ಹಾಸನ ಮಹಿಳಾ ದಿನಾಚರಣೆ | ಹೆಣ್ಣಿನ ಆತ್ಮಗೌರವದ ದಾಖಲೀಕರಣದ ಅನನ್ಯತೆ

Date:

'ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಹಾಸನ'ವು 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಬಾರಿ ಹಾಸನದಲ್ಲಿ 'ಮಹಿಳಾ ಚೈತನ್ಯ ದಿನ'ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಹೊರತರಲಾಗುತ್ತಿರುವ ಸಾಂದರ್ಭಿಕ ಗ್ರಂಥ 'ಹಾಸನ ಮಣ್ಣಿನ ಹೆಣ್ಣು ದನಿಗಳು' ಕೃತಿಗೆ ಸಾಹಿತಿ ಬಾನು ಮುಷ್ತಾಕ್ ಅವರು ಬರೆದ ಮುನ್ನುಡಿ ಇಲ್ಲಿದೆ.

ಹಾಸನ ಎಂದರೆ ಕೇವಲ ಶಿಲ್ಪಕಲೆಯ ಬೀಡಲ್ಲ ಮತ್ತು ಪ್ರವಾಸಿಗರ ಕಣ್ಮನ ತಣಿಸುವ ತಾಣ ಮಾತ್ರವಲ್ಲ. ಅದು ಕೆಚ್ಚೆದೆಯ ಹೆಣ್ಣುಮಕ್ಕಳನ್ನು ಹೆತ್ತ ಪುಣ್ಯಭೂಮಿ ಕೂಡ. ಈ ಮಣ್ಣಿನ ಸತ್ವದಲ್ಲೇ ಒಂದು ವಿಶಿಷ್ಟವಾದ ಗುಣವಿದೆ. ಇಲ್ಲಿನ ಗಾಳಿಯಲ್ಲಿ ಹೊಯ್ಸಳರ ಕಾಲದ ವೀರ ವನಿತೆಯರ ಸ್ಪಂದನವಿದೆ; ಹೊಲಗದ್ದೆಗಳಲ್ಲಿ, ತೋಟಗಳಲ್ಲಿ ದುಡಿಯುವ ತಾಯಂದಿರ ಬೆವರಿನ ಘಮವಿದೆ. ಹಾಸನ ಎಂಬುದು ಇತಿಹಾಸದ ಶಿಲಾಶಾಸನಗಳಲ್ಲಿ ಮಾತ್ರವಲ್ಲ, ಬದುಕಿನ ಉಸಿರಿನಲ್ಲಿ ಕೂಡ ಉಳಿದಿರುವ ಮಣ್ಣು. ‘ಹಾಸನ ಮಣ್ಣಿನ ಹೆಣ್ಣು ದನಿಗಳು’ ಎಂಬ ಕೃತಿ ಒಂದು ಸಾಂದರ್ಭಿಕ ಪುಸ್ತಕ ಮಾತ್ರವಲ್ಲ; ಅದು ಈ ನೆಲದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಸಾಂಸ್ಕೃತಿಕ ದಸ್ತಾವೇಜು. ಈ ಕೃತಿಗೆ ಮುನ್ನುಡಿ ಬರೆಯುವುದು ನನ್ನ ಪಾಲಿನ ಹೆಮ್ಮೆ ಮಾತ್ರವಲ್ಲ, ಈ ಮಣ್ಣಿನ ಮಗಳಾಗಿ ನನ್ನ ಕರ್ತವ್ಯವೂ ಹೌದು.

ನಮ್ಮ ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ಅನೇಕ ಮಹಿಳಾ ವ್ಯಕ್ತಿತ್ವಗಳು ಕಾಲದ ಗರ್ಭದಲ್ಲಿ ಮರೆಯಾಗಿರುವುದು ಗೋಚರಿಸುತ್ತದೆ. ಅನಾಮಿಕತೆಯ ಸುಳಿಯಲ್ಲಿ ಕರಗಿಹೋಗಿರುವ ಅನೇಕ ಜೀವಿತಗಳು ಮರೆಯಾಗಿ ಹೋಗಿವೆ. ಚರಿತ್ರೆಯು ಬಹುಪಾಲು ಪುರುಷಪ್ರಧಾನವಾಗಿ ದಾಖಲಿಸಲ್ಪಟ್ಟ ಕಾರಣದಿಂದ ಸಮಾಜವನ್ನು ಕಟ್ಟಿ ಬೆಳೆಸಿದ ಎಷ್ಟೋ ಸ್ತ್ರೀಯರ ಹೆಸರುಗಳು ಮತ್ತು ಸಾಧನೆಗಳು ಅಕ್ಷರ ರೂಪಕ್ಕೆ ಬರಲೇ ಇಲ್ಲ. ಆದರೆ ಈ ಕೃತಿ ಆ ಮರೆತುಹೋದ ಬೇರುಗಳನ್ನು ಅರಸಿ ಹೊರಟಿದೆ. ಮಣ್ಣಿನ ಆಳದಲ್ಲಿ ಮೌನವಾಗಿ ಅಡಗಿದ್ದು ಇಡೀ ಮರಕ್ಕೆ ಚೈತನ್ಯ ನೀಡುವ ಬೇರುಗಳಂತೆ ಈ ಮಹಿಳೆಯರು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆ. ಬೇರುಗಳನ್ನು ಗುರುತಿಸಿ ಇಂದಿನ ಚಿಗುರುಗಳೊಂದಿಗೆ ಬೆಸೆಯುವ ಮಹತ್ವದ ಕಾರ್ಯವನ್ನು ಈ ಗ್ರಂಥ ಸಾಧಿಸಿದೆ.

ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಾಸನ ಎನ್ನುವುದು ಕೇವಲ ಭೌಗೋಳಿಕ ಗಡಿಯ ಸೂಚಕವಲ್ಲ. ಇದು ಬೆಳೆಗಳ ಹಸಿರು, ಕಾಫಿ ತೋಟಗಳ ಸುವಾಸನೆ, ತೆಂಗಿನ ಮರಗಳ ಅದಮ್ಯ ಚೇತನ, ಹೊಯ್ಸಳರ ಶಿಲ್ಪಕಲೆಯ ಸೌಂದರ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ಮೃದು ಹರಿವುಗಳ ಸಾಂಸ್ಕೃತಿಕ ಸಂಕಲ್ಪ. ಈ ಮಣ್ಣಿನೊಳಗೆ ಆಳವಾಗಿ ಹರಡಿರುವುದು ಅನೇಕ ಮಹಿಳೆಯರ ಅಸಂಖ್ಯ ಹೆಜ್ಜೆಗಳು. ಮನೆಯೊಳಗೆ ಕುಟುಂಬವನ್ನು ರೂಪಿಸಿದವರು ಅವರು; ಹೊಲಗಳಲ್ಲಿ ಬೆವರಿನ ಮುತ್ತುಗಳಿಂದ ಅನ್ನವನ್ನು ಬೆಳೆದವರು, ಶಾಲೆಗಳಲ್ಲಿ ಅಕ್ಷರದ ದೀಪ ಹಚ್ಚಿದವರು, ಆಸ್ಪತ್ರೆಗಳಲ್ಲಿ ಸೇವೆಯ ಕರ್ತವ್ಯ ನಿರ್ವಹಿಸಿದವರು, ನ್ಯಾಯದ ಹಾದಿಯಲ್ಲಿ ಧ್ವನಿ ಎತ್ತಿದವರು ಈ ಧೀಮಂತ ಮಹಿಳೆಯರು. ಕಲೆ ಮತ್ತು ಸಾಹಿತ್ಯದ ವೇದಿಕೆಯಲ್ಲಿ ಸಮಾಜದ ಅಂತರಂಗವನ್ನು ಪ್ರತಿಬಿಂಬಿಸಿದವರು ಅವರು. ಆದರೆ ಈ ಎಲ್ಲಾ ಬದುಕುಗಳು ಸಮಾನವಾಗಿ ದಾಖಲಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.

ಇತಿಹಾಸದ ಪುಟಗಳಲ್ಲಿ ಮಹಿಳೆಯರ ಅನುಪಸ್ಥಿತಿಯು ಅವರ ಸೃಜನಶೀಲ ತೊಡಗುವಿಕೆಯ ನಿರಾಕರಣೆಯಾಗಿದೆ ಮತ್ತು ದುರುದ್ದೇಶಪೂರ್ವಕ ನಿರ್ಲಕ್ಷ್ಯದ ಫಲವಾಗಿದೆ. ಶತಶತಮಾನಗಳಿಂದ ಇತಿಹಾಸ ಬರೆಯುವ ಅಧಿಕಾರವು ಸಾಂಸ್ಕೃತಿಕ ಮತ್ತು ರಾಜಕೀಯ ಶಕ್ತಿಯ ಕೈಯಲ್ಲಿತ್ತು. ಯುದ್ಧಗಳು, ರಾಜಕೀಯ ಬದಲಾವಣೆಗಳು, ಆಡಳಿತದ ಸಾಧನೆಗಳು ಮೊದಲಾದವು ಮಾತ್ರ ಇತಿಹಾಸವೆಂದು ಪರಿಗಣಿಸಲ್ಪಟ್ಟವು. ಮನೆಯೊಳಗಿನ ಶ್ರಮ, ಆರೈಕೆಯ ಕರ್ತವ್ಯ, ಮೌಲ್ಯಗಳನ್ನು ಸಾಗಿಸುವ ಸಂಸ್ಕೃತಿ, ಮಕ್ಕಳ ಮನಸ್ಸುಗಳನ್ನು ರೂಪಿಸುವ ತಾಯಿಯ ಜ್ಞಾನ- ಇವೆಲ್ಲವನ್ನೂ ಆಕೆಯ ಸಹಜ ಕರ್ತವ್ಯವೆಂದು ಬದಿಗಿರಿಸಿ ಸಾಧನೆ ಎಂದು ಗುರುತಿಸಲಿಲ್ಲ.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಶಿಕ್ಷಣದ ಅವಕಾಶವಿಲ್ಲದೆ, ಆರ್ಥಿಕ ಸ್ವಾತಂತ್ರ್ಯದ ಕೊರತೆಯಲ್ಲಿ, ಸಾಮಾಜಿಕ ನಿರ್ಬಂಧಗಳ ಮಧ್ಯೆ ಬದುಕಿದ ಮಹಿಳೆಯರು ತಮ್ಮ ಕಥೆಯನ್ನು ತಾವೇ ಬರೆಯಲು ಸಾಧ್ಯವಾಗಲಿಲ್ಲ. ಅವರ ಅನುಭವಗಳು ಜನಪದ ಗೀತೆಗಳಲ್ಲಿ, ಹಬ್ಬಗಳ ಆಚರಣೆಗಳಲ್ಲಿ, ಮನೆಯ ಹಿರಿಯರ ಮಾತುಗಳಲ್ಲಿ ಉಳಿದವು; ಆದರೆ ಅಧಿಕೃತ ದಾಖಲಾತಿಗಳಲ್ಲಿ ಸ್ಥಾನ ಪಡೆಯಲಿಲ್ಲ. ಹೀಗಾಗಿ ಮಹಿಳೆಯರ ಇತಿಹಾಸ ಮೌನದ ಇತಿಹಾಸವಾಗಿ ಉಳಿಯಿತು.

ಇಂತಹ ಹಿನ್ನೆಲೆಯಲ್ಲಿ ‘ಹಾಸನ ಮಣ್ಣಿನ ಹೆಣ್ಣು ದನಿಗಳು’- ಕೃತಿ ಸಾಂಸ್ಕೃತಿಕ ಪುನರುತ್ಥಾನದ ಸಂಕೇತವಾಗಿ ಕಾಣುತ್ತದೆ. ಇದು ಕೇವಲ ಸಾಧಕರ ಪಟ್ಟಿ ಅಲ್ಲ; ಉದ್ದೇಶಪೂರ್ವಕ ಮರೆವಿನ ವಿರುದ್ಧದ ಪ್ರಜ್ಞಾಪೂರ್ವಕ ಹೋರಾಟ. ಬೇರುಗಳು ಗೋಚರಿಸುವುದಿಲ್ಲ; ಆದರೆ ಅವುಗಳಿಲ್ಲದೆ ಮರವು ಗಗನವನ್ನು ಚುಂಬಿಸುವುದಿಲ್ಲ. ಹಾಗೆಯೇ ಹಾಸನದ ಮಹಿಳೆಯರ ಮೌನ ಶ್ರಮವೇ ಈ ಜಿಲ್ಲೆಯ ಸಾಮಾಜಿಕ–ಸಾಂಸ್ಕೃತಿಕ ಕಟ್ಟಡದ ಆಧಾರ. ಅದಕ್ಕೆ ದನಿಯಾಗುವ ಪ್ರಾಮಾಣಿಕ ಪ್ರಯತ್ನ ಇಲ್ಲಿ ಎದ್ದು ತೋರುತ್ತದೆ.

ಈ ಕೃತಿ ಆ ಕಾಲದ ಸತ್ವಗಳಿಗೆ ಹೆಸರು ಕೊಡುತ್ತದೆ; ಮೌನ ಸಾಧನೆಗಳಿಗೆ ಶಬ್ದ ನೀಡುತ್ತದೆ; ಮರೆಯಾದ ಬದುಕಿಗೆ ಇತಿಹಾಸದ ಬೆಳಕು ಹರಡುತ್ತದೆ. ಹಿಂದಿನ ಸಾಧಕಿಯರ ಮತ್ತು ಇಂದಿನ ಪ್ರೇರಕ ಮಹಿಳೆಯರ ಜೀವನಗಾಥೆಗಳನ್ನು ಒಂದೇ ವಂಶವೃಕ್ಷದಂತೆ ಜೋಡಿಸುತ್ತದೆ. ಇಂದಿನ ಮಹಿಳಾ ಸಾಧಕರು ವಿಜ್ಞಾನ, ವೈದ್ಯಕೀಯ, ಆಡಳಿತ, ಕ್ರೀಡೆ, ಸಾಹಿತ್ಯ, ಉದ್ಯಮಶೀಲತೆ, ಸಾಮಾಜಿಕ ಸೇವೆ ಮುಂತಾದ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಅಸ್ತಿತ್ವವನ್ನು ದೃಢಪಡಿಸುತ್ತಿದ್ದಾರೆ. ಅವರ ಘೋಷಣೆಯ ಹಿಂದೆ ಹಿಂದಿನ ತಲೆಮಾರಿನ ಮಹಿಳೆಯರ ಮೌನ ಮತ್ತು ಸಹನೆಯ ಪ್ರತಿಧ್ವನಿಯಿದೆ. ಈ ಕೃತಿ ಕಾಲಘಟ್ಟಗಳನ್ನು ಸೇರಿಸುವ ಸೇತುವೆ. ಇದು ಪರಂಪರೆ ಮತ್ತು ಪ್ರಗತಿಯನ್ನು ಒಂದೇ ಮಣ್ಣಿನ ಎರಡು ಕವಲುಗಳೆಂದು ಪರಿಗಣಿಸುತ್ತದೆ.

ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

ಯಾವುದೇ ಒಂದು ನಾಡಿನ ಪ್ರಗತಿಯನ್ನು ಅಲ್ಲಿನ ಮಹಿಳೆಯರ ಸ್ಥಿತಿಗತಿಯ ಮೌಲ್ಯಮಾಪನದ ಮೂಲಕ ತಿಳಿಯಬಹುದು. ಈ ಹಿನ್ನೆಲೆಯಲ್ಲಿ ಹಾಸನದ ಮಹಿಳಾ ಶಕ್ತಿಯನ್ನು ದಾಖಲಿಸುವ ಪ್ರಯತ್ನಕ್ಕೆ ಮೂರು ಪ್ರಮುಖ ಆಯಾಮಗಳಿವೆ. ಸ್ಥಳೀಯ ಅಸ್ಮಿತೆಯ ಜಾಗೃತಿ ಕೂಡ ಮುಖ್ಯವಾಗುತ್ತಿದೆ. ಜಾಗತೀಕರಣದ ಅಬ್ಬರದಲ್ಲಿ ನಾವು ನಮ್ಮ ಇತಿಹಾಸ ಮತ್ತು ಸಾಧಕರನ್ನು ಮರೆಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹಾಸನದ ಪ್ರತಿ ಗ್ರಾಮದ ಕಣಕಣದಲ್ಲೂ ಇರುವ ಮಹಿಳಾ ಸಾಧನೆಯನ್ನು ಗುರುತಿಸುವುದು ನಮ್ಮ ಜಿಲ್ಲೆಯ ಆತ್ಮಗೌರವವನ್ನು ಎತ್ತಿಹಿಡಿಯುವ ಕೆಲಸವಾಗಿದೆ. ಹಿಂದಿನ ತಲೆಮಾರಿನ ಸಾಧಕಿಯರಲ್ಲಿದ್ದ ತಾಳ್ಮೆ, ಸೌಜನ್ಯ ಹಾಗೂ ಆಧುನಿಕ ಯುಗದ ಸ್ತ್ರೀಯಲ್ಲಿರುವ ತಾಂತ್ರಿಕ ವೇಗ ಮತ್ತು ಬೌದ್ಧಿಕ ಚುರುಕುತನವನ್ನು ಈ ಚಿಂತನೆಗಳು ಪರಸ್ಪರ ಇಲ್ಲಿ ಸಂಧಿಸುವಂತೆ ಮಾಡಿವೆ. ಇದು ಹಳೆಯ ಬೇರು ಮತ್ತು ಹೊಸ ಚಿಗುರಿನ ಸುಂದರ ಸಂಗಮವಾಗಿದೆ. ಹಾಗೂ ಮುಂಬರುವ ಹೆಣ್ಣುಮಕ್ಕಳಿಗೆ ತಮ್ಮ ನೆಲದ ಶಕ್ತಿಯನ್ನು ಮನವರಿಕೆ ಮಾಡಿಕೊಡುವ ಕೈಪಿಡಿಯಾಗಿದೆ.

ಮಹಿಳೆಯರ ಇತಿಹಾಸವನ್ನು ದಾಖಲಿಸುವುದು ಕೇವಲ ಭೂತಕಾಲದ ಸ್ಮರಣೆ ಅಲ್ಲ; ಅದು ನ್ಯಾಯದ ಮರುಸ್ಥಾಪನೆ. ಒಬ್ಬ ಮಹಿಳೆಯ ಬದುಕಿನ ಹೋರಾಟ ದಾಖಲಾದಾಗ ಆಕೆಯ ಶ್ರಮಕ್ಕೆ ಗುರುತು ಸಿಗುತ್ತದೆ. ಮಾನ್ಯತೆ ಪಡೆದ ಶ್ರಮ ಆತ್ಮಗೌರವವನ್ನು ಹೆಚ್ಚಿಸುತ್ತದೆ; ಆತ್ಮಗೌರವವೇ ಮುಕ್ತಿಯ ಮೊದಲ ಹೆಜ್ಜೆ. ಈ ಗ್ರಂಥದ ಬಿಡುಗಡೆ ಕೂಡ ಒಂದು ರೂಪಕ. ಇದು ಕೇವಲ ಪುಸ್ತಕದ ಅನಾವರಣವಲ್ಲ; ಬಂಧಿತ ಕಥೆಗಳ ಬಿಡುಗಡೆ. ಒಂದು ಬಾರಿ ಮಹಿಳೆಯ ಹೋರಾಟ ಮತ್ತು ಪ್ರತಿರೋಧದ ಕಥೆ ಸಾರ್ವಜನಿಕ ವೇದಿಕೆಗೆ ಬಂದರೆ ಅದು ಸಮಾಜದ ಮನೋಭಾವವನ್ನು ಪ್ರಶ್ನಿಸುತ್ತದೆ. ‘ಸಾಧನೆ’ ಎಂಬ ಪದದ ಅರ್ಥವನ್ನು ಮರು ಮೌಲ್ಯ ಮಾಡಲು ಒತ್ತಾಯಿಸುತ್ತದೆ; ಮನೆ ಮತ್ತು ಹೊರಜಗತ್ತು ಎಂಬ ಕೃತಕ ವಿಭಜನೆಗಳನ್ನು ತೊಡೆದುಹಾಕುತ್ತದೆ. ಪುಸ್ತಕ ಬಿಡುಗಡೆ ಒಂದು ಸಾಂಸ್ಕೃತಿಕ ವಿಧಿ. ಆದರೆ ಈ ವಿಧಿ ಮಹಿಳೆಯರ ಬಿಡುಗಡೆಯ ಹಾದಿಯಲ್ಲಿ ಒಂದು ಸಂಕೇತಾತ್ಮಕ ಹೆಜ್ಜೆ. ಏಕೆಂದರೆ ಓದಿಸಿಕೊಂಡು ಹೆಸರು ಪಡೆದ ಕಥೆ ಮತ್ತೆ ಮೌನವಾಗುವುದಿಲ್ಲ. ಇತಿಹಾಸದಲ್ಲಿ ಸ್ಥಾನ ಪಡೆದ ಜೀವನ ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತದೆ. ಒಬ್ಬ ಮಹಿಳೆ ಈ ಪುಸ್ತಕದ ಒಳಗನ್ನು ಅರಿತಾಗ ‘ನನಗೂ ಸಾಧ್ಯ’ ಎಂಬ ವಿಶ್ವಾಸ ಅವಳ ಅಂತರಂಗದಲ್ಲಿ ನೆಲೆಯಾಗುತ್ತದೆ. ಒಬ್ಬ ಯುವಕ ಇದನ್ನು ಓದಿದಾಗ ‘ಸಮಾನತೆ ನನ್ನ ಹೊಣೆಗಾರಿಕೆ’ ಎಂಬ ಅರಿವು ಅವನ ಮನದಲ್ಲಿ ಮೂಡುತ್ತದೆ.

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಕಳೆದ 13 ವರ್ಷಗಳಿಂದ ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಮಹಿಳಾ ದಿನವನ್ನು ಆಚರಿಸುತ್ತಿದ್ದು, ಈ ವರ್ಷ ಹಾಸನ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದೆ. ಮಾರ್ಚ್ 7 ಮತ್ತು 8ರಂದು ಬೃಹತ್ ಮಹಿಳಾ ಸಮಾವೇಶವನ್ನು ಹಾಸನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದು ಕೇವಲ ಒಂದೆರಡು ದಿನದ ಆಚರಣೆ ಮಾತ್ರವಲ್ಲ; ಅದು ಆತ್ಮಪರಿಶೀಲನೆಯ ಕ್ಷಣ. ಈ ಸಂದರ್ಭದಲ್ಲಿ ಕೃತಿಯು ಪ್ರಕಟಗೊಳ್ಳುತ್ತಿರುವುದು ‘ಹಿಸ್ ಸ್ಟೋರಿ’ಗೆ ಪರ್ಯಾಯವಾಗಿ ‘ಹರ್ ಸ್ಟೋರಿ’ ಕಟ್ಟಿಕೊಡುವ ಧೀಮಂತ ಪ್ರಕ್ರಿಯೆಯಾಗಿದೆ. ನಮ್ಮ ಸಮಾಜದಲ್ಲಿ ಇನ್ನೂ ಅಸಮಾನತೆಗಳಿವೆ, ತಾರತಮ್ಯವಿದೆ, ದೌರ್ಜನ್ಯವಿದೆ. ಆದರೆ ಇಲ್ಲಿ ದಾಖಲಾದ ಪ್ರತಿಯೊಂದು ಜೀವನಾನುಭವವು ಅಸಮಾನತೆಗಳ ವಿರುದ್ಧದ ಮೌನ ಪ್ರತಿರೋಧವಾಗಿದೆ. ಈ ಕೃತಿ ಕೇವಲ ಸ್ಮರಣಿಕೆ ಅಲ್ಲ; ಇದು ಸಾಮಾಜಿಕ ಜಾಗೃತಿಯ ದೀಪ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭವು ಸ್ತ್ರೀಶಕ್ತಿಯ ಆತ್ಮಾವಲೋಕನಕ್ಕೆ, ಸಂಭ್ರಮಕ್ಕೆ ಒಂದು ವೇದಿಕೆಯಾಗಿದೆ. ಆ ನೆವದಲ್ಲೇ ಈ ಕೃತಿ ಬಿಡುಗಡೆಯಾಗುತ್ತಿದೆ. ನಿಜಕ್ಕೂ ಇದು ಸಾಂಕೇತಿಕ ಮಾತ್ರವಲ್ಲ, ಅರ್ಥಪೂರ್ಣ ಕೂಡ.

ಹಾಗೇ ಇದು ಕೇವಲ ಒಂದು ಪುಸ್ತಕದ ಪೂರ್ಣತೆ ಅಲ್ಲ. ಒಂದು ಮೌನ ಇತಿಹಾಸದ ನ್ಯಾಯಪ್ರಾಪ್ತಿ. ಹಾಸನದ ಮಣ್ಣಿನಲ್ಲಿ ಅನೇಕ ದಶಕಗಳಿಂದ ಬೇರು ಬಿಟ್ಟಿದ್ದ ಮಹಿಳಾ ಶ್ರಮಕ್ಕೆ ಈಗ ಶಬ್ದ ಸಿಕ್ಕಿದೆ, ರೂಪ ಸಿಕ್ಕಿದೆ, ಗೌರವ ಸಿಕ್ಕಿದೆ. ದಾಖಲಾಗದ ಬದುಕುಗಳು ಈಗ ದಾಖಲೆಯಾದವು; ಹೆಸರು ಇಲ್ಲದ ಸಾಧನೆಗಳು ಈಗ ಹೆಸರು ಪಡೆದವು. ಎಷ್ಟೊಂದು ಕ್ಷೇತ್ರಗಳಲ್ಲಿ ಹೆಣ್ಣು ತೊಡಗಿಕೊಂಡಿದ್ದರೂ ಅದು ಗೋಚರಿಸುತ್ತಿರಲಿಲ್ಲ. ಈಗ ಎದ್ದು ತೋರುವಂತಾಯ್ತು. ಈ ಕೃತಿ ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ: ಮಹಿಳೆಯರ ಇತಿಹಾಸವನ್ನು ಬರೆಯುವುದು ಅಂದರೆ ಸಮಾಜದ ಅರ್ಧ ಆತ್ಮವನ್ನು ಮರುಪಡೆಯುವುದು! ಮಹಿಳೆಯರ ಶ್ರಮ ಮತ್ತು ಸಾಧನೆಗಳನ್ನು ಮಾನ್ಯಗೊಳಿಸಿದಾಗ ಮಾತ್ರ ಸಮಾಜದ ಇತಿಹಾಸ ಸಂಪೂರ್ಣವಾಗುತ್ತದೆ.

ಇದನ್ನು ಓದಿದ್ದೀರಾ?: ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದೆ- ದಾಕ್ಷಾಯಿಣಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಚೌಕಟ್ಟಿನಲ್ಲಿ ಈ ಕೃತಿ ವಿಶೇಷ ಅರ್ಥ ಪಡೆಯುತ್ತದೆ. ಮಹಿಳಾ ದಿನವೆಂದರೆ ಕೇವಲ ಗೌರವ ಸಮಾರಂಭವಲ್ಲ; ಅದು ಸಮಾನತೆಯತ್ತ, ನ್ಯಾಯದತ್ತ, ಅವಕಾಶಗಳ ಸಮಾನ ಹಂಚಿಕೆಯತ್ತ ಸಾಮೂಹಿಕ ಪ್ರತಿಜ್ಞೆ ಮಾಡುವ ಕ್ಷಣ. ಇಂತಹ ದಿನದಲ್ಲಿ ಕೇವಲ ಒಂದು ತಿಂಗಳ ಒಳಗೆ ಸ್ಥಳೀಯ ಮಹಿಳೆಯರು, ಪುರುಷರೊಡಗೂಡಿ ತಮ್ಮದೇ ಜಿಲ್ಲೆಯ ಸಾಧಕಿಯರ, ವಿವಿಧ ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೇ ತೊಡಗಿದ್ದ ಮಹಿಳಾ ಬದುಕುಗಳನ್ನು, ಸಾಮುದಾಯಿಕ, ಸಂಘಟನಾತ್ಮಕ, ಸಾಂಸ್ಥಿಕ ಹೆಣ್ಣಿನ ಸಾರಸತ್ವವನ್ನು ಸಂಗ್ರಹಿಸಿ, ಸಂಶೋಧಿಸಿ, ದಾಖಲಿಸಿ ಪುಸ್ತಕ ರೂಪದಲ್ಲಿ ಸಮಾಜಕ್ಕೆ ಅರ್ಪಿಸಿರುವುದು ಒಂದು ಅಪರೂಪದ ಸಾಂಸ್ಕೃತಿಕ ಕ್ರಾಂತಿ! ಇದು ಜಾಗತಿಕ ಮಹಿಳಾ ಹೋರಾಟದ ಮೌಲ್ಯಗಳನ್ನು ಸ್ಥಳೀಯ ನೆಲೆಯೊಂದಿಗೆ ಜೋಡಿಸುವ ಕಾರ್ಯ. ಈ ಪುಸ್ತಕವನ್ನು ರೂಪಿಸಿದ ಮಹಿಳೆಯರ ಶ್ರಮಕ್ಕೆ, ಜೊತೆಗೂಡಿದ ಪುರುಷರ ಸಹಕಾರ, ಸ್ನೇಹವು ಕೂಡಿಯೇ ಮಹಿಳಾ ದಿನದ ನಿಜವಾದ ಅರ್ಥ, ಸ್ಮರಣೆ, ಮಾನ್ಯತೆ ಮತ್ತು ಮುಕ್ತಿಯ ಹಾದಿಯಲ್ಲಿ ಸಮೂಹ ಹೆಜ್ಜೆಯಾಗಿದೆ.

ಈ ಲೇಖನ ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ  

ಈ ಕೃತಿ ಹಾಸನದ ಮಣ್ಣಿನ ಹೆಣ್ಣುಮಕ್ಕಳ ಮತ್ತು ಇಡೀ ಕರ್ನಾಟಕದ ಮಹಿಳೆಯರ ಆತ್ಮಗೌರವಕ್ಕೆ ಸಾಕ್ಷಿಯಾಗಲಿ. ಈ ಬೆಳಕು ಇನ್ನಷ್ಟು ವಿಶಾಲವಾಗಿ ಹರಡಿ ಹೊಸ ಕನಸುಗಳಿಗೆ ಜನ್ಮ ನೀಡಲಿ. ಈ ದಾಖಲಾತಿ ಮುಂದಿನ ಪೀಳಿಗೆಗೆ ದಾರಿಯಾಗಲಿ.

-ಬಾನು ಮುಷ್ತಾಕ್

download 14
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...