ವೈಯಕ್ತಿಕ ರಕ್ಷಣೆ, ಪರಿಸರ ವಿನ್ಯಾಸ & ಸ್ವಚ್ಛತೆ ಹಾಗೂ ತಂತ್ರಜ್ಞಾನದ ಸಮಗ್ರ ಬಳಕೆಯನ್ನು (Integrated Pest Management) ಅಳವಡಿಸಿಕೊಂಡರೆ ಮಾತ್ರ ಈ ಸಣ್ಣ ರಾಕ್ಷಸರ ವಿರುದ್ಧದ ಯುದ್ಧದಲ್ಲಿ ನಾವು ಜಯ ಸಾಧಿಸಲು ಸಾಧ್ಯ.
ವಿಶ್ವದ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಎಂದು ಯಾರನ್ನಾದರೂ ಕೇಳಿದರೆ, ಬಹುಶಃ ಹುಲಿ, ಸಿಂಹ ಅಥವಾ ವಿಷಪೂರಿತ ಹಾವು ಎನ್ನಬಹುದು. ಆದರೆ ವಾಸ್ತವವಾಗಿ ಅವುಗಳಿಂತಲೂ ಮನುಷ್ಯನಿಗೆ ಅತಿ ದೊಡ್ಡ ಶತ್ರುವಾಗಿ ಬಾಧಿಸುತ್ತಿರುವುದು ಮನೆಯ ಮೂಲೆಗಳಲ್ಲಿ ಅಡಗಿರುವ, ಕಿವಿ ಬಳಿ ಬಂದು ಜಿಂಯ್‌ಗುಟ್ಟುವ ಸೊಳ್ಳೆಗಳು ಎಂದರೆ ನಂಬಲೇಬೇಕು!
ಒಂದು ಅಕ್ಕಿ ಕಾಳಿಗಿಂತಲೂ 10 ಪಟ್ಟು ಕಡಿಮೆ ತೂಕ ಹೊಂದಿರುವ ಈ ಹಗುರವಾದ ಪುಟ್ಟ ಕೀಟ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾದಂತಹ ಮಾರಕ ಕಾಯಿಲೆ ಹರಡುತ್ತದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು 7 ಲಕ್ಷಕ್ಕೂ ಹೆಚ್ಚು ಜನ ಸೊಳ್ಳೆ ಕಡಿತದಿಂದ ಉಂಟಾಗುವ ರೋಗಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತಿಹಾಸದಲ್ಲಿ ಜಗತ್ತಿನ ದೊಡ್ಡ ದೊಡ್ಡ ಮಹಾಯುದ್ಧಗಳಲ್ಲಿ ಮೃತಪಟ್ಟವರಿಗಿಂತಲೂ ಸೊಳ್ಳೆಗಳಿಂದ ಹರಡಿದ ರೋಗಗಳಿಗೆ ಬಲಿಯಾದವರ ಸಂಖ್ಯೆಯೇ ಹೆಚ್ಚಿದೆ ಎಂಬ ಸತ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತದೆ.
ಸೊಳ್ಳೆಗಳನ್ನು ನಿಯಂತ್ರಿಸಲು ಇಡೀ ಜಗತ್ತು ಪ್ರತಿ ವರ್ಷ ಸುಮಾರು 22 ಶತಕೋಟಿ ಅಮೇರಿಕನ್ ಡಾಲರ್‌ಗಳನ್ನು ವ್ಯಯಿಸುತ್ತಿದೆ. ಶತಕೋಟಿ ಲೀಟರ್ ಕೀಟನಾಶಕಗಳು, ಲಕ್ಷಾಂತರ ಟನ್ ಲಾರ್ವಿಸೈಡ್‌ಗಳು ಮತ್ತು ಕೋಟ್ಯಂತರ ಕೀಟನಾಶಕಯುಕ್ತ ಸೊಳ್ಳೆ ಪರದೆಗಳನ್ನು ಬಳಸಿದರೂ ಸಹ ನಾವು ಸೊಳ್ಳೆಗಳ ವಿರುದ್ಧದ ಯುದ್ಧದಲ್ಲಿ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಕೇವಲ ಎರಡು ಲಕ್ಷ ನರಕೋಶಗಳನ್ನು ಹೊಂದಿರುವ ಈ ಸರಳ ಜೀವಿ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಮನುಷ್ಯನನ್ನು ಸತತವಾಗಿ ಸೋಲಿಸುತ್ತಲೇ ಇದೆ. ಹವಾಮಾನ ಬದಲಾವಣೆ ಮತ್ತು ನಗರೀಕರಣದ ಪರಿಣಾಮವಾಗಿ ಸೊಳ್ಳೆಗಳು ಬದಲಾದ ಪರಿಸರಕ್ಕೆ ಹೊಂದಿಕೊಂಡು ತಮ್ಮ ಸಂತತಿ ಹೆಚ್ಚಿಸಿಕೊಳ್ಳುತ್ತಿವೆ. ಇದೇ ವಿಜ್ಞಾನಿಗಳಿಗೆ ದೊಡ್ಡ ತಲೆಬೇನೆಯಾಗಿ ಪರಿಣಮಿಸಿದೆ.
ಸೊಳ್ಳೆಗಳು ನಾವೆಲ್ಲಿದ್ದೀವಿ ಎಂದು ಅಷ್ಟು ನಿಖರವಾಗಿ ಹೇಗೆ ಪತ್ತೆಹಚ್ಚುತ್ತವೆ ಎಂದು ತಿಳಿದುಕೊಳ್ಳಲು ಜಾರ್ಜಿಯಾ ಟೆಕ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡೇವಿಡ್ ಹೂ ಮತ್ತು ಅವರ ತಂಡ ಸತತ ಮೂರು ವರ್ಷಗಳ ಕಾಲ ಸುದೀರ್ಘ ಸಂಶೋಧನೆ ನಡೆಸಿದರು. ಈ ಸಂಶೋಧನೆಯ ರೋಚಕ ಭಾಗವಾಗಿ, ಕ್ರಿಸ್ ಝುವೊ ಎಂಬ ವಿದ್ಯಾರ್ಥಿ ಸೊಳ್ಳೆಗಳ ಹಸಿವಿಗೆ ತನ್ನನ್ನೇ ಅರ್ಪಿಸಿಕೊಂಡಿದ್ದರು. ಅಂದರೆ, ಸೊಳ್ಳೆಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಕ್ರಿಸ್ ಒಂದು ಜಾಲರಿಯ ಸೂಟ್ ಧರಿಸಿ ನೂರಾರು ಹಸಿದ ಸೊಳ್ಳೆಗಳಿದ್ದ ಕೋಣೆಗೆ ಪ್ರವೇಶಿಸಿದಾಗ, ಆ ಪುಟ್ಟ ಜೀವಿಗಳು ಜಾಲರಿಯ ಸಣ್ಣ ರಂಧ್ರಗಳ ಮೂಲಕವೂ ನುಗ್ಗಿ ಅವರ ದೇಹದಾದ್ಯಂತ ಕಚ್ಚಿ ದದ್ದು ಮೂಡಿಸಿದ್ದವು. ಸಾಮಾನ್ಯರಿಗೆ ಇದೊಂದು ಅಮಾನವೀಯ, ಕ್ರೂರ ಪ್ರಯೋಗದಂತೆ ಕಂಡರೂ, ಸೊಳ್ಳೆಗಳ ನಿಗೂಢತೆಯನ್ನು ಅರ್ಥಮಾಡಿಕೊಳ್ಳಲು ಇದು ಅನಿವಾರ್ಯವಾಗಿತ್ತು.

ಇನ್ನು ಆ ಸಂಶೋಧನೆಯಿಂದ ವಿಜ್ಞಾನಿಗಳು ಕಂಡುಕೊಂಡಂತೆ, ಸೊಳ್ಳೆಗಳಿಗೆ ದೃಷ್ಟಿ ಸಾಮರ್ಥ್ಯ ಬಹಳ ಕಡಿಮೆ. ಅವುಗಳ ಎರಡು ಸಂಯೋಜಿತ ಕಣ್ಣುಗಳು ಸಾವಿರಾರು ಸಣ್ಣ ಮಸೂರಗಳನ್ನು ಹೊಂದಿದ್ದರೂ, ಅವುಗಳಿಗೆ ಸಿಗುವ ಚಿತ್ರಣ ಬಹಳ ಮಸುಕಾಗಿರುತ್ತದೆ. ಕೇವಲ ಎರಡು-ಮೂರು ಮೀಟರ್ ದೂರದಲ್ಲಿರುವ ಮನುಷ್ಯನನ್ನು ಮಾತ್ರ ಅವು ಗುರುತಿಸಬಲ್ಲವು. ಹಾಗಾಗಿ, ಅವು ಸಂಪೂರ್ಣವಾಗಿ ರಾಸಾಯನಿಕ ಸಂಕೇತಗಳ ಮೇಲೆ ಅವಲಂಬಿತವಾಗಿವೆ. ಆದರೆ, ಸುಮಾರು 30 ಅಡಿ ದೂರದಿಂದಲೇ ಅವು CO2 ವಾಸನೆಯನ್ನು ಪತ್ತೆಹಚ್ಚಬಲ್ಲವು. ನಾವು ಉಸಿರಾಟದ ಮೂಲಕ ಹೊರಹಾಕುವ ಕಾರ್ಬನ್ ಡೈಆಕ್ಸೈಡ್ ಸೊಳ್ಳೆಗಳಿಗೆ ದಾರಿದೀಪದಂತೆ ಕೆಲಸ ಮಾಡುತ್ತದೆ.
ಜಗತ್ತಿನಲ್ಲಿ ಸುಮಾರು 3,500 ಜಾತಿ ಸೊಳ್ಳೆಗಳಿವೆ. ಈ ಪೈಕಿ ಸುಮಾರು 100 ಜಾತಿ ಸೊಳ್ಳೆಗಳು ಮಾತ್ರ ಮನುಷ್ಯರ ರಕ್ತವನ್ನು ಹೀರುವ ಗುಣ ಹೊಂದಿವೆ. ಇವುಗಳನ್ನು ‘ಆಂಥ್ರೋಪೋಫಿಲಿಕ್’ ಅಥವಾ ಮನುಷ್ಯ ಪ್ರೇಮಿ ಸೊಳ್ಳೆಗಳೆಂದು ಕರೆಯಲಾಗುತ್ತದೆ. ನೂರಾರು ದನಗಳ ಹಿಂಡಿನ ನಡುವೆ ಇರುವ ಒಬ್ಬನೇ ಮನುಷ್ಯನನ್ನು ಹುಡುಕಿ ಬರುವ ಅದ್ಭುತ ಶಕ್ತಿ ಇವುಗಳಿಗಿದೆಯಂತೆ. ಸೊಳ್ಳೆಗಳು ವಾಸ್ತವದಲ್ಲಿ ಬಹಳ ದುರ್ಬಲ ಹಾರಾಟಗಾರರು. ಗಂಟೆಗೆ ಕೇವಲ ಎರಡರಿಂದ ಮೂರು ಮೈಲಿ ವೇಗದಲ್ಲಿ ಗಾಳಿ ಬೀಸಿದರೂ ಅವುಗಳಿಗೆ ಹಾರಲು ಸಾಧ್ಯವಾಗುವುದಿಲ್ಲ. ಅಂದರೆ ಕುದುರೆಯೊಂದು ಬಾಲ ಅಲ್ಲಾಡಿಸಿದಾಗ ಉಂಟಾಗುವ ಗಾಳಿಯೇ ಸೊಳ್ಳೆಗಳನ್ನು ದೂರವಿಡಲು ಸಾಕಾಗುತ್ತದೆ. ಆದರೆ ಗಾಳಿ ಇಲ್ಲದ ಶಾಂತ ವಾತಾವರಣದಲ್ಲಿ ಇವು ತಮ್ಮ ಪುಟ್ಟ ಮಿದುಳನ್ನು ಬಳಸಿ ಮನುಷ್ಯನ ದೇಹದ ಉಷ್ಣತೆ, ಚರ್ಮದ ವಾಸನೆ ಮತ್ತು ತೇವಾಂಶವನ್ನು ಹಿಂಬಾಲಿಸುತ್ತಾ ದಾಳಿ ಮಾಡುತ್ತವೆ.
ಸಂಶೋಧಕರು ‘ಫೋಟೋನಿಕ್ ಸೆಂಟ್ರಿ’ ಎಂಬ ಸುಧಾರಿತ ಕ್ಯಾಮೆರಾಗಳನ್ನು ಬಳಸಿ ಸೊಳ್ಳೆಗಳ ಎರಡು ಕೋಟಿಗೂ ಹೆಚ್ಚು ಹಾರಾಟದ ಹಂತಗಳನ್ನು ವಿಶ್ಲೇಷಣೆಗೊಳಪಡಿಸಿದರು. ಈ ದತ್ತಾಂಶದ ಆಧಾರದ ಮೇಲೆ ಸೊಳ್ಳೆಗಳ ಹಾರಾಟದ ಒಂದು ಗಣಿತದ ಮಾದರಿಯನ್ನು ತಯಾರಿಸಲಾಯಿತು. “ಸೊಳ್ಳೆಗಳು ದೃಶ್ಯಗಳನ್ನು ನೋಡಿದಾಗ ಗುರಿಯ ಹತ್ತಿರ ಹೋಗಿ ಸುಮ್ಮನೆ ಹಾದುಹೋಗುತ್ತವೆ. ಆದರೆ, ಕಾರ್ಬನ್ ಡೈಆಕ್ಸೈಡ್ ಮತ್ತು ದೃಶ್ಯ ಸಂಕೇತಗಳು ಒಟ್ಟಿಗೆ ಸೇರಿದಾಗ ಅವು ಗುರಿಯ ಸುತ್ತ ಅತ್ಯಂತ ವೇಗವಾಗಿ ಪರಿಭ್ರಮಿಸುವ (Orbiting) ಹಾದಿಯನ್ನು ರೂಪಿಸಿಕೊಳ್ಳುತ್ತವೆ” ಎಂಬುದನ್ನು ಕಂಡುಕೊಂಡರು.
ಇಂದು ನಾವು ಬಳಸುತ್ತಿರುವ ಸೊಳ್ಳೆ ಪರದೆಗಳು, ಟ್ರ್ಯಾಪ್‌ಗಳು ಕೇವಲ ಶೇ.10ರಿಂದ 50ರಷ್ಟು ಸೊಳ್ಳೆಗಳನ್ನು ಮಾತ್ರ ಹಿಡಿಯಲು ಶಕ್ತವಾಗಿವೆ. ಉಳಿದ ಸೊಳ್ಳೆಗಳು ಸುಲಭವಾಗಿ ತಪ್ಪಿಸಿಕೊಂಡು ಪರದೆಯೊಳಗೆ ನುಗ್ಗಿ ನಮ್ಮ ರಕ್ತ ಹೀರುತ್ತಿವೆ. ನಾವು ಅವುಗಳ ಹಾರಾಟದ ಮನೋವಿಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ಇದಕ್ಕೆ ಕಾರಣ.

ಸೊಳ್ಳೆಗಳ ಹಾರಾಟದ ಹಿಂದಿರುವ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಿಲ್ಲ. ವಿಮಾನಗಳ ಏರೋಡೈನಾಮಿಕ್ಸ್‌ಗಿಂತಲೂ ಇದು ಹೆಚ್ಚು ಸಂಕೀರ್ಣ. ಇವು ತಮ್ಮ ರೆಕ್ಕೆಗಳನ್ನು ಸೆಕೆಂಡಿಗೆ ಸುಮಾರು 600 ರಿಂದ 800 ಬಾರಿ ಬಡಿಯುತ್ತವೆ. ಇದರಿಂದಲೇ ನಮಗೆ ಆ ವಿಶಿಷ್ಟವಾದ, ಗುಂಯ್ ಎನ್ನುವ ‘ಝೇಂಕಾರ’ ಕೇಳಿಸುವುದು. ಸಂಶೋಧನೆಯ ಪ್ರಕಾರ, ಸೊಳ್ಳೆಗಳು ಗಾಳಿಯಲ್ಲಿ ಹಾರುವಾಗ ನಿರಂತರವಾಗಿ ತಮ್ಮ ಹಾದಿಯನ್ನು ಬದಲಾಯಿಸುತ್ತಿರುತ್ತವೆ. ಇದನ್ನ ‘ರ್ಯಾಂಡಮ್ ವಾಕ್’ ಎನ್ನಲಾಗುತ್ತದೆ. ಆದರೆ ಒಮ್ಮೆ ಅವುಗಳಿಗೆ ಮನುಷ್ಯನ ವಾಸನೆ ಸಿಕ್ಕರೆ, ಈ ರ್ಯಾಂಡಮ್ ಹಾರಾಟವನ್ನ ಬಂದ್ ಮಾಡಿ ಕೂಡಲೇ ತನ್ನ ಗುರಿಯೆಡೆಗೆ ಹಾರಲು ಆರಂಭಿಸುತ್ತವೆ. ಅವು ಗಾಳಿಯ ದಿಕ್ಕಿಗೆ ವಿರುದ್ಧವಾಗಿ ಹಾರುತ್ತಾ, ವಾಸನೆಯು ಎಲ್ಲಿಂದ ಬರುತ್ತಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಿಕೊಂಡು, ಶೀಘ್ರ ದಾಳಿ ಮಾಡುತ್ತವೆ. ಹಾಗಾಗಿಗೇ ಕೆಲವೊಮ್ಮೆ ನಮಗೆ.. ʼಇಷ್ಟೊತ್ತು ಇಲ್ಲದ ಸೊಳ್ಳೆ ದಿಢೀರನೆ ಇದೆಲ್ಲಿಂದ ಬಂತುʼ ಎನಿಸುವುದು.
ಸೊಳ್ಳೆಗಳು ಕಚ್ಚುವಾಗ ಕೇವಲ ರಕ್ತ ಹೀರುವುದಿಲ್ಲ, ಅವುಗಳ ಲಾಲಾರಸವನ್ನು ನಮ್ಮ ದೇಹಕ್ಕೆ ಸೇರಿಸುತ್ತವೆ. ಈ ಲಾಲಾರಸದಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುವ ವಿಶೇಷ ಕಿಣ್ವಗಳಿರುತ್ತವೆ. ನಮ್ಮ ದೇಹವು ಈ ಹೊರಗಿನ ವಸ್ತುವಿಗೆ ಪ್ರತಿಕ್ರಿಯಿಸಿದಾಗ ಅಲ್ಲಿ ತುರಿಕೆ, ಕೆಂಪು ಗುಳ್ಳೆಗಳು ಏಳುತ್ತವೆ. ಈ ಲಾಲಾರಸದ ಮೂಲಕವೇ ಮಲೇರಿಯಾ ಪರೋಪಜೀವಿಗಳು ಅಥವಾ ಡೆಂಗ್ಯೂ ವೈರಸ್‌ಗಳು ನಮ್ಮ ರಕ್ತ ಸೇರುತ್ತವೆ.
ಸೊಳ್ಳೆಗಳು ಕೇವಲ ರೋಗ ಹರಡುವ ವಾಹಕಗಳಾಗಿ ಕೆಲಸ ಮಾಡುತ್ತವೆಯೇ ಹೊರತು, ಆ ರೋಗಗಳು ಸೊಳ್ಳೆಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂಬುದು ಪ್ರಕೃತಿಯ ವಿಚಿತ್ರ ವೈವಿಧ್ಯ. ಈ ಸಂಶೋಧನೆಯ ಆಧಾರದ ಮೇಲೆ ಭವಿಷ್ಯದ ತಂತ್ರಜ್ಞಾನಗಳು ಸೊಳ್ಳೆಗಳನ್ನು ಕೊಲ್ಲುವ ಬದಲು ಅವುಗಳನ್ನು ದಾರಿ ತಪ್ಪಿಸುವತ್ತ ಗಮನಹರಿಸುತ್ತಿವೆ. ಉದಾಹರಣೆಗೆ, ಮನುಷ್ಯನ ವಾಸನೆಯನ್ನು ಮರೆಮಾಚುವ ‘ರಾಸಾಯನಿಕ ಪರದೆಗಳು’ ಅಥವಾ ಸೊಳ್ಳೆಗಳ ಸೆನ್ಸಾರ್‌ಗಳನ್ನು ಗೊಂದಲಕ್ಕೀಡುಮಾಡುವ ಸಾಧನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸೊಳ್ಳೆಗಳ ಹಾರಾಟದ ಮಾದರಿಯನ್ನು ಆಧರಿಸಿ ನಿರ್ಮಿಸಲಾದ ಸ್ಮಾರ್ಟ್ ಟ್ರ್ಯಾಪ್‌ಗಳು, ಸೊಳ್ಳೆಗಳು ತಪ್ಪಿಸಿಕೊಳ್ಳದಂತೆ ಅವುಗಳನ್ನು ಸೆರೆಹಿಡಿಯಲು ಹೆಚ್ಚು ಪರಿಣಾಮಕಾರಿಯಾಗಲಿವೆ.

ಸೊಳ್ಳೆಗಳು ನಮ್ಮನ್ನು ಪತ್ತೆಹಚ್ಚದಿರಲು DEET, ಪಿಕಾರಿಡಿನ್ ಅಥವಾ ಸಿಟ್ರೊನೆಲ್ಲಾದಂತಹ ಎಣ್ಣೆಗಳನ್ನು ಚರ್ಮಕ್ಕೆ ಹಚ್ಚುವುದರಿಂದ ಸೊಳ್ಳೆಗಳ ಘ್ರಾಣಶಕ್ತಿ ತಾತ್ಕಾಲಿಕವಾಗಿ ಸ್ತಬ್ಧವಾಗುತ್ತದೆ. ಅವುಗಳಿಗೆ ಮನುಷ್ಯನ ವಾಸನೆ ಸಿಗದೆ ದಾರಿ ತಪ್ಪುತ್ತವೆ. ಸೊಳ್ಳೆಗಳು ಗಂಟೆಗೆ 2-3 ಮೈಲಿಗಿಂತ ಹೆಚ್ಚಿನ ವೇಗದ ಗಾಳಿಯಲ್ಲಿ ಹಾರಲಾರವು. ಹಾಗಾಗಿ, ಕೋಣೆಯಲ್ಲಿ ವೇಗವಾಗಿ ಫ್ಯಾನ್ ಹಾಕುವುದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನ. ಇದು ಸೊಳ್ಳೆಗಳನ್ನು ದೂರವಿಡುವುದಲ್ಲದೆ, ನಾವು ಹೊರಹಾಕುವ CO2 ಅನ್ನು ಗಾಳಿಯಲ್ಲಿ ಚದುರಿಸುತ್ತದೆ. ಸೊಳ್ಳೆಗಳು ಗಾಢ ಬಣ್ಣಗಳಿಗೆ (ವಿಶೇಷವಾಗಿ ಕಪ್ಪು) ಆಕರ್ಷಿತವಾಗುತ್ತವೆ. ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಮತ್ತು ಮನೆಯ ಹೊರಗೆ ಹಳದಿ ಬಣ್ಣದ (LED) ದೀಪಗಳನ್ನು ಬಳಸುವುದು ಸೊಳ್ಳೆಗಳನ್ನು ಆಕರ್ಷಿಸುವುದನ್ನು ಕಡಿಮೆ ಮಾಡುತ್ತದೆ. ಕಿಟಕಿಗಳಿಗೆ ಜಾಲರಿ ಹಾಕುವುದು ಮತ್ತು ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯಕ. ನಿಂತ ನೀರಿಗೆ ‘ಬ್ಯಾಸಿಲಸ್ ತುರಿಂಜಿಯೆನ್ಸಿಸ್’ (Bti) ನಂತಹ ಜೈವಿಕ ಕೀಟನಾಶಕಗಳನ್ನು ಹಾಕುವುದರಿಂದ ಅವುಗಳ ಲಾರ್ವಾಗಳು ಸಾಯುತ್ತವೆ (ಇದು ಇತರ ಜೀವಿಗಳಿಗೆ ಹಾನಿಕಾರಕವಲ್ಲ). ಗಾಂಬೂಸಿಯಾ (Gambusia) ಮೀನುಗಳನ್ನು ಕೆರೆ ಅಥವಾ ತೊಟ್ಟಿಗಳಿಗೆ ಬಿಡುವುದರಿಂದ ಅವು ಸೊಳ್ಳೆಗಳ ಲಾರ್ವಾಗಳನ್ನು ತಿಂದು ಹಾಕುತ್ತವೆ.
ಇದನ್ನೂ ಓದಿ: ಅಭಿವೃದ್ಧಿ ಹಾದಿಯಲ್ಲಿ ವಿಷವಾಗುತ್ತಿರುವ ಭಾರತ; ಆತಂಕಕಾರಿಯಾಗಿದೆ CSE ವರದಿ!
ಹೀಗೆ ವೈಯಕ್ತಿಕ ರಕ್ಷಣೆ, ಪರಿಸರ ವಿನ್ಯಾಸ & ಸ್ವಚ್ಛತೆ ಹಾಗೂ ತಂತ್ರಜ್ಞಾನದ ಸಮಗ್ರ ಬಳಕೆಯನ್ನು (Integrated Pest Management) ಅಳವಡಿಸಿಕೊಂಡರೆ ಮಾತ್ರ ಈ ಸಣ್ಣ ರಾಕ್ಷಸರ ವಿರುದ್ಧದ ಯುದ್ಧದಲ್ಲಿ ನಾವು ಜಯ ಸಾಧಿಸಲು ಸಾಧ್ಯ.





