ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಸಾಮುದಾಯಿಕ ಬದಲಾವಣೆಗೆ ತುಡಿಯುವ ಮನಸ್ಸಿನಿಂದ, ಬದಲಾವಣೆಯತ್ತ ನಡೆಯುತ್ತಲೇ ಸಾಗಿದವರು- ಸರಳ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ಸೌಭಾಗ್ಯ ಹಾಗೂ ಅಂತೋಣಿಯವರು. ಸಮಾಜದ ಎಲ್ಲ ಕಟ್ಟುಕಟ್ಟಳೆಗಳನ್ನು ಮೀರಿ ಮತಧರ್ಮ ಅತೀತ ಭಾವನೆಯಲ್ಲಿ ಪ್ರೀತಿಸಿ, ಒಂದಾದ ದಾಂಪತ್ಯ ಅವರದ್ದು. ‘ದೂರವಾಣಿ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ಅಂತೋಣಿ, ನನ್ನ ಸಹೋದರನ ಗೆಳೆಯರು. ಕಮ್ಯುನಿಸ್ಟ್ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡಿದ್ದವರು. ಪರಿಚಯ ಪ್ರೇಮವಾಗಿ ವಿವಾಹವಾದೆವು. ಆದರೆ ವಿಭಿನ್ನ ಮತಧರ್ಮದ ಕಾರಣದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯ್ತು. ಪರಸ್ಪರ ಗೌರವ, ಪ್ರೀತಿ ಇದ್ದಿದ್ದರಿಂದ ನಾವು ಈ 44 ವಸಂತಗಳೂ ಸಮಸ್ಯೆಯಿಲ್ಲದೇ ದೃಢವಾಗಿ ಮುನ್ನೆಡೆದೆವು. ನಮ್ಮ ಕೆಲಸ, ಆಶಯ, ಕನಸುಗಳನ್ನು ಈಡೇರಿಸಿಕೊಳ್ಳಲು ಸದಾ ಜೊತೆಯಾಗಿಯೇ ಪ್ರಯತ್ನಿಸಿದ್ದೇವೆ’ ಎನ್ನುತ್ತಾರೆ ಈಗ 72ರ ಹರೆಯದ, ಬೇಲೂರಿನಲ್ಲಿ ನೆಲೆಯಾಗಿರುವ ನಿವೃತ್ತ ಶಿಕ್ಷಕಿ ಸೌಭಾಗ್ಯ.
ಇವರು ಆಲೂರು ತಾಲೂಕು ಮರಸು ಗ್ರಾಮದ ಮ.ಬ.ಚನ್ನಬಸಪ್ಪ ಹಾಗೂ ಗಂಗಮ್ಮ ದಂಪತಿಗಳ ಎರಡನೇ ಮಗಳಾಗಿ 24 ಜನವರಿ 1955ರಲ್ಲಿ ಜನಿಸಿದರು. ಇವರ ತಂದೆ ಸರ್ಕಾರಿ ನೌಕರರು. ವೃತ್ತಿ ಕಾರಣಕ್ಕೆ ಬೇಲೂರಿನಲ್ಲಿ ನೆಲೆಸಿದ್ದರು. ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಬೇಲೂರಿನಲ್ಲಿ, ಪಿಯುಸಿ- ಶಿಕ್ಷಣವನ್ನು ಹಾಸನದ ಎವಿಕೆ ಕಾಲೇಜಿನಲ್ಲಿ, ನಗರಸಭೆ ಕಟ್ಟಡದಲ್ಲಿದ್ದ ಟಿಸಿಎಚ್ ಕಾಲೇಜಿನಲ್ಲಿ ಶಿಕ್ಷಕ ತರಬೇತಿಯನ್ನು ಪಡೆದುಕೊಂಡು 1984ರಲ್ಲಿ ಶಿಕ್ಷಕಿಯಾಗಿ ಬೇಲೂರು ತಾಲೂಕಿನ ನಾಗೇನಹಳ್ಳಿಯ ಉರ್ದು ಶಾಲೆಗೆ ಸೇರ್ಪಡೆಗೊಂಡರು.
ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು
ಇವರ ತಂದೆ ನೌಕರಿಯಲ್ಲಿದ್ದರೂ ಆರ್ಥಿಕ ಸಂಕಷ್ಟವಿತ್ತು. ಹೀಗಾಗಿ ಬಾಲ್ಯದಲ್ಲಿ ಸೌಭಾಗ್ಯರ ಹೆಚ್ಚಿನ ಆಸೆಗಳು ಈಡೇರಲಿಲ್ಲ. ಅವರ ತಂದೆ ಶಿಸ್ತು, ಆದರ್ಶ, ಸರಳತೆಯಿಂದ ಪ್ರಾಮಾಣಿಕ ಜೀವನ ನಡೆಸಿದವರು. ಅನೇಕ ಚಳವಳಿಗಳನ್ನು ಹುಟ್ಟು ಹಾಕಿದ ಇವರನ್ನು ‘ಹಾಸನದ ಗಾಂಧಿ’ ಎಂದೇ ಕರೆಯುತ್ತಿದ್ದರಂತೆ! ಅವರ ಪ್ರಭಾವ ಮಕ್ಕಳ ಮೇಲೆ ಹೆಚ್ಚಿನದಾಗಿತ್ತು. ನಾಗೇನಹಳ್ಳಿ ಶಾಲೆಯಿಂದ ತಾವು ಓದಿದ್ದ ಬೇಲೂರಿನ ಸರ್ಕಾರಿ ಶಾಲೆಗೆ ಸೌಭಾಗ್ಯ ವರ್ಗಾವಣೆಗೊಂಡ ನಂತರದ ಅವಧಿಯನ್ನು ಅವರ ಬದುಕಿನ ಸುವರ್ಣ ಕಾಲವೆನ್ನಬಹುದು. ಇಲ್ಲಿಂದಲೇ ಅವರ ಸಾಮಾಜಿಕ ಕೆಲಸಗಳು ಆರಂಭಗೊಂಡಿದ್ದು. ಇಲ್ಲಿ ಶಿಕ್ಷಕಿಯಾಗಿದ್ದಾಗಲೇ ಅವರನ್ನು ಸರ್ಕಾರದ ವತಿಯಿಂದ 11 ವರ್ಷಗಳ ಕಾಲ, ಬಿಜಿವಿಎಸ್ ಹಾಗೂ ಸಾಕ್ಷರತಾ ಆಂದೋಲನಕ್ಕೆ ನಿಯೋಜನೆಗೊಳಿಸಲಾಯ್ತು. ಸಮಾಜಮುಖಿಯಾಗಿ ಕೆಲಸ ಮಾಡುವ, ಉನ್ನತ ಅಧಿಕಾರಿಗಳೊಂದಿಗೆ, ವಿಜ್ಞಾನಿಗಳೊಂದಿಗೆ ಕೆಲಸ ಮಾಡಲು, ಮಾರ್ಗದರ್ಶನಗಳನ್ನು ಪಡೆಯಲು ಸುವರ್ಣಾವಕಾಶ ದೊರೆಯಿತು. ಎರಡು ಬಾರಿಗೆ ಬಿಜಿವಿಎಸ್‌ನ ರಾಜ್ಯ ಸಮಿತಿಗೆ ಉಪಾಧ್ಯಕ್ಷೆಯಾಗುವ ಸುಯೋಗವೂ ಒದಗಿಬಂತು.
ಕರ್ನಾಟಕದಿಂದ ಸಾಕ್ಷರತಾ ರಾಯಭಾರಿಯಾಗಿ ಕೊಲ್ಕತ್ತಾಕ್ಕೆ ಹೋಗುವ ಅವಕಾಶ, ಸಾಕ್ಷರತಾ ಆಂದೋಲನದಲ್ಲಿ ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಮಹೇಂದ್ರ ಜೈನ್, ಡಿಡಿಪಿಐ ರಾಮಪ್ಪ, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಸತೀಶ್ ಪರ್ವತಿಕರ್… ಇನ್ನೂ ಅನೇಕ ಮಹನೀಯರ ಒಡನಾಟದಿಂದಾಗಿ ಸೌಭಾಗ್ಯರ ವ್ಯಕ್ತಿತ್ವ ಅರಳಿತು. ಸಾಕ್ಷರತಾ ಆಂದೋಲನದಲ್ಲಿ ಹಾಸನ ಜಿಲ್ಲಾ ಕೋ ಆರ್ಡಿನೇಟರ್ ಆಗಿ, ವಾತಾವರಣ ಸಮಿತಿ ಮತ್ತು ತರಬೇತಿ ಸಮಿತಿಯ ಜಿಲ್ಲಾ ಸಂಚಾಲಕಿಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಇಂದಿಗೂ ಅವರೆಲ್ಲಾ ಚಟುವಟಿಕೆಗಳಲ್ಲೂ ಮೊದಲ ಆದ್ಯತೆಯನ್ನು ಭಾರತ ಜ್ಞಾನ ವಿಜ್ಞಾನ ಚಳವಳಿಗೆ ನೀಡಲು ಬಯಸುತ್ತಾರೆ. ಇದರ ಮುಖ್ಯ ಆಶಯಗಳಾದ… ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ, ಪರಿಸರ ಸಂರಕ್ಷಣೆ, ಪ್ರಾಥಮಿಕ ಶಿಕ್ಷಣ, ಸಾಕ್ಷರತೆ, ಆರೋಗ್ಯ, ಜಲ ಸಾಕ್ಷರತೆಗಳ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಬೀದಿ ನಾಟಕಗಳು, ಉಪನ್ಯಾಸ, ಸಂವಾದ, ಕಾರ್ಯಕ್ರಮಗಳನ್ನು ಆಯೋಜಿಸಿ- ಜನಸಾಮಾನ್ಯರ ಮನಸ್ಸಿನಲ್ಲಿ ಈ ಆಶಯ ಉಳಿಯುವಂತೆ ಮಾಡುವಲ್ಲಿ ಸಾಮಾನ್ಯ ಕಾರ್ಯಕರ್ತೆಯಂತೆ ಜನರ ಮಧ್ಯಕ್ಕಿಳಿದು ಸೌಭಾಗ್ಯರವರು ಬದುಕಿನುದ್ದಕ್ಕೂ ಪ್ರಯತ್ನಿಸುತ್ತಾ ಬಂದಿದ್ದಾರೆ.
ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್
ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನುಸ್‌ರವರು ಪ್ರಾರಂಭಿಸಿದ ಸ್ವ ಸಹಾಯ ಸಂಘಗಳು ಭಾರತಕ್ಕೂ ವಿಸ್ತರಿಸಿ, ಆಂಧ್ರದಲ್ಲಿ ಪುದುಪು ಲಕ್ಷ್ಮಿ, ಕೇರಳದಲ್ಲಿ ಕುಟುಂಬ ಶ್ರೀ, ತಮಿಳುನಾಡಿನಲ್ಲಿ ಮಲರ್ ಆಗಿದ್ದು, ಕರ್ನಾಟಕದಲ್ಲಿ ಮಹಿಳಾ ಸ್ವಸಹಾಯ ಸಂಘವಾಗಿ ಬೆಳೆದ ಸಮಯವದು. ಉಡುಪಿ ಶ್ರೀನಿವಾಸರವರ ‘ಅಸ್ತ್ರ’ ಸಂಘಟನೆಯಿಂದ ಸ್ವ ಸಹಾಯ ಸಂಘದ ರಚನೆ ಬಗ್ಗೆ ತರಬೇತಿ ಪಡೆದ ಸೌಭಾಗ್ಯ, ಬೇಲೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾರಕ್ಕೆ 5-10 ರೂಪಾಯಿಗಳಂತೆ ಹಣ ಕಟ್ಟುವ 150 ಮಹಿಳಾ ಸ್ವ ಸಹಾಯ ಸಂಘಗಳನ್ನು ಪ್ರಾರಂಭಿಸಿದರು. ಶಾಲಾ ಸಮಯದ ನಂತರ ಒಂದೊಂದು ಹಳ್ಳಿಗಳಿಗೂ ಹೋಗಿ, ರಾತ್ರಿ ಹತ್ತರ ತನಕ ಅಲ್ಲಿಯ ಮಹಿಳೆಯರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸುತ್ತಾ ಅವರಿಗೆ ಧೈರ್ಯ ತುಂಬಿ ಮಹಿಳೆಯರ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗೆ ಅಹರ್ನಿಶಿ ಕೆಲಸ ಮಾಡುತ್ತಾ ಬಂದಿದ್ದಾರೆ. ‘ದಢೂತಿ ಕಾವಲುಗಾರರಿರುವ ಬ್ಯಾಂಕಿಗೆ- ಓದು, ಬರಹ, ಲೆಕ್ಕಾಚಾರಬಾರದ ನಾವು ಹೋಗಲು ಸಾಧ್ಯವೇ?’ ಎಂದುಕೊಂಡಿದ್ದ ನೂರಾರು ಮಹಿಳೆಯರು, ಇಂದು ಬ್ಯಾಂಕಿನಲ್ಲಿ ಸಹಜವಾಗಿ ವ್ಯವಹರಿಸಲು ಸಾಧ್ಯವಾಗಿದ್ದು, ಇವರು ಪ್ರಾರಂಭಿಸಿದ ಸ್ವ ಸಹಾಯ ಸಂಘಗಳಿಂದ ಎಂದು ಮಹಿಳೆಯರೇ ಹೇಳುವಂತಾಗಿದೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ದನದ ಕೊಟ್ಟಿಗೆಯಲ್ಲಿ, ಮರದ ಕೆಳಗೆ, ಮಣ್ಣಲ್ಲಿ, ಎಲ್ಲೆಂದರಲ್ಲಿ ಕೂತು- ಸಂಘಟನೆ ಬಗ್ಗೆ ಕಲಿಸುತ್ತಾ ಅವರಲ್ಲಿ ಒಬ್ಬರಾಗಿ ಬಿಡುತ್ತಿದ್ದರು ಸೌಭಾಗ್ಯ. ಹೀಗೆಂದೇ ‘ಮೇಡಂ ಅಂದ್ರೆ ಭೇದಭಾವ ತೋರದ ಹೃದಯವಂತಿಕೆಯುಳ್ಳವರು’ ಎಂಬ ಆಪ್ತಭಾವ ಹೆಚ್ಚಿನ ಮಹಿಳೆಯರಿಗೆೆ.
ಸೌಭಾಗ್ಯ ಅವರು ಯಾವುದೇ ಸಮಾಜಮುಖಿ ಕೆಲಸಗಳಿಗೆ ಆ ಹೆಣ್ಮಕ್ಕಳನ್ನು ಕರೆದಾಗ, ತಮ್ಮ ಕೂಲಿ ಕೆಲಸಗಳನ್ನು ಬಿಟ್ಟು ಇವರ ಜೊತೆ ಸೇರಿ ಕಲ್ಯಾಣಿ, ಕೆರೆಗಳ ಹೂಳೆತ್ತುವಂತಹ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕೈಲಾದ ತನು, ಮನದ ಸಹಕಾರ ನೀಡುತ್ತಾರೆ. ಸಂಘದ ವಿಚಾರಗಳಲ್ಲದೆ ಕೌಟುಂಬಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು, ಮಹಿಳೆಯರೊಂದಿಗೆ ಮಾತನಾಡುತ್ತಾ ಅವರ ಮನೋಭಾವಗಳಲ್ಲಿ ಬದಲಾವಣೆ ತರಲು ಸೌಭಾಗ್ಯ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮಕ್ಕಳ ಶಿಕ್ಷಣ, ಮನೆ ವ್ಯವಹಾರ, ಕೌಟುಂಬಿಕ ಜಗಳ, ಅಕ್ಕಪಕ್ಕದವರೊಂದಿಗೆ ಮನಸ್ತಾಪ- ಎಲ್ಲವನ್ನೂ ಇವರೊಂದಿಗೆ ಮುಕ್ತವಾಗಿ ಮಾತನಾಡಿದರೆ ಪರಿಹಾರ ದೊರೆಯುತ್ತದೆಂಬ ನಂಬಿಕೆ ಮಹಿಳೆಯರದು.
ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ
ಮಕ್ಕಳಿಲ್ಲವೆಂದು ಕುಟುಂಬದವರ ಕಿರುಕುಳಕ್ಕೆ ಒಳಗಾಗಿದ್ದ ಸ್ವ ಸಹಾಯ ಸಂಘದ ಮಹಿಳೆಯೊಬ್ಬರಿಗೆ ಸಮಾಧಾನಿಸಿ ಹೆಣ್ಣು ಮಗುವೊಂದನ್ನು ದತ್ತು ಕೊಡಿಸಿದ್ದು, ಈಗವಳು ಪಿಯುಸಿ ಓದುತ್ತಿದ್ದಾಳೆ. ಕುಟುಂಬದವರು ಸುಖವಾಗಿದ್ದಾರೆ. ಇವೆಲ್ಲವೂ ಸೌಭಾಗ್ಯರವರ ಸಾಮಾಜಿಕ ನೆಮ್ಮದಿಯ, ಬದಲಾವಣೆಯ ಪ್ರಯತ್ನದ ಕುರುಹುಗಳಾಗಿವೆ. ಇವರು ಮಹಿಳಾ ಸಬಲೀಕರಣಕ್ಕಾಗಿ ಸಿಪಿಆರ್ ಫೌಂಡೇಶನ್ ಹಾಗೂ ರಾಷ್ಟ್ರಮಟ್ಟದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳ ತಂಡಗಳನ್ನು ಕರೆಸಿ ಪೇಪರ್ ಬ್ಯಾಗ್, ಟೈಲರಿಂಗ್, ಸೋಪ್-ಕ್ಯಾಂಡಲ್ ತಯಾರಿಕೆಯಂತಹ ತರಬೇತಿಗಳನ್ನು ಕೊಡಿಸಿದ್ದಾರೆ. ಜೊತೆಗೆ ಪರ್ಸ್, ಪೆಟ್ಟಿಕೋಟ್‌ಗಳನ್ನು ಸ್ವಸಹಾಯ ಸಂಘದ ಹೆಣ್ಣುಮಕ್ಕಳಿಂದ ತಯಾರಿಸಿ, ಅದಕ್ಕೆ ಮಾರುಕಟ್ಟೆ ಒದಗಿಸಿ ಅವರ ಬಳಿ ಹಣ ಉಳಿತಾಯ ಮತ್ತು ಚಲಾವಣೆಯಾಗುವಂತೆ ಮಾಡಿರುವುದು ಚಿಕ್ಕ ಕೆಲಸವೇನಲ್ಲ.
ಮಹಿಳೆಯರ ಆರೋಗ್ಯ ಬಲವರ್ಧನೆಗಾಗಿ, ಬೇಲೂರಿನ ಪ್ರಸಾದಿಹಳ್ಳಿ, ಇಬ್ಬೀಡು ಇನ್ನಿತರ ಕಡೆಗಳಲ್ಲಿ ಆರೋಗ್ಯ ಶಿಬಿರ, ಕಣ್ಣು ತಪಾಸಣಾ ಶಿಬಿರಗಳನ್ನು ಮಾಡಿದ್ದಾರೆ. ಪವಾಡ ರಹಸ್ಯ ಬಯಲು ಕಾರ್ಯಕ್ರಮ ಏರ್ಪಡಿಸಿ ಮೂಢನಂಬಿಕೆಯನ್ನು ತೊಡೆದು ಹಾಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಆ ಕಾಲಘಟ್ಟದಲ್ಲಿ ಬಿಜಿವಿಎಸ್‌ವತಿಯಿಂದ, ಅತಿ ಹೆಚ್ಚು ಸ್ವ ಸಹಾಯ ಸಂಘಗಳು ರೂಪುಗೊಂಡಿದ್ದು ಬೇಲೂರು ತಾಲೂಕಿನಲ್ಲಿ! ಇದನ್ನು ವೀಕ್ಷಿಸಲು ಪ್ಯಾರಿಸ್, ಸ್ವಿಜರ್ಲ್ಯಾಂಡ್, ಜಪಾನ್ ಇನ್ನಿತರ ದೇಶಗಳಿಂದ ಬರುವ ಪ್ರತಿನಿಧಿಗಳನ್ನು ಬೇಲೂರಿನ ಹಳ್ಳಿಗಳಲ್ಲಿ ನಡೆಯುತ್ತಿದ್ದ ಸ್ವಸಹಾಯ ಸಂಘದ ವೀಕ್ಷಣೆಗೆ ಕರೆದೊಯ್ದಾಗ ಆ ಹೆಣ್ಣುಮಕ್ಕಳು- ಸಂಘ ಪ್ರಾರಂಭವಾದ ನಂತರ ಅವರಲ್ಲಿ, ಅವರ ಕುಟುಂಬದಲ್ಲಿ, ಅವರ ಸ್ಥಾನಮಾನದಲ್ಲಾಗಿರುವ ಬದಲಾವಣೆ ಹಾಗೂ ಹಣಕಾಸು ವಹಿವಾಟಿನ ಕುರಿತು ಧನಾತ್ಮಕವಾಗಿ ಹೇಳಿಕೊಳ್ಳುತ್ತಿದ್ದುದು ಸೌಭಾಗ್ಯ ಅವರಲ್ಲಿ ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ತರುತ್ತಿತ್ತು.
ಇದನ್ನು ಓದಿದ್ದೀರಾ?: ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ
ಅನೇಕ ಸ್ವಸಹಾಯ ಸಂಘಗಳ ಮಹಿಳೆಯರಲ್ಲಿ- ಬ್ಯಾಂಕ್ ಸಾಲ ತೆಗೆದುಕೊಳ್ಳುವ ಅವಶ್ಯಕತೆಯೇ ಬರದಂತಹ ಸ್ಥಿತಿಯನ್ನು ಮೂಡಿಸಿದ್ದಾರೆಂದರೆ ಇದೊಂದು ದಾಖಲೆಯ ಬದಲಾವಣೆಯಲ್ಲವೇ? ಇವರು ರೂಪಿಸಿದ ಸಂಘಗಳಲ್ಲಿ ಕೇವಲ ಹಣದ ವಹಿವಾಟಲ್ಲದೆ, ಎಲ್ಲರೂ ಒಟ್ಟಾಗಿ ಕೆಲಸಗಳಲ್ಲಿ ಭಾಗಿಯಾಗುವ, ಪ್ರವಾಸ ಹೋಗುವ, ಹಂಚಿ ಉಣ್ಣುವ ಮೂಲಕ ಸಂತೋಷಪಡುವ ಚಟುವಟಿಕೆಗಳನ್ನು ಇಂದಿಗೂ ಹಮ್ಮಿಕೊಳ್ಳುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರ, ಮಧ್ಯಮ/ಶ್ರೀಮಂತ ವರ್ಗದ, ಶಿಕ್ಷಕರ, ಪುರುಷರ ಸ್ವಸಹಾಯ ಸಂಘಗಳೂ ಪ್ರತ್ಯೇಕವಾಗಿ ರಚನೆಯಾಗಿ ಇಂದಿಗೂ ಮುಂದುವರಿಯುತ್ತಿರುವುದರ ಹಿಂದೆ ಈ ದಂಪತಿಗಳ ಆಪ್ತ ಒಡನಾಟ, ದೇಖರೇಕಿ ಮತ್ತು ಪರಿಶ್ರಮವಿದೆ. ಮಹಿಳಾ ದಿನಾಚರಣೆ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು ಸೇರುತ್ತಿದ್ದುದು- ಅವರು ಜನರೊಡನೆ ಒಡನಾಡುವ ರೀತಿಗೆ ಸಾಕ್ಷಿ.

‘ವಿದ್ಯಾರ್ಥಿಗಳಾಗಲಿ, ಮಹಿಳೆಯರಾಗಲಿ ಇತರರಲ್ಲಿ ಬೇಡುವುದನ್ನು ನಿಲ್ಲಿಸಬೇಕು. ಇದು ನಿಮಗೆ ಗೌರವ ತರುವುದಿಲ್ಲ’ ಎಂದು ಒತ್ತಿ ಹೇಳುತ್ತಾ ಬಂದಿರುವುದನ್ನು ಅನೇಕರು ಅಕ್ಷರಶಃ ಪಾಲಿಸಿದ್ದಾರೆ. ಈಗವರು ವಕೀಲರು, ನರ್ಸ್, ಶಿಕ್ಷಕರು… ಮುಂತಾದ ಕೆಲಸಗಳಲ್ಲಿ ಮೇಲೆ ಬಂದಿದ್ದಾರೆ. ತಾವೊಬ್ಬರು ಮಾತ್ರ ಸೃಜನಶೀಲೆಯಾಗದೆ ತಾನು ಕಾಲಿಡುವ ಜಾಗದಲ್ಲೆಲ್ಲಾ ಸೃಜನಶೀಲತೆಯನ್ನು ಬೆಳೆಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ- ‘ಕಲ್ಯಾಣದ ಪತನ’, ‘ವೈರಾಗ್ಯ ನಿಧಿ ಅಕ್ಕಮಹಾದೇವಿ’ ಎಂಬ ನಾಟಕಗಳನ್ನು ರಚಿಸಿ, ನಿರ್ದೇಶನ ಮಾಡಿಸಿ, 30ರಿಂದ 50 ವಯೋಮಾನದ ಮಹಿಳೆಯರನ್ನು ವೇದಿಕೆ ಹತ್ತಿಸಿ, ಗುಲ್ಬರ್ಗದವರೆಗೆ ಕರೆದುಕೊಂಡು ಹೋಗಿ, ನಾಟಕ ಪ್ರದರ್ಶನ ಮಾಡಿಸಿದ್ದಾರೆ. ತಂಡಕಟ್ಟಿ ಮಕ್ಕಳಿಂದ, ಮಹಿಳೆಯರಿಂದ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೊಡಿಸಿದ್ದಾರೆ. ಹೀಗೆ ಕಲೆಯನ್ನು ಹೊರತೆಗೆಯುವ ಕೌಶಲ ಕಲಿಸಿದ್ದು ಬಿಜಿವಿಎಸ್ ಎಂದು ಭಾವುಕರಾಗಿ ಹೇಳುತ್ತಾರೆ.
ಇದನ್ನು ಓದಿದ್ದೀರಾ?: ಮಹಿಳಾ ಸಬಲೀಕರಣದ ಆಶಾಕಿರಣಗಳು
ಅಂತೋನಿ ಹಾಗೂ ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಂದು, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅವಶ್ಯಕತೆಗಳಿಗೆ ನೆರವಾಗಿ, ಅವರ ಜೊತೆಗೂಡಿ ಸಂಭ್ರಮಿಸುತ್ತಾರೆ. ಇವರ ಕೆಲಸಗಳಿಗೆ ಕೆಲವು ಅಡ್ಡಿ ಆತಂಕಗಳೂ ಆಗೀಗ ಎದುರಾಗಿವೆ. ಆದರೂ ಇವರ ಒಳ್ಳೆಯತನದಿಂದಲೇ ಅವನ್ನು ನಿವಾರಿಸಿಕೊಂಡಿದ್ದಾರೆ. ಒಮ್ಮೆ ರಾತ್ರಿ ಹತ್ತು ಗಂಟೆಗೆ ಸಂಘ ಮುಗಿಸಿ ದಂಪತಿಗಳು ಬರುತ್ತಿದ್ದಾಗ, 4-5 ಮಂದಿ ಆವರಿಸಿ- ‘ಹಿಡಕಳ್ರಲಾ ಅವರನ್ನ, ಕ್ರಿಶ್ಚಿಯನ್ ಜಾತಿಗೆ ಸೇರಸಾಕೆ ಈಟೋತ್ನಾಗೆ ಬಂದವರೆ’ ಎಂದು ಹೊಡೆಯಲು ಬಂದಾಗ, ಅಲ್ಲೇ ಹೋಗುತ್ತಿದ್ದ ಕೆಲವರು- ‘ಇಲ್ಲ ಕಣ್ಲಾ ಇವ್ರು ನಮ್ ಸಂಘದ ಮೇಡಮ್ಮಾರು’ ಎಂದು ಬಿಡಿಸಿದ್ದನ್ನು ಕೇಳುವಾಗ- ಒಳ್ಳೆಯತನಕ್ಕೆ ಗೆಲುವಿದೆ ಎಂಬ ನಂಬಿಕೆ ಮೂಡುತ್ತದೆ.
ಇವರಿಬ್ಬರೂ ದೇಹದಾನ ಮಾಡಿ ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬುದನ್ನು ಸಾಬೀತು ಮಾಡಿರುವುದನ್ನು ನೋಡಿ, ಅನೇಕರು ತಮ್ಮ ದೇಹದಾನ ಮಾಡಲು ನಿರ್ಧರಿಸಿದ್ದಾರೆ. ಇಷ್ಟೆಲ್ಲಾ ಸಮಾಜಮುಖಿ ಕೆಲಸ ಮಾಡುವ ಇವರು ತಾನು ಮಾಡಿರುವುದಾಗಿ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಎಡಗೈಲಿ ಕೊಟ್ಟದ್ದು ಬಲಗೈಗೆ ತಿಳಿಯದಂತಿರುತ್ತಾರೆ. ಕೆಲವು ವರ್ಷಗಳ ಹಿಂದೆ, ಬೇಲೂರು ತಾಲೂಕು ಆಡಳಿತ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಬಿಟ್ಟರೆ, ಮುಂದೆ ಯಾರಿಂದಲೂ ಏನನ್ನೂ ಸ್ವೀಕರಿಸಿಲ್ಲ. ಜನರ ಪ್ರೀತಿ, ವಿಶ್ವಾಸ ಅವರಲ್ಲುಂಟಾಗುವ ಬದಲಾವಣೆಗಳೇ ನನಗೆ ಪ್ರಶಸ್ತಿ ಪುರಸ್ಕಾರಗಳೆನ್ನುತ್ತಾರೆ ಸೌಭಾಗ್ಯ. ಬೇಲೂರು ಪಟ್ಟಣ ಪಂಚಾಯಿತಿಯು ಪುರಸಭೆಗೆ ಇವರನ್ನು ನಾಮನಿರ್ದೇಶಿತ ಸದಸ್ಯೆಯಾಗಿ ಆಯ್ಕೆ ಮಾಡಿಕೊಂಡಿರುವುದರ ಹಿಂದೆ, ಇವರ ಶ್ರದ್ಧೆ, ಅಪಾರ ಜನಪ್ರಿಯತೆ ಕಾರಣವಾಗಿದೆ.
ಇದನ್ನು ಓದಿದ್ದೀರಾ?: ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ
ಇವರು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಂದು ಜನಿಸಿದ ವರವೋ, ಜನರ ಸೌಭಾಗ್ಯವೋ, ಬೇಲೂರಿನ ಸೌಭಾಗ್ಯವೋ- ಇರುವವರೆಗೆ ಏನಾದರೂ ಕೊಟ್ಟು ಹೋಗಬೇಕು, ಎಲ್ಲಾ ಬಿಟ್ಟು ಹೋಗಬೇಕು ಎಂಬ ನುಡಿಮುತ್ತಿನಂತೆ ಬದುಕುತ್ತಿದ್ದಾರೆ. ಇಷ್ಟೆಲ್ಲಾ ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದರೂ- ತಾನೇನು ದೊಡ್ಡ ಕೆಲಸ ಮಾಡಲಾಗಿಲ್ಲವೆಂಬ ಕೊರಗಿದೆ. ಈಗಲೂ ತಾನಳಿದ ಮೇಲೂ ಉಳಿಯಬಹುದಾದಂತಹ, ಜನರಿಗೆ ಉಪಯೋಗವಾಗುವ ಯಾವ ಕೆಲಸ ಮಾಡಬಹುದೆಂಬ ಹುಡುಕಾಟದಲ್ಲಿದ್ದಾರೆ. ತನ್ನದೆಲ್ಲವನ್ನು ಸಮಾಜಕ್ಕೆ ಸಮರ್ಪಿಸಲು ಬಯಸುವ, ಸಾರ್ಥಕ ಬದುಕಿನ ಸಾಧಕಿ ಸೌಭಾಗ್ಯ ಮೇಡಂ.
-ವನಜಾಕ್ಷಿ ಬೆಟ್ಟದಾಲೂರು





