ಜಿಬಿಎ ಮುಖ್ಯ ಆಯುಕ್ತರಡಿ ಐದು ಪಾಲಿಕೆಗಳ ಆಯುಕ್ತರು ಕಾರ್ಯನಿರ್ವಹಿಸಬೇಕಿದೆ. ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಿಗೆ ಕಂದಾಯ, ಆಸ್ತಿ, ಮಾರುಕಟ್ಟೆ, ಆಡಳಿತ, ಹಣಕಾಸು, ಜಾಹೀರಾತು, ಸರ್ವೆ, ಮಾಹಿತಿ ತಂತ್ರಜ್ಞಾನ ವಿಭಾಗದ ಜವಾಬ್ದಾರಿ ನೀಡಲಾಗಿದೆ. ಜಂಟಿ ಆಯುಕ್ತರಿಗೆ ಯೋಜನೆ, ಆರೋಗ್ಯ–ಸ್ವಾಸ್ಥ್ಯ, ಶಿಕ್ಷಣ, ಅರಣ್ಯ–ತೋಟಗಾರಿಕೆ– ಕೆರೆ, ನಗರ ಯೋಜನೆ, ಟಿಡಿಆರ್, ಕಲ್ಯಾಣ ವಿಭಾಗಗಳನ್ನು ಹಂಚಲಾಗಿದೆ.
1862ರಲ್ಲಿ ಮೊದಲ ಮುನ್ಸಿಪಲ್ ಬೋರ್ಡ್ ರಚನೆಯಾದಾಗಿನಿಂದ ಬೆಂಗಳೂರು ನಗರದ ಆಡಳಿತ ಇತಿಹಾಸವು ಆರಂಭವಾಯಿತು. ಬ್ರಿಟಿಷ್ ಆಳ್ವಿಕೆಯಲ್ಲಿ ಕಂಟೋನ್ಮೆಂಟ್ ಮತ್ತು ಸಿಟಿ ಪ್ರದೇಶಗಳಾಗಿ ವಿಭಜಿತವಾಗಿದ್ದ ನಗರವು 1949ರಲ್ಲಿ ಸ್ವಾತಂತ್ರ್ಯದ ನಂತರ ಏಕೀಕೃತ ಬೆಂಗಳೂರು ಸಿಟಿ ಕಾರ್ಪೊರೇಷನ್ ಆಗಿ ರೂಪುಗೊಂಡಿತು, 53 ಮೇಯರ್‌ಗಳ ನಾಯಕತ್ವದಲ್ಲಿ ಅಭಿವೃದ್ಧಿಯ ಹಾದಿಯನ್ನು ಕಂಡಿತು. ನಗರದ ವಿಸ್ತರಣೆಯೊಂದಿಗೆ 1995ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ)ಯಾಗಿ ಮೇಲ್ದರ್ಜೆಗೇರಿತು, 87 ವಾರ್ಡ್‌ಗಳೊಂದಿಗೆ ಕಾರ್ಯನಿರ್ವಹಿಸಿತು. 2007ರಲ್ಲಿ ಏಳು ನಗರಸಭೆಗಳು, ಒಂದು ಪುರಸಭೆ ಹಾಗೂ 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಚಿಸಲಾಯಿತು, 198 ವಾರ್ಡ್‌ಗಳೊಂದಿಗೆ ನಗರದ ಆಡಳಿತವನ್ನು ವಿಸ್ತರಿಸಿತು.
ಈ ಬೆಳವಣಿಗೆ ನಗರದ ಜನಸಂಖ್ಯೆ ಮತ್ತು ಮೂಲಸೌಕರ್ಯ ಅಗತ್ಯಗಳಿಗೆ ಅನುಗುಣವಾಗಿತ್ತು, ಆದರೆ ಏಕಪಾಲಿಕೆ ವ್ಯವಸ್ಥೆಯ ಸವಾಲುಗಳು ಹೆಚ್ಚಿದೆ ಎಂಬ ಕಾರಣಕ್ಕಾಗಿ ವೇಗವಾಗಿ ಬೆಳೆಯುತ್ತಿರುವ 1.44 ಕೋಟಿ ಜನಸಂಖ್ಯೆಯ ನಗರದ ಸವಾಲುಗಳನ್ನು ಎದುರಿಸಲು, 2025ರ ಸೆಪ್ಟೆಂಬರ್ 2ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ಬಂದಿದೆ. ಬಿಬಿಎಂಪಿಯನ್ನು ಐದು ಸ್ವತಂತ್ರ ನಗರ ಪಾಲಿಕೆಗಳಾಗಿ ವಿಭಜಿಸಿ, ಅಧಿಕಾರ ವಿಕೇಂದ್ರೀಕರಣದ ಮೂಲಕ ಯೋಜನೆಗಳ ಪರಿಣಾಮಕಾರಿ ಜಾರಿಗೆ ಜಿಬಿಎ ದಾರಿ ಮಾಡಿದೆ. ಐದು ಪಾಲಿಕೆಗಳಿಗೆ 500 ಹೊಸ ಪಾಲಿಕೆ ಸದಸ್ಯರ ಆಯ್ಕೆಯ ಅವಕಾಶ, ತೆರಿಗೆ ಸಂಗ್ರಹದ ಸ್ವಾಯತ್ತತೆ ಮತ್ತು ದೊಡ್ಡ ಯೋಜನೆಗಳಿಗೆ ಜಿಬಿಎಯು ಹೊಸ ಗುರುತು ಸೃಷ್ಟಿಸಲು ಸಿದ್ಧವಾಗಿದೆ.
ಸಂವಿಧಾನದ 74ನೇ ತಿದ್ದುಪಡಿಯ ಆಶಯಕ್ಕೆ ಅನುಗುಣವಾಗಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. ಇದರ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ವಹಿಸುತ್ತಾರೆ. ಉಪಾಧ್ಯಕ್ಷರಾಗಿ ಡಿಸಿಎಂ ಇರುತ್ತಾರೆ. ಸಮಿತಿಯಲ್ಲಿ 75 ಸದಸ್ಯರಿದ್ದು, ಅವರಲ್ಲಿ ರಾಜ್ಯಸಭೆ, ಲೋಕಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದ್ದಾರೆ. ಜಿಬಿಎಯ ಮುಖ್ಯ ಆಯುಕ್ತರಾಗಿ ಮಹೇಶ್ವರ್ ರಾವ್ ನೇಮಕಗೊಂಡಿದ್ದಾರೆ.
ಬಿಬಿಎಂಪಿಯನ್ನು ಐದು ಸ್ವತಂತ್ರ ಪಾಲಿಕೆಗಳಾಗಿ ವಿಭಜಿಸಲಾಗಿದೆ. ಪ್ರತಿ ಪಾಲಿಕೆಯಲ್ಲಿ ಗರಿಷ್ಠ 150 ವಾರ್ಡ್‌ಗಳು ಇರಬಹುದು. ಸದ್ಯ 198 ವಾರ್ಡ್‌ಗಳನ್ನು ವಿಂಗಡಿಸಲಾಗಿದ್ದು, ಮುಂದೆ 500 ಹೊಸ ನಾಯಕರನ್ನು ಆಯ್ಕೆ ಮಾಡುವ ಅವಕಾಶವಿದೆ. ಮಹಿಳೆಯರು ಮತ್ತು ಪುರುಷರ ನಡುವೆ 50:50 ಅನುಪಾತ. ಪ್ರತಿ ಪಾಲಿಕೆಗೆ ಆಯುಕ್ತರು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಕೆಎಎಸ್ ಅಧಿಕಾರಿಗಳು ಮತ್ತು ಮುಖ್ಯ ಇಂಜಿನಿಯರ್‌ಗಳು ನೇಮಕಗೊಂಡಿದ್ದಾರೆ.
ಆಯಾ ಪಾಲಿಕೆಗೆ ಎ, ಬಿ, ಸಿ, ಡಿ ನೌಕರರು
ನಗರ ಪಾಲಿಕೆಯ ಆಡಳಿತದ ಮೇಲೆ ಜಿಬಿಎ ನಿಯಂತ್ರಣವಿರುವುದಿಲ್ಲ ಎಂದು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಗಿದೆ. ಆದರೆ ಈಗ ಪ್ರಸ್ತಾಪಿಸಿರುವ ಕಾರ್ಯಾಚರಣೆ ಪಟ್ಟಿಯಲ್ಲಿ ನಗರ ಪಾಲಿಕೆಗಳ ಎಲ್ಲ ಕಾರ್ಯವ್ಯಾಪ್ತಿಯೂ ಜಿಬಿಎ ಆಣತಿಯಂತೆಯೇ ನಡೆಯಲಿದೆ. ಮುಖ್ಯ ಆಯುಕ್ತರಲ್ಲದೆ ಜಿಬಿಎಯಲ್ಲಿರುವ ವಿಶೇಷ ಆಯುಕ್ತರು ಪಾಲಿಕೆಗಳ ಎಲ್ಲ ವಿಭಾಗಗಳ ಮೇಲೆ ನಿಗಾ ವಹಿಸಿ ನಿಯಂತ್ರಣ ಸಾಧಿಸಲಿದ್ದಾರೆ. ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆದು ಕಾರ್ಪೊರೇಟರ್‌ಗಳು ಬರುವವರೆಗೂ ಅಧಿಕಾರಿಗಳದ್ದೇ ಆಟವಾಗಿರುತ್ತದೆ. ಈಗಾಗಲೇ ಬಿಬಿಎಂಪಿಗೆ ಚುನಾವಣೆಯಾಗದೆ ಐದು ವರ್ಷವಾಗುತ್ತಿದೆ. ಗ್ರೇಟರ್ ಬೆಂಗಳೂರಾಗಿ ಐದು ನಗರ ಪಾಲಿಕೆಗಳಾದ ಮೇಲೆ ಕಾಮಗಾರಿಯೊಂದಕ್ಕೆ ಹಲವು ಅಧಿಕಾರಿಗಳ ಒಪ್ಪಿಗೆ ಪಡೆಯಬೇಕಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎ, ಬಿ, ಸಿ, ಡಿ ವೃಂದದ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಯು ಹೊಸದಾಗಿ ರಚನೆಯಾಗುವ ಯಾವ ನಗರ ಪಾಲಿಕೆಗೆ ಬರುತ್ತದೋ ಅದರಡಿ ಕೆಲಸ ನಿರ್ವಹಿಸುವಂತೆ ನಗರಾಭಿವೃದ್ಧಿ ಇಲಾಖೆ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಬಿಬಿಎಂಪಿ ಸ್ಥಗಿತಗೊಂಡಿರುವುದರಿಂದ, ಬಿಬಿಎಂಪಿಗೆ ಮಂಜೂರಾಗಿರುವ ವಿವಿಧ ವೃಂದದ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಜಿಬಿಎಗೆ ಅಥವಾ ಇತರೆ ನಗರ ಪಾಲಿಕೆಗೆ ವರ್ಗಾಯಿಸಲು ನಿರ್ದಿಷ್ಟ ಆದೇಶ ಹೊರಡಿಸಿದರೆ ಮಾತ್ರ ಅವರು ಬೇರೆಡೆಗೆ ಹೋಗಬಹುದು. 198 ವಾರ್ಡ್ ಕಚೇರಿಗಳು ಯಾವ ನಗರ ಪಾಲಿಕೆಗಳ ವ್ಯಾಪ್ತಿಗೆ ಬರುತ್ತವೋ ಅಲ್ಲಿಯೇ ಆ ಸಿಬ್ಬಂದಿಯ ಕೆಲಸ ಮುಂದುವರಿಯುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದಿಕ್ಕು ತಪ್ಪಿಸುವ ದೃಶ್ಯಮಾಧ್ಯಮಗಳು ಮತ್ತು ಧರ್ಮಯಾತ್ರೆಗಳು
ಬಿಬಿಎಂಪಿ ಕೇಂದ್ರ ಕಚೇರಿ ಅಥವಾ ಯಾವುದೇ ಕಚೇರಿಯಲ್ಲಿರುವ ಸಿಬ್ಬಂದಿಯ ಹುದ್ದೆ ಮುಂದುವರಿಸಿರುವ ಆದೇಶವಿಲ್ಲದಿದ್ದರೆ, ಅಂತಹವರು ಸರ್ಕಾರ ಅಥವಾ ಜಿಬಿಎಯಲ್ಲಿ ಸ್ಥಳ ನಿರೀಕ್ಷಣೆಗಾಗಿ ವರದಿ ಮಾಡಿಕೊಳ್ಳಬೇಕು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು ಜಿಬಿಎ ಮುಖ್ಯ ಆಯುಕ್ತರ ಬಳಿ ವರದಿ ಮಾಡಿಕೊಂಡು, ಐದು ನಗರ ಪಾಲಿಕೆಗಳು, ಬಿ-ಸ್ಮೈಲ್‌ಗೆ ಕಡತಗಳನ್ನು ವರ್ಗಾಯಿಸುವ ಪೂರ್ಣ ಜವಾಬ್ದಾರಿ ನಿಭಾಯಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವ್ಯವಸ್ಥಾಪಕರು, ಎಫ್ ಡಿಎ, ಎಸ್ ಡಿಎ, ಸ್ಟೆನೊಗ್ರಾಫರ್, ಚಾಲಕರು ಮತ್ತು ಗ್ರೂಪ್-ಡಿ ನೌಕರರು (1,820), ಲೆಕ್ಕಾಧಿಕಾರಿಗಳು (44), ಆಡಳಿತ ವಿಭಾಗ (3), ಕ್ಲಿನಿಕಲ್ ಹೆಲ್ತ್, ಕೌನ್ಸಿಲ್, ಶಿಕ್ಷಣ, ಮುಖ್ಯ- ಅಧೀಕ್ಷಕ- ಕಾರ್ಯಪಾಲಕ, ಸಹಾಯಕ, ಕಿರಿಯ ಎಂಜಿನಿಯರ್‍ಗಳು, ಅರಣ್ಯ, ಕಾನೂನು ಘಟಕ, ತೋಟಗಾರಿಕೆ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ, ಕಂದಾಯ, ಆಸ್ತಿ, ಜಾಹೀರಾತು, ಟಿಡಿಆರ್, ಮಾರುಕಟ್ಟೆ, ನೈರ್ಮಲ್ಯ, ಪೌರಕಾರ್ಮಿಕರು, ಸರ್ವೆ, ನಗರ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಬಿಎ ಹಾಗೂ ಐದು ನಗರ ಪಾಲಿಕೆಗಳು, ವಲಯ ಕಚೇರಿಗಳಿಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.
ಯಾರ್‍ಯಾರು ಯಾವ ಕೆಲಸ?
ಟಿವಿಸಿಸಿ, ಕ್ಯೂಸಿ, ಬಿಎಸ್‌ಡಬ್ಲ್ಯುಎಂಎಲ್, ಯೋಜನೆ ವಿಭಾಗಗಳ ಮುಖ್ಯ ಎಂಜಿನಿಯರ್‌ಗಳಿಗೆ ತಲಾ ಒಬ್ಬರು ಅಧೀಕ್ಷಕ ಎಂಜಿನಿಯರ್ (ಎಸ್‌ಇ), ತಲಾ 10 ಕಾರ್ಯಪಾಲಕ ಎಂಜಿನಿಯರ್ (ಇಇ), ತಲಾ 20 ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ), ತಲಾ 20 ಸಹಾಯಕ ಎಂಜಿನಿಯರ್ (ಎಇ) ಇರಲಿದ್ದಾರೆ. ಬಿ–ಸ್ಮೈಲ್‌ನಲ್ಲಿ ಸಿಒಒ ಜೊತೆಗೆ ನಾಲ್ವರು ಮುಖ್ಯ ಎಂಜಿನಿಯರ್, ನಾಲ್ವರು ಎಸ್ಇ, 20 ಇಇ, 30 ಎಇಇ, 50 ಎಇಗಳಿರುತ್ತಾರೆ.
ಜಿಬಿಎ ಮುಖ್ಯ ಆಯುಕ್ತರಡಿ ಐದು ಪಾಲಿಕೆಗಳ ಆಯುಕ್ತರು ಕಾರ್ಯನಿರ್ವಹಿಸಬೇಕಿದೆ. ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಕಂದಾಯ, ಆಸ್ತಿ, ಮಾರುಕಟ್ಟೆ, ಆಡಳಿತ, ಹಣಕಾಸು, ಜಾಹೀರಾತು, ಸರ್ವೆ, ಮಾಹಿತಿ ತಂತ್ರಜ್ಞಾನ ವಿಭಾಗದ ಜವಾಬ್ದಾರಿ ನೀಡಲಾಗಿದೆ. ಜಂಟಿ ಆಯುಕ್ತರಿಗೆ ಯೋಜನೆ, ಆರೋಗ್ಯ–ಸ್ವಾಸ್ಥ್ಯ, ಶಿಕ್ಷಣ, ಅರಣ್ಯ–ತೋಟಗಾರಿಕೆ–ಕೆರೆ, ನಗರ ಯೋಜನೆ, ಟಿಡಿಆರ್, ಕಲ್ಯಾಣ ವಿಭಾಗಗಳನ್ನು ಹಂಚಲಾಗಿದೆ. ಜಿಬಿಎನಲ್ಲಿರುವ ವಿಶೇಷ ಆಯುಕ್ತರು ಹೆಚ್ಚುವರಿ– ಜಂಟಿ ಆಯುಕ್ತರು ಹೊಂದಿರುವ ಜವಾಬ್ದಾರಿಗಳನ್ನೇ ಹೊಂದಿದ್ದು, ಅವರು ಹಿಡಿತ ಸಾಧಿಸಲಿದ್ದಾರೆ.
ನಗರ ಪಾಲಿಕೆಗಳಲ್ಲಿ ತಲಾ ಮೂವರು ಮುಖ್ಯ ಎಂಜಿನಿಯರ್‌ಗಳಿರುತ್ತಾರೆ. ಯೋಜನೆ ಹಾಗೂ ವಲಯ ಮಟ್ಟದ ಕಾಮಗಾರಿಗಳನ್ನು ಇವರು ನಿರ್ವಹಿಸಲಿದ್ದಾರೆ. ವಾರ್ಡ್ ಎಂಜಿನಿಯರಿಂಗ್ ಕಾಮಗಾರಿ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ, 50 x 80 ಅಡಿಗಳವರೆಗಿನ ಕಟ್ಟಡಗಳಿಗೆ ನಕ್ಷೆ ಅನುಮೋದನೆಗೆ ಸಿಒ– ವಾರ್ಡ್ ಎಂಬ ಹುದ್ದೆ ಸೃಷ್ಟಿಸಲಾಗಿದೆ.
ಮೂಲಸೌಕರ್ಯ: ಬಿಡಬ್ಲ್ಯೂಎಸ್‌ಎಸ್‌ಬಿ ನೀರು, ಬಿಎಸ್‌ಡಬ್ಲ್ಯುಎಂಎಲ್ ಕಸ ನಿರ್ವಹಣೆಯೊಂದಿಗೆ ಜಿಬಿಎ ಜೊತೆ ಸಮನ್ವಯ ಸಾಧಿಸಲಿದೆ.
ನವೆಂಬರ್ 1ಕ್ಕೆ ವಾರ್ಡ್ ಪುನರ್ ವಿಂಗಡಣೆ, 30ಕ್ಕೆ ಮೀಸಲಾತಿ ಅಧಿಸೂಚನೆ ಪ್ರಕಟ:
ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ನ್ಯಾಯಾಲಯ ಕೂಡ ಅದನ್ನು ಒಪ್ಪಿದೆ. 1-11-2025 ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. 30-11-2025ರಂದು ವಾರ್ಡ್‌ಗಳ ಮೀಸಲಾತಿ ಅಧಿಸೂಚನೆ ಹೊರಡಿಸಲಾಗುವುದು. ಇದಾದ ಬಳಿಕ ಚುನಾವಣೆ ನಡೆಸಲಿದೆ. ಅವರು ಒಂದು ವಾರ, ಹದಿನೈದು ದಿನಗಳಲ್ಲಿ ಮಾಡಬಹುದು. ಈಗಾಗಲೇ ಚುನಾವಣೆ ನಡೆಸಲು ಪೂರ್ವಸಿದ್ಧತೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರದಿಂದ ಪತ್ರ ಬರೆಯಲಾಗಿದೆ. ಅವರೂ ಕೂಡ ಅತಿ ಶೀಘ್ರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗ ಚುನಾವಣೆ ಮಾಡಲಿದೆ.
ಗಣ್ಯರ ಸ್ವಾಗತಕ್ಕೆ ಮೇಯರ್ ಬದಲು ಮುಖ್ಯ ಆಯುಕ್ತರು
ಸಾಂಪ್ರದಾಯಿಕವಾಗಿ ಗಣ್ಯರು ರಾಜ್ಯಕ್ಕೆ ಬಂದಾಗ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಮೇಯರ್ ಹೋಗುತ್ತಿದ್ದರು. ಈಗ ಐವರು ಮೇಯರ್ ಇರುವುದರಿಂದ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹೋಗುತ್ತಾರೆ. ನಂತರದ ದಿನಗಳಲ್ಲಿ ಆಯಾ ವ್ಯಾಪ್ತಿಯ ಕಡೆ ಆಗಮಿಸಿದರೆ ಆಯಾ ವ್ಯಾಪ್ತಿಯಲ್ಲಿ ಮೇಯರ್ ತೆರಳಲಿದ್ದಾರೆ.
ಜಿಬಿಎ ಮತ್ತು ನಗರ ಪಾಲಿಕೆ ಕಚೇರಿ ವಿಳಾಸ
ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಅನೆಕ್ಸ್ 1 ಮತ್ತು 2 ಕಟ್ಟಡ (ಪಾಲಿಕೆ ಕೇಂದ್ರ ಕಚೇರಿ ಆವರಣ) ಹಡ್ಸನ್ ವೃತ್ತ
ಬೆಂಗಳೂರು ಪೂರ್ವ ನಗರ ಪಾಲಿಕೆ: ಮಹದೇವಪುರ ವಲಯ ಆಯುಕ್ತರ ಕಚೇರಿ, ಆರ್‌ಎಚ್‌ಬಿ ಕಾಲೊನಿ, ಫೀನಿಕ್ಸ್ ಮಾಲ್ ಎದುರು, ವೈಟ್‌ಫೀಲ್ಡ್ ಮುಖ್ಯರಸ್ತೆ
ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ರಾಜರಾಜೇಶ್ವರಿ ನಗರ ವಲಯ ಆಯುಕ್ತರ ಕಚೇರಿ, ಆರ್‌ಆರ್ ನಗರ ಐಡಿಯಲ್ ಹೋಮ್ಸ್ ಬಡಾವಣೆ, 18ನೇ ಅಡ್ಡರಸ್ತೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ: ಪೂರ್ವ ವಲಯ ಆಯುಕ್ತರ ಕಚೇರಿ, ಎಂ.ಜಿ.ರಸ್ತೆ, ಪಿಯುಬಿ ಕಟ್ಟಡದ 10ನೇ ಮಹಡಿ
ಬೆಂಗಳೂರು ದಕ್ಷಿಣ ನಗರ ಪಾಲಿಕೆ: ದಕ್ಷಿಣ ವಲಯ ಆಯುಕ್ತರ ಕಚೇರಿ, ಜಯನಗರ 2ನೇ ಹಂತ, 9ನೇ ಮುಖ್ಯರಸ್ತೆ
ಬೆಂಗಳೂರು ಉತ್ತರ ನಗರ ಪಾಲಿಕೆ: ಯಲಹಂಕ ವಲಯ ಆಯುಕ್ತರ ಕಚೇರಿ, ಬ್ಯಾಟರಾಯನಪುರ, ಅಮೃತಹಳ್ಳಿ ಮುಖ್ಯರಸ್ತೆ
ಜಿಬಿಎಯ ಮುಖ್ಯ ಉದ್ದೇಶಗಳು
– ದೊಡ್ಡ ಯೋಜನೆಗಳ ಜಾರಿ (ಉದಾ: ಟನಲ್ ರಸ್ತೆಗಳು )
– ಪಾಲಿಕೆಗಳ ನಡುವೆ ಸಮನ್ವಯ.
– ಉತ್ತಮ ಸೇವೆ ಮತ್ತು ಆಡಳಿತ.
– ಸರ್ಕಾರದಿಂದ ಬರುವ ಹಣವನ್ನು ಪಾಲಿಕೆಗಳಿಗೆ ಹಂಚಿಕೆ.
ಜಿಬಿಎಯ ಕಚೇರಿ ಹಡ್ಸನ್ ವೃತ್ತದ ಅನೆಕ್ಸ್ 1 ಮತ್ತು 2 ಕಟ್ಟಡದಲ್ಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವುದು ಕಡ್ಡಾಯ
ಆರ್ಥಿಕ ಮತ್ತು ಆಡಳಿತಾತ್ಮಕ ಅಂಶಗಳು
ಪಾಲಿಕೆಗಳ ತೆರಿಗೆ ಸಂಗ್ರಹ ಆಯಾ ಪಾಲಿಕೆಗೆ ಸೀಮಿತ. ಆರ್ಥಿಕವಾಗಿ ದುರ್ಬಲ ಪಾಲಿಕೆಗಳಿಗೆ ಸರ್ಕಾರ ನೆರವು ನೀಡುತ್ತದೆ. ಬೆಂಗಳೂರು ಪೂರ್ವ ಆರ್ಥಿಕವಾಗಿ ಬಲಿಷ್ಠ (₹912 ಕೋಟಿ), ಪಶ್ಚಿಮ ಪಾಲಿಕೆ ದುರ್ಬಲವಾಗಿದ್ದು (₹580 ಕೋಟಿ). ಬಿಬಿಎಂಪಿ ಬಜೆಟ್ ಮುಂದುವರಿಯುತ್ತದೆ.
ಆಡಳಿತ ರಚನೆ: ಜಿಬಿಎಯಡಿ ಬಿ-ಸ್ಮೈಲ್, ಟಿವಿಸಿಸಿ, ಕ್ಯೂಸಿ, ಬಿಎಸ್‌ಡಬ್ಲ್ಯುಎಂಎಲ್ ವಿಭಾಗಗಳು. ಪಾಲಿಕೆಗಳಲ್ಲಿ ಹೆಚ್ಚುವರಿ ಆಯುಕ್ತರು ಕಂದಾಯ, ಆಸ್ತಿ, ಹಣಕಾಸು ನಿರ್ವಹಿಸುತ್ತಾರೆ. ಜಂಟಿ ಆಯುಕ್ತರು ಯೋಜನೆ, ಆರೋಗ್ಯ, ಶಿಕ್ಷಣ ನೋಡಿಕೊಳ್ಳುತ್ತಾರೆ. ನೌಕರರು ಎ, ಬಿ, ಸಿ, ಡಿ ವೃಂದದವರು ಆಯಾ ಪಾಲಿಕೆಗೆ ವರ್ಗಾವಣೆ.
ನವೆಂಬರ್ 1ರಂದು ಹೊಸ ಕಚೇರಿ ಕಟ್ಟಡಗಳಿಗೆ ಭೂಮಿಪೂಜೆ. ಒಂದೇ ರೀತಿಯ ವಿನ್ಯಾಸಕ್ಕೆ 5 ಲಕ್ಷ ಬಹುಮಾನ. ಲೋಗೋಗೆ ಸಾರ್ವಜನಿಕ ಸಲಹೆ.
ಚುನಾವಣೆ ಮತ್ತು ಮುಂದಿನ ಯೋಜನೆಗಳು
ವಾರ್ಡ್ ಪುನರ್ ವಿಂಗಡಣೆಗೆ ಆಯೋಗ ರಚನೆ. 2011 ಜನಗಣತಿ ಆಧಾರದಲ್ಲಿ ಸರಾಸರಿ 35-40 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್.
– ಸೆಪ್ಟೆಂಬರ್ 23: ವರದಿ ಸಲ್ಲಿಕೆ.
– ಸೆಪ್ಟೆಂಬರ್ 26: ಕರಡು ಅಧಿಸೂಚನೆ.
– ನವೆಂಬರ್ 1: ಅಂತಿಮ ಅಧಿಸೂಚನೆ.
– ನವೆಂಬರ್ 30: ಮೀಸಲಾತಿ ಅಧಿಸೂಚನೆ.
ಚುನಾವಣೆ 2026ರಲ್ಲಿ ನಡೆಯುವ ಸಾಧ್ಯತೆ. ಸುಪ್ರೀಂ ಕೋರ್ಟ್ ಅಫಿಡವಿಟ್ ಒಪ್ಪಿದೆ. ಮೇಯರ್ ಅಧಿಕಾರ ಅವಧಿ 2.5 ವರ್ಷ.
ವಾರ್ಡ್ಗಳ ಪುನರ್ ವಿಂಗಡಣೆ ಮಾರ್ಗಸೂಚಿಗಳು
ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ನಗರ ಪಾಲಿಕೆಗಳ ಒಳಗಿನ ಪ್ರತಿಯೊಂದು ವಾರ್ಡ್‌ನ ಜನಸಂಖ್ಯೆ ಸಾಧ್ಯವಾದಷ್ಟೂ ಒಂದೇ ಆಗಿರಬೇಕು. 2011ರ ಜನಗಣತಿಯ ಅಂಕಿ–ಅಂಶವನ್ನು ಪರಿಗಣಿಸಬೇಕು.
ವಿಧಾನಸಭೆಯ ಸದಸ್ಯರ ಚುನಾವಣೆ ಕ್ಷೇತ್ರ ವ್ಯಾಪ್ತಿಯೊಳಗೆ ವಾರ್ಡ್‌ಗಳನ್ನು ವಿಂಗಡಿಸಬೇಕು, ಇತರೆ ಕ್ಷೇತ್ರಕ್ಕೆ ವ್ಯಾಪಿಸುವಂತಿಲ್ಲ
ಐದು ನಗರ ಪಾಲಿಕೆಗಳು: ವಿವರಗಳು
1.ಬೆಂಗಳೂರು ಕೇಂದ್ರ ನಗರ ಪಾಲಿಕೆ
– ವ್ಯಾಪ್ತಿ: ಸಿ.ವಿ. ರಾಮನ್ ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳು. ಪುಲಕೇಶಿನಗರದ ಕುಶಾಲನಗರ ವಾರ್ಡ್.
– ಪ್ರದೇಶ: 78 ಚದರ ಕಿ.ಮೀ.
– ವಾರ್ಡ್ ಸಂಖ್ಯೆ: 42
– ತೆರಿಗೆ ಸಂಗ್ರಹ (2025): ₹659 ಕೋಟಿ.
– ಕಚೇರಿ: ಪೂರ್ವ ವಲಯ ಆಯುಕ್ತರ ಕಚೇರಿ, ಎಂ.ಜಿ. ರಸ್ತೆ, ಪಿಯುಬಿ ಕಟ್ಟಡದ 10ನೇ ಮಹಡಿ.
– ಉಸ್ತುವಾರಿ: ಆಯುಕ್ತ ಪಿ. ರಾಜೇಂದ್ರ ಚೋಳನ್. ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ರಾಹುಲ್ ಶರಣಪ್ಪ ಸಂಕನೂರ.
– ವಲಯಗಳು: ವಲಯ 1 (ಶಾಂತಿನಗರ, ಸಿ.ವಿ. ರಾಮನ್ ನಗರ), ವಲಯ 2 (ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಚಾಮರಾಜಪೇಟೆ).
2. ಬೆಂಗಳೂರು ಉತ್ತರ ನಗರ ಪಾಲಿಕೆ
– ವ್ಯಾಪ್ತಿ: ಬ್ಯಾಟರಾಯನಪುರ, ಹೆಬ್ಬಾಳ, ಸರ್ವಜ್ಞನಗರ, ಯಲಹಂಕ ವಿಧಾನಸಭಾ ಕ್ಷೇತ್ರಗಳು. ದಾಸರಹಳ್ಳಿಯ ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ. ದಾಸರಹಳ್ಳಿ. ರಾಜರಾಜೇಶ್ವರಿ ನಗರದ ಜಾಲಹಳ್ಳಿ, ಜೆ.ಪಿ. ಪಾರ್ಕ್, ಯಶವಂತಪುರ ವಾರ್ಡ್‌ಗಳು. ಪುಲಕೇಶಿನಗರದ ಕುಶಾಲನಗರ ಹೊರತುಪಡಿಸಿ ಎಲ್ಲ ವಾರ್ಡ್‌ಗಳು.
– ಪ್ರದೇಶ: 158 ಚದರ ಕಿ.ಮೀ.
– ವಾರ್ಡ್ ಸಂಖ್ಯೆ: 41
– ತೆರಿಗೆ ಸಂಗ್ರಹ (2025): ₹543 ಕೋಟಿ.
– ಕಚೇರಿ: ಯಲಹಂಕ ವಲಯ ಆಯುಕ್ತರ ಕಚೇರಿ, ಬ್ಯಾಟರಾಯನಪುರ, ಅಮೃತಹಳ್ಳಿ ಮುಖ್ಯರಸ್ತೆ.
– ಉಸ್ತುವಾರಿ: ಆಯುಕ್ತ ಪೊಮ್ಮಲ ಸುನೀಲ್ ಕುಮಾರ್. ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ಆರ್. ಲತಾ.
– ವಲಯಗಳು: ವಲಯ 1 (ಬ್ಯಾಟರಾಯನಪುರ, ಪುಲಕೇಶಿನಗರ, ಸರ್ವಜ್ಞನಗರ), ವಲಯ 2 (ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಹೆಬ್ಬಾಳ, ಯಲಹಂಕ).
3. ಬೆಂಗಳೂರು ದಕ್ಷಿಣ ನಗರ ಪಾಲಿಕೆ
– ವ್ಯಾಪ್ತಿ: ಬಿಟಿಎಂ ಲೇಔಟ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ ವಿಧಾನಸಭಾ ಕ್ಷೇತ್ರಗಳು. ಮಹದೇವಪುರದ ಬೆಳ್ಳಂದೂರಿನ ಕೆಲವು ಭಾಗ. ಪದ್ಮನಾಭನಗರದ ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭ ನಗರ, ಚಿಕ್ಕಲಸಂದ್ರ. ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ವಾರ್ಡ್‌ನ ಕೆಲವು ಭಾಗ. ಯಶವಂತಪುರದ ಹೆಮ್ಮಿಗೆಪುರ ವಾರ್ಡ್‌ನ ಕೆಲವು ಭಾಗ. ಆನೇಕಲ್‌ನ ಸಿಂಗಸಂದ್ರ (ಕೂಡ್ಲು) ವಾರ್ಡ್.
– ಪ್ರದೇಶ: 155 ಚದರ ಕಿ.ಮೀ.
– ವಾರ್ಡ್ ಸಂಖ್ಯೆ: 37
– ತೆರಿಗೆ ಸಂಗ್ರಹ (2025): ₹733 ಕೋಟಿ.
– ಕಚೇರಿ: ದಕ್ಷಿಣ ವಲಯ ಆಯುಕ್ತರ ಕಚೇರಿ, ಜಯನಗರ 2ನೇ ಹಂತ, 9ನೇ ಮುಖ್ಯರಸ್ತೆ.
– ಉಸ್ತುವಾರಿ: ಆಯುಕ್ತ ಕೆ.ಎನ್. ರಮೇಶ್. ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ಪದ್ವೆ ರಾಹುಲ್ ತುಕಾರಾಮ್.
– ವಲಯಗಳು: ವಲಯ 1 (ಪದ್ಮನಾಭನಗರ, ರಾಜರಾಜೇಶ್ವರಿ ನಗರ, ಯಶವಂತಪುರ, ಜಯನಗರ, ಬೆಂಗಳೂರು ದಕ್ಷಿಣ), ವಲಯ 2 (ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಮಹದೇವಪುರ, ಆನೇಕಲ್).
4. ಬೆಂಗಳೂರು ಪೂರ್ವ ನಗರ ಪಾಲಿಕೆ
– ವ್ಯಾಪ್ತಿ: ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳು. ಬೆಳ್ಳಂದೂರು ವಾರ್ಡ್‌ನ ಕೆಲವು ಪ್ರದೇಶ ಹೊರತುಪಡಿಸಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳು.
– ಪ್ರದೇಶ: 168 ಚದರ ಕಿ.ಮೀ.
– ವಾರ್ಡ್ ಸಂಖ್ಯೆ: 17.
– ತೆರಿಗೆ ಸಂಗ್ರಹ (2025): ₹912 ಕೋಟಿ.
– ಕಚೇರಿ: ಮಹದೇವಪುರ ವಲಯ ಆಯುಕ್ತರ ಕಚೇರಿ, ಆರ್‌ಎಚ್‌ಬಿ ಕಾಲೊನಿ, ಫೀನಿಕ್ಸ್ ಮಾಲ್ ಎದುರು, ವೈಟ್‌ಫೀಲ್ಡ್ ಮುಖ್ಯರಸ್ತೆ.
– ಉಸ್ತುವಾರಿ: ಆಯುಕ್ತ ಡಿ.ಎಸ್. ರಮೇಶ್. ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ಲೋಕಂಡೆ ಸ್ನೇಹಲ್ ಸುಧಾಕರ್.
– ವಲಯಗಳು: ವಲಯ 1 (ಮಹದೇವಪುರ), ವಲಯ 2 (ಕೆ.ಆರ್. ಪುರ).
5. ಬೆಂಗಳೂರು ಪಶ್ಚಿಮ ನಗರ ಪಾಲಿಕೆ
– ವ್ಯಾಪ್ತಿ: ಬಸವನಗುಡಿ, ಗೋವಿಂದರಾಜನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳು. ದಾಸರಹಳ್ಳಿಯ ಚೊಕ್ಕಸಂದ್ರ, ರಾಜಗೋಪಾಲ ನಗರ, ಹೆಗ್ಗನಹಳ್ಳಿ, ಪದ್ಮನಾಭನಗರದ ಹೊಸಕೆರೆಹಳ್ಳಿ, ಗಣೇಶಮಂದಿರ, ಕರಿಸಂದ್ರ, ಯಡಿಯೂರು. ರಾಜರಾಜೇಶ್ವರಿ ನಗರದ ಎಚ್‌ಎಂಟಿ, ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ವಾರ್ಡ್‌ನ ಕೆಲವು ಭಾಗ. ಯಶವಂತಪುರದ ಹೆಮ್ಮಿಗೆಪುರ ಹೊರತುಪಡಿಸಿ ಎಲ್ಲ ವಾರ್ಡ್.
– ಪ್ರದೇಶ: 161 ಚದರ ಕಿ.ಮೀ.
– ವಾರ್ಡ್ ಸಂಖ್ಯೆ: 64.
– ತೆರಿಗೆ ಸಂಗ್ರಹ (2025): ₹580 ಕೋಟಿ.
– ಕಚೇರಿ: ರಾಜರಾಜೇಶ್ವರಿ ನಗರ ವಲಯ ಆಯುಕ್ತರ ಕಚೇರಿ, ಆರ್‌ಆರ್ ನಗರ ಐಡಿಯಲ್ ಹೋಮ್ಸ್ ಬಡಾವಣೆ, 18ನೇ ಅಡ್ಡರಸ್ತೆ.
– ಉಸ್ತುವಾರಿ: ಆಯುಕ್ತ ಕೆ.ವಿ. ರಾಜೇಂದ್ರ. ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ದಿಗ್ವಜಯ್ ಬೋಡ್ಕೆ.
– ವಲಯಗಳು: ವಲಯ 1 (ಯಶವಂತಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್), ವಲಯ 2 (ಮಲ್ಲೇಶ್ವರ, ರಾಜಾಜಿನಗರ, ಗೋವಿಂದರಾಜನಗರ, ಬಸವನಗುಡಿ, ಪದ್ಮನಾಭನಗರ).





