ಚಿಕಿತ್ಸೆ ಹಾಗೂ ಔಷಧಿಗಳ ವೆಚ್ಚವನ್ನು ಭರಿಸಲಾಗದ ಪರಿಸ್ಥಿತಿ ಬಹುತೇಕರಿಗಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಔಷಧಿಗಳು ಸಿಕ್ಕರೆ, ಆರ್ಥಿಕವಾಗಿ ಹಿಂದುಳಿದವರ ಮೇಲಿನ ಹೊರೆ ಕಡಿಮೆಯಾಗಲಿದೆ ಎನ್ನುವುದು ಈ ಜಾಥಾದ ಮುಖ್ಯ ಉದ್ದೇಶ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಚಿಕಿತ್ಸೆಯ ಖರ್ಚು ಜನಸಾಮಾನ್ಯರನ್ನು ಬಡತನ ರೇಖೆಗಿಂತಲೂ ಕೆಳಕ್ಕೆ ತಳ್ಳುತ್ತಿರುವ ಆತಂಕಕಾರಿ ಸ್ಥಿತಿ ಸದ್ಯ ರಾಜ್ಯದಲ್ಲಿ ನಿರ್ಮಾಣವಾಗಿದೆ. ಚಿಕಿತ್ಸಾ ವೆಚ್ಚದಲ್ಲಿ ಶೇ.60ರಿಂದ 70ರಷ್ಟು ಹಣ ಔಷಧಿಗಳ ಮೇಲೆಯೇ ಖರ್ಚಾಗುತ್ತಿದೆ. ಈ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿ ದೊರೆಯಬೇಕು ಎಂಬ ಬೇಡಿಕೆಯೊಂದಿಗೆ ಹಲವು ಜನಪರ ಸಂಘಟನೆಗಳು ಸೇರಿ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ “ಆರೋಗ್ಯ ಹಕ್ಕಿನ ಜಾಥಾ– 2026″ನ್ನು ಆಯೋಜಿಸಿವೆ.
ʼಮಹಿಳೆಯೊಬ್ಬರು ಹೆರಿಗೆ ಸಮಯದಲ್ಲಿ ಸರಾಸರಿ ₹8,442 ಗಳನ್ನು ಖರ್ಚು ಮಾಡುತ್ತಿದ್ದಾರೆʼ ಎನ್ನುತ್ತದೆ ವರದಿಯೊಂದು. ಹಲವು ಅಧ್ಯಯನಗಳು ಇದನ್ನೇ ಹೇಳುತ್ತಿವೆ. ಈ ಅಂಕಿ-ಅಂಶಗಳನ್ನು ಸರ್ಕಾರವೂ ಒಪ್ಪಿಕೊಂಡಿದೆ. ಚಿಕಿತ್ಸೆ ಹಾಗೂ ಔಷಧಿಗಳ ವೆಚ್ಚವನ್ನು ಭರಿಸಲಾಗದ ಪರಿಸ್ಥಿತಿ ಬಹುತೇಕರಿಗಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಔಷಧಿಗಳು ಸಿಕ್ಕರೆ, ಆರ್ಥಿಕವಾಗಿ ಹಿಂದುಳಿದವರ ಮೇಲಿನ ಹೊರೆ ಕಡಿಮೆಯಾಗಲಿದೆ ಎನ್ನುವುದು ಈ ಜಾಥಾದ ಮುಖ್ಯ ಉದ್ದೇಶ.
ಜಾಥಾದ ಪ್ರಮುಖ ಬೇಡಿಕೆಗಳು
1) ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳ ಖಚಿತತೆ
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ರೋಗಿಗೂ ಔಷಧಿಗಳು ಉಚಿತವಾಗಿ ಲಭ್ಯವಾಗಬೇಕು. ಸರ್ಕಾರಿ ವೈದ್ಯರು ಯಾವುದೇ ಕಾರಣಕ್ಕೂ ಔಷಧಿಯನ್ನು ಹೊರಗಡೆ ಖರೀದಿಸಲು ಚೀಟಿ ಬರೆಯಬಾರದು. ಜೊತೆಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಔಷಧಿಗಳ ಗುಣಮಟ್ಟದ ಹೊಣೆಗಾರಿಕೆಯನ್ನು ಸರ್ಕಾರವೇ ವಹಿಸಬೇಕು. ತಮಿಳುನಾಡು (1994), ಕೇರಳ (2007) ಹಾಗೂ ರಾಜಸ್ಥಾನ (2023) ರಾಜ್ಯಗಳಲ್ಲಿ ಉಚಿತ ಔಷಧಿ ವ್ಯವಸ್ಥೆ ಯಶಸ್ವಿಯಾಗಿ ಜಾರಿಯಲ್ಲಿದೆ. ಕರ್ನಾಟಕದಲ್ಲಿ 2013ರಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಸ್ಥಾಪಿಸಲಾದರೂ, ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಎದುರು ಸಾಲುಗಟ್ಟಿ ನಿಂತಿರುವ ಖಾಸಗಿ ಔಷಧಿ ಅಂಗಡಿಗಳೇ ಇದಕ್ಕೆ ಸಾಕ್ಷಿ.

ʼಸಾಕ್ʼ ಸಂಘಟನೆ 12 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, 568 ರೋಗಿಗಳು ಕೇವಲ ಔಷಧಿಕ್ಕಾಗಿ ₹4,05,140 ವೆಚ್ಚ ಮಾಡಿದ್ದಾರೆ. ಅಂದರೆ, ಒಬ್ಬರು ಸರಾಸರಿ ₹713 ಭರಿಸಬೇಕಾಗುತ್ತದೆ. KSMSCLನಲ್ಲಿ ಭ್ರಷ್ಟಾಚಾರ ಪ್ರಕರಣಗಳು ಬಹಿರಂಗವಾಗಿದ್ದು, 2024ರಲ್ಲಿ ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಯಂದಿರ ಸಾವಿಗೆ ಈ ವ್ಯವಸ್ಥೆಯ ವೈಫಲ್ಯವೇ ಕಾರಣವೆಂಬ ಆರೋಪಗಳೂ ದಾಖಲಾಗಿವೆ. ಔಷಧಿಗಳ ಪ್ರತಿ ಬ್ಯಾಚ್ ಗುಣಮಟ್ಟ ಪರೀಕ್ಷೆ ನಡೆದಿಲ್ಲ, ಇವತ್ತಿಗೂ ಮಾಡುತ್ತಿಲ್ಲ. ಇದೂ ಗಂಭೀರ ವಿಚಾರವಾಗಿದೆ. ಕಳೆದ ವರ್ಷ ನಡೆದ ಜಾಥಾದಲ್ಲಿ ಕೂಡಾ ಇದೇ ಮುಖ್ಯ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿತ್ತು. ಆದರೆ ಇದಕ್ಕೆ ಸರ್ಕಾರ ಸ್ಪಂದಿಸಿಲ್ಲ. ನಿಗಮವನ್ನು ಜನಪರ ಹಾಗೂ ಪಾರದರ್ಶಕವಾಗಿಸಲು ಜಾಥಾ ಆಗ್ರಹಿಸಿದೆ.
2) ಕರ್ನಾಟಕದಲ್ಲಿ ʼಆರೋಗ್ಯ ಹಕ್ಕು ಕಾಯಿದೆʼ ಜಾರಿ
ರಾಜಸ್ಥಾನ ರಾಜ್ಯದಲ್ಲಿ ಈಗಾಗಲೇ ಆರೋಗ್ಯ ಹಕ್ಕು ಕಾಯಿದೆ ಜಾರಿಯಲ್ಲಿದೆ. ನೇಪಾಳ, ಥೈಲ್ಯಾಂಡ್ ಸೇರಿದಂತೆ 73ಕ್ಕೂ ಹೆಚ್ಚು ದೇಶಗಳಲ್ಲಿ ಉಚಿತ ಅಥವಾ ಹಕ್ಕು ಆಧಾರಿತ ಆರೋಗ್ಯ ಸೇವೆಗಳು ಲಭ್ಯವಿವೆ. ಕರ್ನಾಟಕದಲ್ಲೂ ಆರೋಗ್ಯವನ್ನು ಮೂಲಭೂತ ಹಕ್ಕಾಗಿ ಘೋಷಿಸಿ ಕಾಯಿದೆ ಜಾರಿಗೆ ತರಬೇಕು ಎಂಬುದು ಸಂಘಟನೆಗಳ ಆಗ್ರಹ. ಈ ಕಾಯಿದೆಯಲ್ಲಿ ಸಮಯಕ್ಕೆ ಸರಿಯಾದ ಉತ್ತಮ ಗುಣಮಟ್ಟದ ಚಿಕಿತ್ಸೆ, ಉಚಿತ ಸೇವೆ, ಮಾನವ ಘನತೆಗೆ ಗೌರವ ಹಾಗೂ ಯಾವುದೇ ತಾರತಮ್ಯವಿಲ್ಲದ ಸೇವೆ ಖಚಿತವಾಗಬೇಕು.
3) ಖಾಸಗಿ ಆಸ್ಪತ್ರೆಗಳ ಶುಲ್ಕಗಳಿಗೆ ಮಿತಿ
ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕ ನಿಯಂತ್ರಣ ಇಲ್ಲದಿರುವುದು ರೋಗಿಗಳನ್ನು ಶೋಷಿಸುವಂತೆ ಮಾಡುತ್ತಿದೆ. ಇದು ಬಡವರ ಮೇಲಿನ ಆರ್ಥಿಕ ಹೊರೆಗೆ ಇನ್ನೊಂದು ಕಾರಣವಾಗುತ್ತಿದೆ. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ. ಎಲ್ಲಾ ಆಸ್ಪತ್ರೆ ಶುಲ್ಕಗಳಿಗೆ ಮಿತಿ ವಿಧಿಸುವುದು ರಾಜ್ಯ ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯವೆಂದು ಜಾಥಾ ಸ್ಪಷ್ಟಪಡಿಸಿದೆ.
4) ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣಕ್ಕೆ ವಿರೋಧ
ಕರ್ನಾಟಕ ಸರ್ಕಾರ 8 ಜಿಲ್ಲಾ ಆಸ್ಪತ್ರೆಗಳನ್ನು ಖಾಸಗೀಕರಣಕ್ಕೆ ಮುಂದಾಗಿದೆ ಎಂಬ ಮಾಹಿತಿ ಆತಂಕ ಮೂಡಿಸಿದೆ. ಇದು ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಕ್ರಮವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕೆಂದು ಸಂಘಟನೆಗಳು ಆಗ್ರಹಿಸಿವೆ.

ಡ್ರಗ್ ಎಕ್ಷನ್ ಫೋರಮ್–ಕರ್ನಾಟಕ, ಸಾರ್ವತ್ರಿಕ ಆರೋಗ್ಯ ಆಂದೋಲನ–ಕರ್ನಾಟಕ, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ, ನಾಗರಿಕ ಹಿತರಕ್ಷಕ ವೇದಿಕೆ-ರಾಣೆಬೆನ್ನೂರು, ಆಕ್ಷನ್ ಫಾರ್ ಈಕ್ವಿಟಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್-ದಾವಣಗೆರೆ, ಜಾಗೃತ ಮಹಿಳಾ ಒಕ್ಕೂಟ-ಬೆಳಗಾವಿ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ-ಉಡುಪಿ, ಕರ್ನಾಟಕ ರಾಜ್ಯ ಮಲೆಕುಡಿಯ ಸಂಘ, ಬುಡಕಟ್ಟು ಕಾರ್ಮಿಕರ ಸಂಘ, ಕಾಫೀ ತೋಟಗಳ ಕಾರ್ಮಿಕರ ಯೂನಿಯನ್-ಕೊಡಗು, ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ-ಶಿವಮೊಗ್ಗ, ಗಮನ ಮಹಿಳಾ ಸಮೂಹ-ಕೋಲಾರ, ನೆರಳು ಬೀಡಿ ಕಾರ್ಮಿಕರ ಯೂನಿಯನ್-ದಾವಣಗೆರೆ, ಸ್ಪಂದನ ಸಂಘಟನೆ- ರಾಮನಗರ, ಕರ್ನಾಟಕ ಜನ ಶಕ್ತಿ, ಜನಾಂದೋಲನ ಮಹಾ ಮೈತ್ರಿ, ಗಣಿ ಭಾದಿತ ಪರಿಸರ ಜನ ಬದುಕಿಗಾಗಿ ಹೋರಾಟ ಸಮಿತಿ, ಸಮಾಜ ಪರಿವರ್ತನ ಸಮುದಾಯ-ಧಾರವಾಡ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಬರ್ಡ್ಸ್-ಬಿಜಾಪುರ ಸೇರಿದಂತೆ ಒಟ್ಟು 19ಕ್ಕೂ ಸಂಘಟನೆಗಳು ಈ ಜಾಥಾಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಈ ಕುರಿತು ಧಾರವಾಡ ನಿವಾಸಿ ಹಾಗೂ ಡ್ರಗ್ ಆಕ್ಷನ್ ಫೋರಮ್ ಅಧ್ಯಕ್ಷ ಡಾ. ಗೋಪಾಲ ದಾಬಡೆ ಪ್ರತಿಕ್ರಿಯಿಸಿ, “ಈ ವರ್ಷ ಫೆಬ್ರವರಿ ಮೊದಲ ಹಾಗೂ ಎರಡನೇ ವಾರದಲ್ಲಿ (ಫೆ.3ರಿಂದ 14) ಡ್ರಗ್ ಆಕ್ಷನ್ ಫೋರಂ– ಕರ್ನಾಟಕವೂ ಸೇರಿದಂತೆ ಸುಮಾರು 19 ಜನಪರ ಸಂಘಟನೆಗಳ ನೇತೃತ್ವದಲ್ಲಿ ʼಆರೋಗ್ಯ ಹಕ್ಕಿನ ಜಾಥಾʼ ಆಯೋಜಿಸಲಾಗಿದೆ. ಜನರಲ್ಲಿ ಔಷಧಿ ಬಳಕೆ ಮತ್ತು ಆರೋಗ್ಯ ಹಕ್ಕಿನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಬೆಂಗಳೂರಿನಲ್ಲೂ ಈ ಜಾಥಾ ಆಯೋಜಿಸಲಾಗಿದ್ದು, ಫೆ.16ರಂದು ಮುಕ್ತ ಚರ್ಚೆ ಇರಲಿದೆ.

“ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾದ ಎಲ್ಲಾ ಔಷಧಿಗಳು ಲಭ್ಯವಾಗಬೇಕು. ಇಂದು ಈ ವ್ಯವಸ್ಥೆ ಇಲ್ಲ. ಒಬ್ಬ ವ್ಯಕ್ತಿ ಸರ್ಕಾರಿ ಆಸ್ಪತ್ರೆಗೆ ಹೋದರೆ ಔಷಧಕ್ಕಾಗಿ ಹೊರಗೆ ಕಳುಹಿಸುವ ರೂಢಿ ಇದೆ. ಈ ಪರಿಸ್ಥಿತಿಯನ್ನು ಸರ್ಕಾರ ತಕ್ಷಣ ನಿವಾರಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಔಷಧಿಗಳೂ ಲಭ್ಯವಾಗುವುದು ಅತ್ಯಂತ ಅಗತ್ಯ. ತಮಿಳುನಾಡು, ರಾಜಸ್ಥಾನ ಮತ್ತು ಕೇರಳ ಸರ್ಕಾರಗಳು ಈ ರೀತಿಯ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತಂದಿವೆ. ನಾವು ಆ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ಪತ್ರ ಕೂಡ ಸಲ್ಲಿಸಿದ್ದೇವೆ. ಆದರೆ, ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾದ ಔಷಧಿಗಳಲ್ಲಿ ವಿಷಕಾರಿ ಅಂಶಗಳಿದ್ದ ಕಾರಣ ತಾಯಂದಿರ ಸಾವಿನ ಪ್ರಕರಣಗಳು ನಡೆದವು. ಔಷಧಿ ಖರೀದಿ ಹಾಗೂ ವಿತರಣೆಯಲ್ಲಿ ಗಂಭೀರ ದೋಷಗಳಿವೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಇತ್ತೀಚೆಗೆ ಕರ್ನಾಟಕ ಸರ್ಕಾರ ಕೋವಿಡ್ ಅವಧಿಯಲ್ಲಿ ನಡೆದ ಔಷಧಿ ಖರೀದಿ ಮತ್ತು ವಿತರಣೆಯ ಕುರಿತು ತನಿಖೆ ನಡೆಸಲು ಸಮಿತಿಯನ್ನು ರಚಿಸಿದೆ. ಕೋವಿಡ್ ಲಸಿಕೆ ಸೇರಿದಂತೆ ಔಷಧಿ ವಿತರಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಆರೋಪಗಳೂ ಇವೆ. ನಾವು ಈ ಬೇಡಿಕೆಗಳನ್ನು ಮುಂದಿಟ್ಟಿರುವ ಪ್ರಮುಖ ಕಾರಣ, ಒಬ್ಬ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸೆ ಖರ್ಚಿನ ಶೇ.70ರಷ್ಟು ಹಣ ಔಷಧಿಗಳ ಮೇಲೆಯೇ ಖರ್ಚಾಗುತ್ತದೆ. ಈ ಔಷಧಿಗಳನ್ನು ಸರಿಯಾಗಿ, ಉಚಿತವಾಗಿ ಜನರಿಗೆ ಒದಗಿಸುವುದು ಸರ್ಕಾರದ ಕರ್ತವ್ಯವೆಂದು ನಾವು ನಂಬಿದ್ದೇವೆ”
ಇದನ್ನೂ ಓದಿ: ʼಗೃಹ ಆರೋಗ್ಯ ಯೋಜನೆʼ | ರಾಜ್ಯ ಸರ್ಕಾರದ ಆರೋಗ್ಯ ಕ್ರಾಂತಿ!
ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆ ಜಾರಿಗೆ ತರಬೇಕು. ಕರ್ನಾಟಕ ಸರ್ಕಾರ 8 ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣಕ್ಕೆ ಮುಂದಾಗುತ್ತಿದೆ ಎಂಬುದಕ್ಕೆ ನಮ್ಮ ತೀವ್ರ ವಿರೋಧವಿದೆ. ಇದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಸರ್ಕಾರ ವೈದ್ಯಕೀಯ ಕಾಲೇಜು ಬೇಕೆಂದು ಹೇಳುತ್ತದೆ. ಆದರೆ ಅದು ಜನರ ಆರೋಗ್ಯಕ್ಕಾಗಿ ಅಲ್ಲ, ಲಾಭಕ್ಕಾಗಿ ಎನ್ನುವ ಅನುಮಾನ ನಮ್ಮದು. ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕು. ನಾವು ನೋಡುತ್ತಿರುವಂತೆ, ಖಾಸಗಿ ಆಸ್ಪತ್ರೆಗಳಲ್ಲಿ ಅನಿಯಂತ್ರಿತವಾಗಿ ಶುಲ್ಕ ವಸೂಲಿ ನಡೆಯುತ್ತಿದೆ. ಇದನ್ನು ಸರ್ಕಾರ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಜನರ ಆರೋಗ್ಯದ ಹಕ್ಕನ್ನು ಕಾಪಾಡುವಲ್ಲಿ ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾಥಾ ಆಯೋಜಿಸಲಾಗಿದೆ” ಎಂದರು.
ಆರೋಗ್ಯ ಸೇವೆ ಲಾಭದ ವಸ್ತುವಾಗದೆ, ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಬೇಕು ಎಂಬುದೇ ‘ಆರೋಗ್ಯ ಹಕ್ಕಿನ ಜಾಥಾ–2026’ದ ಮೂಲ ಆಶಯ. ಉಚಿತ ಹಾಗೂ ಗುಣಮಟ್ಟದ ಔಷಧಿ, ಆರೋಗ್ಯ ಹಕ್ಕಿನ ಕಾಯಿದೆ ಜಾರಿ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮತ್ತು ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣಕ್ಕೆ ವಿರೋಧ.. ಈ ಬೇಡಿಕೆಗಳು ಜನಪರ ಆರೋಗ್ಯ ವ್ಯವಸ್ಥೆಯ ಅಗತ್ಯವನ್ನು ಸ್ಪಷ್ಟಪಡಿಸುತ್ತವೆ. ಸರ್ಕಾರ ಈ ಆಗ್ರಹಗಳಿಗೆ ಸ್ಪಂದಿಸದಿದ್ದರೆ, ಜನರ ಆರೋಗ್ಯ ಹಕ್ಕಿಗಾಗಿ ಹೋರಾಟ ಇನ್ನಷ್ಟು ವಿಸ್ತಾರಗೊಳ್ಳುವುದು ಅನಿವಾರ್ಯ ಎನ್ನುವುದು ಈ ಜಾಥಾದ ಸ್ಪಷ್ಟ ಸಂದೇಶ.





