ನಮ್ಮ ಸಮಾಜದಲ್ಲಿ ಶತಮಾನಗಳಿಂದಲೂ ಮೌನವಾಗಿ ನಡೆಯುತ್ತ ಬಂದಿರುವ, ಆದರೆ ಅತ್ಯಂತ ಕ್ರೂರವಾದ ಒಂದು ಶಿಕ್ಷೆ ಇದೆ. ಅದೇ ಸಾಮಾಜಿಕ ಬಹಿಷ್ಕಾರ. ಯಾರನ್ನಾದರೂ ಊರಿನಿಂದ ಹೊರಗೆ ತಳ್ಳುವುದು, ಮಾತುಕತೆ ನಿಲ್ಲಿಸುವುದು, ಹಬ್ಬ ಹರಿದಿನಗಳಿಂದ ದೂರ ಇಡುವುದು, ದೇವಸ್ಥಾನಕ್ಕೆ ನಿರಾಕರಿಸುವುದು, ಸ್ಮಶಾನದಲ್ಲೂ ಜಾಗ ನೀಡದಿರುವುದು, ನೀರನ್ನೂ ಕೊಡದೇ ವಂಚಿಸುವುದು, ಸಂಬಂಧ ಕಡಿದುಕೊಳ್ಳುವುದು… ಇತ್ಯಾದಿ. ಇವೆಲ್ಲವೂ ಕಾನೂನಿನ ಕಣ್ಣಿಗೆ ಹೆಚ್ಚು ಕಾಣಿಸದಿದ್ದರೂ, ಬದುಕಿನ ಮೂಲ ಹಕ್ಕನ್ನೇ ಕಿತ್ತುಕೊಳ್ಳುವ ಶಿಕ್ಷೆಗಳು. ಒಬ್ಬನನ್ನು ಆಯುಧಗಳಿಂದ ಕೊಲ್ಲದೇ ಕೊಲ್ಲುವ ವ್ಯವಸ್ಥೆಯೇ ಸಾಮಾಜಿಕ ಬಹಿಷ್ಕಾರ.
ಸಾಮಾಜಿಕ ಬಹಿಷ್ಕಾರ ಎಂಬುದು ಯಾವಾಗಲೂ “ಸಂಪ್ರದಾಯ” ಅಥವಾ “ಪಂಚಾಯತ್ ತೀರ್ಮಾನ” ಎಂಬ ಮುಖವಾಡ ಹಾಕಿಕೊಂಡೇ ಬರುತ್ತದೆ. ಆದರೆ ಅದರ ಮೂಲದಲ್ಲಿ ಇರುವುದೇ ಜಾತಿ ವ್ಯವಸ್ಥೆ, ಅಧಿಕಾರದ ದರ್ಪ ಮತ್ತು ಅಸಮಾನತೆ. “ನೀನು ನಮ್ಮ ಜಾತಿಯ ಮಾತು ಕೇಳಲಿಲ್ಲ. ನಮ್ಮ ಸಂಪ್ರದಾಯವನ್ನು ಪ್ರಶ್ನಿಸಿದ್ದೆ. ನೀನು ಶೋಷಣೆಗೆ ವಿರೋಧವಾಗಿ ನಿಂತೆ…” ಇಷ್ಟೇ ಕಾರಣಕ್ಕೆ ಒಬ್ಬ ವ್ಯಕ್ತಿ, ಒಂದು ಕುಟುಂಬ, ಕೆಲವೊಮ್ಮೆ ಇಡೀ ಪೀಳಿಗೆಯನ್ನೇ ಸಮಾಜದಿಂದ ಹೊರಗಿಟ್ಟು ಶಿಕ್ಷೆ ಕೊಡಲಾಗುತ್ತದೆ. ಈ ಶಿಕ್ಷೆಗೆ ಯಾವುದೇ ನ್ಯಾಯಾಲಯದ ತೀರ್ಪಿಲ್ಲ, ಆದರೆ ಪರಿಣಾಮ ಮಾತ್ರ ಜೀವಾವಧಿಯಷ್ಟೇ.

ಜಾತಿ ವ್ಯವಸ್ಥೆಯ ಭಾಗವಾಗಿರುವ ಈ ಸಾಮಾಜಿಕ ಬಹಿಷ್ಕಾರವು ಸಾಂವಿಧಾನಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ 2025’ ಅನ್ನು ರೂಪಿಸಿದೆ. ಈ ಕಾಯ್ದೆಯಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ.ವರೆಗೂ ದಂಡ ವಿಧಿಸಲಾಗುವುದು. ಸಮಾಜ ಕಲ್ಯಾಣ ಸಚಿವರಾದ ಎಚ್ ಸಿ ಮಹದೇವಪ್ಪ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದಾರೆ. ವ್ಯಕ್ತಿ, ಕುಟುಂಬ, ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ರೂ.1 ಲಕ್ಷದವರೆಗೆ ದಂಡ, ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಹಾಗೂ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶವಿರುವ ಕಾನೂನು ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿದೆ. ಸಾಮಾಜಿಕ ಬಹಿಷ್ಕಾರವನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷೆ ವಿಧಿಸಲು ಅವಕಾಶ ನೀಡುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಸೋಮವಾರದ (ಜ.೧೨)ಅಂಕಿತ ಹಾಕಿದ್ದಾರೆ.

ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆಯಂತಹ ಹಳೆಯ ಸಂಪ್ರದಾಯಗಳು ಇನ್ನೂ ಬೇರು ಬಿಟ್ಟು ನಿಂತಿವೆ. ಸಾಮಾಜಿಕ ಬಹಿಷ್ಕಾರ ಒಬ್ಬ ವ್ಯಕ್ತಿಯ ಜೀವನವನ್ನು, ಕುಟುಂಬದ ಸಂತಸವನ್ನು, ಸಮಾಜದ ಐಕ್ಯತೆಯನ್ನು ನಾಶಮಾಡುವ ಒಂದು ಮಾರಕ ಶಸ್ತ್ರ. ಇದು ಜಾತಿ ವ್ಯವಸ್ಥೆಯ ಭಾಗವಾಗಿದೆ, ಅಲ್ಲಿ ಉನ್ನತ ಜಾತಿಯವರು ಕೆಳಜಾತಿಯವರನ್ನು ಅಥವಾ ತಮ್ಮ ನಿಯಮಗಳನ್ನು ಮೀರಿದವರನ್ನು ಶಿಕ್ಷಿಸುತ್ತಾರೆ. ಆದರೆ ಇದು ಕೇವಲ ಜಾತಿಗೆ ಸೀಮಿತವಲ್ಲ, ಯಾವುದೇ ಸಮುದಾಯದಲ್ಲಿ ಇದು ನಡೆಯಬಹುದು.
ಒಬ್ಬ ವ್ಯಕ್ತಿಯನ್ನ ಸಮಾಜದಿಂದ ಹೊರಗಿಟ್ಟರೆ ಆತನ ಜೀವನ ಹೇಗಿರುತ್ತದೆ? ಕಲ್ಪಿಸಿಕೊಳ್ಳಿ. ಒಂದು ಕುಟುಂಬದ ಹುಡುಗಿ ಅಂತರ್ಜಾತಿಯ ಮದುವೆ ಮಾಡಿಕೊಂಡರೆ, ಇಡೀ ಕುಟುಂಬವನ್ನು ಬಹಿಷ್ಕರಿಸುವುದು. ನಿಮ್ಮ ನೆರೆಹೊರೆಯವರು ನಿಮ್ಮನ್ನು ನೋಡಿ ಮುಖ ತಿರುಗಿಸುತ್ತಾರೆ. ಅಂಗಡಿಯಲ್ಲಿ ಸಾಮಾನು ಕೊಡುವುದಿಲ್ಲ, ನಿಮ್ಮ ಮಕ್ಕಳು ಆಟದ ಮೈದಾನದಲ್ಲಿ ಏಕಾಂಗಿಯಾಗುತ್ತಾರೆ. ಅವರು ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ, ಸಮಾರಂಭಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಇದು ಅವರ ಘನತೆಯನ್ನು ಕಸಿದುಕೊಳ್ಳುತ್ತದೆ. ಮಕ್ಕಳು ಶಾಲೆಯಲ್ಲಿ ಕೀಳರಿಮೆಗೆ ಒಳಗಾಗುತ್ತಾರೆ. ಸಮಾಜದಲ್ಲಿ ಇದೊಂದು ಚಕ್ರವಾಗುತ್ತದೆ. ಹಳೆಯ ನಿಯಮಗಳು ಹೊಸ ತಲೆಮಾರುಗಳನ್ನು ಕಟ್ಟಿಹಾಕುತ್ತವೆ. ಇದು ನಮ್ಮ ಸಂವಿಧಾನದ ಆದರ್ಶಗಳನ್ನು ಅಪಹಾಸ್ಯ ಮಾಡುತ್ತದೆ. ನಮ್ಮ ಪೂರ್ವಜರು ಕನಸು ಕಂಡ ಸ್ವಾತಂತ್ರ್ಯ ಇದಲ್ಲ, ಇದು ಗುಲಾಮಗಿರಿಯ ಮತ್ತೊಂದು ರೂಪ. ಇದು ನಮ್ಮ ಸಂವಿಧಾನದ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. ಸಮಾನತೆ, ಘನತೆ, ಸಹೋದರತ್ವದ ಹಕ್ಕನ್ನು ಕಸಿದುಕೊಳ್ಳುತ್ತದೆ. ಇದನ್ನ ತಡೆಯುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ 2025’ ಅನ್ನು ರೂಪಿಸಿದೆ.

ವಿಧೇಯಕದಲ್ಲಿನ ಪ್ರಮುಖ ಅಂಶಗಳೇನು?
ಬಹಿಷ್ಕಾರದ ನಿಷೇಧ: ಜಾತಿ, ಧರ್ಮ, ವೈಯಕ್ತಿಕ ಆಯ್ಕೆಗಳು (ಉದಾಹರಣೆಗೆ ಅಂತರ್ಜಾತಿ ವಿವಾಹ) ಅಥವಾ ಸ್ಥಳೀಯ ಸಂಪ್ರದಾಯಗಳ ಉಲ್ಲಂಘನೆಯ ಹೆಸರಿನಲ್ಲಿ ವ್ಯಕ್ತಿ ಅಥವಾ ಕುಟುಂಬಕ್ಕೆ ವಿಧಿಸುವ ಸಾಮಾಜಿಕ ಬಹಿಷ್ಕಾರವನ್ನು ಇದು ಸಂಪೂರ್ಣವಾಗಿ ನಿಷೇಧಿಸುತ್ತದೆ.
ಅಪರಾಧೀಕರಣ: ಸಾರ್ವಜನಿಕ ಸೌಲಭ್ಯಗಳಾದ ನೀರು, ಸ್ಮಶಾನಕ್ಕೆ ಪ್ರವೇಶ ನಿರಾಕರಿಸುವುದು, ವ್ಯಾಪಾರ-ವಹಿವಾಟು ಸ್ಥಗಿತಗೊಳಿಸುವುದು ಮತ್ತು ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ತಡೆಯುವುದನ್ನು ಈ ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಅನೌಪಚಾರಿಕ ಸಂಸ್ಥೆಗಳ ಮೇಲೆ ನಿಗಾ: ಕಾನೂನು ಬಾಹಿರವಾಗಿ ತೀರ್ಪು ನೀಡುವ ‘ಜಾತಿ ಪಂಚಾಯತ್’ ಅಥವಾ ಅಂತಹ ಅನೌಪಚಾರಿಕ ಸಭೆಗಳ ಮೇಲೆ ಈ ಕಾನೂನು ಕಠಿಣ ಕ್ರಮ ಕೈಗೊಳ್ಳಲಿದೆ.
ವ್ಯಾಪಕ ವ್ಯಾಪ್ತಿ: ಈ ವಿಧೇಯಕವು ಒಟ್ಟು 20 ವಿಧದ ಸಾಮಾಜಿಕ ಬಹಿಷ್ಕಾರದ ಕ್ರಮಗಳನ್ನು ಪಟ್ಟಿ ಮಾಡಿದ್ದು, ಅವೆಲ್ಲವನ್ನೂ ಶಿಕ್ಷಾರ್ಹ ಅಪರಾಧಗಳೆಂದು ಘೋಷಿಸಿದೆ.
ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ: ನೈತಿಕತೆ, ಸಾಮಾಜಿಕ ಅಂಗೀಕಾರ, ರಾಜಕೀಯ ಒಲವು ಅಥವಾ ಲೈಂಗಿಕತೆಯ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ಈ ಮಸೂದೆಯು ಒಳಗೊಂಡಿದೆ.
ಸಾಂಸ್ಕೃತಿಕ ನಿರ್ಬಂಧಗಳ ನಿಷೇಧ: ಸಮುದಾಯದ ಸದಸ್ಯರು ನಿರ್ದಿಷ್ಟ ರೀತಿಯ ಉಡುಪು ಧರಿಸುವಂತೆ ಅಥವಾ ನಿರ್ದಿಷ್ಟ ಭಾಷೆಯನ್ನೇ ಬಳಸುವಂತೆ ಒತ್ತಾಯಿಸುವುದು ಹಾಗೂ ಸಮುದಾಯದಿಂದ ಹೊರಹಾಕುವುದನ್ನು ಇದು ಅಪರಾಧವೆಂದು ಪರಿಗಣಿಸುತ್ತದೆ.
ಪ್ರಚೋದಕರಿಗೂ ಶಿಕ್ಷೆ: ಯಾವುದೇ ವ್ಯಕ್ತಿಯೊಂದಿಗೆ ಸಾಮಾಜಿಕ, ಧಾರ್ಮಿಕ, ವೃತ್ತಿಪರ ಅಥವಾ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಇತರರನ್ನು ಪ್ರಚೋದಿಸುವವರು ಅಥವಾ ಪ್ರೋತ್ಸಾಹಿಸುವವರನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ.
ಜಾತಿ ಪಂಚಾಯತ್ ಸದಸ್ಯರ ಹೊಣೆಗಾರಿಕೆ: ಜಾತಿ ಪಂಚಾಯತ್‌ಗಳಂತಹ ಸಭೆಗಳಲ್ಲಿ ಬಹಿಷ್ಕಾರದ ಪರವಾಗಿ ಮತ ಚಲಾಯಿಸುವ ವ್ಯಕ್ತಿಗಳನ್ನೂ ಈ ಕಾನೂನಿನ ಅಡಿಯಲ್ಲಿ ಶಿಕ್ಷಿಸಬಹುದು.
ದೂರು ದಾಖಲಿಸುವ ಪ್ರಕ್ರಿಯೆ: ಸಂತ್ರಸ್ತರು ನೇರವಾಗಿ ಪೊಲೀಸರಿಗೆ ದೂರು ನೀಡಬಹುದು ಅಥವಾ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ದೂರು ಸಲ್ಲಿಸಬಹುದು.
ಮ್ಯಾಜಿಸ್ಟ್ರೇಟ್ ಅಧಿಕಾರ: ಈ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಿ ಸಂತ್ರಸ್ತರಿಗೆ ತಕ್ಷಣದ ಪರಿಹಾರ ಮತ್ತು ರಕ್ಷಣೆ ನೀಡುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ಗೆ ನೀಡಲಾಗಿದೆ. ಮ್ಯಾಜಿಸ್ಟ್ರೇಟ್‌ಗೆ ಅಗತ್ಯ ನೆರವು ನೀಡಲು ‘ಸಾಮಾಜಿಕ ಬಹಿಷ್ಕಾರ ನಿಷೇಧ ಅಧಿಕಾರಿ’ಯನ್ನು ನೇಮಿಸಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಿಯಮ ಉಲ್ಲಂಘನೆಗೆ ಶಿಕ್ಷೆ ಏನು?
ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ಬಹಿಷ್ಕಾರ ಹೇರುವವರು ಮಾತ್ರವಲ್ಲದೆ, ಅದನ್ನು ನಿರ್ದೇಶಿಸುವ ಅಥವಾ ಪ್ರೋತ್ಸಾಹಿಸುವ ಸಮುದಾಯದ ಪ್ರತಿಯೊಬ್ಬರೂ ಈ ಕಾನೂನಿನ ಅಡಿ ಶಿಕ್ಷೆಗೆ ಗುರಿಯಾಗುತ್ತಾರೆ.
ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು, ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತು ಕಾನೂನಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ವಿಶೇಷ ಅಧಿಕಾರಿಯನ್ನು ನೇಮಿಸಲಿದೆ.

20 ವಿಧದ ಸಾಮಾಜಿಕ ಬಹಿಷ್ಕಾರಳಿಗೆ ಕಡಿವಾಣ
ಈ ವಿಧೇಯಕವು ಸಾಮಾಜಿಕ ಬಹಿಷ್ಕಾರದ ವಿವಿಧ ಮುಖಗಳನ್ನು ಗುರುತಿಸಿ ಅವುಗಳನ್ನು ನಿಷೇಧಿಸಿದೆ.
ಆರ್ಥಿಕ ಬಹಿಷ್ಕಾರ: ಕೆಲಸಕ್ಕೆ ನೇಮಿಸಿಕೊಳ್ಳಲು ನಿರಾಕರಿಸುವುದು ಅಥವಾ ಆರ್ಥಿಕ ಅವಕಾಶಗಳನ್ನು ಕಸಿದುಕೊಳ್ಳುವುದು.
ಸೇವೆಗಳ ನಿರಾಕರಣೆ: ಒಪ್ಪಂದದ ಕೆಲಸಗಳು ಅಥವಾ ಸಮುದಾಯದ ಸೌಲಭ್ಯಗಳನ್ನು ತಡೆಯುವುದು.
ಸಾಮಾಜಿಕ ಪ್ರತ್ಯೇಕತೆ: ಸಾಮಾಜಿಕ, ಸಾಂಸ್ಕೃತಿಕ ಅಥವಾ ಧಾರ್ಮಿಕ ಮೆರವಣಿಗೆ ಮತ್ತು ಸಭೆಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವುದು.
ಮೂಲಸೌಕರ್ಯ ನಿರ್ಬಂಧ: ಕುಡಿಯುವ ನೀರು, ಸಾರ್ವಜನಿಕ ರಸ್ತೆ ಅಥವಾ ಅಗತ್ಯ ಸೇವೆಗಳನ್ನು ಬಳಸದಂತೆ ತಡೆಯುವುದು.
ಈ ಕಾಯ್ದೆ ಯಾಕೆ ಅಗತ್ಯವಾಗಿತ್ತು? ಯಾಕೆಂದರೆ, ಬಹಿಷ್ಕಾರಿಸಲ್ಪಡುವವರು ಸಾಮಾನ್ಯವಾಗಿ ಬಡವರು, ದಲಿತರು, ಮಹಿಳೆಯರೇ ಆಗಿರುತ್ತಾರೆ. ಅವರಿಗೆ ನ್ಯಾಯಾಲಯಕ್ಕೆ ಹೋಗುವ ಶಕ್ತಿ ಇರುವುದಿಲ್ಲ. ಸಮಾಜವೇ ಶತ್ರುವಾಗಿರುವಾಗ, ಒಬ್ಬ ವ್ಯಕ್ತಿಯ ಧ್ವನಿ ಮೌನವಾಗಿಬಿಡುತ್ತದೆ. ಈ ಕಾಯ್ದೆ ಆ ಮೌನಕ್ಕೆ ಧ್ವನಿಯಾಗಿದೆ. ಈ ಕಾನೂನು ಸಮಾಜಕ್ಕೆ ಹೇಳುತ್ತಿರುವುದು ಒಂದೇ ಮಾತು. “ನೀನು ದೇವರು ಅಲ್ಲ. “ನೀನು ಪಂಚಾಯತ್ ಅಲ್ಲ”. “ಯಾರ ಬದುಕಿನ ಮೇಲೆ ತೀರ್ಪು ಕೊಡುವ ಹಕ್ಕು ನಿನಗೆ ಇಲ್ಲ.”

ಯಾರನ್ನೂ ಸಮಾಜದಿಂದ ಹೊರಗೆ ತಳ್ಳುವ ಹಕ್ಕು ಯಾರಿಗೂ ಇಲ್ಲ. ಸಂಪ್ರದಾಯ ಎಂಬ ಹೆಸರಿನಲ್ಲಿ ನಡೆಯುವ ಹಿಂಸೆ ಈಗ ಅಪರಾಧವಾಗಿದೆ. ಸಾಮಾಜಿಕ ಬಹಿಷ್ಕಾರವು ಸಮಾಜಕ್ಕೆ ಮಾರಕ. ಇದು ನಿಶ್ಯಬ್ಧವಾಗಿ ಕೊಲ್ಲುವ ವ್ಯವಸ್ಥೆ. ಇದನ್ನು ತಡೆಯದೇ ಹೋದರೆ, ನಾಳೆ ಯಾರಾದರೂ ನಮ್ಮ ಬಾಗಿಲಿಗೂ ಬೀಗ ಹಾಕಬಹುದು.





