ಒಬ್ಬ ಲೇಖಕ ಜಾತಿ, ಧರ್ಮ, ಪ್ರದೇಶ, ಲಿಂಗ ಈ ಗಡಿಗಳನ್ನೆಲ್ಲ ಮೀರಿ ಹೋಗದಿದ್ದರೆ ಮನುಕುಲವನ್ನು ತಾಯ್ತನದಲ್ಲಿ ನೋಡುವ ದೃಷ್ಟಿಯನ್ನು ಕಳೆದುಕೊಂಡು ಬಿಡುತ್ತಾನೆ. ಭೈರಪ್ಪನವರ ಸಾಹಿತ್ಯ ಇಂತಹ ದೃಷ್ಟಿಯ ಕೊರತೆಯಿಂದ ಬಳಲುತ್ತಿದೆ ಎಂಬುದನ್ನು ಕನ್ನಡ ಸಾಹಿತ್ಯವಲಯ ಮತ್ತೆ ಮತ್ತೆ ನೋವಿನಿಂದ ಗುರುತಿಸಿದೆ.
ನಾನು ಸಾಹಿತ್ಯಾಸಕ್ತಿ ಬೆಳೆಸಿಕೊಂಡು, ಸಾಹಿತ್ಯ ಓದುತ್ತಾ, ಬರೆಯುತ್ತಾ ದಶಕಕ್ಕೂ ಹೆಚ್ಚು ಕಾಲ ಕಳೆದ ಮೇಲೂ ಭೈರಪ್ಪನವರ ಸಾಹಿತ್ಯವನ್ನು ಮುಟ್ಟಿರಲಿಲ್ಲ. ಇದಕ್ಕೆ ಕಾರಣ ಲಂಕೇಶ್ ಪತ್ರಿಕೆಯ ಓದು. ಲಂಕೇಶರು ಯಾವ ಲೇಖಕನನ್ನು ಇಷ್ಟಪಡುತ್ತಿರಲಿಲ್ಲವೋ ನಾನೂ ಇಷ್ಟಪಡುತ್ತಿರಲಿಲ್ಲ.
ನಾನು ಬೆಂಗಳೂರಿನಿಂದ ಮರಳಿ ಬಂದ ನಂತರ ಶಿವಮೊಗ್ಗದಲ್ಲಿ ಕೈಮಗ್ಗದ ಉಡುಪುಗಳು ಇತ್ಯಾದಿ ಮಾರಾಟದ ಮಳಿಗೆ ಆರಂಭಿಸಿದಾಗ ನಮ್ಮಲ್ಲಿ ಅತ್ಯುತ್ತಮ ಕಾದಂಬರಿಗಳನ್ನು ಮಳಿಗೆಯಲ್ಲಿಡಬೇಕು ಎಂದು ಚಿಂತಿಸಿದೆ. ನನ್ನ ವಿನಂತಿಯ ಮೇರೆಗೆ ರಹಮತ್ ತರೀಕೆರೆ ಸರ್ ಅವರು ಕನ್ನಡದ ಅತ್ತುತ್ತಮವಾದ 25 ಕಾದಂಬರಿಗಳನ್ನು ಪಟ್ಟಿ ಮಾಡಿ ನೀಡಿದರು. ಅದರಲ್ಲಿ ಗೃಹಭಂಗವೂ ಒಂದು.
‘ಗೃಹಭಂಗ’ ನಿಜಕ್ಕೂ ಒಂದು ಒಳ್ಳೆಯ ಕಾದಂಬರಿ. ಭೈರಪ್ಪನವರ ಆತ್ಮಕಥೆ ಓದಿ ಗೃಹಭಂಗ ಓದಿದರೆ ಈ ಕಾದಂಬರಿ ಅವರ ಆತ್ಮಕಥೆಯ ರೂಪಾಂತರ ಎನಿಸುತ್ತದೆ. ದಾರುಣ ಬಡತನದಲ್ಲಿ ನಲುಗುವ ಬ್ರಾಹ್ಮಣ ಕುಟುಂಬವೊಂದರ ನೈಜಕಥೆಯಾಗಿ ಅದು ಮೂಡಿಬಂದಿದೆ. ಆ ಸಮುದಾಯದ ಬಡತನ ಮಾತ್ರವಲ್ಲ, ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿದ್ದರೂ ಎಲ್ಲ ಮನುಷ್ಯರಂತೆ ಅವರೊಳಗಿನ ಸಣ್ಣತನ, ನೀಚತನ, ಹೆಣ್ಣನ್ನು ಒಂದು ಪ್ರಾಣಿಯಾಗಿ ನೋಡುವ ಮನಸ್ಥಿತಿ ಎಲ್ಲವೂ ಇಲ್ಲಿ ಸಹಜವಾಗಿಯೇ ಕಲಾತ್ಮಕನೆಲೆಯಲ್ಲಿ ಅನಾವರಣಗೊಂಡಿದೆ. ಇಲ್ಲಿ ಯಾವುದನ್ನೂ ಮುಚ್ಚಿಡುವ ಅಥವಾ ವೈಭವೀಕರಿಸುವ ಕೆಲಸವನ್ನು ಕಾದಂಬರಿಕಾರರು ಮಾಡಿಲ್ಲ. ಈ ಕಾದಂಬರಿ ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಬೈರಪ್ಪನವರ ಬಗೆಗೆ ಮೂಡಿದ್ದ ಅಭಿಪ್ರಾಯವನ್ನು ಮತ್ತೆ ಪರಿಶೀಲಿಸಬೇಕೇನೋ ಅನಿಸಿತು. ಆದರೆ, ನಿರ್ದಿಷ್ಟ ಉದ್ದೇಶಗಳನ್ನಿಟ್ಟುಕೊಂಡು ಅವರು ಬರೆಯಲಾರಂಭಿಸಿದ ‘ಕವಲು’, ‘ಆವರಣ’ದಂತಹ ಕಾದಂಬರಿಗಳು ಭೈರಪ್ಪನವರ ಬಗ್ಗೆ ಲಂಕೇಶ್ ಪತ್ರಿಕೆ ಮೂಡಿಸಿದ ಅಭಿಪ್ರಾಯವನ್ನು ನನ್ನ ಮನಸ್ಸಿನಲ್ಲಿ ಗಟ್ಟಿಗೊಳಿಸಿದವು.
‘ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ, ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಅವರು ಕೂಡ ತಮ್ಮ ಕಾದಂಬರಿಗಳ ನಿರ್ಮಿತಿಯ ಸಂದರ್ಭದಲ್ಲಿ ತರತಮ ಮಾಡುತ್ತಾರೆ ಎಂದು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಬಿ ಕೃಷ್ಣಪ್ಪ ಅವರು ನೋವಿನ ಪ್ರಶ್ನೆಯನ್ನೆತ್ತಿದ್ದರು. ‘ಇಲ್ಲ ಅಂತಹ ತರತಮ ಎನ್ನುವುದು ಕಾದಂಬರಿಯ ಮೇಲ್ನೋಟದ ಗ್ರಹಿಕೆಯಷ್ಟೆ, ಕುವೆಂಪು ಅವರ ಸಾಹಿತ್ಯದ ಜೀವದ್ರವ್ಯ ಎಲ್ಲ ಶೋಷಿತರ ಪರವಾಗಿದೆ ‘ಎಂಬ ನಿಲುವಿಗೆ ದಲಿತ ಸಂಘರ್ಷ ಸಮಿತಿಯೂ ಒಳಗೊಂಡಂತೆ ಕನ್ನಡ ಸಾಹಿತ್ಯಲೋಕ ಬಂದಿತು. ತಮ್ಮ ಕೃತಿ ‘ಕುಸುಮಬಾಲೆ’, ‘ಮಲೆಗಳಲ್ಲಿ ಮದುಮಗಳ’ ಮೊಮ್ಮಗಳು ಎಂದು ಕರೆದ ದೇವನೂರು ಮಹಾದೇವ ಅವರ ಮಾತಿನ ಹಿಂದಿನ ಧ್ವನಿಯಲ್ಲಿಯೇ ಇದನ್ನು ಗುರುತಿಸಬಹುದು.
ಒಬ್ಬ ಲೇಖಕ ಜಾತಿ, ಧರ್ಮ, ಪ್ರದೇಶ, ಲಿಂಗ ಈ ಗಡಿಗಳನ್ನೆಲ್ಲ ಮೀರಿ ಹೋಗದಿದ್ದರೆ ಮನುಕುಲವನ್ನು ತಾಯ್ತನದಲ್ಲಿ ನೋಡುವ ದೃಷ್ಟಿಯನ್ನು ಕಳೆದುಕೊಂಡು ಬಿಡುತ್ತಾನೆ. ಭೈರಪ್ಪನವರ ಸಾಹಿತ್ಯ ಇಂತಹ ದೃಷ್ಟಿಯ ಕೊರತೆಯಿಂದ ಬಳಲುತ್ತಿದೆ ಎಂಬುದನ್ನು ಕನ್ನಡ ಸಾಹಿತ್ಯವಲಯ ಮತ್ತೆ ಮತ್ತೆ ನೋವಿನಿಂದ ಗುರುತಿಸಿದೆ.
ಒಬ್ಬ ಲೇಖಕನ ಕೃತಿಯ ಬಿಡುಗಡೆ ಸಮಾರಂಭವೋ, ಸಂವಾದ ಕಾರ್ಯಕ್ರಮವೋ ಅಲ್ಲಿ ನೆರೆದ ಅಭಿಮಾನಿಗಳನ್ನು ನಾನು ಸುಮ್ಮನೆ ಗಮನಿಸುತ್ತೇನೆ. ಅವರು ಆ ಲೇಖಕನ ಹುಟ್ಟಿದ ಜಾತಿಯ, ಧರ್ಮದ ಜನರೇ ಆಗಿದ್ದರೆ ನನ್ನಲ್ಲಿ ವಿಷಾದ ಮೂಡುತ್ತದೆ. ನಮ್ಮ ಸಾಹಿತ್ಯ ಎಲ್ಲ ಸಮುದಾಯಗಳ ಓದುಗರ ವಿಶ್ವಾಸವನ್ನು ಗಳಿಸದಿದ್ದರೆ ಅದು ಪ್ರಮುಖ ಅಂಗವೈಕಲ್ಯದಿಂದ ಬಳಲುತ್ತಿದೆ ಎಂದೇ ಅರ್ಥ. ‘ಮನುಷ್ಯಕುಲಂ ತಾನೊಂದೆ ವಲಂ’ ಎಂದು ಸಾರಿದ ಕನ್ನಡದ ಆದಿಕವಿ ಪಂಪನ ‘ಆದಿಪುರಾಣ’ವನ್ನು ಶ್ರೇಷ್ಟಕಾವ್ಯವೆಂದು ಒಪ್ಪಿಕೊಳ್ಳುತ್ತಲೇ ಜೈನಧರ್ಮದ ಚೌಕಟ್ಟಿನಿಂದ ಈ ಕಾವ್ಯ ಹೊರಬಂದಿದ್ದರೆ ಇದೊಂದು ಜಗತ್ ಕಾವ್ಯವಾಗುತ್ತಿತ್ತೆಂದು ಕುವೆಂಪು ಅಭಿಪ್ರಾಯಪಟ್ಟಿದ್ದಾರೆ.
ಸಾಹಿತ್ಯದ ಗಂಭೀರ ಓದುಗ/ಳು ತಾನು ಓದುವ ಸಾಹಿತ್ಯದ ಮಿತಿಗಳನ್ನೂ ಗುರುತಿಸುತ್ತಾನೆ/ಳೆ. ಆದರೆ, ಸಾಹಿತ್ಯದ ಓದಿನ ಅಭಿರುಚಿ ಮೂಡಿಸುವುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಒಂದು ದೊಡ್ಡ ಓದುಗವರ್ಗವನ್ನು ತಮ್ಮ ಸಾಹಿತ್ಯದಿಂದ ಸೃಷ್ಟಿಸಿದ ಭೈರಪ್ಪನವರಿಗೆ ಕನ್ನಡ ಸಾಹಿತ್ಯ ಕ್ಷೇತ್ರ ಕೃತಜ್ಞವಾಗಿರಬೇಕು.
ಈ ಲೇಖನ ಓದಿದ್ದೀರಾ?: ಬಿಂಬ-ಬಿಂಬನ: ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಆತ್ಮಕತೆ
ಭೈರಪ್ಪ ಸಾಹಿತ್ಯದಾಚೆಗೆ ವಿಶೇಷ ವ್ಯಕ್ತಿತ್ವ ಹೊಂದಿದ್ದರು. ಅವರು ತಮ್ಮ ಹುಟ್ಟೂರು ಸಂತೆಶಿವರದ ಜನರ ಜತೆ ನಿರಂತರ ಸಂಪರ್ಕದಲ್ಲಿದ್ದರು. ಅವರಿಗಾಗಿ ಸರ್ಕಾರದಲ್ಲಿ ತಮ್ಮ ಪ್ರಭಾವ ಬಳಸಿ ಇಪ್ಪತ್ತೈದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಲ್ಲಿನ ಕೆರೆಗಳನ್ನು ಪುನರುಜ್ಜೀವಗೊಳಿಸುವ ಕೆಲಸವನ್ನು ಮಾಡಿದ್ದಾರೆ. ತಮ್ಮ ಊರಿನಲ್ಲಿ ದತ್ತಿ ಸಂಸ್ಥೆಯೊಂದನ್ನು ಆರಂಭಿಸಿ ಗ್ರಂಥಾಲಯ ಸ್ಥಾಪಿಸಿದ್ದಾರೆ. ಸಾಹಿತ್ಯ ಚಟುವಟಿಕೆಗಳು ನಡೆಯುವಂತೆ ನೋಡಿಕೊಂಡಿದ್ದಾರೆ. ತಮಗೆ ಬಂದ ಪ್ರಶಸ್ತಿಯ ಹಣದಲ್ಲಿ ಬಹುಪಾಲನ್ನು ಸಮಾಜಮುಖಿ ಕೆಲಸಗಳಿಗಾಗಿ ವಿನಿಯೋಗಿಸಿದ್ದಾರೆ. ಕನ್ನಡ ಭಾಷೆಗೆ ಕುತ್ತು ಬಂದಾಗಲೆಲ್ಲ ಅದರ ವಿರುದ್ಧ ದನಿಯೆತ್ತಿದ್ದಾರೆ.
ಭೈರಪ್ಪನವರ ಕಡು ಬಲಪಂಥೀಯ ನಿಲುವುಗಳು ಅವರಿಗೊಂದು ದೊಡ್ಡ ಅಭಿಮಾನಿ ವರ್ಗವನ್ನೇ ಸೃಷ್ಟಿಸಿತ್ತು. ಈ ಅಭಿಮಾನಿಗಳೆಲ್ಲರೂ ಅವರ ಸಾಹಿತ್ಯ ಓದಿದವರೇನೂ ಆಗಿರಲಿಲ್ಲ. ಹಾಗೆಯೇ ಅವರ ಈ ನಿಲುವುಗಳು ಎಚ್ಚೆತ್ತ ಜನರಿಂದ ಸದಾ ಟೀಕೆಗೆ, ಚರ್ಚೆಗೆ ಒಳಗಾಗುತ್ತಿದ್ದವು. ಒಂದು ತಲೆಮಾರನ್ನು ಪ್ರಭಾವಿಸಿದ ಕವಿ ಸಿದ್ಧಲಿಂಗಯ್ಯ ಕೂಡ ತಮ್ಮ ಸಂಧ್ಯಾಕಾಲದಲ್ಲಿ ಬಲಪಂಥೀಯ ರಾಜಕೀಯ ಶಕ್ತಿಗಳ ಜೊತೆ ಗುರುತಿಸಿಕೊಂಡವರು. ಆದರೆ, ಸಿದ್ದಲಿಂಗಯ್ಯ ಅವರಿಲ್ಲದ ಲೋಕದಲ್ಲಿ ಅವರ ಹೋರಾಟದ ಕಿಚ್ಚು ಮೂಡಿಸುವ ಕವಿತೆಗಳು ಅದೇ ರೊಚ್ಚಿನಿಂದ ದಮನಿತರನ್ನು ನಿರಂತರ ಜಾಗೃತಗೊಳಿಸುತ್ತಲೇ ಇರುತ್ತವೆ.
ತನ್ನ ಜೀವಪರ ತಾಯ್ತನದಿಂದ ಮಿಡಿಯುವ ಭೈರಪ್ಪನವರ ‘ಗೃಹಭಂಗ’ವೂ ಸದಾ ಜೀವಂತವಾಗಿರುತ್ತದೆ.




