ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಬ್ರಾಹ್ಮಣರಿಂದ ಬ್ರಾಹ್ಮಣರಿಗಾಗಿ ಹುಟ್ಟಿಕೊಂಡ ಬ್ಯಾಂಕ್ ಆಗಿರುವ ಬೆಂಗಳೂರಿನ ‘ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ’ ಮತ್ತು ‘ಶ್ರೀ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ – ಆಪರೇಟಿವ್ ಲಿಮಿಟೆಡ್’ ಮೇಲಿದೆ.
ಮಾಧ್ವ ಬ್ರಾಹ್ಮಣರ ಆರಾಧ್ಯದೈವವಾದ ಗುರು ರಾಘವೇಂದ್ರರ ಹೆಸರನ್ನು ಇಟ್ಟುಕೊಂಡಿರುವ ಈ ಬ್ಯಾಂಕ್‌ನಲ್ಲಿ ಬರೋಬ್ಬರಿ₹1544 ಕೋಟಿ ವಂಚನೆ ನಡೆದಿದೆ. ಬ್ಯಾಂಕಿನ ಒಳಗೆ ರಾಘವೇಂದ್ರ ಸ್ವಾಮಿಗಳ ದೊಡ್ಡ ಫೋಟೋ ಇಟ್ಟುಕೊಂಡಿದ್ದ ಈ ಬ್ಯಾಂಕಿನಲ್ಲಿ ಆಡಳಿತ ಮಂಡಳಿಯಿಂದ ಹಿಡಿದು ತಳವರ್ಗದ ಸಿಬ್ಬಂದಿವರೆಗೆ ಬ್ರಾಹ್ಮಣರೇ ಕೆಲಸ ಮಾಡುವ ಬ್ಯಾಂಕ್ ಆಗಿತ್ತು. ಸಹಜವಾಗಿಯೇ, ಬ್ರಾಹ್ಮಣರಿಗೆ ಇದು ನಮ್ಮ ಬ್ಯಾಂಕ್ ಎಂದು ಎನಿಸಿತ್ತು. ಕಷ್ಟಪಟ್ಟು ಕೂಡಿಟ್ಟ ಹಣವನ್ನು ನಂಬಿಕೆಯಿಟ್ಟಿದ ಈ ಬ್ಯಾಂಕ್ ಮೇಲೆ ಸುರಿದಿದ್ದರು. ಬಹುತೇಕ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಗುರುರಾಘವೇಂದ್ರ ಬ್ಯಾಂಕಿನ ಗ್ರಾಹಕರೇ ಆಗಿದ್ದರು. ಆದರೆ, ನಂಬಿಕೆ ಇಟ್ಟು ಬ್ಯಾಂಕ್‌ನಲ್ಲಿ ಹಣವಿಟ್ಟಿದ್ದ ಈ ಬ್ರಾಹ್ಮಣರಿಗೆ ಮೋಸ ಮಾಡಿದ್ದು ಕೂಡ ಬ್ರಾಹ್ಮಣರೇ…ಕೆಲ ಬ್ರಾಹ್ಮಣರು ಸೇರಿಯೇ ಈ ಬ್ಯಾಂಕ್ ಅನ್ನು ಮುಳುಗಿಸಿದರು. ಇನ್ನೊಂದು ವಿಚಾರ ಏನೆಂದರೆ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವಾಗಲೇ ಈ ಬ್ಯಾಂಕ್ ಮುಳುಗಿದೆ.
ಬೆಂಗಳೂರಿನ ‘ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ’ ಮತ್ತು ‘ಶ್ರೀ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ – ಆಪರೇಟಿವ್ ಲಿಮಿಟೆಡ್’ ನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಠೇವಣಿದಾರರಿಗೆ ಬರೋಬ್ಬರಿ ₹1,544 ಕೋಟಿ ವಂಚಿಸಲಾಗಿತ್ತು. ಈ ಬ್ಯಾಂಕ್ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, “ವಂಚನೆ ಮಾಡಿದ ಆರೋಪಿಗಳ ವಿರುದ್ಧ ಆರು ವಾರಗಳಲ್ಲಿ ದೋಷಾರೋಪ ನಿಗದಿ ಮಾಡಬೇಕು” ಎಂದು ಸುಪ್ರಿಂಕೋರ್ಟ್ ನಿರ್ದೇಶನ ನೀಡಿದೆ.

ಹೌದು, ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬ್ಯಾಂಕ್ ಅಧ್ಯಕ್ಷ ಕೆ ರಾಮಕೃಷ್ಣ ಅವರು ಸುಪ್ರಿಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಹಾಗೂ ಸತೀಶ್ ಚಂದ್ರ ಶರ್ಮಾ ಅವರ ಪೀಠ ವಿಚಾರಣೆ ನಡೆಸಿದೆ. ಈ ವೇಳೆ, “ಆರೋಪಿಗಳ ವಿರುದ್ಧ ಈವರೆಗೂ ದೋಷರೋಪ ನಿಗದಿಯಾಗಿಲ್ಲ” ಎಂದು ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, “ಆರೋಪಿ ಅರ್ಜಿದಾರರು ದೋಷಾರೋಪಣೆ ನಿಗದಿ ಹಾಗೂ ವಿಚಾರಣೆಯ ಸಮಯದಲ್ಲಿ ಸಹಕರಿಸಬೇಕು. ಜತೆಗೆ ದೋಷಾರೋಪ ನಿಗದಿಯಾದ ಬಳಿಕ ವಿಚಾರಣಾ ನ್ಯಾಯಾಲಯ ವಿಚಾರಣೆಯನ್ನು ಆರಂಭ ಮಾಡಬೇಕು” ಎಂದು ತಿಳಿಸಿದೆ. ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.
ಈ ಸುದ್ದಿ ಓದಿದ್ದೀರಾ? ಸುಡಾನ್ ಮಿಲಿಟರಿ ಸಂಘರ್ಷವನ್ನು ಬೆಂಬಲಿಸುತ್ತಿರುವವರು ಯಾರು?
ಏನಿದು ಪ್ರಕರಣ?
ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಠೇವಣಿ ಇಟ್ಟಿದ್ದರು. ಸಾಲಗಾರರು, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳೊಂದಿಗೆ ಶಾಮೀಲಾಗಿ ನಕಲಿ ಠೇವಣಿ ಹಾಗೂ ನಿಶ್ಚಿತ ಠೇವಣಿಗಳ ಆಧಾರದಲ್ಲಿ ಭಾರೀ ಮೊತ್ತದ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ್ದರು.
ಸಂಸ್ಥೆಯಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಿರಿಯ ನಾಗರಿಕರು ತಮ್ಮ ಉಳಿತಾಯ ಹಾಗೂ ನಿವೃತ್ತಿ ವೇತನದ ಹಣವನ್ನು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಠೇವಣಿ ಇಟ್ಟಿದ್ದರು. ಆದರೆ, ಸಂಸ್ಥೆಯ ಆಡಳಿತ ಮಂಡಳಿಯು ಸಾಲಗಾರರಿಂದ ಸೂಕ್ತ ಶ್ಯೂರಿಟಿ ಪಡೆಯದೆ ಸಾಲ ನೀಡಿತ್ತು. ಜತೆಗೆ ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಲ ಮಂಜೂರು ಮಾಡಿತ್ತು.
ಮೊದಲಿಗೆ ಈ ಪ್ರಕರಣದಲ್ಲಿ ಸಂಸ್ಥೆಯ ಅಧ್ಯಕ್ಷ ಸೇರಿದಂತೆ 4 ಮಂದಿ ಬಂಧನವಾಗಿದ್ದರು. ಅದಕ್ಕೂ ಮೊದಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿ ಠೇವಣಿದಾರರ ರಕ್ಷಣಾ ಕಾಯಿದೆ-2004 ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಸಂಸ್ಥೆ ಹಾಗೂ ಇತರರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಮೂರು ವರ್ಷಗಳಿಂದ ಸಿಐಡಿ ಮತ್ತು ಸಹಕಾರ ಇಲಾಖೆ ತನಿಖೆ ನಡೆಸಿ ಹಲವಾರು ಮಾಹಿತಿಗಳನ್ನು ಕಲೆಹಾಕಿತ್ತು. ಸಿಐಡಿ, ಸಹಕಾರ ಇಲಾಖೆ ಮತ್ತು ಇಡಿ(ಜಾರಿ ನಿರ್ದೇಶನಾಲಯ) ಹಗರಣದ ತನಿಖೆಯನ್ನ ನಡೆಸಿ ₹1290 ಕೋಟಿ ವಂಚನೆಯನ್ನು ಪತ್ತೆ ಮಾಡಿತ್ತು.
ಸಿಐಡಿ ತನಿಖೆ ಸಮರ್ಪಕವಾಗಿ ನಡೆಯುವ ಸಮಯದಲ್ಲಿ ಸಿಬಿಐಗೆ ವಹಿಸಿದರೆ ತನಿಖೆ ವಿಳಂಬ ಆಗಬಹುದು ಎಂದು ತಡೆಹಿಡಿಯಲಾಗಿತ್ತು. ಆ ಬಳಿಕ, ಸಿಬಿಐಗೆ ಈ ಪ್ರಕರಣವನ್ನು ಕಳುಹಿಸಲಾಗಿತ್ತು.
ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ಗಳಲ್ಲಿ ನಡೆದ ಅವ್ಯವಹಾರ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದರು.
ಇನ್ನು ಮುಂದುವರೆದು ತನಿಖೆ ಆರಂಭಿಸಿದ ಜಾರಿ ನಿರ್ದೇಶನಾಲಯ 2024ರಲ್ಲಿಮಹತ್ವದ ಮಾಹಿತಿಯನ್ನು ಕರ್ನಾಟಕ ಕೋರ್ಟ್‌ಗೆ ನೀಡಿತ್ತು. ಬ್ಯಾಂಕ್‌ನಲ್ಲಿ 1,544.43 ಕೋಟಿ ರೂಪಾಯಿ ಮೊತ್ತದ 2,876 ಸಾಲಗಳಿಗೆ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿತ್ತು.
ಬ್ಯಾಂಕ್‌ನ ಅಧ್ಯಕ್ಷ ಕೆ ರಾಮಕೃಷ್ಣ, ಉಪಾಧ್ಯಕ್ಷರಾಗಿದ್ದ ಅವರ ಮಗ ಕೆ ಆರ್ ವೇಣೂಗೋಪಾಲ್ ಸೇರಿದಂತೆ 27 ಮಂದಿ ₹920.46 ಕೋಟಿ ಮೊತ್ತದ ಸಾಲವನ್ನು ಪಡೆದು ವಂಚಿಸಿದ್ದರು. ರಾಮಕೃಷ್ಣ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಕಾಲದಲ್ಲಿ 2,876 ಸಾಲಗಳನ್ನು ನೀಡಿದ್ದರು. ಈ ಮೊತ್ತ 1,544.43 ಕೋಟಿ. ಇದರಲ್ಲಿ ₹892.85 ಕೋಟಿ ಬೋಗಸ್ ದಾಖಲೆಗಳಿಗೆ ಸಾಲ ಕೊಡಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಫೆಬ್ರುವರಿಯಲ್ಲಿ ರಾಮಕೃಷ್ಣ ಅವರನ್ನ ಬಂಧಿಸಲಾಗಿತ್ತು. ಬಿಎನ್‌ಎಸ್‌ಎಸ್ ಸೆಕ್ಷನ್ 479 ಆಧರಿಸಿ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯನ್ನುತಿರಸ್ಕರಿಸಿದ ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಗೆ ರಾಮಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇನ್ನು ಈ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಮಧ್ಯಮವರ್ಗದ ಬ್ರಾಹ್ಮಣರೇ ಠೇವಣಿದಾರರು, ಷೇರುದಾರರು ಮತ್ತು ಖಾತೆ ಹೊಂದಿದ್ದ ಗ್ರಾಹಕರಾಗಿದ್ದರು. ಬ್ಯಾಂಕ್ ಬಂದ್ ಆದಾಗ ಸಹಜವಾಗಿ ಠೇವಣಿದಾರರು, ಷೇರುದಾರರು ಮತ್ತು ಖಾತೆ ಹೊಂದಿದ್ದ ಗ್ರಾಹಕರು ಆತಂಕಕ್ಕೊಳಗಾದರು. ಭಾರೀ ಮೊತ್ತದ ಠೇವಣಿ ಇಟ್ಟ ಕೆಲ ನಿವೃತ್ತರು ಆಘಾತಕ್ಕೊಳಗಾಗಿ ಅಸುನೀಗಿದರು. ಗ್ರಾಹಕರ ಗೋಳಾಟ ನರಳಾಟ ಮೇರೆ ಮೀರಿತು.

ಈ ನೊಂದವರ ಪೈಕಿ ಲಕ್ಷ್ಮೀನಾರಾಯಣ ಹೆಬ್ಬಾರ್ ಅವರ ವಿಚಾರ ಹೆಚ್ಚು ಸದ್ದು ಮಾಡಿತ್ತು. 78 ವರ್ಷದ ಇವರು ಬೆಂಕಿಯ ಮುಂದೆ ನಿಂತು ಬೆವರು ಸುರಿಸಿ ಅಡುಗೆ ಕೆಲಸ ಮಾಡುವ ಇವರು ವಯಸ್ಸಾದ ಮೇಲೆ ಹಣ ಹೆಂಡತಿಯ ಜತೆಗೆ ನೆಮ್ಮದಿಯಾಗಿ ಇರಬಹುದು ಎಂದು ಎನಿಸಿ ಸುಮಾರು 50 ವರ್ಷಗಳ ಕಾಲ ದುಡಿದ ಹಣವನ್ನು ಉಳಿತಾಯ ಮಾಡಿದ್ದರು. ಆ ಹಣ ಸುರುಕ್ಷಿತವಾಗಿರುತ್ತದೆ ಎಂದು ಈ ಬ್ಯಾಂಕ್‌ನಲ್ಲಿ ಇಟ್ಟಿದ್ದರು. ಸುಮಾರು 30 ಲಕ್ಷ ಹಣ ಇವರದಿತ್ತು. ಈಗ ಈ ಘಟನೆಯಿಂದ ಆಘಾತಕ್ಕೊಳಗಾಗಿ ಪರಿತಪಿಸುತ್ತಿದ್ದಾರೆ.
ಇವರಷ್ಟೇ ಅಲ್ಲ, ಇಂತಹವರು ಹಲವರು ಜೀವನವನ್ನು ಆತಂಕದಲ್ಲಿ ದೂಡುತ್ತಿದ್ದಾರೆ. ನೊಂದವರ ಜತೆಗೆ ನಿಂತು ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಸಂಸದ ತೇಜಸ್ವಿ ಸೂರ್ಯ ಅವರು ಮಾಡಲಿಲ್ಲ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ ನಲ್ಲಿ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣದಿಂದಾಗಿ ಠೇವಣಿ ಕಳೆದುಕೊಂಡಿದ್ದ ಸಂತ್ರಸ್ತರ ಸಭೆಯನ್ನು ಕರೆದ ಸಮಯದಲ್ಲಿ ಠೇವಣಿದಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತೇಜಸ್ವಿ ಸೂರ್ಯ ಪರಾರಿಯಾದ ಘಟನೆ ನಡೆದಿತ್ತು. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿತ್ತು. ಈ ವೇಳೆ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ ಹಾಗೂ ಠೇವಣಿದಾರರ ನಡುವೆ ಗದ್ದಲವುಂಟಾಗಿತ್ತು.
ಇನ್ನು ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕಿನ ಎಲ್ಲಾ ಠೇವಣಿದಾರರು ಭಯಭೀತರಾಗಬೇಡಿ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕವಾಗಿ ಈ ಸಮಸ್ಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸರ್ಕಾರ ಠೇವಣಿದಾರರ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಎಂದು ನೊಂದವರಿಗೆ ಭರವಸೆ ನೀಡಿದ್ದರು. ಆದ್ರೆ, ತೇಜಸ್ವಿ ಸೂರ್ಯ ಅವರು ಈ ಭರವಸೆಯನ್ನ ಉಳಿಸಿಕೊಳ್ಳಲಿಲ್ಲ.
ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಬ್ರಾಹ್ಮಣರಿಗೆ ತೇಜಸ್ವಿ ಸೂರ್ಯ ಅವರು ಸಹಾಯ ಮಾಡಲಿಲ್ಲ. ಹಾಗೇಯೇ, ಸೂರ್ಯ ಅವರ ಚಿಕ್ಕಪ್ಪ ಬಸವನಗುಡಿ ಶಾಸಕ ಎಲ್.ಎ ರವಿ ಸುಬ್ರಹ್ಮಣ್ಯ ಅವರು ಕೂಡ ಬ್ಯಾಂಕ್‌ನ ಠೇವಣಿದಾರರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ.
ಕೋಟ್ಯಂತರ ರೂಪಾಯಿಗಳ ಬಹುದೊಡ್ಡ ಹಗರಣದಿಂದ ಹಲವು ಕುಟುಂಬಗಳು ಬೀದಿ ಪಾಲಾಗಿವೆ. ಹಿತರಕ್ಷಣೆಯನ್ನು ಕಾಯದೇ ಬಂಡಲ್ ಬಿಡುವವವರಿಗೆ ಮತ್ತೆ ಜನರು ಮಣೆ ಹಾಕಿರುವುದು ದುರದೃಷ್ಟಕರ.




