ಅಂಧಕಾರದ ರಾತ್ರಿಯಲ್ಲಿ ಒಂದು ದೀಪದಂತೆ, ನೇಹಾ ಸಿಂಗ್ ರಾಠೋರ್ ಅವರ ಧ್ವನಿ ಎಲ್ಲರನ್ನೂ ಎಚ್ಚರಿಸುತ್ತಿರುತ್ತದೆ. ಹಿಂದಿ ಭಾಷೆಯ ಪ್ರಸಿದ್ಧ ಯೂಟ್ಯೂಬರ್ ಮತ್ತು ಜನಪದ ಗಾಯಕಿ, ಬಿಜೆಪಿ-ಆರ್‌ಎಸ್‌ಎಸ್‌ನ ಕೋಮುವಾದ, ಸ್ತ್ರೀದ್ವೇಷ, ಭ್ರಷ್ಟಾಚಾರ ಮತ್ತು ಬೂಟಾಟಿಕೆಗಳನ್ನು ಬಾರಿ ಬಾರಿ ಬಯಲು ಮಾಡುತ್ತ ಬಂದಿದ್ದಾರೆ ನೇಹಾ ಸಿಂಗ್ ರಾಠೋರ್. ಇತ್ತೀಚಿಗೆ, ಸಿಂಗ್ ಮಾಡಿರುವ ಒಂದು ಅಪೀಲ್ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ನೇಹಾ ಸಿಂಗ್ ಬಿಜೆಪಿ, ಆರೆಸ್ಸೆಸ್ ಮತ್ತು ಮೋದಿ ಸರ್ಕಾರದ ನೀತಿಗಳ ಕಟು ವಿಮರ್ಶಕಿ. ಅಲ್ಪಸಂಖ್ಯಾತರ ಮೇಲೆ ನಡೆಯುವ ಹಿಂಸೆ, ಮಹಿಳೆಯರ ಮೇಲಿನ ದೌರ್ಜನ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ, ನಿರುದ್ಯೋಗ, ಬೆಲೆ ಏರಿಕೆ ಇತ್ಯಾದಿ ವಿಷಯಗಳಲ್ಲಿ ಅವರು ಸ್ಪಷ್ಟ ನಿಲುವನ್ನ ಹೊಂದಿದವರು. ನೇಹಾ ಸಿಂಗ್ ರಾಥೋರ್‌ರನ್ನು ಹಲವರು “ಜನಪದದ ಮೂಲಕ ಪ್ರತಿರೋಧದ ಧ್ವನಿ” ಅಂತ ಹೇಳುತ್ತಾರೆ. ಇನ್ನೊಂದೆಡೆ, ಸರ್ಕಾರದ ಬೆಂಬಲಿಗರು ಅವರನ್ನು “ವಿವಾದಾತ್ಮಕ” ಎಂದು ಟೀಕಿಸುತ್ತಾರೆ. ಆದರೆ ಭಾರತದ ಪ್ರಜಾಪ್ರಭುತ್ವದಲ್ಲಿ ನೇಹಾ ಸಿಂಗ್ ಕೇಳುವ ಪ್ರಶ್ನೆ ಧೈರ್ಯದ ಪ್ರತೀಕವಾಗಿ ಕಾಣಿಸತ್ತೆ.
2023ರಲ್ಲಿ ಮಧ್ಯಪ್ರದೇಶದ ಕಾನ್ಪುರದಲ್ಲಿ ಉನ್ನತ ಜಾತಿಯ ವ್ಯಕ್ತಿಯೊಬ್ಬ ದಲಿತ ವ್ಯಕ್ತಿಯೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ವ್ಯಂಗ್ಯಚಿತ್ರವನ್ನು ನೇಹಾ ಪ್ರಕಟಿಸಿದ್ದರು. ಆಗಲೂ ಅವರ ವಿರುದ್ಧ ಕಾನ್ಪುರ ಪೊಲೀಸರು ಕೇಸ್ ದಾಖಲಿಸಿಕೊಂಡು, ವ್ಯಂಗ್ಯಚಿತ್ರದ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಅಂತ ಆರೋಪಿಸಿದ್ದರು.

2025ರಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್ ಮೇಲೆ ನಡೆದಿದ್ದ ಉಗ್ರರ ದಾಳಿಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ನೇಹಾ ಸಿಂಗ್ ರಾಥೋರ್ ಸರ್ಕಾರದ ವೈಫಲ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಪಹಲ್ಗಾಮ್ ನಲ್ಲಿ ಆಗಿರುವ ಉಗ್ರರ ದಾಳಿಯ ವಿರುದ್ಧ ಒಂದು ರಾಜಕೀಯ ವಿಡಂಬನೆಯ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಅದರಲ್ಲಿ ವ್ಯವಸ್ಥೆಯಲ್ಲಿನ ಲೋಪ ಇತ್ಯಾದಿ ವಿಚಾರಗಳವಾಗಿ ಮಾತನಾಡಿದ್ದರು.
ಈ ನಡುವೆ “2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ, ಪಹಲ್ಗಾಮ್ ದಾಳಿಯ ಹೆಸರಿನಲ್ಲಿ ಪ್ರಧಾನಿ ಮೋದಿ ಈಗ ಬಿಹಾರದಲ್ಲಿ ಮತ ಯಾಚಿಸಲಿದ್ದಾರೆ” ಎಂದು ನೇಹಾ ಸಿಂಗ್ ಪೋಸ್ಟ್ ಮಾಡಿದ್ದರು. ಏಪ್ರಿಲ್ 25ರಂದು ಪೋಸ್ಟ್ ಮಾಡಿದ ತಮ್ಮ ವೀಡಿಯೊದಲ್ಲಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ನೇಹಾ ಸಿಂಗ್ ರಾಥೋರ್ (ರಷ್ಯಾ-ಉಕ್ರೇನ್) ಯುದ್ಧವನ್ನು ನಿಲ್ಲಿಸಬಲ್ಲ ವ್ಯಕ್ತಿಗೆ ತನ್ನದೇ ದೇಶದಲ್ಲಿ ಭಯೋತ್ಪಾದಕ ದಾಳಿಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದರು. ಈ ಪೋಸ್ಟ್ ಅನ್ನು ಪಾಕಿಸ್ತಾನಿ ಪತ್ರಕರ್ತರ ಗುಂಪು ನಿರ್ವಹಿಸುವ ಎಕ್ಸ್‌ನಲ್ಲಿ ಮರು ಪೋಸ್ಟ್ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ಲಕ್ನೋದ ಹಜರತ್‌ಗಂಜ್‌ನಲ್ಲಿ ನೇಹಾ ವಿರುದ್ಧ ಅಭಯ್ ಪ್ರತಾಪ್ ಸಿಂಗ್ ಎಂಬ ಬಿಹಾರದ ಕವಿಯೊಬ್ಬರು ದೂರು ದಾಖಲಿಸುತ್ತಾರೆ. ಅಂತಿಂಥಾ ಕೇಸ್ ಅಲ್ಲ ದೇಶದ್ರೋಹದ ಕೇಸ್ ದಾಖಲಾಗುತ್ತದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಹಾ ಸಿಂಗ್‌ರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ಅತುಲ್ ಎಸ್. ಚಂದ್ರಾಕರ್ ಅವರ ಪೀಠ, ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶ ಪ್ರಶ್ನಿಸಿ ನೇಹಾ ಸಿಂಗ್ ರಾಥೋರ್ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ನೋಟಿಸನ್ನು ಕೂಡ ಜಾರಿ ಮಾಡಿದೆ. ಆದರೆ, ರಾಥೋರ್ ಅವರು ತನಿಖಾಧಿಕಾರಿಗಳು ಕರೆದಾಗ ಅವರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಸುಪ್ರೀಂ ಕೋರ್ಟ್‌ನಿಂದ ಈ ಮಧ್ಯಂತರ ರಕ್ಷಣೆ ಸಿಗುವುದಕ್ಕೂ 2 ದಿನದ ಮೊದಲು ನೇಹಾ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು.
“ನಾನು ಈ ದೇಶದ ಪ್ರಧಾನಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದೆ. ಈ ಸ್ವತಂತ್ರ, ಪ್ರಜಾಪ್ರಭುತ್ವ ದೇಶದ ಸ್ವತಂತ್ರ ನಾಗರಿಕಳಾಗಿ, ನಾನು ಪ್ರಧಾನಿಯನ್ನು ಟೀಕಿಸಿದ್ದೆ ಅಷ್ಟೇ, ಸರ್ಕಾರಕ್ಕೆ ಇದನ್ನು ಸಹಿಸಲು ಸಾಧ್ಯವಾಗಲಿಲ್ಲ. ದೇಶದ ಬಡತನ, ನಿರುದ್ಯೋಗ, ಹಣದುಬ್ಬರ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಸರ್ಕಾರ ನನ್ನ ವಿರುದ್ಧ ಹೋರಾಡುತ್ತಿದೆ. ಸರಿ, ಈಗ, ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ವರಿತವಾಗಿ ಕಾನೂನನ್ನು ಜಾರಿಗೆ ತರಬೇಕು, ಟೀಕೆಗಳನ್ನು ದೇಶದ್ರೋಹ ಮತ್ತು ವಿಮರ್ಶಕರು ದೇಶದ್ರೋಹಿಗಳು ಎಂದು ಘೋಷಿಸಬೇಕು. ಸರ್ಕಾರದ ಕೆಲಸ ಮತ್ತು ದೇಶದ ಅಭಿವೃದ್ಧಿಗೆ ನಾನು ಪ್ರಮುಖ ಅಡಚಣೆಯಾಗಿದ್ದೇನೆ. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ, ಸರ್ಕಾರವು ವಿಳಂಬವಿಲ್ಲದೆ ನನ್ನನ್ನು ಗಲ್ಲಿಗೇರಿಸಬೇಕು” ಅಂತ ಹೇಳಿದ್ದಾರೆ.
ಈ ಮಾತುಗಳ ಮೂಲಕ ನೇಹಾ ಸಿಂಗ್ ಒಂದು ಕ್ರಾಂತಿಯ ಕಿಡಿಯನ್ನ ಹಚ್ಚಿದ್ದಾರೆ. ಸತ್ಯ ಹೇಳುವವರನ್ನು ಶಿಕ್ಷಿಸುವುದು, ಅಪರಾಧಿಗಳನ್ನು ರಕ್ಷಿಸುವುದು ಮೋದಿ ಸರ್ಕಾರದ ಅಜೆಂಡಾ ಎನ್ನುವ ಕಹಿ ಸತ್ಯವನ್ನ ನೇಹಾ ಅವರ ಅಹವಾಲು ಜಗತ್ತಿಗೆ ಸಾರುತ್ತಿದೆ.
ಒಂದು ಹುಡುಗಿ ಇಡೀ ಪ್ರಪಂಚದ ಮುಂದೆ ಸರ್ಕಾರದ ಮುಖವಾಡವನ್ನು ಕಿತ್ತು ಬಿಸಾಕಿ, ಮೋದಿ ಸರ್ಕಾರವನ್ನ ಬೆತ್ತಲು ಮಾಡಿದ್ದಾಳೆ. “ನನ್ನನ್ನು ನೇಣುಗಂಬಕ್ಕೆ ಏರಿಸಿ” ಎಂದು ಅವಳು ಕೆಚ್ಚೆದೆಯ ಧೈರ್ಯದಿಂದ ಹೇಳುತ್ತಿದ್ದಾಳೆ, ಏಕೆಂದರೆ ಸರ್ಕಾರ ಅವಳನ್ನು ಶತ್ರುವನ್ನಾಗಿ ನೋಡುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ನೇಹಾ ಸಿಂಗ್ ಪೋಸ್ಟ್ ಮಾಡಿದ್ದಕ್ಕೆ, ಪ್ರಧಾನಿ ಮೋದಿ ಅವರನ್ನು ವಿಮರ್ಶಿಸಿದ್ದಕ್ಕೆ, FIR ಹಾಕಲಾಯಿತು. ಅಲ್ಲಹಾಬಾದ್ ಹೈಕೋರ್ಟ್ ಅವರ ಬೇಲ್ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಕ್ಷಣೆ ಕೊಟ್ಟಿದೆ. ಸತ್ಯದ ಬೆಳಕು ಅಂಧಕಾರದಲ್ಲೂ ಪ್ರಜ್ವಲಿಸತ್ತೆ. ಆದರೆ ಅಧಿಕಾರದ ಗಾಳಿ ಅದನ್ನು ಆರಿಸಲು ಪ್ರಯತ್ನಿಸುತ್ತದೆ. ನೇಹಾ ಅವರ ಮಾತುಗಳು ಹೇಳತ್ತೆ, ಸರ್ಕಾರ ಜನರ ಸಮಸ್ಯೆಗಳನ್ನು ಬಿಟ್ಟು, ವಿಮರ್ಶಕರನ್ನು ಹತ್ತಿಕ್ಕುತ್ತಿದೆ. ಇದು ಲೋಕತಂತ್ರ ಮುಖವಾಡದ ಹಿಂದಿನ ಸರ್ವಾಧಿಕಾರದ ನೃತ್ಯ ಅಂತ.

ಬೂಟಾಟಿಕೆ – ಇದು ಮೋದಿ ಸರ್ಕಾರದಲ್ಲಿ ಸಾಮಾನ್ಯವಾಗಿದೆ. ಪಹಲ್ಗಾಮ್ ದಾಳಿಯ ಬಗ್ಗೆ ನೇಹಾ ಅವರು ಪೋಸ್ಟ್ ಮಾಡಿದ್ದರು, ಸರ್ಕಾರದ ನೀತಿಗಳನ್ನು ವಿಮರ್ಶಿಸಿದ್ದರು, ಪಹಲ್ಗಾಮ್ ದಾಳಿಯನ್ನ ಮೋದಿ ಸರ್ಕಾರ ಚುನಾವಣಾ ಲಾಭಕ್ಕಾಗಿ ದುರ್ಬಳಕೆ ಮಾಡುತ್ತಿದೆ ಅಂತ ಹೇಳಿದ್ದರು. ಆದರೆ ಮೋದಿ ಸರ್ಕಾರ ಅದನ್ನು ‘ದೇಶದ್ರೋಹ’ ಎಂದು ಕರೆದು FIR ಹಾಕಿದೆ. ಇದು ಬೂಟಾಟಿಕೆಯ ಅಲ್ಲದೇ ಇನ್ನೇನು ಆಗೋಕೆ ಸಾಧ್ಯ ಇದೆ? ಸತ್ಯ ಹೇಳುವವರನ್ನು ಶತ್ರು ಮಾಡಿ, ಜನರ ಗಮನ ಬೇರೆಡೆಗೆ ಸರಿಸುವುದು. ಸರ್ಕಾರ ತನ್ನ ತನ್ನದೇ ಕನ್ನಡಿಯ ಪ್ರತಿಬಿಂಬಕ್ಕೆ ಭಯಪಡುತ್ತಿದೆ ಅನ್ನೋದಕ್ಕೆ ಇದೊಂದು ಉದಾಹರಣೆ ಸಾಕಲ್ವಾ?
ನ್ಯಾಯದ ದೇವತೆ ಕಣ್ಣು ಮುಚ್ಚಿಕೊಂಡು ನಿಲ್ಲುತ್ತಾಳೆ, ಆದರೆ ಮೋದಿ ಸರ್ಕಾರ ಮಾತ್ರ ಅಪರಾಧಿಗಳ ಕಡೆಗೆ ಕಣ್ಣು ಮಿಟುಕಿಸುತ್ತಾರೆ. ಅತ್ಯಾಚಾರಿಗಳಿಗೆ ಪರೋಲ್ ಮತ್ತು ಜಾಮೀನು ಸಿಗುತ್ತಿರುವುದು ಒಂದು ಕಹಿ ಸತ್ಯ. ಗುರ್ಮೀತ್ ರಾಮ್ ರಹೀಮ್ ಸಿಂಗ್ – ಅತ್ಯಾಚಾರ ಮತ್ತು ಹತ್ಯೆಯ ಆರೋಪಿಯು ಪರೋಲ್ ಪಡೆದು ಹೊರಬರುತ್ತಾನೆ. ಆಸಾರಾಮ್ ಬಾಪುನಂತ ಅತ್ಯಾಚಾರಿಗಳಿಗೆ ಜಾಮೀನು ಮಂಜೂರಾಗುತ್ತೆ. ಆದರೆ ನೇಹಾ ಅವರಂತಹ ಗಾಯಕಿ, ಸತ್ಯವನ್ನ ಬಯಲು ಮಾಡುವ, ಸರ್ಕಾರವನ್ನ ಪ್ರಶ್ನಿಸುವ ಗಟ್ಟಿಗಿತ್ತಿಗೆ ಜೈಲು. ವಿಪರ್ಯಾಸ ಅಂದ್ರೆ ಅತ್ಯಾಚಾರ ಅಪರಾಧಿಗಳಿಗೆ ಸ್ವಾತಂತ್ರ್ಯವನ್ನ ಕೊಟ್ಟಿದ್ದು ಇದೇ ಮೋದಿ ಸರ್ಕಾರ. ಹೂವುಗಳನ್ನು ಕಿತ್ತು ಹಾಕಿ, ಕಳ್ಳಿ ಗಿಡಗಳನ್ನ ಮೋದಿ ಸರ್ಕಾರ ಬೆಳೆಸುತ್ತಿದೆ. ಬಿಲ್ಕಿಸ್ ಬಾನೋ ಕೇಸ್‌ನಲ್ಲಿ ಅತ್ಯಾಚಾರಿಗಳಿಗೆ ಬಿಡುಗಡೆ ಕೊಟ್ಟು ನಂತರ ಸುಪ್ರೀಂ ಕೋರ್ಟ್ ರದ್ದುಮಾಡಿತ್ತು. ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುವ ಸರ್ಕಾರ, ಅಪರಾಧಿಗಳನ್ನು ನಾಚಿಕೆಯಿಲ್ಲದೇ ರಕ್ಷಿಸುತ್ತಿದೆ. ಇದು ಯಾವ ನಾರಿ ಶಕ್ತಿ? ಇದು ಯಾವ ಸಂಸ್ಕೃತಿ?ನ್ಯಾಯಾಲಯದ ಬಾಗಿಲು ಬಡಿದು ನಿಂತ ಮಹಿಳೆಗೆ “ಸಹನೆ ಇರಲಿ” ಎನ್ನುತ್ತಾರೆ. ಆದರೆ ಅತ್ಯಾಚಾರಿಗಳಿಗೆ ಜಾಮೀನು, ಪರೋಲ್, ರಾಜಕೀಯ ಗೌರವವನ್ನ ಒದಗಿಸುತ್ತಾರೆ.
ಇದನ್ನೇ ನೇಹಾ ಪ್ರಶ್ನಿಸಿದ್ದು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದವರನ್ನ ಇದೇ ಬಿಜೆಪಿ ಸರ್ಕಾರ “ಸಂಸ್ಕಾರಿ” ಎನ್ನತ್ತೆ. ಪ್ರಶ್ನಿಸಿದವರಿಗೆ ದೇಶದ್ರೋಹದ ಮುದ್ರೆ. ಮೌನವಾಗಿರುವವನು ಮಹಾನ್ ದೇಶಭಕ್ತ.
ಮೋದಿ ಸರ್ಕಾರದಲ್ಲಿ ಸ್ತ್ರೀ ದ್ವೇಷಕ್ಕೇನೂ ಕಡಿಮೆ ಇಲ್ಲ. ಸ್ತ್ರೀದ್ವೇಷ ಎಂದರೆ ಮುಳ್ಳುಗಳ ಮೇಲೆ ಹೂವುಗಳನ್ನು ಬೆಳೆಸುವ ಪ್ರಯತ್ನ, ಆದರೆ ಮೋದಿ ಸರ್ಕಾರದಲ್ಲಿ ಹೂವುಗಳನ್ನು ಮುಳ್ಳುಗಳಂತೆ ನೋಡುತ್ತದೆ. ಫಾರ್ ಎಕ್ಸಾಂಪಲ್ ‘ಬೇಟಿ ಬಚಾವೋ’ ಎಂದು ಹೇಳುವ ಸರ್ಕಾರ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯನ್ನು ಹತ್ತಿಕ್ಕುತ್ತದೆ. ಬ್ರಿಜ್ ಭೂಷಣ್ ಸಿಂಗ್ ಅವರಂತಹ ಆರೋಪಿಗಳನ್ನು ರಕ್ಷಿಸತ್ತೆ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರಂತಹ ಸಾಧಕ ಮಹಿಳೆಯರನ್ನು ಅವಮಾನಿಸತ್ತೆ. ಮಣಿಪುರದಲ್ಲಿ ಮಹಿಳೆಯರ ಮೇಲಿನ ಹಿಂಸೆಯನ್ನು ನಿರ್ಲಕ್ಷಿಸತ್ತೆ, ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯ ವಿಳಂಬವಾಗತ್ತೆ. ಇದಕ್ಕೇ ನೇಹಾ ಸಿಂಗ್ ಕೇಳೋದು- ಇಂತಹ ಸರ್ಕಾರದಲ್ಲಿ ಬೇಟಿ ಬಚಾವೋ ಹೇಗೆ ಸಾಧ್ಯ?

ನೇಹಾ ಸಿಂಗ್ ಅವರ ವಿಡಿಯೋಗಳಿಗೆ ಬರುವ ಕಾಮೆಂಟ್‌ಗಳು ಹೇಗಿದೆ ಗೊತ್ತಾ? “ಅವಳು ಹೆಣ್ಣು, ಅದಕ್ಕೆ ಮಾತನಾಡಬಾರದು” “ಹೆಣ್ಣಿಗೆ ರಾಜಕೀಯ ಏಕೆ?” ” ಮನೆಕೆಲಸ ನೋಡಿಕೊಳ್ಳಲಿ” “ದೇಶದ ಬಗ್ಗೆ ಮಾತನಾಡುವ ಹಕ್ಕು ಅವಳಿಗೆ ಇಲ್ಲ” ಇದು ಬಿಜೆಪಿಯ ಐಟಿ ಸೆಲ್‌ನಿಂದ ನೇಹಾ ಸಿಂಗ್‌ರನ್ನ ಟ್ರೋಲ್ ಮಾಡುತ್ತಿರುವ ರೀತಿ. ಇದು ಟ್ರೋಲ್‌ಗಳ ಮಾತು ಮಾತ್ರವಲ್ಲ. ಇದು ಆರ್‌ಎಸ್‌ಎಸ್–ಬಿಜೆಪಿ ಪೋಷಿತ ಸ್ತ್ರೀದ್ವೇಷ. ಇದು ಸರ್ಕಾರದ ಒಪ್ಪಿತ ಸ್ತ್ರೀದ್ವೇಷ. ಈ ದೇಶದಲ್ಲಿ ಅಪರಾಧಕ್ಕೆ ಧರ್ಮವಿದೆ. ನ್ಯಾಯಕ್ಕೆ ಜಾತಿಯಿದೆ. ಮಾತಿಗೆ ಪರವಾನಗಿಯಿದೆ. ಒಬ್ಬ ಮುಸ್ಲಿಂ ಯುವಕನ ಮೇಲೆ ಶಂಕೆ ಸಾಕು ಆತ ಜೈಲು ಸೇರೋಕೆ, ಒಬ್ಬ ಸಾಧು ಅತ್ಯಾಚಾರ ಮಾಡಿದರೂ ಆತನ ಆಶೀರ್ವಾದಕ್ಕೆ ಸಾಲಾಗಿ ನಿಂತಿರುತ್ತಾರೆ. ನೇಹಾ ಸಿಂಗ್ ಇದನ್ನೇ ಪ್ರಶ್ನೆ ಮಾಡುತ್ತಿದ್ದಾರೆ, “ಇದು ಯಾವ ಕಾನೂನು? ಇದು ಯಾರ ನ್ಯಾಯ?”ಅಂತ.

ಅಮೆರಿಕ ವೆನೆಜುವೆಲಾದ ಮೇಲೆ ದಬ್ಬಾಳಿಕೆ ನಡೆಸಿದಾಗ, ಮಾನವ ಹಕ್ಕುಗಳ ಬಗ್ಗೆ ಜಗತ್ತು ಮಾತನಾಡಿದಾಗ, ಮೋದಿ ಸರ್ಕಾರ ಮೌನವಾಗಿರುತ್ತದೆ. ಅಮೆರಿಕ ವೆನೆಜುಯೆಲಾದ ವಿರುದ್ಧ ಆರ್ಥಿಕ ನಿರ್ಬಂಧಗಳು ಹಾಕಿ, ದಬ್ಬಾಳಿಕೆ ಮಾಡುತ್ತಿದೆ. ಆದರೆ ಭಾರತ ಸರ್ಕಾರ ಖಂಡಿಸದೇ ಮೌನವಾಗಿದೆ. ಗಾಜಾದ ಮೇಲೆ ಬಾಂಬ್ ಬಿದ್ದಾಗಲೂ ಮೌನ. ಮಣಿಪುರದಲ್ಲಿ ಮಹಿಳೆಯ ಬೆತ್ತಲು ಮೆರವಣಿಗೆ ನಡೆದಾಲೂ ಮೌನ. ಸಮುದ್ರದ ಅಲೆಗಳು ದಡಕ್ಕೆ ಬಡಿದರೂ, ಕಲ್ಲು ಹೇಗೆ ಮೌನವಾಗಿ ನೋಡುತ್ತಿರುತ್ತದೋ ಹಾಗೇ ಮೋದಿ ಸರ್ಕಾರ ಮೌನವಾಗಿ ನಿಂತಿದೆ. ಭಾರತದ ವಿದೇಶಾಂಗ ನೀತಿ ಸ್ವತಂತ್ರವಾಗಿರಬೇಕು, ಆದರೆ ಮೋದಿ ಸರ್ಕಾರ ಟ್ರಂಪ್ ಮುಂದೆ ತಲೆಬಾಗಿ ನಿಲ್ಲತ್ತೆ, ಸೊಂಟ ಮುರಿದಂತೆ ಕೂತಿರತ್ತೆ.

ನೇಹಾ ಸಿಂಗ್ ಮೋದಿ ಸರ್ಕಾರದ ಬೂಟಾಟಿಕೆ, ಅನ್ಯಾಯ ಮತ್ತು ಸ್ತ್ರೀದ್ವೇಷದ ವಿರುದ್ಧ ತಮ್ಮ ಸ್ಪಷ್ಟ ನಿಲುವನ್ನ ತಳೆದಿದ್ದಾರೆ. ನೇಹಾ ಕೇಳುತ್ತಿದ್ದಾರೆ, ನಾನು ದೇಶದ್ರೋಹಿಯೇ ಆಗಿದ್ದರೆ, “ನನ್ನನ್ನ ನೇಣಿಗೆ ಹಾಕಿ” ಅಂತ. ಇದು ಮೋದಿ ಸರ್ಕಾರಕ್ಕೆ ನೇಹಾ ಸಿಂಗ್‌ರಂತ ಗಟ್ಟಿಗಿತ್ತಿ ಹಾಕಿದ ನೇರ ಸವಾಲು. ಕೊನೆಯದಾಗಿ ನ್ಯಾಯ, ಪ್ರೀತಿ, ಅಹಿಂಸೆ, ಸತ್ಯವನ್ನ ಕೊಲ್ಲುವ ಸರ್ಕಾರ ಎಷ್ಟು ದಿನ ಉಳಿಯುವುದಕ್ಕೆ ಸಾಧ್ಯ? ಇದೇ ಈಗೀನ ಅತಿ ದೊಡ್ಡ ಪ್ರಶ್ನೆ.





