ಹಾಸನ ಮಣ್ಣಿನ ಹೆಣ್ಣು ದನಿಗಳು | ಮುಗಿಯದ ಜನಪದ ಸಾತ್ವಿಕ ಧ್ವನಿ- ಪಟೇಲ್ ಲಕ್ಷ್ಮಮ್ಮ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಹಾಸನದ ಮಣ್ಣು ಜಾನಪದ ಕಲೆಗಳ ತವರೂರು. ಇಲ್ಲಿನ ಗಾಳಿಯಲ್ಲಿ ಸೋಬಾನೆ ಪದಗಳ ಇಂಪಿದೆ, ಮಣ್ಣಿನಲ್ಲಿ ಸಂಸ್ಕೃತಿಯ ಕಂಪಿದೆ. ಇಂತಹ ಶ್ರೀಮಂತ ನೆಲದಲ್ಲಿ ಹುಟ್ಟಿ, ಆಧುನಿಕತೆಯ ಅಬ್ಬರದ ನಡುವೆಯೂ ನಮ್ಮ ಹೆಣ್ಣುಮಕ್ಕಳ ಬದುಕಿನ ಅವಿಭಾಜ್ಯ ಅಂಗವಾಗಿದ್ದ ‘ಸೋಬಾನೆ’ ಕಲೆಯನ್ನು ಉಸಿರಾಗಿಸಿಕೊಂಡವರು ಪಟೇಲ್ ಲಕ್ಷ್ಮಮ್ಮ. ದುಂಡುಮುಖ, ಉದ್ದನೆಯ ಜಡೆ, ಸಾಧಾರಣ ಎತ್ತರದ ಈ ಮಹಾತಾಯಿಯ ಕಣ್ಣುಗಳಲ್ಲಿ ಮಮತೆಯಿದೆ, ಮಾತಿನಲ್ಲಿ ವಿನಯವಿದೆ. ಕೇವಲ ಒಬ್ಬ ಕಲಾವಿದೆಯಾಗಿ ಮಾತ್ರವಲ್ಲದೆ, ಒಂದು ಸಂಸ್ಕೃತಿಯ ಕೊಂಡಿಯಾಗಿ ಲಕ್ಷ್ಮಮ್ಮ ಅವರು ಹಾಸನದ ಹೆಣ್ಣು ಬೇರುಗಳಲ್ಲಿ ಪ್ರಮುಖರಾಗಿ ನಿಲ್ಲುತ್ತಾರೆ.

ಜನಪದ ಕಲಾವಿದೆ ಪಟೇಲ್ ಲಕ್ಷ್ಮಮ್ಮನವರು 1953ರಲ್ಲಿ ತಂದೆ ನಿಂಗೇಗೌಡ, ತಾಯಿ ಗಿರಿಯಮ್ಮನವರ ಐದನೇ ಪುತ್ರಿಯಾಗಿ ಹಾಸನ ಜಿಲ್ಲೆಯ ದುದ್ದ ಹೋಬಳಿ ಹೊನ್ನಾವರ ಗ್ರಾಮದಲ್ಲಿ ಜನಿಸಿದರು. ಶಾಲಾ ದಿನಗಳಿಂದಲೂ ಲಕ್ಷ್ಮಮ್ಮನವರು ಅತೀವ ಚಟುವಟಿಕೆಯಿಂದ ಕೂಡಿದ್ದು, ಆಗಿನಿಂದಲೇ ತನ್ನ ತಾಯಿಯೊಡನೆ, ಸೋಬಾನೆ ಪದ ಹಾಡುವುದು, ಮಕ್ಕಳನ್ನು ರಮಿಸುವ ಹಾಡನ್ನು ಹೇಳುವುದು, ಗೆಳೆತನದ ಬಗ್ಗೆ ಹಾಡು ಕಟ್ಟಿ ಹೇಳುವುದು, ಮದುವೆಯಲ್ಲಿ ಶಾಸ್ತ್ರದ ಹಾಡು ಹಾಡುವುದು, ಭತ್ತ ಕುಟ್ಟುವ ಸಂದರ್ಭ, ಒಸಗೆಯ ಸಮಯ, ಗಂಡನ ಮನೆಗೆ ಕಳಿಸುವ ಸಂದರ್ಭ, ದೊರೆ ಹಾಡು, ಮಳೆ ಮತ್ತು ಜನಪದ ಹಾಡು, ಬೀಸೋ ಕಲ್ಲಿನ ಪದಗಳನ್ನು ಹಾಡುವುದರಲ್ಲಿ- ತನ್ನ ವಾರಿಗೆಯ ಗೆಳತಿಯರೊಡನೆ ಜಾನಪದ, ಭಜನೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ವಿವಾಹ, ಸೀಮಂತ ಮತ್ತು ವಿಶೇಷ ಶುಭ ಸಮಾರಂಭಗಳಲ್ಲಿ ಹಾಡಲಾಗುವ ಜನಪದ ಗೀತೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಇವು ಹಾಸ್ಯ, ವಿಡಂಬನೆ ಮತ್ತು ಶುಭಾಶಯಗಳನ್ನು ಒಳಗೊಂಡಿದ್ದು, ಗ್ರಾಮೀಣ ಸಂಸ್ಕೃತಿಯ ಬಿಂಬವಾಗಿದ್ದವು. ಆ ಮೂಲಕ ಇವರು ಪರಿಪೂರ್ಣ ಕಲಾವಿದೆಯಾಗಿ ಅರಳತೊಡಗಿದರು. 

ಇದನ್ನು ಓದಿದ್ದೀರಾ?: ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಂತರದ ದಿನಗಳಲ್ಲಿ 1973ರಲ್ಲಿ ಹಾಸನ ಜಿಲ್ಲೆಯ ದುದ್ದ ಹೋಬಳಿ ಮೆಳಗೋಡು ಗ್ರಾಮದ ಪಟೇಲ್ ನಾರಾಯಣಗೌಡರೊಂದಿಗೆ ಇವರ ವಿವಾಹವಾಯಿತು. ವಿವಾಹದ ನಂತರವೂ ಇವರ ಕಲೆಯ ಪಯಣ ಮುಂದುವರಿಸಿದರು. ಸಂಪ್ರದಾಯಸ್ಥ ಕುಟುಂಬದ ಸೊಸೆಯಾಗಿದ್ದರೂ, ಕಲೆಗೆ ಮನೆಯವರ ಪ್ರೋತ್ಸಾಹವಿತ್ತು. ಹೀಗಾಗಿ ಹಲವು ಸಮಾರಂಭದಲ್ಲಿ ತಮ್ಮ ಜಾನಪದ ಗೀತಗಾಯನ ಕಲೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು. ಮದುವೆಯಲ್ಲಿ- ಹಸೆಮಣೆ, ಕಾಶಿಯಾತ್ರೆ, ಸೀಮಂತ ಮತ್ತು ಮಗುವಿನ ತೊಟ್ಟಿಲು ಶಾಸ್ತ್ರಗಳಲ್ಲಿ ಹಾಡುತ್ತಾ, ದೇವರು ಮತ್ತು ಮದುಮಕ್ಕಳ ವರ್ಣನೆ, ಹಾಸ್ಯವಿಡಂಬನೆ ಮತ್ತು ಶುಭ ಹಾರೈಸಲು ಹೆಚ್ಚಾಗಿ ಹಿರಿಯ ಮಹಿಳೆಯರೊಡನೆ ಸೇರಿ ದನಿಯಾಗುತ್ತಾ ಒಂದುಗೂಡುತ್ತಿದ್ದರು. ತಮಾಷೆಯಾಗಿ ಬೀಗರ ಕಾಲೆಳೆಯುತ್ತಾ, ನಗುತ್ತಾ, ನಲಿಯುತ್ತಾ ಶುಭ ಸಮಾರಂಭ ನೆರವೇರಲು ಅನುವು ಮಾಡಿಕೊಡುತ್ತಿದ್ದರು. ಇವರ ಹಾಡುಗಳು ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿದ್ದವು.

ಲಕ್ಷ್ಮಮ್ಮ ಕೇವಲ ಹಾಡುಗಾರ್ತಿಯಲ್ಲ, ಅವರು ಮದುವೆಯ ಪ್ರತಿಯೊಂದು ಶಾಸ್ತ್ರಗಳ ಹಿಂದಿರುವ ಮರ್ಮವನ್ನು ಬಲ್ಲ ಪ್ರವೀಣೆ. ಭತ್ತ ಕುಟ್ಟುವ ಶಾಸ್ತ್ರದಿಂದ ಹಿಡಿದು ಹೆಣ್ಣನ್ನು ಗಂಡನ ಮನೆಗೆ ಕಳುಹಿಸುವ ತನಕದ ಪ್ರತಿಯೊಂದು ವಿಧಿವಿಧಾನಗಳೂ ಇವರಿಗೆ ಕರತಲಾಮಲಕ. ಹಳ್ಳಿಗಳಲ್ಲಿ ಮದುವೆ ಸಂದರ್ಭದಲ್ಲಿ ಭತ್ತ ಕುಟ್ಟುವ ಶಾಸ್ತ್ರವಿದ್ದಾಗ- ಒಳಕಲ್ಲಿಗೆ ಭತ್ತವನ್ನು ಹಾಕಿ ಮೂರು ಜನ ಮುತ್ತೈದೆಯರು ಭತ್ತವನ್ನು ಕುಟ್ಟುವಾಗ, ಅರ್ಧ ಅಕ್ಕಿ, ಅರ್ಧ ಭತ್ತ ಇರುವಂತೆ ಪದ ಹೇಳಿಕೊಂಡು ಕೊಡುತ್ತಾರೆ. ‘ಈ ರೀತಿಯಾಗಿ ಮದುವೆ ಶಾಸ್ತ್ರ ಪ್ರಾರಂಭವಾದಾಗಿನಿಂದ ಮದುವೆ ಮುಗಿಸಿ ಮದುಮಗಳನ್ನು ಗಂಡನ ಮನೆಗೆ ಕಳುಹಿಸುವ ತನಕ ಇತ್ತೀಚಿನ ದಿನಗಳಲ್ಲಿಯೂ ನಮ್ಮನ್ನು ಸಮಾರಂಭಕ್ಕೆ ಕರೆಸಿಕೊಳ್ಳುತ್ತಾರೆ’ ಎನ್ನುತ್ತಾರೆ ಲಕ್ಷ್ಮಮ್ಮ.

ಇದನ್ನು ಓದಿದ್ದೀರಾ?: ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ

ಬಾಗಿವಾಳು ಜಯಮ್ಮ, ಮೀನಾಕ್ಷಮ್ಮ ಮತ್ತು ಶಶಿಕಲಾ ಅವರಂತಹ ಸ್ನೇಹಿತೆಯರೊಂದಿಗೆ ಸೇರಿ ಲಕ್ಷ್ಮಮ್ಮ ಕಟ್ಟಿದ ಸೋಬಾನೆ ಲೋಕ ವಿಶಾಲವಾದುದು. ‘ಸಂಪ್ರದಾಯಗಳನ್ನು ಮರೆತಿರುವ ಇಂದಿನ ಜಾಯಮಾನದಲ್ಲಿ ಆಧುನಿಕತೆಯ ಜೊತೆಯಾಗಿ ನಮ್ಮ ಸಂಪ್ರದಾಯವನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದೇವೆ’ ಎಂದು ಅಭಿಮಾನದಿಂದ ಹೇಳುತ್ತಾರೆ. ಹೆಣ್ಣು ಗಂಡಿಗೆ- ಪೂಜಾರಿಯಂತೆ ಶಾಸ್ತ್ರ ಹೇಳಿ ಮದುವೆ ಮಾಡಿಸಬಲ್ಲ ಪ್ರವೀಣರಾಗಿದ್ದಾರೆ ಇವರು. ವಿಧವಿಧದ ಹಸೆ ಬರೆಯಲು ಕೂಡ ಲಕ್ಷ್ಮಮ್ಮ ಅವರೇ ಪ್ರಮುಖರು. ಹಸೆ ಬರೆದಾದ ಮೇಲೆ ಹೆಣ್ಣನ್ನು ಗಂಡನ್ನು ಯಾವ ಬದಿಯಲ್ಲಿ ಕೂರಿಸಬೇಕೆಂದು ಇವರನ್ನೇ ಕೇಳುತ್ತಾರಂತೆ. ಗೆಳತಿಯರೆಲ್ಲರ ಒಡಗೂಡಿ ಚಪ್ಪರದಟ್ಟಿಯಲ್ಲೇ ಸೋಬಾನೆ ಪ್ರಾರಂಭವಾಗುತ್ತದೆ.

ಲಕ್ಷ್ಮಮ್ಮ ತಮ್ಮ ಬದುಕನ್ನೇ ಒಟ್ಟೈಸಿಕೊಂಡು ಜನಪದ ಪದಗಳನ್ನು, ಸೋಬಾನೆ ಸಾಹಿತ್ಯವನ್ನು ಭಾವಪರವಶವಾಗಿ ಹೃದಯ ಉಮ್ಮಳಿಸಿ ಬರುವಂತೆ ಹಾಡುತ್ತಾರೆ. ಸೋಭಾನವೆ ಸೋಭಾನವೆ… ಎಂದು ಶುಭಾರಂಭವಾದರೆ- ‘ಹಸೆಯಾ ಬರಿಯೋರ ಮಲ್ಲಿ ಕಸವಿಲ್ಲ ಕಡ್ಡಿಲ್ಲ, ಹಾಲಕ್ಕಿ ನೀರಕ್ಕಿ ನೀಲವರ್ಣದಕ್ಕಿ, ಕೌರವನ ಪತ್ನಿ ದ್ರೌಪದಿ ದೇವಿ…, ಎದ್ದು ಬರಹೇಳಿ ನಿದ್ರೆ ಗಣಿನೋರಾ… ಹೊನ್ನಿನ ತಟ್ಯಾಗ ಹಾಲಿನ ಓಕಳಿ…’ ಎಂದು ಪದ ಮುಗಿಯುವವರೆಗೆ ಬಿಡದೇ ಹಾಡುತ್ತಾರೆ. ‘ಹಾಡುವೆನು ತಡೆತಡೆದು, ಧ್ಯಾನರಸ ಕುಡಿಕುಡಿದು, ಹಾಡಲ್ಲ ನನ್ನ ಬಾಳಪಾಡು…’ ಎಂದು ತಮ್ಮೊಳಗೇ ಮುಳುಗಿ ಹಾಡಲು ಪ್ರಾರಂಭಿಸಿದರೆ ಸುತ್ತಿನವರೆಲ್ಲ ಮಂತ್ರಮುಗ್ಧರಾಗಿ ತಾವೂ ಹಾಡಿನಲ್ಲಿ ಲೀನವಾಗಿಬಿಡುತ್ತಾರೆ.

ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು 

ಆದರೆ ಇತ್ತೀಚೆಗೆ ವಯಸ್ಸಾದಂತೆ ತಡರಾತ್ರಿ, ಬೆಳಗ್ಗಿನ ಜಾವ ಮದುವೆ ಶಾಸ್ತ್ರಗಳಲ್ಲಿ ಭಾಗಿಯಾಗಲು ಆರೋಗ್ಯ ಅಡೆತಡೆ ಮಾಡುತ್ತಿದೆ. ಇನ್ನೂ ಕೆಲವೊಮ್ಮೆ ಹಿರಿಯರಿಗೆ ಆಸಕ್ತಿ ಇದ್ದು ಲಕ್ಷ್ಮಮ್ಮನವರನ್ನು ಕರೆಸಿದರು- ‘ಇವತ್ತಿನ ಯುವಜನರ ಆಡಂಬರ, ಅಭಿರುಚಿ, ಕೆಲವರ ನಿರ್ಲಿಪ್ತತೆ, ನಿರಾಸಕ್ತಿ ಮನೋಧೋರಣೆಗಳಿಂದ, ಆಧುನಿಕತೆಯ ಪ್ರಭಾವದಿಂದಲೋ, ಪೀಳಿಗೆಯ ಅಂತರದಿಂದಲೋ, ಥರಾವರಿ ಆರ್ಕೆಸ್ಟ್ರಾ, ಸದ್ದುಗದ್ದಲಗಳ ಪರಿಣಾಮದಿಂದಲೋ ಸೋಬಾನೆ ಪದಗಳಿಗೆ ವೇದಿಕೆ ಸಿಗುತ್ತಿಲ್ಲ’ ಎನ್ನುತ್ತಾರೆ ಲಕ್ಷ್ಮಮ್ಮ ಬೇಸರದಿಂದ.

ಅಪ್ಪಟ ಗ್ರಾಮೀಣ ಪ್ರತಿಭೆ ಲಕ್ಷ್ಮಮ್ಮನವರ- ಕಲೆಯನ್ನು ಗುರುತಿಸಿದ ಹಿರಿಯ ಕಲಾವಿದರು, ತಜ್ಞರು ಎಲೆಮರೆಯ ಕಾಯಿಯಂತಿದ್ದ ಲಕ್ಷ್ಮಮ್ಮನವರಿಗೆ ಸ್ಪರ್ಧೆಗಳಲ್ಲಿ, ದೊಡ್ಡ ಸಭೆ ಸಮಾರಂಭಗಳಲ್ಲಿ ಇವರ ಜಾನಪದ ಭಜನೆ ಕಲೆಯನ್ನು ಪ್ರದರ್ಶಿಸಲು ಸಲಹೆ ಮತ್ತು ಅವಕಾಶ ಕೊಟ್ಟರು. ನಂತರ ಲಕ್ಷ್ಮಮ್ಮ ಹಿಂತಿರುಗಿ ನೋಡಿದ್ದೇ ಇಲ್ಲ. ಹಾಡುತ್ತಲೇ ಬಂದರು. ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನವನ್ನು, ಪ್ರಶಸ್ತಿಗಳನ್ನು, ಸನ್ಮಾನಗಳನ್ನು ಪಡೆದುಕೊಳ್ಳುತ್ತಲೇ ಬಂದಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರಿಂದ ವಾರ್ಷಿಕ ಗೌರವ ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ. ಅದರಲ್ಲಿ ಪ್ರಮುಖವಾಗಿ 2000ನೇ ವರ್ಷದಲ್ಲಿ ಭಾರತ ಸರ್ಕಾರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ನೆಹರು ಯುವ ಕೇಂದ್ರ ನಡೆಸಿದ ಹಾಸನ ಜಿಲ್ಲಾ ಜಾನಪದ ಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುತ್ತಾರೆ. ನಂತರ ಕರ್ನಾಟಕದ ಅತ್ಯುತ್ತಮ ಪ್ರಶಸ್ತಿ- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ 2017ರ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಹಾಸನ ಜಿಲ್ಲಾಡಳಿತದಿಂದ 2023ರಲ್ಲಿ ಇವರ ಕಲೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿರುತ್ತಾರೆ. ಹಾಸನದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಡೆಸಿದ ಸೋಬಾನೆ ಪದ, ಜನಪದ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಬಹುಮಾನವನ್ನೂ ಪಡೆದಿರುತ್ತಾರೆ. ಹೀಗೆ ಇವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಸನ್ಮಾನಗಳು ಸಂದಿವೆ.

ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ

ಲಕ್ಷ್ಮಮ್ಮನವರ ಸಾಧನೆಯನ್ನು ಗುರುತಿಸಿ ಆಕಾಶವಾಣಿಯಲ್ಲಿ ಇವರ ಸಂದರ್ಶನ ನೇರ ಪ್ರಸಾರ ಮಾಡಿ ಯುವಜನರಿಗೆ ಸ್ಪೂರ್ತಿ ತುಂಬುವ ಕೆಲಸವನ್ನೂ ಮಾಡಿದ್ದಾರೆ. ಬಂದಿರುವ ಎಲ್ಲಾ ಪ್ರಶಸ್ತಿ ಫಲಕಗಳನ್ನು, ಸರ್ಟಿಫಿಕೇಟ್‌ಗಳನ್ನು ಬಟ್ಟೆಯಲ್ಲಿ ಸುತ್ತಿ ಆಸ್ತಿಯಂತೆ, ಚಿನ್ನ-ಬೆಳ್ಳಿಯಂತೆ ಜೋಪಾನವಾಗಿರಿಸಿದ್ದಾರೆ ಅವರ ಮಕ್ಕಳು! ಮೃದು ಮನಸ್ಸಿನ ಈ ಮಹಾತಾಯಿಯ ಮನೆ ಅದೊಂದು ಮಹಾಮನೆ! ‘ಮನೆ ತುಂಬಾ ಮಕ್ಕಳಿರಲ್ಲವ್ವ’ ಎಂದು ಕವಿಯೊಬ್ಬ ಹೇಳಿದ ಮಾತು ಇವರಿಗೆ ಸರಿಯಾಗಿ ಅನ್ವಯಿಸುತ್ತದೆ. ಬಂಧು ಬಳಗದಲ್ಲಿ ಸುತ್ತುವರಿಯಲ್ಪಟ್ಟ ಮಕ್ಕಳು, ಮೊಮ್ಮಕ್ಕಳ ಅಳು ನಗುವಿನಲ್ಲಿ ಇವರು ಒಂದಾಗಿ ಬದುಕುವ ಬಾಳುವೆ ಯಾರೂ ಮೆಚ್ಚಬೇಕಾದ್ದು. ತನ್ನ ಕಲೆಯಿಂದ ತಾನೇನೋ ಸಾಧಿಸುತ್ತಿದ್ದೇನೆ ಎನ್ನುವುದಕ್ಕಿಂತ- ‘ನಾನು ಸಂಪ್ರದಾಯ ಉಳಿಸುವ ಕೆಲಸ ಮಾಡುತ್ತಿದ್ದೇನೆ’ ಎಂಬ ತೃಪ್ತಿಯ ನಗು ಈಗ 73ರ ಹರೆಯದಲ್ಲಿರುವ ಲಕ್ಷ್ಮಮ್ಮ ಅವರ ಮೊಗದಲ್ಲಿ ಸದಾ ತುಳುಕುತ್ತಿರುತ್ತದೆ.

-ಉಷಾ ಸಿ.ಎನ್.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಹಣದುಬ್ಬರಕ್ಕೆ ಅನುಗುಣವಾಗಿ ನಡೆಯುವ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ಏಪ್ರಿಲ್ 1ರಿಂದ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...