ಇಂದು ಜಗತ್ತು ತಂತ್ರಜ್ಞಾನವನ್ನೇ ಕರಗತ ಮಾಡಿಕೊಂಡಿದ್ದರೂ, ಮನುಷ್ಯನ ಮನಸ್ಸು ಮಾತ್ರ ಧರ್ಮ, ಜಾತಿ ಮತ್ತು ರಾಜಕೀಯದ ಅಡಕತ್ತರಿಯಲ್ಲಿ ಸಿಲುಕಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗಳು ಮುಂದುವರೆಯುತ್ತಿರುವಾಗ, ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಗುಂಪು ಹತ್ಯೆಗಳು ನಮ್ಮನ್ನು ಆತಂಕಕ್ಕೆ ಒಳಪಡಿಸುತ್ತಿವೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಗಳು ಮುಂದುವರಿಯುತ್ತಿದ್ದು, ಈ ವಾರ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜನರ ಗುಂಪೊಂದು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.

ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ಪಂಗ್ಶಾ ಉಪಜಿಲ್ಲೆಯ ಹೊಸೇನ್‌ಡಂಗ ಗ್ರಾಮದಲ್ಲಿ ಬುಧವಾರ ರಾತ್ರಿ ಸುಮಾರು 11 ಗಂಟೆಗೆ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಅಮೃತ್ ಮಂಡಲ್ ಅಲಿಯಾಸ್ ಸಮ್ರಾಟ್ ಎಂಬ ವ್ಯಕ್ತಿಯನ್ನು ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಸಮ್ರಾಟ್ ‘ಸಮ್ರಾಟ್ ಬಾಹಿನಿ’ ಎಂಬ ಕ್ರಿಮಿನಲ್ ಗ್ಯಾಂಗ್‌ನ ನಾಯಕನಾಗಿದ್ದು, ಈತ ಸುಲಿಗೆ ಮತ್ತು ಕೊಲೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಕಳೆದ ವರ್ಷ ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನದಿಂದ ಪದಚ್ಯುತರಾದ ಬಳಿಕ ಈತ ದೇಶ ಬಿಟ್ಟು ಓಡಿಹೋಗಿದ್ದನು, ಆದರೆ ಇತ್ತೀಚೆಗಷ್ಟೇ ತನ್ನ ಗ್ರಾಮಕ್ಕೆ ಮರಳಿದ್ದನು. ಬುಧವಾರ ರಾತ್ರಿ ತನ್ನ ತಂಡದೊಂದಿಗೆ ಗ್ರಾಮಸ್ಥರೊಬ್ಬರ ಮನೆಯಲ್ಲಿ ಸುಲಿಗೆ ಮಾಡಲು ಯತ್ನಿಸಿದಾಗ ಜನಜಂಗುಳಿಯು ಈತನನ್ನು ಹಿಡಿದು ತೀವ್ರವಾಗಿ ಥಳಿಸಿದ್ದು, ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮೈಮೆನ್‌ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ ದೇಹಕ್ಕೆ ಬೆಂಕಿ ಹಚ್ಚಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು, ಹಿಂದುಗಳ ಆತಂಕಕ್ಕೆ ಕಾರಣವಾಗಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬರ್ಬರ ಹತ್ಯೆಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ಮೂಡಿಸಿದೆ. 27 ವರ್ಷದ ಕಾರ್ಖಾನೆ ಕಾರ್ಮಿಕ ದೀಪು ಅವರ ಮೇಲೆ ಸಹೋದ್ಯೋಗಿಯೊಬ್ಬರು ಧರ್ಮನಿಂದನೆಯ ಸುಳ್ಳು ಆರೋಪ ಮಾಡಿದ್ದರಿಂದ ಪ್ರಚೋದಿತಗೊಂಡ ಸುಮಾರು 140 ಜನರ ಉದ್ರಿಕ್ತ ಗುಂಪು, ಡಿಸೆಂಬರ್ 18ರಂದು ಅವರನ್ನು ಅಮಾನವೀಯವಾಗಿ ಥಳಿಸಿ ಕೊಲೆ ಮಾಡಿದ್ದಲ್ಲದೆ, ಅವರ ದೇಹವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿತ್ತು. ಇಂತಹ ಕೃತ್ಯಗಳನ್ನ ನೋಡಿದ ಮೇಲೆ ನಮ್ಮ ಆತ್ಮಸಾಕ್ಷಿ ಹಲವು ಪ್ರಶ್ನೆಗಳನ್ನ ಕೇಳುತ್ತಿವೆ. ಮನುಷ್ಯರು ಮನುಷ್ಯತ್ವವನ್ನು ಮರೆತು ವರ್ತಿಸುತ್ತಿರುವುದು ಯಾಕೆ? ಇದಕ್ಕೆಲ್ಲಾ ಕೊನೆ ಯಾವಾಗ? 2023ರಲ್ಲಿ ಮಾತ್ರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 500ಕ್ಕೂ ಹೆಚ್ಚು ದಾಳಿಗಳು ನಡೆದಿವೆ ಎಂದು ಮಾನವ ಹಕ್ಕು ಸಂಸ್ಥೆಗಳು ದಾಖಲಿಸಿವೆ. ಈಗ, ಈ ವಾರ ನಡೆದ ಇನ್ನೊಂದು ಘಟನೆ ನಮ್ಮನ್ನು ಮತ್ತೊಮ್ಮೆ ಆಘಾತಕ್ಕೆ ಒಳಪಡಿಸಿದೆ.

ಭಾರತ, ವೈವಿಧ್ಯತೆಯ ದೇಶವೆಂದು ಹೇಳಿಕೊಳ್ಳುವ ನಾವು, ಇದೇ ವೈವಿಧ್ಯತೆಯನ್ನು ಆಯುಧವಾಗಿ ಬಳಸಿ ಅಲ್ಪಸಂಖ್ಯಾತರನ್ನು ತುಳಿಯುವ ಘಟನೆಗಳು ಹಲವಾರಿದೆ. ‘ಬಾಂಗ್ಲಾದೇಶಿ ನುಸುಳುಕೋರ’ ಎಂಬ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಗುಂಪು ಹತ್ಯೆಗಳು ಇದರ ಸ್ಪಷ್ಟ ಉದಾಹರಣೆ. ಇಂತಹ ಕೃತ್ಯಗಳು ಗೋರಕ್ಷಣೆ, ಧಾರ್ಮಿಕ ಉದ್ವಿಗ್ನತೆ ಅಥವಾ ರಾಜಕೀಯ ಉದ್ದೇಶಗಳಿಂದ ಪ್ರೇರಿತವಾಗಿವೆ.
ಮೊಹಮ್ಮದ್ ಅಖ್ಲಾಕ್ ಹತ್ಯೆ : ದೆಹಲಿಗೆ ಅಂಟಿಕೊಂಡಿರುವ ಉತ್ತರ ಪ್ರದೇಶದ ಗಡಿಭಾಗದ ದಾದ್ರಿಯ ಬಿಸಾದ ಗ್ರಾಮದ ಮೊಹಮ್ಮದ್ ಅಖ್ಲಾಕ್ ನನ್ನು ಕಟ್ಟರ್ ಹಿಂದುತ್ವವಾದಿಗಳ ಗುಂಪೊಂದು ಜಜ್ಜಿ ಕೊಂದಿತ್ತು. ಮನೆಯ ರೆಫ್ರಿಜರೇಟರಿನಲ್ಲಿ ಗೋಮಾಂಸ ಇಟ್ಟಿದ್ದನೆಂಬ ಅನುಮಾನವಷ್ಟೇ ಈ ಹತ್ಯೆಯ ಹಿಂದಿನ ಕಾರಣವಾಗಿತ್ತು. ಈ ಹತ್ಯೆಯ ಎಲ್ಲ 18 ಮಂದಿ ಆಪಾದಿತರು ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಆದಿತ್ಯನಾಥ ಸರ್ಕಾರ ಕಳೆದ ತಿಂಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಪೆಹ್ಲೂಖಾನ್ ನನ್ನು ಬಡಿದು ಕೊಂದರೆಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲವೆಂದು 2019ರಲ್ಲಿ ಅಲ್ವರ್ ಜಿಲ್ಲಾ ನ್ಯಾಯಾಲಯ ಆರೂ ಮಂದಿ ಆಪಾದಿತರನ್ನು ಖುಲಾಸೆಗೊಳಿಸಿತು. ಆರೋಪಿಗಳ ಮೇಲಿನ ಆಪಾದನೆಯನ್ನು ಸೂಕ್ತ ಸಾಕ್ಷ್ಯಾಧಾರಗಳ ಸಹಿತ ಸಾಬೀತು ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದಿತು. ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಹಿಡಿದಿರುವ ಇಳಿಜಾರಿನ ದಾರಿಯತ್ತ ಈ ಪ್ರಕರಣಗಳ ವಿಚಾರಣೆಗಳು ಬೆರಳು ಮಾಡಿವೆ.

ತಬ್ರೆಜ್ ಅನ್ಸಾರಿ ಸಾವು (2019, ಝಾರ್ಖಂಡ್): 2019 ಜೂ.18ರಂದು ಸರಾಯ್ಕೇಲಾ-ಖರ್ಸ್ವಾನ್ ಜಿಲ್ಲೆಯ ಧಕ್ತಿದಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಇತರ ಇಬ್ಬರೊಂದಿಗೆ ಸೇರಿಕೊಂಡು ಬೈಕ್ ಕಳ್ಳತನದ ಶಂಕೆಯಲ್ಲಿ ಗುಂಪು ಅನ್ಸಾರಿ (24)ಯನ್ನು ಕಂಬಕ್ಕೆ ಕಟ್ಟಿ ಹಾಕಿ ಗಂಟೆಗಳ ಕಾಲ ಥಳಿಸಿತ್ತು ಹಾಗೂ ಜೈ ಶ್ರೀರಾಮ್ ಮತ್ತು ಜೈ ಬಜರಂಗ ಬಲಿ ಘೋಷಣೆಗಳನ್ನು ಕೂಗುವಂತೆ ಬಲಾತ್ಕರಿಸಿತ್ತು. ಗ್ರಾಮಸ್ಥರ ದೂರಿನ ಮೇರೆಗೆ ಮರುದಿನ ಸ್ಥಳವನ್ನು ತಲುಪಿದ್ದ ಪೊಲೀಸರು ಗಾಯಗೊಂಡಿದ್ದ ಅನ್ಸಾರಿಯನ್ನು ವಶಕ್ಕೆ ತೆಗೆದುಕೊಂಡು ಜೈಲಿಗೆ ತಳ್ಳಿದ್ದರು. ಅಲ್ಲಿ ಆತನ ಸ್ಥಿತಿ ಬಿಗಡಾಯಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂ.22ರಂದು ಅನ್ಸಾರಿ ಮೃತಪಟ್ಟಿದ್ದ.

2023ರ ಜೂನ್ 7 ರಂದು ಮಧ್ಯ ಭಾರತದ ಛತ್ತೀಸ್‌ಗಢದ ರಾಯ್‌ಪುರದಲ್ಲಿ ದನಗಳ ಕಳ್ಳಸಾಗಣೆ ಶಂಕೆಯ ಮೇಲೆ ಹಿಂದೂ ಬಲಪಂಥೀಯ ಗುಂಪೊಂದು ಇಬ್ಬರು ಮುಸ್ಲಿಂ ಪುರುಷರನ್ನು ಹೊಡೆದು ಕೊಂದಿತು. ಕೆಲವು ದಿನಗಳ ನಂತರ ಗಾಯಗೊಂಡಿದ್ದ ಮೂರನೇ ವ್ಯಕ್ತಿ ಕೂಡ ಸಾವನ್ನಪ್ಪಿದ್ದ. ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಅಲಿಗಢದಲ್ಲಿ 2023 ಜೂನ್ 18 ರಂದು ಗುಂಪೊಂದು ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದಿತು. ಲಾಠಿ ಅಥವಾ ಕೋಲುಗಳನ್ನು ಹಿಡಿದುಕೊಂಡು ವಿಕೃತಿ ಮೆರೆಯತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಘಟನೆಯ ನಂತರ, ಸ್ಥಳೀಯ ಬಿಜೆಪಿ ಅಧಿಕಾರಿಗಳು ಆರೋಪಿಗಳಿಗೆ ತಮ್ಮ ಬೆಂಬಲವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು.
2023ರ ಜೂನ್ 24 ರಂದು, ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಒಬ್ಬ ಮಹಿಳೆ ಮತ್ತು ಆಕೆಯ ಕುಟುಂಬದ ಕೆಲ ಸದಸ್ಯರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದನ್ನ ಸಹಿಸದ ಕೆಲ ಹಿಂದೂ ರಾಷ್ಟ್ರೀಯವಾದಿಗಳು ಅವರನ್ನು ಹತ್ಯೆ ಮಾಡಿದ್ದರು. 2025ರ ಏಪ್ರಿಲ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೇರಳ ಮೂಲದ, ಪ್ಲಾಸ್ಟಿಕ್ ಬಾಟಲಿಗಳನ್ನು ಆಯುವ ಮುಸ್ಲಿಂ ಯುವಕ ಅಶ್ರಫ್‌ನನ್ನು ಕ್ರಿಕೆಟ್ ಆಡುತ್ತಿದ್ದವರ ಗುಂಪು ಅಮಾನುಷವಾಗಿ ಥಳಿಸಿ ಕೊಂದಿತು. ಆ ಘಟನೆಯಿಂದಾಗಿ ಕರ್ನಾಟಕ ತಲೆತಗ್ಗಿಸುವಂತಾಗಿದ್ದು ನಿಜ.
ಇದೇ ಡಿಸೆಂಬರ್‌ನಲ್ಲಿ ಛತ್ತೀಸಗಢದ ರಾಮನಾರಾಯಣ ಬಘೇಲ್ ಎಂಬ ಕಡುಬಡ ದಲಿತ ಯುವಕ ಉದ್ಯೋಗವನ್ನು ಅರಸಿ ಕೇರಳಕ್ಕೆ ಬಂದಿದ್ದ. ಕೆಲಸ ಸಿಗಲಿಲ್ಲ. ಸದ್ಯದಲ್ಲೇ ವಾಪಸು ಬರುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿದ್ದ. ಆದರೆ ಹಾಗೆ ಹಿಂದಿರುಗುವ ಮೊದಲೇ ಆತ ಕೋಮುದ್ವೇಷದ ನಂಜಿಗೆ ಬಲಿಯಾಗಿದ್ದ. ಹೌದು ಕೇರಳದ ತನ್ನ ಸಂಬಂಧಿಕನ ಜೊತೆ ವಾಸಿಸುತ್ತಿದ್ದ ಈತ ಇದೇ ಡಿಸೆಂಬರ್ 17ರಂದು ದಾರಿ ತಪ್ಪಿ ಪಾಲಕ್ಕಾಡ್‌ನ ಆಟ್ಟಪಾಳ್ಳಂ ಗ್ರಾಮಕ್ಕೆ ಬಂದಿದ್ದ. ಕೆಲ ಸ್ಥಳೀಯರು ಈತನನ್ನು ಕಳ್ಳನೆಂದು ಭಾವಿಸಿ ಥಳಿಸಿದ್ದರು ರಾಮನಾರಾಯಣ ಮದ್ಯದ ಅಮಲಿನಲ್ಲಿದ್ದದ್ದು ಹೌದು. ಆದರೆ, ಏನನ್ನಾದರೂ ಕದ್ದಿದ್ದಾನೆಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಈವರೆಗೆ ಆತನ ವಿರುದ್ಧ ಯಾವುದೇ ಅಪರಾಧ ದಾಖಲೆಗಳಿಲ್ಲ ಎಂಬುದು ಪೊಲೀಸರ ಹೇಳಿಕೆಯಾಗಿತ್ತು. ಪೋಸ್ಟ್ ಮಾರ್ಟಮ್ ವರದಿಗಳ ಪ್ರಕಾರ ಗುಂಪೊಂದು ಈ ಬಡಪಾಯಿಯನ್ನು ಸಾಯುವ ತನಕ ಥಳಿಸಿದೆ. ಶರೀರವೆಲ್ಲ ಜರ್ಝರಿತವಾಗಿತ್ತು. ತಲೆಗೆ ತೀವ್ರತರ ಪೆಟ್ಟುಗಳೂ ಸೇರಿದಂತೆ ಒಟ್ಟು 80 ಕಡೆಗಳಲ್ಲಿ ಗಾಯಗಳಾಗಿವೆ. ಆಂತರಿಕ ರಕ್ತಸ್ರಾವ ಆಗಿದೆ. ಹಲ್ಲೆ ಮತ್ತು ತಲೆಗೆ ಆದ ಗಾಯಗಳಿಂದ ರಕ್ತ ಸೋರಿ ಸಾವು ಉಂಟಾಗಿದೆ ಎಂದು ವರದಿ ಹೇಳಿತ್ತು. ಈ ಘಟನೆ ನಡೆದ ಕೆಲ ದಿನಗಳ ನಂತರ ಘಟನೆಯ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಹಲ್ಲೆಕೋರರು ಬಘೇಲ್ ನನ್ನು “ನೀನು ಬಾಂಗ್ಲಾದೇಶಿಯೇ?” ಎಂದು ಕೇಳುತ್ತಿರುವ ದೃಶ್ಯಗಳಿವೆ. ಬಘೇಲ್ ಸಂಘಪರಿವಾರದ ದ್ವೇಷ ರಾಜಕಾರಣದ ಬಲಿಪಶುವಾಗಿದ್ದಾನೆ. ಬಾಂಗ್ಲಾದೇಶಿ ಎಂಬ ಹಣೆಪಟ್ಟಿ ಹಚ್ಚಿ ಈತನನ್ನು ಕೊಲ್ಲಲಾಗಿದೆ. ಹಲ್ಲೆಕೋರರು ಆರೆಸ್ಸೆಸ್ ಗೆ ಸೇರಿದವರು. ಈ ಹಿಂದೆ ಕ್ರಿಮಿನಲ್ ಕೇಸುಗಳನ್ನು ಎದುರಿಸಿದ ದಾಖಲೆ ಹೊಂದಿದವರು ಎಂದು ಕೇರಳದ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದರು.
ಇಂತಹ ಘಟನೆಗಳು ನೂರಾರಿದೆ. ಇದು ಕೆಲ ಉದಾಹರಣೆಗಳು ಮಾತ್ರ. ಇಂತಹ ಘಟನೆಗಳು 2014ರ ನಂತರ ಹೆಚ್ಚಾಗಿವೆ. ಹ್ಯೂಮನ್ ರೈಟ್ಸ್ ವಾಚ್ ಪ್ರಕಾರ, 2019ರಲ್ಲಿ 50ಕ್ಕೂ ಹೆಚ್ಚು ಗೋಹತ್ಯೆ, ಗೋಮಾಂಸದ ದಾಳಿಗಳು ನಡೆದಿದೆ. ಅವುಗಳಲ್ಲಿ ಬಹುಪಾಲು ಮುಸ್ಲಿಮರು ಬಲಿಯಾದರು. ಇದು ‘ಬಾಂಗ್ಲಾದೇಶಿ ನುಸುಳುಕೋರ’ ಎಂಬ ಲೇಬಲ್ ಅಡಿಯಲ್ಲಿ ನಡೆಯುತ್ತದೆ.
ಧರ್ಮದ ಹೆಸರಿನಲ್ಲಿ ಮಾನವತೆಯ ಕೊಲೆ
ಬಾಂಗ್ಲಾದೇಶದಲ್ಲಿ ಹಿಂದೂಗಳು ‘ಧರ್ಮನಿಂದನೆ’ ಆರೋಪಕ್ಕೆ ಒಳಗಾಗುತ್ತಾರೆ.; ಭಾರತದಲ್ಲಿ ಮುಸ್ಲಿಮರು ‘ಗೋಮಾಂಸ’ ಅಥವಾ ‘ನುಸುಳುಕೋರ’ ಅನ್ನೋ ಆರೋಪಕ್ಕೆ ಬಲಿಯಾಗುತ್ತಾರೆ. ಎರಡೂ ಜಾಗದಲ್ಲೂ ಕೆಲವು ಮೂಲಭೂತವಾದಿ ಗುಂಪುಗಳು ಇಂತಹ ಹಲ್ಲೆಗಳನ್ನ ಪ್ರಚೋದಿಸುತ್ತವೆ. ರಾಜಕೀಯ ನಾಯಕರು ಇದನ್ನು ಮೌನವಾಗಿ ಒಪ್ಪಿಕೊಳ್ಳುವುದು ಅಥವಾ ಸಮರ್ಥಿಸುವುದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ, ಅಲ್ಪಸಂಖ್ಯಾತರು ತಮ್ಮ ಗುರುತನ್ನು ಮರೆಮಾಚುವ ಪ್ರಯತ್ನವನ್ನೂ ಮಾಡುತ್ತಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ದೇಶ ತೊರೆಯುತ್ತಾರೆ, ಭಾರತದಲ್ಲಿ ಮುಸ್ಲಿಮರು ಭಯದಲ್ಲಿ ಜೀವಿಸುತ್ತಾರೆ.
ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ಹಿಂದೂಗಳನ್ನು ಗುರಿಯಾಗಿಸುತ್ತಾರೆ. ಭಾರತದಲ್ಲಿ ಹಿಂದುತ್ವ ಭಯೋತ್ಪಾದಕರು ಮುಸ್ಲಿಮರನ್ನು ಗುರಿಯಾಗಿಸುತ್ತಾರೆ. ಒಂದು ಕಡೆ ನಾವು ಚಂದ್ರಯಾನ ಮಾಡುತ್ತಿದ್ದೇವೆ, ಮತ್ತೊಂದು ಕಡೆ ಮನುಷ್ಯರು ಮನುಷ್ಯರನ್ನು ಕೊಂದು ಕೊನೆಗೊಳಿಸುತ್ತಿದ್ದಾರೆ. ಬಿಹಾರದಲ್ಲಿ ಬಾಂಗ್ಲಾದೇಶದ ನುಸುಳುಕೋರರು ದೊಡ್ಡ ಪ್ರಮಾಣದಲ್ಲಿದ್ದಾರೆಂದು ಬಿಜೆಪಿ ಚುನಾವಣಾ ಪ್ರಚಾರ ಮಾಡಿ ಮುಸ್ಲಿಂ ದ್ವೇಷದ ಅಲೆ ಎಬ್ಬಿಸಿತ್ತು. ನುಸುಳುಕೋರರು ಇದ್ದಿದ್ದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಪತ್ತೆ ಹಚ್ಚಿ ಹೇಳಬೇಕಿತ್ತು. ಆದರೆ, ಮುಖ್ಯ ಚುನಾವಣಾ ಕಮಿಷನರ್ ಜ್ಞಾನೇಶ್ ಕುಮಾರ್ ಈ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡದೇ ನುಣುಚಿಕೊಂಡರು.
ಬಾಂಗ್ಲಾದೇಶದ ದೀಪು ಮತ್ತು ಅಮೃತ್‌ರಂತೆ, ಭಾರತದ ಅಖ್ಲಾಕ್ ಮತ್ತು ತಬ್ರೆಜ್, ಬಘೇಲ್ ರಂತಹ ಅಮಾನವೀಯ ಸಾವುಗಳು ಈಗಲಾದರೂ ಎಲ್ಲರನ್ನ ಬಡಿದೆಬ್ಬಿಸಲಿ. ಮನುಷ್ಯರು ಮನುಷ್ಯತ್ವವನ್ನು ಮರೆತು ವರ್ತಿಸುತ್ತಿರುವುದು ನಿಜವಾಗಿಯೂ ಖೇದಕರ ಸಂಗತಿ. ಆದರೆ ಈಗಲೂ ನಮಗೆ ನಂಬಿಕೆ ಇದೆ, ಆಸೆ ಇದೆ. ನಾವು ಒಗ್ಗೂಡಿ ನಿಂತರೆ, ಇದಕ್ಕೆ ಕೊನೆ ಹಾಡಲು ಸಾಧ್ಯ ಇದೆ. ಧರ್ಮವು ಒಗ್ಗಟ್ಟಿನ ಸಾಧನವಾಗಿರಲಿ, ವಿಭಜನೆಯ ಆಯುಧವಲ್ಲ. ನಮ್ಮ ಸುತ್ತಲಿನವರನ್ನು ಮಾನವರಾಗಿ ನೋಡೋಣ, ಧರ್ಮದ ಚಿಹ್ನೆಗಳನ್ನಾಗಿಯಲ್ಲ.





