ಹಾಸನ ಮಣ್ಣಿನ ಹೆಣ್ಣು ದನಿಗಳು | ಕವಯಿತ್ರಿ, ಅನುವಾದಕಿ, ಕಲಾವಿದೆ- ಎಂ.ಆರ್. ಕಮಲ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಎಂ.ಆರ್. ಕಮಲ ಹೆಸರನ್ನು ಕೇಳದವರಾರು? ಖ್ಯಾತ ಕವಯಿತ್ರಿ, ಅನುವಾದಕಿ, ಉಪನ್ಯಾಸಕಿ, ಕಲಾವಿದೆ ಹಾಗೂ ಉತ್ಸಾಹದ ಬುಗ್ಗೆ! ತಮ್ಮ ಇಡೀ ಬದುಕನ್ನು ಕಲಾ ಪ್ರಕಾರಕ್ಕಾಗಿಯೆ ಮೀಸಲಿಟ್ಟವರೇನೊ ಎನ್ನುವಂತೆ ಸದಾ ಲವಲವಿಕೆಯಿಂದ, ನಿರಂತರ ವಿದ್ಯಾರ್ಥಿಯೂ ಆಗಿ ಚಟುವಟಿಕೆಗಳ ಮೊತ್ತವಾದವರು.

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. ಅವರು ಹುಟ್ಟಿದ್ದು 1959ರಲ್ಲಿ. ತಂದೆ ಎಂ.ಎಚ್.ರಾಮಸ್ವಾಮಿ, ತಾಯಿಯ ಹೆಸರು ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ, ಎಲ್‌ಎಲ್‌ಬಿ ಪದವೀಧರೆಯಾಗಿ, ತಮ್ಮ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ. ಸ್ವರ್ಣಪದಕ ಪಡೆದವರು. ಫ್ರೆಂಚ್ ಭಾಷೆಯನ್ನು ಆರು ವರ್ಷಗಳ ಕಾಲ ಅಧ್ಯಯನ ಮಾಡಿರುವ ಕಮಲ, ಫ್ರೆಂಚ್ ಭಾಷೆಯಲ್ಲಿ ಪದವೀಧರರು.

ಉಪನ್ಯಾಸಕಿಯಾಗಿ ನಂತರ ಪ್ರಾಂಶುಪಾಲೆಯಾಗಿ ಹಳೇಬೀಡು, ಮುಂದೆ ಬೆಂಗಳೂರಿನ ಹಲವು ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಕಮಲ ಅವರ ಜಗತ್ತು ಹಲವು ವೈವಿಧ್ಯಗಳಿಂದ ಕೂಡಿರುವಂತದ್ದು. ಅಗಾಧ ಶಿಷ್ಯ ಪಡೆಯನ್ನೆ ಸೃಷ್ಟಿಸಿರುವ ಅವರು, ಅತ್ಯುತ್ತಮ ಶಿಕ್ಷಕಿ ಕೂಡ. ಅವರ ಕುಟುಂಬದ ಕುಡಿಗಳಾದ ಮಗಳು ಸ್ಪರ್ಷ ಖ್ಯಾತ ಗಾಯಕಿಯಾಗಿ ಹೆಸರು ಮಾಡಿದಾಕೆ. ಮಗ ಆಕರ್ಶ್ ಕಮಲ ಕೂಡ ಕವಿ, ಲೇಖಕ, ಅಂಕಣಕಾರ. ಜೀವಂತಿಕೆ ಗುಣಗಳಿಂದ ಪುಟಿಯುವ ಕಮಲ ಮೇಡಂ ತಮ್ಮ ಬರಹಗಳಿಂದ ಸಾಕಷ್ಟು ಓದುಗರನ್ನು ದಕ್ಕಿಸಿಕೊಂಡಿದ್ದಾರೆ. ಬಹಳಷ್ಟು ಮಂದಿ ಹೆಣ್ಣುಮಕ್ಕಳಿಗೆ ಆದರ್ಶವಾಗಿದ್ದಾರೆ ಹಾಗೂ ಮಾರ್ಗದರ್ಶಿಯೂ ಆಗಿದ್ದಾರೆ. ಯಾವತ್ತೂ ಒಂದಿಲ್ಲೊಂದು ಕಲಾತ್ಮಕ, ಸಾಹಿತ್ಯಾತ್ಮಕ ಕೆಲಸದಲ್ಲಿ ತೊಡಗಿರುವ ಕಮಲ ಮೇಡಂಗೆ ವಿರಾಮವಾಗಿ ಕಾಲ ಕಳೆದು ಗೊತ್ತೇ ಇಲ್ಲವೇನೊ ಅನ್ನುವಂತೆ ಅವರ ಸ್ವಭಾವವಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…

ಪ್ರವಾಸ ಪ್ರಿಯರೂ ಆಗಿರುವ ಕಮಲ ಮೇಡಂ ಹೊಸ ಸ್ಥಳಗಳನ್ನು ಕಾಣುವ, ಅಲ್ಲಿನ ಹೆಣ್ಣುಮಕ್ಕಳು ಹಾಗೂ ಆ ಊರಿನ ಸ್ಥಿತಿಗತಿಯನ್ನು ನಿರೂಪಿಸುವ ಕೆಲಸವನ್ನೂ ಮಾಡುತ್ತಾರೆ. ವಿದೇಶ ಪ್ರವಾಸಗಳಿಗೂ ತೆರಳಿದ್ದ ಕಮಲ ಮೇಡಂ ತಮ್ಮ ಬರಹದಲ್ಲಿ ವಸ್ತುನಿಷ್ಠವಾಗಿ ಪ್ರಸಂಗಗಳನ್ನು ಚಿತ್ರಿಸುವಲ್ಲಿ ಪ್ರವೀಣರು. ಸೂಕ್ಷ್ಮ ಸಂಗತಿಗಳನ್ನೂ, ಲೇಖಕರ ಕಣ್ಣಿಗೆ ಮಾತ್ರ ಕಂಡುಬರುವ ದೃಶ್ಯಗಳನ್ನೂ ಬರಹದಲ್ಲಿ ವಿಶೇಷವಾಗಿ ಬರೆದು, ವಿಶಿಷ್ಟ ರೂಪು ಕೊಡುವವರು. ಅವರ ಲೇಖನಿಗೆ ನಿಷ್ಠುರತೆಯಿದೆ, ಮಾನವೀಯ ಸ್ಪರ್ಷವಿದೆ. ಅಸಲಿತನವನ್ನು ಅವುಗಳ ನೈಜ ರೂಪದಲ್ಲೇ ಬಿಂಬಿಸುವ ಸಾಮರ್ಥ್ಯವಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಮಲ ಅವರ ಹೆಸರು ಮತ್ತು ಸಾಧನೆಗಳು ಚಿರಪರಿಚಿತ. ನೃತ್ಯ ಮತ್ತು ವೀಣೆಯಲ್ಲೂ ಅವರು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಅವರಿಗೆ ತಾವು ಬೆಳೆಯುವುದರೊಂದಿಗೆ ತಮ್ಮ ಶಿಷ್ಯರನ್ನೂ ಬೆಳೆಯುವಂತೆ ಪ್ರೋತ್ಸಾಹಿಸುವ ಕಾಳಜಿಯುಕ್ತ ನಿಲುವಿದೆ.

ಅವರ ಪ್ರಕಟಿತ ಕಾವ್ಯ ಸಂಗ್ರಹಗಳಾದ ಶಕುಂತಲೋಪಾಖ್ಯಾನ(1988), ಜಾಣೆ ಮತ್ತು ಇತರ ಕವಿತೆಗಳು(1992), ಕ್ರಮವಾಗಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ ಹಾಗೂ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿವೆ. ಹೂವು ಚೆಲ್ಲಿದ ಹಾದಿ(2007), ಮಾರಿಬಿಡಿ(2017), ಗದ್ಯಗಂಧಿ(2020), ನೆಲದಾಸೆಯ ನಕ್ಷತ್ರಗಳು(2021), ಈಗಿಲ್ಲಿ ಎಲ್ಲವೂ ಮೆಸ್ಸಿ(2024) ಅವರ ಉಳಿದ ಕವನ ಸಂಕಲನಗಳು. ‘ಮಾರಿಬಿಡಿ’ ಸಂಕಲನ ಅಮ್ಮ ಪ್ರಶಸ್ತಿ ಪಡೆದಿದೆ. ಕಾವ್ಯ ಕ್ಷೇತ್ರದಲ್ಲಿನ ಅವರ ಸಾಧನೆಗಾಗಿ 2018ನೆಯ ಸಾಲಿನ ಮಾಸ್ತಿ ಪ್ರಶಸ್ತಿಯನ್ನು ಕಮಲ ಪಡೆದಿದ್ದಾರೆ. ಕಿ.ರಂ. ಕಾವ್ಯ ಪುರಸ್ಕಾರವೂ ಅವರಿಗೆ ದೊರೆತಿದೆ.

ಇದನ್ನು ಓದಿದ್ದೀರಾ?: ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ

ಕಾಳನಾಮ ಚರಿತೆ 2018ರಲ್ಲಿ ಪ್ರಕಟವಾದ ಹಗುರ ಹರಟೆಯ ಹಂದರದ ಪ್ರಬಂಧ ಸಂಕಲನ. ತಾವು ಸಾಕಿದ ನಾಯಿಯ ಬಗ್ಗೆ ಅವರ ಪ್ರೇಮ ಅಪಾರ. ಅದನ್ನು ವಾಕಿಂಗ್ ಕರೆದೊಯ್ಯುವಾಗ ಘಟಿಸಿದ ಘಟನೆಗಳನ್ನು ಕಲಾತ್ಮಕವಾಗಿ ಅವರು ಹೆಣೆದ ಬಗೆಯನ್ನು ಓದಿಯೇ ತಿಳಿಯಬೇಕು. ಕಸೂತಿಯಾದ ನೆನಪು, ಊರಬೀದಿಯ ಸುತ್ತು, ಕ್ವಾರಂಟೈನ್ 2020ರಲ್ಲಿ, ಹೊನ್ನಾವರಿಕೆ 2022ರಲ್ಲಿ ಮತ್ತು ಹೊಂಬಳ್ಳಿ 2024ರಲ್ಲಿ ಪ್ರಕಟವಾದ ಪ್ರಬಂಧ ಸಂಕಲನಗಳು. ಇವೂ ಆಸಕ್ತ ಓದುಗರಿಗೆ ಹೆಚ್ಚಿನ ಮುದ ನೀಡುವಲ್ಲಿ ಯಶಸ್ವಿಯಾಗಿವೆ.

ಅನುವಾದ ಸಾಹಿತ್ಯದಲ್ಲಿ ಮಹತ್ವದ ಕೊಡುಗೆ ನೀಡಿರುವ ಕಮಲ ಅವರು ಆಫ್ರಿಕನ್-ಅಮೇರಿಕನ್, ಆಫ್ರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಕತ್ತಲ ಹೂವಿನ ಹಾಡು(1989), ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪು ಕವಿಗಳನ್ನು ಕನ್ನಡಕ್ಕೆ ಪರಿಚಯಿಸುವ ಪ್ರಯತ್ನ ಓದುಗರ ಗಮನ ಮತ್ತು ವಿಮರ್ಶಕರ ಮಾನ್ಯತೆ ಎರಡನ್ನೂ ಪಡೆಯಿತು. ಈ ಪ್ರಯತ್ನದ ವಿಸ್ತರಣೆಯಾಗಿ ಆಫ್ರಿಕನ್-ಅಮೆರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿಯ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಕಥೆಯನ್ನು ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಕೃತಿ ಸರಣಿಯ ಐದು ಪುಸ್ತಕಗಳು ತೆರೆದಿಡುತ್ತವೆ. ಆರು ವರ್ಷಗಳ ಅವಧಿಯಲ್ಲಿ ಆಯ್ಕೆ, ಸಂಪಾದನೆ ಮತ್ತು ಅನುವಾದಗೊಂಡ ಈ ಕೃತಿಗಳು: ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ನನ್ನ ಕಥೆ ಮತ್ತು ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ, ಕೆನ್ನೀಲಿ. ಈ ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿಗೆ ಪಾತ್ರವಾಗಿವೆ. ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯನ್ನು ಕೂಡ ಕಮಲ ಪಡೆದಿದ್ದಾರೆ.

ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು 

ಅರಬ್ ಮಹಿಳಾ ಕಾವ್ಯವನ್ನು ಪರಿಚಯಿಸುವ ನೆತ್ತರಲಿ ನೆಂದ ಚಂದ್ರ(2016) ಅನುವಾದ ಕೃತಿ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿಯನ್ನು ಪಡೆದಿದೆ. ‘ಮತ್ತೆ ಮೇಲೇಳುತ್ತೇನೆ’ ವಂಗಾರಿ ಮಥಾಯ್ ಅವರ ಆತ್ಮಕತೆಯನ್ನು ಅನುವಾದಿಸಿದ್ದಾರೆ(2024). ಲ್ಯಾಟಿನ್ ಅಮೆರಿಕಾದ ಬರಹಗಾರ್ತಿ ಇಸಬೆಲ್ ಅಯೆಂದೆಯವರ ಆತ್ಮಕತೆಯ ಅನುವಾದ ‘ಜೀವದನಿ'(2025) ಕೂಡ ಪ್ರಕಟಗೊಂಡಿದೆ. ಬಂಗಾಳದ ಮಹತ್ವದ ಕವಿ ‘ಜೀವನಾನಂದರ ಕವಿತೆಗಳು’, ಇವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ ಸಂಗ್ರಹ(2003), ಜೀರೋ ಪಾಯಿಂಟ್- ಆಧುನಿಕೋತ್ತರ ಬಂಗಾಳಿ ಕವಿಗಳ ಕವಿತೆಯನ್ನು ಇತರರೊಂದಿಗೆ ಸೇರಿ ಅನುವಾದಿಸಿರುವ ಸಂಕಲನವಾಗಿದೆ. ಇವುಗಳಲ್ಲದೇ ಆಟದೊಂದಿಗೆ ಪಾಠ ಕಲಿಕೆ-ಅನುವಾದ, ಕೋಟಿ ಚೆನ್ನಯ್ಯ-ಸಂಗ್ರಹ, 2019ರಲ್ಲಿ- ಕೊಳದ ಮೇಲಿನ ಗಾಳಿ ವಿಮರ್ಶಾ ಕೃತಿಗಳು ಬೆಳಕು ಕಂಡಿವೆ.

ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ

ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದ ವಿಭಿನ್ನ ಪ್ರಕಾರಗಳಿಗೆ ಎಂ.ಆರ್.ಕಮಲ ಅವರು ತಮ್ಮ ಬದುಕಿನುದ್ದಕ್ಕೂ ಅವಿರತವಾಗಿ ಅನನ್ಯ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಅವರು ಹಾಸನ ಮಣ್ಣಿನ ಮಗಳೆಂಬುದು ನಿಜಕ್ಕೂ ನಮಗೆಲ್ಲರಿಗೂ ಹೆಮ್ಮೆ ತರುವಂತದ್ದು.

-ಮಮತ ಅರಸೀಕೆರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...