ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಕೈಮಗ್ಗದ ನೇಯ್ಗೆಗೆ ಬಹಳ ಪ್ರಸಿದ್ಧವಾದ ಶ್ರೀಮಂತ ಪರಂಪರೆಯನ್ನು ಹೊಂದಿದ ಜಿಲ್ಲೆ ಹಾಸನ. ಬಹಳ ಹಿಂದೆ ಹಾಸನ ನಗರ, ಕಲ್ಲುಗುಂಡಿ, ಅರಸೀಕೆರೆ, ಹುಲಿಕಲ್ಲು ಮುಂತಾದವು ವಿಶಿಷ್ಟವಾದ ರೇಷ್ಮೆ ಮತ್ತು ಹತ್ತಿ ಬಟ್ಟೆಗಳ ತಯಾರಿಕೆಯ ನೆಲೆಗಳಾಗಿದ್ದವು. ಕೊಣನೂರು ಹೋಬಳಿಯಲ್ಲಿ ಮಗ್ಗದಶೆಟ್ರು ವಾಸದ ಬೀದಿಗಳನ್ನು ಕಾಣಬಹುದು. ಆದರೆ 20ನೇ ಶತಮಾನದ ದ್ವಿತೀಯಾರ್ಧದಲ್ಲಿ ಯಾಂತ್ರಿಕ ಮಗ್ಗಗಳು ಅಡಿ ಇಡುತ್ತಿದ್ದಂತೆ ಕೈ ಮಗ್ಗಗಳು ಹಿನ್ನೆಲೆಗೆ ಸರಿದಾಗ ಈ ವೃತ್ತಿಯಿಂದ ಜೀವನ ಕಂಡುಕೊಂಡಿದ್ದ ಕುಶಲಕರ್ಮಿಗಳ ಕುಟುಂಬಗಳು ನಿಧಾನವಾಗಿ ಹೊಲಿಗೆಯತ್ತ ಸಾಗತೊಡಗಿದವು. ಇದು ಸಹಜವಾಗಿಯೇ ಇಂದು ಹಾಸನ ಜಿಲ್ಲೆ ಉಡುಪು ಉದ್ಯಮದಲ್ಲಿ ಮುಂಚೂಣಿಯಲ್ಲಿರಲು ಮತ್ತು ಸಾವಿರಾರು ಕುಟುಂಬಗಳ ಹೆಣ್ಣುಮಕ್ಕಳು ಉಡುಪು ಕೈಗಾರಿಕೆಗಳಲ್ಲಿ ಉದ್ಯೋಗ ಕಂಡುಕೊಳ್ಳಲು ಪೂರಕವಾಗಿದೆ ಎನ್ನಿಸುತ್ತದೆ.
ಹಾಸನದಲ್ಲಿ ಪ್ರಸ್ತುತ ಮೂರು ಗಾರ್ಮೆಂಟ್ಸ್ ಫ್ಯಾಕ್ಟರಿಗಳಿದ್ದು, ಅವುಗಳಲ್ಲಿ ಸರಿಸುಮಾರು 6,400 ಮಹಿಳೆಯರು ಹಾಗೂ 1,600 ಪುರುಷರು ಕೆಲಸ ಮಾಡುತ್ತಿದ್ದಾರೆ. ಅಂದರೆ ಸುಮಾರು ಶೇಕಡಾ 80ಕ್ಕೂ ಅಧಿಕ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರೇ ಉಡುಪು ಉದ್ಯಮದಲ್ಲಿ ಸೇವೆಯಲ್ಲಿ ನಿರತರಾಗಿರುವುದನ್ನು ಕಾಣಬಹುದು. ಅದರಲ್ಲೂ ಹಾಸನದ ಹಳ್ಳಿಹಳ್ಳಿಗಳಿಂದಲೂ ಇಲ್ಲಿಗೆ ಬಂದು ಸೇರಿರುವ, ಹೆಣ್ಣುಮಕ್ಕಳ ಸಂಖ್ಯೆಯೇ ಅತೀ ಹೆಚ್ಚು. ಉದ್ದಿಮೆಯವರೇ ಇವರಿಗೆ ತಮ್ಮ ಗಾರ್ಮೆಂಟ್ಸ್‌ಗೆ ಬರಲು ಅನುಕೂಲತೆಗಳನ್ನು ಮಾಡಿಕೊಟ್ಟಿರುವುದನ್ನೂ ಕಾಣಬಹುದು. ಪ್ರತಿಭಟನಾ ಮನೋಭಾವದ ಕೊರತೆ, ಹೆಚ್ಚು ಸಹನೆ ಹಾಗೂ ಅವರಲ್ಲಿರುವ ಕೌಶಲ್ಯಗಳು ಮಹಿಳೆಯರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ದಿಮೆಗೆ ನೇಮಿಸಿಕೊಳ್ಳಲು ಮುಖ್ಯ ಕಾರಣವಿರಬಹುದು. ಆದರೆ ಈ ಉದ್ಯಮವು ಅನೇಕ ಹೆಣ್ಣುಮಕ್ಕಳಿಗೆ ಜೀವನೋಪಾಯದ ದಾರಿಯಾಗಿರುವುದೂ ಸತ್ಯ. ನಿರ್ದಿಷ್ಟ ಶಿಕ್ಷಣ, ಪದವಿಗಳನ್ನು ಬೇಡದ ಈ ಉದ್ಯಮವು ಅನೇಕ ಆರ್ಥಿಕ/ಸಾಮಾಜಿಕವಾಗಿ ಹಿಂದುಳಿದವರು, ನಿರ್ಗತಿಕರು, ವಿಧವೆಯರು ಹಾಗೂ ಕುಡಿತದ ದುಶ್ಚಟಕ್ಕೆ ಬಲಿಯಾದ ಬೇಜವಾಬ್ದಾರಿ ಪುರುಷರ ಕುಟುಂಬದ ಹೆಣ್ಣುಮಕ್ಕಳಿಗೆ ಕೈಗೆಟುಕುವ ಉದ್ಯೋಗಾವಕಾಶಗಳನ್ನು ಒದಗಿಸಿವೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ
ಈ ಗಾರ್ಮೆಂಟ್ಸ್ ಕಂಪನಿಗಳು ಪ್ರಾರಂಭದಲ್ಲಿ ಅಲ್ಲಿನ ಕಾರ್ಮಿಕರಿಗೆ ವೃತ್ತಿ ಸಂಬಂಧಿ ತರಬೇತಿಯನ್ನು ನೀಡಿ ಅವರಲ್ಲಿ ವೃತ್ತಿ ನಿಭಾವಣಾ ಕೌಶಲ್ಯವನ್ನು ರೂಪಿಸುತ್ತವೆ. ಸ್ವತಂತ್ರ ಚಿಂತನಾ ಮನೋಭಾವ ಹೊಂದಿರುವ ಆಧುನಿಕ ಹೆಣ್ಣುಮಕ್ಕಳಿಗೆ, ಸ್ವಂತ ದುಡಿಮೆಯ ಸ್ವಲ್ಪಮಟ್ಟಿನ ಆರ್ಥಿಕ ಸ್ವಾಯತ್ತತೆಯು ಕೌಟುಂಬಿಕ ವಿಷಯಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಸ್ವಾತಂತ್ರ‍್ಯವನ್ನು ದೊರಕಿಸುವುದರಿಂದ ಮಹಿಳಾ ಸಬಲೀಕರಣದ ಹಾದಿಯಲ್ಲೂ ಪ್ರಮುಖ ಹೆಜ್ಜೆಯಾಗುತ್ತದೆ. ಪುರಾತನ ಪಿತೃ ಪ್ರಧಾನ ಸಂಪ್ರದಾಯ, ಸಂಕೋಲೆಗಳನ್ನು ದಾಟುವ ಧೈರ್ಯ, ಹುಮ್ಮಸ್ಸನ್ನೂ ನೀಡುತ್ತದೆ.
ನಗರ ವಾಸ್ತವ್ಯದ ಆಸಕ್ತಿ ಹೊಂದಿದ ಗ್ರಾಮೀಣಪ್ರದೇಶದ ಮಹಿಳೆಯರಿಗೆ ಈ ಹಾಸನ ನಗರದ ಉಡುಪು ಉತ್ಪಾದನಾ ಕಂಪನಿಗಳು ಆಸಕ್ತಿಯ ಕೇಂದ್ರಗಳಾಗಿವೆ. ಅನೇಕ ಹೆಣ್ಣುಮಕ್ಕಳಿಗೆ ಪರ್ಯಾಯ ವೃತ್ತಿಗಳಾದ ಕೃಷಿ, ಕೋಳಿ ಸಾಕಣೆ, ಜೇನು ಸಾಕಣೆ, ಡೈರಿ ಮುಂತಾದವುಗಳಿಗೆ ಅವಶ್ಯಕವಾದ ಕೃಷಿ ಭೂಮಿಯಾಗಲೀ ಇತರ ಸೌಲಭ್ಯಗಳಾಗಲೀ ಅಲಭ್ಯವಾದಾಗ ಈ ಗಾರ್ಮೆಂಟ್ ಉದ್ಯೋಗವೇ ಆದ್ಯತೆಯೂ ಮತ್ತು ಅನಿವಾರ್ಯವೂ ಆಗಿದೆ. ಕೃಷಿಯಂತಹ ತ್ರಾಸದಾಯಕ ವೃತ್ತಿಗಿಂತ ಇದು ಅನುಕೂಲಕರವೂ ಸುಲಲಿತವೂ ಎನಿಸುತ್ತದೆ. ಜೊತೆಗೆ ಹೆಣ್ಣುಮಕ್ಕಳ ಸಾಮಾಜೀಕರಣ ಹಾಗೂ ಸಂಘಟನಾ ಮನೋಭಾವಕ್ಕೂ ಸಹಕಾರಿಯಾಗಿ ಮನೆಯ ನಾಲ್ಕು ಗೋಡೆಗಳ ನಡುವಿನಿಂದ ಹೊರಬರಲು ಸಹಕರಿಸಿ, ಈ ಉದ್ಯೋಗದತ್ತ ಹೆಚ್ಚು ಹೆಣ್ಣುಮಕ್ಕಳು ಆಸಕ್ತರಾಗಿದ್ದಾರೆ.
ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು
ಸಾರಿಗೆ ಸೌಲಭ್ಯ ಹಾಗೂ ವೃತ್ತಿಯ ಜಾಗದಲ್ಲಿ ಸುರಕ್ಷೆಯ ಭಾವನೆಯು ಈ ವೃತ್ತಿಯನ್ನು ಅನುಸರಿಸಲು ಪ್ರೋತ್ಸಾಹಿಸಿದೆ. ನಿಖರ, ನಿರ್ದಿಷ್ಟ ಪ್ರಮಾಣದ ವೇತನವೂ ಆಕರ್ಷಣೀಯವೆನಿಸಿದೆ. ಇದರಿಂದಾಗಿ ಹಾಸನದ ಉಡುಪು ಉದ್ಯಮ ವೃಕ್ಷದ- ತಾಯಿಬೇರುಗಳಂತೆ ಈ ಹೆಣ್ಣುಮಕ್ಕಳು ನಿರ್ಣಾಯಕ ಪಾತ್ರವಹಿಸುತ್ತಾರೆ. ಗಾರ್ಮೆಂಟ್ ಮಹಿಳಾ ಕಾರ್ಮಿಕರು ಸ್ವ-ಆಸಕ್ತಿಯಿಂದಲೇ ಕೆಲಸಕ್ಕೆ ಭರ್ತಿಯಾದರೂ, ಅವರ ವೃತ್ತಿ ನಿಭಾವಣೆಯು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಖಾಸಗಿ ಉದ್ಯಮಗಳು ಸರ್ಕಾರಿ ಉದ್ಯಮಗಳಿಗಿಂತ ಸಾಮಾನ್ಯವಾಗಿ ಹೆಚ್ಚು ಶೋಷಣಾತ್ಮಕವಾಗಿರುವುದರಿಂದ ಖಾಸಗಿ ಉತ್ಪಾದನಾ ರಂಗದ ಎಲ್ಲಾ ವೈರುಧ್ಯಮಯ ಸವಾಲುಗಳನ್ನು ಈ ಕಾರ್ಮಿಕರು ಎದುರಿಸಬೇಕಾಗುತ್ತದೆ.
ವಿಶೇಷವಾಗಿ ಹಾಸನದ ದೊಡ್ಡ ಗಾರ್ಮೆಂಟ್ ಉದ್ಯಮಗಳಲ್ಲಿ ಸಣ್ಣಪುಟ್ಟ ತಪ್ಪುಗಳಿಗೂ ಕಠಿಣ ಶಿಕ್ಷೆ, ಉದ್ಯೋಗ ಕಳೆದುಕೊಳ್ಳುವ ಭೀತಿ, ಮನೆಯವರೊಂದಿಗೆ ಸಂಪರ್ಕ ನಿರಾಕರಣೆ, ವಿಶ್ರಾಂತಿ ಕೊಠಡಿಯ ಬಳಕೆಯಲ್ಲಿ ನಿರ್ಬಂಧ, ಶೌಚಾಲಯ ಬಳಕೆಗೂ ನಿರ್ದಿಷ್ಟ ಕಾಲಮಿತಿ, ದೀರ್ಘಾವಧಿ ಕೆಲಸ, ಕನಿಷ್ಠ ವೇತನ, ಸಾಗಾಟದ ವೆಚ್ಚ ಭರಿಕೆ, ಲಿಂಗ ತಾರತಮ್ಯ, ಉನ್ನತ ಆಡಳಿತಾತ್ಮಕ ಹುದ್ದೆಗಳಾದ- ನಿರ್ವಹಣೆ, ವೀಕ್ಷಣೆ, ತರಬೇತುದಾರರಂತಹ ಹುದ್ದೆಗಳ ನಿರಾಕರಣೆ, ತಾಂತ್ರಿಕ ಹುದ್ದೆಗಳಲ್ಲಿ ಅವಕಾಶ ನಿರಾಕರಣೆ, ಸಂಘಟನಾ ಸ್ವಾತಂತ್ರ‍್ಯದ ನಿರಾಕರಣೆಯಂತಹ ಕ್ರಮಗಳಿಂದಾಗಿ ಇಲ್ಲಿನ ಬಹುಪಾಲು ಮಹಿಳಾ ಕಾರ್ಮಿಕರು ಅತಿಯಾದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಂದ ಬಳಲುತ್ತಾರೆ.
ಇದನ್ನು ಓದಿದ್ದೀರಾ?: ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ
ಹೆಚ್ಚಿನ ದೈಹಿಕ ಶ್ರಮದ ಕೆಲಸಗಳಾದ ಬಟ್ಟೆಗಳನ್ನು ಕತ್ತರಿಸುವ, ಹೊಲಿಯುವ, ಪ್ಯಾಕಿಂಗ್ ಮಾಡುವ ಹಾಗೂ ದಾಸ್ತಾನಿಗೆ ಸಾಗಿಸುವ ಕೆಲಸಗಳಿಗಾಗಿಯೇ ನೇಮಕವಾಗುವ ಈ ಕಾರ್ಮಿಕರಲ್ಲಿ 67% ನಿರಂತರ ಕತ್ತು ನೋವು, 55% ಬೆನ್ನು ನೋವು, ಅತಿಯಾದ ಉತ್ಪಾದನಾ ಗುರಿಗಳಿಂದಾಗಿ ಸ್ಥಳಾವಕಾಶದ ಕೊರತೆಯಿಂದಾಗಿ 26%ರಷ್ಟು ಉಸಿರಾಟದ ಸಮಸ್ಯೆ, ಅತಿಯಾದ ಒತ್ತಡದಿಂದಾಗಿ 65%ರಷ್ಟು ಮಹಿಳೆಯರು ಋತುಸ್ರಾವ ಸಂಬಂಧಿತ ಸಮಸ್ಯೆಗಳಿಂದ ಬಾಧಿತರಾಗುತ್ತಾರೆ.
ಈ ಸಮಸ್ಯೆಗಳಿಂದ ಕಾರ್ಮಿಕರನ್ನು ವಿಮುಕ್ತಗೊಳಿಸುವ ಜವಾಬ್ದಾರಿ ಸರ್ಕಾರದ ಮುಂದಿದೆ. ಅರ್ಥಶಾಸ್ತ್ರದ ನಿಯಮಗಳಲ್ಲಿ ಬೇಡಿಕೆ ಮತ್ತು ಪೂರೈಕೆಗಳ ಸಂಬಂಧ ವಿಲೋಮಾನಪಾತದಲ್ಲಿರುತ್ತದೆ. ಸರಕುಗಳ ಪೂರೈಕೆ ಹೆಚ್ಚುತ್ತಿದ್ದಂತೆ ಬೇಡಿಕೆ ಕಡಿಮೆಯಾಗುತ್ತದೆ. ಅದೇ ರೀತಿ ಅನೇಕ ಮೇಲಿನ ಕಾರಣಗಳಿಂದಾಗಿ ಈ ಕಂಪನಿಗಳಿಗೆ ಮಹಿಳಾ ಕಾರ್ಮಿಕರ ಪೂರೈಕೆ ಅಥವಾ ಲಭ್ಯತೆ ಸಲೀಸಾಗಿರುವ ಕಾರಣ, ಅವರ ಬೇಡಿಕೆಯ ಪ್ರಮಾಣವೂ ಅವರ ಶ್ರಮದ ಬೆಲೆ(ವೇತನ) ಕಡಿತಗೊಳ್ಳುವ ಪರಿಣಾಮ ಅವರು ದೀನ ಸ್ಥಿತಿಯಲ್ಲಿ ಪ್ರತಿಕೂಲತೆಗಳ ನಡುವೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಕಂಪನಿಗಳಲ್ಲಿನ ಮಹಿಳಾ ದಟ್ಟಣೆಯನ್ನು ಕಡಿಮೆ ಮಾಡಲು, ಸರಕಾರ ಪರ್ಯಾಯ ಜೀವನೋಪಾಯದ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ.
ಇದನ್ನು ಓದಿದ್ದೀರಾ?: ಹಾಸನ ಮಣ್ಣಿನ ‘ಹೆಣ್ಣು ಕಥೆ’ಗಳ ಆಲಿಸುತ್ತಾ… ದಾಖಲಿಸುತ್ತಾ…
ಪರ್ಯಾಯ ಉದ್ಯೋಗ ಸೃಷ್ಟಿಯಲ್ಲಿ- ಮಹಿಳೆಯರಿಗೆ ಸ್ವಯಂ ಉದ್ಯೋಗ ಹಾಗೂ ಕಿರು ವಾಣಿಜ್ಯೋದ್ಯಮಿಗಳಾಗಲು, ಈಗಾಗಲೇ ಅಸ್ತಿತ್ವದಲ್ಲಿರುವ ಮುದ್ರಾ ಯೋಜನೆಯ ಮೂಲಕ ಸ್ಟಾಂಡ್ ಅಪ್ ಇಂಡಿಯಾ ಸಾಲ ನೀಡುವ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ, ಕಿರುಸಾಲ ಯೋಜನೆಯಂತಹವನ್ನು ಮತ್ತಷ್ಟು ಸಶಕ್ತಗೊಳಿಸಬೇಕು. ಸ್ವ-ಸಹಾಯ ಸಂಘಗಳನ್ನು ಆರ್ಥಿಕವಾಗಿ ಬೆಂಬಲಿಸಿ, ಸಹಕಾರ ಸಂಘಗಳ ಮಾದರಿಯಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ತೆಂಗಿನ ನಾರು, ಸೆಣಬು, ಆಲೂಗೆಡ್ಡೆ, ಮುಸುಕಿನಜೋಳ ಮುಂತಾದ ಸ್ಥಳೀಯ ಬೆಳೆಗಳನ್ನಾಧರಿಸಿದ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಬೆಂಬಲಿಸಬೇಕು. ಉನ್ನತ ಹುದ್ದೆಗಳನ್ನು ಪಡೆಯಲು ಅವಶ್ಯಕ ತರಬೇತಿ, ಧನಸಹಾಯ ಒದಗಿಸುವುದು, ಸಾಂಪ್ರದಾಯಕ ಕೈಮಗ್ಗ ಕರಕುಶಲ ವೃತ್ತ್ತಿಗಳನ್ನು ಬೆಂಬಲಿಸುವುದು, ಗಾರ್ಮೆಂಟ್ ಕಾರ್ಮಿಕರಿಗೆ ಸರ್ಟಿಫಿಕೇಟ್ ಕೋರ್ಸ್‌ಗಳ ಮೂಲಕ ಉನ್ನತ ಹುದ್ದೆಗಳಿಗೆ ಅವಕಾಶ ನೀಡುವುದು- ಮುಂತಾದವುಗಳಿಗೆ ಆದ್ಯತೆ ನೀಡಬೇಕು.
ಇದನ್ನು ಓದಿದ್ದೀರಾ?: ಕವಯಿತ್ರಿ, ಅನುವಾದಕಿ, ಕಲಾವಿದೆ- ಎಂ.ಆರ್. ಕಮಲ
ಜೊತೆಗೆ ಸರ್ಕಾರವು ಗಾರ್ಮೆಂಟ್ಸ್‌ಗಳಲ್ಲಿ ಕೆಲಸದ ಜಾಗದಲ್ಲಿ ಲೈಂಗಿಕ ದೌರ್ಜನ್ಯವನ್ನು ತಡೆಯಲು ಅವಶ್ಯಕವಾದ- ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸಣ್ಣ ಮಕ್ಕಳ ತಾಯಂದಿರಿಗೆ ತಮ್ಮ ವೃತ್ತಿಯಲ್ಲಿ ನಿರಾಂತಕವಾಗಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಶಿಶುವಿಹಾರಗಳನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸಬೇಕು. ಉದ್ಯೋಗ ಖಾತರಿ ಯೋಜನೆಗಳ ಅನುಷ್ಠಾನಗಳ ಮೂಲಕ ತಮ್ಮ ಮೂಲಭೂತ ಸ್ವಾತಂತ್ರ್ಯದ ರಕ್ಷಣೆಗೆ, ಅವಶ್ಯಕ ಸವಲತ್ತುಗಳ ಈಡೇರಿಕೆಗಾಗಿ ಸಂಯುಕ್ತ ಹೋರಾಟಕ್ಕೆ ಸಂಘಟನಾ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಪರಿಗಣಿಸುವುದು. ಹೆಣ್ಣುಮಕ್ಕಳ ಶ್ರಮಕ್ಕೆ ತಕ್ಕಷ್ಟು, ಕೈ ತುಂಬುವಷ್ಟು ಸಂಬಳವನ್ನು ಅವರಿಗೆ ಮೊದಲು ನೀಡಬೇಕು. ಈ ಕ್ರಮಗಳ ಮೂಲಕ ಈ ಮಹಿಳಾ ಕಾರ್ಮಿಕರ ಬದುಕನ್ನು ಸಹ್ಯಗೊಳಿಸಬೇಕು. ಬೇರುಗಳು ಸದೃಢವಾಗಿದ್ದಾಗ ಮಾತ್ರ ವೃಕ್ಷ ನಳನಳಿಸಲು ಸಾಧ್ಯ!
-ರತ್ನಾವತಿ ಪಿ.





