ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
‘ಮಹಿಳೆ’ ನಾಲ್ಕು ಗೋಡೆಯನ್ನು ದಾಟಿ ಹೊರಬರಬೇಕು. ಅವಳಿಗೂ ಆಕೆಯದೆ ಮನಸಿದೆ, ಜೀವನವಿದೆ. ಅವಳನ್ನು ಸಹ ಪುರುಷನಷ್ಟೇ ಸಮನಾಗಿ ನೋಡಬೇಕು. ಅವಳು ಸಮಾಜದ ಮುನ್ನೆಲೆಗೆ ಬರಬೇಕೆಂಬ ಹಲವು ದಶಕಗಳ ಹೃದಯವಂತರ ನಿರಂತರ ಹೋರಾಟದಿಂದ, ಹೆಣ್ಣು ಹೊಸ್ತಿಲು ದಾಟಿ ಮನೆಯಿಂದಾಚೆ ತನ್ನ ಹೆಜ್ಜೆ ಇಟ್ಟಳು. ಆಕೆಯ ಸುತ್ತ ಇದ್ದ ನೂರಾರು ಸಂಕೋಲೆಗಳನ್ನು ಬಿಚ್ಚಿಟ್ಟಿಳು. ಜ್ಞಾನದ ಸಂಪಾದನೆಯಿಂದ ಶಿಕ್ಷಣ ಪಡೆಯುವುದೇ ಒಂದು ದೊಡ್ಡ ಸವಾಲಾಗಿದ್ದ ಕಾಲಘಟ್ಟವನ್ನು ಆಕೆ ನಿಧಾನವಾಗಿ ಹಿಂದೆ ಸರಿಸುತ್ತಾ, ಎಲ್ಲಾ ಕ್ಷೇತ್ರಗಳಲ್ಲೂ ಒಂದೊಂದೇ ಹೆಜ್ಜೆ ಇಡುತ್ತಾ ಸವೆಸಿದ ದಾರಿ ಸುಲಭದ್ದಾಗಿರಲಿಲ್ಲ. ಅದರಲ್ಲಿ ಬಹುಮುಖ್ಯವಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ತನ್ನ ಸಂಸಾರದೊಂದಿಗೆ ವೃತ್ತಿಯನ್ನು ಸಹ ಸರಿದೂಗಿಸಿಕೊಂಡು ಹೋಗುವುದು ಸಾಮಾನ್ಯದ ಮಾತಾಗಿರಲಿಲ್ಲ. ಮೊದಲು ವೃತ್ತಿಯನ್ನು ನಿಭಾಯಿಸುವ ಆತ್ಮಸ್ಥೈರ್ಯ, ಕುಟುಂಬದ ಬೆಂಬಲ, ಅದಕ್ಕೆ ಪೂರಕವಾದ ಶಿಕ್ಷಣ, ಅನುಭವ ಎಲ್ಲವನ್ನು ಪಡೆದುಕೊಂಡು ವೃತ್ತಿಯಲ್ಲಿ ಆಕೆಯನ್ನು ತೊಡಗಿಸಿಕೊಳ್ಳುವುದು ಆಧುನಿಕ ಮಹಿಳೆಗೆ ಒಂದಿಷ್ಟು ಸುಗಮವಾಗಿರುವುದಕ್ಕೆ ನಾವೆಲ್ಲ ಆ ಅವಕಾಶ ನೀಡಿದ ಹಾಗೂ ಆಕೆಗೆ ಒಲಿದ ಸಮಯಕ್ಕೆ, ಈ ಕಾಲಘಟ್ಟಕ್ಕೆ ಋಣಿಯಾಗಿರಲೇಬೇಕು! ಆ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ವಕೀಲ ವೃತ್ತಿಯಲ್ಲಿ, ಕಾನೂನು ಕ್ಷೇತ್ರದಲ್ಲಿ ಹಲವಾರು ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಕೆಲವರು ಇಲ್ಲೇ ಹುಟ್ಟಿದವರು, ಮತ್ತೆ ಹಲವರು ಹೊರಗಿನಿಂದ ಇಲ್ಲಿಗೆ ಸೊಸೆಯಾಗಿ ಬಂದವರು, ತಮ್ಮನ್ನು ತಾವು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡವರು, ನ್ಯಾಯಾಧೀಶರಾದವರು ಹಾಗೂ ಅಭಿಯೋಜಕರಾಗಿರುವವರು, ಅದನ್ನು ಯಶಸ್ವಿಯಾಗಿ ಮುನ್ನೆಡೆಸಿಕೊಂಡು, ಮುಂದಿನ ಪೀಳಿಗೆಗೆ ಮಾದರಿಯಾಗಿರುವ ಅನೇಕ ಸ್ತ್ರೀಯರು ನಮ್ಮೊಂದಿಗೆ ಇದ್ದಾರೆ. ಅವರ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ, ಜೊತೆಗೆ ಅವರಿಗೆಲ್ಲ ಅಭಿನಂದನೆಗಾಗಿ ಈ ಲೇಖನ.
ಇದನ್ನು ಓದಿದ್ದೀರಾ?: ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…
ಹಾಸನ ಜಿಲ್ಲೆಯಲ್ಲಿ ಮೊದಲ ನ್ಯಾಯಾಲಯ ಹೊಳೆನರಸೀಪುರ(ಮೈಸೂರು ವಿಭಾಗದಿಂದ ಪರಿಗಣಿಸಿ)ದಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲಿ 1893ರಲ್ಲಿ ಪ್ರಾರಂಭಗೊಂಡಿದ್ದು ವಿಶೇಷ ಹಾಗೂ ಜಿಲ್ಲೆಯ ಹೆಗ್ಗಳಿಕೆಯೂ ಹೌದು. ಹಾಸನದಲ್ಲಿ ಮೊದಲ ಮುನ್ಸಿಫ್ ನ್ಯಾಯಾಲಯ 1918-20ರ ಮಧ್ಯದಲ್ಲಿ ಪ್ರಾರಂಭಗೊಂಡು, ನಂತರ 1956ರಲ್ಲಿ, ಮುಂದೆ ಜಿಲ್ಲಾ ನ್ಯಾಯಾಲಯವು 1965ರಲ್ಲಿ ಸ್ಥಾಪನೆಗೊಂಡಿತು. ಪ್ರಸ್ತುತ ನಗರದಲ್ಲಿ 19 ನ್ಯಾಯಾಲಯಗಳಿವೆ. ಸದ್ಯ ಜಿಲ್ಲೆಯ ಒಟ್ಟು 8 ತಾಲ್ಲೂಕುಗಳಲ್ಲಿ- ಆಲೂರು ಕೇಂದ್ರದಲ್ಲಿ ಮಾತ್ರ ಒಂದು ನ್ಯಾಯಾಲಯವನ್ನು ಹೊರತುಪಡಿಸಿ, ಉಳಿಕೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಇಲ್ಲಿಯವರೆಗೆ ಹಂತ-ಹಂತವಾಗಿ ಮೂರು ಹಾಗೂ ಅದಕ್ಕೂ ಹೆಚ್ಚು ನ್ಯಾಯಾಲಯಗಳು ಪ್ರಾರಂಭಗೊಂಡು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಹಾಲಿ 43 ನ್ಯಾಯಾಲಯಗಳಿವೆ. ಪ್ರತಿ ತಾಲ್ಲೂಕುಗಳಲ್ಲಿಯೂ ಸಹ ಮಹಿಳೆಯರು ಇಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಈಚೆಗಂತೂ ಎಲ್ಲಾ ಕಡೆಯಲ್ಲೂ ಅವರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿರುವುದು ಆ ವೃತ್ತಿಗಿರುವ ಗೌರವವೆಂದರೆ ತಪ್ಪಾಗುವುದಿಲ್ಲ!
ಹಾಸನದಲ್ಲಿ ವೃತ್ತಿಯನ್ನು ಪ್ರಾರಂಭ ಮಾಡಿದ ಕೀರ್ತಿ ಮೊದಲ ಮಹಿಳಾ ವಕೀಲೆ ಎಂಬ ಪಟ್ಟ- ಚನ್ನರಾಯಪಟ್ಟಣದ ಶೀಲಾ ಅನೀಶ್ ಅವರಿಗೆ ಸಲ್ಲುತ್ತದೆ. ಹಾಸನದಲ್ಲಿ ಓದಿ, ಅವರ ಭಾವ ವಕೀಲರಾಗಿದ್ದ ಬಿ.ಆರ್.ಕೃಷ್ಣಮೂರ್ತಿ ಅವರ ಕಚೇರಿಯಿಂದಲೇ ವೃತ್ತಿಯನ್ನು ಪ್ರಾರಂಭಿಸಿದರು. ಸ್ವಲ್ಪ ತಿಂಗಳುಗಳ ಕಾಲ ಇಲ್ಲೇ ವೃತ್ತಿಯನ್ನು ಮಾಡಿ, ನಂತರದಲ್ಲಿ ಬೆಂಗಳೂರಿನಲ್ಲಿ ವೃತ್ತಿಯನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅದರೊಂದಿಗೆ ಇವರು ‘ಕರ್ನಾಟಕ ಫೆಡರೇಷನ್ ಆಫ್ ವುಮೆನ್ ಲಾಯರ‍್ಸ್’ ಸಂಸ್ಥೆಯನ್ನು ಹುಟ್ಟು ಹಾಕಿದ ಧೀಮಂತೆಯೂ ಹೌದು. ಅದರ ಹಲವು ಶಾಖೆಗಳು ಹಲವೆಡೆ ಕಾರ್ಯ ನಿರ್ವಹಿಸುತ್ತಿವೆ.
ಇದನ್ನು ಓದಿದ್ದೀರಾ?: ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ
ನಂತರದಲ್ಲಿ ಶನಿವಾರಸಂತೆಯಲ್ಲಿ ಜನಿಸಿ, ಹಾಸನದಲ್ಲಿ ವಿದ್ಯಾಭ್ಯಾಸ ಮುಗಿಸಿ, ವಕೀಲ ವೃತ್ತಿಯನ್ನು ಕೈಗೆತ್ತಿಕೊಂಡು, ಇಂದಿಗೂ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಡು, ಬರಹಗಾರರು ಹಾಗೂ ವಿಶೇಷವಾಗಿ ವಿಭಾಗದ ಪ್ರಕರಣದಲ್ಲಿ ಹಿಸ್ಸೆಯನ್ನು ಕರಾರುವಾಕ್ಕಾಗಿ ಹೇಳುವ ಚತುರೆಯಾದ ಎನ್.ವಿ.ಪುಷ್ಪ ಕೆಂಚಪ್ಪ ಅವರು. ಅವರ ಪತಿ ಕೆಂಚಪ್ಪ ಮತ್ತು ಮಗ ಎಲ್ಲರೂ ವಕೀಲ ವೃತ್ತಿಯಲ್ಲಿದ್ದು, ಅವರದ್ದು ವಕೀಲ ಕುಟುಂಬವಾಗಿದೆ. ನಂತರದಲ್ಲಿ ತುಮಕೂರು ಜಿಲ್ಲೆಯಿಂದ ಹಾಸನಕ್ಕೆ ಸೊಸೆಯಾಗಿ ಬಂದ ಎ.ಎಂ.ಮಂಗಳಗೌರಿ, ವಕೀಲ ವೃತ್ತಿಯನ್ನು ಪ್ರಾರಂಭಿಸಿ, ತಮ್ಮ ವೃತ್ತಿಯುದ್ದಕ್ಕೂ ಕನ್ನಡ ಭಾಷೆಯನ್ನು ಸಮರ್ಥವಾಗಿ ವೃತ್ತಿಯಲ್ಲಿ ಬಳಸಿಕೊಂಡು, ವೃತ್ತಿ ನಡೆಸಿಕೊಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆ ಮೂಲಕ ಅವರು ಹಾಸನ ಜಿಲ್ಲೆಗೆ ಕೀರ್ತಿ ತಂದು, ಇಂದಿಗೂ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ನಂತರದಲ್ಲಿ ಬಂದ ಬಾನು ಮುಷ್ತಾಕ್ ವೃತ್ತಿ ಜೊತೆಗೆ-ಜೊತೆಗೆ ಹಲವು ಸ್ತರಗಳಲ್ಲಿ ಕಾರ್ಯಗಳನ್ನು ನಿರ್ವಹಿಸಿದವರು. ಮುಖ್ಶವಾಗಿ ತಮ್ಮ ಪ್ರಗತಿಪರತೆ ಹಾಗೂ ಸಾಹಿತ್ಶದ ಮೂಲಕ ರಾಜ್ಯದ ಉದ್ದಗಲಕ್ಕೂ ಚಿರಪರಿಚಿತರೂ ಆಗಿದ್ದಾರೆ. ಇದಲ್ಲದೇ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಂಬಂಧಿತ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರಿಗೆ ಹಲವಾರು ಪ್ರಮುಖ ಪ್ರಶಸ್ತಿಗಳು ಈಗಾಗಲೇ ದೊರೆತಿವೆ. ಈಚೆಗೆ ಅವರ ‘ಹಾರ್ಟ್ ಲ್ಯಾಂಪ್’ ಅನುವಾದಿತ ಕೃತಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ತಮ್ಮದಾಗಿಸಿಕೊಂಡು ಹಾಸನ ಜಿಲ್ಲೇಯೆ ಹೆಮ್ಮೆ ಪಡುವಂತೆ ಮಾಡಿದ ಹೆಮ್ಮೆಯ ಮಹಿಳಾ ವಕೀಲೆ ಬಾನು! ಇಂದಿಗೂ ವೃತ್ತಿ ನಿರತರಾಗಿದ್ದಾರೆ.
ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು
ತದ ನಂತರದಲ್ಲಿ ಶಿವಮೊಗ್ಗದಿಂದ ಬಂದ- ಹಾಸನದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಚ್.ಎಸ್.ವೆಂಕಟಸುಬ್ಬಯ್ಯ ಅವರ ಸೊಸೆ ಇಂದಿರಾ ಕುಮಾರಸ್ವಾಮಿ, ತನ್ನ ವೃತ್ತಿಯೊಂದಿಗೆ ಸಂಗೀತ, ಕಲೆಯನ್ನು ಮೈಗೂಡಿಸಿಕೊಂಡು ಅವರ ಇಡೀ ಕುಟುಂಬವೇ ಕಲೆಗೆ ಒಲಿದಿದೆ ಎಂದರೆ ತಪ್ಪಾಗುವುದಿಲ್ಲ. ದಾವಣಗೆರೆಯಲ್ಲಿ ವಿದ್ಯಾಭ್ಶಾಸ ಮುಗಿಸಿ, ಹಾಸನಕ್ಕೆ ಸೊಸೆಯಾಗಿ ಕಾಲಿಟ್ಟ ಮತ್ತೋರ್ವ ವಕೀಲೆ- ಎಂ.ಬಿ.ಗಿರಿಜಾಂಬಿಕ. ವೃತ್ತಿ, ಸಮಾಜ ಸೇವೆ, ಪರಿಸರದಲ್ಲಿ ಆಸಕ್ತಿ ಹೊಂದಿ, ವಿವಿಧ ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ಬರಹಗಾರರೂ ಆಗಿದ್ದಾರೆ. ಮಹಿಳೆ ಮತ್ತು ಮಕ್ಕಳಿಗೆ ಕಳೆದ 20 ವರ್ಷಗಳಿಂದ ನಿರಂತರವಾಗಿ ಉಚಿತ ಕಾನೂನು ಅರಿವು ನೀಡುತ್ತಾ ಬಂದಿದ್ದಾರೆ. ಜಿಲ್ಲಾಡಳಿತದ ಗಣರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪುರಸ್ಕೃತ ತುಳಸಿಗೌಡ ಪ್ರಶಸ್ತಿ ಹಾಗೂ ಇತರೆ ಹಲವು ಪ್ರಶಸ್ತಿಗಳು ದೊರೆತಿವೆ. ಅವರು ವೃತ್ತಿ, ಸಮಾಜ ಸೇವೆ ಎರಡನ್ನೂ ಸರಿದೂಗಿಸಿಕೊಂಡು ಮುನ್ನೆಡೆಯುತ್ತಿದ್ದಾರೆ. ಮೇಲೆ ಸೂಚಿಸಿದ ವಕೀಲೆಯರೆಲ್ಲ ತರಬೇತಿ ಪಡೆದ ಮಧ್ಯಸ್ಥಿಕೆಗಾರರಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಂ.ಸುಮ- ಇವರು ಕೇಂದ್ರ ಸರ್ಕಾರದ ದಿಶಾ ಸಮಿತಿಯಲ್ಲಿ 2019-24ರವರೆಗೆ ಕಾರ್ಯನಿರ್ವಹಿಸಿದ್ದು, ಕರ್ನಾಟಕ ಲೇಡೀಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆಯಾಗಿಯೂ, ಹಾಲಿ ಮಹಿಳಾ ವಕೀಲರ ರಾಜ್ಶ ಫೆಡರೇಷನ್ ಉಪಾಧ್ಯಕ್ಷೆಯಾಗಿ, ಇನ್ನು ಹಲವು ಚಟುವಟಿಕೆಗಳೊಂದಿಗೆ ವೃತ್ತಿ ಮಾಡುತ್ತಿದ್ದಾರೆ. ಇನ್ನೋರ್ವ ವಕೀಲರಾದ- ಕೆ.ಆರ್.ಬಿಂದೇಶ್ವರಿ ಹಾಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಸಖಿ ಒನ್ ಸ್ಟಾಪ್ ಸೆಂಟರ್’ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಸ್ವತಿ ಮೋಹನ್(ಮಾಜಿ ಸಂಸದ ಜವರೇಗೌಡರ ನಾದಿನಿ) ವಾಣಿ, ಸರಸ್ವತಿ ತಿಮ್ಮರಾಜು, ಸರೋಜ, ಪ್ರಮೀಳ, ಉಮಾದೇವಿ, ಜಯಲಕ್ಷ್ಮಿ, ತುಳಸಿ, ಶಕುಂತಲ, ಭಾಗ್ಯ, ರೂಪ, ವಿಜಯಲಕ್ಷ್ಮಿ, ಸೀಮಾ ಪರ್ವೀನ್, ಕವಿತ, ಲಲಿತ, ತಾರಾಚಂದನ್- ಇವರೀಗ ಕಾಂಗ್ರೆಸ್ ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರೂ ಆಗಿದ್ದಾರೆ. ಹಾಗೂ ಜಿಲ್ಲೆಯ ಬಾಲ ನ್ಶಾಯ ಮಂಡಳಿಯ ಸದಸ್ಯೆಯಾಗಿ ರಾಜೇಶ್ವರಿ ಮಹೇಶ್, ಮಕ್ಕಳ ಕಲ್ಶಾಣ ಸಮಿತಿಯ ಅಧ್ಯಕ್ಷೆಯಾಗಿ ಮಧುಕುಮಾರಿ… ಹೀಗೆ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರ ಪಟ್ಟಿ ದೊಡ್ಡದಿದೆ. ಈಚೆಗೆ ಪ್ರತಿಭಾವಂತ ಕಿರಿಯ ಮಹಿಳಾ ವಕೀಲರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ಹಾಲಿ 200ಕ್ಕೂ ಹೆಚ್ಚು ವಕೀಲರಾಗಿ ನೋಂದಾವಣೆಯಾದ ಮಹಿಳೆಯರು ನಗರದಲ್ಲಿದ್ದು, ಅದರಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ನಿತ್ಯ ವೃತ್ತಿಯಲ್ಲಿ ತೊಡಗಿದ್ದಾರೆ. ಇದರೊಂದಿಗೆ ನೋಟರಿ ಪಬ್ಲಿಕ್ ಆಗಿ ಹೆಚ್.ಟಿ.ಕೋಮಲ (ಮಕ್ಕಳ ಕಲ್ಶಾಣ ಸಮಿತಿಯ ಮಾಜಿ ಅಧ್ಯಕ್ಷೆಯಾಗಿದ್ದರು) ಜಗದಾಂಭ ಮತ್ತು ಗೀತಾ ಇವರೆಲ್ಲ ಪತ್ರಗಳ ನೋಂದಣಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ‘ಜಿಲ್ಲಾ ಗ್ರಾಹಕರ ಆಯೋಗ’ದಲ್ಲಿ ಅನುಪಮ ಹಾಲಿ ಎರಡನೇ ಬಾರಿಗೆ ಸದಸ್ಯೆಯಾಗಿದ್ದಾರೆ. ಹಿಂದೆ ಶಾಂತಲಾ ಆಯೋಗದ ಸದಸ್ಶರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ
ಸಂವಿಧಾನದ ಒಂದು ಪ್ರಮುಖ ಅಂಗವಾಗಿ, ವಿವಾದಗಳನ್ನು ನಿರ್ವಹಿಸುವ ಮತ್ತು ಅಂತಿಮ ತೀರ್ಪುಗಳನ್ನು ನೀಡುವ ಏಕೈಕ ಸಂಸ್ಥೆಯಾಗಿ ನ್ಯಾಯಾಂಗ ಕಾರ್ಯನಿರ್ವಹಿಸುತ್ತದೆ. ಈ ಇಲಾಖೆಗೂ ಸಹ ಹಲವು ಮಹಿಳಾ ವಕೀಲರು ಪ್ರಾರಂಭದಲ್ಲಿ ವೃತ್ತಿಯನ್ನು ಕೆಲ ವರ್ಷ ಮಾಡಿ, ಅದರ ಅನುಭವ ಪಡೆದು, ನ್ಯಾಯಾಧೀಶರ ಹುದ್ದೆಗೆ ಬೇಕಾದ ತಯಾರಿಯೊಂದಿಗೆ ಲಿಖಿತ ಪರೀಕ್ಷೆ ಬರೆದು ಉತ್ತೀರ್ಣರಾಗಿ, ಮೌಖಿಕ ಸಂದರ್ಶನ ನಡೆದು, ಕೊನೆಯಲ್ಲಿ ಆಯ್ಕೆಯಾಗಿ ಹಲವು ವರ್ಷಗಳಿಂದ ನ್ಯಾಯಾಧೀಶರಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿರುವ ರೂಪ, ಪುಷ್ಪ, ಜ್ಯೋತಿ, ಭಾಗ್ಶ, ಮಂಜುಳ, ಸನ್ಮತಿ… ಹೀಗೆ ಹಲವಾರು ಮಹಿಳಾ ನ್ಯಾಯಾಧೀಶರು ಯಶಸ್ವಿಯಾಗಿ ನ್ಯಾಯಾಧೀಶರ ಹುದ್ದೆಯನ್ನು ಹಲವೆಡೆ ಅಲಂಕರಿಸಿದ್ದಾರೆ. ಜೊತೆಗೆ ಸರಾಗವಾಗಿ ಕಾರ್ಯ ನಿರ್ವಹಿಸಿಕೊಂಡು, ಭಡ್ತಿ ಪಡೆದುಕೊಂಡು ಮುನ್ನೆಡೆಯುತ್ತಿದ್ದಾರೆ. ಈಚೆಗೆ ಕಿರಿಯ ವಯಸ್ಸಿನ ನ್ಯಾಯಾಧೀಶೆಯಾಗಿ ಸುರಕ್ಷಾ ಅವರು ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ನೇರ ಜಿಲ್ಲಾ ನ್ಯಾಯಾಧೀಶರ ಪರೀಕ್ಷೆ ಬರೆದು ಜಿಲ್ಲಾ ನ್ಯಾಯಾಧೀಶರಾಗಿ ಹಾಸನದ ಮಕ್ಕಳಾದ ಪಲ್ಲವಿ(ಈಗ ಮಂಡ್ಯ ಜಿಲ್ಲೆ ಸೊಸೆ) ಹಾಗೂ ಪ್ರೀತಿ ಸಹ ಹೆಮ್ಮೆಯ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳಾ ವಕೀಲರಾಗಿ ವೃತ್ತಿ ಪ್ರಾರಂಭಿಸಿ, ಅಭಿಯೋಜಕರಾಗಿಯೂ ಸಹ ಹಲವಾರು ಮಹಿಳಾ ವಕೀಲರು ಪರೀಕ್ಷೆ ಬರೆದು, ಆಯ್ಕೆಯಾಗಿದ್ದಾರೆ. ಮೊದಲು ಸಹಾಯಕ ಅಭಿಯೋಜಕರಾಗಿ, ನಂತರದಲ್ಲಿ ಭಡ್ತಿ ಪಡೆದು ಅಭಿಯೋಜಕರಾಗಿ ಸರ್ಕಾರಿ ಕಾರ್ಯನಿರ್ವಹಿಸುವ ಮೂಲಕ ಸಹ ಮಹಿಳೆಗೆ ಎಲ್ಲವನ್ನು ನಿಭಾಯಿಸುವ ಶಕ್ತಿ ಇದೆಯೆಂಬುದನ್ನು ಪದೇ ಪದೇ ನಿರೂಪಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಸಮುದಾಯದ ಜೀವನಾಡಿ ಅಂಗನವಾಡಿ ತಾಯಂದಿರು
ಮೂಲ ಸ್ಥಳದಲ್ಲಿ ವೃತ್ತಿ ಆರಂಭಿಸಿ, ನಂತರದಲ್ಲಿ ವಿವಾಹ ಮಾಡಿಕೊಂಡು, ಹಲವರು ನ್ಯಾಯಾಧೀಶರಾಗಿಯೂ, ಅಭಿಯೋಜಕರಾಗಿಯೂ, ಮತ್ತೆ ಬೇರೆ-ಬೇರೆ ಸ್ಥಳಗಳಲ್ಲಿ ಇನ್ನಿತರರು ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವ ವಾಡಿಕೆ ವೃತ್ತಿಯಲ್ಲಿ ಸದಾ ಇರುತ್ತದೆ. ಈಚಿನ ವರ್ಷಗಳಲ್ಲಿ ವಕೀಲಿ ವೃತ್ತಿಗೆ ಅತೀ ಹೆಚ್ಚಿನ ಬೇಡಿಕೆ ಇದ್ದು, ಪ್ರತಿಷ್ಠಿತ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಕಂಪನಿಗಳಿಗೆ ಸೇರಿಕೊಂಡು ದೊಡ್ಡ ಮಟ್ಟದ ಪ್ಯಾಕೇಜ್‌ನಲ್ಲಿ ಹಣ ಸಂಪಾದಿಸುತ್ತಿರುವವರ ಸಂಖ್ಯೆಯೂ ಸಹ ಅಧಿಕವಾಗುತ್ತಿದೆ.
ಇನ್ನು ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ಎಷ್ಟು ಮಂದಿ ಮಹಿಳೆಯರು ವೃತ್ತಿಯಲ್ಲಿ ತೊಡಗಿದ್ದಾರೆಂದು ನೋಡುವುದಾದರೆ- 1999ರಲ್ಲಿ ಸ್ಥಾಪನೆಯಾದ ಆಲೂರು ನ್ಯಾಯಾಲಯದಲ್ಲಿ ಈಗ 18 ಮಂದಿ ಮಹಿಳಾ ವಕೀಲರಿದ್ದು, ಅಲ್ಲಿನ ಪಾರ್ವತಿ ಎಂಬುವವರು ನ್ಯಾಯಾಧೀಶರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅರಕಲಗೂಡಿನಲ್ಲಿ 1982ರಲ್ಲಿ ನ್ಯಾಯಾಲಯ ಪ್ರಾರಂಭಗೊಂಡು, ಹಾಲಿ 25 ಮಂದಿ, ಮಹಿಳಾ ವಕೀಲರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಶಿಲ್ಪಾ ಅವರು ಸಹಾಯಕ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರಸೀಕೆರೆಯಲ್ಲಿ 1987ರಲ್ಲಿ ನ್ಶಾಯಾಲಯ ಪ್ರಾರಂಭಗೊಂಡು ಪ್ರಸ್ತುತ 20 ಮಂದಿ ಮಹಿಳೆಯರು ವೃತ್ತಿಯಲ್ಲಿ ತೊಡಗಿದ್ದು, ಜಯಶ್ರೀ ಹಾಗೂ ಜೈಬುನ್ನೀಸಾ ಅವರು ನ್ಯಾಯಾಧೀಶರಾಗಿ ಹಾಗೂ ವಾಣಿ ಮತ್ತು ಪೂರ್ಣಿಮಾ ಅವರುಗಳು ಅಭಿಯೊಜಕರಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇಲೂರಿನಲ್ಲಿ 1994ರಲ್ಲಿ ಕೋರ್ಟ್ ಸ್ಥಾಪನೆಯಾಗಿ ಪ್ರಸ್ತುತ 12 ಮಹಿಳಾ ವಕೀಲರು ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಚನ್ನರಾಯಪಟ್ಟಣದಲ್ಲಿ 1965ರಲ್ಲಿ ಕೋರ್ಟ್ ಸ್ಥಾಪನೆಯಾಗಿ ಪ್ರಸ್ತುತ 47 ಮಹಿಳಾ ವಕೀಲರು ವೃತ್ತಿಯಲ್ಲಿ ತೊಡಗಿದ್ದು, ಎನ್.ಡಿ.ಮಾಲಾ ಅವರು ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿಯೂ, ಭಾಗ್ಶಲಕ್ಷ್ಮೀ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಥಮ ನ್ಯಾಯಾಲಯ ಸ್ಥಾಪನೆಯಾದ ಹೆಗ್ಗಳಿಕೆಗೆ ಪಾತ್ರವಾಗಿರುವ ಹೊಳೆನರಸೀಪುರದಲ್ಲಿ ರಾಜಲಕ್ಷ್ಮಿ ಅವರು ಮೊದಲ ಮಹಿಳಾ ವಕೀಲರಾಗಿ ವೃತ್ತಿ ಆರಂಭಿಸಿ, ಈಗಲು ವೃತ್ತಿಯನ್ನು ಮುಂದುವರೆಸುತ್ತಿದ್ದು, ಹಾಲಿ 15 ಮಂದಿ ಮಹಿಳೆಯರು ಅಲ್ಲಿ ವೃತ್ತಿ ಮಾಡುತ್ತಿದ್ದಾರೆ. ಶುಭ ಜಯಪ್ರಕಾಶ್ ಹಾಗೂ ಸವಿತರಾಣಿ ಎಚ್.ವಿ. -ಇವರಿಬ್ಬರು ನ್ಯಾಯಾಧೀಶರಾಗಿಯೂ, 4 ಮಂದಿ ಅಭಿಯೋಜಕರಾಗಿಯೂ ಸಹ ವಿವಿಧೆಡೆ ಕೆಲಸ ಮಾಡುತ್ತಿದ್ದಾರೆ. ಸಕಲೇಶಪುರದಲ್ಲಿ 1982ರಲ್ಲಿ ಕೋರ್ಟ್ ಸ್ಥಾಪನೆಗೊಂಡು ಹಾಲಿ 13 ಮಂದಿ ಮಹಿಳೆಯರು ವೃತ್ತಿಯಲ್ಲಿ ತೊಡಗಿದ್ದು, ನಾಗಸುಂದ್ರಮ್ಮ ಹಾಗೂ ಪಾರ್ವತಿ ಅವರುಗಳು ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಅಲ್ಪಕಾಲದ ವಿಚಾರಣೆ ಹಾಗೂ ಕ್ಷೇತ್ರಕಾರ್ಯದ ಹಿನ್ನೆಲೆಯಲ್ಲಿ ಕಾನೂನು ಕ್ಷೇತ್ರದಲ್ಲಿ ತೊಡಗಿರುವ ಮಹಿಳೆಯರ ಕುರಿತು ಸ್ಥೂಲವಾಗಿ ದೊರಕಿದ ಇಷ್ಟು ಮಾಹಿತಿಯನ್ನು ಇಲ್ಲಿ ದಾಖಲಿಸುತ್ತಿರುವೆ. ಇನ್ನೂ ನನ್ನ ಗಮನಕ್ಕೆ ಬಾರದೇ ಅನೇಕ ಮಹಿಳೆಯರು ಕಾನೂನು ಕ್ಷೇತ್ರದ ವಿವಿಧ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರಬಹುದೆಂಬ ವಿನಮ್ರ ತಿಳಿವಳಿಕೆ ನನ್ನದು.
ಇದನ್ನು ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ
ಕಾನೂನು ಕ್ಷೇತ್ರವು ಪುರುಷರ ಕ್ಷೇತ್ರ, ಇಲ್ಲಿ ಮಹಿಳೆಯರು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಪುರುಷ ಪ್ರಧಾನ ಸಮಾಜದ ಭ್ರಮೆಯನ್ನು ಒಡೆಯುವಂತೆ ನ್ಯಾಯಾಂಗದ ಎಲ್ಲ ವಿವಿಧ ಘಟಕಗಳಲ್ಲೂ ಮಹಿಳೆಯರು ಯಶಸ್ವಿಯಾಗಿ ತೊಡಗಿಕೊಳ್ಳುತ್ತಿದ್ದಾರೆ. ಕೇವಲ ತೊಡಗುವುದಷ್ಟೇ ಅಲ್ಲ, ಹೆಚ್ಚಿನವರು ಅನ್ಯಾಯಕ್ಕೊಳಗಾದವರಿಗೆ ಮುಕ್ಕಾಗದಂತೆ ನ್ಯಾಯ ದೊರಕಿಸುವ ನಿಟ್ಟಿನಲ್ಲೂ ಅವಿರತ ಶ್ರಮಿಸುತ್ತಿದ್ದಾರೆ. ಅವರು ಅನೇಕ ಪ್ರಕರಣಗಳಲ್ಲಿ ಅಪರೂಪವೆನಿಸುವಂತೆ ವಾದ ಮಾಡುತ್ತಾ, ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಮಹಿಳಾ ನ್ಯಾಯಾಧೀಶರು ಅಪರೂಪವೆನಿಸುವಂತಹ ನ್ಯಾಯದಾನ ಮಾಡುತ್ತಾ ನೊಂದವರಿಗೆ ಸಮಾಧಾನವನ್ನು ದಕ್ಕಿಸಿಕೊಟ್ಟಿದ್ದಾರೆ. ತಾಯ್ತನವನ್ನು ಮೆರೆದಿದ್ದಾರೆ. ಇತಿಹಾಸದಲ್ಲಿ ದಾಖಲಾಗುವಂತಹ ತೀರ್ಪುಗಳನ್ನು ನೀಡಿ ಗೆಲುವಿನ ನಗೆ ಬೀರಿದ್ದಾರೆ. ಹೀಗಾಗಿ ಕಾನೂನು ವ್ಶಾಪ್ತಿಯ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ನೂರಾರು ಮಹಿಳೆಯರಿಗೆ, ಮಹಿಳಾ ವಕೀಲರಿಗೆ ಪ್ರೀತಿಯ ಶುಭ ಹಾರೈಕೆಗಳು.
-ಎಂ.ಬಿ. ಗಿರಿಜಾಂಬಿಕ





