ನಿರಂತರ ಕಣ್ಗಾವಲಿನ ಸರ್ಕಾರಿ ಸಾಧನ – ‘ಸಂಚಾರ್ ಸಾಥಿ’ ಅಪ್ಲಿಕೇಶನ್

Date:

ಇದು ವ್ಯಕ್ತಿಗಳ ಗೌಪ್ಯತೆಯ ಹಕ್ಕನ್ನು ಕಸಿದುಕೊಳ್ಳುವ ಕಾರಣ ಖಾಸಗಿತನ ಮತ್ತು ನಾಗರಿಕ-ಸ್ವಾತಂತ್ರ್ಯದ ಕುರಿತಾದ ಗಂಭೀರ ಕಾಳಜಿ ಹಾಗೂ ತೀವ್ರ ವಿರೋಧವು ಎಲ್ಲೆಡೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರವು ಡಿಸೆಂಬರ್‌ 3ರಂದು ‘ಕಡ್ಡಾಯ ಅಪ್ಲಿಕೇಷನ್ ಬಳಕೆ’ ಆದೇಶವನ್ನು ಹಿಂತೆಗೆದುಕೊಂಡಿದೆ. ಆದರೂ, ಒಳಮಾರ್ಗದಿಂದ ಮತ್ತೆ ಈ ನಿಯಮವನ್ನು ಹೇಗಾದರೂ ಹೇರುವ ಅಪಾಯವಿರಬಹುದಾದ ಕಾರಣ ಜನತೆ ಈ ಬಗ್ಗೆ ಎಚ್ಚರಗೊಳ್ಳಬೇಕಿದೆ.

ಕೇಂದ್ರ ಸರ್ಕಾರವು ದೂರ-ಸಂಪರ್ಕ ಇಲಾಖೆ ಮೂಲಕ 2023ರಲ್ಲಿ ಬಿಡುಗಡೆ ಮಾಡಿದ್ದ ‘ಸಂಚಾರ್ ಸಾಥಿ’ಎಂಬ ಪೋರ್ಟೆಲನ್ನು ಈಗ ಸ್ಮಾರ್ಟ್ ಫೋನುಗಳಲ್ಲಿ ಕಡ್ಡಾಯ ಅಪ್ಲಿಕೇಷನ್‌ ಆಗಿ ಅಳವಡಿಕೆ ಮಾಡುವ ನಿರ್ಧಾರ ಮಾಡಿತ್ತು. ಕಳೆದ ನವೆಂಬರ್ 28ರಂದು ಇಲಾಖೆಯು ಅದೇಶ ಹೊರಡಿಸಿ, ಈ ಅಪ್ಲಿಕೇಷನನ್ನು ಮೊಬೈಲ್ ಸಿಸ್ಟಮ್‍ನಲ್ಲಿ ಮೊದಲೇ ಅಳವಡಿಸಲು ಮೊಬೈಲ್ ತಯಾರಿಕಾ ಕಂಪೆನಿಗಳಿಗೆ ನಿರ್ದೇಶಿಸಿ 120 ದಿನಗಳ ಗಡುವನ್ನು ನಿಗದಿಪಡಿಸುವ ಮೂಲಕ ಇದರ ಬಳಕೆಯನ್ನು ಕಡ್ಡಾಯಗೊಳಿಸುವ ಕ್ರಮಕ್ಕೆ ಮುಂದಾಗಿತ್ತು. “ಭಾರತದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳಲಾದ ಎಲ್ಲಾ ಮೊಬೈಲ್ ಹ್ಯಾಂಡ್ ಸೆಟ್‍ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಅಳವಡಿಸಿರಬೇಕು ಮತ್ತು ಅದನ್ನು ಸೆಟಪ್ ಮಾಡುವಾಗ ಮೊದಲ ಬಳಕೆಯಲ್ಲಿಯೇ ಅಂತಿಮ ಬಳಕೆದಾರರಿಗೆ ಸುಲಭವಾಗಿ ಕಾಣಿಸುವಂತೆ ಮತ್ತು ಪ್ರವೇಶಿಸುವಂತೆ ಖಚಿತಪಡಿಸಿಕೊಳ್ಳಬೇಕು ಹಾಗೂ ಅದರ ಕಾರ್ಯ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸಬಾರದು” ಎಂದು ಇಲಾಖೆಯು ಮೊಬೈಲ್ ತಯಾರಕರಿಗೆ ನೀಡಿದ ಈ ಆದೇಶದಲ್ಲಿ ತಿಳಿಸಲಾಗಿತ್ತು. ಅಂದರೆ, ಬಳಕೆದಾರರು ಮೊಬೈಲಿನಿಂದ ತೆಗೆಯಲಾಗದಂತಹ (ಡಿಸೆಬಲ್ ಮಾಡಲಾಗದ) ಕಡ್ಡಾಯ ಅಪ್ಲಿಕೇಶನ್ ಇದಾಗಿದ್ದು, ಹೊಸ ಮೊಬೈಲ್‌ಗಳಲ್ಲಿ ಇದು ಸಿಸ್ಟಮ್‍ನಲ್ಲಿಯೇ ಅಳವಡಿಕೆಯಾದರೆ, ಹಳೆ ಮೊಬೈಲ್‌ಗಳಲ್ಲಿ ಅಪ್ಡೇಟ್ ಮೂಲಕ ಸೇರಿಕೊಳ್ಳುತ್ತದೆ.

ಇದು ವ್ಯಕ್ತಿಗಳ ಗೌಪ್ಯತೆಯ ಹಕ್ಕನ್ನು ಕಸಿದುಕೊಳ್ಳುವ ಕಾರಣ ಖಾಸಗಿತನ ಮತ್ತು ನಾಗರಿಕ-ಸ್ವಾತಂತ್ರ್ಯದ ಕುರಿತಾದ ಗಂಭೀರ ಕಾಳಜಿ ಹಾಗೂ ತೀವ್ರ ವಿರೋಧವು ಎಲ್ಲೆಡೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರವು ಡಿಸೆಂಬರ್‌ 3ರಂದು ‘ಕಡ್ಡಾಯ ಅಪ್ಲಿಕೇಶನ್ ಬಳಕೆ’ ಆದೇಶವನ್ನು ಹಿಂದೆಗೆದುಕೊಂಡಿದೆ. ಆದರೂ, ಒಳಮಾರ್ಗದಿಂದ ಮತ್ತೆ ಈ ನಿಯಮವನ್ನು ಹೇಗಾದರೂ ಹೇರುವ ಅಪಾಯವಿರಬಹುದಾದ ಕಾರಣ ಜನತೆ ಈ ಬಗ್ಗೆ ಎಚ್ಚರ ವಹಿಸಬೇಕಾಗಿದ್ದು, ಹೆಚ್ಚಿನ ಚರ್ಚೆಗಳು ನಡೆಯಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
sanchar saathi

ಸರ್ಕಾರದ ಪ್ರಕಾರ ಈ ಅಪ್ಲಿಕೇಶನ್ ಗ್ರಾಹಕರ ಉತ್ತಮ ಸುರಕ್ಷಾ ವ್ಯವಸ್ಥೆಯಾಗಿದೆ; ಕಳೆದು ಹೋದ ಮೊಬೈಲ್‍ಗಳನ್ನು ಟೆಲಿಕಾಂ ಜಾಲಗಳಲ್ಲಿ ನಿರ್ಬಂಧಿಸುವುದು, ಕಳುವಾದ ಮೊಬೈಲ್ ಪತ್ತೆ, ವಂಚನೆಯಿಂದ ಪಡೆದ/ಬಳಸಿದ ಸಿಮ್ ಕಾರ್ಡ್‍ಗಳ ಪತ್ತೆ, ವಂಚನೆಯ ಮೊಬೈಲ್ ಸಂಖ್ಯೆಗಳ (IMEI) ಖಚಿತತೆಯ ಪರಿಶೀಲನೆ, ಸಂದೇಹಾಸ್ಪದ ಕರೆ ಅಥವಾ ಸಂಭಾವ್ಯ ಟೆಲಿಕಾಂ ವಂಚನೆಗಳ ವರದಿ, ವ್ಯಾಪಾರಿ ಕರೆಗಳು ಮತ್ತು ಸಂದೇಶಗಳನ್ನು ನಿಯಂತ್ರಿಸುವಂತಹ ಸಾಧನಗಳನ್ನು ಈ ಅಪ್ಲಿಕೇಶನ್ ಹೊಂದಿರುತ್ತದೆ ಎಂದು ಸರ್ಕಾರವು ಹೇಳಿಕೊಂಡಿದೆ. ಇದೆಲ್ಲವೂ ಒಳ್ಳೆಯ ಕ್ರಮವಾದರೂ, ಕಡ್ಡಾಯ ಬಳಕೆಯನ್ನು ಹೇರುವ ಅಗತ್ಯತೆ ಅರ್ಥವಾಗುತ್ತಿಲ್ಲ. ತೆಗೆಯಲಾಗದ ಈ ಅಪ್ಲಿಕೇಷನ್ ನಮ್ಮ ಮೊಬೈಲ್‌ಗಳಲ್ಲಿ ಮೊದಲೇ ಸ್ಥಾಪಿತಗೊಂಡ ಕಾರಣ (ಅಥವಾ ಹಳೆಯ ಮೊಬೈಲ್‌ಗಳಲ್ಲಿ ಅದನ್ನು ಇಳಿಸಿಕೊಂಡ ನಂತರ) ನಾವು ನಡೆಸುವ ಎಲ್ಲಾ ಸಂವಹನಗಳು ಅಂದರೆ, ಕರೆಗಳು, ಸಂದೇಶಗಳು, ಫೋಟೊ, ವಿಡಿಯೋ ಮತ್ತು ಮುಖ್ಯವಾಗಿ ಹಣಕಾಸು ವ್ಯವಹಾರಗಳು ಸರ್ಕಾರದ ಕಣ್ಗಾವಲಿನಡಿ ಬರುತ್ತದೆ. ಅಂದರೆ ಪೋನ್ ಬಳಸಿ ಮಾಡುವ ನಮ್ಮ ದೈನಂದಿನ ಎಲ್ಲಾ ಚಟುವಟಿಕೆಗಳನ್ನು ಸರ್ಕಾರವು ನಿರಂತರ ಗಮನಿಸಬಹುದಾಗಿದೆ. ಸರ್ಕಾರವು ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ನಿಗಾ ಇಡುವ ಸಲುವಾಗಿಯೇ ಇಂತಹ ಕಡ್ಡಾಯುತವಾದ ಅಪ್ಲಿಕೇಶನ್ ಅಳವಡಿಕೆಯನ್ನು ತರುವ ಪ್ರಯತ್ನ ನಡೆಸಿದೆ ಎನ್ನಲಾಗಿದೆ.

ಭಾರತದಲ್ಲಿ ನಾಗರಿಕರ ಖಾಸಗಿತನದ ಗೌಪ್ಯತೆಯನ್ನು ಪ್ರಾಥಮಿಕವಾಗಿ ಸಂವಿಧಾನವು ರಕ್ಷಿಸುತ್ತದೆ. ಸಂವಿಧಾನದ ಆರ್ಟಿಕಲ್ 21 ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ಇದಲ್ಲದೆ, ಭಾರತೀಯ ಟೆಲಿಗ್ರಾಫ್ ಕಾಯ್ದೆ 1885 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಡಿಜಿಟಲ್ ಖಾಸಗಿ ದತ್ತಾಂಶ ಸಂರಕ್ಷಣಾ ಕಾಯ್ದೆ 2023ಗಳು ಬಳಕೆದಾರರ ಗೌಪ್ಯತೆಯ ರಕ್ಷಣೆಯನ್ನು ನಿಖರವಾಗಿ ಖಾತರಿಪಡಿಸಿವೆ. 2017ರಲ್ಲಿ ಸುಪ್ರೀಂ ಕೋರ್ಟಿನ ಒಂಬತ್ತು ನ್ಯಾಯಾಧೀಶರ ಪೀಠವು ಗೌಪ್ಯತೆಯ ಹಕ್ಕನ್ನು ಸಂವಿಧಾನದ ಆರ್ಟಿಕಲ್ 21ರಡಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ ಎಂದು ದೃಢಪಡಿಸುವ ತೀರ್ಪನ್ನು ನೀಡಿರುತ್ತಾರೆ (ನಿವೃತ್ತ ನ್ಯಾಯಮೂರ್ತಿ ಕೆ.ಪಿ ಪುಟ್ಟಸ್ವಾಮಿ 2017ರ ಪ್ರಕರಣ). ಈ ತೀರ್ಪು ಖಾಸಗಿತನದ ಗೌಪ್ಯತೆಗೆ ಹೆಚ್ಚಿನ ಸಂವಿಧಾನಿಕ ರಕ್ಷಣೆಯನ್ನು ಒದಗಿಸಿದ್ದು, ಅದನ್ನು ಉಲ್ಲಂಘಿಸುವ ಯಾವುದೇ ಕಾನೂನು ಅಥವಾ ಸರ್ಕಾರದ ಕ್ರಮವು ನ್ಯಾಯಾಲಯವು ಈ ತೀರ್ಪಿನಡಿ ಸ್ಥಾಪಿಸಿದ ಕಾನೂನುಬದ್ಧತೆ, ಅವಶ್ಯಕತೆ ಹಾಗೂ ಅನುಪಾತಿಯತೆ (ಪ್ರಪೊರ್ಷನಾಲಿಟಿ) ಈ ಮೂರು ಅಂಶಗಳಡಿ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ.

ಸಂಚಾರ್ ಸಾಥಿಯನ್ನು ಕಡ್ಡಾಯಗೊಳಿಸುವ ಸರ್ಕಾರದ ಕ್ರಮವು ನ್ಯಾಯಾಲಯವು ಹೇಳಿರುವ ಈ ಮೂರೂ ಅಂಶಗಳಡಿ ಸಮರ್ಥಿಸಿಕೊಳ್ಳುವಲ್ಲಿ ಸೋಲುತ್ತದೆ ಎನ್ನುತ್ತಾರೆ ತಜ್ಞರು. ಮೊದಲನೆಯದಾಗಿ, ಸರ್ಕಾರದ ಸಂಚಾರ್ ಸಾಥಿ ಅಪ್ಲಿಕೇಶನ್ ಕಡ್ಡಾಯ, ಬಳಕೆದಾರರ ಗೌಪ್ಯತೆಯನ್ನು ಖಾತರಿಪಡಿಸುವ ಮೇಲಿನ ಎಲ್ಲಾ ಕಾಯ್ದೆಗಳ ವಿರುದ್ಧವಾಗಿದೆ. ಅಷ್ಟೇ ಅಲ್ಲದೆ, ಸಂವಿಧಾನವು ನೀಡಿರುವ ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುವ ಕಾರಣ, ಈ ಕ್ರಮವು ಕಾನೂನುಬದ್ಧವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಇದರ ಅವಶ್ಯಕತೆ ಇದೆಯೇ ಎಂಬುದನ್ನು ಅವಲೋಕಿಸಿದರೆ, ಮೊಬೈಲ್ ಸಂಬಂಧಿತ ವಂಚನೆಗಳನ್ನು ಹತ್ತಿಕ್ಕುವಂತಹ ಕ್ರಮಕ್ಕಾಗಿ ಕಡ್ಡಾಯಯುಕ್ತ ಬಳಕೆಯ ಅಗತ್ಯವು ಕಂಡು ಬರುವುದಿಲ್ಲ. ಇಷ್ಟೆಲ್ಲಾ ಮುಂದುವರೆದ ತಂತ್ರಜ್ಞಾನದ ಭಂಡಾರದಲ್ಲಿ ಅನೇಕ ಸಾಧನಗಳಿದ್ದು, ಅವುಗಳನ್ನು ಇಗಾಗಲೇ ಸೈಬರ್ ಪೊಲೀಸ್ ಬಳಸುತ್ತಿದೆ. ಈ ವ್ಯವಸ್ಥೆಯಲ್ಲಿ ಸುಧಾರಣೆಯ ಅವಶ್ಯಕತೆ ಇದೆ ಎಂಬುದನ್ನು ಮಾತ್ರ ಒಪ್ಪಿಕೊಳ್ಳಬೇಕಿದೆ. ಆದರೆ, ಇಂತಹ ಸರಳ ಕಾರ್ಯಗಳಿಗಾಗಿ, ಮೊಬೈಲ್ ಸಿಸ್ಟಮ್‍ನಲ್ಲಿಯೇ ತೆಗೆಯಲಾಗದ ಕಡ್ಡಾಯಯುಕ್ತ ಅಪ್ಲಿಕೇಶನ್ ಅಳವಡಿಕೆಯ ಅವಶ್ಯಕತೆ ಏನಿದೆ? ಸಣ್ಣ ಸಂಖ್ಯೆಯ ಮೊಬೈಲ್ ವಂಚಕರನ್ನು ನಿಯಂತ್ರಿಸಲು ದೇಶದ ಎಲ್ಲರನ್ನು ಕಣ್ಗಾವಲಿನೊಳಗೆ ತರುವ ಅಗತ್ಯವೇನು? ಶಿಕ್ಷೆ ಮೊಬೈಲ್ ವಂಚಕರಿಗೋ, ಮೊಬೈಲ್ ಬಳಕೆದಾರರಿಗೋ? ಅಪ್ಲಿಕೇಶನ್ ಕಡ್ಡಾಯವಾದ ಕಾರಣ ಬಳಕೆದಾರರು ಮೊದಲೇ ಎಲ್ಲಾ ಅನುಮತಿಗಳನ್ನು ನೀಡುವುದು ಅನಿವಾರ್ಯವಾಗುತ್ತದೆ. ಅನುಮತಿ ಇರುವ ಕಾರಣ, ಬಳಕೆದಾರರು ನಡೆಸುವ ಪ್ರತಿ ಮಾತು ಕಥೆ, ಕಳಿಸುವ ಸಂದೇಶಗಳು, ಚಿತ್ರಗಳು, ವಿಡಿಯೋಗಳು, ಹಣಕಾಸು ವ್ಯವಹಾರ, ಅವರ ಉಡುಗೆ, ಊಟ, ಅಭಿರುಚಿಗಳ ಆಸಕ್ತಿ ಹೀಗೆ ಎಲ್ಲವನ್ನು ಸರ್ಕಾರದ ಕಣ್ಣುಗಳು ಸದಾ ನೋಡುತ್ತಿದ್ದು, ಅದರಲ್ಲಿನ ಯಾವುದೇ ಮಾಹಿತಿಯನ್ನು ಅದು ಪಡೆದುಕೊಳ್ಳಬಹುದಾಗಿದೆ. ನಮ್ಮ ಈ ಎಲ್ಲಾ ಮಾಹಿತಿಗಳು ಎಲ್ಲಿ ಸಂಗ್ರಹಿತವಾಗುತ್ತದೆ. ಅದನ್ನು ಹೇಗೆ ಸಂರಕ್ಷಿಸಲಾಗುತ್ತದೆ ಮತ್ತು ನಮ್ಮದೇ ಮಾಹಿತಿಯ ಮೇಲೆ ನಮಗೆ ಹಕ್ಕಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಸಹ ಇಲ್ಲವಾಗಿದೆ. ಹೀಗೆ ಸಂಗ್ರಹಿತವಾದ ನಮ್ಮದೇ ಬದುಕಿನ ಖಾಸಗಿ ಮಾಹಿತಿಗಳು ಕಾಲಾನಂತರದಲ್ಲಿ ನಮ್ಮ ಪೀಡನೆಗೆ ದುರ್ಬಳಕೆಯಾಗುವ ದುರ್ಗತಿ ಬರಬಹುದು. ಜೊತೆಗೆ ಸಾಮೂಹಿಕ ಕಣ್ಗಾವಲು ಅಥವಾ ಪ್ರೊಫೈಲಿಂಗ್ ರೀತಿಯ ಅನೇಕ ಉದ್ದೇಶಗಳಿಗೆ ಮಾಹಿತಿಯು ವಿಸ್ತರಣೆಯಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಬಳಸುತ್ತಿರುವ ಅನೇಕ ಅಪ್ಲಿಕೇಷನ್‌ಗಳು ನಮ್ಮ ಮಾಹಿತಿಯನ್ನು ಸಂಗ್ರಹಿಸುತ್ತಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಬರಬಹುದು. ಆದರೆ, ಅದನ್ನು ನಾವು ಆಯ್ಕೆ ಮಾಡಿಕೊಂಡಿದ್ದು, ಬೇಡವಾದರೆ ತೆಗೆಯಬಹುದಾಗಿದೆ. ಅಂತಹ ಅವಕಾಶವನ್ನು ಈ ಸರ್ಕಾರಿ ಅಪ್ಲಿಕೇಶನ್ ನೀಡುವುದಿಲ್ಲ.

ಇನ್ನು ಅನುಪಾತವನ್ನೂ ಸರ್ಕಾರದ ಈ ಕ್ರಮವು ದೃಢಪಡಿಸುವುದಿಲ್ಲ. ಈಗಾಗಲೇ ಹೇಳಿದಂತೆ, ಮೊಬೈಲ್ ಸಂಬಂಧಿ ವಂಚನೆಗಳನ್ನು ಹತ್ತಿಕ್ಕುವಂತಹ ಉಪಯೋಗಕ್ಕಾಗಿ ಮೊಬೈಲ್ ಸಿಸ್ಟಮ್‍ನಲ್ಲಿಯೇ ತೆಗೆಯಲಾಗದ ಅಪ್ಲಿಕೇಶನ್ ಸ್ಥಾಪಿಸಿ ಅದರ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ಜನರ ಗೌಪ್ಯತೆಯ ಹಕ್ಕನ್ನು ಅಪಾಯಕೊಡ್ಡುವುದು ಸಮನಾದ ಕ್ರಮವಾಗುವುದಿಲ್ಲ. ಇದು ಗುಬ್ಬಚ್ಚಿ ಕೊಲ್ಲಲು ಬ್ರಹ್ಮಾಸ್ತ್ರ ಬಳಕೆ ಮಾಡಿದಂತಾಗುತ್ತದೆ. ಅತಿ ಸಣ್ಣದಾದ ಸವಲತ್ತು (ಅದೂ ಗ್ಯಾರಂಟಿ ಇಲ್ಲದ) ನೀಡಿ, ಬದಲಿಯಾಗಿ ಅತಿ ಮಹತ್ವದ ಮೂಲಭೂತ ಹಕ್ಕನ್ನು ಒತ್ತೆ ಇರಿಸಿಕೊಳ್ಳುವ ಇರಾದೆಯ ಈ ಕ್ರಮವು ಜನರನ್ನು ಕಾನೂನುಬದ್ಧವಾಗಿ ಬೆತ್ತಲಾಗಿಸುವ ಕುತಂತ್ರವಾಗಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.

sanchar saathi

ಈ ಅಪ್ಲಿಕೇಶನ್ ಗ್ರಾಹಕರಿಗೆ ಭದ್ರತೆ ಒದಗಿಸುತ್ತದೆಂಬುದು ಕೇವಲ ಭ್ರಮೆ ಎನ್ನುತ್ತಾರೆ ತಜ್ಞರು. ಲಕ್ಷಾಂತರ ಮೊಬೈಲ್‌ಗಳಲ್ಲಿನ ಅಳವಡಿಕೆಯು ಹ್ಯಾಕರ್‌ಗಳಿಗೆ ಹಬ್ಬವಾಗಿ ಪರಿಣಮಿಸಿ, ಸುಲಭವಾಗಿ ದೊಡ್ಡ ಗುರಿಯನ್ನು ತಲುಪುವ ಅವಕಾಶ ಒದಗಿಸಿ ಅವರನ್ನು ದೊಡ್ಡ ನಿಧಿಯತ್ತ ಕರೆದೊಯ್ಯುತ್ತದೆ. ಜೊತೆಗೆ ಇದರಲ್ಲಿ ಉಂಟಾಗಬಹುದಾದ ಒಂದು ಸಣ್ಣ ಭದ್ರತಾ ಲೋಪವೂ ಸಹ ಇಡೀ ವ್ಯವಸ್ಥೆಗೆ ದೊಡ್ಡ ಅಪಾಯವನ್ನುಂಟು ಮಾಡುವ ಸಂದರ್ಭವಿದೆ ಎನ್ನುತ್ತಾರೆ ತಜ್ಞರು. ನಕಲಿ ಹ್ಯಾಂಡ್‍ಸೆಟ್‌ಗಳು ಮತ್ತು ಮೋಸದ (IMEI)ಸಂಖ್ಯೆಗಳ ಸಮಸ್ಯೆಗೆ ನೀಡುತ್ತಿರುವ ಈ ಪರಿಹಾರವು ಕಾಯಿಲೆಗಿಂತಲೂ, ಚಿಕಿತ್ಸೆಯೇ ಹೆಚ್ಚು ಹಾನಿಕಾರಿಯಾಗುವ ಸಾಧ್ಯತೆ ಇದೆ ಎಂದಿರುವ ಡಿಸೆಂಬರ್ 3ರ ದಿ ಹಿಂದು ಪತ್ರಿಕೆಯ ಸಂಪಾದಕೀಯವು, ಮುಂದುವರೆದು ‘ನರಕದ ಹಾದಿಯನ್ನು ಹೆಚ್ಚಿನಂಶ ಸದುದ್ದೇಶದಿಂದಲೇ ನಿರ್ಮಿಸಲಾಗುತ್ತದೆ’ ಎಂದು ಸರ್ಕಾರದ ಈ ಕ್ರಮವನ್ನು ವ್ಯಂಗಿಸಿದೆ. ಸಾಮಾನ್ಯವಾಗಿ ಸರ್ಕಾರವು ಪರಿಣಾಮಕಾರಿ ಸುರಕ್ಷಾ ಕ್ರಮಗಳನ್ನು ಕಟ್ಟುವುದರಲ್ಲಿ ಅಷ್ಟೊಂದು ಪರಿಣಿತಿ ಹೊಂದಿಲ್ಲದ ಕಾರಣ ಸುರಕ್ಷತೆಯನ್ನು ನಿರೀಕ್ಷಿಸಲಾಗದು ಮತ್ತು ಮಾಹಿತಿ ಸೋರಿಕೆಯ ಸಂಭವ ಹೆಚ್ಚಿದ್ದು, ಅದರ ನಿಯಂತ್ರಣದ ಹೊಣೆಗಾರಿಕೆ ಹೊರುವ ಬದ್ಧತೆಯನ್ನು ಸರ್ಕಾರ ತೋರುವುದಿಲ್ಲ ಎಂಬುದಕ್ಕೆ ಆಧಾರ್ ಮಾಹಿತಿ ಸೋರಿಕೆಯ ಪ್ರಕರಣವು ಉದಾಹರಣೆಯಾಗಿದೆ ಎನ್ನುತ್ತಾರೆ ಮಿಡಿಯಾ ನಾಮದ ಸ್ಥಾಪಕ ಸಂಪಾದಕರಾದ ನಿಖಿಲ್ ಪಾವಾ (ಡಿಸೆಂಬರ್ 3ರ ದಿ ನ್ಯೂಸ್ ಮಿನಿಟ್ ಸಂದರ್ಶನ).

ಅನೇಕರು ಇದು ಬಹು ಉಪಯೋಗಿ ಅಪ್ಲಿಕೇಶನ್ ಎಂದು ನಂಬಿದ್ದಾರೆ. ಈಗಾಗಲೇ ಲಕ್ಷಾಂತರ ಜನರು ತಮ್ಮ ಮೊಬೈಲ್‌ಗಳಿಗೆ ಇದನ್ನು ಇಳಿಸಿಕೊಂಡಿರುವ ಬಗ್ಗೆ ಸರ್ಕಾರವು ಮಾಹಿತಿ ನೀಡಿರುತ್ತದೆ. ಈ ಅಪ್ಲಿಕೇಶನ್ ಅಷ್ಟೊಂದು ಉಪಯೋಗಿಯಾಗಿದ್ದರೆ ಕಡ್ಡಾಯಗೊಳಿಸುವ ಕ್ರಮವೇಕೆ? ಕಡ್ಡಾಯವೆಂಬ ಮಾಹಿತಿ ಇಲ್ಲದ ಕಾರಣ ಜನರು ಇದನ್ನು ಬಳಕೆ ಮಾಡುತ್ತಿರಬಹುದು. ಅದೇನೆ ಆದರೂ, ಸರ್ಕಾರವು ಗೌಪ್ಯತೆಯಂತಹ ಮೂಲಭೂತವಾದ ಹಕ್ಕನ್ನು ಕಸಿದುಕೊಳ್ಳಲು ಸ್ಪಷ್ಟವಾದ ಕಾನೂನಿನ ಆಧಾರದಡಿ ಸೂಕ್ಷ ಮತ್ತು ಸಮಪ್ರಮಾಣದ ಸಮರ್ಥನೀಯ ಉದ್ದೇಶವಿರುವ ಕ್ರಮದಿಂದ ಮಾತ್ರ ಸಾಧ್ಯವೇ ಹೊರತು, ಇಂತಹ ಮೊಬೈಲ್ ಸಂಬಂಧಿ ವಂಚನೆಗಳನ್ನು ಹತ್ತಿಕ್ಕುವ ಸರಳ ಉದ್ದೇಶದಿಂದ ಸಾಧ್ಯವಿಲ್ಲ ಎನ್ನುವುದನ್ನು ಘನ ನ್ಯಾಯಾಲಯವು ಮತ್ತೆ ದೃಢಪಡಿಸಬೇಕಿದೆ.

ಈ ಅಪ್ಲಿಕೇಶನ್ ಕಡ್ಡಾಯತೆ ಕುರಿತು ಹೆಚ್ಚಿನ ವಿರೋಧ ಕೇಳಿಬಂದಿದೆ. ಆಪಲ್ ಕಂಪೆನಿಯು ಡಿಸೆಬಲ್ ಮಾಡಲು ಸಾಧ್ಯವಾಗದ ಈ ಅಪ್ಲಿಕೇಶನ್ ಅಳಡಿಸಲು ಒಪ್ಪಿರುವುದಿಲ್ಲ. ಇತರೆ ಕಂಪನಿಗಳು ದತ್ತಾಂಶ ಭದ್ರತೆ ಮತ್ತು ಬಳಕೆದಾರರ ಅನುಮತಿ ಇಲ್ಲದೆ ಇದನ್ನು ಕಡ್ಡಾಯವಾಗಿ ಮೊಬೈಲ್‌ನಲ್ಲಿ ಅಳವಡಿಸುವ ಕುರಿತು ಕಳಕಳಿ ವ್ಯಕ್ತಗೊಳಿಸಿದ್ದರೆ, ವಿರೋಧ ಪಕ್ಷಗಳು ಇದು ಕಾನೂನು ತಳಹದಿ ಇಲ್ಲದ, ಕದ್ದು ಕೇಳುವ ಅಪಾರದರ್ಶಕ ಸಾಧನವೆಂದು ಬಣ್ಣಿಸಿವೆ. ಇದಲ್ಲದೆ ಮುಖ್ಯವಾಹಿನಿಯ ಕೆಲ ಪತ್ರಿಕೆಗಳು ಹಾಗೂ ಅನೇಕ ಯುಟ್ಯೂಬ್ ಚಾನೆಲ್‌ಗಳು ಈ ಕ್ರಮವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ ಸಂಪಾದಕೀಯವು ಈ ಕ್ರಮದ ಆರ್ಥಿಕ ಅಂಶಗಳ ಬಗ್ಗೆ ಪ್ರಶ್ನಿಸಿದೆ. ಇದು ಕಳಪೆ ಆಡಳಿತವಷ್ಟೇ ಅಲ್ಲ, ಕಳಪೆ ಆರ್ಥಿಕತೆಯೂ ಹೌದು ಎಂದಿರುವ ಸಂಪಾದಕೀಯವು ಆಪಲ್‍ನಂತಹ ಕಂಪನಿಯು ತನ್ನ ಜಾಗತಿಕ ಉತ್ಪಾದನೆಯ ಸುಮಾರು ಶೇ. 20ರಷ್ಟು ಭಾರತದಲ್ಲಿ ಹೊಂದಿದ್ದು, ಅದರ ವ್ಯಾಪಾರ ಸಾಮರ್ಥ್ಯಕ್ಕೆ ಈ ಕ್ರಮವು ಹಾನಿ ಉಂಟುಮಾಡುವ ಸಂಭಾವ್ಯದ ಗಂಭೀರತೆಯನ್ನು ವ್ಯಕ್ತಪಡಿಸಿದೆ. ದಿ ಹಿಂದು ಪತ್ರಿಕೆಯ ಸಂಪಾದಕೀಯವು ನಿಯಮಗಳ ಷರತ್ತು 7(ಬಿ)ಯನ್ನು ಪ್ರಶ್ನಿಸಿದ್ದು, ಈ ಅಪ್ಲಿಕೇಶನನ್ನು ಜನರ ಕಣ್ಗಾವಲಿಗಾಗಿ ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಎಚ್ಚರಿಸುತ್ತಾ, ಪತ್ರಕರ್ತರು, ಹೊರಾಟಗಾರರು ಮತ್ತು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಸರ್ಕಾರವು ಈ ಹಿಂದೆ ಪೆಗಾಸಸ್ ತತ್ರಾಂಶ ಬಳಸಿದ ಹಿನ್ನೆಲೆಯಲ್ಲಿ ‘ಇದು ಸುಖಾಸುಮ್ಮನೆಯ ಆತಂಕವಲ್ಲ’ ಎಂದು ಹೇಳಿದೆ. ಅಂತೆಯೇ ಟೈಮ್ಸ್ ಆಫ್ ಇಂಡಿಯಾ ತನ್ನ ಸಂಪಾದಕೀಯದಲ್ಲಿ ‘ಪೋನ್‌ಗಳು ನಮ್ಮ ಖಾಸಗಿ ಹರವು. ಸರ್ಕಾರದ ಈ ಒಂದು ಕಡ್ಡಾಯ ಹೇರಿಕೆಯು ಮುಂದೆ ಅಂತಹ ಅನೇಕ ಹೇರಿಕೆಗಳ ಭಯವನ್ನು ಹುಟ್ಟಿಸುತ್ತದೆ’ ಎಂದಿದೆ.

jyotiraditya scindia

ಈ ಎಲ್ಲಾ ವಿರೋಧಗಳ ಹಿನ್ನೆಲೆಯಲ್ಲಿ, ಕೇಂದ್ರದ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾರವರು ಈ ಅಪ್ಲಿಕೇಶನ್ ಬೇಡವಾದಲ್ಲಿ ಬಳಕೆದಾರರು ಡಿಸೆಬಲ್ ಮಾಡಬಹುದು, ಇದು ಕಡ್ಡಾಯವಲ್ಲ ಎಂಬ ಮೌಖಿಕ ಸ್ಪಷ್ಟನೆ ನೀಡಿರುತ್ತಾರೆ. ಜೊತೆಗೆ ಪತ್ರಿಕಾ ಮಾಹಿತಿ ಬ್ಯೂರೋದ (PIB) ಪ್ರಕಟಣೆ ಮೂಲಕ ಮೊಬೈಲ್ ತಯಾರಕರಿಗೆ ನೀಡಿದ ಆದೇಶವನ್ನು ಹಿಂದೆಗೆದುಕೊಂಡಿರುವುದನ್ನು ತಿಳಿಸಲಾಗಿದೆ. ಆದರೆ, ಸರ್ಕಾರ ಹೀಗೆ ತನ್ನ ಇರಾದೆಯನ್ನು ಕೈಬಿಡುತ್ತದೆಂದು ನಂಬಿ ಕುಳಿತುಕೊಳ್ಳುವಂತಿಲ್ಲ. ಅಡ್ಡದಾರಿ ಹಿಡಿದಾದರೂ ತನಗೆ ಬೇಕಾದ್ದನ್ನು ಸಾಧಿಸಿಕೊಳ್ಳುವ ಪ್ರಸ್ತುತ ಕೇಂದ್ರ ಸರ್ಕಾರದ ಹಳೆಯ ಅನೇಕ ಕುತಂತ್ರಗಳ ಉದಾಹರಣೆಗಳು ನಮಗೆ ಪಾಠವಾಗಬೇಕಿದೆ. ಕಡ್ಡಾಯವಲ್ಲದ ಕಾರಣ ಅಪ್ಲಿಕೇಶನ್ ಡಿಸೆಬಲ್ ಮಾಡಬಹುದಾಗಿದ್ದರೂ, ಕಾಲಕಾಲಕ್ಕೆ ಅಪ್ಡೆಟ್ ಆಗುವ ಸಂದರ್ಭದಲ್ಲಿ ತಿಳಿಯದೆ ಯಾವ ಅನುಮತಿಗೆ ಒಪ್ಪಿಗೆ ನೀಡುತ್ತೇವೋ, ಸರ್ಕಾರ ಏನನ್ನು ನಮ್ಮ ಪೋನಿನೊಳಗೆ ಸೇರಿಸುತ್ತದೋ ಯಾರಿಗೆ ಗೊತ್ತು. ಎಲ್ಲವೂ ಇಲ್ಲಿಯವರೆಗೆ ನಮ್ಮ ನಿರ್ಲಕ್ಷ್ಯ ಹಾಗೂ ಅಜ್ಞಾನದಿಂದಲೇ ಘಟಿಸುತ್ತಿರುವುದು. ಒಮ್ಮೆ ಈ ಅಪ್ಲಿಕೇಶನ್ ನಮ್ಮ ಪೋನಿಗೆ ಇಳಿದ ನಂತರದಿಂದ ಅಪ್ಡೇಟ್‌ ನೆಪದಲ್ಲಿ ಅದರೊಳಗೆ ಸರ್ಕಾರ ಯಾವುದೇ ಮಾಹಿತಿಯನ್ನು ಹಾಕಬಹುದು ಅಥವಾ ನಮ್ಮ ಯಾವುದೇ ಮಾಹಿತಿಯನ್ನು ಪಡೆಯಬಹುದು ಎಂಬುದೇ ಆತಂಕಕಾರಿ ವಿಷಯ. ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಪೆಗಾಸಿಸ್ ಎಂಬ ತತ್ರಾಂಶವನ್ನು ಬಳಸಿ ಕೆಲ ಸಾಮಾಜಿಕ ಹೊರಾಟಗಾರರನ್ನು ಜೈಲಿಗೆ ತಳ್ಳಿದ್ದನ್ನು ಮರೆಯುವಂತಿಲ್ಲ.

ಇದನ್ನೂ ಓದಿ ಸಂಚಾರ್ ಸಾಥಿ | ‘ಡಿಜಿಟಲ್ ಗೂಢಾಚಾರಿಕೆ’ಗೆ ಹೊರಟಿತ್ತೇ ಮೋದಿ ಸರ್ಕಾರ?

ಸಂವಿಧಾನವನ್ನು ತೆಗೆದು ಹೊಸ ಸಂವಿಧಾನ ಬರೆಯುತ್ತೆವೆ ಎಂದು ಇವರು ಮೊದಲಿನಂತೆ ಕೂಗಿ ಹೇಳುತ್ತಿಲ್ಲ. ಬದಲಿಗೆ ಅಡ್ಡದಾರಿ ಹಿಡಿದು ಸಂವಿಧಾನದ ಮುಖ್ಯ ಅಂಗಗಳನ್ನು ಒಂದೊಂದಾಗಿ ಕಿತ್ತು, ಅದು ತಾನಾಗಿಯೇ ಸಾಯುವಂತೆ ಮಾಡುವ ಹುನ್ನಾರ ಇವರದಾಗಿದೆ. ಇವರನ್ನು ನೂರು ವರ್ಷಗಳಿಂದ ಎಲ್ಲರೂ ನಂಬಿ ಕೆಟ್ಟ ಕಾರಣದಿಂದಲೇ ಇಂದು ಪ್ರಜಾತಂತ್ರವು ಅಪಾಯದಲ್ಲಿ ಸಿಲುಕಿದೆ. ಜನರನ್ನು ನಿರಂತರ ಕಣ್ಗಾವಲಿನಲ್ಲಿಟ್ಟು ಅವರ ಬದುಕನ್ನು ನಿಯಂತ್ರಿಸ ಹೊರಟಿದ್ದ ನಿರ್ಧಾರವು ಸಂವಿಧಾನದ ವಿರುದ್ಧವೆಂದು ಇವರಿಗೆ ತಿಳಿಯದೇ ಏನಿಲ್ಲ; ಇವರ ಎಲ್ಲಾ ನಡೆಗಳು ಉದ್ದೇಶಪೂರ್ವಕವೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ, ಆದೇಶ ಹಿಂತೆಗೆದುಕೊಂಡಿದ್ದನ್ನು ನಂಬಿ ಕೂರುವಂತಿಲ್ಲ. ಒಂದು ಹೆಜ್ಜೆ ಹಿಂದಿಟ್ಟರೆ, ಹತ್ತು ಹೆಜ್ಚೆಗಳನ್ನು ರಹಸ್ಯವಾಗಿ ಮುಂದಿಡುವುದು ಇವರ ಸಾಮರ್ಥ್ಯ. ಆದ್ದರಿಂದ ‘ಸಂಚಾರ್ ಸಾಥಿ’ ಅಪ್ಲಿಕೇಶನ್ ಕಡ್ಡಾಯ ಅಳವಡಿಕೆ ಕುರಿತಾಗಿ ಹೆಚ್ಚಿನ ಚರ್ಚೆ, ಜಾಗೃತಿ ಮತ್ತು ವಿರೋಧಗಳು ನಿರಂತರ ನಡೆಯಬೇಕಿದೆ. ಈ ಬಗೆಗಿನ ಇವರ ಮುಂದಿನ ನಡೆಯನ್ನು ವಿರೋಧ ಪಕ್ಷಗಳು ಎಚ್ಚರಿಕೆಯಿಂದ ಗಮನಿಸುತ್ತಿರಬೇಕಾಗಿದೆ.

WhatsApp Image 2025 11 17 at 5.18.52 PM
ಲತಾಮಾಲ
+ posts

ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...