ಧರ್ಮಸ್ಥಳ ಅಸಹಜ ಸಾವಿನ ಬಗ್ಗೆ ಹೈಕೋರ್ಟ್ ಸರ್ಕಾರಕ್ಕೆ ನೀಡಿರುವ ನೋಟಿಸ್ ಭರವಸೆಯ ಕಿರಣವನ್ನು ಮತ್ತೆ ಮೂಡಿಸಿದೆ. ಜತೆಗೆ ಮಹಿಳಾ ಆಯೋಗವು ನಿರಂತರವಾಗಿ ಸರ್ಕಾರವನ್ನು ಎಚ್ಚರಿಸುತ್ತಿದೆ. ಇದರಿಂದಾಗಿ ಈ ಎಲ್ಲ ಅಜಹಜ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಯುವ, ನ್ಯಾಯ ಸಿಗುವ ಭರವಸೆ ಮತ್ತೆ ಪುಟಿದಿದೆ. ಮುಂದಿನ ವಿಚಾರಣೆಯೆಡೆ ಚಿತ್ತ ನೆಟ್ಟಿದೆ.
ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರವಾದ ತನಿಖೆ ನಡೆಯಬೇಕೆಂದು ‘ಕೊಂದವರು ಯಾರು?’ ಸೇರಿದಂತೆ ಹಲವು ಮಹಿಳಾಪರ, ಸಾಮಾಜಿಕ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ನಾಶವಾಗಿರುವುದರಿಂದ ನ್ಯಾಯದ ಭರವಸೆಯೇ ಬತ್ತಿಹೋಗಿತ್ತು. ಕಡೆ ಪಕ್ಷ ಸಾಕ್ಷ್ಯ ನಾಶಪಡಿಸಿದವರ ಮೇಲೆ ಕ್ರಮದ ನಿರೀಕ್ಷೆಯೂ ಇಲ್ಲದಂತಾಗಿತ್ತು. ಹೀಗಿರುವಾಗ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ವಿಚಾರಣೆಯೂ ಮತ್ತೆ ಭರವಸೆಯ ಕಿರಣ ಮೂಡಿಸಿದೆ.
ಧರ್ಮಸ್ಥಳದಲ್ಲಿ ನಡೆದಿರುವ 74 ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕೆಂದು, ಎಸ್‌ಐಟಿ ತನಿಖೆಗೆ ಸೂಚಿಸಬೇಕು ಎಂದು ಕೋರಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಸರ್ಕಾರವು ನ್ಯಾಯಾಲಯದಲ್ಲಿ ಇರುವ ದಾಖಲೆಗಳನ್ನು ಪಡೆದುಕೊಂಡು ಅಭಿಪ್ರಾಯ ತಿಳಿಸಲು ಸೂಚಿಸಿದೆ. ಈ ಅರ್ಜಿ ವಿಚಾರಣೆ ಫೆಬ್ರವರಿ 3ರಂದು ಮುಂದುವರೆಯಲಿದೆ.
ಇದನ್ನು ಓದಿದ್ದೀರಾ? ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು
ಈ ಬಗ್ಗೆ ಈ ದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ‘ಕೊಂದವರು ಯಾರು?’ ಆಂದೋಲನದ ಸದಸ್ಯರಾಗಿರುವ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಮಮತಾ ಆನೇಕಲ್, “ಸಂಪೂರ್ಣ ನ್ಯಾಯ ಸಿಗಲಿದೆ ಎಂದಲ್ಲ. ಆದರೆ, ಒಂದು ಹಂತದ ಭರವಸೆ ಬಂದಿದೆ. ಯಾಕೆಂದರೆ ಮುಂದಿನ ತಿಂಗಳು ಮೂರನೇ ತಾರೀಖು ಕೋರ್ಟ್ ವಿಚಾರಣೆ ನಡೆಯಬೇಕಷ್ಟೆ. ಅದು ಏನಾಗುತ್ತದೆ ಎಂದು ನೋಡಬೇಕು” ಎಂದು ತಿಳಿಸಿದರು.
ಇನ್ನು ‘ಕೊಂದವರು ಯಾರು?’ ಹೋರಾಟದ ಬಗ್ಗೆ ಮಾತನಾಡಿದ ಅವರು, “ಮುಂದಿನ ಹಂತದಲ್ಲಿ ನಾವು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ, ಅಲ್ಲಿನ ಸ್ಥಳೀಯ ಮಟ್ಟದಲ್ಲಿ ಮಹಿಳೆಯರನ್ನು ತಲುಪಲಿದ್ದೇವೆ. ನ್ಯಾಯ ಎಂಬುದು ಕಾನೂನಾತ್ಮಕವಾಗಿ ಸಿಗಲಿದೆಯೇ ಇಲ್ಲವೇ ಎಂಬುದು ಬೇರೆ ವಿಚಾರ. ಜನರು ಪ್ರತಿಯೊಬ್ಬರು ಮಾತನಾಡುವಂತಾಗಬೇಕು, ಪ್ರಶ್ನಿಸುವಂತಾಗಬೇಕು ಎಂಬುದು ಮುಖ್ಯ. ಧರ್ಮಸ್ಥಳ ಮಾತ್ರವಲ್ಲ, ಯಾವುದೇ ಜಾತಿ, ಧರ್ಮ, ವರ್ಗದ ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಒಂದು ಮಹಿಳಾಪರ ಚಿಂತನೆಯಲ್ಲಿ ಪ್ರತಿಯೊಂದು ಮಹಿಳೆಯು ಪ್ರಶ್ನಿಸುವಂತಾಗಬೇಕು. ಅದು ನಮ್ಮ ಮುಖ್ಯ ಉದ್ದೇಶ” ಎಂದು ಹೇಳಿದರು.
ಮತ್ತೆ ಮೂಡಿದ ಭರವಸೆ
ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದ ಹಲವು ಅತ್ಯಾಚಾರ, ಕೊಲೆ ಪ್ರಕರಣಗಳು ಮುಖ್ಯವಾಗಿ ಮುನ್ನೆಲೆಗೆ ಬಂದಿದ್ದು ಸೌಜನ್ಯ ಅತ್ಯಾಚಾರ, ಕೊಲೆ ನಡೆದಾಗ. 2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಧರ್ಮಸ್ಥಳದ ಬಳಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಮರುದಿನ ಆಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟದ ಬಳಿಯ ಪೊದೆಯಲ್ಲಿ ಸಿಕ್ಕಿತ್ತು. ಈ ಪ್ರಕರಣದ ತನಿಖೆ ಸಿಐಡಿ, ಸಿಬಿಐ ಹೀಗೆ ಹಲವು ಸಂಸ್ಥೆಗಳ ಕೈಗೆ ಸೇರಿದವು. ಪ್ರಕರಣದ ಸಾಕ್ಷಿಯಾಗಿದ್ದ ರವಿ ಪೂಜಾರಿ ಎಂಬುವವರು ನಿಗೂಢವಾಗಿ ಸಾವನ್ನಪ್ಪಿದ್ದರು.
ಸೌಜನ್ಯ ಅತ್ಯಾಚಾರ ಕೊಲೆ ನಡೆದ ಎರಡು ದಿನದಲ್ಲೇ ಸಂತೋಷ್ ರಾವ್ ಎಂಬಾತನ ಬಂಧನ ಮಾಡಲಾಗಿತ್ತು. ಆದರೆ ಸುಮಾರು 11 ವರ್ಷಗಳ ನಂತರ 2023ರಲ್ಲಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಸಂತೋಷ್ ರಾವ್ ಅವರನ್ನು ನಿರ್ದೋಷಿ ಎಂದು ಘೋಷಿಸಿ ಬಿಡುಗಡೆ ಮಾಡಿತು. ನಿರಪರಾಧಿಗೆ ಜೈಲು ಶಿಕ್ಷಯಾದ ಚರ್ಚೆಯ ನಡುವೆಯೇ ನಿಜವಾದ ಆರೋಪಿ ಯಾರೆಂಬ ಪ್ರಶ್ನೆ ಮತ್ತೆ ಹುಟ್ಟಿತು. ಇದಾದ ಬಳಿಕ ಸೌಜನ್ಯ ಕುಟುಂಬ ಪ್ರಕರಣದ ಮರುತನಿಖೆಗೆ ಕೋರಿ ಹೈಕೋರ್ಟ್ ಮೊರೆ ಹೋಯಿತು. ಒಂದು ವರ್ಷಗಳ ಕಾಲ ದೀರ್ಘ ಹೋರಾಟ ನಡೆಸಿತು. ಆದರೆ 2024ರ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ಈ ಪ್ರಕರಣದ ಮರುತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತು. ಇತ್ತ ಸಾಕ್ಷ್ಯಗಳೆಲ್ಲವೂ ನಾಶ, ಅತ್ತ ನ್ಯಾಯಾಂಗದ ಮೇಲಿದ್ದ ಭರವಸೆ ಕುಂದುತ್ತಿದ್ದಂತೆ ನ್ಯಾಯದ ನಿರೀಕ್ಷೆಯೂ ಬತ್ತಿಹೋಯಿತು.
ಇವೆಲ್ಲವುದರ ನಡುವೆ ಸೌಜನ್ಯ ಕೊಲೆಗೂ ಕೇವಲ 20 ದಿನಗಳ ಮೊದಲು ಆನೆಮಾವುತ ನಾರಾಯಣರೊಂದಿಗೆ ಅವರ ತಂಗಿ ಯಮುನಾ ಕೊಲೆ, 1986ರಲ್ಲಿ ಪದ್ಮಲತಾ ಅವರ ಅಪಹರಣ ನಡೆಸಿ ಅತ್ಯಾಚಾರ ಮತ್ತು ಕ್ರೂರ ಹತ್ಯೆ ಪ್ರಕರಣ, 1979ರಲ್ಲಿ ಟೀಚರ್ ವೇದವಲ್ಲಿ ಅವರ ಮೇಲಿನ ಅತ್ಯಾಚಾರ, ಸುಟ್ಟು ಕೊಲೆ- ಹೀಗೆ ಹಲವು ಪ್ರಕರಣಗಳು ಮುನ್ನೆಲೆಗೆ ಬಂದವು. ಧರ್ಮಸ್ಥಳದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದವರ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಆದರೆ ದಿನಗಳೆದಂತೆ ಜನರ ಗಮನ ಬೇರೆಡೆ ಸೆಳೆಯುವ ಯತ್ನಗಳೂ ಆಗಿತ್ತು, ಈ ಪ್ರಕರಣಗಳೆಲ್ಲವೂ ಮೂಲೆಗುಂಪಾಯಿತು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಕೊಂದವರು ಯಾರು ತಂಡದ ಹಕ್ಕೊತ್ತಾಯಗಳೇನು?
ಈ ವೇಳೆ ಮುನ್ನೆಲೆಗೆ ಬಂದಿದ್ದು, ಹಲವು ಮೃತದೇಹಗಳನ್ನು ಅಕ್ರಮವಾಗಿ ಹೂತಿರುವ ಪ್ರಕರಣ. ತಾನು 1995ರಿಂದ 2014ರವರೆಗೆ ನೂರಾರು ಮಹಿಳೆಯರ, ಹೆಣ್ಣುಮಕ್ಕಳ, ಪುರುಷರ ಮೃತದೇಹವನ್ನು ರಹಸ್ಯವಾಗಿ ಹೂತಿರುವುದಾಗಿ ಅನಾಮಧೇಯ ವ್ಯಕ್ತಿಯೋರ್ವ ಹೇಳಿದ. ಈ ಒಂದು ಸಾಕ್ಷಿಯು ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿರುವ ಎಲ್ಲ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕುವ, ಕಡೆ ಪಕ್ಷ ತನಿಖೆ ನಡೆಯುವ ಭರವಸೆಯನ್ನು ಮೂಡಿಸಿತ್ತು. ಈ ಪ್ರಕರಣ ಹೆಚ್ಚು ಸದ್ದಾಗುತ್ತಿದ್ದಂತೆ, ತನಿಖೆಗೆ ಒತ್ತಡ ಅಧಿಕವಾಗುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ, ಉತ್ಖನನ ನಡೆಸಿತ್ತು. ಒಟ್ಟು 100ಕ್ಕೂ ಹೆಚ್ಚು ಮೂಳೆಗಳು ಪತ್ತೆಯಾಗಿತ್ತು. ಈ ನಡುವೆ ಆ ಮೂಲೆಗಳು ಪುರುಷರದ್ದು, ಮಹಿಳೆಯರದ್ದು ಅಲ್ಲ, ಇದು ‘ಬುರುಡೆ ಗ್ಯಾಂಡ್’ ಎಂಬೆಲ್ಲ ಆರೋಪಗಳು, ಸುದ್ದಿಗಳು, ಟ್ರೋಲ್‌ಗಳು ಹರಿದಾಡಿದವು. ಒಟ್ಟಿನಲ್ಲಿ ತನಿಖೆಯ ದಿಕ್ಕೇ ಬದಲಾಗಿತ್ತು.
ಈ ಸಂದರ್ಭದಲ್ಲಿ ಮತ್ತೆ ಒಗ್ಗಟ್ಟಾಗಿ ನಿರಂತರ ಹೋರಾಟ ಕಟ್ಟಿದ್ದು ‘ಕೊಂದವರು ಯಾರು?’ ತಂಡ. ಎಸ್‌ಐಟಿ ರಚನೆಯ ಸರ್ಕಾರಿ ಆದೇಶದಂತೆ, ಹಿಂದಿನ ಬಗೆಹರಿಯದ ಪ್ರಕರಣಗಳು ಮತ್ತು ಎಲ್ಲ ಅಸಹಜ ಸಾವುಗಳ ಸಮಗ್ರ ತನಿಖೆಯಾಗಿದೆ. ಎಸ್‌ಐಟಿ ರಚನೆಯ ಕುರಿತ ಸರ್ಕಾರದ ಕಾರ್ಯಕಾರಿ ಆದೇಶದ ಅನ್ವಯ ಕಳೆದ ದಶಕದಲ್ಲಿ ವರದಿಯಾಗಿರುವ, ಎಲ್ಲ ನಾಪತ್ತೆ, ಹತ್ಯೆ ಅಥವಾ ಅತ್ಯಾಚಾರ ಪ್ರಕರಣಗಳನ್ನೂ, ಬಗೆಹರಿಯದ ಪ್ರಕರಣಗಳನ್ನೂ ಎಸ್ಐಟಿಯು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು ಎಂಬ ಕೂಗು ಕೇಳಿಬಂತು.
ಇಷ್ಟರಲ್ಲೇ ಸೌಜನ್ಯ ತಾಯಿ ಕುಸುಮಾವತಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು ಮತ್ತು ಎಸ್‌ಐಟಿ ತನಿಖೆಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ಸದ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಇದುವರೆಗೆ ಕೈಗೊಂಡಿರುವ ಸಮಗ್ರ ತನಿಖೆಯ ವರದಿ/ಪ್ರಗತಿ ವಿವರಗಳನ್ನು ಕೂಡಲೇ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಲು ಎಸ್ಐಟಿ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮಹಿಳಾ ಆಯೋಗವು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಕೋರಿದೆ. ಈ ಪ್ರಕರಣದಲ್ಲಿ ಮಹಿಳಾ ಆಯೋಗವು ನಿರಂತರವಾಗಿ ಸರ್ಕಾರವನ್ನು ಎಚ್ಚರಿಸುತ್ತಿದೆ. ಇದರಿಂದಾಗಿ ಈ ಎಲ್ಲ ಅಜಹಜ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಯುವ, ನ್ಯಾಯ ಸಿಗುವ ಭರವಸೆ ಮತ್ತೆ ಪುಟಿದಿದೆ. ಮುಂದಿನ ವಿಚಾರಣೆಯೆಡೆ ಚಿತ್ತ ನೆಟ್ಟಿದೆ.





