಕಾರದ ಉದ್ದೇಶ ಯಶಸ್ವಿಯಾಗುವುದೂ ಅನುಮಾನ” ಎಂದು ಅಭಿಪ್ರಾಯಿಸಿದ್ದಾರೆ.

ವೈದ್ಯರು ಹೇಳುವಂತೆ ಸರ್ಕಾರ ಈ ಯೋಜನೆ ಜಾರಿಗಾಗಿ ಮಾಡಿರುವ ತಯಾರಿ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಈ ಹಿಂದೆ ಸರ್ಕಾರ ಶುಚಿ ಯೋಜನೆಯಡಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲು ಆರಂಭಿಸಿತ್ತು. ಆದರೆ ಈ ಪ್ಯಾಡ್‌ಗಳ ಗುಣಮಟ್ಟ ಅತಿ ಕಳಪೆಯಾಗಿತ್ತು. ಬರೀ ನೆಪ ಮಾತ್ರಕ್ಕೆ ವಿತರಿಸುವ ಈ ಪ್ಯಾಡ್‌ಗಳ ಗಾತ್ರ ಮತ್ತು ಹೀರಿಕೊಳ್ಳುವ ಸಾಮರ್ಥ್ಯವು ವಿದ್ಯಾರ್ಥಿನಿಯರಿಗೆ ಬಳಕೆಗೆ ಸಮಸ್ಯೆ ಉಂಟು ಮಾಡಿತ್ತು. ಶಾಲೆಗಳಲ್ಲಿ ಬಳಸಿದ ಪ್ಯಾಡ್‌ಗಳನ್ನು ಸುಡಲು ‘ಇನ್ಸಿನರೇಟರ್’ (Incinerator) ಯಂತ್ರಗಳ ಕೊರತೆಯೂ ಶಾಲೆಗಳಲ್ಲಿ ನೈರ್ಮಲ್ಯದ ಸಮಸ್ಯೆಗೆ ಕಾರಣವಾಗಿತ್ತು. ಇವೆಲ್ಲವುದರ ನಡುವೆ ಇದೀಗ ಮುಟ್ಟಿನ ಕಪ್ ವಿತರಣೆಗೆ ಸರ್ಕಾರ ಮುಂದಾಗಿದೆ.
ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವಾಗ ಕೆಲವು ಶಾಲೆಗಳಲ್ಲಿ ಮುಟ್ಟಾದ ಮಕ್ಕಳಿಗೆ ಶಾಲೆಯ ಶಿಕ್ಷಕರು ಪ್ಯಾಡ್ ಬಳಸುವುದು ಹೇಗೆ ಎಂದು ತಿಳಿಸುವುದಿದೆ. ಅದು ಕೆಲವು ಶಾಲೆಗಳಿಗಷ್ಟೇ ಸೀಮಿತ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಮಕ್ಕಳಿಗೆ ಪೋಷಕರೂ ಸ್ಯಾನಿಟರಿ ಪ್ಯಾಡ್ ಬಳಕೆ ಹೇಗೆ ಎಂದು ತಿಳಿಸುವುದಿಲ್ಲ. ಹೀಗಿರುವಾಗ ಮುಟ್ಟಿನ ಕಪ್ ಬಳಕೆ ಬಗ್ಗೆ ತರಬೇತಿ ನೀಡದೆ ಯೋಜನೆ ಅನುಷ್ಠಾನಕ್ಕೆ ತರುವುದು ಈ ಯೋಜನೆ ಬರೀ ಪ್ರಾಯೋಗಿಕವಾಗಿಯೇ ಉಳಿಯವುಂತೆ ಮಾಡಬಹುದು. ಅದಕ್ಕಾಗಿ ಶಾಲೆಗಳಲ್ಲಿ ಮೊದಲು ಶಿಕ್ಷಕರಿಗೆ ತರಬೇತಿ ನೀಡಿ, ಯಾವುದೇ ಸಂಕೋಚವಿಲ್ಲದೆ ಶಿಕ್ಷಕರು ಮಕ್ಕಳಿಗೂ ಅರಿವು ಮೂಡಿಸಲಿ. ಅಂಜಿಕೆ ಬಿಟ್ಟು ನಮ್ಮ ದೇಹವನ್ನು, ದೇಹ ರಚನೆಯನ್ನು ನಾವು ಅರಿಯೋಣ, ಭಯವಿಲ್ಲದೆ ಮುಟ್ಟಿನ ಕಪ್ ಬಳಸೋಣ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




