ಕೃಷಿ ಮಾಡುವ ಎರಡು ತಿಂಗಳು ಉದ್ಯೋಗ ಖಾತ್ರಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆ ಮೂಲಕ ಕಾರ್ಮಿಕ ಉದ್ಯೋಗದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಯಾವುದು ಕೃಷಿ ಸೀಸನ್ ಯಾವುದು ಅಲ್ಲ ಎಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.
MGNREGA – ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಬಗ್ಗೆ ನಿಮಗೆಲ್ಲ ಗೊತ್ತಿದೆ. ಏಕೆಂದರೆ ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಬಡ ಕೂಲಿಕಾರರನ್ನು ಮೇಲೆತ್ತೆಲು ಹಿಂದಿನ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್‌ರವರು ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಜಾರಿಗೆ ತಂದ ಬಹುಮುಖ್ಯ ಉದ್ಯೋಗ ಖಾತ್ರಿ ಯೋಜನೆ ಅದು.
ಇದರಲ್ಲಿ ಜೆಸಿಬಿಗಳಿಂದ ಕೆಲಸ ನಡೆಯುತ್ತಿದೆ, ಜನರ ಹೆಸರಿನಲ್ಲಿ ಮಧ್ಯವರ್ತಿಗಳು, ಗ್ರಾ.ಪಂ ಸದಸ್ಯರು ದುಡ್ಡು ಹೊಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿದ್ದರೂ ಹಲವಾರು ಕಡೆ ಈ ಯೋಜನೆ ಯಶಸ್ವಿಯಾಗಿ ನಡೆದು ಬಡಜನರಿಗೆ ಉದ್ಯೋಗ ಸಿಕ್ಕಿದ್ದು ನಿಜ. ವರ್ಷಕ್ಕೆ ನೂರು ದಿನ ಕೆಲಸದ ಖಾತ್ರಿ ಇದ್ದಿದ್ದುರಿಂದ ಅವರ ಜೀವನ ಗುಣಮಟ್ಟ ಸ್ವಲ್ಪ ಮಟ್ಟಿಗೆ ಮೇಲೆ ಬಂದಿದ್ದು ನಿಜ. ಇದರಿಂದ ಗ್ರಾಮೀಣ ಆರ್ಥಿಕತೆ ಚಲನಶೀಲತೆ ಕಂಡು ಹೋಬಳಿ ಕೇಂದ್ರಗಳು, ದೊಡ್ಡ ಊರುಗಳು ಸಿಟಿ ಥರ ಬದಲಾಗಿರುವುದು ನಿಜ. ಇದೆಲ್ಲವನ್ನೂ ನಾವೇ ಕಣ್ಣಾರೆ ಕಂಡಿದ್ದೇವೆ. ಜನರಿಗೆ ಕೆಲಸ ಕೊಡಬೇಕು ಮತ್ತು ಆ ಮೂಲಕ ಅವರ ಕೊಳ್ಳುವ ಶಕ್ತಿ ಹೆಚ್ಚಾಗಿ ಆರ್ಥಿಕತೆ ಬೆಳೆಯಬೇಕು ಎಂದು ಜಾರಿಗೆ ತಂದ ಒಂದು ಪ್ರಮುಖ ಕಲ್ಯಾಣ ಕಾರ್ಯಕ್ರಮ ಇದಾಗಿದೆ. ಇದಕ್ಕಾಗಿ ಎಡ, ಪ್ರಗತಿಪರ ಸೇರಿದಂತೆ ಹಲವಾರು ಸಂಘಟನೆಗಳು ಹೋರಾಟ ಮಾಡಿದ್ದು ನಿಜ.
ಆದರೆ ಈ ಯೋಜನೆ ಈಗ ಅಪಾಯದಲ್ಲಿದೆ. ಕೇಂದ್ರ ಸರ್ಕಾರ ಇದನ್ನು ರದ್ದುಮಾಡಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್’ (VB-G RAM G) ಎಂಬ ಹೊಸ ಕಾಯ್ದೆ ತರುತ್ತಿದೆ. ಇದು 125 ದಿನಗಳ ಉದ್ಯೋಗ ನೀಡುವುದು ಎಂದು ಹೇಳುತ್ತದೆ. ಸಂಸತ್ ಅಧಿವೇಶನದಲ್ಲಿ ಇದನ್ನು ಮಂಡಿಸಲು ಸಿದ್ದವಾಗಿದೆ. ಹಿಂದಿನ ಕಾಯ್ದೆ ಮತ್ತು ಪ್ರಸ್ತುತ ಹೊಸ ಕಾಯ್ದೆಯಲ್ಲಿನ ವ್ಯತ್ಯಾಸಗಳನ್ನು ನೋಡೋಣ.
ಕೆಲಸದ ಹಕ್ಕು ಇಲ್ಲ
ಮನರೇಗಾ ಕಾಯ್ದೆಯಲ್ಲಿ – ಕೆಲಸದ ಹಕ್ಕಿನ ಖಾತ್ರಿ ಇತ್ತು. ಅಂದರೆ ಜನರು ಬಯಸಿದಾಗ ಸರ್ಕಾರ ಉದ್ಯೋಗ ಕೊಡಬೇಕಿತ್ತು. ಆದರೆ ಈಗ ಇದು ಸಪ್ಲೈ ಬೇಸ್ಡ್ ಎಂದು ಕೇಂದ್ರ ಸರ್ಕಾರ ಬದಲಿಸುತ್ತಿದ್ದು, ಕೇಂದ್ರ ಸರ್ಕಾರ ಕೊಟ್ಟಾಗ ಮಾತ್ರ ಜನ ಉದ್ಯೋಗ ಮಾಡಬೇಕಿದೆ. ಸರ್ಕಾರ ತನ್ನ ಬಳಿ ಫಂಡ್ ಇಲ್ಲ ಎಂದರೆ ಕೆಲಸ ಇಲ್ಲ ಎಂದರ್ಥ. ಸಂಸದೀಯ ಸಮಿತಿ 150 ದಿನ ಕೆಲಸ ಕೊಡಬೇಕೆಂದು ಶಿಫಾರಸ್ಸು ಮಾಡಿತ್ತು. ಕೇಂದ್ರ ಸರ್ಕಾರದ ಅನುದಾನದ ಕೊರತೆಯಿಂದ ಸದ್ಯ ನರೇಗಾ ಯೋಜನೆಯಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಬದಲಿಗೆ ಸರಾಸರಿ ಕೇವಲ 44 ದಿನಗಳಿಗೆ ಉದ್ಯೋಗ ಸಿಗುತ್ತಿದೆ ಎಂದು ದಿ ಹಿಂದೂ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ 125 ದಿನಗಳ ಕೆಲಸ ಕೊಡುತ್ತೇವೆ ಎಂಬುದೆಲ್ಲ ಕೇವಲ ಕಣ್ಕಟ್ಟಿನ ಮೋಸ ಹೊರತು ನಿಜವಲ್ಲ.
1.5 ಕೋಟಿ ಜನರ ಜಾಬ್ ಕಾರ್ಡ್ ಡಿಲೀಟ್
ಇ ಕೆವೈಸಿ ಮಾಡಿಸಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಇದುವರೆಗೂ ನರೇಗಾ ಜಾಬ್ ಕಾರ್ಡ್ ಹೊಂದಿದ್ದ ಒಂದೂವರೆ ಕೋಟಿ ಕಾರ್ಮಿಕರ ಜಾಬ್ ಕಾರ್ಡ್‌ಗಳನ್ನು ಡಿಲೀಟ್ ಮಾಡಿದೆ. ಅಲ್ಲಿಗೆ ಇವರಿಂದ ಖಾಯಂ ಕೆಲಸದ ಹಕ್ಕು ಕಿತ್ತುಕೊಳ್ಳಲಾಗಿದೆ. ನಕಲಿ ಅಥವಾ ತಪ್ಪು ಎಂದು ಹೇಳಿ ನಿಜವಾದ ಕಾರ್ಮಿಕರನ್ನು (ವಿಶೇಷವಾಗಿ ವೃದ್ಧರು, ಮಹಿಳೆಯರು) ತೆಗೆದುಹಾಕುತ್ತಾರೆ. ಆಧಾರ್ ಡೇಟಾ ಮಿಸ್‌ಮ್ಯಾಚ್ (ಹೆಸರು ಸಣ್ಣ ತಪ್ಪು, ಸ್ಪೆಲ್ಲಿಂಗ್ ವ್ಯತ್ಯಾಸ) ನಿಂದ ಇದು ಆಗುತ್ತದೆ. ಡಿಜಿಟಲ್ ಅಕ್ಷರತೆ ಕಡಿಮೆ ಇರುವ ಗ್ರಾಮೀಣ ಜನರಿಗೆ e-KYC ಮಾಡಲು ಕಷ್ಟ. ಇದರಿಂದ ಅವರು ಯೋಜನೆಯ ಲಾಭದಿಂದ ವಂಚಿತರಾಗುತ್ತಾರೆ.
ಅನುದಾನದಲ್ಲಿ ಕಡಿತ
ಕೇಂದ್ರ ಸರ್ಕಾರ ನರೇಗಾ ಯೋಜನೆಗೆ ಅನುದಾನ ಹೆಚ್ಚು ಮಾಡಲು ಬದಲು ಕಡಿಮೆ ಮಾಡುತ್ತಾ ಬರುತ್ತಿದೆ. ಕಳೆದ ಎರಡು ವರ್ಷ ಕೇವಲ 86,000 ಕೋಟಿ ರೂಗಳನ್ನು ಬಜೆಟ್‌ನಲ್ಲಿ ಘೋಷಿಸಿದೆ. ಅದರಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ, ಕೇಂದ್ರ 9,700 ಕೋಟಿ ಬಾಕಿ ಉಳಿಸಿಕೊಂಡಿದೆ ಎಂಬುದು ರಾಜ್ಯಗಳ ಆರೋಪ. ಪಶ್ಚಿಮ ಬಂಗಾಳ ಸರ್ಕಾರಕ್ಕೆ 7000 ಕೋಟಿ ರೂ ಬಿಡುಗಡೆ ಮಾಡಿಲ್ಲ ಎಂದು ಕಳೆದ ಎರಡು ವರ್ಷಗಳಿಂದ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆರೋಪ ಮಾಡಿ ಹೋರಾಟ ಸಹ ಮಾಡಿದ್ದಾರೆ. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಹಣ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ಇಂತಹ ಪರಿಸ್ಥಿತಿಯಲ್ಲಿ ಇನ್ನು ಮುಂದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿರುವುದರಿಂದ ಹಣ ಬಿಡುಗಡೆ ಮಾಡುವ, ಮಾಡದಿರುವ ಹಕ್ಕು ತನ್ನಲ್ಲೆ ಉಳಿಸಿಕೊಂಡು ರಾಜ್ಯಗಳು ತನ್ನ ಮುಂದೆ ಅಂಗಲಾಚುವಂತೆ ಮಾಡುವ ಹುನ್ನಾರ ಹೊಂದಿದೆ. ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ಹೊಡೆತ ನೀಡುತ್ತದೆ.
ಗ್ರಾಮ ಪಂಚಾಯ್ತಿಗಳ ಅಧಿಕಾರ ಮೊಟಕು
ಸದ್ಯ ನರೇಗಾ ಕೆಲಸಗಳನ್ನು ಗ್ರಾ.ಪಂ ನಿರ್ಧರಿಸುತ್ತಿದ್ದವು. ಇನ್ನು ಮುಂದೆ ಕೇಂದ್ರ ಸರ್ಕಾರ ಹೇಳಿದ್ದು ಮಾತ್ರ ಮಾಡಬೇಕಿರುತ್ತದೆ. ಅನುದಾಯ, ಸಮಯ ಎಲ್ಲವನ್ನೂ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಹಾಗಾಗಿ ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಾಯುತ್ತತೆ ಕಳೆದುಕೊಳ್ಳುತ್ತವೆ.
ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಹೊರೆ
ಇದು ಕೇಂದ್ರ ಸರ್ಕಾರದ ಯೋಜನೆಯಾದ್ದರಿಂದ ಇದುವರೆಗೂ ಹೆಚ್ಚಿನ ಹಣಕಾಸನ್ನು ಕೇಂದ್ರ ಸರ್ಕಾರವೇ ಪೂರೈಸುತ್ತಿತ್ತು. ಅಕುಶಲ ವರ್ಕ್‌ಗಳಲ್ಲಿ 100% ಕೇಂದ್ರ ಸರ್ಕಾರವೇ ಭರಿಸಬೇಕಿತ್ತು. ಯಂತ್ರಗಳು ಸೇರಿದಂತೆ ಕೆಲವೆಡೆ ಮಾತ್ರ ರಾಜ್ಯಗಳು ಸುಮಾರು 10% ನಷ್ಟು ಹಣ ಖರ್ಚು ಮಾಡುತ್ತಿದ್ದವು. ಆದರೆ ಈಗ ಹೊಸ ಬಿಲ್ ಪ್ರಕಾರ ಕೇಂದ್ರ ಸರ್ಕಾರ 60% ಕೊಟ್ಟರೆ ಉಳಿದ 40% ಅನ್ನು ರಾಜ್ಯಗಳೇ ಭರಿಸಬೇಕು ಎಂಬ ನಿಬಂಧನೆಯಿದೆ. ಈಗಾಗಲೇ ಜಿಎಸ್‌ಟಿ ಕಾರಣಕ್ಕೆ ರಾಜ್ಯಗಳು ನಮ್ಮ ಬಳಿ ಹಣ ಇಲ್ಲ ಎಂದು ಹೇಳುತ್ತಿರುವಾಗ ಮತ್ತೆ ರಾಜ್ಯಗಳ ಮೇಲೆಯೇ ಹೆಚ್ಚಿನ ಹೊರೆ ಹೊರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೃಷಿ ಅವಧಿಯಲ್ಲಿ ಕೆಲಸ ನಿಲ್ಲಿಸುವ ಪ್ರಸ್ತಾವ
ಕೃಷಿ ಮಾಡುವ ಎರಡು ತಿಂಗಳು ಉದ್ಯೋಗ ಖಾತ್ರಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆ ಮೂಲಕ ಕಾರ್ಮಿಕ ಉದ್ಯೋಗದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಯಾವುದು ಕೃಷಿ ಸೀಸನ್ ಯಾವುದು ಅಲ್ಲ ಎಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.
ಗಾಂಧಿಯ ಹೆಸರು ತೆಗೆದುಹಾಕುವುದು
ಇಡೀ ವಿಶ್ವವೇ ಗೌರವಿಸುವ ಮಹಾತ್ಮ ಗಾಂಧಿ ಕಂಡರೆ ಈ ಕೇಂದ್ರ ಸರ್ಕಾರಕ್ಕೆ ಏಕಿಷ್ಟು ಕೋಪ? ಈ ನರೇಗಾ ಯೋಜನೆ ತಂದಿದ್ದು ಹಿಂದಿನ ಯುಪಿಎ ಸರ್ಕಾರ. ಅದನ್ನು ಅಳಿಸಿ ತಾನೇ ಕ್ರೆಡಿಟ್ ತೆಗೆದುಕೊಳ್ಳುವ ಹಂಬಲ ಮೋದಿಯವರದ್ದು. ಎರಡನೇಯದಾಗಿ ಜನ ತಿರುಗಿ ಬೀಳಬಾರದು ಎಂದು ಧಾರ್ಮಿಕ ಲೇಪನ ಹಚ್ಚುವ ಕುತಂತ್ರವಿದು. ರಾಮ್‌ಜಿ ಎಂದು ಕರೆದು ಜನರನ್ನು ಸೆಳೆದುಕೊಳ್ಳುವ ಯತ್ನ.
ತನ್ನ ಜೀವನಮಾನವಿಡಿ ಒಬ್ಬ ನಿಷ್ಟಾವಂತ ಹಿಂದೂವಾಗಿ ಬದುಕಿದ, ರಾಮ್ ರಹೀಮ್ ಒಂದೇ ಎಂದ, ಸಾಯುವಾಗಲೂ ಹೇ ರಾಮ್ ಎಂದು ಹೇಳುತ್ತಾ ಕೊನೆಯುಸಿರೆಳೆದ ಗಾಂಧಿಯನ್ನು ಈ ಪರಿ ದ್ವೇಷಿಸುವುದು ಥರವಲ್ಲ.
ಯೋಜನೆಗಳಿಗೆ ರಾಮನ ಹೆಸರಿಡುವುದು ತಪ್ಪಲ್ಲ. ಹೊಸ ಯೋಜನೆಗಳಿಗೆ ರಾಮನ ಹೆಸರಿಡಬಹುದು. ಆದರೆ ಈಗಾಗಲೇ ಇರುವ ಯೋಜನೆಯ ಹೆಸರು ಬದಲಿಸುವುದರಿಂದ ಮತ್ತೆ ನೂರಾರು ಕೋಟಿ ವ್ಯರ್ಥ ಖರ್ಚಾಗುತ್ತದೆ ಮತ್ತು ಮಾನವ ಶ್ರಮ ವ್ಯರ್ಥವಾಗುತ್ತದೆ. ಇಷ್ಟು ಸಣ್ಣ ಪರಿಜ್ಞಾನ ಕೂಡ ಕೇಂದ್ರ ಸರ್ಕಾರಕ್ಕೆ ಇಲ್ಲ.
ಮನದಲ್ಲಿ ದ್ವೇಷ- ಅಸೂಯೆ ಕೆಟ್ಟತನ ತುಂಬಿಕೊಂಡು ಬಾಯಲ್ಲಿ ಮಾತ್ರ ರಾಮ ಜಪ ಮಾಡುವುದು ಜನರಿಗೆ ತಿಳಿಯುವುದಿಲ್ಲ ಎಂದು ಕೇಂದ್ರ ಸರ್ಕಾರ ಭಾವಿಸಿಕೊಂಡಿದೆ. ಅದಕ್ಕಾಗಿಯೇ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ್ದನ್ನು ನಾವೇ ಮಾಡಿದ್ದು ಎಂದು ಬಿಜೆಪಿ ಕೊಚ್ಚಿಕೊಂಡಿತ್ತು. ಆದರೆ ಅಯೋಧ್ಯೆ ಸೇರಿದಂತೆ ಇಡೀ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಸೋತಿದೆ. ಆದರೂ ಪಾಠ ಕಲಿತ್ತಿಲ್ಲ. ಮತ್ತೆ ಜನರನ್ನು ಧರ್ಮದ ಹೆಸರಿನಲ್ಲಿ ಮರಳುಗೊಳಿಸಲು ಹೊರಟಿದೆ.
ಒಟ್ಟಾರೆಯಾಗಿ ವಿಬಿ–ಜಿ ರಾಮ್ ಜಿ ಎಂದರೆ ಕೇಂದ್ರದ ನಿಯಂತ್ರಣ, ರಾಜ್ಯದ ಹಣ ಮತ್ತು ಷರತ್ತುಗಳ ಮೂಲಕ ಜನರ ಹಕ್ಕುಗಳನ್ನು ನಿಯಂತ್ರಿಸುವುದಾಗಿದೆ. ಇದು ಕಾರ್ಮಿಕರ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುತ್ತದೆಯೇ ಹೊರತು, ನರೇಗಾ ಯೋಜನೆಯನ್ನು ಸುಧಾರಿಸುವುದಿಲ್ಲ. ಆರ್ಥಿಕ, ಸಾಂಸ್ಥಿಕ ಮತ್ತು ನೈತಿಕವಾಗಿ ನರೇಗಾ ಯೋಜನೆಯನ್ನು ಹಾಳು ಮಾಡುತ್ತದೆ. ರಾಮ್ ಹೆಸರಿನಲ್ಲಿ, ರಾಜ್ಯಗಳು ಮತ್ತು ಬಡವರನ್ನು ದಂಡಿಸಲಾಗುತ್ತಿದೆ. ಹಕ್ಕು, ಅಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ. ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೊರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುತ್ತಿದೆ ಎಂದು ಸಂಸದರಾದ ಜಾನ್ ಬ್ರಿಟ್ಟಾಸ್ ಆರೋಪಿಸಿದ್ದಾರೆ. ಇದು ಸತ್ಯ ಎನಿಸುತ್ತದೆ.
ಪಾಲಿಸಿಗಳಲ್ಲಿ ಶಿಫ್ಟ್
ಅಂದರೆ ಪಾಲಿಸಿಗಳು ಶಿಫ್ಟ್ ಆಗುತ್ತಿವೆ. ಜನರಿಗೆ ಹಣ ಕೊಡುವುದು ಬೇಡ – ಅದಾನಿ ಅಂಬಾನಿ ಥರದ ಕೆಲವೇ ಕೆಲವು ಕ್ರೊನಿ ಉದ್ಯಮಿಗಳಿಗೆ ಹ ಣ ಕೊಡುತ್ತೇವೆ ಎನ್ನುತ್ತಿದೆ ಮೋದಿ ಸರ್ಕಾರ. ಅದಕ್ಕಾಗಿಯೇ ಮೋದಿ ಪ್ರಧಾನಿಯಾದ ನಂತರ ಸುಮಾರು 16 ಲಕ್ಷ ಕೋಟಿ ರೂಗಳನ್ನು ರೈಟ್ ಆಫ್ ಮಾಡಲಾಗಿದೆ. ಅವರಿಂದ ಸಾಲ ವಸೂಲಿ ಮಾಡದೇ ಬಿಟ್ಟು ಬಿಡಲಾಗಿದೆ. ಇದೇನಾ ವಿಕಸಿತ ಭಾರತ? 2047ಕ್ಕೆ ಇದರ ಯಶಸ್ಸು ಸಿಗುವುದಾದರೆ ಅಲ್ಲಿಯವರೆಗೂ ಜನರು ಹಸಿದು ಸಾಯಬೇಕೆ? ಆಗ ನಾವು ಇರಲಿ ಮೋದಿ ಬದುಕಿರುತ್ತಾರೆ ಎಂಬುದಕ್ಕೆ ಗ್ಯಾರಂಟಿ ಯಾರು? ವಿಕಸಿತವಾಗದಿದ್ದರೆ ಯಾರನ್ನು ಪ್ರಶ್ನಿಸಬೇಕು. ಈಗ ಬದಲಾವಣೆ ಮಾಡಿ ಎಂದರೆ 2047 ತೋರಿಸುವುದು ಅನ್ಯಾಯವಲ್ಲವೇ?
ಭಾರತದಂತಹ ಇನ್ನೂ ಗ್ರಾಮೀಣ ಜನಸಂಖ್ಯೆ ಹೆಚ್ಚಿರುವ ರಾಷ್ಟ್ರಗಳಲ್ಲಿ ನರೇಗಾದಂತಹ ಜನರ ಕೈಗೆ ನೇರವಾಗಿ ಹಣ ಸಿಗುವ ಯೋಜನೆಗಳು ಹೆಚ್ಚು ಹೆಚ್ಚು ಬೇಕು. ಗ್ಯಾರಂಟಿಯಂತಹ ಯೋಜನೆಗಳು ಸಹ ಬೇಕು. ಅದಕ್ಕಾಗಿಯೇ ಹಿಂದಿನ ಯುಪಿಎ ಸರ್ಕಾರ ಆರ್‌ಟಿಐ, ಆರ್‌ಟಿಇ, ಫಾರೆಸ್ಟ್ ರೈಟ್ ಆಕ್ಟ್, ಫುಡ್ ಸೆಕ್ಯುರಿಟ್ ಆಕ್ಟ್ ನಂತಹ ಹತ್ತಾರು ಜನಪರ ಯೋಜನೆಗಳನ್ನು ತರಬೇಕಾಯಿತು. ಆದರೆ ಮೋದಿ ಸರ್ಕಾರ ಬಂದ ಮೇಲೆ ಎಲ್ಲವನ್ನು ವಾಪಸ್ ಕಿತ್ತುಕೊಳ್ಳುತ್ತಿದೆ. ಈಗ ಆರ್‌ಟಿಐ ಅನ್ನು ಕೊಲೆ ಮಾಡಲಾಗಿದೆ. ವ್ಯಕ್ತಿಗಳ ಆದಾಯದ ಬಗ್ಗೆ ಕೇಳುವಂತಿಲ್ಲ. ಆರ್‌ಟಿಐ ಆಯುಕ್ತರಿಗೆ ಕೇಂದ್ರ ಸರ್ಕಾರ ತಾನೇ ಸಂಬಳ ನೀಡಿ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದೆ.
ಈಗ ಮನರೇಗಾ ಕಾಯ್ದೆಯನ್ನು ಮುಗಿಸುತ್ತಿದೆ. ಇದರಿಂದ ಈಗಾಗಲೇ ಇರುವ ಅಸಮಾನತೆ ಮತ್ತಷ್ಟು ಹೆಚ್ಚಾಗುತ್ತದೆ. ಬಡಜನರ ಕೈಯಿಂದ ಇರುವುದನ್ನು ಕಸಿದುಕೊಂಡರೆ ಅವರು ತಿರುಗಿ ಬೀಳದೆ ಬೇರೆ ದಾರಿ ಇರುವುದಿಲ್ಲ. ದೇಶದಲ್ಲಿ ಅಶಾಂತಿ, ಅರಾಜಕತೆ ಉಂಟಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರದ ಈ ನೀತಿಗಳನ್ನು ವಿರೋಧಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ತಮಗೆ ಸಾಧ್ಯವಾದ ರೀತಿಯಲ್ಲಿ ಈ ನೀತಿಗಳನ್ನು ವಿರೋಧಿಸುವುದು ಇಂದಿನ ತುರ್ತಾಗಿದೆ.

ಮುತ್ತುರಾಜು
ಪತ್ರಕರ್ತ, ಲೇಖಕ




