ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ, ಸಾಂಕ್ರಾಮಿಕವಲ್ಲದ ರೋಗ ಪತ್ತೆ, ಬಾಧಿತರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಅಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಆರಂಭಿಸಿರುವ ʼಗೃಹ ಆರೋಗ್ಯ ಯೋಜನೆʼ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹೊಸ ದಿಕ್ಕು ನೀಡುತ್ತಿದೆ. 2025ರ ಜೂನ್‌ನಿಂದ ರಾಜ್ಯಾದ್ಯಂತ ವಿಸ್ತರಿಸಿರುವ ಈ ಯೋಜನೆ ರಾಜ್ಯದ ಲಕ್ಷಾಂತರ ಜನರ ಆರೋಗ್ಯದ ಭರವಸೆಯಾಗಿದೆ.
ಹಿಂದೆ ಆರೋಗ್ಯ ಸಮಸ್ಯೆ ಉಲ್ಬಣವಾದಾಗ ಮಾತ್ರ ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದ ಪ್ರವೃತ್ತಿ ಸಾಮಾನ್ಯವಾಗಿತ್ತು. ಆದರೆ, ರೋಗಿಯನ್ನು ಕಾಯದೆ, ಆರೋಗ್ಯ ಸೇವೆಯನ್ನು ಮನೆಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನವೇ ʼಗೃಹ ಆರೋಗ್ಯ ಯೋಜನೆʼ. ಬದಲಾದ ಜೀವನ ಶೈಲಿಯಿಂದ ಅಸಾಂಕ್ರಾಮಿಕ ರೋಗಗಳು ಮೌನವಾಗಿ ಇಡೀ ಮಾನವ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ಈ ಹೆಜ್ಜೆ ಕಾಲದ ಅವಶ್ಯಕತೆಯಾಗಿ ಕಾಣಿಸುತ್ತಿದೆ.
ಯೋಜನೆಯ ಉದ್ದೇಶ & ಕಾರ್ಯನಿರ್ವಹಣೆ:
ಈ ಯೋಜನೆಯಡಿ 30 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಒಟ್ಟು 14 ಅಸಾಂಕ್ರಾಮಿಕ ರೋಗಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲಾಗುತ್ತಿದೆ. ಅವುಗಳಲ್ಲಿ, ಅಧಿಕ ರಕ್ತದೊತ್ತಡ, ಮಧುಮೇಹ, ಅನೀಮಿಯಾ, ಕಿಡ್ನಿ ಹಾಗೂ ಲಿವರ್ ಸಂಬಂಧಿತ ಕಾಯಿಲೆಗಳು, ಉಸಿರಾಟದ ಸಮಸ್ಯೆ, ಮಾನಸಿಕ ಮತ್ತು ನರರೋಗಗಳು, ಬಾಯಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್‌ಗಳಂತಹ ಗಂಭೀರ ಕಾಯಿಲೆಗಳಿಗೂ ತಪಾಸಣೆ ನಡೆಯುತ್ತಿರುವುದು ಯೋಜನೆಯ ವ್ಯಾಪ್ತಿಯನ್ನು ಸ್ಪಷ್ಟಪಡಿಸುತ್ತದೆ. ರೋಗ ಲಕ್ಷಣಗಳು ತೀವ್ರವಾಗುವ ಮೊದಲು ಪತ್ತೆಹಚ್ಚುವುದೇ ಯೋಜನೆಯ ಮುಖ್ಯ ಉದ್ದೇಶ.

ಯೋಜನೆಯನ್ನು ಮುನ್ನಡೆಸುತ್ತಿರುವವರು ಆಶಾ ಕಾರ್ಯಕರ್ತೆಯರು. ಇವರು ಮನೆಮನೆಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರ ಆರೋಗ್ಯ ಮಾಹಿತಿ ಸಂಗ್ರಹಿಸುವುದರ ಜೊತೆಗೆ, ಅಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ದೈನಂದಿನ ಆಹಾರ ಕ್ರಮ, ದೈಹಿಕ ಚಟುವಟಿಕೆ, ಮದ್ಯಪಾನ-ಧೂಮಪಾನದಂತಹ ಅಭ್ಯಾಸಗಳು ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಸರಳವಾಗಿ ವಿವರಿಸುತ್ತಾ, ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಯೋಜನೆಯ ಮುಖ್ಯಾಂಶಗಳು:
1.ಗೃಹ ಆರೋಗ್ಯ ಯೋಜನೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ರಕ್ಷಣಾ ಉಪಕ್ರಮಗಳಲ್ಲಿ ಒಂದಾಗಿದೆ.
2.ಈ ಯೋಜನೆಯಡಿ ರಾಜ್ಯದ ಎಲ್ಲಾ ನಾಗರಿಕರನ್ನು ಒಳಗೊಳ್ಳುವ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
3.ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ರೂ. 92.75 ಕೋಟಿ ಅನುದಾನ ಮಂಜೂರು ಮಾಡಿದೆ.
4.30 ವರ್ಷ ಮೇಲ್ಪಟ್ಟ ಸುಮಾರು 3,03,81,750 ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಗುರಿ ಹೊಂದಲಾಗಿದೆ.
5.ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
6.ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಆಯಾ ಪ್ರದೇಶಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ ಉಚಿತ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ನಡೆಸಲಾಗುತ್ತಿದೆ.
7.ತಪಾಸಣೆಯ ನಂತರ ಅಗತ್ಯವಿದ್ದಲ್ಲಿ ಉಚಿತ ಔಷಧಿಗಳನ್ನು ರೋಗಿಗಳಿಗೆ ವಿತರಿಸಲಾಗುತ್ತಿದೆ.
8.ಚಿಕಿತ್ಸೆಯ ನಿರಂತರತೆಯನ್ನು ಖಚಿತಪಡಿಸಲು ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮಾಸಿಕ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದಾರೆ.
9.ಆರೋಗ್ಯ ತಪಾಸಣೆಯ ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಆಯುಷ್ಮಾನ್ ಆರೋಗ್ಯ ಕೇಂದ್ರ ಅಥವಾ ಸಮೀಪದ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.
10.ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಹೊರರೋಗಿ ಆರೈಕೆಯ ಅಗತ್ಯವಿರುವವರಿಗೆ ವಿಶೇಷ ಸೌಲಭ್ಯಗಳು ಒದಗಿಸಲಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, 2025ರ ಆಗಸ್ಟ್ ಮಾಹೆಯಿಂದ ಅಕ್ಟೋಬರ್ ವರೆಗೆ ರಾಜ್ಯಾದ್ಯಂತ 20 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ್ದು, ಸುಮಾರು 47 ಲಕ್ಷ ಜನರಿಗೆ ಆರೋಗ್ಯದ ಅರಿವು ಮತ್ತು ರೆಫರಲ್ ಮಾಹಿತಿ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರಿಂದ ರೆಫರ್ ಆಗುವವರು ಅಥವಾ ಸ್ವಯಂ ಆಗಮಿಸುವವರು ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆಗೆ ಒಳಗಾಗುತ್ತಿದ್ದಾರೆ. ಇಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ 14 ಅಸಾಂಕ್ರಾಮಿಕ ರೋಗಗಳಿಗೆ ಪ್ರಾಥಮಿಕ ತಪಾಸಣೆ ನಡೆಸಿ, ಶಂಕಿತ ಪ್ರಕರಣಗಳಿಗೆ ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿ ವಿತರಿಸುತ್ತಿದ್ದಾರೆ. ಅಗತ್ಯವಿದ್ದಲ್ಲಿ ರೋಗಿಗಳನ್ನು ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಈ ಸಮನ್ವಯಿತ ವ್ಯವಸ್ಥೆಯಿಂದ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರಕುವಂತಾಗಿದೆ. ಆಗಸ್ಟ್‌ನಿಂದ ಅಕ್ಟೋಬರ್ ನಡುವಿನ ಅವಧಿಯಲ್ಲಿ 33 ಲಕ್ಷಕ್ಕೂ ಹೆಚ್ಚು ಜನರಿಗೆ ಅಧಿಕ ರಕ್ತದೊತ್ತಡಕ್ಕೆ ತಪಾಸಣೆ ನಡೆಸಲಾಗಿದ್ದು, ಈ ಪೈಕಿ ಸುಮಾರು 4.75 ಲಕ್ಷ ಮಂದಿಯಲ್ಲಿ ರೋಗ ದೃಢಪಟ್ಟಿದೆ. ಮಧುಮೇಹ ತಪಾಸಣೆಗೆ 32 ಲಕ್ಷಕ್ಕೂ ಹೆಚ್ಚು ಜನ ಒಳಗಾಗಿದ್ದು, 3.61 ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಅನೀಮಿಯಾ ತಪಾಸಣೆಯಲ್ಲಿಯೂ ಸಾವಿರಾರು ದೃಢಪಟ್ಟ ಪ್ರಕರಣಗಳು ಕಂಡುಬಂದಿವೆ. ಬಾಯಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್‌ಗಳ ತಪಾಸಣೆ ಮೂಲಕ ಶಂಕಿತ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಮುಂದಿನ ಚಿಕಿತ್ಸೆಗೆ ಕಳುಹಿಸಿರುವುದು ಜೀವ ರಕ್ಷಿಸುವ ಹೆಜ್ಜೆಯಾಗಿದೆ.
ಅಸಾಂಕ್ರಾಮಿಕ ರೋಗಗಳಲ್ಲಿ ಕಿಡ್ನಿ ಕಾಯಿಲೆಗಳು ಪ್ರಮುಖ ಸವಾಲಾಗಿ ಪರಿಣಮಿಸುತ್ತಿವೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವೇ ಮೂತ್ರಪಿಂಡ ವೈಫಲ್ಯದ ಪ್ರಮುಖ ಕಾರಣಗಳಾಗಿವೆ. ಕಿಡ್ನಿ ಕಸಿ ದೊರಕುವವರೆಗೆ ಡಯಾಲಿಸಿಸ್ ಒಂದೇ ರೋಗಿಗಳಿಗೆ ಜೀವಾಧಾರವಾಗಿರುತ್ತದೆ. ಅಂದಾಜಿನ ಪ್ರಕಾರ ಪ್ರತಿ 10 ಲಕ್ಷ ಜನಸಂಖ್ಯೆಗೆ ವರ್ಷಕ್ಕೆ 229 ಮಂದಿ ಅಂತಿಮ ಹಂತದ ಕಿಡ್ನಿ ವೈಫಲ್ಯಕ್ಕೆ (ESRD) ತುತ್ತಾಗುತ್ತಿದ್ದಾರೆ. ಈ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಡಯಾಲಿಸಿಸ್ ಸೇವೆಗಳನ್ನು ವಿಸ್ತರಿಸುವ ಕಾರ್ಯಕ್ಕೆ ಒತ್ತು ನೀಡಿದೆ.
ಪ್ರಸ್ತುತ ರಾಜ್ಯಾದ್ಯಂತ 215 ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಏಕ ಬಳಕೆಯ ಡಯಾಲೈಸರ್‌ಗಳೊಂದಿಗೆ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ವಿಭಾಗಗಳಲ್ಲಿ ಸರ್ಕಾರಿ–ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಈ ಸೇವೆಗಳು ಲಭ್ಯವಿದ್ದರೆ, ಕಲಬುರಗಿ ವಿಭಾಗದಲ್ಲಿ ಸರ್ಕಾರಿ In-house ಮಾದರಿಯಲ್ಲಿ ಡಯಾಲಿಸಿಸ್ ಒದಗಿಸಲಾಗುತ್ತಿದೆ. ಇದರಿಂದ ಎಲ್ಲ ವಿಭಾಗಗಳಲ್ಲೂ ಸಮಾನವಾಗಿ ಸೇವೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಏಪ್ರಿಲ್‌ನಿಂದ ನವೆಂಬರ್ 2025ರವರೆಗೆ ಈ 215 ಡಯಾಲಿಸಿಸ್ ಕೇಂದ್ರಗಳಲ್ಲಿ 7,425 ರೋಗಿಗಳಿಗೆ ಒಟ್ಟು 5.24 ಲಕ್ಷಕ್ಕೂ ಹೆಚ್ಚು ಡಯಾಲಿಸಿಸ್ ಸೇವೆಗಳನ್ನು ನೀಡಲಾಗಿದೆ. 1,155 ಡಯಾಲಿಸಿಸ್ ಯಂತ್ರಗಳ ಮೂಲಕ ಈ ಸೇವೆಗಳನ್ನು ಒದಗಿಸಲಾಗಿದೆ. ಇದು ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವನ್ನು ಭರಿಸಲಾಗದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ದೊಡ್ಡ ಆರ್ಥಿಕ ನೆರವಾಗಿವೆ.
ಯೋಜನೆಯ ಫಲಾನುಭವಿ ಜಯಮ್ಮ ಹೀಗೆನ್ನುತ್ತಾರೆ, “ಮೊದ್ಲೆಲ್ಲಾ ಕಾಯಿಲೆ ಅಂದ್ರೆ ವರ್ಷಕ್ಕೋ ಮೂರು ವರ್ಷಕ್ಕೋ ಬರ್ತಿತ್ತು. ಬರೋದು ಗೊತ್ತಾಗ್ತಿರ್ಲಿಲ್ಲ, ಹೋಗೋದೂ ಗೊತ್ತಾಗ್ತಿರ್ಲಿಲ್ಲ. ಇನ್ನು ಆಸ್ಪತ್ರೆಗೆ ಹೋಗ್ತಿದಿದ್ದೇ ತೀರಾ ಅಪರೂಪ. ಆದ್ರೆ ಈಗ ಬೆಳಗಾದ್ರೆ, ಸಂಜೆ ಆದ್ರೆ ಯಾವಾಗ್ಲೂ ರೋಗದಲ್ಲೇ ಇರೋ ಹಂಗಾಗಿದೆ. ಇವಾಗಿರೋ ಕಾಯಿಲೆಗಳು ನಮ್ಮೊಳಗವೆ ಅನ್ನೋದೂ ಗೊತ್ತಾಗ್ತಿಲ್ಲ, ಒಳಗೇ ಇದ್ಕೊಂಡು ಝಾಡುಸ್ತವೆ. ಆಸ್ಪತ್ರೆಗೆ ಹೋದ್ಮೇಲೆ ಇಂಥದ್ದೊಂದು ಕಾಯಿಲೆ ಇದೆ ಅನ್ನೋದು ತಿಳೀತದೆ. ಇನ್ನು ಔಷಧಿ ತಗೊಳ್ಳದು ಇನ್ನೊಂತರ ಸರ್ಕಸ್ಸು. ಒಂದೊಂದ್ಸರಿ ಅಂತೂ ಕಾಯಿಲೆ ಇದ್ರೂ ಆಸ್ಪತ್ರೆ ಕಡೆ ಹೋಗೋಕೆ ಮನ್ಸಾಗಲ್ಲ. ಎಲ್ಲಿ ದೊಡ್ ದೊಡ್ ಕಾಯಿಲೆ ಅವೆ ಅಂತ ಹೇಳಿ ಹೆದ್ರುಸ್ತಾರೋ ಅಂತ. ಇಂತ ಟೈಮಲ್ಲಿ ಅವ್ರೇ ಬಂದು ಚೆಕ್ ಮಾಡಿ, ಫ್ರೀಯಾಗಿ ಮೆಡಿಸಿನ್ನೂ ಕೊಟ್ಟೋಗೋ ಅಂತ ಯೋಜನೆ ಬಂದದೆ. ಬಿಪಿ-ಶುಗರ್‌ಗೆಲ್ಲಾ ಮೂರೊತ್ತೂ ಆಸ್ಪತ್ರೆಗೆ ಹೋಗೋಕಾಗ್ತಿರ್ಲಿಲ್ಲ. ಈಗ ಅವ್ರೇ ವಾರಕ್ಕೆ 4 ದಿನ ಬಂದು ಚೆಕ್ ಮಾಡ್ತಾರೆ. ರೋಗ ದೊಡ್ಡವಿದ್ರೆ ಆಸ್ಪತ್ರೆಗೆ ರೆಫರ್ ಮಾಡ್ತಾರೆ. ಅಲ್ದೇ ದಾರೀಲಿ ಹೋಗೊವಾಗ ಹೆಂಗಿದಿರಾ? ಮಾತ್ರೆ ಕೆಲ್ಸ ಮಾಡ್ತವಾ? ಮೆಡಿಸಿನ್ ಕಾಲಿ ಆಯ್ತಾ-ಬೇಕಾ? ಅಂತನೂ ಆಶಾ ಕಾರ್ಯಕರ್ತೆಯರು ವಿಚಾರಿಸ್ತಾರೆ. ಇದ್ರಿಂದ ಅರ್ಥ ತಲೆ ಭಾರ ಕಮ್ಮಿ ಆಗಿ ಮನ್ಸು, ದೇಹ ಹಗೂರ ಅನ್ನಿಸ್ತದೆ. ಸರ್ಕಾರಗಳು ಏನೋನೋ ಯೋಜ್ನೆಗಳ ತರ್ತಾ ಇರ್ತವೆ. ಅದ್ರಲ್ಲಿ ಎಷ್ಟೊಂದು ನಮ್ಗೆ ಗೊತ್ತೂ ಆಗಲ್ಲ. ಆದ್ರೆ ಈ ಯೋಜನೆಯಿಂದ ನಮ್ಮಂತ ಜನಕ್ಕೆ ಬಾಳ ಉಪ್ಯೋಗ ಆಗ್ತದೆ. ಸರ್ಕಾರಕ್ಕೊಂದು ದೊಡ್ ನಮಸ್ಕಾರ. ದುಡ್ಡು ಕೊಟ್ಟು ಅಕ್ಕಿನೂ ಫ್ರೀಯಾಗ್ ಕೊಡ್ತಿರೋ ಸಿದ್ದರಾಮಯ್ಯ, ಈಗ ಮೆಡಿಸಿನ್ನೂ ಫ್ರೀಯಾಗಿ ಅದೂ ಮನೆ ಬಾಗ್ಲಲ್ಲೇ ಕೊಡೋ ಹಂಗ್ ಮಾಡವ್ರೆ, ಅವ್ರಿಗೆ ಇನ್ನೊಂದ್ ನಮಸ್ಕಾರ”.
ಇದನ್ನೂ ಓದಿ: ದಲಿತರ-ಮಹಿಳೆಯರಿಗೆ ಘನತೆಯ ಹಕ್ಕು ಕೊಟ್ಟ ʼಮನರೇಗಾʼ; ಹಕ್ಕಿನ ಬೇರು ಕಿತ್ತ ʼವಿಬಿ-ಜಿ ರಾಮ್‌ಜಿʼ
ಆಶಾ ಕಾರ್ಯಕರ್ತೆಯರಂತಹ ನೆಲಮಟ್ಟದ ಆರೋಗ್ಯ ಯೋಧರ ಮೂಲಕ ಜಾರಿಯಾಗುತ್ತಿರುವ ಈ ಯೋಜನೆ, ಸರ್ಕಾರದ ಮೇಲಿನ ಜನರ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿದೆ. ಸಾವಿರಾರು ಫಲಾನುಭವಿಗಳ ಬದುಕಿನ ಅನುಭವಗಳಲ್ಲೇ ಇದರ ಯಶಸ್ಸು ಸ್ಪಷ್ಟವಾಗಿ ಗೋಚರಿಸುತ್ತದೆ. ಸಮಯಕ್ಕೆ ಸರಿಯಾದ ತಪಾಸಣೆ, ನಿರಂತರ ಅನುಸರಣೆ ಮತ್ತು ಉಚಿತ ಚಿಕಿತ್ಸೆ ಆರೋಗ್ಯವನ್ನು ಮಾತ್ರವಲ್ಲ, ಮನಸ್ಸಿನ ಭಾರವನ್ನೂ ಇಳಿಸಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಗುಣಮಟ್ಟ, ನಿರಂತರತೆ ಮತ್ತು ವ್ಯಾಪ್ತಿಯನ್ನು ಇನ್ನಷ್ಟು ಬಲಪಡಿಸಿದರೆ, ಕರ್ನಾಟಕ ಅಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗುವ ಸಾಧ್ಯತೆ ಇದೆ. ʼರೋಗ ಬಂದ ಮೇಲೆ ಚಿಕಿತ್ಸೆʼ ಎಂಬ ಹಳೆಯ ದೃಷ್ಟಿಕೋನದಿಂದ ಹೊರಬಂದು, ʼರೋಗ ಬರುವ ಮುನ್ನ ಎಚ್ಚರಿಕೆʼ ಎಂಬ ಹೊಸ ಆರೋಗ್ಯ ಸಂಸ್ಕೃತಿಯನ್ನು ಕಟ್ಟುವ ದಿಕ್ಕಿನಲ್ಲಿ ʼಗೃಹ ಆರೋಗ್ಯ ಯೋಜನೆʼ ಇಡುತ್ತಿರುವ ಹೆಜ್ಜೆ ನಿಸ್ಸಂದೇಹವಾಗಿ ಕಾಲಘಟ್ಟದ ಅವಶ್ಯಕತೆ ಮತ್ತು ಜನಪರ ಆಡಳಿತದ ಪ್ರತೀಕವಾಗಿದೆ.





