ತರ್ಕವಿಲ್ಲದ ಭಯ ʼಫೋಬಿಯಾʼ ಕುರಿತು ನಿಮಗೆಷ್ಟು ಗೊತ್ತು?

Date:

ಫೋಬಿಯಾ ಎದುರಾದಾಗ ವ್ಯಕ್ತಿ ತೀವ್ರ ಆತಂಕಕ್ಕೊಳಗಾಗಿ, ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧನಾಗಿರುತ್ತಾನೆ. ಈ ಸಮಸ್ಯೆ ಬಾಲ್ಯದಲ್ಲೇ ಆರಂಭವಾಗಿ, ಚಿಕಿತ್ಸೆ ಇಲ್ಲದಿದ್ದರೆ ದೀರ್ಘಕಾಲ ಮುಂದುವರಿಯುತ್ತದೆ.

ಭಯ ಎಂದರೆ ಅಪಾಯವನ್ನು ಗುರುತಿಸಿದಾಗ ಮನುಷ್ಯನ ಮನಸ್ಸು ಮತ್ತು ದೇಹ ತಕ್ಷಣ ಪ್ರತಿಕ್ರಿಯಿಸುವ ಒಂದು ಸಹಜ ಸ್ಥಿತಿ. ಇದು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪ್ರಕೃತಿಯೇ ನೀಡಿರುವ ಎಚ್ಚರಿಕೆಯ ವ್ಯವಸ್ಥೆ. ಏನಾದರೂ ಸಂಭವಿಸಬಹುದು ಎಂದು ಮೆದುಳು ಊಹಿಸಿದ ಕ್ಷ ಣದಲ್ಲೇ ಭಯ ಶುರುವಾಗುತ್ತದೆ. ಆದರೆ ಇದೇ ಭಯ, ಒಂದು ಹಂತದ ಬಳಿಕ ಅತಿರೇಕವಾಗಿ, ತರ್ಕವಿಲ್ಲದಂತೆ, ನಿರಂತರವಾಗಿ ಮನುಷ್ಯನ ಆಲೋಚನೆ, ನಿರ್ಧಾರ ಮತ್ತು ದಿನಚರಿಯ ಮೇಲೆ ಪರಿಣಾಮ ಬೀರಲು ಆರಂಭಿಸಿದಾಗ ಅದು ಫೋಬಿಯಾ ಆಗುತ್ತದೆ.

ಮನೋವಿಜ್ಞಾನದ ಪ್ರಕಾರ, ಫೋಬಿಯಾ ಒಂದು ಆತಂಕ ಸಂಬಂಧಿತ ಮನೋವೈಕಲ್ಯ(Anxiety Disorder). ಇದು ಸಾಮಾನ್ಯ ಭಯಕ್ಕಿಂತ ಭಿನ್ನವಾದುದು. ನಿರ್ದಿಷ್ಟ ವಸ್ತು, ಪರಿಸ್ಥಿತಿ, ಜೀವಿ ಅಥವಾ ಸಾಮಾಜಿಕ ಸಂದರ್ಭ ಎದುರಾದಾಗ, ವ್ಯಕ್ತಿಯ ಮನಸ್ಸು ಅದನ್ನು ಅತಿಯಾದ ಅಪಾಯವೆಂದು ಅರ್ಥೈಸುತ್ತದೆ. ಈ ಅರ್ಥೈಸುವಿಕೆ ತರ್ಕಾಧಾರಿತವಾಗಿರದೆ, ಹಿಂದಿನ ಅನುಭವಗಳು, ನೆನಪುಗಳು ಹಾಗೂ ಕಲ್ಪನೆಗಳಿಂದ ರೂಪುಗೊಂಡಿರುತ್ತದೆ. ವ್ಯಕ್ತಿಗೆ ತನ್ನ ಭಯ ಅತಿರೇಕ ಎಂಬ ಅರಿವಿದ್ದರೂ, ಅದನ್ನು ತಕ್ಷಣ ನಿಯಂತ್ರಿಸುವ ಸಾಮರ್ಥ್ಯ ಅವನ ಕೈಯಲ್ಲಿರುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂತಹ ಸಂದರ್ಭಗಳಲ್ಲಿ ದೇಹವೂ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಹೃದಯ ಬಡಿತ ವೇಗವಾಗುವುದು, ಉಸಿರಾಟದಲ್ಲಿ ಅಸಹಜ ಏರಿಳಿತ, ಬೆವರುವುದು, ನಡುಕ ಕಾಣಿಸಿಕೊಳ್ಳುವುದು ಇವು ಫೋಬಿಯಾದ ಸಾಮಾನ್ಯ ಲಕ್ಷಣಗಳು. ಕೆಲವರಿಗೆ ಆ ಜಾಗದಿಂದಲೇ ತಪ್ಪಿಸಿಕೊಂಡು ಓಡಿಬಿಡಬೇಕು ಎನಿಸುತ್ತದೆ. ಈ ದೈಹಿಕ-ಮಾನಸಿಕ ಪ್ರತಿಕ್ರಿಯೆಗಳು ಅಪಾಯದಿಂದ ರಕ್ಷಿಸಿಕೊಳ್ಳುವ ಉದ್ದೇಶದಿಂದ ಹುಟ್ಟಿದರೂ, ಫೋಬಿಯಾದಲ್ಲಿ ಅವೇ ಪ್ರತಿಕ್ರಿಯೆಗಳು ಮನುಷ್ಯನ ದಿನನಿತ್ಯದ ಬದುಕಿಗೆ ಅಡ್ಡಿಯುಂಟುಮಾಡುತ್ತವೆ.

ಫೋಬಿಯಾಗ ಇರುವ ವ್ಯಕ್ತಿ ʼನಾನು ನಿಯಂತ್ರಣ ಕಳೆದುಕೊಳ್ಳುವೆನಾ?ʼ, ʼಏನಾದರೂ ಆದರೆ ಯಾರೂ ಸಹಾಯಕ್ಕೆ ಬರುವುದಿಲ್ಲವೇ?ʼ, ʼನಾನು ಹಾಸ್ಯಾಸ್ಪದನಾಗಿಬಿಡುವೆನೇ?ʼ ಎಂಬ ಅಜ್ಞಾತ ಪ್ರಶ್ನೆಗಳು ಫೋಬಿಯಾವನ್ನು ಹೆಚ್ಚಿಸುತ್ತವೆ. ಅದಕ್ಕಾಗಿಯೇ ಫೋಬಿಯಾದಲ್ಲಿ ತರ್ಕ ಕೆಲಸ ಮಾಡುವುದಿಲ್ಲ. ವ್ಯಕ್ತಿಗೆ ತನ್ನ ಭಯ ಅತಿರೇಕ ಎನ್ನುವುದು ಗೊತ್ತಿರುತ್ತದೆ; ಆದರೂ ದೇಹ ಅದನ್ನು ನಂಬಲು ಸಿದ್ಧವಿರುವುದಿಲ್ಲ.

phobia

ಫೋಬಿಯಾಗಳನ್ನು ಹೀಗೆ ಗುರುತಿಸಲಾಗುತ್ತದೆ..

1. ನಿರ್ದಿಷ್ಟ ಫೋಬಿಯಾ (Specific Phobia)
ನಿರ್ದಿಷ್ಟ ವಸ್ತು, ಜೀವಿ ಅಥವಾ ಪರಿಸ್ಥಿತಿಗೆ ಸಂಬಂಧಿಸಿದ ಅತಿಯಾದ, ತರ್ಕವಿಲ್ಲದ ಭಯವನ್ನು ನಿರ್ದಿಷ್ಟ ಫೋಬಿಯಾ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಎತ್ತರ, ಕತ್ತಲೆ, ಜೇಡ, ಹಾವು, ರಕ್ತ, ಸೂಜಿ, ವಿಮಾನ ಪ್ರಯಾಣ ಅಥವಾ ಮುಚ್ಚಿದ ಸ್ಥಳಗಳು. ಈ ಫೋಬಿಯಾ ಎದುರಾದಾಗ ವ್ಯಕ್ತಿ ತೀವ್ರ ಆತಂಕಕ್ಕೊಳಗಾಗಿ, ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧನಾಗಿರುತ್ತಾನೆ. ಈ ಸಮಸ್ಯೆ ಬಾಲ್ಯದಲ್ಲೇ ಆರಂಭವಾಗಿ, ಚಿಕಿತ್ಸೆ ಇಲ್ಲದಿದ್ದರೆ ದೀರ್ಘಕಾಲ ಮುಂದುವರಿಯುತ್ತದೆ.

ನಿರ್ದಿಷ್ಟ ಫೋಬಿಯಾದಲ್ಲೂ ಕೆಲ ಉಪ ಪ್ರಕಾರಗಳಿವೆ..

  • ಅನಿಮಲ್ ಫೋಬಿಯಾ: ಜೇಡಗಳ ಭಯ (ಅರಾಕ್ನೋಫೋಬಿಯಾ) ಅಥವಾ ಹಾವುಗಳ ಭಯ (ಒಫಿಡಿಯೋ ಫೋಬಿಯಾ).
  • ನೈಸರ್ಗಿಕ ಪರಿಸರ ಫೋಬಿಯಾ: ಎತ್ತರದ ಭಯ (ಆಕ್ರೊಫೋಬಿಯಾ), ಗುಡುಗು ಸಹಿತ ಮಳೆ(ಆಸ್ಟ್ರಾಫೋಬಿಯಾ).
  • ಸಾಂದರ್ಭಿಕ ಫೋಬಿಯಾಗಳು: ಸಣ್ಣ ಅಥವಾ ಕಿಟಕಿಯಿಲ್ಲದ ಅಥವಾ ಸಂಪೂರ್ಣವಾಗಿ ಮುಚ್ಚಿದ ಸ್ಥಳಗಳ ಭಯ (ಕ್ಲಾಸ್ಟ್ರೋಫೋಬಿಯಾ), ವಿಮಾನ ಪ್ರಯಾಣದ ಭಯ (ಏವಿಯೋಫೋಬಿಯಾ).
  • ರಕ್ತ-ಇಂಜೆಕ್ಷನ್-ಗಾಯದ ಫೋಬಿಯಾ: ಸೂಜಿಗಳು ಅಥವಾ ಶಸ್ತ್ರಚಿಕಿತ್ಸೆ ಮೊದಲಾದ ವೈದ್ಯಕೀಯ ವಿಧಾನಗಳ ಭಯ.

2. ಸಾಮಾಜಿಕ ಫೋಬಿಯಾ (Social Anxiety Disorder)
ಜನರ ಮುಂದೆ ಮಾತನಾಡುವುದು, ಅಭಿಪ್ರಾಯ ಹೇಳುವುದು, ಸಾರ್ವಜನಿಕವಾಗಿ ತಪ್ಪು ಮಾಡುವೆನೇನೋ ಅಥವಾ ಹಾಸ್ಯಾಸ್ಪದನಾಗಿಬಿಡುವೆನೋ ಎಂಬ ಭಯದಿಂದ ಉಂಟಾಗುವ ಫೋಬಿಯಾ ಇದು. ಅಪರಿಚಿತರ ಜೊತೆ ಮಾತನಾಡಲು ಭಯ, ಜನರು ಗಮನಿಸುತ್ತಾರೆ ಎಂಬ ಆತಂಕ, ಜನರನ್ನು ನೋಡಿದಾಗ ಮುಖ ಕೆಂಪಾಗುವುದು, ಅಪರಿಚಿತರ ಜೊತೆ ಮಾತನಾಡುವಾಗ ಬೆವರು, ದೇಹದಲ್ಲಿ ಸಣ್ಣ ನಡುಕ ಕಾಣಿಸಿಕೊಳ್ಳುವುದು, ಜನರ ಜೊತೆ ಮಾತನಾಡಲು ಹಿಂಜರಿಕೆ, ಸಾರ್ವಜನಿಕ ಪ್ರದೇಶದಲ್ಲಿ ಅಡಗಿಕೊಳ್ಳುವ ಸ್ವಭಾವ ಇತ್ಯಾದಿ. ಇಲ್ಲಿ ಭಯ ವಸ್ತುವಿನೆಡೆಗಲ್ಲ, ಜನರ ತೀರ್ಪಿನೆಡೆಗಿರುತ್ತದೆ. ಈ ಫೋಬಿಯಾ ವ್ಯಕ್ತಿಯ ಆತ್ಮವಿಶ್ವಾಸವನ್ನು ಕುಗ್ಗಿಸಿ, ಅವನ ಪ್ರತಿಭೆ, ಶಿಕ್ಷಣ ಹಾಗೂ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

3. ಆಗೋರಾ ಫೋಬಿಯಾ (Agoraphobia)
ಜನಸಂದಣಿ, ತೆರೆದ ಸ್ಥಳಗಳು, ಬಸ್-ರೈಲು ಪ್ರಯಾಣ ಅಥವಾ ʼಇಲ್ಲಿ ಸಿಕ್ಕಿಹಾಕಿಕೊಂಡರೆ ತಪ್ಪಿಸಿಕೊಳ್ಳಲು ಆಗುವುದಿಲ್ಲʼ ಎಂಬ ಭಯದಿಂದ ಉಂಟಾಗುವ ಫೋಬಿಯಾ. ಕೆಲವರಿಗೆ ಮನೆಯಿಂದ ಹೊರ ಹೋಗಲೂ ಕಷ್ಟ ಪಡುವಷ್ಟು ಈ ಭಯ ತೀವ್ರವಾಗಿರುತ್ತದೆ. ಇದು ಪ್ಯಾನಿಕ್ ಅಟ್ಯಾಕ್ ಅನುಭವಿಸಿದ ನಂತರ ಬೆಳೆಯುವ ಸಾಧ್ಯತೆ ಹೆಚ್ಚು.

4. ಪ್ಯಾನಿಕ್ ಫೋಬಿಯಾ (Panic-related Phobia)
ಒಮ್ಮೆ ತೀವ್ರ ಪ್ಯಾನಿಕ್ ಅಟ್ಯಾಕ್ ಅನುಭವಿಸಿದ ವ್ಯಕ್ತಿಗೆ, ಅದೇ ಅನುಭವ ಮರುಕಳಿಸಬಹುದೆಂಬ ಭಯ ಹುಟ್ಟುತ್ತದೆ. ಪರಿಣಾಮವಾಗಿ, ಆ ಪ್ಯಾನಿಕ್ ಆಗಿದ್ದ ಸ್ಥಳಗಳು ಅಥವಾ ಸಂದರ್ಭಗಳಿಂದ ಅವನು ತಪ್ಪಿಸಿಕೊಳ್ಳಲು ಆರಂಭಿಸುತ್ತಾನೆ.

5. ಸಂಕೀರ್ಣ ಫೋಬಿಯಾ (Complex Phobias)
ಒಂದಕ್ಕಿಂತ ಹೆಚ್ಚು ಭಯಗಳು ಒಟ್ಟಾಗಿ ವ್ಯಕ್ತಿಯನ್ನು ಆವರಿಸಿಕೊಳ್ಳುವ ಮನೋಸ್ಥಿತಿಯನ್ನು ಸಂಕೀರ್ಣ ಫೋಬಿಯಾ ಎನ್ನಲಾಗುತ್ತದೆ. ಇದರಲ್ಲಿ ಭಯ ಕೇವಲ ಒಂದು ಕಾರಣಕ್ಕೆ ಸೀಮಿತವಾಗಿರದೆ, ಸಂಬಂಧಗಳು, ನಿರ್ಧಾರಗಳು ಮತ್ತು ಜೀವನಶೈಲಿಯ ಮೇಲೂ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಇದು ದೀರ್ಘಕಾಲದ ಮಾನಸಿಕ ಒತ್ತಡ ಅಥವಾ ಅನೇಕ ಆಘಾತಕಾರಿ ಅನುಭವಗಳ ಫಲಿತಾಂಶವಾಗಿರುತ್ತದೆ.

6. ಸಾಂದರ್ಭಿಕ ಫೋಬಿಯಾ (Situational Phobia)
ಕೆಲವೇ ಪರಿಸ್ಥಿತಿಗಳಲ್ಲಿ ಮಾತ್ರ ಉಂಟಾಗುವ ಭಯ ಇದು. ಉದಾಹರಣೆಗೆ ಪರೀಕ್ಷೆ ಬರೆಯುವಾಗ, ಆಸ್ಪತ್ರೆ ನೋಡಿದಾಗ (ಆಪರೇಷನ್, ಸೂಜಿ, ರಕ್ತ)‌, ವಾಹನ ಚಲಾಯಿಸುವಾಗ ಅಥವಾ ವಿಮಾನ ಹತ್ತುವಾಗ. ಈ ಸಂದರ್ಭಗಳಲ್ಲಿ ವ್ಯಕ್ತಿ ಸಾಮಾನ್ಯವಾಗಿದ್ದರೂ, ಆ ಒಂದು ಪರಿಸ್ಥಿತಿ ಎದುರಾದಾಗ ಮಾತ್ರ ತೀವ್ರ ಆತಂಕ ಅನುಭವಿಸುತ್ತಾನೆ.

image 95

ಈ ಕುರಿತು ಆಪ್ತಸಮಾಲೋಚಕ ವಸಂತ್‌ ನಡಹಳ್ಳಿ ಮಾತನಾಡಿ, “ಫೋಬಿಯಾವನ್ನು ಸರಳೀಕರಿಸಲು ಆಗಲ್ಲ, ಹಾಗೆಂದು ಅದೇನು ದೊಡ್ಡ ಕಾಯಿಲೆಯೂ ಅಲ್ಲ. ಬಹುತೇಕ ಫೋಬಿಯಾಗಳ ಸಮಸ್ಯೆಗಳು ಬಾಲ್ಯದಿಂದಲೇ (childhood trauma) ಹುಟ್ಟಿಕೊಂಡಿರುತ್ತವೆ. ಒಂದು ಅಚಾನಕ್ ಅಪಘಾತ, ಭಯಾನಕ ದೃಶ್ಯ, ಅವಮಾನ, ಅಥವಾ ದೊಡ್ಡವರಿಂದ ಅನುಭವಿಸಿದ ಯಾವುದಾದರೊಂದು ಭೀತಿ ಮನಸ್ಸಿನಾಳದಲ್ಲಿ ಅಚ್ಚಾಗಿರುತ್ತದೆ. ಆ ಕ್ಷಣದಲ್ಲಿ ಹುಟ್ಟಿಕೊಂಡ ಭಾವನೆ, ವರ್ಷಗಳ ನಂತರವೂ ಅದೇ ತೀವ್ರತೆಯಲ್ಲಿ ಮರಳಿ ಬರುವ ಶಕ್ತಿ ಹೊಂದಿರುತ್ತದೆ. ಅವು ದೊಡ್ಡವರಾದಮೇಲೂ ಅಷ್ಟು ಸುಲಭಕ್ಕೆ ಮಾಸುವುದಿಲ್ಲ. ಬೇರೆಯವರಿಗೆ ಅದು ತಾರ್ಕಿಕವಲ್ಲದ ಕಾರಣಗಳೆನಿಸಬಹುದು. ಆದರೆ ಅನುಭವದ ತೀವ್ರತೆ ಅನುಭವಿಸಿದವರಿಗಷ್ಟೇ ತಿಳಿದಿರುತ್ತದೆ. ತಾವು ಹೆದರುತ್ತಿರುವುದು ಚಿಕ್ಕ ವಿಷಯಕ್ಕೇ ಎಂದು ತಿಳಿದಿದ್ದರೂ ಅದರಿಂದ ಹೊರಬರುವುದು ಕಷ್ಟ.

ಸರಿಯಾದ ಚಿಕಿತ್ಸೆ ದೊರೆತರೆ ಫೋಬಿಯಾ ನಿಯಂತ್ರಣಕ್ಕೆ ಬರುತ್ತದೆ. ಬಹುಮಂದಿಯಲ್ಲಿ ಚಿಕಿತ್ಸೆ ಪಡೆದ ನಂತರ ಭಯದ ತೀವ್ರತೆ ಕಡಿಮೆಯಾಗುತ್ತದೆ ಮತ್ತು ದಿನನಿತ್ಯದ ಬದುಕು ಸಾಮಾನ್ಯವಾಗುತ್ತದೆ. ಫೋಬಿಯಾಗಳಿಗೆ ನೀಡುವ ಚಿಕಿತ್ಸೆಯಲ್ಲಿ ವ್ಯಕ್ತಿಯನ್ನು ಅವನಿಗೆ ಭಯ ಉಂಟುಮಾಡುವ ವಸ್ತು ಅಥವಾ ಪರಿಸ್ಥಿತಿಯನ್ನು ಹಂತ ಹಂತವಾಗಿ ಎದುರಿಸುವಂತೆ ತರಬೇತಿ ನೀಡಲಾಗುತ್ತದೆ. ಈ ಪ್ರಕ್ರಿಯೆಯೊಂದಿಗೆ, ಆತಂಕವನ್ನು ಶಮನಗೊಳಿಸುವ ವಿಧಾನಗಳನ್ನೂ ಕಲಿಸಲಾಗುತ್ತದೆ, ಇದು ಭಯದ ಮೇಲೆ ಹಿಡಿತ ಸಾಧಿಸಲು ಸಹಾಯವಾಗುತ್ತದೆ. ಥೆರಪಿ ಸಮಯದಲ್ಲಿ ಮನೋ ಆರೋಗ್ಯ ತಜ್ಞರು ವ್ಯಕ್ತಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಭಯ ಎದುರಾದಾಗ ಮನಸ್ಸು ಮತ್ತು ದೇಹವನ್ನು ಹೇಗೆ ಶಾಂತಗೊಳಿಸಬೇಕು ಎಂಬುದನ್ನು ಅಭ್ಯಾಸ ಮಾಡಿಸುತ್ತಾರೆ. ಈ ಮಾರ್ಗದರ್ಶನದಿಂದ ವ್ಯಕ್ತಿಗೆ ನಿಧಾನವಾಗಿ ಆತ್ಮವಿಶ್ವಾಸ ಬೆಳೆಯುತ್ತದೆ.

ಭಯಕ್ಕೆ ಕಾರಣವಾಗುವ ತರ್ಕವಿಲ್ಲದ ಆಲೋಚನೆಗಳನ್ನು ಗುರುತಿಸಿ, ಅವನ್ನು ಸಕಾರಾತ್ಮಕ ಚಿಂತನೆಗಳಿಂದ ಬದಲಾಯಿಸಲು ಸಹಾಯ ಮಾಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ವೈದ್ಯರ ಸಲಹೆಯಂತೆ ಔಷಧ ಚಿಕಿತ್ಸೆಯನ್ನೂ ಬಳಸಲಾಗುತ್ತದೆ. ಕೆಲವು ಔಷಧಿಗಳು ಫೋಬಿಯಾ ಎದುರಿಸುವ ತರಬೇತಿಯ ಸಮಯದಲ್ಲಿ ಆತಂಕವನ್ನು ನಿಯಂತ್ರಿಸಲು ಸಹಕಾರಿಯಾಗುತ್ತವೆ. ಇನ್ನೂ ಕೆಲವು ಔಷಧಿಗಳನ್ನು ಭಯ ಉಂಟುಮಾಡುವ ಪರಿಸ್ಥಿತಿಯನ್ನು ಎದುರಿಸುವ ಮೊದಲು ಮಾತ್ರ ಸೇವಿಸಲಾಗುತ್ತದೆ, ಇದರಿಂದ ಆ ಕ್ಷಣದ ಆತಂಕದ ತೀವ್ರತೆ ಕಡಿಮೆಯಾಗುತ್ತದೆ. ಫೋಬಿಯಾ ಎದುರಿಸುವ ಸಂದರ್ಭದಲ್ಲಿ ಉಂಟಾಗುವ ಆತಂಕವನ್ನು ನಿಯಂತ್ರಿಸಲು ರಿಲ್ಯಾಕ್ಸೇಶನ್ ತಂತ್ರಗಳು ಬಹಳ ಸಹಾಯಕ. ಇವುಗಳನ್ನು ಮನೋಚಿಕಿತ್ಸೆಯ ಜೊತೆಯಲ್ಲಿಯೂ ಬಳಸಬಹುದು. ನಿಧಾನವಾಗಿ ಉಸಿರನ್ನು ಹೊರಬಿಡುವ ಶ್ವಾಸಪ್ರಶ್ವಾಸ ವಿಧಾನಗಳು, ಯೋಗ, ಧ್ಯಾನ, ಮತ್ತು ಮೈಂಡ್‌ಫುಲ್‌ನೆಸ್ ಅಭ್ಯಾಸಗಳು ಮನಸ್ಸನ್ನು ಶಾಂತಗೊಳಿಸಿ ಭಯದ ಮೇಲೆ ಹಿಡಿತ ಸಾಧಿಸಲು ನೆರವಾಗುತ್ತವೆ.

ಒಬ್ಬ ಮನೋಆರೋಗ್ಯ ತಜ್ಞರು ವ್ಯಕ್ತಿಗೆ ತನ್ನ ಆತಂಕ ಅಥವಾ ಮನೋವ್ಯಥೆಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಲಿಸಬಹುದು. ಸರಿಯಾದ ಮಾರ್ಗದರ್ಶನ, ಅಭ್ಯಾಸ ಮತ್ತು ಬೆಂಬಲ ದೊರೆತರೆ, ಫೋಬಿಯಾದೊಂದಿಗೆ ಬದುಕುವುದನ್ನು ಕಲಿಯುವುದಷ್ಟೇ ಅಲ್ಲ, ಅದನ್ನು ಹಂತ ಹಂತವಾಗಿ ಜಯಿಸುವುದೂ ಸಾಧ್ಯ” ಎಂದರು.

WhatsApp Image 2026 02 14 at 11.47.59 AM

ಇದನ್ನೂ ಓದಿ: ಪ್ರೀಮಿಯಂ ಲೇಖನ | ಆಲ್ಕೋಹಾಲ್ ಹಿಂದಿನ ಕಥೆ-ವ್ಯಥೆ

ಫೋಬಿಯಾದ ಅತ್ಯಂತ ಅಪಾಯಕಾರಿ ಅಂಶ ಎಂದರೆ ಪಲಾಯನ. ಭಯದ ವಸ್ತುವಿನಿಂದ, ಜಾಗದಿಂದ, ಸಂದರ್ಭದಿಂದ ದೂರವಿರುವುದು ತಾತ್ಕಾಲಿಕ ಶಾಂತಿ ಕೊಡುತ್ತದೆ. ಆದರೆ ಇದೇ ಅಭ್ಯಾಸ ಭಯವನ್ನು ಇನ್ನಷ್ಟು ಬಲಪಡಿಸುತ್ತದೆ. ʼನಾನು ತಪ್ಪಿಸಿಕೊಂಡೆʼ ಎಂಬ ಅನುಭವ, ನಾನು ಎದುರಿಸಲಾರೆ ಎನ್ನುವ ಹಿಂಜರಿಕೆ ದೊಡ್ಡದಾಗಲು ಕಾರಣವಾಗುತ್ತದೆ. ಫೋಬಿಯಾ ನಿಧಾನವಾಗಿ ಆತ್ಮವಿಶ್ವಾಸ ಕುಗ್ಗಿಸುತ್ತಾ ಹೋಗುತ್ತದೆ. ಹೋಗುವ ಸ್ಥಳಗಳು ಕಡಿಮೆಯಾಗುತ್ತವೆ, ಮಾತನಾಡುವ ಜನ ಕಡಿಮೆಯಾಗುತ್ತಾರೆ, ಆಯ್ಕೆಗಳು ಸೀಮಿತವಾಗುತ್ತವೆ.

ಫೋಬಿಯಾ ಮನಸ್ಸಿನ ಆರೋಗ್ಯ ಸಮಸ್ಯೆ. ದೇಹಕ್ಕೆ ಗಾಯವಾದರೆ ಚಿಕಿತ್ಸೆ ಪಡೆಯುವಂತೆ, ಮನಸ್ಸಿಗೂ ಚಿಕಿತ್ಸೆ ಬೇಕು. ಭಯವನ್ನು ಅರ್ಥಮಾಡಿಕೊಳ್ಳುವುದು, ಅದರ ಮೂಲವನ್ನು ಗುರುತಿಸುವುದು, ಮತ್ತು ಹಂತ ಹಂತವಾಗಿ ಅದನ್ನು ಎದುರಿಸುವುದು.. ಇವೇ ಚೇತರಿಕೆಯ ದಾರಿ. ಕೆಲವೊಮ್ಮೆ ಮಾತುಕತೆ ಸಾಕು. ಕೆಲವೊಮ್ಮೆ ತರಬೇತಿ ಬೇಕಾಗುತ್ತದೆ. ಇನ್ನೂ ಕೆಲ ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಅಗತ್ಯವಾಗಬಹುದು. ಫೋಬಿಯಾ ಸಮಸ್ಯೆ ಶಾಶ್ವತವಲ್ಲ. ಸರಿಯಾದ ಅರಿವು, ಮನೋ ತಜ್ಞರ ಮಾರ್ಗದರ್ಶನ, ಚಿಕಿತ್ಸೆ, ಅಭ್ಯಾಸ ಮತ್ತು ಬೆಂಬಲ ದೊರೆತರೆ ಫೋಬಿಯಾವನ್ನು ನಿಯಂತ್ರಿಸುವುದೂ, ಅದನ್ನು ಜಯಿಸುವುದೂ ಸಾಧ್ಯ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...