ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ, ವ್ಯಾಯಾಮ ಮಾಡಿ. ಇವೆಲ್ಲವುದಕ್ಕೂ ಮೊದಲು 'ವಾಟ್ಸಾಪ್ ಯೂನಿವರ್ಸಿಟಿ'ಯ ವಿದ್ಯಾರ್ಜನೆಯಿಂದ ಹೊರಬನ್ನಿ. ಎಲ್ಲರ ಸಲಹೆಯನ್ನು ಮೈಗೊಡ್ಡಿಕೊಂಡು ದೇಹವನ್ನು ಅಗತ್ಯಕ್ಕಿಂತ ಹೆಚ್ಚು ದಣಿಸದಿರಿ. ಆತಂಕವನ್ನು 'ಹಾರ್ಟ್'ಗೆ ಹಚ್ಚಿಕೊಂಡು ಒತ್ತಡಕ್ಕೆ ಒಳಗಾಗದಿರಿ. ಮಾಧ್ಯಮಗಳ ಅಬ್ಬರ, ಕೂಗಾಟವೂ ಆತಂಕ, ಭಯಗಳನ್ನು ಉಂಟು ಮಾಡುತ್ತದೆ. ಅವುಗಳನ್ನು ನಿಮ್ಮ ವಿವೇಚನೆ ಬಳಸಿ ನೋಡಿ.
ರಾಜ್ಯದಲ್ಲಿ ವರದಿಯಾಗುತ್ತಿರುವ ಹೃದಯಾಘಾತ ಪ್ರಕರಣಗಳು ಸದ್ಯ ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ. ಯುವ ಜನತೆ ಆರೋಗ್ಯ ತಪಾಸಣೆಗೆ ಒಳಗಾಗಲು ಆಸ್ಪತ್ರೆ ಕಡೆ ಮುಖ ಮಾಡುತ್ತಿದೆ. ಈ ಆತಂಕವನ್ನು, ಅದರಿಂದ ತಪಾಸಣೆಗೆ ಒಳಗಾಗುವುದನ್ನು ಅಗತ್ಯ ಅಥವಾ ಅನಗತ್ಯ ಎಂದು ನಾವು ನೇರವಾಗಿ ನಿರ್ಣಯಿಸಲು ಸಾಧ್ಯವಾಗದು. ಹಾಸನದಲ್ಲಿ ಯುವಕರು ‘ಹಾರ್ಟ್ ಅಟ್ಯಾಕ್’ನಿಂದ ಸಾವನ್ನಪ್ಪುವ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುತ್ತಿದ್ದಂತೆ ಒಟ್ಟಾರೆಯಾಗಿ ರಾಜ್ಯದ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಮಂಗಳವಾರದಿಂದ ಬುಧವಾರವರೆಗಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ವೈದ್ಯ ಸೇರಿದಂತೆ ಒಟ್ಟು ಆರು ಮಂದಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಈ ಪೈಕಿ ಮೂವರು ಹಾಸನದವರಾದರೆ ಇಬ್ಬರು ಧಾರವಾಡ, ಒಬ್ಬರು ಶಿವಮೊಗ್ಗ ಜಿಲ್ಲೆಯವರು. ಹೃದಯಾಘಾತಕ್ಕೆ ಬಲಿಯಾದ ಬಹುತೇಕರು 50 ವರ್ಷಕ್ಕಿಂತ ಕೆಳ ವಯಸ್ಸಿನವರಾಗಿರುವುದೇ ಸದ್ಯ ಜನರಲ್ಲಿ ಆತಂಕಕ್ಕೆ ಮನೆ ಮಾಡಿಕೊಟ್ಟಿದೆ. ಈ ಎಲ್ಲ ಘಟನೆಗಳ ನಡುವೆ ಭೀತಿಗೊಳಗಾದ ಅದೆಷ್ಟೋ ಮಂದಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ, ಖಾತರಿಗಾಗಿ ಹೃದಯ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ತಪಾಸಣೆಗೂ ಒಳಗಾಗಲು ಮುಂದಾಗುತ್ತಿದ್ದಾರೆ.
ಇದನ್ನು ಓದಿದ್ದೀರಾ? ಹೆಚ್ಚುತ್ತಿರುವ ಹೃದಯಾಘಾತ | ಡಾ. ರವೀಂದ್ರನಾಥ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ
ಇವೆಲ್ಲವೂ ಮಾಧ್ಯಮಗಳು ಸೃಷ್ಟಿಸಿದ ಆತಂಕವೋ ಅಥವಾ ನೈಜತೆಯ ಉತ್ಪ್ರೇಕ್ಷೆಯೋ ಅಥವಾ ವಾಸ್ತವವೋ ಹೇಳಲಾಗದು. ಸದ್ಯ ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿದೆ ಎಂದು ನಾವು ಯಾವುದೇ ಅಳುಕಿಲ್ಲದೆ, ಅನುಮಾನವಿಲ್ಲದೆ ಹೇಳಬೇಕಾದರೆ ಹಲವು ಮಾನದಂಡಗಳನ್ನು ದಾಟಬೇಕಾಗುತ್ತದೆ. ಕಳೆದ ಐದು-ಹತ್ತು ವರ್ಷಗಳಲ್ಲಿ ಸಂಭವಿಸಿದ ಹೃದಯಾಘಾತ ಮತ್ತು ಸಾವು ಪ್ರಕರಣಗಳು, ಈ ವರ್ಷ-ಹಿಂದಿನ ವರ್ಷದ ಪ್ರಕರಣಗಳು- ಇವೆಲ್ಲವನ್ನೂ ಸಂಗ್ರಹಿಸಿ, ಪರಿಶೀಲಿಸುವುದು ಅಗತ್ಯ. ಇವು ಯಾವುದನ್ನೂ ಮಾಡದೆ ರಾಜ್ಯದಲ್ಲಿ ಹೃದಯಾಘಾತದಿಂದ ಸಾವು ಪ್ರಮಾಣ ಹೆಚ್ಚಾಗಿದೆ ಎಂದು ಘಂಟಾಘೋಷವಾಗಿ ಸಾರಲಾಗದು, ಈ ಮೂಲಕ ಜನರಲ್ಲಿ ಸೃಷ್ಟಿಯಾಗಿರುವ ಆತಂಕವೆಂಬ ಉರಿಯುವ ಕೆಂಡಕ್ಕೆ ಇನ್ನಷ್ಟು ತುಪ್ಪ ಸುರಿಯುವ ಅಚಾತುರ್ಯ ಮಾಡಲಾಗದು.
ಹಾಸನದಲ್ಲಿ ಹೃದಯಾಘಾತ ಪ್ರಕರಣ
ಹಾಸನದಲ್ಲಿ ಸೋಮವಾರ ಒಂದು ದಿನದಲ್ಲೇ ನಾಲ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ಮತ್ತೆ ಮೂವರು ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದು ಮೂವರೂ 30 ವರ್ಷ ದಾಟದ ಯುವಜನರು. ಈ ಪೈಕಿ ಹರ್ಷಿತಾ ಎಂಬ 22 ವರ್ಷದ ಯುವತಿಯೂ ಸೇರಿದ್ದಾರೆ. ಉಳಿದಂತೆ ಇನ್ನಿಬ್ಬರು 27, 30 ವರ್ಷದ ಯುವಕರು. 2025ರ ಮೇ 20ರಿಂದ ಜೂನ್ 30ರವರೆಗೆ ಸುಮಾರು 21 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ ನಾಲ್ವರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. 25 ವರ್ಷದೊಳಗಿನ ಮೂವರು ಯುವತಿಯರು, ಇಬ್ಬರು ಯುವಕರು, 30 ವರ್ಷ ಮೇಲಿನ 16 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಕೆಲವು ಆತ್ಮಹತ್ಯೆ ಪ್ರಕರಣಗಳು ಆದರೆ ಹೃದಯಾಘಾತದ ಬಣ್ಣ ನೀಡಲಾಗಿದೆ ಎಂಬ ಆರೋಪಗಳೂ ಇವೆ, ಅದಿರಲಿ. ಆದರೆ ಹಾಸನದಲ್ಲಿ ದಾಖಲಾಗುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ, ತುಮಕೂರು, ಧಾರವಾಡ ಹೀಗೆ ಇತರೆ ಜಿಲ್ಲೆಗಳಲ್ಲಿ ದಾಖಲಾದ ಹೃದಯಾಘಾತ ಪ್ರಕರಣಗಳ ಮೇಲೆ ಬೆಳಕು ಚೆಲ್ಲಲಾಗುತ್ತಿದೆ.
ಈ ಎಲ್ಲ ಬೆಳವಣಿಗೆ ನಡುವೆ ಈಗಾಗಲೇ ಈ ಸರಣಿ ಸಾವುಗಳಿಗೆ ನಿಖರ ಕಾರಣವನ್ನು ಪತ್ತೆಹಚ್ಚಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. 10 ದಿನಗಳ ಒಳಗಾಗಿ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಯುವಕರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆ ಕಾರಣವಾಗಿರಬಹುದೇ? ಎಂಬ ಬಗ್ಗೆ ಅಧ್ಯಯನ ನಡೆಸಲು ಫೆಬ್ರವರಿಯಲ್ಲೇ ಒಂದು ಸಮಿತಿ ನಡೆಸಲಾಗಿತ್ತು. ಇದೀಗ ಅದೇ ಸಮಿತಿ ಸದ್ಯ ರಾಜ್ಯದಲ್ಲಿ ಮುಖ್ಯವಾಗಿ ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ನೀಡಲಿದೆ.
ಲಸಿಕೆಯೇ ಕಾರಣವೆಂಬ ಅನುಮಾನ
2020ರ ಮಾರ್ಚ್‌ನಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭಿಸಿತು. ಕೆಲವೇ ದಿನಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವಾಗಿ ಹರಡಿತು. 2021ರ ಜನವರಿಯಿಂದ ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭಗೊಂಡಿತು. ಬ್ರಿಟನ್ ಮೂಲದ ಔಷಧ ತಯಾರಿಕಾ ಕಂಪನಿ ಆಸ್ಟ್ರಾಜೆನೆಕಾ ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಹಯೋಗದಿಂದ ತಯಾರಿಸಿದ ಕೋವಿಶೀಲ್ಡ್ ಲಸಿಕೆ, ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಗೆ ದೇಶದಲ್ಲಿ ಅನುಮೋದನೆ ನೀಡಲಾಗಿದೆ.
ಈ ಲಸಿಕೆ ಪಡೆದ ಬಳಿಕವೇ ಹೃದಯಾಘಾತ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂಬ ಚರ್ಚೆ ಲಸಿಕೆ ನೀಡಿಕೆ ಆರಂಭವಾದ ಕೆಲವೇ ತಿಂಗಳುಗಳಲ್ಲಿ ಶುರುವಾಯಿತು. ಅದರಲ್ಲೂ ನಟ ಪುನೀತ್ ರಾಜ್‌ಕುಮಾರ್ ಹಠಾತ್ ನಿಧನದ ವೇಳೆ ಹಲವು ತಜ್ಞರು ಲಸಿಕೆಯತ್ತ ಬೆರಳು ಮಾಡಿದರು. ಹೃದಯಾಘಾತದಿಂದ ಯುವಕರು ಮೃತಪಡುವ ಘಟನೆಗಳು ಹೆಚ್ಚು ಮುನ್ನೆಲೆಗೆ ಬರಲು ಶುರುವಾಯಿತು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಆತಂಕವನ್ನು ತೋಡಿಕೊಂಡರು. ಯಾವುದೇ ಯುವಕರು ಮೃತಪಟ್ಟರು ಲಸಿಕೆಯತ್ತ ಬೊಟ್ಟು ಮಾಡುವುದು ರೂಢಿಯೇ ಆಯಿತು.
ಇವೆಲ್ಲವುದಕ್ಕೂ ಕಾರಣವೂ ಇದೆ. ಆಸ್ಟ್ರಾಜೆನೆಕಾ ಸಂಸ್ಥೆಯು ತಾನು ತಯಾರಿಸಿದ ಕೋವಿಡ್ ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿತು. ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟವಾಗಿ ಕೊರೋನ ಲಸಿಕೆ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಆಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದ ಮುಂದಿಟ್ಟ ದಾಖಲೆಗಳ ಮೂಲಕ ಒಪ್ಪಿಕೊಂಡಿದೆ.
ಕೋವಿಶೀಲ್ಡ್ ಲಸಿಕೆಯು ಅಪರೂಪದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವುದು, ಪ್ಲೇಟ್‌ಲೆಟ್ ಪ್ರಮಾಣ ಕಡಿಮೆಯಾಗಲು ಕಾರಣವಾಗಬಹುದು. ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಅಥವಾ ಟಿಟಿಎಸ್ ಎಂಬ ರೋಗ ಲಕ್ಷಣಕ್ಕೆ ಕಾರಣವಾಗಬಹುದು ಎಂದು ತಯಾರಿಕಾ ಸಂಸ್ಥೆಯೇ ಒಪ್ಪಿಕೊಂಡಿದೆ. ತಯಾರಿಕಾ ಸಂಸ್ಥೆಯೇ ಲಸಿಕೆಯ ಅಡ್ಡಪರಿಣಾಮಗಳನ್ನು ಒಪ್ಪಿಕೊಂಡ ಬಳಿಕ ಯುವಕರ ಹಠಾತ್ ಸಾವಿಗೆ ಲಸಿಕೆಗಳೇ ಕಾರಣ ಎಂಬ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಯಿತು, ದಿಢೀರ್ ಆಗಿ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಣ್ಮರೆಯಾಯಿತು, ಲಸಿಕೆಯಲ್ಲೂ ತನ್ನ ಪ್ರಚಾರ ಮಾಡಿಕೊಂಡಿದ್ದ ಮೋದಿ ಟ್ರೋಲಿಗರ ವಿಷಯವಸ್ತುವಾದರು. ಇಂದಿಗೂ ಪ್ರಸ್ತುತ ಬಹುತೇಕ ಆರೋಗ್ಯ ಸಮಸ್ಯೆಗೆ ಲಸಿಕೆಯೇ ಕಾರಣ ಎಂಬುದು ಹಲವು ಜನ ಸಾಮಾನ್ಯರ, ತಜ್ಞರ ವಾದ.
Why @narendramodi picture is now missing in COVID VACCINATION CERTIFICATE? pic.twitter.com/Q529t1uNkR
— Sathivel Arumugam (@mallaisakthi) May 2, 2024
ಕೋವಿಶೀಲ್ಡ್ ಮಾತ್ರವಲ್ಲ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವು ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದ ಸುಮಾರು ಒಂದು ವರ್ಷದ ಬಳಿಕ ಅಡ್ಡಪರಿಣಾಮವನ್ನು ಉಂಟು ಮಾಡಿದೆ ಎಂದು ಹೇಳಿದೆ. ಅದರಲ್ಲೂ ಮುಖ್ಯವಾಗಿ ಹದಿಹರೆಯದವರಲ್ಲಿ ಮತ್ತು ಯುವಕರಲ್ಲಿ ಹೆಚ್ಚಾಗಿ ಈ ಅಡ್ಡಪರಿಣಾಮಗಳು ಕಾಣಿಸಿಕೊಂಡಿದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. 1024 ಜನರ ಮೇಲೆ ಅಧ್ಯಯನ ನಡೆಸಲಾಗಿದ್ದು, ಈ ಪೈಕಿ 635 ಹದಿಹರೆಯದವರು ಮತ್ತು 391 ಯುವಕರಾಗಿದ್ದರು. 304 ಹದಿಹರೆಯದವರು ಅಥವಾ ಸುಮಾರು ಶೇಕಡ 48ರಷ್ಟು ಜನರು ಶ್ವಾಸನಾಳದ ಸೋಂಕಿಗೆ ತುತ್ತಾಗಿರುವುದು ಅಧ್ಯಯನದಲ್ಲಿ ಬಯಲಾಗಿದೆ. ಈ ವರದಿಗಳು, ಮಾಧ್ಯಮಗಳ ವಿಜೃಂಭಣೆ ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು ಎಂಬುದನ್ನು ಒಪ್ಪತಕ್ಕದ್ದು.
ಲಸಿಕೆಯಲ್ಲ ಕೋವಿಡ್ ಕಾರಣ
ಇನ್ನೊಂದೆಡೆ ಯುವಕರಿಗೆ ಹೃದಯಾಘಾತವಾಗಲು ಕೋವಿಡ್ ಲಸಿಕೆಯಲ್ಲ, ಕೋವಿಡ್ ಸೋಂಕು ಕಾರಣ ಎಂಬ ವಾದಗಳೂ ಇವೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ ಅಂದರೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್(NIH) ಬೆಂಬಲಿತ ಅಧ್ಯಯನದ ಪ್ರಕಾರ, ಕೋವಿಡ್ ಸೋಂಕು ಆರಂಭದಲ್ಲಿ SARS-CoV-2 ವೈರಸ್ ತಳಿ ವೃದ್ಧಿಯಾದಾಗ ಲಸಿಕೆ ಪಡೆಯದ ಜನರಲ್ಲಿ ಮೂರು ವರ್ಷಗಳವರೆಗೆ ಹೃದಯಾಘಾತ, ಪಾರ್ಶ್ವವಾಯು ಮತ್ತು ಸಾವಿನ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಾಗಿದೆ. ಹೃದಯ ಕಾಯಿಲೆ ಇರುವ ಮತ್ತು ಇಲ್ಲದ ಜನರ ಮೇಲೆ ಈ ಸಂಶೋಧನೆಯನ್ನು ಮಾಡಲಾಗಿದೆ. ಈ ವೇಳೆ ಕೋವಿಡ್ ಸೋಂಕು ಕಾಣಿಸಿಕೊಂಡ ಮೂರು ವರ್ಷಗಳ ಅವಧಿಯವರೆಗೆ ಹೃದಯಾಘಾತದ ಅಪಾಯ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಸಂಶೋಧನಾ ವರದಿ ಹೇಳಿದೆ.
ಕೋವಿಡ್ ಸೋಂಕು ತಗುಲದವರಿಗಿಂತ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರಲ್ಲಿ ಹೃದಯಸಂಬಂಧಿ ಕಾಯಿಲೆಗಳ ಅಪಾಯ ಎರಡು ಪಟ್ಟು ಹೆಚ್ಚಿದೆ ಎಂದು ಅಧ್ಯಯನವು ಹೇಳಿದೆ. ಆದರೆ ತೀವ್ರತರವಾದ ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಹೃದಯಾಘಾತದ ಅಪಾಯ ಸುಮಾರು ನಾಲ್ಕು ಪಟ್ಟು ಹೆಚ್ಚಿದೆ ಎಂದೂ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ಅಡ್ಡ ಪರಿಣಾಮ: ನಟ ಪುನೀತ್ ರಾಜ್‌ಕುಮಾರ್ ಸಾವಿಗೆ ಲಸಿಕೆ ಕಾರಣವೇ?
NIHನ ರಾಷ್ಟ್ರೀಯ ಹೃದಯ, ಶ್ವಾಸಕೋಶ ಮತ್ತು ರಕ್ತ ಸಂಸ್ಥೆ(NHLBI)ಯ ಹೃದಯರಕ್ತನಾಳ ವಿಜ್ಞಾನ ವಿಭಾಗದ ನಿರ್ದೇಶಕ ಡೇವಿಡ್ ಗಾಫ್ ಹೇಳುವಂತೆ, “ಈ ಅಧ್ಯಯನವು ಸಾರ್ವಜನಿಕ ಆರೋಗ್ಯಕ್ಕೆ ಇನ್ನೂ ಬೆದರಿಕೆಯಾಗಿಯೇ ಉಳಿದಿರುವ ಕೋವಿಡ್‌ನ ದೀರ್ಘಕಾಲೀನ ಹೃದಯರಕ್ತನಾಳದ ಪರಿಣಾಮಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ. ಕೋವಿಡ್‌ನಿಂದಾಗಿ ದೀರ್ಘಕಾಲೀನ ಹೃದಯ ಕಾಯಿಲೆಗೆ ತುತ್ತಾಗುವ ಜನರಿಗೆ ಹೃದಯ ಕಾಯಿಲೆ ತಡೆಗಟ್ಟುವುದು ಹೇಗೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ಆದರೆ ಹೆಚ್ಚಿನ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ”
ಇನ್ನು ಅಧ್ಯಯನವು ಅನುವಂಶಿಕ ಅಂಶಗಳನ್ನೂ ಉಲ್ಲೇಖಿಸಿದೆ. ಅನುವಂಶಿಕವಾಗಿ ಹೃದಯ ಸಂಬಂಧಿ ಕಾಯಿಲೆಗಳಿದ್ದರೆ ಅಪಾಯ ಹೆಚ್ಚಾಗಿರುತ್ತದೆ ಎಂದು ತೋರಿಸಿದ ಮೊದಲ ಅಧ್ಯಯನವೂ ಇದಾಗಿದೆ. ಕೋವಿಡ್‌ಗೆ ತುತ್ತಾದವರ ಪೈಕಿ ಎ, ಬಿ ಅಥವಾ ಎಬಿ ರಕ್ತದ ಪ್ರಕಾರ ಹೊಂದಿರುವವರಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಕೋವಿಡ್ ಲಸಿಕೆ ಕಾರಣವಲ್ಲ ಎಂದ ಐಸಿಎಂಆರ್
ಕೋವಿಡ್ ಲಸಿಕೆ ಮತ್ತು ದೇಶದಲ್ಲಿನ ಹಠಾತ್ ಸಾವುಗಳಿಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(NCDC) ನಡೆಸಿದ ಅಧ್ಯಯನ ವರದಿ ಹೇಳಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. “ಐಸಿಎಂಆರ್ ಮತ್ತು ಎನ್‌ಸಿಡಿಸಿ ನಡೆಸಿದ ಅಧ್ಯಯನಗಳು ಭಾರತದಲ್ಲಿನ ಕೋವಿಡ್ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸುತ್ತವೆ. ಲಸಿಕೆಗಳಿಂದಾಗಿ ಗಂಭೀರ ಅಡ್ಡಪರಿಣಾಮ ಉಂಟಾಗಿರುವುದು ಅತಿ ಕಡಿಮೆ. ಹಠಾತ್ ಹೃದಯಾಘಾತ ಸಾವುಗಳು ಜೆನೆಟಿಕ್, ಜೀವನಶೈಲಿ, ಮೊದಲೇ ಇದ್ದ ಅನಾರೋಗ್ಯ ಮತ್ತು ಕೊರೋನ ಸೋಂಕು ನಂತರದ ಸಮಸ್ಯೆಗಳಿಂದ ಆಗಿರಬಹುದು ಎಂದು ಅಧ್ಯಯನವೇ ಹೇಳಿದೆ” ಎಂದು ಸಚಿವಾಲಯ ತಿಳಿಸಿದೆ.
ಸ್ಟೆಮಿ ಯೋಜನೆ: 2 ವರ್ಷದಲ್ಲಿ 7.49 ಲಕ್ಷ ಇಸಿಜಿ ಪರೀಕ್ಷೆ
ಹೃದಯ ಸ್ತಂಭನದಿಂದ ಮೃತಪಟ್ಟ ನಟ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ 2023ರ ಮಾರ್ಚ್‌ನಲ್ಲಿ ‘ಸ್ಟೆಮಿ’ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಕಾರ್ಯಕ್ರಮದಡಿ ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ಯನ್ನು ಜಾರಿಗೊಳಿಸಲಾಗಿದೆ. 2023ರಲ್ಲಿ ಮೊದಲ ಹಂತದಲ್ಲಿ, 2024ರ ಮಾರ್ಚ್‌ನಲ್ಲಿ ಎರಡನೇ ಹಂತದಲ್ಲಿ ರಾಜ್ಯದಾದ್ಯಂತ ಯೋಜನೆಯನ್ನು ವಿಸ್ತರಿಸಲಾಯಿತು. ಈ ಯೋಜನೆಯಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 7.49 ಲಕ್ಷ ಮಂದಿ ಇಸಿಜಿ ಪರೀಕ್ಷೆ(ಎಲೆಕ್ಟ್ರೋಕಾರ್ಡಿಯೋಗ್ರಾಮ್) ಮಾಡಿಸಿಕೊಂಡಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತದಿಂದಾಗಿ ಮೃತಪಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚು ಮುನ್ನೆಲೆಗೆ ಬರುತ್ತಿರುವ ಕಾರಣದಿಂದಾಗಿ ಸ್ಟೆಮಿಯಡಿ ಇಸಿಜಿ ಮಾಡಲಾಗುತ್ತಿದೆ. ಈ ಯೋಜನೆಯಡಿ 7,239 ತೀವ್ರ ಹೃದಯಾಘಾತ ಪ್ರಕರಣಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗಿದೆ.
ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿರುವ ಹೃದ್ರೋಗ ತಜ್ಞ ಡಾ. ಪ್ರದೀಪ್, “ಇದು ಬರೀ ಮಾಧ್ಯಮಗಳ ವರದಿಯೋ ಅಥವಾ ನೈಜವೋ ಎಂಬುದು ತಿಳಿದಿಲ್ಲ. ಆದರೆ ಯಾರೇ ದಿಢೀರ್ ಆಗಿ ಕುಸಿದು ಬಿದ್ದು ಸತ್ತರೆ ಅದು ಪ್ರತಿ ಬಾರಿಯೂ ಹೃದಯಾಘಾತವೇ ಆಗಿರಲಾರದು, ಬೇರೆ ಕಾರಣವೂ ಇರಬಹುದು. ಆದರೆ ಸಾಮಾನ್ಯ ಕಾರಣ ಹೃದಯಾಘಾತ ಆಗಿರುತ್ತದೆ. ಸಾಯುವುದಕ್ಕೂ ಮುನ್ನ ಇಸಿಜಿ ಅಥವಾ ಏನಾದರೂ ಪರೀಕ್ಷೆ ಮಾಡಿಸಿಕೊಂಡಿದ್ದರೆ ಕಾರಣವೇನು ಎಂದು ತಿಳಿದುಕೊಳ್ಳಬಹುದು. ಮಿದುಳಿನ ರಕ್ತಸ್ರಾವ, ಪಲ್ಮನರಿ ಎಂಬಾಲಿಸಮ್- ಹೀಗೆ ಹಲವು ಕಾರಣಗಳು ಇರುತ್ತದೆ” ಎಂದು ತಿಳಿಸಿದ್ದಾರೆ.
ಯುವಕರಿಗೆ ಹೃದಯಾಘಾತವಾಗಲು ಮುಖ್ಯ ಕಾರಣ ಧೂಮಪಾನ ಎನ್ನುತ್ತಾರೆ ಡಾ. ಪ್ರದೀಪ್. “ಯುವಕರಿಗೆ ಹೃದಯಾಘಾತವಾಗಲು ಧೂಮಪಾನ ಬಹುಮುಖ್ಯ ಕಾರಣವಾಗಬಹುದು. ರಕ್ತನಾಳದಲ್ಲಿ ದೊಡ್ಡ ಬ್ಲಾಕ್ ಇಲ್ಲದಿದ್ದರೂ ದಿಢೀರ್ ಆಗಿ ರಕ್ತ ಹೆಪ್ಪುಗಟ್ಟಿ ಹೃದಯಾಘಾತವಾಗುವ ಸಾಧ್ಯತೆಯಿದೆ. ಇನ್ನು ಕೆಲವರಿಗೆ ಜೆನೆಟಿಕ್ ಆಗಿ ಬಂದಿರುತ್ತದೆ. premature heart disease ಚಿಕ್ಕವಯಸ್ಸಲ್ಲೇ ಇದ್ದರೆ, ಹೃದಯಾಘಾತ ದಿಢೀರ್ ಆಗಿ ಸಂಭವಿಸಬಹುದು. ಒಂದು ಗಂಟೆಯೊಳಗೆ ಎಲ್ಲ ಲಕ್ಷಣಗಳು ಕಾಣಿಸಿ ಹೃದಯಾಘಾತವಾದರೆ ಮಾತ್ರ ಅದನ್ನು ದಿಢೀರ್ ಹೃದಯಾಘಾತ ಎನ್ನಬಹುದು. ಆದರೂ ಕೆಲವು ಸಣ್ಣಪುಟ್ಟ ಲಕ್ಷಣಗಳು ಮೊದಲೇ ಇರುತ್ತದೆ” ಎಂದು ಹೇಳಿದ್ದಾರೆ.
“ನಾವು ಸರಿಯಾದ ಪರಿಶೀಲನೆಯನ್ನು ನಡೆಸದೆ ಯುವಕರು ಹೃದಯಾಘಾತದಿಂದಲೇ ಮೃತಪಟ್ಟರು ಎಂದು ಹೇಳುವುದು ಕಷ್ಟ. ಕೋವಿಡ್‌ನ ಮೊದಲ ಮತ್ತು ಎರಡನೇ ಅವಧಿಯಲ್ಲಿ ಸೋಂಕಿನಿಂದಾಗಿ ದಿಢೀರ್ ಹೃದಯಾಘಾತ ನಡೆದಿದೆ. ಹೀಗೆ ವೈರಸ್‌ಗಳಿಂದಲೂ ಹೃದಯಾಘಾತ ಆಗಬಹುದು. ಅಷ್ಟು ಮಾತ್ರವಲ್ಲದೆ ಅತಿ ಹೆಚ್ಚು ಒತ್ತಡ, ಅನಾರೋಗ್ಯಕರ ಜೀವನಶೈಲಿ, ದೈಹಿಕ-ಮಾನಸಿಕ ದಣಿದಿರುವವರಿಗೆ ಹೃದಯಕ್ಕೆ ಒತ್ತಡವಾಗಿ ರಕ್ತ ಹೆಪ್ಪುಗಟ್ಟಬಹುದು” ಎಂದಿದ್ದಾರೆ.
ದಿಢೀರ್ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೃದ್ರೋಗ ತಜ್ಞರು, “ಲಸಿಕೆ ಪಡೆದು ಮೂರು ನಾಲ್ಕು ವರ್ಷವಾಗಿದೆ, ಈಗಲೂ ಅದರ ಪ್ರಭಾವ ಇರುತ್ತದೆ ಎಂಬುದು ಅಸಾಧ್ಯ. ಕೋಟ್ಯಾಂತರು ಜನರು ಲಸಿಕೆ ಪಡೆದುಕೊಂಡಿದ್ದಾರೆ. ಬರೀ ಯುವಕರಿಗೆ ಮಾತ್ರ ಲಸಿಕೆ ನೀಡಿರುವುದಲ್ಲ. ಕೋವಿಡ್ ಸಂದರ್ಭದಲ್ಲಿ ಸೋಂಕು ಇತ್ತು. ಆದರೆ ಅದು ಲಸಿಕೆಯಿಂದಲೇ ಅಂತ ಹೇಳುವುದು ಕಷ್ಟ. ಅದು ಸೋಂಕು ಕೂಡಾ ಆಗಿರಬಹುದು. ಈ ಸಂಬಂಧ ಯಾವುದೇ ಅಧ್ಯಯನವಿಲ್ಲ. ಅಷ್ಟಕ್ಕೂ ಲಸಿಕೆ ಒಂದಿಬ್ಬರಿಗೆ ಕೊಟ್ಟಿರುವುದಲ್ಲ ಇಡೀ ದೇಶಕ್ಕೆ ಕೊಡಲಾಗಿದೆ. ಇಷ್ಟು ದಿನಗಳಾದ ನಂತರ ಲಸಿಕೆ ಪ್ರಭಾವ ಇದೆ ಎಂಬುದು ಅಸಾಧ್ಯ, ಸಾಧ್ಯತೆಗಳು ತೀರಾ ಕಡಿಮೆ” ಎಂದು ಅಭಿಪ್ರಾಯಿಸಿದ್ದಾರೆ.
“ಸದ್ಯ ಯುವಕರು ಹೃದಯ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಅದು ಒಳ್ಳೆಯದು. ಆದರೆ ಅದಕ್ಕಿಂತ ಮುಖ್ಯ ಜೀವನಶೈಲಿಯನ್ನು ಉತ್ತಮಗೊಳಿಸುವುದು. ಇವೆಲ್ಲವೂ ನಮ್ಮ ಜೀವನಶೈಲಿಯ ಮೇಲೆ ಅವಲಂಬಿತ. ಜೆನೆಟಿಕ್ ಸಮಸ್ಯೆ ಮುಖ್ಯವಾಗಿದ್ದರೂ ಉತ್ತಮ ಆಹಾರ ಸೇವನೆ, ಡಯೆಟ್ ಮಾಡುವುದು ಮುಖ್ಯ. ಸದ್ಯ ಎಲ್ಲರೂ ಸ್ವಿಗ್ಗಿ, ಜೊಮ್ಯಾಟೊ ಅಂತ ಆರ್ಡರ್ ಮಾಡಿಕೊಂಡು ಹೊರಗಿನ ಆಹಾರವನ್ನೇ ಸೇವಿಸುತ್ತಾರೆ, ಎಣ್ಣೆಯಲ್ಲಿ ಕರಿದ್ದಿದ್ದನ್ನೇ ತಿನ್ನುವುದು ತುಂಬಾ ಹೆಚ್ಚಾಗಿದೆ. ಈ ರೀತಿಯ ಜೀವನಶೈಲಿಯಿಂದ ದೂರವಿರಬೇಕು. ವ್ಯಾಯಾಮ ಮಾಡಬೇಕು. ವಾರದಲ್ಲಿ ಐದು ದಿನವಾದರೂ ಜಾಗಿಂಗ್, ವಾಕಿಂಗ್‌ನಂತಹ ಮೈದಣಿಸುವ ವ್ಯಾಯಾಮವನ್ನು ಮಾಡಬೇಕು. ಮಧುಮೇಹ, ರಕ್ತದೊತ್ತಡ ಇದೆಯಾ ಎಂದು ನೋಡಿಕೊಂಡು ಅದನ್ನು ನಿಯಂತ್ರಿಸಬೇಕು. ಪುನೀತ್ ರಾಜ್‌ಕುಮಾರ್ ಅವರು ಮೃತಪಟ್ಟಾಗಲೂ ತುಂಬಾ ಜನ ಭಯಪಟ್ಟು ಆಸ್ಪತ್ರೆಗೆ ಬರುತ್ತಿದ್ದರು, ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಈಗಲೂ ಅದೇ ರೀತಿ ಭಯಪಟ್ಟು ತಪಾಸಣೆಗೆ ಒಳಗಾಗುತ್ತಿದ್ದಾರೆ. ಒಂದೆರಡು ದಿನ ಕಳೆದಾಗ ಜನರು ಎಲ್ಲವನ್ನೂ ಮರೆತುಬಿಡುತ್ತಾರೆ. ಆತಂಕಕ್ಕೆ ಒಳಗಾಗಿ ತಪಾಸಣೆ ಮಾಡಿಸಿಕೊಳ್ಳುವುದಕ್ಕಿಂತ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ” ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ವಿವಾದ; ಕೋವಿಡ್ ಕಪಾಟಿನಲ್ಲಿರುವ ಅಸ್ತಿಪಂಜರಗಳು ಹೊರಬೀಳಬಹುದೆಂಬ ಭಯವೇ?
ಇನ್ನು ಬೆಂಗಳೂರು ಗ್ರಾಮಾಂತರ ಸಂಸದ, ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರು “ಎದೆ ಭಾರ, ಎದೆಯುರಿ ಆದಾಗ ಆ್ಯಸಿಡಿಟಿ ಎಂದು ಕಡೆಗಣಿಸಬೇಡಿ. ತಪಾಸಣೆಗೆ ಒಳಗಾಗಿ” ಎಂದು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಯುವಕರು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸುವ ನಿರ್ಧಾರವನ್ನು ಮಂಜುನಾಥ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ್ ಅವರನ್ನು ಈದಿನ ಸಂಪರ್ಕಿಸಲು ಪ್ರಯತ್ನಿಸಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಸಾಮಾನ್ಯವಾಗಿ ವಯಸ್ಸಾದವರಿಗೆ, ಮಧುಮೇಹ ಮೊದಲಾದ ಕಾಯಿಲೆಗಳು ಇರುವವರಿಗೆ ಹೃದಯಾಘಾತವಾಗುತ್ತದೆ. ಆದರೆ ಸದ್ಯ ಯುವಕರಿಗೆ ಆಗುತ್ತಿದೆ ಎಂಬುದು ಭೀತಿಗೆ ಕಾರಣ. ಹಾಗೆಂದು ಈ ಹಿಂದೆ ಎಂದೂ ಯುವಕರಿಗೆ ಹೃದಯಾಘಾತವಾಗಿಲ್ಲ ಎಂದು ಹೇಳಲಾಗದು. 20 ವರ್ಷದ ಹಿಂದಿನ ಕಾಲಕ್ಕೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಹಿಂದೆಯೂ ಎಷ್ಟೋ ಸಾವು ಸಂಭವಿಸಿರಬಹುದು, ಆದರೆ ಇಂದಿನಂತೆ ಎಲ್ಲವೂ ವಿಡಿಯೋ ಮಾಡಿಕೊಳ್ಳುವ ಪದ್ಧತಿ ಅಂದು ಯಾರಿಗೂ ಇರಲಿಲ್ಲ, ಅಷ್ಟರಮಟ್ಟಿಗೆ ತಂತ್ರಜ್ಞಾನ ವಿಸ್ತಾರಗೊಂಡಿರಲಿಲ್ಲ.
ಮನೆಯಲ್ಲೇ ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಅಗತ್ಯವೆಂಬ ಒಂದೇ ಕಾರಣಕ್ಕೆ ಡೆತ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುವಾಗ ಆಗುವ ಪ್ರಮಾದವೂ ಇದಾಗಿರಬಹುದು. ಯಾವುದೋ ಕಾರಣಕ್ಕೆ ಮೃತರಾಗಿದ್ದರೂ ಸುಲಭವಾಗಿ ಸಿಗುವ ಕಾರಣವಾದ ಹೃದಯಾಘಾತಕ್ಕೆ ಜೋತು ಬಿದ್ದಿರಬಹುದು, ಅದೇ ಡೆತ್ ಸರ್ಟಿಫಿಕೇಟ್‌ನಲ್ಲಿ ಸೇರಿರಬಹುದು. ಹೀಗೆ ಹಲವು ಗೊಂದಲಗಳಿವೆ. ಅದರ ನಿವಾರಣೆ ಕೊಂಚ ಕಷ್ಟಸಾಧ್ಯ. ಜನರ ಆತಂಕ ದೂರವಾಗಬೇಕಾದರೆ, ಸ್ಪಷ್ಟನೆ ದೊರೆಯಬೇಕಾದರೆ ಆಳ-ಅಗಲವಾದ ತನಿಖೆ ನಡೆಯುವುದು ಅನಿವಾರ್ಯ.
ಜೊತೆಗೆ ಜನರು, ಯುವಕರು ಆತಂಕಕ್ಕೆ ಒಳಗಾಗದೆ ಮುನ್ನೆಚ್ಚರಿಕೆಯನ್ನು ವಹಿಸುವುದು ಉತ್ತಮ. ಭೀತಿ ಎಂಬುದು ಇನ್ನಷ್ಟೂ ನಮ್ಮನ್ನು ಒತ್ತಡಕ್ಕೆ ದೂಡುತ್ತದೆ, ನಮ್ಮ ಹೃದಯದ ಕೆಲಸವನ್ನೂ ಹೆಚ್ಚಿಸುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ, ವ್ಯಾಯಾಮ ಮಾಡಿ. ಎಲ್ಲವುದಕ್ಕೂ ಮುನ್ನ ‘ವಾಟ್ಸಾಪ್ ಯೂನಿವರ್ಸಿಟಿ’ಯ ವಿದ್ಯಾರ್ಜನೆಯಿಂದ ಹೊರಬನ್ನಿ. ಎಲ್ಲರ ಸಲಹೆಯನ್ನು ಮೈಗೊಡ್ಡಿಕೊಂಡು ದೇಹವನ್ನು ಅಗತ್ಯಕ್ಕಿಂತ ಹೆಚ್ಚು ದಣಿಸದಿರಿ. ಆತಂಕವನ್ನು ‘ಹಾರ್ಟ್’ಗೆ ಹಚ್ಚಿಕೊಂಡು ಒತ್ತಡಕ್ಕೆ ಒಳಗಾಗದಿರಿ. ಮಾಧ್ಯಮಗಳ ಅಬ್ಬರ, ಕೂಗಾಟವೂ ಆತಂಕ, ಭಯಗಳನ್ನು ಉಂಟು ಮಾಡುತ್ತದೆ. ಅವುಗಳನ್ನು ನಿಮ್ಮ ವಿವೇಚನೆ ಬಳಸಿ ನೋಡಿ. ಆರೋಗ್ಯ ಎಂದಾಕ್ಷಣ ಎಲ್ಲರೂ ಸಲಹೆ-ಸೂಚನೆಗಳನ್ನು ಕೊಡಲು ಮುಂದಾಗುತ್ತಾರೆ. ಆದರೆ ಒಬ್ಬೊಬ್ಬರ ದೇಹ ಒಂದೊಂದು ರೀತಿ ಎನ್ನುವುದನ್ನು ಮೊದಲು ಅರಿಯಿರಿ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




