ಪಂಜಾಬ್ ಅಥವಾ ದೆಹಲಿಯಂತಹ ಇತರ ರಾಜ್ಯಗಳಲ್ಲಿ ಮಕ್ಕಳ ರಕ್ಷಣೆಗಾಗಿ ನೋಡಲ್ ಅಧಿಕಾರಿಗಳ ನೇಮಕವು ಯಶಸ್ವಿಯಾಗಿದೆ. ಇದರಿಂದ ಮಕ್ಕಳ ಕಳ್ಳಸಾಗಾಣಿಕೆ ತಡೆ ಮತ್ತು ಪುನರ್ವಸತಿ ಸುಧಾರಣೆಯಾಗಿದೆ. ಕರ್ನಾಟಕದಲ್ಲಿ ಇದನ್ನು ಅನುಸರಿಸಿದರೆ, ಮಕ್ಕಳನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸಿ ಶಿಕ್ಷಣ ಮತ್ತು ವೃತ್ತಿ ತರಬೇತಿಗೆ ಸೇರಿಸಬಹುದು. ಆದರೆ ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಹಾಗೂ ಸಮಾಜದ ಬೆಂಬಲ ಅಗತ್ಯ.
ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ನಗರಗಳ ರಸ್ತೆಗಳು, ದೇವಾಲಯಗಳು ಸೇರಿದಂತೆ ಹಲವೆಡೆ ಮಕ್ಕಳ ಭಿಕ್ಷಾಟನೆಯ ದೃಶ್ಯಗಳನ್ನು ಕಾಣಬಹುದು. ಇದು ಕೇವಲ ಆರ್ಥಿಕ ಬಡತನದ ಸಮಸ್ಯೆಯಲ್ಲ. ಬದಲಿಗೆ ಮಾನವ ಹಕ್ಕುಗಳ ಉಲ್ಲಂಘನೆ, ಮಕ್ಕಳ ಶೋಷಣೆ ಮತ್ತು ಸಾಮಾಜಿಕ ಅಸಮಾನತೆಯ ಸಂಕೇತವಾಗಿದೆ. ಇದರಿಂದ ನಮ್ಮ ಸಮಾಜದ ಅತ್ಯಂತ ದುರ್ಬಲತೆ ಬಯಲಾಗುತ್ತದೆ.
ಕರ್ನಾಟಕ ಹೈಕೋರ್ಟ್ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಭಿಕ್ಷಾಟನೆ ತಡೆದು ಅವರ ಪುನರ್ವಸತಿಗೆ ಸಮಗ್ರ ಕ್ರಿಯಾ ಯೋಜನೆ ರೂಪಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಆದೇಶವು ಕೇವಲ ಒಂದು ನ್ಯಾಯಾಲಯದ ನಿರ್ಧಾರವಲ್ಲ, ಬದಲಿಗೆ ನಮ್ಮ ಸಮಾಜದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ, ಪ್ರಮುಖ ಮೈಲುಗಲ್ಲು.
ಹೈಕೋರ್ಟ್‌ನ ಆದೇಶ: ಒಂದು ಹೊಸ ಆರಂಭ
ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ʼಲೆಟ್ಸ್ ಕಿಟ್ ಫೌಂಢಷನ್ʼ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾ.ಸಿ ಎಂ ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಾದ ಆಲಿಸಿದ ನ್ಯಾಯಪೀಠ, ಜಿಬಿಎ ಸೇರಿದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳಲ್ಲಿ ಸಂಗ್ರಹಿಸಲಾಗಿರುವ ಒಟ್ಟು ಭಿಕ್ಷುಕರ ಸೆಸ್, ಅದರಲ್ಲಿ ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಲಾದ ಮೊತ್ತ, ಬಾಕಿ ಉಳಿದ ಮೊತ್ತದ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಜಿಬಿಎಗೆ ನಿರ್ದೇಶನ ನೀಡಿದೆ. ಅದೇ ರೀತಿ ಮಕ್ಕಳ ಭಿಕ್ಷಾಟನೆ ನಿರ್ಮೂಲನೆ ಮತ್ತು ಅವರ ಪುನರ್ವಸತಿಗೆ 6 ವಾರಗಳಲ್ಲಿ ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕು. ಕ್ರಿಯಾ ಯೋಜನೆ ರೂಪಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಭಿಕ್ಷುಕರ ಸೆಸ್ ಸಂಗ್ರಹಣೆ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿ ಸಲ್ಲಿಸಿರುವ ಪ್ರಮಾಣಪತ್ರವನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಂತೆ ಜಿಬಿಎ ವ್ಯಾಪ್ತಿಯಲ್ಲಿ 2024-25ರಲ್ಲಿ 86.26 ಕೋಟಿ ರೂಪಾಯಿ ಭಿಕ್ಷುಕರ ಸೆಸ್ ಸಂಗ್ರಹ ಮಾಡಲಾಗಿದ್ದು, ಅದರಲ್ಲಿ 10.32 ಕೋಟಿ. ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿ(ಸಿಆರ್‌ಸಿ)ಗೆ ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ 73.12 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಈಗ ಜಿಬಿಎ ವ್ಯಾಪ್ತಿಯಲ್ಲಿ 5 ಹೊಸ ಪಾಲಿಕೆಗಳಾಗಿದ್ದು, ಕಳೆದ ವರ್ಷದ ಬಾಕಿ 75 ಕೋಟಿ ರೂ. ಹಾಗೂ ಈ ವರ್ಷದ ಭಿಕ್ಷುಕರ ಸೆಸ್ ಪಾಲನ್ನು 2026ರ ಮಾರ್ಚ್ 31ರೊಳಗೆ ಕೇಂದ್ರ ಪರಿಹಾರ ಸಮಿತಿಗೆ ಪಾವತಿಸುವಂತೆ ಆಯಾ ಪಾಲಿಕೆಗೆಗಳ ಆಯುಕ್ತರಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಲಾಗಿದೆ.

ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು, ʼರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾದ 40.88 ಕೋಟಿ ರೂ. ಭಿಕ್ಷುಕರ ಸೆಸ್ ಪೌರಾಡಳಿತ ನಿರ್ದೇಶನಾಲಯದಿಂದ ಬರುವುದು ಬಾಕಿ ಇದೆ. ಅದೇ ರೀತಿ ಪಂಚಾಯಿತಿಗಳಲ್ಲಿ ಸಂಗ್ರಹಿಸಲಾದ ಸೆಸ್ ಬಗ್ಗೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಮಾಹಿತಿ ಬರಬೇಕಿದೆ. ಪ್ರಾಧಿಕಾರ ನಡೆಸಿದ ಸಮೀಕ್ಷೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 720 ಮಕ್ಕಳನ್ನು ಗುರುತಿಸಲಾಗಿದೆ. ಪುನರ್ವಸತಿಗೆ ಕೆಲವು ಶಿಫಾರಸುಗಳನ್ನು ಸೂಚಿಸಲಾಗಿದೆʼ ಎಂದು ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಮಕ್ಕಳ ಭಿಕ್ಷಾಟನೆಯ ಭೀಕರತೆ
ಮಕ್ಕಳ ಭಿಕ್ಷಾಟನೆಯು ದೇಶಾದ್ಯಂತ ಹರಡಿರುವ ಒಂದು ದೀರ್ಘಕಾಲದ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರು ಮಹಾನಗರದಲ್ಲಿ, ಟ್ರ್ಯಾಫಿಕ್ ಸಿಗ್ನಲ್‌ಗಳಲ್ಲಿ, ರಸ್ತೆ ಬದಿಗಳಲ್ಲಿ ಮತ್ತು ದೇವಸ್ಥಾನಗಳ ಸುತ್ತಮುತ್ತ ಮಕ್ಕಳು ಭಿಕ್ಷೆ ಬೇಡುವುದು ಸಾಮಾನ್ಯ ದೃಶ್ಯ. ಇದರ ಹಿಂದೆ ಬಡತನ, ಕುಟುಂಬದ ಆರ್ಥಿಕ ಒತ್ತಡ, ಮಕ್ಕಳ ಕಳ್ಳಸಾಗಣೆ ಮತ್ತು ಕೆಲವೊಮ್ಮೆ ಮಾಫಿಯಾ ಜಾಲಗಳಂತಹ ಕಾರಣಗಳಿವೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(KSLSA) ಸಲ್ಲಿಸಿದ ವರದಿಯ ಪ್ರಕಾರ, ಮಕ್ಕಳ ಭಿಕ್ಷಾಟನೆಯನ್ನು ಆರು ವರ್ಗಗಳಾಗಿ ವಿಂಗಡಿಸಲಾಗಿದ್ದು, ಗುಂಪು ಭಿಕ್ಷಾಟನೆ, ಕುಟುಂಬ ವ್ಯವಹಾರ ಅಥವಾ ಕಾರ್ಮಿಕ ಕೆಲಸದಲ್ಲಿ ತೊಡಗಿರುವ ಮಕ್ಕಳು, ಅಂಗವೈಕಲ್ಯ ಹೊಂದಿರುವ ಮಕ್ಕಳ ಭಿಕ್ಷಾಟನೆ, ತಾಯಂದಿರೊಂದಿಗೆ ಶಿಶುಗಳ ಭಿಕ್ಷಾಟನೆ, ಮಾಫಿಯಾ ಬಲವಂತದಿಂದ ಭಿಕ್ಷಾಟನೆ ಅಥವಾ ಮಾರಾಟ ಎಂಬುದಾಗಿ ವರ್ಗೀಕರಿಸಲಾಗಿದೆ.

ಈ ವರ್ಗೀಕರಣವು ಸಮಸ್ಯೆಯ ಸಂಕೀರ್ಣತೆಯನ್ನು ತೋರಿಸುತ್ತದೆ. ಇದು ಕೇವಲ ಭಿಕ್ಷೆಯಲ್ಲ, ಬದಲಿಗೆ ಮಕ್ಕಳ ಶೋಷಣೆ, ದೌರ್ಜನ್ಯ ಮತ್ತು ಶಿಕ್ಷಣದಿಂದ ವಂಚಿತಗೊಳ್ಳುವ ಅಪಾಯದ ಮಾರ್ಗಗಳಾಗಿವೆ.
ಭಾರತದ ಸಂವಿಧಾನದ 21A ಅನುಚ್ಛೇದದಂತೆ, 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಇದೆ. ಆದರೆ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ಈ ಹಕ್ಕಿನಿಂದ ದೂರವಾಗುತ್ತಾರೆ. ಅಲ್ಲದೆ, ಜುವೆನೈಲ್ ಜಸ್ಟಿಸ್(ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್) ಆಕ್ಟ್ 2015ರಂತಹ ಕಾನೂನುಗಳು ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲು ಉದ್ದೇಶಿಸಿವೆ. ಆದರೂ, ಅನುಷ್ಠಾನದ ಕೊರತೆಯಿಂದಾಗಿ ಸಮಸ್ಯೆ ಮುಂದುವರೆದಿದೆ.

ಕರ್ನಾಟಕದಲ್ಲಿ, ಬೆಗರಿ ಸೆಸ್(Beggar Cess)ನಿಂದ ಸಂಗ್ರಹಿಸಿದ ಸುಮಾರು 7,093 ಕೋಟಿ ರೂಪಾಯಿಗಳ ಬಳಕೆಯ ಬಗ್ಗೆ ಹೈಕೋರ್ಟ್ ಈಗಾಗಲೇ ಪ್ರಶ್ನಿಸಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.
ಬೆಗರಿ ಸೆಸ್ (Beggar Cess) ಎಂದರೇನು?
ಕರ್ನಾಟಕದಲ್ಲಿ ಬೆಗರಿ ಸೆಸ್(ಭಿಕ್ಷಾಟನೆ ಸೆಸ್ ಅಥವಾ ಬೆಗರ್ ಸೆಸ್) ಎಂಬುದು ಭಿಕ್ಷಾಟನೆಯನ್ನು ನಿಯಂತ್ರಿಸಲು ಮತ್ತು ಭಿಕ್ಷುಕರ ಪುನರ್ವಸತಿಗಾಗಿ ಸಂಗ್ರಹಿಸಲಾಗುವ ಒಂದು ವಿಶೇಷ ಶುಲ್ಕವಾಗಿದೆ. ಇದು ಕರ್ನಾಟಕ ಪ್ರೊಹಿಬಿಷನ್ ಆಫ್ ಬೆಗರಿ ಆಕ್ಟ್, 1975(Karnataka Prohibition of Beggary Act, 1975) ಅಡಿಯಲ್ಲಿ ಜಾರಿಯಲ್ಲಿದ್ದು, ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆಯ ಮೇಲೆ ಶೇ.3ರಷ್ಟು ಸೆಸ್ ವಿಧಿಸುತ್ತವೆ. ಉದಾ: BBMP, ಪುರಸಭೆಗಳಂತಹ ಸಂಸ್ಥೆಗಳು ಸಂಗ್ರಸಿಸಿದ ಸೆಸ್ ಹಣವನ್ನು ಭಿಕ್ಷುಕರ ರಕ್ಷಣೆ, ತರಬೇತಿ, ಉದ್ಯೋಗ ಮತ್ತು ಪುನರ್ವಸತಿ ಕೇಂದ್ರ(Beggar Relief Centres)ಗಳಿಗೆ ಬಳಸಬೇಕು ಎಂಬುದು ಕಾನೂನಿನ ಉದ್ದೇಶವಾಗಿದೆ.
ಆದರೆ, ಬೆಂಗಳೂರಿನಲ್ಲಿ ಮಾತ್ರ ಮಕ್ಕಳ ಭಿಕ್ಷಾಟನೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಳೆದ 5 ವರ್ಷಗಳಲ್ಲಿ(2022ರ ವರೆಗೆ) ಸುಮಾರು ₹404.5 ಕೋಟಿ ಬೆಗರಿ ಸೆಸ್ ಸಂಗ್ರಹವಾಗಿರುವುದಾಗಿ ಅಂಕಿ ಅಂಶಗಳು ಹೇಳುತ್ತವೆ. 2025ರ ವರದಿಗಳ ಪ್ರಕಾರ ರಾಜ್ಯಾದ್ಯಂತ ಕಳೆದ 4 ವರ್ಷಗಳಲ್ಲಿ ಸುಮಾರು ₹7,093 ಕೋಟಿಯಷ್ಟು ಸೆಸ್ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.
ಆದರೆ ಈ ಹಣದ ಬಳಕೆಯ ಬಗ್ಗೆ ಪಾರದರ್ಶಕತೆ ಕೊರತೆ ಇದೆ. ಹಲವು ಸಂದರ್ಭಗಳಲ್ಲಿ ಸ್ಥಳೀಯ ಸಂಸ್ಥೆಗಳು ಸೆಸ್ ಹಣವನ್ನು ಸರ್ಕಾರಕ್ಕೆ ಸರಿಯಾಗಿ ಜಮಾ ಮಾಡದೇ ಇರುವುದು ಅಥವಾ ಬಳಸದೇ ಇರುವುದು ಕಂಡುಬಂದಿದೆ.
ಉದಾಹರಣೆಗೆ, BBMP ಒಂದು ಸಮಯದಲ್ಲಿ ₹130 ಕೋಟಿಯಷ್ಟು ಸೆಸ್ ಹಣವನ್ನು ಸರಿಯಾಗಿ ಬಳಸದೇ ಇರುವುದು ವರದಿಯಾಗಿದೆ.
ಮಕ್ಕಳ ಭಿಕ್ಷಾಟನೆಯು ಕೇವಲ ಮಕ್ಕಳ ಸಮಸ್ಯೆಯಲ್ಲ, ಇದು ನಮ್ಮ ಸಮಾಜದ ವೈಫಲ್ಯದ ಸಂಕೇತ. ಇದರಿಂದ ಮಕ್ಕಳು ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಯಿಂದ ವಂಚಿತರಾಗುತ್ತಾರೆ. ಅಲ್ಲದೆ, ಇದು ಮಾನವ ಕಳ್ಳಸಾಗಣೆಯಂತಹ ಗಂಭೀರ ಅಪರಾಧಗಳೊಂದಿಗೆ ಸಂಬಂಧ ಹೊಂದಿದೆ. ಕರ್ನಾಟಕದ ರಾಜ್ಯ ಮಕ್ಕಳ ರಕ್ಷಣಾ ನೀತಿ 2016(2023ರಲ್ಲಿ ಪರಿಷ್ಕರಣೆ)ರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ಅವಕಾಶವಿದೆ. ಆದರೂ ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಹಲವು ಯೋಜನೆಗಳು ವಿಫಲವಾಗುತ್ತವೆ. ಆದರೆ ಹೈಕೋರ್ಟ್‌ನ ಆದೇಶವು ಇದನ್ನು ಇನ್ನಷ್ಟು ಬಲಪಡಿಸುತ್ತದೆ.
ಸವಾಲುಗಳು
ಆದೇಶದ ಹೊರತಾಗಿಯೂ, ಸವಾಲುಗಳಿವೆ. ಬೆಗರಿ ಸೆಸ್‌ನ ಬಳಕೆಯ ಬಗ್ಗೆ ಪಾರದರ್ಶಕತೆ ಕೊರತೆ, ಪೊಲೀಸ್ ಮತ್ತು ಸಾಮಾಜಿಕ ಕಲ್ಯಾಣ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ಮಕ್ಕಳ ಪುನರ್ವಸತಿಗೆ ಸಾಕಷ್ಟು ಸಂಪನ್ಮೂಲಗಳ ಕೊರತೆ ಇದೆ. ಹೈಕೋರ್ಟ್ ಈಗಾಗಲೇ ಪೊಲೀಸ್ ಕ್ರಮಗಳ ಬಗ್ಗೆ ವರದಿ ಕೋರಿದೆ. ಇದರಲ್ಲಿ ಮಕ್ಕಳನ್ನು ಗುರುತಿಸುವುದು, ರಕ್ಷಣೆ ನೀಡುವುದು, ಶಾಲೆಗೆ ಸೇರಿಸುವುದು ಮತ್ತು ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವುದು ಸೇರಿರುವಂತೆ ಸರ್ಕಾರ ಈಗ ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗಿದೆ.
ಸಮಾಜವಾಗಿ ನಾವು ಏನು ಮಾಡಬೇಕು?
ಮೊದಲು, ಭಿಕ್ಷೆ ನೀಡುವುದನ್ನು ತಪ್ಪಿಸಿ, ಮಕ್ಕಳನ್ನು ಸ್ಥಳೀಯ ಎನ್‌ಜಿಒಗಳಿಗೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಒಪ್ಪಿಸಬೇಕು. ಮಕ್ಕಳ ಶೋಷಣೆ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸರ್ಕಾರದ ಯೋಜನೆಗಳಾದ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಬೆಂಬಲಿಸುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಬಹುದು.
ಇದನ್ನೂ ಓದಿದ್ದೀರಾ? ಲ್ಯಾಂಡ್ ಲಾರ್ಡ್: ಸಂವಿಧಾನದ ಆಶಯವಾದ ‘ಸಮಾನತೆ’ಯನ್ನು ಸಾರುವ ಚಿತ್ರ
ಉದಾಹರಣೆಗೆ, ಪಂಜಾಬ್ ಅಥವಾ ದೆಹಲಿಯಂತಹ ಇತರ ರಾಜ್ಯಗಳಲ್ಲಿ ಮಕ್ಕಳ ರಕ್ಷಣೆಗಾಗಿ ನೋಡಲ್ ಅಧಿಕಾರಿಗಳ ನೇಮಕವು ಯಶಸ್ವಿಯಾಗಿದೆ. ಇದರಿಂದ ಮಕ್ಕಳ ಕಳ್ಳಸಾಗಾಣಿಕೆ ತಡೆ ಮತ್ತು ಪುನರ್ವಸತಿ ಸುಧಾರಣೆಯಾಗಿದೆ. ಕರ್ನಾಟಕದಲ್ಲಿ ಇದನ್ನು ಅನುಸರಿಸಿದರೆ, ಮಕ್ಕಳನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸಿ ಶಿಕ್ಷಣ ಮತ್ತು ವೃತ್ತಿ ತರಬೇತಿಗೆ ಸೇರಿಸಬಹುದು. ಆದರೆ ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಹಾಗೂ ಸಮಾಜದ ಬೆಂಬಲ ಅಗತ್ಯ.





