ರಕ್ತದಲ್ಲಿನ ಕಬ್ಬಿಣಾಂಶದ ಕೊರತೆ, ಅಗತ್ಯ ಪ್ರೋಟೀನ್ ಮತ್ತು ವಿಟಮಿನ್‌ಗಳ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ಸಂಗತಿ. ಇದೇ ಸಮಸ್ಯೆಗೆ ಕಾರಣವಾಗುವ, ಪೌಷ್ಠಿಕಾಂಶಗಳ ಕೊರತೆ ಮಾತ್ರವಲ್ಲದ ಮತ್ತೊಂದು ಗಂಭೀರ ಕಾಯಿಲೆ ಕುರಿತು ತಿಳಿದಿರುವುದು ತೀರಾ ಕಡಿಮೆ. ಅದನ್ನು ಮೌನರೋಗ ಎಂತಲೂ ಕರೆಯಲಾಗುತ್ತದೆ, ಹೆಸರು ಥಲಸ್ಸೇಮಿಯಾ (Thalassemia).
ನಿನ್ನೆ (ಜ.6) ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ಕಲಬುರಗಿಯ ಐದು ವರ್ಷದ ಬಾಲಕನ ಚಿಕಿತ್ಸೆಗೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ₹4.91 ಲಕ್ಷ ನೆರವು ಮಂಜೂರು ಮಾಡಲಾಗಿದೆ. 2019ರಲ್ಲಿ ಇದೇ ಸಮಸ್ಯೆಯಿಂದ ಬಳಲುತ್ತಿದ್ದ ದಾವಣಗೆರೆಯ ಬಾಲಕನಿಗೆ ಬೆಂಗಳೂರಿನ ಮಜುಂದಾರ್ ಷಾ ವೈದ್ಯಕೀಯ ಕೇಂದ್ರವು, ಅಸ್ಥಿಮಜ್ಜೆ ಕಸಿ ಮಾಡುವ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸಿತ್ತು. 2024ರಲ್ಲಿ ಸುರಪುರದ ಇಬ್ಬರು ಮಕ್ಕಳು ಇದೇ ಕಾಯಿಲೆಯಿಂದ ಬಳಸುತ್ತಿದ್ದವು. ತಂದೆಯಿಂದಲೇ ಮಜ್ಜೆ ದಾನ ಪಡೆದು ಈಗ ಗುಣಮುಖರಾಗಿದ್ದಾರೆ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿ ಚಿಕಿತ್ಸೆ ಪಡೆದವರು ಚೇತರಿಸಿಕೊಳ್ಳುತ್ತಾರೆ. ಆದರೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಈ ರೋಗದ ಕುರಿತು ಅರಿವಿಲ್ಲ.
ಥಲಸ್ಸೇಮಿಯಾ ಭಾರತದ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲೊಂದು. ದೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಈ ಥಲಸ್ಸೇಮಿಯಾ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ. ಆದರೆ ರೋಗಿಗಳ ರಾಷ್ಟ್ರೀಯ ನೋಂದಣಿ ವ್ಯವಸ್ಥೆ ಇಲ್ಲದಿರುವ ಕಾರಣ, ಇದು ನಿಖರ ಸಂಖ್ಯೆಯಲ್ಲ. ಜಾಗತಿಕ ಮಟ್ಟದಲ್ಲಿ ಕಂಡುಬರುವ ಥಲಸ್ಸೇಮಿಯಾ ಪ್ರಕರಣಗಳಲ್ಲಿ ಸುಮಾರು ಶೇ. 25 ರಷ್ಟು ಹೊರೆಯನ್ನು ಭಾರತವೇ ಹೊರುತ್ತಿದೆ.
ಧಲಸ್ಸೇಮಿಯಾ ರಕ್ತದ ಕೆಂಪುಕಣಗಳಲ್ಲಿರುವ ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ಉಂಟಾಗುವ ದೋಷದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್, ಆಮ್ಲಜನಕವನ್ನು ಶ್ವಾಸಕೋಶಗಳಿಂದ ದೇಹದ ಪ್ರತಿ ಅಂಗಕ್ಕೆ ಸಾಗಿಸುವ ಕೆಲಸ ಮಾಡುತ್ತದೆ. ಆದರೆ ಥಲಸ್ಸೇಮಿಯಾದಿಂದ ಬಳಲುವ ವ್ಯಕ್ತಿಯ ದೇಹದಲ್ಲಿ ಈ ಹಿಮೋಗ್ಲೋಬಿನ್ ಸರಿಯಾದ ಪ್ರಮಾಣದಲ್ಲಿ ಅಥವಾ ಸರಿಯಾದ ರಚನೆಯಲ್ಲಿ ಉತ್ಪತ್ತಿಯಾಗುವುದಿಲ್ಲ. ಪರಿಣಾಮವಾಗಿ ರಕ್ತಹೀನತೆ, ದೌರ್ಬಲ್ಯ, ಉಸಿರಾಟದ ತೊಂದರೆ, ಬೆಳವಣಿಗೆ ಕುಂಠಿತತೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಥಲಸ್ಸೇಮಿಯಾಗೆ ಕಾರಣಗಳು (Causes): ಹೀಮೋಗ್ಲೋಬಿನ್ ಎಂಬುದು ಆಲ್ಫಾ ಗ್ಲೋಬಿನ್ ಹಾಗೂ ಬೀಟಾ ಗ್ಲೋಬಿನ್ ಎಂಬ ಎರಡು ಪ್ರಮುಖ ಪ್ರೋಟೀನ್‌ಗಳಿಂದ ನಿರ್ಮಿತವಾಗಿರುತ್ತದೆ. ಈ ಎರಡರಲ್ಲಿ ಯಾವುದಾದರೂ ಒಂದು ಪ್ರೋಟೀನ್ ಉತ್ಪಾದನೆಯನ್ನು ನಿಯಂತ್ರಿಸುವ ಜೀನ್‌ನಲ್ಲಿ ದೋಷ (ಬದಲಾವಣೆ) ಉಂಟಾದಾಗ ಥಲಸ್ಸೇಮಿಯಾ ಕಾಯಿಲೆ ಕಾಣಿಸಿಕೊಳ್ಳುತ್ತದೆ.
ಥಲಸ್ಸೇಮಿಯಾದಲ್ಲಿ 2 ವಿಧಗಳಿವೆ
ಆಲ್ಫಾ ಥಲಸ್ಸೇಮಿಯಾ: ಆಲ್ಫಾ ಗ್ಲೋಬಿನ್ ಪ್ರೋಟೀನ್‌ಗೆ ಸಂಬಂಧಿಸಿದ ಒಂದು ಅಥವಾ ಹೆಚ್ಚು ಜೀನ್‌ಗಳು ಇಲ್ಲದಿರುವಾಗ ಅಥವಾ ಅವುಗಳಲ್ಲಿ ಬದಲಾವಣೆ ಉಂಟಾದಾಗ ಆಲ್ಫಾ ಥಲಸ್ಸೇಮಿಯಾ ಉಂಟಾಗುತ್ತದೆ. ಇದು ಹೆಚ್ಚಾಗಿ ದಕ್ಷಿಣ ಪೂರ್ವ ಏಷ್ಯಾ, ಮಧ್ಯಪ್ರಾಚ್ಯ, ಚೀನಾ ಮತ್ತು ಆಫ್ರಿಕನ್ ಮೂಲದ ಜನರಲ್ಲಿ ಕಾಣಿಸಿಕೊಳ್ಳುತ್ತದೆ.
ಬೀಟಾ ಥಲಸ್ಸೇಮಿಯಾ: ಬೀಟಾ ಗ್ಲೋಬಿನ್ ಉತ್ಪಾದನೆಗೆ ಸಂಬಂಧಿಸಿದ ಜೀನ್‌ಗಳಲ್ಲಿ ದೋಷ ಉಂಟಾದಾಗ ಬೀಟಾ ಥಲಸ್ಸೇಮಿಯಾ ಉಂಟಾಗುತ್ತದೆ. ಇದು ಹೆಚ್ಚಾಗಿ ಮೆಡಿಟರೇನಿಯನ್ ಪ್ರದೇಶದ ಜನರಲ್ಲಿ ಕಂಡುಬರುತ್ತದೆ. ಜೊತೆಗೆ ಚೀನೀಯರು, ಇತರ ಏಷ್ಯನ್ ಸಮುದಾಯಗಳು ಹಾಗೂ ಆಫ್ರಿಕನ್-ಅಮೆರಿಕನ್ ಜನರಲ್ಲಿ ಕೂಡ ಇದು ಕಂಡುಬರುವ ಸಾಧ್ಯತೆ ಇದೆ. ಬೀಟಾ ಥಲಸ್ಸೇಮಿಯಾ ಮೇಜರ್ ಅನ್ನು ಕೂಲಿ ಅನೀಮಿಯಾ (Cooley anemia) ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಥಲಸ್ಸೇಮಿಯಾದಲ್ಲಿ ಅನೇಕ ರೂಪಗಳು ಮತ್ತು ಉಪರೂಪಗಳಿವೆ. ಆಲ್ಫಾ ಹಾಗೂ ಬೀಟಾ ಥಲಸ್ಸೇಮಿಯಾ ಎರಡೂ ಕೆಳಗಿನ ಎರಡು ಪ್ರಮುಖ ರೂಪಗಳನ್ನು ಒಳಗೊಂಡಿವೆ:

- ಥಲಸ್ಸೇಮಿಯಾ ಮೇಜರ್: ತಂದೆ ಹಾಗೂ ತಾಯಿ ಇಬ್ಬರಿಂದಲೂ ದೋಷಯುಕ್ತ ಜೀನ್ ಅನ್ನು ಪಡೆದಾಗ ಮಗು ಥಲಸ್ಸೇಮಿಯಾ ಮೇಜರ್‌ಗೆ ತುತ್ತಾಗುತ್ತದೆ.
- ಥಲಸ್ಸೇಮಿಯಾ ಮೈನರ್: ಒಬ್ಬ ಪೋಷಕರಿಂದ (ತಂದೆ ಅಥವಾ ತಾಯಿ) ಮಾತ್ರ ದೋಷಯುಕ್ತ ಜೀನ್ ದೊರೆತಾಗ ಉಂಟಾಗುತ್ತದೆ. ಈ ರೂಪ ಹೊಂದಿರುವವರನ್ನು ಕಾಯಿಲೆಯ ʼವಾಹಕರುʼ (ಕ್ಯಾರಿಯರ್‌ಗಳು) ಎಂದು ಕರೆಯಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇವರಿಗೆ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.
ಈ ಕುರಿತು ಡಾ. ಭರತ್ ಹೀಗೆ ಹೇಳುತ್ತಾರೆ, “ಥಲಸ್ಸೇಮಿಯಾ ಒಂದು ವಂಶ ಪಾರಂಪರಿಕವಾಗಿ ಬರುವ ಕಾಯಿಲೆ. ಪೋಷಕರಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರೂ ಥಲಸ್ಸೇಮಿಯಾ ಮೈನರ್ (ಕ್ಯಾರಿಯರ್) ಆಗಿದ್ದರೆ, ಅವರ ಮಕ್ಕಳಿಗೆ ಈ ಕಾಯಿಲೆ ವರ್ಗಾವಣೆಯಾಗುವ ಅಪಾಯ ಹೆಚ್ಚು. ವಿಶೇಷವಾಗಿ ಇಬ್ಬರೂ ಪೋಷಕರು ದೋಷಯುಕ್ತ ಜೀನ್‌ಗಳನ್ನು ಹೊಂದಿರುವ ಸಂದರ್ಭಗಳಲ್ಲಿ, ಮಕ್ಕಳಿಗೆ ಥಲಸ್ಸೇಮಿಯಾ ಮೇಜರ್ ಉಂಟಾಗುವ ಸಾಧ್ಯತೆ ಗಂಭೀರವಾಗಿರುತ್ತದೆ. ಹಾಗಾಗಿ ಕುಟುಂಬ ಹಿನ್ನೆಲೆ ತಿಳಿದುಕೊಂಡು ಮುನ್ನೆಚ್ಚರಿಕಾ ತಪಾಸಣೆ ಮಾಡಿಸಿಕೊಳ್ಳುವುದು ಥಲಸ್ಸೇಮಿಯಾ ತಡೆಗಟ್ಟುವಿಕೆಯಲ್ಲಿ ಅತ್ಯಂತ ಮಹತ್ವದ ಕ್ರಮವಾಗುತ್ತದೆ. ಇಬ್ಬರೂ ಪೋಷಕರು ಥಲಸ್ಸೇಮಿಯಾ ಮೈನರ್ ಹೊಂದಿದ್ದರೆ, ಅವರ ಮಗುವಿಗೆ ಥಲಸ್ಸೇಮಿಯಾ ಮೇಜರ್ ಆಗುವ ಸಾಧ್ಯತೆ ಶೇಕಡಾ 25ರಷ್ಟಿರುತ್ತದೆ. ಸಾಮಾನ್ಯವಾಗಿ ಪ್ರತೀ 120 ದಿನಗಳಿಗೆ ಒಮ್ಮೆ (ಸಮಸ್ಯೆ ಗಂಭೀರವಾಗಿದ್ದರೆ 2–4 ವಾರಗಳಿಗೊಮ್ಮೆ) ರಕ್ತ ಮರುಪೂರಣೆ (ದೇಹದ ರಕ್ತವನ್ನು ಬದಲಾಯಿಸುವುದು) ಅವಶ್ಯಕವಾಗುತ್ತದೆ. ಥಲಸ್ಸೇಮಿಯಾ ಮೇಜರ್ ಇರುವ ಮಕ್ಕಳ ಜೀವನ ನಿರಂತರ ಆಸ್ಪತ್ರೆ ಮತ್ತು ಬ್ಲಡ್‌ಬ್ಯಾಂಕ್‌ಗಳ ಸುತ್ತಲೇ ಸಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಥಲಸ್ಸೇಮಿಯಾ ಚಿಕಿತ್ಸೆಯಲ್ಲಿ ಮಹತ್ವದ ಪ್ರಗತಿ ಕಂಡಿದೆ. ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ (ಅಸ್ಥಿಮಜ್ಜೆ ಕಸಿ) ಅಥವಾ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ಎನ್ನುವುದು ಇಂದಿಗೂ ಥಲಸ್ಸೇಮಿಯಾ ಮೇಜರ್‌ಗೆ ಲಭ್ಯವಿರುವ ಏಕೈಕ ಶಾಶ್ವತ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ; ಹೊಂದಾಣಿಕೆಯ ದಾನಿಗಳ ಕೊರತೆ, ಹೆಚ್ಚಿನ ವೆಚ್ಚ ಮತ್ತು ಅಪಾಯಗಳಿಂದ ಇಂದಿಗೂ ಹಲವರಿಗೆ ಈ ಚಿಕಿತ್ಸೆ ಭರಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಜೀನ್ ಥೆರಪಿ ಕುರಿತ ಸಂಶೋಧನೆಗಳು ಭರವಸೆ ಮೂಡಿಸುತ್ತಿದ್ದರೂ, ಅದು ಇನ್ನೂ ಎಲ್ಲರಿಗೂ ಲಭ್ಯವಾಗುವ ಹಂತ ತಲುಪಿಲ್ಲ” ಎಂದರು.
ರಕ್ತವನ್ನು ಪದೇ ಪದೇ ಹಾಕಿಸುವುದರಿಂದ ದೇಹದಲ್ಲಿ ಕಬ್ಬಿಣ (ಐರನ್) ಅತಿಯಾಗಿ ಜಮೆಯಾಗುತ್ತದೆ. ರಕ್ತ ಮರುಪೂರಣದಿಂದ ದೇಹದಲ್ಲಿ ಶೇಖರಣೆಯಾಗುವ ಕಬ್ಬಿಣಾಂಶ ಹೃದಯ, ಯಕೃತ್ತುಗಳಂತಹ ಪ್ರಮುಖ ಅಂಗಾಂಗಗಳಿಗೆ ಹಾನಿ ಉಂಟುಮಾಡುತ್ತದೆ. ಇದನ್ನು ನಿಯಂತ್ರಿಸಲು ಕೀಲೇಶನ್ ಥೆರಪಿ ಎಂಬ ವಿಶೇಷ ಚಿಕಿತ್ಸೆ ನೀಡಬೇಕಾಗುತ್ತದೆ. ಇದು ದುಬಾರಿ, ಹೆಚ್ಚು ಸಮಯ ತೆಗೆದುಕೊಳ್ಳುವ ಹಾಗೂ ಜೀವನಪೂರ್ತಿ ಮುಂದುವರಿಯಬೇಕಾದ ಚಿಕಿತ್ಸೆ. ಆದರೆ ಭಾರತದಲ್ಲಿ ಹಾಗೂ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮದುವೆಗೆ ಮುನ್ನ ಥಲಸ್ಸೇಮಿಯಾ ತಪಾಸಣೆ ಇನ್ನೂ ಸಾಮಾನ್ಯ ಅಭ್ಯಾಸವಾಗಿಲ್ಲ. ಪರಿಣಾಮವಾಗಿ ಅರಿವಿಲ್ಲದೆ ಅನೇಕ ಕುಟುಂಬಗಳು ಈ ಕಾಯಿಲೆಯನ್ನು ತಾವೇ ಆಹ್ವಾನಿಸುವ ಪರಿಸ್ಥಿತಿ ಎದುರಿಸುತ್ತಿವೆ.


ಇದನ್ನೂ ಓದಿ: ಪ್ರತಿ 40 ಸೆಕೆಂಡಿಗೆ 1 ಆತ್ಮಹತ್ಯೆ; ಜವಾಬ್ದಾರಿ ಮರೆತದ್ದು ಯಾರು?
“ಥಲಸ್ಸೇಮಿಯಾ ಕಾಯಿಲೆಯಿಂದ ದೇಹಕ್ಕೆ ಅಗತ್ಯವಾದ ಹಿಮೋಗ್ಲೋಬಿನ್ ಸರಿಯಾಗಿ ಅಥವಾ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಹಿಮೋಗ್ಲೋಬಿನ್ ಕಡಿಮೆಯಾಗುವುದರಿಂದ ಕೆಂಪು ರಕ್ತಕಣಗಳು ಬೇಗ ನಾಶವಾಗುತ್ತವೆ ಮತ್ತು ರಕ್ತಹೀನತೆ ಉಂಟಾಗುತ್ತದೆ. ಕೆಲವರು ಯಾವುದೇ ಲಕ್ಷಣವಿಲ್ಲದೆ ಬದುಕುತ್ತಾರೆ, ಆದರೆ ಗಂಭೀರ ರೂಪದಲ್ಲಿ ರಕ್ತಹೀನತೆ ಹೆಚ್ಚಾಗಿ, ಮಗು ಹುಟ್ಟುವ ಮೊದಲು ಅಥವಾ ಹುಟ್ಟಿದ ತಕ್ಷಣ ಸಾವಿಗೂ ಕಾರಣವಾಗಬಹುದು. ಬೀಟಾ ಥಲಸ್ಸೇಮಿಯಾ ಬೀಟಾ ಭಾಗದ ಜೀನಿನ ದೋಷದಿಂದ ಉಂಟಾಗುತ್ತದೆ. ಇದರ ಸಣ್ಣ ಸ್ವರೂಪದಲ್ಲಿ ಸ್ವಲ್ಪ ರಕ್ತಹೀನತೆ ಮಾತ್ರ ಇರುತ್ತದೆ, ಮಧ್ಯಮ ರೂಪದಲ್ಲಿ ಕೆಲವೊಮ್ಮೆ ರಕ್ತ ವರ್ಗಾವಣೆ ಬೇಕಾಗುತ್ತದೆ ಮತ್ತು ಗಂಭೀರ ರೂಪದಲ್ಲಿ ಜೀವನಪೂರ್ತಿ ನಿಯಮಿತ ರಕ್ತ ವರ್ಗಾವಣೆ ಅವಶ್ಯಕವಾಗುತ್ತದೆ. ಈ ರೋಗದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಸಾಮಾನ್ಯವಾಗಿ ದಣಿವು, ಬಲಹೀನತೆ, ಚರ್ಮ ಬಿಳಿಯಾಗುವುದು ಅಥವಾ ಹಳದಿಯಾಗುವುದು, ಮಕ್ಕಳಲ್ಲಿ ಬೆಳವಣಿಗೆ ನಿಧಾನವಾಗುವುದು, ಯಕೃತ್ತು ಅಥವಾ ಪ್ಲಿಹೆ ದೊಡ್ಡದಾಗಿ ಹೊಟ್ಟೆ ಊತ ಕಾಣಿಸಿಕೊಳ್ಳುವುದು ಹಾಗೂ ಎಲುಬುಗಳಲ್ಲಿ ವಿಶೇಷವಾಗಿ ಮುಖದ ಭಾಗದಲ್ಲಿ ಬದಲಾವಣೆಗಳು ಕಾಣಿಸಬಹುದು”
“ಥಲಸ್ಸೇಮಿಯಾದ ಚಿಕಿತ್ಸೆಯು ರೋಗದ ಗಂಭೀರತೆಯ ಮೇಲೆ ಅವಲಂಬಿತವಾಗಿರುತ್ತದೆ. ಅಗತ್ಯವಿದ್ದರೆ ನಿಯಮಿತವಾಗಿ ರಕ್ತ ವರ್ಗಾವಣೆ ನೀಡಲಾಗುತ್ತದೆ. ರಕ್ತ ವರ್ಗಾವಣೆಯಿಂದ ದೇಹದಲ್ಲಿ ಐರನ್ ಹೆಚ್ಚಾಗುವುದರಿಂದ ಅದನ್ನು ಹೊರತೆಗೆದುಹಾಕಲು ವಿಶೇಷ ಔಷಧಿಗಳನ್ನು ಬಳಸಲಾಗುತ್ತದೆ. ಕೆಲವರಿಗೆ ಎಲುಬು ಮಜ್ಜೆ ಅಥವಾ ಸ್ಟೆಮ್ ಸೆಲ್ ಪ್ರತಿರೋಪಣವೇ ಶಾಶ್ವತ ಪರಿಹಾರವಾಗಬಹುದು, ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹೊಸ ಚಿಕಿತ್ಸೆಗಳು ಲಭ್ಯವಾಗುತ್ತಿವೆ. ಮಿಟಾಪಿವಾಟ್ ಎಂಬ ಹೊಸ ಔಷಧಿ ಕೆಂಪು ರಕ್ತಕಣಗಳ ಆಯುಷ್ಯವನ್ನು ಹೆಚ್ಚಿಸಿ ರಕ್ತ ವರ್ಗಾವಣೆಯ ಅವಶ್ಯಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀನ್ ಥೆರಪಿ ಕೂಡ ಭರವಸೆಯ ಚಿಕಿತ್ಸೆಯಾಗಿ ಮುಂದುವರಿಯುತ್ತಿದೆ. ಥಲಸ್ಸೇಮಿಯಾದೊಂದಿಗೆ ಬದುಕುವವರು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಬೇಕು. ವೈದ್ಯರ ಸಲಹೆ ಇಲ್ಲದೆ ಐರನ್ ಮಾತ್ರೆಗಳನ್ನು ಸೇವಿಸಬಾರದು ಮತ್ತು ಸೋಂಕುಗಳಿಂದ ರಕ್ಷಣೆಗಾಗಿ ಸಮಯಕ್ಕೆ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಬಹಳ ಮುಖ್ಯ” ಎಂದರು THYROCARE TECHNOLOGIESನ ಟೆಕ್ನೀಷಿಯನ್ ದಿನೇಶ್ ಹೆಚ್ ಎಂ.
ಥಲಸ್ಸೇಮಿಯಾ ವಾಸಿಯಾಗುವ ರೋಗ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಮಕ್ಕಳಿಗೆ ಸಾಮಾನ್ಯರಂತೆ ಬದುಕುವ ಅವಕಾಶ ದೊರಕುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸಲಹೆಯ ಕೊರತೆ, ತಪಾಸಣೆ, ಚಿಕಿತ್ಸೆಯ ಭಾರೀ ವೆಚ್ಚದಿಂದಾಗಿ ಈ ಕಾಯಿಲೆ ಇನ್ನೂ ಅನೇಕ ಜೀವಗಳನ್ನು ಬಾಧಿಸುತ್ತಿದೆ. ಮದುವೆಗೆ ಮುನ್ನ ತಪಾಸಣೆ, ಕೌಟುಂಬಿಕ ಹಿನ್ನೆಲೆಯ ಅರಿವು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ, ಇವೆಲ್ಲವೂ ಸರಿಯಾದ ಸಮಯದಲ್ಲಿ ಸಮನ್ವಯಗೊಂಡಾಗ ಥಲಸ್ಸೇಮಿಯಾ ವಿರುದ್ಧ ಹೋರಾಡಬಹುದು.
ಮಾಹಿತಿ ಕೃಪೆ: National Library of Medicine
Medlineplus





