ಹಾಥ್ರಸ್‌ ಅತ್ಯಾಚಾರ | ರಾತ್ರೋರಾತ್ರಿ ದಲಿತ ಯುವತಿಯ ಶವ ಸುಟ್ಟಿದ್ದ ಪೊಲೀಸರು; ನ್ಯಾಯ ಇಂದಿಗೂ ಮರೀಚಿಕೆ!

Date:

ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದು ಐದು ವರ್ಷಗಳಾಗಿವೆ. ಆದರೆ ಸಂತ್ರಸ್ತೆಯ ಕುಟುಂಬ ಇಂದಿಗೂ ಮೇಲ್ಜಾತಿ ಎನಿಸಿಕೊಂಡವರಿಂದ ಉಂಟಾಗುವ ಪ್ರಾಣಾಪಾಯದ ಆತಂಕದಲ್ಲಿಯೇ ಇದೆ. ಸರ್ಕಾರಿ ಉದ್ಯೋಗ, ಹಥ್ರಾಸ್‌ನಲ್ಲಿ ಮನೆ ನೀಡುವ ಸರ್ಕಾರದ ಭರವಸೆ ಲಿಖಿತವಾಗಿಯೇ ಉಳಿದಿದೆ.

2020ರ ಸೆಪ್ಟೆಂಬರ್‌ ತಿಂಗಳ ಕೊನೆಯ ದಿನವದು. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 19 ವರ್ಷದ ದಲಿತ ಯುವತಿಯ ಮೃತದೇಹವನ್ನು ಅಧಿಕಾರಿಗಳು ಬಲವಂತವಾಗಿ ಸುಟ್ಟುಹಾಕಿ ಸಾಕ್ಷಿಯನ್ನೇ ನಾಶ ಮಾಡಿದ್ದರು. ಈ ಸುದ್ದಿ ಜಾಗತಿಕವಾಗಿ ಆಕ್ರೋಶಕ್ಕೆ ಕಾರಣವಾಗಿತ್ತು. ಮೇಲ್ಜಾತಿಯ ನಾಲ್ವರು ಪುರುಷರ ಕ್ರೌರ್ಯಕ್ಕೆ ಒಳಗಾದ ದಲಿತ ಯುವತಿ ತೀವ್ರ ಗಾಯಗೊಂಡು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಕೊನೆಗೆ ಬಾಲಕಿಯ ಮೃತದೇಹದ ಅಂತ್ಯಸಂಸ್ಕಾರವನ್ನೂ ಕುಟುಂಬದ ನಂಬಿಕೆ ಪ್ರಕಾರವಾಗಿ ನಡೆಸುವ ಅವಕಾಶವನ್ನು ಪೊಲೀಸರು ಮತ್ತು ಈ ಮೇಲ್ಜಾತಿ ಎನಿಸಿಕೊಂಡವರು ನೀಡಿರಲಿಲ್ಲ.

ಈ ಘಟನೆ ನಡೆದಿದ್ದು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ. ಯೋಗಿ ನಾಡಿನಲ್ಲಿ ಕಡೆ ಪಕ್ಷ ಅತ್ಯಾಚಾರಕ್ಕೆ ಒಳಗಾದ ಯುವತಿಯ ಮುಖ ನೋಡುವ ಅವಕಾಶವನ್ನೂ ಕುಟುಂಬಸ್ಥರಿಗೆ ನೀಡಿರಲಿಲ್ಲ. ರಾತ್ರೋರಾತ್ರಿ 2:30ರ ಸುಮಾರಿಗೆ ಆಕೆಯ ಅಂತ್ಯಕ್ರಿಯೆಯನ್ನು ಪೊಲೀಸರು ಕದ್ದುಮುಚ್ಚಿ ಮಾಡಲು ಮುಂದಾಗಿದ್ದರು. ಬಲಾಢ್ಯರು, ಪೊಲೀಸರು ಜತೆಯಾಗಿ ದಲಿತ ಕುಟುಂಬವನ್ನು ಎಷ್ಟೊಂದು ತುಳಿಯುತ್ತಿದ್ದಾರೆ ಎಂಬ ವಾಸ್ತವವನ್ನು ಈ ಘಟನೆ ಜಗತ್ತಿಗೆ ಬಿಚ್ಚಿಟ್ಟಿತ್ತು.

ಇದನ್ನು ಓದಿದ್ದೀರಾ? ಉತ್ತರಪ್ರದೇಶ | ಹೆಚ್ಚುತ್ತಲೇ ಇದೆ ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯ; ಕಣ್ಣು-ಕಿವಿ -ಬಾಯಿ ಮುಚ್ಚಿ ಕೂತ ಯೋಗಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2020ರ ಸೆಪ್ಟೆಂಬರ್ 29ರಂದು ಬೆಳಿಗ್ಗೆ ಸುಮಾರು 6:55ಕ್ಕೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಯುವತಿ ಸಾವನ್ನಪ್ಪಿದ್ದಳು. ಬೆಳಿಗ್ಗೆ 9 ಗಂಟೆ ಸುಮಾರಿಗೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿತ್ತು. ಅದಕ್ಕಾಗಿ ಪೊಲೀಸರು ಕುಟುಂಬಸ್ಥರಿಂದ ಕೆಲವು ಕಾಗದಗಳಿಗೆ ಸಹಿ ಮಾಡಿಸಿದ್ದರು. ಅಂದೇ ಕುಟುಂಬಸ್ಥರು ಯುವತಿಯ ಮೃತದೇಹವನ್ನು ಕಡೆಯದಾಗಿ ನೋಡಿದ್ದರು. ಯುವತಿ ಮೃತಪಟ್ಟ ಕೆಲವು ಗಂಟೆಗಳ ನಂತರ ಮೃತದೇಹ ಯಾವಾಗ ಪಡೆಯಬಹುದು ಎಂದು ಪರಿಶೀಲಿಸಲು ಕುಟುಂಬಸ್ಥರು ವಿಧಿವಿಜ್ಞಾನ ವಿಭಾಗಕ್ಕೆ ಹೋದಾಗ, ಪೊಲೀಸರು ಮತ್ತು ಅಧಿಕಾರಿಗಳು ಉಡಾಫೆಯ ಉತ್ತರ ನೀಡಿದ್ದರು. ಮೃತದೇಹ ನೋಡಲು ಅವಕಾಶವೂ ನೀಡಿರಲಿಲ್ಲ.

ಈ ನಡುವೆ ಕೆಲವರು ಮೃತದೇಹವನ್ನು ಈಗಾಗಲೇ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರೆ, ಇನ್ನೂ ಕೆಲವರು ಮೃತದೇಹ ನೋಯ್ಡಾ (ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಪಟ್ಟಣ) ತಲುಪಿದೆ ಎನ್ನುತ್ತಿದ್ದರು. ಇನ್ನೊಬ್ಬರು ಈಗಾಗಲೇ ಮೃತದೇಹ ಹಥ್ರಾಸ್‌ನಲ್ಲಿದೆ ಎನ್ನುತ್ತಿದ್ದರು. ಒಟ್ಟಿನಲ್ಲಿ ಕುಟುಂಬದ ಅನುಮತಿಯಿಲ್ಲದೆಯೇ ಮೃತದೇಹವನ್ನು ಪೊಲೀಸರೇ ಸಾಗಿಸಿದ್ದರು. ಹೀಗೆ ಅನುಮತಿ ಪಡೆಯದೆ ಮೃತದೇಹ ಹೇಗೆ ಸಾಗಿಸಿದ್ದೀರಿ ಎಂಬ ಕುಟುಂಬಸ್ಥರ ಪ್ರಶ್ನೆಗೆ ಯಾವುದೇ ಉತ್ತರವಿರಲಿಲ್ಲ. ಅಷ್ಟರಲ್ಲೇ ಈ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಲು ಆರಂಭವಾಗಿತ್ತು.

ಆಕ್ರೋಶಗೊಂಡ ದಲಿತ ಯುವತಿಯ ಸಂಬಂಧಿಕರು ಅಂತ್ಯಸಂಸ್ಕಾರ ನಡೆಸಲು ಮೃತದೇಹವನ್ನು ತಮಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಆಸ್ಪತ್ರೆಯ ಹೊರಗೆ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಈ ಹೋರಾಟಕ್ಕೆ ದಲಿತರ ಹಕ್ಕುಗಳಿಗಾಗಿ ಹೋರಾಡುವ ಭೀಮ್ ಆರ್ಮಿಯ ಕಾರ್ಯಕರ್ತರೂ ಜತೆಯಾದರು. ರಾಜಕೀಯವಾಗಿ ಈ ಪ್ರಕರಣ ಮುನ್ನೆಲೆಗೆ ಬಂತು. ಈ ನಡುವೆ ಕೆಲವು ಕುಟುಂಬಸ್ಥರು ಗ್ರಾಮಕ್ಕೆ ತೆರಳಿದ್ದರು. ಅದಾಗಲೇ ಮೃತ ಸಂತ್ರಸ್ತೆಯ ಮನೆಯ ಹೊರಗಡೆ ಪತ್ರಕರ್ತರು, ರಾಜಕಾರಣಿಗಳು ತುಂಬಿದ್ದರು.

ರಾತ್ರಿ 9:30ರ ಸುಮಾರಿಗೆ ಮೃತ ಯುವತಿಯ ಸಹೋದರ, ತಂದೆ ಪ್ರಯಾಣಿಸುತ್ತಿದ್ದ ಎಸ್‌ಯುವಿಯನ್ನು ತಡೆದಿದ್ದ ಪೊಲೀಸರು ಬಲವಂತವಾಗಿ 200 ಕಿಮೀ (125 ಮೈಲಿ) ದೂರದಲ್ಲಿರುವ ತಮ್ಮ ಗ್ರಾಮಕ್ಕೆಯೇ ಕರೆದೊಯ್ದಿದ್ದರು. “ದಾರಿಯಲ್ಲಿ, ನಮ್ಮ ಕಾರನ್ನು ತಡೆಯಲಾಯಿತು. ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ನಮ್ಮೊಂದಿಗೆ ಮಾತನಾಡಲು ಬಂದರು. ಹಾಥ್ರಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷಕರ್ ಕೂಡ ಇದ್ದರು. ನಮ್ಮನ್ನು ನೇರವಾಗಿ ಸ್ಮಶಾನಕ್ಕೆ ಕರೆದೊಯ್ಯಲಾಗುವುದು ಎಂದು ಹೇಳಿದ್ದರು. ಮೃತದೇಹ ಎಲ್ಲಿದೆ ಅಥವಾ ಆಂಬ್ಯುಲೆನ್ಸ್ ಆಸ್ಪತ್ರೆಯಿಂದ ಎಷ್ಟು ಗಂಟೆಗೆ ಹೊರಟಿತು ಎಂಬ ಯಾವ ಮಾಹಿತಿಯೂ ನಮಗೆ ಇರಲಿಲ್ಲ” ಎಂದು ಸಹೋದರ ಮಾಧ್ಯಮಗಳ ಮುಂದೆ ತಮಗಾದ ಗೊಂದಲ, ನೋವು ತೋಡಿಕೊಂಡಿದ್ದರು.

ಈ ನಡುವೆ ಮಾಧ್ಯಮಗಳು ಹಾಥ್ರಸ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ವೀರ್ ಅವರನ್ನು ಸಂಪರ್ಕಿಸಿದಾಗ, ಅವರು ಮಧ್ಯಾಹ್ನ 1 ಗಂಟೆಗೆ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಆದರೆ ಕೆಲವು ಕಾರಣಗಳಿಂದ ಆಕೆಯ ಮೃತದೇಹವನ್ನು ತಕ್ಷಣವೇ ಕುಟುಂಬಕ್ಕೆ ಹಸ್ತಾಂತರಿಸಲಾಗದು ಎಂದಿದ್ದರು. ಇತ್ತ ಕುಟುಂಬವು ಯುವತಿಯ ಮುಖವನ್ನು ಕೊನೆಯದಾಗಿ ನೋಡಲು, ತಮ್ಮ ನಂಬಿಕೆಯ ಪ್ರಕಾರವಾಗಿ ಅಂತಿಮ ವಿಧಿವಿಧಾನ ಮಾಡಲು ಕಾಯುತ್ತಿರುವಾಗ ಪೊಲೀಸರು ಮತ್ತು ಅಧಿಕಾರಿಗಳು ತಡರಾತ್ರಿ ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದರು. ತಡರಾತ್ರಿಯೇ ಮೃತದೇಹ ಸುಡಲು ಮರದ ದಿಮ್ಮಿಗಳನ್ನು, ಇಂಧನ ತರಲಾಗಿತ್ತು. ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಯಾವುದೇ ಕುಟುಂಬ ಸದಸ್ಯರಿಗೆ ನೋಡುವ ಅವಕಾಶ ನೀಡದೆಯೇ ಅಂತ್ಯಸಂಸ್ಕಾರವನ್ನು ನಡುರಾತ್ರಿ ಪೊಲೀಸರು ಮಾಡಿದ್ದರು.

hathras 1
ರಾತ್ರೋರಾತ್ರಿ ಯುವತಿಯ ಅಂತ್ಯಸಂಸ್ಕಾರ ನಡೆಸುತ್ತಿರುವ ಪೊಲೀಸರು

ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. “ನಮ್ಮ ಪದ್ಧತಿ ಪ್ರಕಾರ ದಹನ ಮಾಡುವುದಿಲ್ಲ. ಆದರೆ ನಮ್ಮ ಆಚರಣೆಗೆ ವಿರುದ್ಧವಾಗಿ, ನಾವು ಇಲ್ಲದೆಯೇ ಅಂತ್ಯಕ್ರಿಯೆ ನಡೆಸಲಾಗಿದೆ. ನಮಗೆ ಕನಿಷ್ಠ ಮುಖವನ್ನು ನೋಡಲು ಅವಕಾಶ ನೀಡಿಲ್ಲ” ಎಂದು ಸಹೋದರ, ಅತ್ತಿಗೆ ಕಣ್ಣೀರು ಹಾಕಿದ್ದರು.

ಅಧಿಕಾರಿಗಳು ನಡುರಾತ್ರಿಯೇ ಚಿತೆಗೆ ಬೆಂಕಿ ಇಡಲು ಕುಟುಂಬವನ್ನು ಮನವೊಲಿಸುವ ಪ್ರಯತ್ನವೂ ಮಾಡಿದ್ದರು. ಆದರೆ ಆ ರಾತ್ರಿ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡುವ ಅಗತ್ಯವೇನು ಪ್ರಶ್ನೆಗೆ ಉತ್ತರವೇ ಇಲ್ಲ. ಕುಟುಂಬದ ಮಹಿಳೆಯರೂ ಅಧಿಕಾರ ಪಾದಕ್ಕೆ ಬಿದ್ದು ಆಚರಣೆಗಳನ್ನು ಮಾಡಲು ಅವಕಾಶ ನೀಡುವಂತೆ ಬೇಡಿಕೊಂಡಿದ್ದರು. ಆದರೆ ಅಧಿಕಾರಿಗಳು ಮಾತ್ರ ತಾವು ಸಿದ್ಧಪಡಿಸಿದ ಚಿತೆಗೆ ಬೆಂಕಿ ಇಡಲು ಬರುವಂತೆ ಕುಟುಂಬಸ್ಥರನ್ನು ಒತ್ತಾಯಿಸುತ್ತಿದ್ದರು. ಹಗಲಲ್ಲಿ ತಮ್ಮ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಬೇಕೆಂಬ ಪಟ್ಟು ಹಿಡಿದ ಕುಟುಂಬ ಮನೆಯಲ್ಲಿ ಇರುವಾಗಲೇ ಬೆಳಗಿನ ಜಾವ 2:30ರ ಸುಮಾರಿಗೆ ಪೊಲೀಸರೇ ಚಿತೆಗೆ ಬೆಂಕಿ ಇಟ್ಟಿದ್ದರು. ಅಷ್ಟು ಮಾತ್ರವಲ್ಲದೆ ಗ್ರಾಮಸ್ಥರು, ಪತ್ರಕರ್ತರು ಬರದಂತೆ ಪೊಲೀಸರು ಅಡ್ಡಲಾಗಿ ನಿಂತಿದ್ದರು.

ಈ ಕೃತ್ಯ ವಿಶ್ವದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಯಿತು. ಪುರಾವೆ ನಾಶಪಡಿಸಲೆಂದೇ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಹಲವರು ಆರೋಪಿಸಿದರು. ಇದು ಮಾನವ ಹಕ್ಕುಗಳ ಉಲ್ಲಂಘನೆ, ಕಾನೂನುಬಾಹಿರ ಎಂದು ವಿಪಕ್ಷಗಳು ಬೀದಿಗಳಿದು ಪ್ರತಿಭಟಿಸಿತು. ವಿಶ್ವಸಂಸ್ಥೆಯೂ ಸಹ ಈ ಘಟನೆಗೆ ಪ್ರತಿಕ್ರಿಯಿಸಿತು. ಭಾರತದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮುಂದುವರಿದಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಇವೆಲ್ಲ ಒತ್ತಡದ ಬಳಿಕ ಪೊಲೀಸ್ ಅಧಿಕಾರಿ ಎಸ್‌ಎಚ್‌ಒ (SHO) ದಿನೇಶ್ ಕುಮಾರ್ ವರ್ಮಾ ಮೇಲೆ ಕ್ರಮಕೈಗೊಳ್ಳಲಾಗಿತ್ತು.

ಇದನ್ನು ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ನಿದ್ದೆಯಿಂದ ಎದ್ದಿರುವ ನ್ಯೂಸ್ ಚಾನೆಲ್ ಒಕ್ಕೂಟ ಮರ್ಯಾದೆ ಉಳಿಸಿಕೊಳ್ಳಲಿ

ಆದರೆ ಸಂತ್ರಸ್ತ ಕುಟುಂಬದ ಜತೆ ನಿಲ್ಲಬೇಕಾದ ಸರ್ಕಾರ ಮಾತ್ರ ನಿಂತಿದ್ದು ಮೇಲ್ಜಾತಿ ಎನಿಸಿಕೊಂಡವರ ಪರವಾಗಿ. ಜಾತಿ ಆಧಾರಿತ ಹಿಂಸಾಚಾರ ನಡೆಯಬಹುದು ಎಂಬ ಕಾರಣಕ್ಕೆ ರಾತ್ರೋರಾತ್ರಿ ಅಂತ್ಯಸಂಸ್ಕಾರ ಮಾಡಿದೆವು ಎಂಬ ಕುಂಟು ನೆಪವನ್ನು ಉತ್ತರ ಪ್ರದೇಶದ ಯೋಗಿ ಸರ್ಕಾರ ನೀಡಿತ್ತು. ಅಷ್ಟು ಮಾತ್ರವಲ್ಲದೆ ಇದು ನಮ್ಮ ಸರ್ಕಾರವನ್ನು ಉರುಳಿಸಲು ನಡೆಸಿರುವ ಅಂತಾರಾಷ್ಟ್ರೀಯ ಪಿತೂರಿ ಎಂಬ ಕಥೆಯನ್ನೂ ಯೋಗಿ ಕಟ್ಟಿದ್ದರು. ಇವೆಲ್ಲವುದರ ವರದಿ ಮಾಡಲು ಹೋದ ಪತ್ರಕರ್ತರ ಬಂಧನವೂ ನಡೆಯಿತು. ಯುಎಪಿಎ ಪ್ರಕರಣ ದಾಖಲಿಸಿ ಎರಡು ವರ್ಷಗಳ ಕಾಲ ಕೇರಳದ ಪ್ರತಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಜೈಲಿನಲ್ಲಿಡಲಾಗಿತ್ತು.

ಆರಂಭದಲ್ಲಿ ಸಾಕ್ಷಿ ನಾಶ ಮಾಡಿರುವ ಉತ್ತರ ಪ್ರದೇಶ ಪೊಲೀಸರೇ ಈ ತನಿಖೆ ನಡೆಸಿದ್ದರು. ಅದಾದ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಿತ್ತು. 2023ರ ಮಾರ್ಚ್‌ನಲ್ಲಿ ಪ್ರಮುಖ ಆರೋಪಿ ಸಂದೀಪ್ ಸಿಸೋಡಿಯಾನನ್ನು ‘ಜೀವಾವಧಿ ಶಿಕ್ಷೆ’ಗೆ ಗುರಿಪಡಿಸಲಾಯಿತು. ಆದರೆ ಆತನಿಗೆ ಅತ್ಯಾಚಾರ ಅಥವಾ ಕೊಲೆ ಆರೋಪದ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿಲ್ಲ, ಬದಲಾಗಿ ‘ನರಹತ್ಯೆ’ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಶಿಕ್ಷೆ ನೀಡಲಾಗಿದೆ!

ಅಷ್ಟು ಮಾತ್ರವಲ್ಲದೆ ಉಳಿದ ಮೂವರು ಆರೋಪಿಗಳಾದ ಲವ್ ಕುಶ್, ರಾಮು ಮತ್ತು ರವಿ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ವೈದ್ಯಕೀಯ ಪುರಾವೆಗಳ ಕೊರತೆಯಿಂದಾಗಿ ಇದು ‘ಸಾಮೂಹಿಕ ಅತ್ಯಾಚಾರ’ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇವೆಲ್ಲವೂ ಕೊನೆಯದಾಗಿ ಮೃತದೇಹವನ್ನು ಪೊಲೀಸರು ಅವಸರದಲ್ಲಿ ಸುಟ್ಟಿದ್ದು ಯಾಕೆ ಎಂಬ ಅನುಮಾನಗಳಿಗೆ ಪುಷ್ಠಿ ನೀಡಿದೆ. ಪುರಾವೆ ನಾಶವಾದ ಬಳಿಕ ಆರೋಪಿಗಳು ಅಪರಾಧಿಗಳೆಂದು ಸಾಬೀತಾಗುವುದಾದರೂ ಹೇಗೆ?

ಈ ಘಟನೆ ನಡೆದು ಐದು ವರ್ಷಗಳಾಗಿವೆ. ಆದರೆ ಸಂತ್ರಸ್ತೆಯ ಕುಟುಂಬ ಇಂದಿಗೂ ಮೇಲ್ಜಾತಿ ಎನಿಸಿಕೊಂಡವರಿಂದ ಉಂಟಾಗುವ ಪ್ರಾಣಾಪಾಯದ ಆತಂಕದಲ್ಲಿಯೇ ಇದೆ. ಸರ್ಕಾರ ಜೂನಿಯರ್ ಅಸಿಸ್ಟೆಂಟ್ ಅಥವಾ ‘ಗ್ರೂಪ್ ಸಿ’ ದರ್ಜೆಯ ಉದ್ಯೋಗ ನೀಡುವ ಲಿಖಿತ ಭರವಸೆ ನೀಡಿತ್ತು. ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಅಡಿಯಲ್ಲಿ ಹಾಥ್ರಸ್‌ನಲ್ಲಿ ಒಂದು ಮನೆಯನ್ನು ಹಂಚಿಕೆ ಮಾಡುವುದಾಗಿ ತಿಳಿಸಿತ್ತು. ಆದರೆ ಇಂದಿಗೂ ಈ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ.

25 ಲಕ್ಷ ರೂ. ಪರಿಹಾರ ಧನವನ್ನು ನೀಡಲಾಗಿದೆಯಾದರೂ ನ್ಯಾಯದ ಹೋರಾಟಕ್ಕಾಗಿಯೇ, ಬದುಕು ನಡೆಸುವುದಕ್ಕೆ ಬಹುತೇಕ ಹಣವನ್ನು ಕುಟುಂಬ ವ್ಯಯಿಸಿದೆ. ಇಂದಿಗೂ ಸಿಆರ್‌ಪಿಎಫ್ ಭದ್ರತೆಯಿರುವ ಕಾರಣದಿಂದಾಗಿ ಈ ಕುಟುಂಬವು ಕೆಲಸಕ್ಕೆ ಹೋಗುವ ಅವಕಾಶವೂ ಇಲ್ಲ, ಮಕ್ಕಳಿಗೆ ಶಿಕ್ಷಣವೂ ಇಲ್ಲದಂತಾಗಿದೆ! “ನಾವು ನಮ್ಮ ಮನೆಯಲ್ಲೇ ‘ಬಂಧಿಗಳಂತೆ’ ಬದುಕುತ್ತಿದ್ದೇವೆ” ಎಂದು ಕುಟುಂಬವು 2024ರ ಡಿಸೆಂಬರ್‌ನಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭೇಟಿ ನೀಡಿದಾಗ ತಿಳಿಸಿದೆ.

ಈ ನಡುವೆ ಕುಟುಂಬವನ್ನು ನೋಯ್ಡಾ ಅಥವಾ ಗಾಜಿಯಾಬಾದ್‌ಗೆ ಸ್ಥಳಾಂತರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಕುಟುಂಬ ತಮಗೆ ನ್ಯಾಯ ಸಿಗುವವರೆಗೆ ಮೃತ ಯುವತಿಯ ಚಿತಾಭಸ್ಮವನ್ನು ವಿಸರ್ಜಿಸುವುದಿಲ್ಲ ಎಂದು ಪಣತೊಟ್ಟಿದ್ದು, ಇಂದಿಗೂ ತಮ್ಮ ಮನೆಯಲ್ಲೇ ಚಿತಾಭಸ್ಮವನ್ನು ಇಟ್ಟುಕೊಂಡು ನ್ಯಾಯಕ್ಕಾಗಿ ಕಾಯುತ್ತಿದೆ. ಆದರೆ ಯುವತಿಯ ಮೃತದೇಹವನ್ನು ಪೊಲೀಸರು ಸುಟ್ಟಾಗಲೇ ನ್ಯಾಯವೂ ಕೂಡಾ ಈ ಕುಟುಂಬದ ಪಾಲಿಗೆ ಮರೀಚಿಕೆಯಾಗಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...