ಕಳೆದ ಐದು ವರ್ಷಗಳಲ್ಲಿ ಗೌತಮ್ ಅದಾನಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯಿಂದ ಹಿಡಿದು ಬಂದರು ತನಕ, ಸಿಮೆಂಟ್, ಮಾಧ್ಯಮ, ಗ್ಯಾಸ್ ವಿತರಣೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ನಂತಹ ಕಾರ್ಪೋರೇಟ್ ದಿಗ್ಗಜರನ್ನು ಕಿರು ಅವಧಿಯಲ್ಲೇ ಹಿಂದಿಕ್ಕಿದ್ದ ಗೌತಮ್ ಅದಾನಿ 609ನೇ ಸ್ಥಾನದಲ್ಲಿದ್ದವರು ವಿಶ್ವದ 2ನೇ ಸಿರಿವಂತ ಸ್ಥಾನಕ್ಕೆ ಏರಿದ್ದರು. 2022ರ ಫೋರ್ಬ್ಸ್ ನಿಯತಕಾಲಿಕೆಗಳ ಪ್ರಕಾರ, ಅದಾನಿ ಅವರ ಸಂಪತ್ತು ಕಿರು ಅವಧಿಗೆ ₹31,880 ಕೋಟಿಯಷ್ಟು ಹೆಚ್ಚಾಗಿ ₹12.27 ಲಕ್ಷ ಕೋಟಿಗೆ ಏರಿಕೆ ಕಂಡಿತ್ತು. ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗೌತಮ್ ಅದಾನಿ, ದೇಶದ ಶ್ರೀಮಂತರ ಪಟ್ಟಿಯಲ್ಲಿಯೂ ಕೂಡ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವದ ಶ್ರೀಮಂತರ ಸ್ಥಾನದಲ್ಲಿ ತೆವಳುತ್ತಿದ್ದ ವ್ಯಕ್ತಿ ಕಿರು ಅವಧಿಯಲ್ಲಿಯೇ ಅಂದರೆ, 2020 ರಿಂದ 2022ರ ಅವರಧಿಯಲ್ಲಿ ಊಹೆಗೆ ನಿಲುಕದಷ್ಟು ಮೇಲೆರಿದ್ದರು. ಇದು ಹೇಗೆ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕೂಡ ಮೂಡಿತ್ತು. ಈ ಕುರಿತು ಭಾರೀ ಚರ್ಚೆಗಳೂ ನಡೆದಿವೆ.
ಅಷ್ಟೇ ಅಲ್ಲದೇ, ಅದಾನಿ ಅತಿ ಕಡಿಮೆ ಅವಧಿಯಲ್ಲಿ ಇಷ್ಟೊಂದು ವೇಗವಾಗಿ ಬೆಳವಣಿಗೆ ಕಾಣುವುದಕ್ಕೆ ಮೋದಿ ಅವರ ಕೃಷಕಟಾಕ್ಷವೇ ಕಾರಣ ಎಂದು ಹಲವರು ಆರೋಪಿಸುತ್ತಿದ್ದಾರೆ. ಮೋದಿ ಅವರ ದೋಸ್ತಿ ಮತ್ತು ಅವರ ಕೃಪಾಕಟಾಕ್ಷದಿಂದ ಅದಾನಿ ಉದ್ಯಮಗಳ ಬೆಳವಣಿಗೆ ಬುಲೆಟ್ ರೈಲಿನಂತೆ ಓಡುತ್ತಿದೆ ಅದಾನಿ ಅವರು ಕಳೆದ 10 ವರ್ಷಗಳಲ್ಲಿ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದ್ದರು. 2014ರ ಬಳಿಕ ಅದಾನಿ ಅವರು ಈ ಪ್ರಗತಿ ಕಂಡಿದ್ದಾರೆ.
ಮೋದಿ ಪ್ರಧಾನಿಯಾದ ಬಳಿಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಉತ್ತುಂಗಕ್ಕೇರಿದ ಅದಾನಿ, ಶಾರ್ಟ್-ಸೆಲ್ಲರ್ ಸಂಸ್ಥೆ ಹಿಂಡೆನ್ ಬರ್ಗ್ ರಿಸರ್ಚ್ ವಂಚನೆ ಆರೋಪದ ವರದಿಯ ನಂತರ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಕಿರೀಟವನ್ನು ಕೆಲವೇ ದಿನಗಳಲ್ಲಿ ಕಳೆದುಕೊಂಡರು. ಸದ್ಯ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 28ನೇ ಸ್ಥಾನದಲ್ಲಿದ್ದರೇ, ಮುಖೇಶ್ ಅಂಬಾನಿ 18ನೇ ಸ್ಥಾನದಲ್ಲಿದ್ದಾರೆ.
2022ರಲ್ಲೇ ಅದಾನಿ ಸಂಪತ್ತಿಗೆ 60.9 ಬಿಲಿಯನ್ ಅಮೆರಿಕನ್ ಡಾಲರ್ (₹5.16 ಲಕ್ಷ ಕೋಟಿ) ಸೇರ್ಪಡೆಗೊಂಡಿದೆ. ಇದು ಇತರ ಉದ್ಯಮಿಗಳಿಗಿಂತ ಐದು ಪಟ್ಟು ಹೆಚ್ಚಿನ ಏರಿಕೆಯಾಗಿದೆ. ವಿಶೇಷವೆಂದರೆ, ಅದಾನಿ ಏಷ್ಯಾದ ಶ್ರೀಮಂತ ಉದ್ಯಮಿಯಾಗಿ ಮೂಡಿಬಂದಿದ್ದು ಕೂಡ ಅದೇ ವರ್ಷದ ಫೆಬ್ರವರಿಯಲ್ಲೇ. ಕೋವಿಡ್ ಸಮಯದಲ್ಲಿ ದೇಶದ ಜನರು ತಿನ್ನುವುದಕ್ಕೆ ಅನ್ನ ಇಲ್ಲ ಎಂದು ಪರಿತಪಿಸುತ್ತಿದ್ದರೇ, ಅದಾನಿ ಸಂಪತ್ತು ಆ ಸಮಯದಲ್ಲಿಯೇ ಏರಿಕೆ ಕಂಡಿತ್ತು. ಅಂದರೆ, 2020ರ ಜನವರಿ 1ರಂದು ಗೌತಮ್ ಅದಾನಿ ಸಂಪತ್ತು 10 ಬಿಲಿಯನ್ ಡಾಲರ್ (₹84,500 ಕೋಟಿ) ಆಗಿತ್ತು. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅದಾನಿ ಸಂಪತ್ತು 137 ಬಿಲಿಯನ್ ಡಾಲರ್‌ಗೆ (₹11.61 ಲಕ್ಷ ಕೋಟಿ) ಏರಿಕೆ ಆಗಿತ್ತು. ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ರೆ, ಅಂಬಾನಿ 11ನೇ ಸ್ಥಾನದಲ್ಲಿದ್ದರು.

ಅದಾನಿ ತ್ವರಿತಗತಿಯಲ್ಲಿ ಏರಿಕೆ ಕಾಣುವುದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಮೋದಿ ಕೃಪೆ.
ಹೌದು, ಸೆಪ್ಟೆಂಬರ್ 2021ರಲ್ಲಿ ಗೌತಮ್ ಅದಾನಿ 1ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ 5 ಕಂಪನಿಗಳನ್ನು ಸ್ಥಾಪಿಸಿದ್ದರು. ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ ಪ್ರಕಾರ, ಇತರರಿಗೆ ಹೋಲಿಸಿದರೆ 2021ರಲ್ಲಿ ಅದಾನಿ ಅವರ ಸಂಪತ್ತು ಭಾರೀ ಹೆಚ್ಚಳ ಕಂಡಿತ್ತು. ಅವರ ಸಂಪತ್ತಿಗೆ 49 ಬಿಲಿಯನ್ ಡಾಲರ್(₹4.15 ಲಕ್ಷ ಕೋಟಿ) ಸೇರ್ಪಡೆಯಾಗಿತ್ತು. ಅಂದರೆ, ಆ ಅವಧಿಯಲ್ಲಿ ವಾರಕ್ಕೆ ₹6,000 ಕೋಟಿ ರೂಪಾಯಿಯಂತೆ ಅವರ ಸಂಪತ್ತು ಹೆಚ್ಚಳಗೊಳ್ಳುತ್ತ ಸಾಗಿತ್ತು.
ಜತೆಗೆ, ಕಳೆದ ಐದು ವರ್ಷಗಳಲ್ಲಿ ಗೌತಮ್ ಅದಾನಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯಿಂದ ಹಿಡಿದು ಬಂದರು ತನಕ, ಸಿಮೆಂಟ್, ಮಾಧ್ಯಮ, ಸಿಟಿ ಗ್ಯಾಸ್ ವಿತರಣೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದಾನಿ ಗ್ರೂಪ್ ಪ್ರಸ್ತುತ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯಾಗಿದೆ.
ಅದಾನಿಯ ಈ ಎಲ್ಲ ಸಾಧನೆಗಳ ಹಿಂದೆ ಅದಾನಿಯ ಅತ್ಯಾಪ್ತ ಗೆಳೆಯ ಮೋದಿ ಅವರು ಇದ್ದಾರೆ. ಅದಾನಿ ಗ್ರೂಪ್ – ಮುಂಬೈ ಪೋರ್ಟ್, ವಿದ್ಯುತ್ ಮತ್ತು ವ್ಯಾಪಾರದಲ್ಲಿ ಚಟುವಟಿಕೆ ನಡೆಸುತ್ತಿತ್ತು. ಆದರೆ, ದೊಡ್ಡ ಬೆಳವಣಿಗೆ ಮೋದಿ ಪ್ರಧಾನಿಯಾದ ನಂತರ ಆರಂಭವಾಯಿತು.
ಮೋದಿ ಅಧಿಕಾರಕ್ಕೆ ಬಂದ ನಂತರ 2014ರಿಂದ 2022ರವರೆಗೆ ಅದಾನಿ ಸಂಪತ್ತು $8 ಬಿಲಿಯನ್‌ನಿಂದ (₹678 ಲಕ್ಷ ಕೋಟಿ) $140 ಬಿಲಿಯನ್‌ಗೆ (₹11.86 ಲಕ್ಷ ಕೋಟಿ) ಏರಿತ್ತು. ಅಂದರೆ, ಬರೋಬ್ಬರಿ 17 ಪಟ್ಟು ಹೆಚ್ಚಳ ಕಂಡಿತ್ತು. ಆ ಬಳಿಕವೇ, 2022ರಲ್ಲಿ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ಜಗತ್ತಿನ 2-3ನೇ ಸ್ಥಾನಕ್ಕೆ ಏರಿದರು. ಇದೆಲ್ಲದಕ್ಕೂ ಪ್ರಧಾನಿ ಮೋದಿ ಅವರ ಕೃಪಾಕಟಾಕ್ಷವೇ ಮೂಲ ಕಾರಣ.
ಗುಜರಾತ್‌ನಿಂದ ಆರಂಭವಾದ ಮೋದಿ ಮತ್ತು ಗೌತಮ್ ಅದಾನಿ ಸಂಬಂಧ ಮೋದಿ ಅವರು ಮುಖ್ಯಮಂತ್ರಿಯಾದ ಸಮಯದಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅದಾನಿ ಗ್ರೂಪ್‌ಗೆ ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ಯೋಜನೆಗಳು ಸೇರಿದಂತೆ ಅನೇಕ ಮೂಲಸೌಕರ್ಯ ಯೋಜನೆಗಳು ಸಿಕ್ಕಿವೆ. ವಿಮಾನ ನಿಲ್ದಾಣಗಳ ಟೆಂಡರ್ ಅನ್ನು ಕೇಂದ್ರ ಸರ್ಕಾರ 50 ವರ್ಷಗಳ ಒಪ್ಪಂದದ ಮೇರೆಗೆ ಅದಾನಿ ಸಂಸ್ಥೆಗೆ ಗುತ್ತಿಗೆ ನೀಡಿದೆ. 2019ರಲ್ಲಿ ಅದಾನಿ ಗ್ರೂಪ್‌ಗೆ ಆರು ವಿಮಾನ ನಿಲ್ದಾಣಗಳ ನಿರ್ವಹಣೆಯ ಹಕ್ಕುಗಳನ್ನು ನೀಡಲಾಯಿತು. ಜತೆಗೆ, ಅದಾನಿಗೋಸ್ಕರ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಬದಲಾಯಿಸಿತು ಎಂಬ ಆರೋಪಗಳಿವೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಬಸವೇಶ್ವರ ದೇಗುಲ ಜೀರ್ಣೋದ್ಧಾರ ಮಾಡಿದ ಸೈಯದ್!
‘ಮೋದಾನಿ’ ಸಂಬಂಧವು ಕೇವಲ ವ್ಯಾಪಾರದ್ದಲ್ಲದೆ, ರಾಜಕೀಯವಾಗಿಯೂ ಗಾಢವಾಗಿದೆ. ಮೋದಿ ಅವರ ಚುನಾವಣಾ ಪ್ರಚಾರಗಳಲ್ಲಿ ಅದಾನಿ ಗ್ರೂಪ್‌ನ ಜೆಟ್‌ಗಳನ್ನು ಬಳಸಲಾಗಿದೆ. ಇದು ಸ್ಪಷ್ಟ ಕ್ರೋನಿಸಂನ ಉದಾಹರಣೆಯಾಗಿದೆ. ವಿರೋಧ ಪಕ್ಷಗಳು ಈ ಸಂಬಂಧವನ್ನು “ಮೋದಿ-ಅದಾನಿ ನೆಕ್ಸಸ್” ಎಂದು ಕರೆಯುತ್ತವೆ. ದೇಶದ ಸಂಪನ್ಮೂಲಗಳನ್ನು ಒಬ್ಬ ವ್ಯಕ್ತಿಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಸಿವೆ. ಅದಾನಿ ಗ್ರೂಪ್ ಬೆಳವಣಿಗೆಯ ಹಿಂದೆ ಮೋದಿ ಸರ್ಕಾರದ ಪರೋಕ್ಷವಲ್ಲ, ಪ್ರತ್ಯಕ್ಷ ಬೆಂಬಲವೇ ಇದೆ. ಇದು ಸಾಮಾನ್ಯ ಜನರ ಹಿತಕ್ಕೆ ವಿರುದ್ಧವಾಗಿದೆ ಮತ್ತು ಭ್ರಷ್ಟಾಚಾರದ ಮೂಲವಾಗಿದೆ.
ಅದಾನಿ ಮೇಲಿನ ಅತಿಯಾದ ಪ್ರೀತಿಯಿಂದ ಸಾಮಾನ್ಯ ಜನರ ಹಿತಕ್ಕೆ ಮೋದಿ ಅವರು ಭಂಗ ತಂದಿದ್ದಾರೆ. ವೋಟ್ ಪಡೆದು ಗೆದ್ದು ಬಂದ ಬಳಿಕ ಜನರ ಹಿತವನ್ನ ಕಾಯಬೇಕಿದ್ದ ಮೋದಿ ಅವರು ಅದಾನಿ ಹಿತ ಕಾಯುತ್ತ ಜನರನ್ನ ಸಂಕಷ್ಟಕ್ಕೆ ದೂಡಿದ್ದಾರೆ. ಅದಕ್ಕೆ ಉದಾಹರಣೆಯೆಂದರೆ, ದೇಶದ ಅತಿದೊಡ್ಡ ಖಾಸಗಿ ಕಲ್ಲಿದ್ದಲು ಆಮದುದಾರ ಕಂಪನಿಯಾದ ಅದಾನಿ ಸಮೂಹವು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಶತಕೋಟಿ ಡಾಲರ್ ಮೌಲ್ಯದ ಕಲ್ಲಿದ್ದಲನ್ನು ಆಮದು ಮಾಡಿಕೊಂಡ ಕಾರಣ ಲಕ್ಷಾಂತರ ಭಾರತೀಯ ಗ್ರಾಹಕರು ವಿದ್ಯುತ್‌ಗಾಗಿ ಹೆಚ್ಚು ಹಣ ಪಾವತಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು 2023ರಲ್ಲಿ ಬ್ರಿಟಿಷ್ ದೈನಿಕ ‘ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿತ್ತು.
ಸರ್ಕಾರದ ಅದಾನಿ ಪರ ನೀತಿಗಳು ಪರಿಸರ ಮತ್ತು ಸಾಮಾಜಿಕ ಹಿತಗಳನ್ನು ಕಡೆಗಣಿಸಿವೆ. ಅದಾನಿ ಗ್ರೂಪ್‌ನ ಕಲ್ಲಿದ್ದಲು ಗಣಿಗಳು ಮತ್ತು ಬಂದರು ಯೋಜನೆಗಳು ಸ್ಥಳೀಯ ಸಮುದಾಯಗಳನ್ನು ನಿರ್ಲಕ್ಷಿಸಿ, ಪರಿಸರ ಹಾನಿಯನ್ನು ಉಂಟುಮಾಡಿದರೂ ಮೋದಿ ಸರ್ಕಾರ ಅನುಮೋದನೆಗಳನ್ನು ತ್ವರಿತಗತಿಯಲ್ಲಿ ನೀಡಿದೆ.
2023ರ ಜನವರಿಯಲ್ಲಿ ಅದಾನಿ ಸಮೂಹ ಕಂಪನಿಗಳ ಬಗ್ಗೆ ಸಂಶೋಧವಾ ವರದಿ ಬಿಡುಗಡೆ ಮಾಡಿದ್ದ ಹಿಂಡನ್ ಬರ್ಗ್, ಅದಾನಿ ಕಂಪನಿಯು ಷೇರು ಮಾರುಕಟ್ಟೆಯನ್ನು ತಿರುಚಿದೆ ಹಾಗೂ ಲೆಕ್ಕಪತ್ರಗಳನ್ನು ವಂಚಿಸಿದೆ ಎಂದು ತಿಳಿಸಿತ್ತು. ಇದಾದ ಬಳಿಕ ಅದಾನಿ ಸಂಪತ್ತು ಇಳಿಕೆ ಕಂಡಿತು. ಅದಾನಿ ಸಂಪತ್ತು $120 ಬಿಲಿಯನ್‌ನಿಂದ (₹10.17 ಲಕ್ಷ ಕೋಟಿ) $33 ಬಿಲಿಯನ್‌ಗೆ (₹2.79 ಲಕ್ಷ ಕೋಟಿ) ಕುಸಿಯಿತು. ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಇಳಿದರು. ಆ ಬಳಿಕ, ಅದಾನಿ 2024ರಲ್ಲಿ ಮತ್ತೆ ಚೇತರಿಸಿಕೊಂಡರು. ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ $116 ಬಿಲಿಯನ್ (₹9.83 ಲಕ್ಷ ಕೋಟಿ) ಸಂಪತ್ತಿನೊಂದಿಗೆ 2ನೇ ಸ್ಥಾನಕ್ಕೇರಿದರು. 2025ರ ನವೆಂಬರ್ ವೇಳೆಗೆ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 20-29ನೇ ಸ್ಥಾನದಲ್ಲಿದ್ದಾರೆ.

ಅದಾನಿಯನ್ನು ಶ್ರೀಮಂತಗೊಳಿಸಲು ಮೋದಿ ಸರ್ಕಾರವು ಸಾಕಷ್ಟು ಶ್ರಮಿಸುತ್ತಿದೆ. ಇತ್ತೀಚೆಗೆ, ಬಿಹಾರದ ಭಾಗಲಪುರ ಜಿಲ್ಲೆಯ ಪೀರ್ಪೈಂಟಿ ಪ್ರದೇಶದಲ್ಲಿ ಅದಾನಿ ಪವರ್ ಕಂಪನಿಗೆ ಸರ್ಕಾರಿ ಭೂಮಿ ನೀಡಿದ್ದು, ಎನ್‌ಡಿಎ ಆಡಳಿತದ ಬಿಹಾರ ಸರ್ಕಾರವು 1,020 ಏಕರೆ ಭೂಮಿಯನ್ನು ಕೇವಲ ಒಂದು ರೂಪಾಯಿ ವಾರ್ಷಿಕ ಬಾಡಿಗೆಗೆ 30 ವರ್ಷಗಳ ಕಾಲ ಹಸ್ತಾಂತರಿಸಿದೆ. ಇದು ದೇಶದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ತೀವ್ರವಾದ ಅಸಮಾನತೆಯನ್ನು ಬಯಲು ಮಾಡಿದೆ.
ಇನ್ನು ಟ್ರಂಪ್ ಎಷ್ಟೇ ಬಾರಿ ಹೇಳಿದರೂ ತಲೆಕೆಡಿಸಿಕೊಳ್ಳದ ಮೋದಿ ಅವರು ರಷ್ಯಾದಿಂದ ಅತೀ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗಂತ, ಮೋದಿ ಅವರಿಗೆ ರಾಷ್ಟ್ರೀಯ ಹಿತಾಸಕ್ತಿಯೂ ಇಲ್ಲ, ಜನರಿಗೆ ಕಡಿಮೆ ಬೆಲೆಯಲ್ಲಿ ಇಂಧನ ಪೂರೈಸುವ ಇರಾದೆಯೂ ಇಲ್ಲ. ಬದಲಿಗೆ ಮೋದಿ ಮತ್ತು ಅಂಬಾನಿ ವ್ಯಾವಹಾರಿಕ ದೋಸ್ತಿಯೇ ಇದಕ್ಕೆ ಕಾರಣವಾಗಿದೆ. ಆ ದೋಸ್ತಿಯ ಫಲವಾಗಿ ಬಿಜೆಪಿಗೆ ಕೋಟಿಗಟ್ಟಲೆ ದೇಣಿಗೆ ಹರಿದುಬರುತ್ತಿರುವ ಸತ್ಯವನ್ನ ಚುನಾವಣಾ ಬಾಂಡ್‌ಗಳೇ ಹೇಳುತ್ತವೆ.
ಕಳೆದ ವರ್ಷ ಅದಾನಿ ವಿರುದ್ಧ ಅಮೆರಿಕದಲ್ಲಿ ವಂಚನೆ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದ ಹಿನ್ನೆಲೆ, ಅಮೆರಿಕ ಮತ್ತು ಯುರೋಪಿನ ಬ್ಯಾಂಕ್‌ಗಳು ಅದಾನಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ, ಅದಾನಿಗೆ ನೆರವಾಗಲು ಕೇಂದ್ರ ಸರ್ಕಾರ ತನ್ನದೇ ಯೋಜನೆಯೊಂದನ್ನ ರೂಪಿಸಿದ್ದು, ಆಪ್ತ ಸೇಹಿತನಿಗಾಗಿ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ದೊಡ್ಡ ವಿಮಾ ಕಂಪನಿ ಎಲ್ ಐ ಸಿ (ಭಾರತೀಯ ಜೀವ ವಿಮಾ ನಿಗಮ) ನೀಡಿದ್ದಾರೆ.
ಇದನ್ನೂ ಓದಿ ಜೆಎನ್‌ಯು ವಿವಿ ವಿದ್ಯಾರ್ಥಿ ಘಟಕ ಚುನಾವಣೆ: ಎಡ ಸಂಘಟನೆಗಳಿಗೆ ಭರ್ಜರಿ ಜಯ, ಎಬಿವಿಪಿಗೆ ಮುಖಭಂಗ
ಮೋದಿ ಅಧಿಕಾರಕ್ಕೇರಿದ ನಂತರ ಅದಾನಿಯೂ ಕೂಡ ಶ್ರೀಮಂತರ ಪಟ್ಟಿಯಲ್ಲಿ ಬಡ್ತಿ ಪಡೆದರು. ಈಗ ಅದಾನಿಯ ಪರವಾಗಿ ಕೆಲಸ ಮಾಡುತ್ತಿರುವ ಮೋದಿ ಅವರು ಸರ್ಕಾರಿ ಯೋಜನೆಗಳನ್ನ ಅದಾನಿಗೆ ನೀಡುತ್ತಿದ್ದಾರೆ. ಈ ಪ್ರತ್ಯಕ್ಷ ಬೆಂಬಲದಿಂದಲೇ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಿಂದ 2ನೇ ಸ್ಥಾನಕ್ಕೇರಿದರು. ಅದು ಕೂಡ ಕೇವಲ 2 ವರ್ಷಗಳಲ್ಲಿ ಈ ಬೆಳವಣಿಗೆ ಕಂಡಿದ್ದರು.
ಪ್ರಸ್ತುತ ಅದಾನಿ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದ್ದಾರೆ. ಅದಾನಿಗೆ ಏನೇ ಆದರೂ ಅವರು ಎಷ್ಟೇ ಕೆಳಗೆ ಇಳಿದರೂ ಮೇಲೆತ್ತುವುದಕ್ಕೆ ಭಾರತದಲ್ಲಿ ಅದಾನಿ ಅತ್ಯಾಪ್ತ ನರೇಂದ್ರ ಮೋದಿ ಅವರು ಇದ್ದಾರೆ. ಹೀಗಾಗಿ, ಈಗ 28ನೇ ಸ್ಥಾನದಲ್ಲಿರುವ ಅದಾನಿ ಮತ್ತೆ ವಿಶ್ವದ ಮೊದಲನೇ ಸ್ಥಾನ ಅಥವಾ ಎರಡನೇ ಸ್ಥಾನ ಏರುವ ಸಮಯ ದೂರವಿಲ್ಲ. ಯಾಕೆಂದರೆ, ಭಾರತದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇದ್ದಾರೆ.




