ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ವೈದ್ಯಕೀಯ ಕ್ಷೇತ್ರ ಕೇವಲ ಚಿಕಿತ್ಸಾ ಕ್ಷೇತ್ರ ಅಲ್ಲ! ಅದು ಮಾನವೀಯ ಕಾಳಜಿಯ ಸೇವಾ ಕ್ಷೇತ್ರ. ಇಲ್ಲಿ ಮಹಿಳೆಯರ ಪಾತ್ರ ಅಗಾಧ, ಅಸಾಧಾರಣ ಮತ್ತು ಅಪೂರ್ವ. ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯಗಳು ಇಲ್ಲದಿದ್ದ ಕಾಲದಿಂದಲೂ ಮನೆ ವೈದ್ಯ, ನಾಟಿ ವೈದ್ಯ, ಸೂಲಗಿತ್ತಿಯರ ಸೇವೆಗಳನ್ನು ಉಚಿತವಾಗಿ ಮಾಡುತ್ತಾ ಗ್ರಾಮೀಣಪ್ರದೇಶದ ಜನಸಮುದಾಯಕ್ಕೆ ಬೆಳಕಾಗುತ್ತಾ, ಬೇರಾಗುತ್ತಾ ಬಂದವರು ತಾಯಿ ಸ್ವರೂಪಿಣಿಯರಾದ ಸಾವಿರಾರು ಹೆಣ್ಣುಮಕ್ಕಳು. ಅವರನ್ನು ಮೊದಲಿಗೆ ನೆನೆಯಬೇಕು. ಪ್ರಸ್ತುತದ ಬೇರುಗಳಾಗಿ ಆಶಾ ಕಾರ್ಯಕರ್ತೆಯರು, ದಾದಿಯರು, ಶುಶ್ರೂಷಕಿಯರು, ಆಯಾಗಳು ಮತ್ತು ಸಹಾಯಕ ಸಿಬ್ಬಂದಿಯಿಂದ ಆರಂಭವಾಗಿ ವೈದ್ಯರು, ಪ್ರಮುಖ ಶಸ್ತ್ರಚಿಕಿತ್ಸಕರು, ಸಂಶೋಧಕರು, ತಜ್ಞರು, ವಿಷಯ ಮುಖ್ಯಸ್ಥರವರೆಗೆ- ಆರೋಗ್ಯ ಮತ್ತು ವೈದ್ಯ ವ್ಯವಸ್ಥೆ ವಿಕಸನಗೊಂಡಿದೆ. ಇತಿಹಾಸದುದ್ದಕ್ಕೂ ಮಹಿಳೆಯರು ಸಮಾಜದಲ್ಲಿ ಚಿಕಿತ್ಸೆ ನೀಡುವವರಾಗಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಅನುಕಂಪ, ತಾಳ್ಮೆ, ಕಾರುಣ್ಯ ಮತ್ತು ನುರಿತ ಸೇವೆಗಳ ಮೂಲಕ ಅವರು ರೋಗಿಗಳ ಆರೈಕೆಯಲ್ಲಿ ಅವಿರತ ತೊಡಗಿಕೊಳ್ಳುತ್ತಾ ಬಂದಿದ್ದಾರೆ. ಅದರಂತೆ ಹಾಸನದಲ್ಲಿಯೂ ವೈದ್ಯಕೀಯ ಕ್ಷೇತ್ರದ ಮಹಿಳಾ ಹಿರಿಯ ಬೇರುಗಳು ಕಿರಿಯ ಬೇರುಗಳಿಗೆ ಪ್ರೇರಣೆಯಾಗುತ್ತಾ ಬಂದಿದ್ದಾರೆ.
ಇದನ್ನು ಓದಿದ್ದೀರಾ?: ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…
ಕೇವಲ ಪುರುಷ ವೈದ್ಯರೇ ಹೆಚ್ಚಾಗಿದ್ದು, ಮಹಿಳಾ ವೈದ್ಯರ ಕೊರತೆಯಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಮೊದಲ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾಗಿ ಪ್ರಸಿದ್ಧರಾದವರು ಡಾ.ಪುಟ್ಟಮ್ಮನವರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯವರು. ತಮ್ಮ ಮೊದಲ ವೃತ್ತಿ ಜೀವನವನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಆರಂಭಿಸಿ, ನಂತರ ಬೆಂಗಳೂರಿನ ಬೋರಿಂಗ್ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಕೆ.ಆರ್.ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದರು. 1967ರಲ್ಲಿ ಹಾಸನ ಜಿಲ್ಲೆಗೆ ವರ್ಗಾವಣೆಗೊಂಡು 1975ರಿಂದ 1978ರವರೆಗೆ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಪ್ರಸೂತಿ ಮತ್ತು ಸ್ತ್ರೀ ರೋಗ ಕೇಂದ್ರವಾಗಿ ‘ಶಾರದಾ ನರ್ಸಿಂಗ್ ಹೋಮ್’ ಸ್ಥಾಪಿಸಿ ತಮ್ಮ ಸೇವೆಯನ್ನು ಆರಂಭಿಸಿ, ಸಾವಿರಾರು ಹೆರಿಗೆಗಳನ್ನು ಸುಸೂತ್ರವಾಗಿ ಮಾಡುವುದರ ಮೂಲಕ ತಾಯಿ ಮತ್ತು ಮಗುವಿನ ಜೀವಗಳಿಗೆ ಭರವಸೆಯ ಬೆಳಕಾದರು. ವೃತ್ತಿ ಬದುಕಿನುದ್ದಕ್ಕೂ ಹೆಚ್ಚಾಗಿ ಬಡಜನರಿಗಾಗಿನ ತಮ್ಮ ಸೇವೆಯಿಂದಾಗಿಯೇ ಅಪಾರ ಜನ ಮೆಚ್ಚುಗೆಯನ್ನು ಪಡೆದರು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಇವರು 2014ರಲ್ಲಿ ಚಿರನಿದ್ರೆಗೆ ಜಾರಿದರು.
ಇದನ್ನು ಓದಿದ್ದೀರಾ?: ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ
1978ರಲ್ಲಿ ಹಾಸನಕ್ಕೆ ಸೊಸೆಯಾಗಿ ಬಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ರುಕ್ಮಿಣಿಯವರು 1987ರವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಂತರ ತಮ್ಮ ಸಹೋದರ ಡಾ.ಮುನಿವೆಂಕಟೇಗೌಡರು ಸ್ಥಾಪಿಸಿದ್ದ ಜನತಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದು ಆಶಾದಾಯಕ ಬೆಳವಣಿಗೆಯಾಗಿತ್ತು. ಡಾ.ರುಕ್ಮಿಣಮ್ಮ ರೋಗಿಗಳೆಡೆಗಿನ ಪ್ರೀತಿಯಿಂದ ಜನಾನುರಾಗಿಗಳಾಗಿದ್ದರು. ಮುಂದೆ ಜಿಲ್ಲೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಬೆಳೆಯುತ್ತಾ ಬಂದವರು- ಡಾ.ಹೇಮಲತಾ ಪಟ್ಟಾಭಿ, ಡಾ.ರಂಗಲಕ್ಷ್ಮಿ, ಡಾ.ಭಾರತಿ ರಾಜಶೇಖರ್, ಡಾ.ವತ್ಸಲಾ, ಡಾ.ಸಾವಿತ್ರಿ, ಡಾ.ವಿಶಾಲಾಕ್ಷಿ, ಡಾ.ಜಾಹ್ನವಿ ಮಧುಸೂಧನ್, ಡಾ.ಸುಜಾತಾ ದಾಸ್, ಡಾ.ಸೌಮ್ಯ ದಿನೇಶ್, ಡಾ.ಸೌಮ್ಯ ಮಣಿ… ಮುಂತಾದವರು. ಇದರಲ್ಲಿ ಕೆಲವರು ಸರ್ಕಾರಿ ವೈದ್ಯರುಗಳಾಗಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ತಮ್ಮದೇ ಖಾಸಗಿ ನರ್ಸಿಂಗ್ ಹೋಮ್ ತೆರೆದು, ಅವಿರತವಾಗಿ ಗರ್ಭಿಣಿ, ಬಾಣಂತಿ, ಎಳೆಯ ಕಂದಮ್ಮಗಳ ಸೇವೆಗಳಿಗೆ ನಿಂತರು. ತನ್ಮೂಲಕ ಜಿಲ್ಲೆಯ ಪ್ರಸೂತಿ ತಜ್ಞ ಸೇವೆಯನ್ನು ಸಮರ್ಥವಾಗಿ ನಿಬಾಯಿಸುತ್ತಾ ಬಂದು, ಹಾಸನ ಮಣ್ಣನ್ನು ಫಲವತ್ತುಗೊಳಿಸಿದ್ದಾರೆ.
ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು
ಇನ್ನು ಸರ್ಕಾರಿ ಕ್ಷೇತ್ರದಲ್ಲಿ ಸಹ ಮಹಿಳೆಯರು ವೈದ್ಯರಾಗಿ ಹಾಗೂ ತಜ್ಞರಾಗಿ ಬಹಳ ಹಿಂದಿನಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಡಾ.ಜಯಮ್ಮ ತಜ್ಞವೈದ್ಯರಲ್ಲದಿದ್ದರೂ ಅನೇಕ ಸವಾಲುಗಳನ್ನೆದುರಿಸುತ್ತಾ ಆ ಕಾಲದಲ್ಲೇ ಶಸ್ತ್ರಚಿಕಿತ್ಸೆಯ ಮೂಲಕ ಬಹಳಷ್ಟು ಹೆರಿಗೆಗಳನ್ನು ಮಾಡಿಸಿ ತಾಯಿ ಮಗುವಿನ ಜೀವಗಳನ್ನುಳಿಸಿದವರು. ಡಾ.ಶ್ಯಾಮಲಾ ದೇವಿ ವೈದ್ಯರಾಗಿ ಮಾತ್ರವಲ್ಲ ಜಿಲ್ಲಾ ವೈದ್ಯಾಧಿಕಾರಿಯಾಗಿ ಸಮರ್ಥ ಆಡಳಿತವನ್ನು ನೀಡಿದವರು. ಡಾ.ಸುಧಾ ಟಿ.ಆರ್. ಹಾಸನದಲ್ಲಿ- ಸರ್ಕಾರಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯದ ಮೊದಲ ಲಾಕ್ಷ್ಯ ಪ್ರಾಮಾಣಿಕೃತ ಲೇಬರ್ ಸ್ಥಾಪನೆಯಲ್ಲಿ ಇವರು ಪ್ರಮುಖರಾಗಿದ್ದಾರೆ. 2017ರಲ್ಲಿ ಕೊಲ್ಕತ್ತಾದಲ್ಲಿ ನಡೆದ ವಿಶ್ವ ವೈದ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಮತ್ತು 2018ರಲ್ಲಿ ರಾಜ್ಯದ ಅತ್ಯುತ್ತಮ ಕಂಪ್ರೆನ್ಸಿ ಅಬಾರ್ಷನ್ ಕೇರ್ ಟ್ರೈನರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಡಾ.ಅನುಪಮಾ ಎಚ್‌ಐಎಂಎಸ್‌ನ ಅರವಳಿಕೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರು ಸಂಸ್ಥೆಯ ಮೊದಲ ಅಂಗಾಂಗ ಸಂಗ್ರಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ಸಾಧನೆಗೆ 2024ರ ಸ್ವಾತಂತ್ರ್ಯ ದಿನಾಚರಣೆ ಪ್ರಶಸ್ತಿಯನ್ನು ನೀಡಲಾಗಿದೆ. ಡಾ.ಕವಿತಾ ಅವರು ಒಳ್ಳೆಯ ನೇತ್ರತಜ್ಞರಾಗಿ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸಂಶೋಧನೆಗಳನ್ನೂ ಮಾಡಿದ್ದಾರೆ. ಸಮುದಾಯ ವೈದ್ಯಕೀಯ ವಿಭಾಗದಲ್ಲಿ ಡಾ.ತೇಜಶ್ವರಿ ಎಚ್.ಎಲ್, ಡಾ.ಪವಿತ್ರ ಪಿ, ಡಾ.ಶ್ರೀಲತಾ ಸಿ.ವೈ, ಕಾರ್ಯನಿರ್ವಹಿಸುತ್ತಿದ್ದು- ಅವರು ಕೋವಿಡ್-19 ಲಸಿಕೆ ತರಬೇತಿ ಪಡೆದು, ಸೋಂಕು ನಿಯಂತ್ರಣವನ್ನು ಕರಗತ ಮಾಡಿಕೊಂಡು, ತಾಯಿ ಮಕ್ಕಳ ಆರೋಗ್ಯ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಹಲವಾರು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಸಮುದಾಯ ಸೇವೆಯನ್ನು ವ್ಯಾಪಕವಾಗಿ ಮಾಡುತ್ತಾ ಬಂದಿದ್ದಾರೆ. ಮಣಿಪಾಲ್‌ನ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಹಾಸನ ಮೂಲದ ಡಾ.ಸಮೀನ ಹಾರೋನ ಅವರು ಸ್ತ್ರೀರೋಗಗಳನ್ನು ಪತ್ತೆ ಹಚ್ಚುವ ಸಾಧನದ ಪೇಟೆಂಟ್ ಹಕ್ಕು ಪಡೆಯುವಲ್ಲಿ ಯಶಸ್ವಿಯಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಡಾ.ವೀಣಾ ಮಂಜುನಾಥ್ ಅವರು ಫಿಸಿಯಾಲಜಿ ವಿಭಾಗದಲ್ಲಿ ಉತ್ತಮ ಸೇವೆ ಹಾಗೂ ಸಂಶೋಧನೆ ಮಾಡುತ್ತಿದ್ದಾರೆ. ಇದಲ್ಲದೇ ಬಹಳಷ್ಟು ಮಹಿಳಾ ವೈದ್ಯರು, ಮಹಿಳಾ ವೈದ್ಯ ವಿದ್ಯಾರ್ಥಿನಿಯರು ಅನೇಕ ಅಗತ್ಯ ಸಂಶೋಧನೆಗಳನ್ನು ಮಾಡುತ್ತಾ ಆರೋಗ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ
ಡಾ.ಗಿರಿಜಾ ಬಿ.ಎಸ್, ಡಾ.ಪೂರ್ಣಿಮ, ಡಾ.ರುಕ್ಮಿಣಿ ಮುಂತಾದವರು ಹಾಸನ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯರಾಗಿದ್ದಾರೆ. ಅರಸೀಕೆರೆ ತಾಲೂಕಿನಲ್ಲಿ ರೇಡಿಯೋಲಜಿಸ್ಟ್ ಆಗಿ ಡಾ.ಭಾಗ್ಯಶ್ರೀ, ಮಕ್ಕಳ ತಜ್ಞರಾದ ಡಾ.ಶಾಂತಲಾ ಸಿ.ಎಂ, ಸಕಲೇಶಪುರ ತಾಲೂಕಿನಲ್ಲಿ ಡಾ.ನಿಶ್ಚಿತ ಪಿ ಫೀಸಿಷಿಯನ್ ಆಗಿ, ಬೇಲೂರು ತಾಲೂಕಿನ ಮಕ್ಕಳ ತಜ್ಞರಾಗಿ ಡಾ.ಜಯಲಕ್ಷ್ಮಿ ನಾಯಕ್, ಕಣ್ಣಿನ ತಜ್ಞರಾಗಿ ಡಾ.ಬೃಂದಾ ಪ್ರಭು ಕೆ.ಎಂ, ವೈದ್ಯಾಧಿಕಾರಿಗಳಾಗಿ ಡಾ.ಅಕ್ಷತಾ ಕೆ.ಎಸ್.ಶರ್ಮ ಮತ್ತು ಲೈಂಗಿಕ ತಜ್ಞರಾಗಿ ಡಾ.ಸ್ವಾತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಾನುರಾಗಿಗಳಾಗಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಚರ್ಮ ಮತ್ತು ಲೈಂಗಿಕ ತಜ್ಞರಾಗಿ ಡಾ.ಮಹಾಜಬಿನ್, ನೇತ್ರತಜ್ಞರಾಗಿ ಡಾ.ಸಿಂಧು ಎಸ್, ಜಿಲ್ಲೆಯ ಮೊದಲ ಸಾಮಾನ್ಯ ಶಸ್ತ್ರ ಚಿಕಿತ್ಸಕರಾಗಿರುವ ಹಿರಿಯ ವೈದ್ಯರಾದ ಡಾ.ಮಂಜುಳಾ ಕೆ.ಎಲ್, ವೈದ್ಯಾಧಿಕಾರಿಯಾಗಿ ತೇಜಸ್ವಿನಿ… ಮುಂತಾದವರು ಹೃತ್ಪೂರ್ವಕತೆಯಿಂದ ಸೇವೆ ಸಲ್ಲಿಸುತ್ತಿದ್ದು, ಗ್ರಾಮೀಣ ವೈದ್ಯ/ತಜ್ಞಸೇವೆಗಳ ಕೊರತೆಯನ್ನು ಈ ಮಹಿಳಾ ವೈದ್ಯರು ನೀಗಿರುವುದು ಹಾಸನ ಜನರಿಗೆ ಹೆಚ್ಚಿನ ಭರವಸೆಯನ್ನು ನೀಡಿದೆ.
ಇದನ್ನು ಓದಿದ್ದೀರಾ?: ಸಮುದಾಯದ ಜೀವನಾಡಿ ಅಂಗನವಾಡಿ ತಾಯಂದಿರು
ಆಲೂರು ತಾಲೂಕಿನಲ್ಲಿ ಸದ್ಯ ವೈದ್ಯಾಧಿಕಾರಿಯಾಗಿರುವ ಡಾ.ನಿಸಾರ್ ಫಾತಿಮಾ 23 ವರ್ಷಗಳ ಕಾಲ ಪಾಳ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅರಕಲಗೂಡು ತಾಲೂಕಿನ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಪುಷ್ಪಲತಾ ಅವರು ಉತ್ತಮ ವೈದ್ಯರಾಗಿ, ಆಡಳಿತಾಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಹಾಸನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಹಿರಿಯ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮಧುರ ಎ.ಆರ್, ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದ ಉತ್ತಮ ವೈದ್ಯರೆಂದು ಹೆಸರಾದ ಡಾ.ಶಾಲಿನಿ ವಿ.ಎಲ್- ಕನ್ನಡದ ಬಗ್ಗೆ ಅಪಾರ ಪ್ರೀತಿ ಉಳ್ಳವರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಚೈತ್ರ ಹಾಸನಕ್ಕೆ ಸೊಸೆಯಾಗಿ ಆಗಮಿಸಿ ಮೊಸಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ಪರಿಧಿ ಮೀರಿ ಸೇವೆ ಸಲ್ಲಿಸುತ್ತಿದ್ದಾರೆ. ದಶಕಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಇಲ್ಲಿ ನಮೂದಾಗಿಲ್ಲದ ಇನ್ನೂ ಬಹಳಷ್ಟು ಮಂದಿ ಹಾಸನದ ಮಹಿಳಾ ವೈದ್ಯರು ಖಂಡಿತಾ ಇದ್ದಾರೆ. ಮೇಲಿನ ಎಲ್ಲಾ ವೈದ್ಯಕೀಯ ವಿಭಾಗದಲ್ಲಿ ವಿಶೇಷ ಕ್ಷೇತ್ರಗಳಲ್ಲಿ ತಜ್ಞತೆಯನ್ನು ಪಡೆದು, ಪುರುಷರಿಗೆ ಸಮಾನವಾಗಿ ಸರ್ಕಾರಿ ಸೇವೆಯಲ್ಲಿ ಮಹಿಳಾ ವೈದ್ಯರಾಗಿ ಕೊಡುಗೆ ನೀಡುತ್ತಿರುವುದು ನಮ್ಮೆಲ್ಲರ ಹೆಮ್ಮೆ.
ಇದನ್ನು ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ
ಡಾ.ಹೇಮಲತಾ ಪಟ್ಟಾಭಿಯವರು 1991ರಲ್ಲಿ ತಮ್ಮದೇ ಜಯಶ್ರೀ ನರ್ಸಿಂಗ್ ಹೋಮ್ ಸ್ಥಾಪಿಸಿ, ಸಾವಿರಾರು ಹೆರಿಗೆಗಳನ್ನು ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡಿ ಯಶಸ್ವಿಯಾಗಿರುತ್ತಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿಯುಳ್ಳ ಇವರು, ‘ಅಸಹಜ ಋತುಸ್ರಾವ’ ಮತ್ತು ‘ಕ್ಯಾನ್ಸರ್ ಸಂರಕ್ಷಣೆ ಹೇಗೆ ಸಾಧ್ಯ’ ಎಂಬ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ರಂಗಲಕ್ಷ್ಮಿ ಆರು ವರ್ಷ ಸರ್ಕಾರಿ ವೃತ್ತಿಯಲ್ಲಿದ್ದು, 1997ರಲ್ಲಿ ಹಾಸನದಲ್ಲಿ ತಮ್ಮದೇ ಲಕ್ಷ್ಮಿ ನರ್ಸಿಂಗ್ ಹೋಮ್ ಸ್ಥಾಪಿಸಿ, ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗದ ಇನ್ನೋರ್ವ ತಜ್ಞರಾದ ಡಾ.ಭಾರತಿ ರಾಜಶೇಖರ್‌ರವರು ಲ್ಯಾಪ್ರೋಸ್ಕೋಪಿ ಮತ್ತು ಹಿಸ್ಟರೋಸ್ಕೋಪಿ ಸೇರಿದಂತೆ ಹಲವು ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಅಂದಾಜು 55 ಮಂದಿ ಮಹಿಳಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಇರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಮುಖ್ಯ ಪದಾಧಿಕಾರಿಗಳಾಗಿ ಜಿಲ್ಲೆಯ ಕೆಲವು ವೈದ್ಯೆಯರು ಕಾರ್ಯ ನಿರ್ವಹಿಸುವ ಮೂಲಕ ತಮಗಿರುವ ಸಂಘಟನಾ ಸಾಮರ್ಥ್ಯವನ್ನು, ಕಾಳಜಿಯನ್ನು ಎತ್ತಿ ಹಿಡಿದಿದ್ದಾರೆ. ಹಾಸನದ ಹಿರಿಯ ತಲೆಮಾರಿನ ನೇತ್ರ ತಜ್ಞರಾದ ಡಾ.ಕೆ.ವಿ.ಗೀತಾರವರು 1983ರಲ್ಲಿ ಹಾಸನ ಕಣ್ಣಿನ ಆಸ್ಪತ್ರೆಯನ್ನು ಸ್ಥಾಪಿಸಿ, ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ
ಡಾ.ಸಾವಿತ್ರಿಯವರು ಹಾಸನಕ್ಕೆ ಸೊಸೆಯಾಗಿ ಬಂದು, ತಮ್ಮದೇ ಮಲ್ನಾಡ್ ನರ್ಸಿಂಗ್ ಹೋಂನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಸೇವೆ ಸಲ್ಲಿಸುವ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ಗರ್ಭಿಣಿಯರ ಅನೇಕ ಕ್ಲಿಷ್ಟ ಸವಾಲುಗಳನ್ನು ನಿವಾರಿಸುವಲ್ಲಿ, ಅವರ ಶುಶ್ರೂಷೆಗೆ ಮನಸು ಕೊಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಬಡ ರೋಗಿಗಳಿಗೆ ಇವರು ಉಚಿತವಾಗಿ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ. ಇವರು ‘ಹದಿಹರೆಯದ ಮಕ್ಕಳ ಆರೋಗ್ಯ’ ಮತ್ತು ‘ಎದೆ ಹಾಲು ಉಣಿಸುವಿಕೆ’ ಎಂಬ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಪುಸ್ತಕಗಳನ್ನು ಬರೆದಿದ್ದಾರೆ. ಪರಿಸರ ಪ್ರೇಮಿಗಳು, ಮೌಢ್ಯ ವಿರೋಧಿಗಳು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಹಾಸನದ ಹಸಿರುಭೂಮಿ ಪ್ರತಿಷ್ಠಾನ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೇ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಪುನರ್ವಸತಿಗೆ, ಸರ್ಕಾರಿ ಶಾಲಾ ಮಕ್ಕಳ ಅವಶ್ಯಕತೆ ಪೂರೈಕೆಗೆ, ತುರ್ತು ಸಾಮಾಜಿಕ ಕೆಲಸಗಳಿಗೆ ಧನಸಹಾಯ ನೀಡುವ ಕೊಡುಗೈ ದಾನಿಗಳೆಂದು ಹೆಸರಾಗಿದ್ದಾರೆ. ಹದಿಹರೆಯದ ಮಕ್ಕಳಿಗೆ ಜಾಗೃತಿ ನೀಡುವ ಹಲವಾರು ಕಾರ್ಯಕ್ರಮಗಳನ್ನು ಇವರು ನಿರಂತರವಾಗಿ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ
ಜೊತೆಗೆ ಡಾ.ಸೌಮ್ಯ ದಿನೇಶ್‌ರವರು ಹಾಸನ ಮತ್ತು ಮೈಸೂರಿನಲ್ಲಿ ಸಂತಸ ಫರ್ಟಿಲಿಟಿ ಮತ್ತು ಐವಿಎಫ್ ಇನ್ಸ್ಟಿಟ್ಯೂಟ್, ಎಸ್‌ಎಸ್‌ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ 25 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ ಹಾಸನದ ಮೊದಲ ಸಂತಾನ ಫಲವತ್ತತೆ ತಜ್ಞರಾಗಿದ್ದಾರೆ. ಕ್ಲಿನಿಷಿಯನ್, ವಿಜ್ಞಾನಿ ಹಾಗೂ ಮಹಿಳಾ ಆರೋಗ್ಯ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಗರ್ಭಾವಸ್ಥೆಯಲ್ಲಿ ಪ್ರಿವ್ಯೆಯಬಲ್ ಅಮ್ನಿಯೋಟಿಕ್ ದ್ರವ ಸೋರಿಕೆಯನ್ನು ಮುಚ್ಚುವ, ಮೊದಲ ಯಶಸ್ವಿ ‘ಇಂಟ್ರಾ ಅಮ್ನಿಯೋಟಿಕ್ ಪ್ಲೇಟ್‌ಲೆಟ್ ರಿಚ್ ಫ್ಯೆಬ್ರಿನ್’ ಚಿಕಿತ್ಸೆಯ ಮೊದಲ ತಜ್ಞರು ಇವರಾಗಿದ್ದಾರೆ. ಈ ರೀತಿಯ ಸಂಶೋಧನೆ ಮತ್ತು ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲು ನಡೆದಿರುವುದು ಹಾಸನದ ಹೆಮ್ಮೆಯನ್ನು ಹೆಚ್ಚಿಸುವಂತದ್ದು. ಡಾ.ಸೌಮ್ಯ ಮಣಿ, ಡಾ.ಪ್ರತಿಭಾ ಮನು ಪ್ರಕಾಶ್, ಡಾ.ಪೂರ್ಣಿಮಾ ಮಹೇಶ್, ಮಕ್ಕಳ ತಜ್ಞರಾಗಿರುವ ಡಾ.ವಿದ್ಯಾಲಕ್ಷ್ಮಿ ಮುಂತಾದವರು ಸ್ತ್ರೀ ರೋಗ ಮತ್ತು ಮಕ್ಕಳ ತಜ್ಞವೈದ್ಯರಾಗಿ ಖಾಸಗಿ ವಲಯದಲ್ಲಿ ತಮ್ಮ ಸೇವೆಯನ್ನು ಸಮರ್ಪಕವಾಗಿ, ಎಚ್ಚರಿಕೆಯಿಂದ ನಿರ್ವಹಿಸುತ್ತಾ, ವಿಶೇಷ ಸಂಶೋಧನೆಗಳ ಮೂಲಕ ತಾಯಿ ಹಾಗೂ ಮಗುವಿನ ಸಾವಿನ ಪ್ರಮಾಣ ನಿಯಂತ್ರಣಕ್ಕೆ, ಸಂತಾನೋತ್ಪತ್ತಿಗಾಗಿ ಪ್ರಯತ್ನಿಸುತ್ತಿರುವುದು ಗಮನಾರ್ಹ ಅಂಶವಾಗಿದೆ. ಇವರಲ್ಲದೇ ಇನ್ನೂ ಅನೇಕ ಹಾಸನದ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು, ಹೊರ ಸ್ಥಳಗಳಲ್ಲಿ ವೈದ್ಯ ವೃತ್ತಿಯಲ್ಲಿ, ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿ ಅಪರಿಮಿತ ಕೊಡುಗೆಯನ್ನು ನೀಡುತ್ತಿದ್ದು, ಲೇಖನದ ಮಿತಿಯಲ್ಲಿ ಎಲ್ಲರನ್ನಿಲ್ಲಿ ಪ್ರಸ್ತಾಪಿಸಲಾಗಿಲ್ಲ.
ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ
ಕೆಲವು ಮಹಿಳಾ ವೈದ್ಯರು ತಮ್ಮ ವೃತ್ತಿ ಸೇವೆಯನ್ನು ಮೀರಿ ಸಮಾಜ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯವಾಗಿದೆ. ಡಾ.ರಂಗಲಕ್ಷ್ಮಿಯವರು ತಮ್ಮ ತಂದೆ ಹೆಸರಿನಲ್ಲಿ ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಅತ್ಯುತ್ತಮ ವೈದ್ಯ ವಿದ್ಯಾರ್ಥಿನಿಗೆ ಪ್ರಶಸ್ತಿ ನೀಡಲು 5 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಮತ್ತು ಹದಿಹರೆಯದವರಿಗೆ ಜಾಗೃತಿ ಮೂಡಿಸುವ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ಅವಿರತ ತೊಡಗಿಸಿಕೊಂಡಿದ್ದಾರೆ. ಡಾ.ಸೌಮ್ಯ ದಿನೇಶ್ ಅವರು ತಮ್ಮ ಸಂತಸ ಫೌಂಡೇಶನ್ ಮೂಲಕ ಗಿಡಗಳನ್ನು ನೆಟ್ಟು ಆರೈಕೆ ಮಾಡುವುದು ಹಾಗೂ ಕೈಗೆಟುಕುವ ದರದಲ್ಲಿ ಫಲವತ್ತತೆ ಚಿಕಿತ್ಸೆಗಳಿಗಾಗಿ ಅವಶ್ಯಕತೆಯುಳ್ಳವರಿಗೆ ನೆರವಾಗುತ್ತಿದ್ದಾರೆ. ಹಾಸನದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಸಂಘದ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಅನೇಕ ಆರೋಗ್ಯ ಶಿಬಿರಗಳನ್ನೂ, ಉಚಿತ ತಪಾಸಣೆಗಳನ್ನೂ ಗರ್ಭಕೊರಳ ಕ್ಯಾನ್ಸರ್ ಮತ್ತು ಸ್ತನಕ್ಯಾನ್ಸರ್ ಬಗೆಗೆ ಅವಿರತ ಜಾಗೃತಿ ಮೂಡಿಸಲು, ಹದಿಹರೆಯದ ಹೆಣ್ಣುಮಕ್ಕಳಿಗೆ ಅರಿವಿನ ಕಾರ್ಯಕ್ರಮಗಳನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಸಂಬಂಧತವಾಗಿ ಉಚಿತ ಲಸಿಕೆಗಳನ್ನೂ ಹಲವೆಡೆ ನೀಡಿದ್ದಾರೆ. ಇದಲ್ಲದೇ ವೈದ್ಯಕೀಯ ವಲಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ, ಸಂಘಟನೆಯ ಮೂಲಕ ವಿರೋಧಿಸಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ, ಸರ್ಕಾರಕ್ಕೆ ಪತ್ರಗಳನ್ನು ಬರೆಯುವ ಕೆಲಸವನ್ನೂ ಸಂಘ ಮಾಡುತ್ತಿದ್ದು, ತನ್ನ ಸ್ತ್ರೀಪರ ಕಾಳಜಿಯನ್ನು ಸದಾ ಎತ್ತಿ ಹಿಡಿಯುತ್ತಾ ಬಂದಿದೆ. ಇವರ ಸೇವೆಯನ್ನು ಗುರುತಿಸಿ ಕೆಲವು ವೈದ್ಯರಿಗೆ ಹಾಸನ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ
ಆಯುರ್ವೇದವು ಭಾರತದ ಸ್ಥಳೀಯವಾದ ಸಾಂಪ್ರದಾಯಿಕ ಔಷಧ ವ್ಯವಸ್ಥೆಯಾಗಿದ್ದು, ಇದು ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು, ಅನಾರೋಗ್ಯವಾಗದಂತೆ ತಡೆಗಟ್ಟಲು ನೀಡುವ ಚಿಕಿತ್ಸಕ ವ್ಯವಸ್ಥೆ. ಹಾಸನ ಜಿಲ್ಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರಾಜೀವ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗಳು ಸೇವೆ ಸಲ್ಲಿಸುತ್ತಿವೆ. ಹಾಸನದಲ್ಲಿ ಮತ್ತು ಕೆಲವು ತಾಲ್ಲೂಕುಗಳಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಿದ್ದು ಅಲ್ಲಿ ಪಂಚಕರ್ಮ, ಯೋಗ, ಮಸಾಜ್, ಆಕ್ಯೂ ಪಂಕ್ಚರ್ ಮತ್ತು ಗಿಡಮೂಲಿಕೆ ಔಷಧಿ ಸೇರಿದಂತೆ ಹಲವಾರು ಚಿಕಿತ್ಸೆಗಳನ್ನು ಸಮರ್ಪಕವಾಗಿ ನೀಡುತ್ತಿರುವವರಲ್ಲಿ ಮಹಿಳಾ ವೈದ್ಯರ, ಸಹಾಯಕರ ಸೇವೆ ಶ್ಲಾಘನೀಯವಾಗಿದೆ. ಡಾ.ವೀಣಾಲತಾ ಹಾಗೂ ಡಾ.ತೇಜಸ್ವಿನಿಯಂತಹ ಸರ್ಕಾರಿ ಆಯುರ್ವೇದ ಮಹಿಳಾ ವೈದ್ಯರು ಜನಾನುರಾಗಿಗಳಾಗಿದ್ದಾರೆ. ಜಿಲ್ಲೆಯ ಎರಡೂ ಆಯುರ್ವೇದ ಕಾಲೇಜುಗಳಲ್ಲಿ ಮಹಿಳಾ ವಿದ್ಯಾರ್ಥಿಗಳು ಉತ್ತಮ ಸಂಶೋಧನೆಗಳನ್ನು ಕೈಗೊಂಡು ಹೆಚ್ಚಿನ ಶ್ರೇಣಿಗಳನ್ನು ಪಡೆದು ಸಾಧನೆ ಮಾಡುತ್ತಿದ್ದಾರೆ. ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ತಜ್ಞ ವೈದ್ಯರಿದ್ದು, ಹಾಸನ ಜಿಲ್ಲೆಯ ಆಯುರ್ವೇದ ಕ್ಷೇತ್ರದಲ್ಲಿ ಮಹಿಳೆಯರು ರೋಗ ಬರದಂತೆ ತಡೆಯುವಲ್ಲಿ, ಶಿಕ್ಷಣ, ಚಿಕಿತ್ಸೆ, ಸೇವೆ ಮತ್ತು ಸಂಶೋಧನೆಯಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…
ವೈದ್ಯರು ಮಾತ್ರವಲ್ಲದೆ ದಾದಿಯರು ಮತ್ತು ಶುಶ್ರೂಷಕಿಯರು ಆರೋಗ್ಯ ರಕ್ಷಣಾ ವ್ಯವಸ್ಥೆಯ ಮಹತ್ವದ ಬೆನ್ನೆಲುಬುಗಳಾಗಿದ್ದಾರೆ. ಇವರಿಲ್ಲದೇ ನಿಜವಾದ ವೈದ್ಯ ಚಿಕಿತ್ಸೆ ಸಾಧ್ಯವೇ ಇಲ್ಲ. ಹಗಲಿರುಳೂ ರೋಗಿಗಳಿಗೆ ಅನುಕಂಪದ ಆರೈಕೆ, ಚಿಕಿತ್ಸೆ ಮತ್ತು ಸಮಾಜದ ಆರೋಗ್ಯ ಸುಧಾರಣೆಗೆ ಹಗಲು ರಾತ್ರಿಯೆನ್ನದೆ ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ. ನವಜಾತ ಶಿಶುಗಳಿಂದ ಹಿಡಿದು, ವೃದ್ಧ ರೋಗಿಗಳ ಆರೈಕೆವರೆಗೂ ಇವರ ಪಾತ್ರ ಮಹತ್ತರವಾಗಿದೆ. ವೈದ್ಯರ ಸೂಚನೆಯಂತೆ ಔಷಧಿಗಳನ್ನು ನೀಡುವುದು, ಗಾಯಗಳಿಗೆ ಚಿಕಿತ್ಸೆ ನೀಡುವುದು, ರೋಗಿಗಳನ್ನು ಮೈಯೆಲ್ಲಾ ಕಣ್ಣಾಗಿ ನೋಡಿಕೊಳ್ಳುವ ದಾದಿಯರ ಮತ್ತು ಶುಶ್ರೂಷಕಿಯರ ನಿಸ್ವಾರ್ಥ ಸೇವೆ, ಆರೋಗ್ಯ ರಕ್ಷಣೆಯಲ್ಲಿ ಅವರ ಸಮರ್ಪಣೆ, ತಾಳ್ಮೆ ಮತ್ತು ನೈಪುಣ್ಯವು ಸಮಾಜದ ಆರೋಗ್ಯ ಮತ್ತು ಯೋಗಕ್ಷೇಮ ಕಾಪಾಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ.
ಸಹಾಯಕ ಸಿಬ್ಬಂದಿಯರು, ದಾದಿಯರ, ಆಯಾಗಳ ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಕಾರ್ಯಗಳಲ್ಲಿ ಸಹಾಯ ಮಾಡುತ್ತಾ, ರೋಗಿಗಳ ಆರೈಕೆ, ದಾಖಲೆ ನಿರ್ವಹಣೆ ಹಾಗೂ ಆಸ್ಪತ್ರೆಯ ಸುಗಮ ಕಾರ್ಯಾಚರಣೆಗೆ ಬೆಂಬಲ ನೀಡುವ ಮತ್ತು ಕಚೇರಿ ನಿರ್ವಹಣೆಯ ಪ್ರಮುಖ ಕೊಂಡಿಗಳು ಮಹಿಳೆಯರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿನ ಆಯಾಗಳು ಯಾವುದೇ ಅಸಹ್ಯ, ಸಂಕೋಚವಿಲ್ಲದೇ, ಕಾಳಜಿ, ಅನುಕಂಪ, ನಿಸ್ವಾರ್ಥದಿಂದ ರೋಗಿಗಳ ಆರೈಕೆ, ವಾರ್ಡ್‌ಗಳ ಸ್ವಚ್ಛತೆ, ರೋಗಿಗಳ ವೈಯಕ್ತಿಕ ನೈರ್ಮಲ್ಯ(ಸ್ನಾನ, ಬಟ್ಟೆ ಬದಲಾವಣೆ), ಆಹಾರ ನೀಡುವುದು, ಹಾಸಿಗೆ ಬದಲಾಯಿಸುವುದು., ಮಲ-ಮೂತ್ರ ವಿಸರ್ಜನೆಗೆ ಸಹಾಯ ಮಾಡುವುದು… ರೋಗಿಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರಾಮದಾಯಕ ವಾತಾವರಣವನ್ನು ಒದಗಿಸುವಲ್ಲಿ ಆಯಾಗಳ ಪಾತ್ರ ಮಹತ್ತರವಾದುದು. ಸೇವೆಯೇ ಉಸಿರಾಗಿರುವ ಈ ಎಲ್ಲ ಹಾಸನದ ಸಹನಾಮಯಿ ತಾಯಂದಿರಿಗೆ ನಮ್ಮ ನಮನಗಳು ಸಲ್ಲುತ್ತವೆ.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸೇರಿ ಸುಮಾರು 10,450 ಆಶಾ ಕಾರ್ಯಕರ್ತರು ಇದ್ದಾರೆ. ಪ್ರತಿ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನಸಂಖ್ಯೆಗೆ ನಗರದ ಕೊಳಚೆ ಪ್ರದೇಶಗಳಲ್ಲಿ 2,500 ಜನಸಂಖ್ಯೆಗೆ ಒಬ್ಬ ಆಶಾಳಂತೆ ಅದೇ ಗ್ರಾಮದ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ, ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತಾ, ಕ್ಷಯ, ಕುಷ್ಟರೋಗ, ಮಲೇರಿಯ, ಡೆಂಗಿ, ಚಿಕುನ್‌ಗುನ್ಯ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಾ, ಸಮೀಕ್ಷೆಗಳನ್ನು ಮಾಡುತ್ತಾ, ಜಾಗೃತಿ ಮೂಡಿಸುತ್ತಿದ್ದಾರೆ. ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಆರೋಗ್ಯಾಭಿವೃದ್ಧಿ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಗೆ ವಿಷಮ ಪರಿಸ್ಥಿತಿಗಳಲ್ಲಿ ಜೀವವನ್ನೇ ಪಣಕ್ಕಿಟ್ಟು, ಆಶಾಗಳು ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಸಮುದಾಯಕ್ಕೂ ಆರೋಗ್ಯ ಇಲಾಖೆಗೂ ಮಧ್ಯದಲ್ಲಿ ಕೊಂಡಿಯಾಗಿ ದುಡಿಯುತ್ತಿರುವ ಇವರು ನಿಜಕ್ಕೂ ಗ್ರಾಮದ ಆರೋಗ್ಯ ಮಾತೆಯರು.
ಹೀಗೆ ಇಡಿಯಾಗಿ ಈ ಎಲ್ಲ ಆರೋಗ್ಯ ಕ್ಷೇತ್ರದ ವಿವಿಧ ವಿಭಾಗಗಳ ಪ್ರತಿಯೊಬ್ಬ ಹೆಣ್ಣುಜೀವಗಳ ಸೇವೆಯಿಂದ ಹಾಸನವು ಇಂದು ಆರೋಗ್ಯಸೇವೆ, ಚಿಕಿತ್ಸೆ, ರೋಗ ಪರಿಹಾರದ ದೃಷ್ಟಿಯಿಂದ ಗಮನಾರ್ಹ ಹೆಸರು ಮಾಡಿದೆ. ಇಂತಹ ಮುಖ್ಯವಾದ ಸಾವಿರಾರು ಹೆಣ್ಣು ಬೇರುಗಳು ವ್ಯವಸ್ಥೆಯಲ್ಲಿ ಕಾಳಜಿಯಿಂದ ಸೇವೆ ಸಲ್ಲಿಸದಿದ್ದರೆ ಏನಾಗುತ್ತಿತ್ತು? ಎಂಬುದನ್ನು ಪ್ರತಿಯೊಂದು ಘಟಕದವರೂ ಆಲೋಚಿಸಬೇಕು. ಹೆಣ್ಣುಮಕ್ಕಳ ನಿಸ್ಪೃಹತೆಗೆ ಧನ್ಯತೆಯನ್ನು ಅನುಭವಿಸಬೇಕು. ವೈದ್ಯಕೀಯ ಕ್ಷೇತ್ರವೂ ವೇಗವಾಗಿ ವ್ಯಾಪಾರೀಕರಣಕ್ಕೊಳಗಾಗುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರು ಅದಕ್ಕೆ ಮರುಳಾಗದೇ ಸೇವೆಯೆಡೆಗೆ ಮಾತ್ರ ತುಡಿಯಬೇಕು. ಇಂತಹ ಜನಸೇವೆಯಲ್ಲಿ ಅವಿರತ ತೊಡಗಿ ಆರೋಗ್ಯದ ಖಾತ್ರಿ ನೀಡುತ್ತಿರುವ ಆರೋಗ್ಯ ಕ್ಷೇತ್ರದ ಎಲ್ಲಾ ಹೆಣ್ಣು ಮನಸು ಮತ್ತು ಚೈತನ್ಯಗಳಿಗೂ ನಮ್ಮ ನಮನಗಳು. ಇದು ನನ್ನ ಕ್ಷೇತ್ರವಲ್ಲದಿದ್ದರೂ ಸಿಕ್ಕ ಸೀಮಿತ ಅವಧಿಯಲ್ಲಿ, ನನ್ನ ಪರಿಧಿಯಲ್ಲಿ ದೊರೆತ ಮಾಹಿತಿಯಿಂದ ಮಾತ್ರ ಈ ಲೇಖನವನ್ನು ಸಿದ್ಧಪಡಿಸಲಾಗಿದೆ ಎಂಬುದನ್ನು ನಮ್ರವಾಗಿ ನಿಮ್ಮ ಗಮನಕ್ಕೆ ತರಬಯಸುವೆ.
-ಮನು ಕೆ.ಬಿ.





