ಆರೋಪಿಗಳ ಬಂಧನವಾಗುವವರೆಗೂ ಕುಟುಂಬ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದರೂ ಕುಟುಂಬದ ಒಪ್ಪಿಗೆಯಿಲ್ಲದೆ ಪೊಲೀಸರು ಮೃತದೇಹವನ್ನು ಪಿಜಿಐಗೆ ಸ್ಥಳಾಂತರಿಸಿದ್ದಾರೆ. ಸದ್ಯ ಹರಿಯಾಣ ಸರ್ಕಾರವು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವಂತೆ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸುತ್ತಿದೆ.
ಹರಿಯಾಣದಲ್ಲಿ ಹಿರಿಯ ಅಧಿಕಾರಿಗಳಿಂದ ಜಾತಿ ನಿಂದನೆ, ಕಿರುಕುಳ, ದೌರ್ಜನ್ಯಕ್ಕೆ ಒಳಗಾಗಿ ಮಾನಸಿಕವಾಗಿ ನೊಂದು ದಲಿತ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡು ಒಂದು ವಾರ ಕಳೆಯುತ್ತಿದೆ. ಅಕ್ಟೋಬರ್ 7 ರಂದು ಕುಮಾರ್ ಸಾವನ್ನಪ್ಪಿದ್ದು ಅಧಿಕಾರಿಯ ಮೃತದೇಹ ಇನ್ನೂ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಪಿಜಿಐಎಂಇಆರ್) ಶವಾಗಾರದಲ್ಲಿದೆ.
ಕುಮಾರ್ ಬರೆದ ಡೆತ್‌ನೋಟ್‌ನಲ್ಲಿ ತಮಗೆ ಕಿರುಕುಳ ನೀಡಿದ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಈ ಹಿಂದೆಯೂ ಹಲವು ಬಾರಿ ದೂರು ನೀಡಿದ್ದವರು ಕುಮಾರ್. ಕುಮಾರ್ ಅವರಿಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ ಡಿಜಿಪಿ ಶತ್ರುಜೀತ್ ಕಪೂರ್ ಮತ್ತು ಈಗ ವರ್ಗಾವಣೆಗೊಂಡಿರುವ ರೋಹ್ಟಕ್ ಎಸ್‌ಪಿ ನರೇಂದ್ರ ಬಿಜಾರ್ನಿಯಾ ಅವರನ್ನು ಬಂಧಿಸುವವರೆಗೂ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲು ಕುಟುಂಬವು ನಿರಾಕರಿಸಿದೆ.
ಇದನ್ನು ಓದಿದ್ದೀರಾ? ಹರಿಯಾಣದ ನಂತರ, ತೆಲಂಗಾಣದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ
ಆರೋಪಿಗಳ ಬಂಧನವಾಗುವವರೆಗೂ ಕುಟುಂಬ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದರೂ ಕುಟುಂಬದ ಒಪ್ಪಿಗೆಯಿಲ್ಲದೆ ಪೊಲೀಸರು ಮೃತದೇಹವನ್ನು ಪಿಜಿಐಗೆ ಸ್ಥಳಾಂತರಿಸಿದ್ದಾರೆ. ಸದ್ಯ ಹರಿಯಾಣ ಸರ್ಕಾರವು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವಂತೆ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸುತ್ತಿದೆ.
ಕುಮಾರ್ ದಲಿತರಾದ ಹಿನ್ನೆಲೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸಚಿವ ಕ್ರಿಶನ್ ಲಾಲ್ ಪನ್ವಾರ್ ಮತ್ತು ಕ್ರಿಶನ್ ಬೇಡಿ, ಕುಮಾರ್ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪಿ ಕುಮಾರ್ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿದ್ದಾರೆ. ಆದರೆ ಕುಟುಂಬವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಐಎಎಸ್ ಅಧಿಕಾರಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಏನಿದು ಪ್ರಕರಣ, ಈವರೆಗೂ ನಡೆದಿದ್ದೇನು?
ಹರಿಯಾಣ ಬಿಜೆಪಿ ಸರ್ಕಾರದ ಆಡಳಿತದಲ್ಲಿರುವ ಜಾತಿ ತಾರತಮ್ಯ, ಪರಿಶಿಷ್ಟ ಜಾತಿ(ಎಸ್‌ಸಿ) ಪ್ರಾತಿನಿಧ್ಯ, ದೌರ್ಜನ್ಯ ಮತ್ತು ನಿಂದನೆಯ ವಿರುದ್ಧವಾಗಿ ಆಗಾಗೇ ಧ್ವನಿ ಎತ್ತುತ್ತಿದ್ದ, ಈ ಸಂಬಂಧ ಹಲವು ಬಾರಿ ದೂರು ನೀಡಿದ್ದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಅವರು ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿತ್ತು. ಆದರೆ ಡೆತ್‌ನೋಟ್ ಸಿಕ್ಕ ಬಳಿಕ ದಲಿತ ಎಂಬ ಕಾರಣಕ್ಕೆ ನಡೆದ ಕಿರುಕುಳ, ಜಾತಿ ನಿಂದನೆಯೇ ಅಧಿಕಾರಿ ಪ್ರಾಣ ಕಳೆದುಕೊಳ್ಳಲು ಕಾರಣ ಎಂಬುದು ಬಹಿರಂಗವಾಯಿತು.
ಈಗಾಗಲೇ ಈ ಡೆತ್‌ನೋಟ್ ಆಧಾರದಲ್ಲಿ ಪೂರಣ್ ಪತ್ನಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಸಂಪೂರ್ಣವಾದ ಮಾಹಿತಿ ಉಲ್ಲೇಖಿಸದೆ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕುಮಾರ್ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪಿ ಆಕ್ಷೇಪದ ಬಳಿಕ ಪೊಲೀಸರು ಎಫ್‌ಐಆರ್ ಅನ್ನು ತಿದ್ದುಪಡಿ ಮಾಡಿದ್ದಾರೆ. ಅಮ್ನೀತ್ ಅವರು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕನ್ವರ್‌ದೀಪ್ ಕೌರ್ ಅವರಿಗೆ ಪತ್ರ ಬರೆದು, ಎಫ್‌ಐಆರ್‌ನಲ್ಲಿರುವ ಅಪೂರ್ಣ ಮಾಹಿತಿಯನ್ನು ಪ್ರಶ್ನಿಸಿದ್ದರು. ಹಾಗೆಯೇ ಎಲ್ಲಾ ಆರೋಪಿಗಳ ಹೆಸರುಗಳನ್ನು ನಿಖರವಾಗಿ ಉಲ್ಲೇಖಿಸಬೇಕು ಎಂದು ಒತ್ತಾಯಿಸಿದ್ದರು. ಅದಾದ ಬಳಿಕ ಪರಿಶಿಷ್ಟ ಜಾತಿ(ಎಸ್‌ಸಿ)/ ಪರಿಶಿಷ್ಟ ಪಂಗಡ(ಎಸ್‌ಟಿ) ದೌರ್ಜನ್ಯ ತಡೆ ಕಾಯ್ದೆಯನ್ನೂ ಎಫ್‌ಐಆರ್‌ನಲ್ಲಿ ಸೇರ್ಪಡೆ ಮಾಡಲಾಗಿದೆ.
ಸದ್ಯ ಈ ಪ್ರಕರಣದ ತನಿಖೆಗೆ ರಚಿಸಲಾಗಿರುವ ಆರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಖ್ಯಸ್ಥರಾಗಿರುವ ಚಂಡೀಗಢ ಐಜಿ ಪುಷ್ಪೇಂದ್ರ ಕುಮಾರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಸೆಕ್ಷನ್ 3 ಅನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ ಎಂದು ಭಾನುವಾರ ದೃಢಪಡಿಸಿದ್ದಾರೆ. ಈ ಕಾಯ್ದೆಯು ದಲಿತ ವಿರೋಧಿ ದೌರ್ಜನ್ಯಗಳ ಬಗ್ಗೆ ವಿವರವನ್ನು ಹೊಂದಿದೆ. ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರದವರು, ಎಸ್‌ಸಿ/ಎಸ್‌ಟಿ ಸಮುದಾಯದವರ ಮೇಲೆ ಎಸಗುವ ದೌರ್ಜನ್ಯದ ವಿರುದ್ಧ ವಿಧಿಸಬಹುದಾದ ಶಿಕ್ಷೆಗಳ ವಿವರವನ್ನೂ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ದಲಿತ ಐಪಿಎಸ್ ಅಧಿಕಾರಿ ಪೂರಣ್ ಯಾರು?
ಆಂಧ್ರಪ್ರದೇಶ ಮೂಲದ 2001ರ ಬ್ಯಾಚ್‌ನ 52ರ ವರ್ಷದ ಐಪಿಎಸ್ ಅಧಿಕಾರಿ ಹಲವು ಬಾರಿ ಪರಿಶಿಷ್ಟ ಜಾತಿ(ಎಸ್‌ಸಿ) ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದರು. ಎಂಜಿನಿಯರಿಂಗ್ ಪದವೀಧರರಾದ ಕುಮಾರ್ ಅವರು ಕುರುಕ್ಷೇತ್ರ ಸೇರಿದಂತೆ ಹರಿಯಾಣದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅಂಬಾಲ ಮತ್ತು ರೋಹ್ಟಕ್ ಶ್ರೇಣಿಗಳ ಮುಖ್ಯಸ್ಥರಾಗಿ(ಐಜಿಪಿ) ಸೇವೆ ಸಲ್ಲಿಸಿದ್ದರು. ಗೃಹರಕ್ಷಕ ದಳ, ದೂರಸಂಪರ್ಕ ಮತ್ತು ಇತರ ಹಲವು ಪ್ರಮುಖ ಇಲಾಖೆಗಳ ಮುಖ್ಯಸ್ಥರಾಗಿದ್ದರು. ಅವರು 2033ರಲ್ಲಿ ನಿವೃತ್ತರಾಗಬೇಕಿತ್ತು.
ಇದನ್ನು ಓದಿದ್ದೀರಾ? ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ಹರಿಯಾಣ ದಲಿತ ಐಪಿಎಸ್ ಅಧಿಕಾರಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ
ಹರಿಯಾಣ ಸರ್ಕಾರದೊಂದಿಗೆ ಆಡಳಿತಾತ್ಮಕ ವಿಚಾರದಲ್ಲಿ ಹಲವು ವಿವಾದಗಳ ಮೂಲಕವೇ ಅಧಿಕಾರಿ ಸುದ್ದಿಯಾಗಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ, ಕುಮಾರ್ ತಮ್ಮ ಅಧಿಕೃತ ಕಾರನ್ನು ರಾಜ್ಯ ಪೊಲೀಸ್ ಇಲಾಖೆಗೆ ಹಿಂದಿರುಗಿಸಿದ್ದರು ಮತ್ತು ತಮ್ಮ ಅರ್ಹತೆಗೆ ತಕ್ಕುದಾದ ಕಾರನ್ನು ನೀಡುವಂತೆ ಹೇಳಿದ್ದರು. ಹರಿಯಾಣದಲ್ಲಿ ಐಪಿಎಸ್ ಅಧಿಕಾರಿಗಳಿಗೆ ಅಧಿಕೃತ ವಾಹನಗಳನ್ನು ನೀಡುವ ವಿಚಾರದಲ್ಲಿ ‘ತಾರತಮ್ಯ’ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯದ ಆಗಿನ ಮುಖ್ಯ ಕಾರ್ಯದರ್ಶಿ ಟಿ ವಿ ಎಸ್ ಎನ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದರು. ಆ ಸಮಯದಲ್ಲಿ, ಕುಮಾರ್ ಐಜಿಪಿ (ದೂರಸಂಪರ್ಕ) ಆಗಿದ್ದರು ಮತ್ತು ರಾಜ್ಯ ಪೊಲೀಸರ ಡಯಲ್-112 ತುರ್ತು ಪ್ರತಿಕ್ರಿಯೆ ಯೋಜನೆಯ ಮುಖ್ಯಸ್ಥರಾಗಿದ್ದರು.
ಕಳೆದ ವರ್ಷ, ಹರಿಯಾಣದಲ್ಲಿ 1991, 1996, 1997 ಮತ್ತು 2005 ಬ್ಯಾಚ್‌ಗಳ ಐಪಿಎಸ್ ಅಧಿಕಾರಿಗಳ ಬಡ್ತಿಯ ಬಗ್ಗೆಯೂ ಕುಮಾರ್ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ಪತ್ರ ಬರೆದಿದ್ದರು. “ಬಡ್ತಿಗಳು ಕಾನೂನುಬಾಹಿರವಾಗಿದೆ. ಹಣಕಾಸು ಇಲಾಖೆಯ ಒಪ್ಪಿಗೆಯನ್ನು ಮಾತ್ರ ಆಧರಿಸಿದೆ. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ” ಎಂದು ಆರೋಪಿಸಿದ್ದರು.
ಹಾಗೆಯೇ ತಾವು ಮತ್ತು ತಮ್ಮ ಬ್ಯಾಚ್‌ಮೇಟ್‌ಗಳು ಎಸ್‌ಸಿ ವರ್ಗಕ್ಕೆ ಸೇರಿದವರಾಗಿರುವುದರಿಂದ ತಮ್ಮ ಮೇಲೆ ತಾರತಮ್ಯ ನಡೆಯುತ್ತಿದೆ ಎಂದೂ ದೂರಿದ್ದರು. ರಾಜ್ಯದ ಗೃಹ ಇಲಾಖೆಯಲ್ಲಿ, ಕಾನೂನು ಅಭಿಪ್ರಾಯದ ಅಗತ್ಯವಿಲ್ಲದ ಫೈಲ್‌ಗಳನ್ನು ಸಹ ಅನಗತ್ಯವಾಗಿ ಕಾನೂನು ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದರು. 1997ರ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳಿಗೆ ಮುಂಚಿತವಾಗಿ ವೇತನವನ್ನು ನಿಗದಿಪಡಿಸಲಾಗಿದೆ ಮತ್ತು ಅವರಿಗೆ ಮುಂಗಡ ವೇತನ ಹೆಚ್ಚಳವನ್ನು ನೀಡಲಾಗಿದೆ. ಜಾತಿಯ ಆಧಾರದ ಮೇಲೆ ತನ್ನ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಕುಮಾರ್ ಆರೋಪಿಸಿದ್ದರು. ಆ ಆದೇಶಗಳನ್ನು ನಂತರ ತಡೆಹಿಡಿಯಲಾಗಿದ್ದರೂ, ಅವರ ಸ್ವಂತ ಬಡ್ತಿ ವಿಳಂಬವಾಗಿತ್ತು.
ಕಳೆದ ವರ್ಷ, ಅವರು ಹಿರಿಯ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಐದು ದೂರುಗಳನ್ನು ನೀಡಿದ್ದರು. ‘ಕಿರುಕುಳ ಮತ್ತು ಅವಮಾನ’ ಮಾಡಲಾಗುತ್ತಿದೆ ಎಂದು ಆರೋಪಿಸಿ ದೂರುಗಳನ್ನು ದಾಖಲಿಸಿದ್ದರು. ಫೆಬ್ರವರಿ 8ರಂದು ಅವರ ಆರೋಪಗಳ ತನಿಖೆಗಾಗಿ ಮೂವರು ಮಾಜಿ ಐಎಎಸ್ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನೂ ರಚಿಸಲಾಗಿತ್ತು.
ದಲಿತರ ಮೇಲೆ ದೌರ್ಜನ್ಯ ಹೆಚ್ಚಳ
ದೇಶ ಎಷ್ಟು ಮುಂದುವರೆದರೂ ‘ದಲಿತ’ ಎಂಬ ಕಾರಣಕ್ಕೆ ನಡೆಯುವ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ದಲಿತ ಎಂಬ ಕಾರಣಕ್ಕೆ ನಡೆಯುವ ಕಿರುಕುಳವು ಐಪಿಎಸ್, ಐಎಎಸ್ ಅಧಿಕಾರಿಗಳನ್ನೂ ಬಿಟ್ಟಿಲ್ಲ. 2025ರಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಳವಾಗುತ್ತಿದ್ದು 40ಕ್ಕೂ ಹೆಚ್ಚು ಪ್ರಕರಣಗಳು ಅಧಿಕ ಮುನ್ನೆಲೆಗೆ ಬಂದಿವೆ. ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾದಂತಹ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚಾಗಿ ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB) ದಾಖಲೆಗಳೇ ಹೇಳುವಂತೆ ದೇಶದಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಅದರಲ್ಲೂ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಶೇಕಡ 16.8ರಷ್ಟು ಅಧಿಕವಾಗಿದೆ. 2021ರ ವೇಳೆಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಸೇರಿದಂತೆ ದಲಿತ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯದ 70,818 ಪ್ರಕರಣಗಳು ತನಿಖೆಯಾಗದೆ ಬಾಕಿ ಉಳಿದಿವೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




