ಮುಸ್ಲಿಮರ ವಿಚಾರಕ್ಕೆ ಮಾತ್ರ ಶೋಭಾ ಹೇಳಿಕೆ ಪಡೆಯುವ ಮಾಧ್ಯಮಗಳ ನಡೆ ಎಷ್ಟು ಸರಿ?

Date:

ಸಚಿವೆ ಶೋಭಾ ರಾಜ್ಯದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ. ಆಕೆ ಕಾಣಿಸಿಕೊಂಡರೆಂದರೆ ಒಂದೋ ರಾಜ್ಯದಲ್ಲಿ ಒಂದು ಹಿಂದೂವಿನ ಹೆಣ ಬೀಳಬೇಕು. ಅದರ ಆರೋಪಿ ಪಕ್ಕಾ ಮುಸ್ಲಿಂ ಆಗಿರಬೇಕು. ಮುಸ್ಲಿಂ ದ್ವೇಷದ ಮನಸ್ಥಿತಿ ಶೋಭಾ ಕರಂದ್ಲಾಜೆಯವರದ್ದು ಮಾತ್ರವಲ್ಲ, ಆಕೆಯ ಬಾಯಿಗೆ ಮೈಕ್‌ ಹಿಡಿದು ಹೇಳಿಕೆ ಪಡೆಯುವ ಮಾಧ್ಯಮಗಳದ್ದೂ ಕೋಮುವಾದಿ ಮನಸ್ಥಿತಿಯೇ.

ಇತ್ತೀಚೆಗೆ ಕರ್ನಾಟಕ ಅನಗತ್ಯ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಅದರಲ್ಲೂ ಬಸವಣ್ಣ, ಶಿಶುನಾಳ ಶರೀಫ, ಕುವೆಂಪು ಅವರಂಥ ದಾರ್ಶನಿಕರು ಸಾರಿದ್ದ ಸಾಮರಸ್ಯದ ಸಂದೇಶವನ್ನು ಅವಮಾನಿಸುವ ರೀತಿಯಲ್ಲಿ ನಮ್ಮ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ. ಇವರ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿರುವ ಮಾಧ್ಯಮವೂ ಸೇರಿ ಇಡೀ ಸಮಾಜಕ್ಕೆ ಕೋಮು ವಿಷ ಉಣಿಸುತ್ತಿವೆ. ಮಾಧ್ಯಮಗಳಲ್ಲಿ ಅನಗತ್ಯ ವಿಚಾರಗಳನ್ನು ವಿವಾದವಾಗಿಸುವುದು, ಸಮಾಜದಲ್ಲಿ ಅಶಾಂತಿ ಬಿತ್ತುವುದು, ದ್ವೇಷ ಭಾಷಣಕಾರರಿಗೆ ವೇದಿಕೆ ಒದಗಿಸುವುದು, ಬಿಜೆಪಿಯವರ ಅಜೆಂಡಾಗಳಿಗೆ ಹೆಚ್ಚು ಪ್ರಚಾರ ಕೊಡುವುದು, ಕೋಮುವಾದಿಗಳ ಹೇಳಿಕೆಗೆ ಕೊಡುತ್ತಿರುವ ಮಹತ್ವ, ಪ್ಯಾನಲ್‌ ಚರ್ಚೆಯ ನೆಪದಲ್ಲಿ ಆಂಕರ್‌ಗಳೇ ಕೋಮು ಪ್ರಚೋದಕ ಹೇಳಿಕೆ ನೀಡುತ್ತಿರುವುದು ನೋಡಿದರೆ ಬಿಜೆಪಿ ಕುಣಿಸಿದಂತೆ ಮಾಧ್ಯಮಗಳು ಕುಣಿಯುತ್ತಿವೆಯೇ ಎಂಬ ಅನುಮಾನ ಬರುತ್ತದೆ.

ಸದ್ಯ ಮುಂದಿನ ತಿಂಗಳು ನಡೆಯಲಿರುವ ನಾಡಹಬ್ಬ ಮೈಸೂರು ದಸರಾದ ಉದ್ಘಾಟನೆಗೆ ಕನ್ನಡಕ್ಕೆ ಮೊದಲ ಬೂಕರ್‌ ಪ್ರಶಸ್ತಿ ತಂದುಕೊಟ್ಟ, ಶ್ರೇಷ್ಠ ಸಾಹಿತಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಬಾನು ಮುಷ್ತಾಕ್‌ ಅವರನ್ನು ಸರ್ಕಾರ ಆಹ್ವಾನಿಸಿರುವುದು ಬಿಜೆಪಿ ನಾಯಕರು ಮತ್ತು ಕೋಮುವಾದಿಗಳನ್ನು ಕೆರಳಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಒಂದೇ ಧ್ವನಿಯಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಅರಚಾಡುತ್ತಿದ್ದಾರೆ. ಹಿಂದೂ ಧಾರ್ಮಿಕ ಹಬ್ಬಕ್ಕೆ ಮುಸ್ಲಿಂ ಮಹಿಳೆಯಿಂದ ಚಾಲನೆ ಕೊಡಿಸಿ ಕಾಂಗ್ರೆಸ್‌ ಹಿಂದೂ ಧರ್ಮಕ್ಕೆ ಅಪಚಾರ ಎಸಗುತ್ತಿದೆ, ಮುಸ್ಲಿ ಓಲೈಕೆ ಮಾಡುತ್ತಿದೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಬಾನು ಮುಷ್ತಾಕ್‌ ಕನ್ನಡಾಂಬೆಯ ಬಗ್ಗೆ ಅಗೌರವ ತೋರುವ ಮಾತಾಡಿದ್ದಾರೆ, ಆಕೆ ಚಾಮುಂಡಿಗೆ ಪುಷ್ಟಾರ್ಚನೆ ಮಾಡುವುದು ಸರಿಯಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೂ ಈ ವಿಚಾರವನ್ನೇ ಮುಖ್ಯ ಆದ್ಯತೆಯ ಸುದ್ದಿಯಾಗಿಸಿಕೊಂಡು ವಿವಾದಕ್ಕೆ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
37 2

ಇದರ ನಡುವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬಾನು ಮುಷ್ತಾಕ್‌ ಚಾಮುಂಡಿ ಬೆಟ್ಟ ಹತ್ತಬಾರದು ಎಂದು ಬೆದರಿಕೆ ಒಡ್ಡುವ ರೀತಿಯಲ್ಲಿ ಕಟ್ಟಪ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶೋಭಾ ದೆಹಲಿಗೆ ಹೋಗಿ ಅಲ್ಲಿ ಹಿಂದಿ, ಇಂಗ್ಲಿಷ್‌ ಮಾಧ್ಯಮಗಳಲ್ಲೂ ಬಾನು ಮುಷ್ತಾಕ್‌ ಮತ್ತು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಚಾಮುಂಡಿ ಬೆಟ್ಟ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂಬ ಡಿಸಿಎಂ ಹೇಳಿಕೆಯನ್ನು ಉಲ್ಲೇಖಿಸಿ ಚಾಮುಂಡಿ ಬೆಟ್ಟವನ್ನು ವಕ್ಫ್‌ ಆಸ್ತಿ ಎಂದು ಘೋಷಣೆ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದೇ, ಚಾಮುಂಡಿ ಬೆಟ್ಟವನ್ನು ವಕ್ಫ್‌ ಆಸ್ತಿಯನ್ನಾಗಿ ಮಾಡುವ ಹುನ್ನಾರದ ಭಾಗವಾಗಿ ಬಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟನೆಗೆ ಕರೆಯಲಾಗಿದೆ ಎಂದು ಆರೋಪ ಮಾಡಿ ಚಾಮುಂಡಿಬೆಟ್ಟ ವಿಚಾರದಲ್ಲಿ ಡಿಸಿಎಂ ವಿವಾದ ಹುಟ್ಟು ಹಾಕಿದ್ದಾರೆ ಎಂದು ಹೇಳಿ ತಾವು ವಿವಾದವನ್ನು ಜೀವಂತವಾಗಿಡುವ ಸುಳಿವು ನೀಡಿದ್ದಾರೆ.

ಶೋಭಾ ಪ್ರತಿನಿಧಿಸುವ ಪಕ್ಷದ ಸಿದ್ಧಾಂತದ ಮೇಲಿನ ಈಕೆಯ ಬದ್ಧತೆ ಮೆಚ್ಚುವಂಥದ್ದು. ಆದರೆ ಆಕೆ ಕೇವಲ ಒಂದು ಪಕ್ಷದ ಕಾರ್ಯಕರ್ತೆ ಅಲ್ಲ, ಮೂರನೇ ಬಾರಿ ಸಂಸದೆಯಾಗಿ, ಸದ್ಯ ಕೇಂದ್ರ ಸರ್ಕಾರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆಯಾಗಿದ್ದಾರೆ.

ಎರಡನೇ ಅವಧಿಯಲ್ಲಿ ಮೋದಿ ಸಂಪುಟದಲ್ಲಿ ಕೃಷಿ ಖಾತೆಯ ರಾಜ್ಯ ಸಚಿವೆಯಾಗಿ ಕೆಲಸ ಮಾಡಿರುವ ಶೋಭಾ ರಾಜ್ಯದ ರೈತರಿಗಾಗಿ ಏನು ಸಹಾಯ ಮಾಡಿದ್ದಾರೆ? ಈಗ ಅವರು ಯಾವ ಖಾತೆ ನಿರ್ವಹಿಸುತ್ತಿದ್ದಾರೆ? ಎಂದು ರಾಜ್ಯದ ಬಹುತೇಕರಿಗೆ ಗೊತ್ತಿರಲು ಸಾಧ್ಯವಿಲ್ಲ. ಯಾಕೆಂದರೆ ಸಚಿವೆ ಶೋಭಾ ರಾಜ್ಯದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ. ಆಕೆ ಕಾಣಿಸಿಕೊಂಡರೆಂದರೆ ಒಂದೋ ರಾಜ್ಯದಲ್ಲಿ ಒಂದು ಹಿಂದೂವಿನ ಹೆಣ ಬೀಳಬೇಕು. ಅದರ ಆರೋಪಿ ಪಕ್ಕಾ ಮುಸ್ಲಿಂ ಆಗಿರಬೇಕು.

ಈ ಎರಡು ವರ್ಷಗಳಲ್ಲಿ ರಾಜ್ಯದ ಉದ್ಯಮ ಕ್ಷೇತ್ರಕ್ಕೆ ಶೋಭಾ ಅವರ ಕೊಡುಗೆ ಏನು? ರಾಜ್ಯದ ಯುವ ಸಮೂಹಕ್ಕೆ ಉದ್ಯಮಗಳಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡುವ ಯೋಜನೆ ರೂಪಿಸಿದ್ದಾರೆಯೇ? ಆ ಬಗ್ಗೆ ಎಂದಾದರೂ ಪ್ರೆಸ್‌ಮೀಟ್‌ ಮಾಡಿ ಮಾಹಿತಿ ನೀಡಿದ್ದಾರೆಯೇ ಇಲ್ಲ. ಹಿಂದೂ ಮುಸ್ಲಿಂ ವಿಚಾರ ಬಂದಾಗ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಶೋಭಾ ಮುಸ್ಲಿಮರ ವಿರುದ್ಧ ದ್ವೇಷ ಕಾರುವುದರಲ್ಲಿ ದೇಶದಲ್ಲಿಯೇ ನಂ ವನ್‌ ನಾಯಕಿ ಎಂದರೆ ತಪ್ಪಾಗದು. ಈಕೆ ಸುದ್ದಿಯಾಗುವುದೇ ಮುಸ್ಲಿಂ ದ್ವೇಷದ ಹೇಳಿಕೆಗಳಿಂದ.

ಮುಖ್ಯವಾಹಿನಿ ಮಾಧ್ಯಮಗಳನ್ನು ಗಮನಿಸಿದಾಗ ಬಿಜೆಪಿ ನಾಯಕರು ಸದಾ, ಧರ್ಮ, ಹಬ್ಬ, ಆಚರಣೆಯ ವಿಚಾರದಲ್ಲಿ ಸಮಾಜ ಒಡೆಯುವ ಹೇಳಿಕೆ ನೀಡುತ್ತಿದ್ದಾರೆ ಎಂದು ನಮಗನ್ನಿಸುವುದು ಸಹಜ. ಆದರೆ, ಯಾಕೆ ಹೀಗೆ? ಇದು ಅರ್ಥವಾಗಬೇಕಿದ್ದರೆ ಹಿಂದೂ- ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ಕದಡುವ ಬಿಜೆಪಿಯವರ ಚರ್ಚೆ, ಅಭಿಯಾನದಲ್ಲಿ ಮುಖ್ಯವಾಹಿನಿ ಮಾಧ್ಯಮಗಳ ಪಾತ್ರ ಏನು ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕಿದೆ.

ಮುಸ್ಲಿಂ ದ್ವೇಷದ ಮನಸ್ಥಿತಿ ಶೋಭಾ ಕರಂದ್ಲಾಜೆಯವರದ್ದು ಮಾತ್ರವಲ್ಲ, ಆಕೆಯ ಬಾಯಿಗೆ ಮೈಕ್‌ ಹಿಡಿದು ಹೇಳಿಕೆ ಪಡೆಯುವ ಮಾಧ್ಯಮಗಳದ್ದೂ ಕೋಮುವಾದಿ ಮನಸ್ಥಿತಿಯೇ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.

ಈ ಆರೋಪಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿವೆ. ಮಂಗಳೂರಿನಲ್ಲಿ 2025 ಏಪ್ರಿಲ್‌ನಲ್ಲಿ ಉತ್ತರ ಭಾರತದಿಂದ ಕೂಲಿ ಅರಸಿ ಬಂದಿದ್ದ ಯುವತಿಯೊಬ್ಬಳ ಮೇಲೆ ಸ್ಥಳೀಯ ಹಿಂದೂ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿ ಬಂಧನಕ್ಕೊಳಗಾಗಿದ್ದಾರೆ. ಈ ಪ್ರಕರಣದ ಬಗ್ಗೆ ಶೋಭಾ ಕರಂದ್ಲಾಜೆ ಏನಾದರೂ ಹೇಳಿಕೆ ನೀಡಿದ್ದಾರೆಯೇ? ಇಲ್ಲ. ಆಕೆಯ ಹೇಳಿಕೆ ಪಡೆಯಬೇಕು ಎಂದು ಮಾಧ್ಯಮಗಳಿಗೆ ಅನ್ನಿಸಿದೆಯೇ ಇಲ್ಲ. ರಾಜ್ಯದಲ್ಲಿ ಅತ್ಯಾಚಾರ, ಕೊಲೆ ನಡೆದಾಗ ಆರೋಪಿಗಳು ಮುಸ್ಲಿಮರಾಗಿದ್ದರೆ ಮಾತ್ರ ಮಾಧ್ಯಮಗಳ ಮುಂದೆ ಬಂದು ಕೋಮುದ್ವೇಷದ ಹೇಳಿಕೆ ಕೊಡುವುದು, ಹೋರಾಟದಲ್ಲಿ ಭಾಗಿಯಾಗುವುದು, ಕಾಂಗ್ರೆಸ್‌ನ ಓಲೈಕೆ ರಾಜಕಾರಣ ಎಂಬ ಟೀಕೆ ಮಾಡುವುದು ಇದು ಶೋಭಾ ಕರಂದ್ಲಾಜೆಯವರು ಮಾಡುತ್ತ ಬಂದಿರುವ ಅತಿಕೆಟ್ಟ ಕೋಮುವಾದಿ ರಾಜಕಾರಣ.‌

Rape accused 18apr25
ಮಂಗಳೂರಿನಲ್ಲಿ ಉತ್ತರಭಾರತದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು
23 4
ಮಂಗಳೂರಿನಲ್ಲಿ ಹಿಂದೂ ಗುಂಪಿನಿಂದ ಹತ್ಯೆಗೊಳಗಾದ ವಯನಾಡಿನ ಕೂಲಿ ಕಾರ್ಮಿಕ ಅಶ್ರಫ್

ಮಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದು ವಾರ ಆಗಿದೆಯಷ್ಟೇ ದೂರದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಮಂಗಳೂರಿನ ಹಿಂದುತ್ವದ ಅಮಲೇರಿದ ಯುವಕರ ತಂಡ ಬಡ ಮುಸ್ಲಿಂ ಯುವಕ ಅಶ್ರಫ್‌ನನ್ನು ಹೊಡೆದು ಸಾಯಿಸುತ್ತದೆ. ಈ ಬಗ್ಗೆ ಮಾಧ್ಯಮಗಳು ಈಕೆಯ ಬಾಯಿಗೆ ಮೈಕ್‌ ಹಿಡಿಯಲಿಲ್ಲ. ಕನಿಷ್ಠ ಈ ತರ ಅಮಾಯಕರ ಮೇಲೆ ಪ್ರತೀಕಾರದ ದಾಳಿ ಮಾಡುವುದು ಖಂಡನೀಯ ಎಂಬ ಹೇಳಿಕೆ ಯಾವ ಬಿಜೆಪಿ ನಾಯಕರಿಂದಲೂ ಬಂದಿಲ್ಲ. ಬದಲಿಗೆ ಕೊಲೆ ಪಾತಕಿಗಳ ರಕ್ಷಣೆಯ ಸಲುವಾಗಿ, ಆ ಯುವಕ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದ ಎಂಬ ದಾಳ ಉರುಳಿಸಿದ್ದರು.

ಅದಾದ ಕೆಲ ದಿನಗಳಲ್ಲೇ ಬಿಜೆಪಿ ಸರ್ಕಾರದಿಂದ ʼರೌಡಿ ಶೀಟರ್‌ʼ ಎಂದು ಘೋಷಿಸಲಾಗಿದ್ದ ಸುಹಾಸ್‌ ಶೆಟ್ಟಿಯ ಕೊಲೆಯಾದಾಗ ಶೋಭಾ ಮೇಡಂ ಎಲ್ಲಿದ್ದರೋ ಏನೋ ಧರೆಗಿಳಿದು ಬರುತ್ತಾರೆ. ಮಾಧ್ಯಮಗಳು ಇವರ ತೆರೆದ ಬಾಯಿಗೆ ಮೈಕ್‌ ಹಿಡಿಯುತ್ತವೆ.

ಈಕೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕುಳಿತು ಮುಸ್ಲಿಮರು, ಕಾಂಗ್ರೆಸ್‌ ಪಕ್ಷ, ಸಿಎಂ ಸಿದ್ದರಾಮಯ್ಯ ಅವರನ್ನು ವಾಚಾಮಗೋಚರ ಬೈತಾರೆ, ಆಗ ಮಾಧ್ಯಮಗಳು ಅಮಾಯಕ ಅಶ್ರಫ್‌ನ ಗುಂಪು ಹತ್ಯೆಯ ಬಗ್ಗೆ ಪ್ರಶ್ನೆಯನ್ನೇ ಕೇಳಲ್ಲ.

18
ಮಂಗಳೂರಿನಲ್ಲಿ ಕೊಲೆಯಾದ ರೌಡಿ ಶೀಟರ್‌ ಸುಹಾಸ್‌ ಶೆಟ್ಟಿ

ಸುಹಾಸ್‌ ಶೆಟ್ಟಿಯ ಕೊಲೆಗೆ ಪ್ರತೀಕಾರವಾಗಿ ಅಮಾಯಕ ಯುವಕ ರೆಹ್ಮಾನ್‌ನನ್ನು ಹಿಂದೂ ಯುವಕರು ಕೊಚ್ಚಿ ಹಾಕಿದಾಗ ಶೋಭಾ ಮಾಧ್ಯಮದವರ ಮೈಕ್‌ಗೆ ಸಿಗಲೇ ಇಲ್ಲ. ಮಾಧ್ಯಮಗಳು ಈಕೆಯ ಹೇಳಿಕೆ ಪಡೆಯುವ ಗೋಜಿಗೆ ಹೋಗಿಲ್ಲ.

ಎರಡು ತಿಂಗಳ ಹಿಂದೆ ಪುತ್ತೂರಿನಲ್ಲಿ ಭಾರೀ ಸದ್ದು ಮಾಡಿದ್ದ ಪುತ್ತೂರು ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್‌ ಅವರ ಪುತ್ರ ಮುರಳಿಕೃಷ್ಣ ಜೆ ರಾವ್‌ನ ʼಲವ್‌ ಸೆಕ್ಸ್‌ ದೋಖಾʼ ಪ್ರಕರಣದ ಬಗ್ಗೆ ಈಕೆ ಬಾಯಿ ಬಿಟ್ಟಿಲ್ಲ. ಮಾಧ್ಯಮಗಳು ಈಕೆಯ ಬಾಯಿಗೆ ಮೈಕ್‌ ಹಿಡಿದಿಲ್ಲ. ತನ್ನದೇ ತಾಲ್ಲೂಕಿನಲ್ಲಿ ಹಿಂದೂ ಯುವತಿಗೆ ದ್ರೋಹ ಆಗಿದೆ, ಆ ಕುಟುಂಬದ ಜೊತೆಗೆ ಯಾವೊಬ್ಬ ಬಿಜೆಪಿ ನಾಯಕರೂ ನಿಂತಿಲ್ಲ. ಒಬ್ಬ ಹೆಣ್ಣಾಗಿ ಶೋಭಾ ಆ ಯುವತಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಆ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂಬ ಕಾಳಜಿ ಕೇಂದ್ರ ಸಚಿವೆಯಾಗಿರುವ ಹಿಂದೂಗಳ ಮಾನ ಪ್ರಾಣ ರಕ್ಷಣೆಯ ಬಗ್ಗೆ ಭಾಷಣ ಬಿಗಿಯುವ ಈಕೆಗೆ ಯಾಕಿಲ್ಲ? ಇದನ್ನು ಮಾಧ್ಯಮಗಳು ಪ್ರಶ್ನೆ ಮಾಡಬೇಕಲ್ವಾ?

ಕೃಷ್ಣ ಜೆ ರಾವ್
ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ ಮಾಡಿದ ಪುತ್ತೂರಿನ ಆರೆಸ್ಸೆಸ್‌ ಮುಖಂಡನ ಪುತ್ರ ಮುರಳಿ ಕೃಷ್ಣ ಜೆ ರಾವ್

ಸ್ವಲ್ಪ ಹಿಂದೆ ಹೋಗಿ, ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಎರಡೆರಡು ಅತ್ಯಾಚಾರ ಪ್ರಕರಣಗಳಲ್ಲಿ ಬಂಧನವಾದಾಗಲೂ ಈಕೆಯ ಬಾಯಿಗೆ ಮಾಧ್ಯಮಗಳು ಮೈಕ್‌ ಹಿಡಿದಿಲ್ಲ. ಮುನಿರತ್ನ ತನ್ನ ಕ್ಷೇತ್ರದ HIV ಸೋಂಕಿತ ಮಹಿಳೆಯರನ್ನು ಬಳಸಿ ಹನಿಟ್ರ್ಯಾಪ್‌ ಮಾಡಿದ್ದು, ಮಾರಕ ರೋಗವನ್ನು ಹರಡಿದ್ದು, ಹಲವರ ಸಾವಿಗೆ ಕಾರಣವಾಗಿದ್ದು ಎಂತಹ ಘನಘೋರ ಕೃತ್ಯ! ಶೋಭಾ ಮೇಡಂ ಹೆಣ್ಣಾಗಿ ಇದನ್ನು ಖಂಡಿಸಬೇಕಿತ್ತು ಅಲ್ವಾ?

ಇನ್ನೂ ಸ್ವಲ್ಪ ಹಿಂದಕ್ಕೆ ಹೋಗಿ 2012ರಲ್ಲಿ ಈಕೆ ರಾಜ್ಯದಲ್ಲಿ ಸಚಿವೆಯಾಗಿದ್ದಾಗ ಆಕೆಯದೇ ಊರಿನ ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ ಕೊಲೆ ನಡೆದಿತ್ತು. ಸಂತ್ರಸ್ತ ಕುಟುಂಬದ ನೆರವಿಗೆ ಹೋಗಿಲ್ಲ. 2023ರಲ್ಲಿ ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಹೋರಾಟ, ಸಭೆಗಳು ನಡೆಯುತ್ತಿದ್ದಾಗ ಮಾಧ್ಯಮಗಳು ಈಕೆಯ ಬಾಯಿಗೆ ಮೈಕ್‌ ಹಿಡಿದಿಲ್ಲ. ಸೌಜನ್ಯ ಪ್ರಕರಣದ ಬಗ್ಗೆ, ತನಿಖೆ ಹಳ್ಳ ಹಿಡಿದಿರುವುದರ ಬಗ್ಗೆ ಶೋಭಾ ನಿಲುವೇನು ಎಂಬುದನ್ನು ಇದುವರೆಗೂ ಮಾಧ್ಯಮಗಳು ಕೇಳಿಲ್ಲ.

ರಾಜ್ಯದಲ್ಲಿ ಹಿಂದೂ ಯುವಕರಿಂದ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ – ಕೊಲೆಗಳಾದಾಗ ಮಾಧ್ಯಮಗಳು ಈಕೆಯ ಅಭಿಪ್ರಾಯ ಕೇಳಲ್ಲ. ಆದರೆ, ಆರೋಪಿ ಮುಸ್ಲಿಂ ಆಗಿದ್ರೆ ಈಕೆ ದೆಹಲಿಯಲ್ಲಿರಲಿ, ಎಲ್ಲೇ ಇರಲಿ ಆಕೆಯ ಮುಂದೆ ಮೈಕ್‌ ಹಿಡಿಯಲು ಮರೆಯಲ್ಲ.

9 12
ಸೌಜನ್ಯ ಪ್ರಕರಣ ಮರುತನಿಖೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ

ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಬಿಜೆಪಿ ಮುಖಂಡ ಸಿ ಟಿ ರವಿ, ಒಂದಲ್ಲ ಏಳು ಬಾರಿ ವೇಶ್ಯೆ ಎಂದು ನಿಂದಿಸಿದಾಗ ಕೇಂದ್ರ ಸಚಿವೆಯೂ ಆಗಿರುವ ಶೋಭಾ ಏನಾದರೂ ಹೇಳಿಕೆ ಕೊಟ್ಟರೇ? ಮಾಧ್ಯಮಗಳಿಗೆ ಆಕೆಯ ಅಭಿಪ್ರಾಯ ಪಡೆಯಬೇಕು ಅಂತ ಅನ್ನಿಸಿಲ್ಲ. ಸ್ವತಃ ಒಬ್ಬ ರಾಜಕಾರಣಿಯಾಗಿ ಶೋಭಾ ಕರಂದ್ಲಾಜೆ ಮತ್ತೊಬ್ಬ ನಾಯಕಿಗಾದ ಅವಮಾನಕ್ಕೆ ಖಂಡನೆ ವ್ಯಕ್ತಪಡಿಸಿಲ್ಲ ಅಂದ್ರೆ ಆಕೆಯಲ್ಲಿ ಸ್ತ್ರೀ ಸಹಜ ಸಂವೇದನೆ, ಮನುಷ್ಯತ್ವ ಸತ್ತು ಹೋಗಿದೆ ಎಂದೇ ಹೇಳಬೇಕಾಗುತ್ತದೆ.

lakshmihebbalkar

ಸರ್ಕಾರದ ಮುಖ್ಯಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು “ಹಗಲು ಸಿಎಂಗೆ ರಾತ್ರಿ ಸರ್ಕಾರಕ್ಕೆ ಕೆಲಸ ಮಾಡುವವರು” ಎಂದು ಬಿಜೆಪಿ ಎಮ್ಮೆಲ್ಸಿ ಎನ್‌ ರವಿಕುಮಾರ್‌ ನಿಂದಿಸಿದಾಗ ಮಾಧ್ಯಮಗಳು ಶೋಭಾ ಮುಂದೆ ಮೈಕ್‌ ಹಿಡಿದಿಲ್ಲ. ಆಕೆಯೂ ಈ ಪ್ರಕರಣವನ್ನು ಖಂಡಿಸಿಲ್ಲ.

ಈಗ ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಕನ್ನಡ ಕೃತಿಗೆ ಮೊದಲ ಬೂಕರ್‌ ಪ್ರಶಸ್ತಿ ತಂದುಕೊಟ್ಟ ಬಾನು ಮುಷ್ತಾಕ್‌ ಮುಸ್ಲಿಂ ಎಂಬ ಕಾರಣಕ್ಕೆ ದಸರಾ ಉದ್ಘಾಟಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ದೇಶದಗಲ ತನ್ನ ಮುಸ್ಲಿಂ ದ್ವೇಷವನ್ನು ಶೋಭಾ ಅವರು ಜಾಹೀರು ಮಾಡಿದ್ದಾರೆ. ಅಷ್ಟೇ ಅಲ್ಲ ಆಕೆಯಿಂದ ಹೇಳಿಕೆ ಮೇಲೆ ಹೇಳಿಕೆ ಪಡೆದು ಮಾಧ್ಯಮಗಳು ತಮ್ಮ ಮಾನ ತಾವೇ ಹರಾಜು ಹಾಕಿಕೊಂಡಿವೆ. ಕನ್ನಡದ ಸುದ್ದಿ ಮಾಧ್ಯಮಗಳು ಕೋಮುವಾದಿ ಸಿದ್ದಾಂತಕ್ಕೆ ನೀರೆರೆಯುತ್ತ ಇದನ್ನೊಂದು ವಿವಾದ ಮಾಡುವಲ್ಲಿ ಯಶಸ್ವಿಯಾಗಿವೆ. ಒಂದು ವಾರದಿಂದ ತಮ್ಮ ಸ್ಟುಡಿಯೋದಲ್ಲಿ ಬಾನು ಮುಷ್ತಾಕ್‌ ಸುತ್ತ ಚರ್ಚೆ ನಡೆಸುತ್ತಾ, ಕೋಮುವಾದಿಗಳಿಗೆ ವೇದಿಕೆ ಕಲ್ಪಿಸಿ ಈ ವಿಚಾರವನ್ನು ಇನ್ನಷ್ಟು ವಿವಾದಗೊಳಿಸುವ ಮಾಧ್ಯಮಗಳು ಬಿಜೆಪಿಯ ಟೂಲ್‌ಕಿಟ್‌ ಭಾಗವಾಗಿವೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ ಕಾಲಮಾನ | ಬಾನು ಮುಷ್ತಾಕ್‌ ದಸರಾ ಉದ್ಘಾಟನೆ- ವಿವಾದಗಳ ಸುತ್ತಮುತ್ತ

ಬಿಜೆಪಿ ನಾಯಕರಿಗೆ ಮುಖಭಂಗ, ಮುಜುಗರವಾಗುತ್ತೋ ಅಂತಹ ಪ್ರಕರಣಗಳಲ್ಲಿ ಆ ಪಕ್ಷದ ಮುಖಂಡರ ಹೇಳಿಕೆ ಪಡೆಯಲ್ಲ ಅಂದ್ರೆ ಮಾಧ್ಯಮದವರು ಯಾರಿಗೆ ತಮ್ಮನ್ನು ಮಾರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ವಾರವಿಡೀ ಮಾಧ್ಯಮಗಳು ಬಾನು ಅವರು ದಸರಾ ಉದ್ಘಾಟನೆ ಮಾಡುವ ಬಗ್ಗೆ ಎಲ್ಲ ಬಿಜೆಪಿ ನಾಯಕರ ಬಾಯಿಗೆ ಮೈಕ್‌ ಹಿಡಿದಿವೆ. ಇದು ಬಾನು ಮುಷ್ತಾಕ್‌ ಅವರ ಬಗ್ಗೆ ಮಾಧ್ಯಮಗಳು ತೋರಿದ ಅಗೌರವ, ನಂಜಿಗೆ ಹಿಡಿದ ಕೈಗನ್ನಡಿ. ಕನ್ನಡದ ಮೊದಲ ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿಯನ್ನು ಹೇಗೆ ಗೌರವಿಸಬೇಕು ಎಂಬ ಕನಿಷ್ಠ ಜವಾಬ್ದಾರಿ ಮಾಧ್ಯಮಗಳಿಗೆ ಇಲ್ಲ. ಬಾನು ಅವರಿಗೆ ಬೂಕರ್‌ ಪ್ರಶಸ್ತಿ ಬಂದಾಗ ಬಿಜೆಪಿ ನಾಯಕರ ಅಭಿಪ್ರಾಯ ಕೇಳಲು ಮರೆತ ಮಾಧ್ಯಮಗಳು ಈಗ ದಸರಾ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದಾಗ ಎದ್ದುಬಿದ್ದು ಹೇಳಿಕೆ ಪಡೆಯುತ್ತಿರುವುದರಲ್ಲಿ ಮಾಧ್ಯಮಗಳ ವಿಕೃತ ಮನಸ್ಥಿತಿ ಅನಾವರಣ ಆಗಿದೆಯೇ ಹೊರತು ರಾಜ್ಯಕ್ಕೆ ಇದರಿಂದ ಯಾವುದೇ ಲಾಭ ಇಲ್ಲ. ರಾಜ್ಯದ ಜನರೇ ಮಾಧ್ಯಮಗಳು ಮತ್ತು ಕೋಮುವಾದಿಗಳ ಈ ದುಷ್ಟತನಕ್ಕೆ ತಕ್ಕ ನೀಡಬೇಕಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...