ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...
ಜೋಡಿ ಹಕ್ಕಿಗಳು ಪ್ರೀತಿಸಿ ಮದುವೆಯಾಗಿ ಇಡಿಯಾಗಿ ಕಟ್ಟಿಕೊಂಡ ಕನಸುಗಳೆಲ್ಲ ಕೈಗೂಡಿ ಬದುಕು ಅರಳುವ ಸುಂದರ ಇಳಿಗಾಲದ ಸಮಯ. ಏಳುಬೀಳುಗಳ ನಡುವೆ ಸ್ವರ್ಗಕ್ಕೂ ಕಿಚ್ಚು ಹಚ್ಚುವ ಪ್ರೀತಿಯ ಉಸಿರು, ಕಣಕಣದಲ್ಲೂ ಹರಿದು ಕಣ್ಮನ ತಣಿಸುವ ದಾಂಪತ್ಯದ ಪಯಣ. ‘ನಾ ನಿನಗೆ; ನೀ ನನಗೆ ಜೊತೆಯಾಗಿ ಸಾಗೋಣ ಕೊನೆಯವರೆಗೆ’ ಎಂದು ಸಂಭ್ರಮಿಸುವ ಅದು ಜೀವನ ಸಂಧ್ಯಾಕಾಲ!
‘Professor I am dying, I am dying’ ಎಂಬ ಧ್ವನಿಗೆ ಪಕ್ಕದ ರೂಮಿನಲ್ಲಿದ್ದ ಪ್ರೊಫೆಸರ್ ಬಂದು ನೋಡುವಷ್ಟರಲ್ಲಿ ಉಸಿರಿಲ್ಲ! ಬಾಲ್ಯದಲ್ಲೇ ತಾಯಿ-ತಂದೆಯನ್ನು ಕಳೆದುಕೊಂಡು ಸರ್ವಸ್ವವಾಗಿದ್ದ ಪತಿ ಹೃದಯಸ್ತಂಭನಗೊಂಡು ಹೆಂಡತಿಯ ಮಡಿಲಲ್ಲಿ ಉಸಿರು ಚೆಲ್ಲಿದಾಗ ಧೈರ್ಯ ಹೇಗೆ ಬರಬೇಕು? ಸುಶೀಲಾ ಅವರು ಹೆಚ್ಚು ಓದಿದ್ದರಿಂದ, ಪತ್ನಿಯನ್ನು ಪ್ರೊಫೆಸರ್ ಎಂದು ಸಂಬೋಧಿಸುವ ಮೂಲಕ ಗೌರವ ಕೊಡುತ್ತಿದ್ದರು ಸುಬ್ರಹ್ಮಣ್ಯ. ಇಷ್ಟು ಪ್ರೀತಿಸುವ ಜೀವ ಇನ್ನಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳುವುದು ಸುಲಭವೇ? ತಾಯಿಯನ್ನು, ಜೊತೆಗೆ ಸಾಕು ನಾಯಿಯನ್ನು ವಾಕಿಂಗ್ ಮಾಡಿಸಿ ಬಂದು ವರಾಂಡದಲ್ಲಿ ಕುರ್ಚಿಗೆ ಒರಗಿದ ಮನುಷ್ಯ, ಮರುಗಳಿಗೆಯಲ್ಲಿ ಇಲ್ಲ ಎಂದರೆ ಮನಸ್ಸು ಅರಗಿಸಿಕೊಳ್ಳಬಹುದೇ?
ಇಂತಹ ಅಗಾಧ ದುಃಖದ ಮಡುವಿನಲ್ಲೂ ‘ಸದರ್ನ್ ಎಕನಾಮಿಸ್ಟ್’ ಪಾಕ್ಷಿಕ ಆಂಗ್ಲ ಪತ್ರಿಕೆಯ ಒಂದು ಸಂಚಿಕೆಯೂ ನಿಲ್ಲದಂತೆ ವೃತ್ತಿಪರತೆಯಿಂದ ನೋಡಿಕೊಂಡ ಸುಶೀಲಾ ಅವರ ಧೈರ್ಯ, ಶಿಸ್ತು ಅಪರೂಪದ್ದು. ಆ ಹೊತ್ತಿಗಾಗಲೇ ‘ನೀ ಜೊತೆಯಿದ್ದರೆ ಸಾಕು; ನಾನೇ ನಿನ್ನ ಮಗು, ನೀ ನನ್ನ ನಗು’ ಎಂದು ಇಬ್ಬರು ನಿರ್ಧರಿಸಿ ವೈದ್ಯರ ಸಲಹೆ ಮೇರೆಗೆ ಮದುವೆಯ ಹೊಸತರಲ್ಲೇ ಸುಶೀಲಾ ಅವರು ಗರ್ಭಕೋಶವನ್ನು ತೆಗೆಸಿಕೊಂಡಿದ್ದರು. ಅಲ್ಲಿಗೆ ಮಕ್ಕಳ ಕನಸು ಕಮರಿಹೋಗಿತ್ತು. ಪತ್ರಿಕೆಯನ್ನೇ ಮಗುವಿನಂತೆ ಪ್ರೀತಿಸಿದರು. ಇದು ಬೆಳೆದು ಹೆಮ್ಮರವಾಗಬೇಕು ಎಂಬ ಮಹದಾಸೆಯಿಂದ ಬೆಳೆಸಿದರು. ಸಿಬ್ಬಂದಿಯನ್ನು ಉದ್ಯೋಗಿಗಳಂತೆ ಕಾಣದೇ ಮಕ್ಕಳಂತೆ, ಕುಟುಂಬದ ಸದಸ್ಯರಂತೆ ನೋಡಿಕೊಂಡರು. ಅವರ ಸಂಕಷ್ಟಗಳಿಗೆ ಸ್ಪಂದಿಸುವುದು, ಪ್ರೋತ್ಸಾಹಿಸುವುದು ಮತ್ತು ಮಾರ್ಗದರ್ಶನ ನೀಡುವುದು ದಂಪತಿಗಳ ತಾಯಿಗುಣದ ಪ್ರತಿರೂಪವಾಗಿತ್ತು.

“ಅತೀವ ಆಸ್ಥೆಯಿಂದ ಸ್ಥಾಪಿಸಿದ, ಕಾಳಜಿಯಿಂದ ಮುನ್ನೆಡೆಸಿದ ಪತ್ರಿಕೆ ನಾನಿಲ್ಲವಾದ ಕಾಲಕ್ಕೆ ಎಲ್ಲಿ ನಿಂತು ಹೋಗುತ್ತದೆಯೋ! ಯಾರಾದರೂ ಉಳಿಸಿದರೆ ಸಾಕು. ಇದೊಂದೇ ನನ್ನ ಕೊನೆ ಆಸೆ’’ ಎಂದು ಗದ್ಗದಿತರಾದರು ಸುಶೀಲಮ್ಮ! ಅವರು ಕೇವಲ ಸಂಪಾದಕಿಯಷ್ಟೇ ಅಲ್ಲ, ಮೌಲ್ಯಗಳ ಪ್ರತೀಕ, ಬದ್ಧತೆಯ ರೂಪಕ, ಸ್ಫೂರ್ತಿಯ ದೀಪ. ಹೀಗೆ ಎಲ್ಲವೂ ಆಗಿ ಭಾರತೀಯ ಅರ್ಥಶಾಸ್ತ್ರ ಪತ್ರಿಕೋದ್ಯಮದಲ್ಲಿ ಇತಿಹಾಸ ಸೃಷ್ಠಿಸಿದ ‘ಸದರ್ನ್ ಎಕನಾಮಿಸ್ಟ್’ ಆಂಗ್ಲ ಪತ್ರಿಕೆಯ ಸಂಪಾದಕಿ ಸುಶೀಲಾ ಸುಬ್ರಹ್ಮಣ್ಯ ಹಾಸನದ ಹೆಣ್ಣುಮಗಳು!
ಹಾಸನದ ಕೆ.ವೆಂಕಟರಮಣಯ್ಯ (ಶ್ಯಾನುಬೋಗರು) ಮತ್ತು ಪಾರ್ವತಮ್ಮ ದಂಪತಿಯ ಕಿರಿಯ ಮಗಳಾಗಿ ಸೆಪ್ಟೆಂಬರ್ 6, 1934ರಲ್ಲಿ ಇವರು ಜನಿಸಿದರು. ವಿದ್ಯಾಭ್ಯಾಸವನ್ನು ಹಾಸನದ ಸರ್ಕಾರಿ ಪ್ರಾಥಮಿಕ ಶಾಲೆ, ಸೆಂಟ್ ಫಿಲೋಮಿನ ಶಾಲೆ, ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ ಮತ್ತು ಇಂಟರ್ ಮೀಡಿಯೆಟ್ ಕಾಲೇಜು… ಹಾಸನದಲ್ಲಿಯೇ ಶಿಕ್ಷಣ ಎಲ್ಲವನ್ನೂ ಮುಗಿಸಿದರು. ಉನ್ನತ ವಿದ್ಯಾಭ್ಯಾಸವನ್ನು ವಿದ್ಯಾರ್ಥಿ ವೇತನ ಪಡೆದು ಮೈಸೂರಿನಲ್ಲಿ ಹಾನರ್ಸ್ ಮತ್ತು ಎಂ.ಎ. ಎಕನಾಮಿಕ್ಸ್ ಅನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ಬೆಂಗಳೂರಿನ ಪ್ರತಿಷ್ಠಿತ ಎಂ.ಇ.ಎಸ್ ಕಾಲೇಜಿನಲ್ಲಿ ಉಪನ್ಯಾಸಕಿ ಹುದ್ದೆ ದೊರೆತರೂ ಹೋಗಲು ಮನಸ್ಸು ಮಾಡಲಿಲ್ಲ. ತನ್ನ ಅಣ್ಣನ ಸ್ನೇಹಿತರಾಗಿದ್ದ ಚಿತ್ರದುರ್ಗ ಮೂಲದ ಪತ್ರಕರ್ತ ಕೆ.ಎನ್ ಸುಬ್ರಹ್ಮಣ್ಯ ಅವರನ್ನು ಪ್ರೀತಿಸಿ 1960ರಲ್ಲಿ ತಿರುಪತಿಯಲ್ಲಿ ವಿವಾಹವಾಗುತ್ತಾರೆ.
ಈ ಲೇಖನ ಓದಿದ್ದೀರಾ?: ಹಾಸನ ಮಣ್ಣಿನ ಹೆಣ್ಣು ಬೇರುಗಳು | ಜನಸೇವಾಸಕ್ತೆ ಯಶೋಧರಾ ದಾಸಪ್ಪ
ಅರ್ಥಶಾಸ್ತ್ರ ಪತ್ರಿಕೋದ್ಯಮವೆಂದರೆ ಅಂಕಿಅಂಶಗಳು, ನೀತಿನಿಯಮಗಳು, ಜಟಿಲ ವಿಶ್ಲೇಷಣೆಗಳು ಮತ್ತು ಗಂಭೀರ ಚಿಂತನೆಗಳ ಜಗತ್ತು. ಪುರುಷ ಪ್ರಧಾನವಾಗಿದ್ದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಅಖಿಲ ಭಾರತೀಯ ಮಟ್ಟದ ವಿಶೇಷ ಆಂಗ್ಲ ಪಾಕ್ಷಿಕ ಪತ್ರಿಕೆಯನ್ನು ಸುದೀರ್ಘ 64 ವರ್ಷಗಳ ಯಶಸ್ವಿ ಪಯಣ ಮುಂದುವರಿಸಿ, ತಮ್ಮದೇ ಆದ ಸ್ಥಾನವನ್ನು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಸಾಮಾಜಿಕ ವ್ಯತಿರಿಕ್ತ ಮನೋಭಾವ, ವೃತ್ತಿಪರ ಸವಾಲುಗಳು, ಕಾಲಘಟ್ಟದ ಅಡೆತಡೆಗಳನ್ನೆಲ್ಲ ಮೀರಿ ತಮ್ಮ ಕಾರ್ಯಪಥವನ್ನು ದೃಢವಾಗಿಸಿ ಪತ್ರಿಕೋದ್ಯಮದ ಇತಿಹಾಸದಲ್ಲೇ ಅಪರೂಪದ ಅಧ್ಯಾಯವನ್ನು ದಾಖಲಿಸಿದ್ದಾರೆ ಸುಶೀಲಾ ಅವರು.
ಇಂದಿನ ವೇಗದ ಡಿಜಿಟಲ್ ಯುಗಕ್ಕೂ ಮುನ್ನ, ಮುದ್ರಿತ ಪತ್ರಿಕೆಗಳೇ ಪ್ರಭಾವಶಾಲಿಯಾಗಿದ್ದ ಕಾಲದಲ್ಲಿ ಅವರು ಪತ್ರಿಕೆಯ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ವಿಚಾರಧಾರೆಯನ್ನು ಕಟ್ಟಿಕೊಟ್ಟ ರೀತಿ, ಆರ್ಥಿಕ ಬೆಳವಣಿಗೆ, ಸಾರ್ವಜನಿಕ ನೀತಿಗಳು, ಕೃಷಿ, ಕೈಗಾರಿಕೆ, ಸಾಮಾಜಿಕ ನ್ಯಾಯ ಮುಂತಾದ ವಿಷಯಗಳಲ್ಲಿ ‘ಸದರ್ನ್ ಎಕನಾಮಿಸ್ಟ್’ ಪ್ರಾಮಾಣಿಕ ವೇದಿಕೆಯಾಗಲು ಕಾರಣರಾದವರು ಸುಶೀಲಾ ಸುಬ್ರಹ್ಮಣ್ಯ. 45ಕ್ಕೂ ಹೆಚ್ಚು ಕನ್ನಡ, ಇಂಗ್ಲಿಷ್ ಪುಸ್ತಕಗಳನ್ನು ತಮ್ಮ ಪ್ರಕಾಶನದಿಂದ ಇವರು ಪ್ರಕಟಿಸಿದ್ದಾರೆ. ಹಲವು ಹೆಣ್ಣುಮಕ್ಕಳು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಮಾರ್ಗದರ್ಶನ ನೀಡಿದ್ದಾರೆ. ರಾಷ್ಟ್ರೀಯ ಮಟ್ಟದ ಹಲವು ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳ ಕಾರ್ಯ ನಿರ್ವಹಿಸಿ ಚಾಪು ಮೂಡಿಸಿದ್ದಾರೆ.

ಸುಶೀಲಾ ಅವರು ಈ ಕ್ಷೇತ್ರದಲ್ಲಿ ತಮ್ಮ ದೃಢ ಹೆಜ್ಜೆ ಗುರುತುಗಳನ್ನು ದಾಖಲಿಸುವ ಜೊತೆಗೆ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳ ದಾರಿದೀಪವಾಗಿ ಬೆಳೆದು ನಿಂತಿದ್ದಾರೆ. 92ರ ಇಳಿವಯಸ್ಸಿನಲ್ಲಿಯೂ 22ರ ಹರೆಯದಂತೆ ಪತ್ರಿಕೆ ನಡೆಸಲು ಅವರು ತೋರುವ ಉತ್ಸಾಹ, ಆಸಕ್ತಿ, ಕಾರ್ಯಚಟುವಟಿಕೆ ಅನೇಕರಿಗೆ ಆಶ್ಚರ್ಯ ಉಂಟುಮಾಡುತ್ತದೆ. ಜ್ಞಾನ, ಶಿಸ್ತು, ಜೀವನೋತ್ಸಾಹ ಇದ್ದರೆ ವಯಸ್ಸು ಕೇವಲ ಸಂಖ್ಯೆಯಷ್ಟೆ ಎಂಬುದನ್ನು ತಮ್ಮ ಜೀವನದ ಮೂಲಕ ಅವರು ಸಾಬೀತುಪಡಿಸಿದ್ದಾರೆ. ಈಗಲೂ ಓಡಾಡಲು, ಕಚೇರಿಗೆ ಬರಲು, ಮಹಡಿ ಹತ್ತಲು ಯಾರ ಸಹಾಯ ಬೇಡುವುದಿಲ್ಲ, ಸದಾ ಜಾಗೃತವಾಗಿರುವ ಸ್ಮರಣಶಕ್ತಿ, ಕನ್ನಡಕ ಬಳಸದೇ ಪುಸ್ತಕ, ಪತ್ರಿಕೆಗಳನ್ನೆಲ್ಲ ಓದುತ್ತಾರೆ. ಕಚೇರಿಯ ಲೆಕ್ಕಪತ್ರಗಳನ್ನು ತಿರುವು ಹಾಕಿ ತಪ್ಪಾಗಿದ್ದರೆ ಸರಿಪಡಿಸುತ್ತಾರೆ. ಎಲ್ಲ ದೂರವಾಣಿ ಕರೆಗಳಿಗೂ ಸ್ವತಃ ಉತ್ತರಿಸುತ್ತಾರೆ.
ಈ ಲೇಖನ ಓದಿದ್ದೀರಾ?: ಹಾಸನ ಮಣ್ಣಿನ ಹೆಣ್ಣು ಬೇರುಗಳು | ಹಿರಿಯ ಲೇಖಕಿ, ಪತ್ರಕರ್ತೆ ಪಾರ್ವತಿ ಕೃ.ನ.ಮೂರ್ತಿ
ಪ್ರೀತಿಸಿ ಮದುವೆಯಾದ ದಂಪತಿಗಳು ತಮ್ಮದೇ ಆದ ದೃಷ್ಠಿಕೋನ, ಮೌಲ್ಯಗಳು ಮತ್ತು ಬದ್ಧತೆಯೊಂದಿಗೆ ‘ಸದರ್ನ್ ಎಕನಾಮಿಸ್ಟ್’ ಇಂಗ್ಲಿಷ್ ಪಾಕ್ಷಿಕ ಪತ್ರಿಕೆ ಪ್ರಾರಂಭಿಸಿದಾಗ ಸವಾಲುಗಳ ಪರ್ವತವೇ ನಿಂತಿತ್ತು. ಅರ್ಥಶಾಸ್ತ್ರೀಯ ಪತ್ರಿಕೋದ್ಯಮವೆಂದರೆ ಸಾಮಾನ್ಯ ಸುದ್ದಿಸಂಕಲನ ಅಲ್ಲ! ಇದು ಸಂಖ್ಯೆಗಳ ನಿಖರತೆ, ನೀತಿಗಳ ಆಳವಾದ ವಿಶ್ಲೇಷಣೆ, ಕೇಂದ್ರ-ರಾಜ್ಯ ನೀತಿಗಳು, ಬಜೆಟ್‌ಗಳು, ಮಾರುಕಟ್ಟೆ ಚಲನೆಗಳು, ಅಂತರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಳು ಎಲ್ಲವನ್ನು ಪರಿಶೀಲಿಸಿ ನಿಖರ ಮಾಹಿತಿಯನ್ನು ಓದುಗರಿಗೆ ತಲುಪಿಸುವ ಹೊಣೆಗಾರಿಕೆ ಸಣ್ಣದೇನಲ್ಲ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪತ್ರಿಕೆಯನ್ನು ಆರಂಭಿಸುವುದೇ ಸಾಹಸದ ಕೆಲಸ. ಜೊತೆಗೆ ಆಂಗ್ಲ ಭಾಷೆಯಲ್ಲಿ! ಇದರೊಂದಿಗೆ ಓದುಗರಿಗೆ ತಲುಪಿಸುವುದು, ನಂಬಿಕೆಯನ್ನು ಮೂಡಿಸುವುದು, ಮುದ್ರಣವೆಚ್ಚ, ವಿತರಣೆಯ ತೊಂದರೆಗಳು… ಎಲ್ಲವನ್ನು ನಿರ್ವಹಿಸುವುದು ಕಷ್ಟಸಾಧ್ಯದ ಕೆಲಸ. ಆದರೂ ಇಷ್ಟೂ ವರ್ಷಗಳು ದೃಢವಾಗಿ ಮುನ್ನಡೆಸಿದರು.
1962ರಲ್ಲಿ ಪ್ರಾರಂಭವಾದ ಪತ್ರಿಕೆಯ ಹೊಸತರಲ್ಲಿ, ತಿಂಗಳಿಗೆ 10 ರೂ. ಚಂದಾದಾರಿಕೆಯಿಂದ ಪ್ರಾರಂಭಗೊಂಡು ಈ 2026ಕ್ಕೆ ಮಾಸಿಕ ಚಂದಾ 2,800 ರೂಪಾಯಿಗೆ ಬಂದು ನಿಂತಿದೆ! ತಿಂಗಳಿಗೆ ಇಷ್ಟು ಹಣ ಕೊಟ್ಟು ಓದುವ ಚಂದಾದಾರರು ಇರುತ್ತಾರೆಯೇ ಎಂದೆನಿಸಬಹುದು. ಖಂಡಿತಾ ಇದ್ದಾರೆ. ಕಾರಣ, ಇದು ಭಾರತದಲ್ಲಿಯೇ ವಿಶೇಷವಾದ ಮತ್ತು ಅಪರೂಪದ ಆಂಗ್ಲ ಪತ್ರಿಕೆ. ದಂಪತಿಗಳು ಸಮಾನಮನಸ್ಕರಾಗಿದ್ದದ್ದು ‘ಸದರ್ನ್ ಎಕನಾಮಿಸ್ಟ್’ಗೆ ಅಡಿಪಾಯವಾಯಿತು. ವರ್ಷಗಳು ಉರುಳಿದಂತೆ ಪತ್ರಿಕೆ ತನ್ನದೇ ಗುರುತನ್ನು ನಿರ್ಮಿಸಿತು. ಓದುಗರ ವಿಶ್ವಾಸವನ್ನು ಗಳಿಸಿ ಸಾವಿರಾರು ಸಂಖ್ಯೆಯಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಓದುವ ವಿದ್ಯಾರ್ಥಿಗಳು, ಅರ್ಥಶಾಸ್ತ್ರಜ್ಞರು, ರಾಜಕಾರಣಿಗಳು, ವಕೀಲರು, ದೊಡ್ಡ ದೊಡ್ಡ ಕಾಲೇಜುಗಳವರು ಇದಕ್ಕೆ ಚಂದಾದಾರರಾದರು. ಇದೆಲ್ಲದರ ಪ್ರತೀಕದಿಂದ ಸಮಾಜದ ಆರ್ಥಿಕ ಚಿಂತನೆಗೆ ದಿಕ್ಕು ತೋರಿಸುವ ವಿಶ್ವಾಸಾರ್ಹ ವೇದಿಕೆಯಾಗಿ ಪತ್ರಿಕೆ ಬೆಳೆದದ್ದು ಇತಿಹಾಸ. ಇದಕ್ಕೆ ಓದುಗರೊಂದಿಗೆ ಕಟ್ಟಿಕೊಂಡ ನಂಬಿಕೆಯೇ ಜೀವಂತ ಸಾಕ್ಷಿ. ಇದನ್ನು ಒಬ್ಬ ಹೆಣ್ಣುಮಗಳು ನೀರೆರೆದು ಬೆಳೆಸಿರುವುದು ಸ್ತ್ರೀ ಸಾಧನೆಯ ಪ್ರತೀಕ.
ಮನೆ ಮತ್ತು ಪತ್ರಿಕೆ ಎರಡನ್ನು ಸಮಾನವಾಗಿ ನಿರ್ವಹಿಸುತ್ತಿದ್ದ ಹೊತ್ತಲ್ಲಿ, ವಿಧಿಯ ಕಠೋರ ತಿರುವು ಸುಶೀಲಾ ಅವರನ್ನು ಕಂಪಿಸುವಂತೆ ಮಾಡಿಬಿಡುತ್ತದೆ. 25 ವರ್ಷದ ಸಂಗಾತಿ, ಬದುಕಿನ ಎಲ್ಲ ಹಂತಗಳ ಸಹಯಾತ್ರಿಕ, ಪತ್ರಿಕೆಯ ಕನಸಿನ ಸಹಶಿಲ್ಪಿಯ ಅಕಾಲಿಕ ನಿರ್ಗಮನ ಅವರನ್ನು ಬಾಧಿಸುತ್ತದೆ. ಇಂತಹ ದುಃಖದ ನಡುವೆಯೂ ಹೊಣೆಗಾರಿಕೆಯ ಬೆಳಕು ಮೂಡಿ, ಕಣ್ಣೀರನ್ನು ಹುದುಗಿಸಿಕೊಂಡು ಧೈರ್ಯದ ಮುಖವಾಡ ಧರಿಸಿ ಪತ್ರಿಕೆಯನ್ನು ಮುನ್ನಡೆಸಿದ್ದು ಮಾತ್ರ ಸುಶೀಲಾ ಅವರು ಪತಿಗೆ ಸಲ್ಲಿಸಿದ ಮೌನ ಶ್ರದ್ಧಾಂಜಲಿ! ಪ್ರೀತಿ ಹೇಗೆ ಶಕ್ತಿಯಾಗುತ್ತದೆ, ದುಃಖ ಹೇಗೆ ಜವಾಬ್ದಾರಿಯಾಗುತ್ತದೆ ಮತ್ತು ಮಹಿಳೆ ಹೇಗೆ ಒಬ್ಬಳೆ ನಿಂತು ಒಂದು ಸಂಸ್ಥೆಯನ್ನು ಮುನ್ನಡೆಸುತ್ತಾ ಸಾಧನೆಯ ಶಿಖರವೇರಿರುವುದು ಮಹಿಳೆಯರಿಗೆ ಮಾದರಿ.
ಎಲ್ಲ ಮಹಿಳೆಯರಿಗೆ ಸುಶೀಲಾ ಅವರ ಈ ಸಾಧನೆ ವಿಶೇಷ ಸ್ಫೂರ್ತಿಯಾಗಿದೆ. ಕುಟುಂಬ, ಸಮಾಜ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಸಾಧಿಸುತ್ತಾ, ಉನ್ನತ ಮಟ್ಟದ ಬೌದ್ಧಿಕ ಕ್ಷೇತ್ರದಲ್ಲಿ ದೀರ್ಘಕಾಲ ಸಾಧನೆ ಮಾಡಬಹುದು ಎಂಬುದಕ್ಕೆ ಸುಶೀಲಾ ಸುಬ್ರಹ್ಮಣ್ಯ ಅವರು ನಿದರ್ಶನ. ಅವರ ಪಯಣ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಯಾವುದೇ ಕ್ಷೇತ್ರವಾಗಲಿ, ನಿಷ್ಠೆ ಮತ್ತು ಪರಿಶ್ರಮವಿದ್ದರೆ ಮುನ್ನಡೆಯಲು ಸಾಧ್ಯ ಎಂಬ ನಂಬಿಕೆಯನ್ನು ಮೂಡಿಸುತ್ತದೆ. ಈ ಅಪರೂಪದ ಸಾಧನೆ, ಮುಂದಿನ ಪೀಳಿಗೆಯ ಮಹಿಳೆಯರಿಗೆ ದಾರಿ ತೋರಿಸುವ ಬೆಳಕಾಗಿ ಪ್ರಕಾಶಿಸುತ್ತಿರುತ್ತದೆ.




