ʼಈ ದಿನʼ ಸಂಶೋಧನಾ ತಂಡ ಸಂಗ್ರಹಿಸಿದ ದತ್ತಾಂಶದ ಪ್ರಕಾರ ರಸ್ತೆ ಅಪಘಾತ- ಸಾವು ಹೆಚ್ಚಾಗಿ ನಡೆಯುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ!
ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರ ನಿಯಂತ್ರಣ ತಪ್ಪಿದ್ದರಿಂದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ 25 ವರ್ಷದ ಯುವತಿ ಲಾರಿ ಚಕ್ರದಡಿ ಬಿದ್ದು ಸಾವನ್ನಪ್ಪಿದ ಘಟನೆ ಅ.25ರಂದು ಶನಿವಾರ ಬೆಳಿಗ್ಗೆ ಬೆಂಗಳೂರಿನ ಮಾದನಾಯಕನಹಳ್ಳಿ ಹುನ್ನೂರು ಎಪಿಎಂಸಿ ಬಳಿ ನಡೆದಿದೆ. ಕಳೆದ ತಿಂಗಳು ಇದೇ ರೀತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಅಡಿಗೆ ಬಿದ್ದು ಮೃತಪಟ್ಟಿದ್ದರು. ಈ ಎರಡೂ ಘಟನೆಗಳು ರಸ್ತೆ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ಅಕ್ಟೋಬರ್ 17ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಕಾರು ಚರಂಡಿಗೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದ ಪಟ್ಟಣದ ಕುಶಾವತಿ ಬಳಿ ನಡೆದಿದೆ. ಇಂತಹ ಅದೆಷ್ಟೋ ಪ್ರಕರಣಗಳು ಪ್ರತಿ ದಿನ ವರದಿಯಾಗುತ್ತಲೇ ಇವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ NCRB) ಡೇಟಾ ಪ್ರಕಾರ ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಅತಿ ವೇಗದ ವಾಹನ ಚಾಲನೆ, ರಸ್ತೆಯ ಅವ್ಯವಸ್ಥೆ, ಅವೈಜ್ಞಾನಿಕವಾಗಿ ರಸ್ತೆ-ಸ್ಪೀಡ್ ಬ್ರೇಕರ್ಸ್‌ಗಳ ನಿರ್ಮಾಣ, ರಾತ್ರಿ ವೇಳೆ ಸರಿಯಾಗಿ ಬೀದಿದೀಪಗಳು ಇಲ್ಲದೆ ಇರುವುದು, ಕುಡಿದು ವಾಹನ ಚಲಾಯಿಸುವುದು ಮೊದಲಾದ ಕಾರಣಗಳಿವೆ. ʼಈ ದಿನʼ ಸಂಶೋಧನಾ ತಂಡ ಸಂಗ್ರಹಿಸಿದ ದತ್ತಾಂಶದ ಪ್ರಕಾರ ರಸ್ತೆ ಅಪಘಾತ ಸಾವು ಹೆಚ್ಚಾಗಿ ನಡೆಯುವ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ಕರ್ನಾಟಕ ಐದನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ಪ್ರತಿ ಒಂದು ಸಾವಿರ ವ್ಯಕ್ತಿಗಳಲ್ಲಿ 20 ಮಂದಿ ಸಾವನ್ನಪ್ಪುತ್ತಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು l ರಸ್ತೆ ಅಪಘಾತ: ವ್ಯಕ್ತಿ ಗಂಭೀರ
ರಸ್ತೆ ಅಪಘಾತದಲ್ಲಿ ಸಾವು ಪ್ರಕರಣ ಹೆಚ್ಚಳ
ಎನ್‌ಸಿಆರ್‌ಬಿಯಲ್ಲಿರುವ 2000ರಿಂದ 2023ರವರೆಗಿನ ದತ್ತಾಂಶವನ್ನು ಅವಲೋಕಿಸಿದಾಗ ರಾಜ್ಯದಲ್ಲಿ ರಸ್ತೆ ಅಪಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದು ಬೆಳಕಿಗೆ ಬಂದಿದೆ. 2000ರಲ್ಲಿ 7098 ರಸ್ತೆ ಅಪಘಾತ ಸಾವು ಪ್ರಕರಣಗಳು ದಾಖಲಾಗಿದ್ದವು. ಆದರೆ ಐದು ವರ್ಷದಲ್ಲೇ ಅಂದರೆ 2005ರಲ್ಲಿ 9239 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮತ್ತೆ ಐದು ವರ್ಷಗಳು ಕಳೆದು 2010ರಲ್ಲಿ 10409 ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
2019ರಲ್ಲಿ 10958 ಮಂದಿ ರಸ್ತೆ ಅಪಘಾತದಿಂದ ಮೃತಪಟ್ಟರೆ, ಈ ಸಂಖ್ಯೆ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅಂದರೆ 2020ರಲ್ಲಿ ಕೊಂಚ(9760) ಇಳಿಕೆಯಾಗಿದೆ. ಕೋವಿಡ್ ಪೂರ್ವಕ್ಕಿಂತ ಸರಿಸುಮಾರು ಒಂದು ಸಾವಿರ ಆಸುಪಾಸಿನಷ್ಟು ಸಾವಿನ ಪ್ರಮಾಣ ಇಳಿಕೆಯಾಗಿದೆ. ಆದರೆ ಅದಾದ ಒಂದು ವರ್ಷದಲ್ಲೇ ರಸ್ತೆ ಅಪಘಾತ ಸಾವು ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2021ರಲ್ಲಿ 10038, 2023ರಲ್ಲಿ 12,321 ರಸ್ತೆ ಅಪಘಾತ ಸಾವು ಪ್ರಕರಣಗಳು ದಾಖಲಾಗಿವೆ.

ಎನ್‌ಸಿಆರ್‌ಬಿಯಲ್ಲಿ 2024ರ ಡೇಟಾವನ್ನು ಉಲ್ಲೇಖಿಸಲಾಗಿಲ್ಲ. ಆದರೆ ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 2023ರ ಆಗಸ್ಟ್ ತಿಂಗಳಲ್ಲಿ ವಿಧಾನಸಭೆಯಲ್ಲಿ ನೀಡಿರುವ ದತ್ತಾಂಶ ಪ್ರಕಾರ 2024ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿನ ಪ್ರಮಾಣ(10,319) ಕೊಂಚ ಇಳಿಕೆಯಾಗಿದೆ. ಹಾಗೆಯೇ 2025ರ ಆಗಸ್ಟ್‌ವರೆಗೆ 5,975 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ ಸಾವಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆ ಕಂಡುಬಂದಿಲ್ಲ.
ಇನ್ನು ದೇಶದಲ್ಲಿ ಒಟ್ಟು ದಾಖಲಾದ ರಸ್ತೆ ಅಪಘಾತ ಸಾವು ಪ್ರಕರಣಗಳಲ್ಲಿ ರಾಜ್ಯದ ಪಾಲು 2000ಕ್ಕೆ ಹೋಲಿಸಿದರೆ 2023ರ ವೇಳೆಗೆ ಗಣನೀಯವಾಗಿ ಏರಿಕೆಯಾಗಿದೆ. 2000ರಲ್ಲಿ ರಾಜ್ಯದಲ್ಲಿ ಶೇ.2.98 ಸಾವು ಪ್ರಕರಣಗಳು ದಾಖಲಾಗಿದ್ದವು. ಆದರೆ 2023ರಲ್ಲಿ ಈ ಸಾವು ಪ್ರಮಾಣ ಶೇ.5.18ಕ್ಕೆ ಏರಿಕೆಯಾಗಿದೆ.
ಇನ್ನು 2000ರಿಂದ 2024ರವರೆಗಿನ ಲಿಂಗವಾರು ಅಂಕಿ ಅಂಶವನ್ನು ಗಮನಿಸಿದಾಗ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಪುರುಷರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ 2024ರವರೆಗೂ ಶೇ.85ರಷ್ಟು ಪುರುಷರು, ಶೇ.15ರಷ್ಟು ಮಹಿಳೆಯರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಅಧಿಕ ರಸ್ತೆ ಅಪಘಾತ, ಸಾವು?
ಎನ್‌ಸಿಆರ್‌ಬಿ ಡೇಟಾ ಪ್ರಕಾರ 2023ರಲ್ಲಿ ರಾಜ್ಯದಲ್ಲೇ ಅಧಿಕ ರಸ್ತೆ ಅಪಘಾತ ಪ್ರಕರಣಗಳು ಬೆಂಗಳೂರು ನಗರದಲ್ಲಿ ನಡೆದಿದೆ. ಆದರೆ ರಸ್ತೆ ಅಪಘಾತ ಸಾವು ಪ್ರಕರಣಗಳ ಶೇಕಡವಾರು ಲೆಕ್ಕಾಚಾರ ಮಾಡಿದಾಗ ಉಳಿದೆಲ್ಲ ಜಿಲ್ಲೆಗಳಿಗಿಂತ ಕಡಿಮೆ ಸಾವು ಬೆಂಗಳೂರಿನಲ್ಲಿ ನಡೆದಿದೆ. 2023ರಲ್ಲಿ ಬೆಂಗಳೂರು ನಗರದಲ್ಲಿ 4,974 ರಸ್ತೆ ಅಪಘಾತದಲ್ಲಿ 915 ಮಂದಿ ಮೃತಪಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿರುವ ತುಮಕೂರು ಜಿಲ್ಲೆಯಲ್ಲಿ 2601 ರಸ್ತೆ ಅಪಘಾತಗಳು ದಾಖಲಾಗಿದ್ದು, 783 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು ನಗರ ಮತ್ತು ತುಮಕೂರಿನಲ್ಲಿ ರಸ್ತೆ ಅಪಘಾತ ಸಾವು ಅಂಕಿ-ಅಂಶವನ್ನು ನೋಡಿದಾಗ ಬೆಂಗಳೂರು ನಗರದಲ್ಲೇ ಅಧಿಕ ಸಾವು ಎಂದೆನಿಸುತ್ತದೆ. ಆದರೆ ಒಟ್ಟು ಅಪಘಾತಕ್ಕೂ ಸಾವಿನ ಪ್ರಮಾಣಕ್ಕೂ ತುಲನೆ ಮಾಡಿದಾಗ ಬೆಂಗಳೂರು ನಗರಕ್ಕಿಂತ ತುಮಕೂರಿನಲ್ಲೇ ಅಧಿಕ ರಸ್ತೆ ಅಪಘಾತ ಸಾವು ಸಂಭವಿಸಿರುವುದು ಗಮನಕ್ಕೆ ಬರುತ್ತದೆ. ಬೆಂಗಳೂರು ನಗರದಲ್ಲಿ 2023ರಲ್ಲಿ ನಡೆದ ಒಟ್ಟು ರಸ್ತೆ ಅಪಘಾತದಲ್ಲಿ ಶೇ.18.4ರಷ್ಟು ಮಂದಿ ಮೃತಪಟ್ಟರೆ, ತುಮಕೂರಿನಲ್ಲಿ ನಡೆದ ಅಪಘಾತದಲ್ಲಿ ಶೇ. 30.10ರಷ್ಟು ಮಂದಿ ಸಾವನ್ನಪ್ಪಿದ್ದಾರೆ.

ಇದನ್ನು ಓದಿದ್ದೀರಾ? ಬೆಳಗಾವಿ | ಭೀಕರ ರಸ್ತೆ ಅಪಘಾತ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು
ನಾವಿಲ್ಲಿ ಟಾಪ್ 9 ಜಿಲ್ಲೆಗಳ ದತ್ತಾಂಶವನ್ನು ಉಲ್ಲೇಖಿಸಿದ್ದೇವೆ. ಈ ದತ್ತಾಂಶದ ಪ್ರಕಾರ ರಾಜ್ಯದಲ್ಲಿ ಅಧಿಕ ರಸ್ತೆ ಅಪಘಾತ ಪ್ರಕರಣಗಳು ಬೆಂಗಳೂರು ನಗರದಲ್ಲಿ ನಡೆದಿದ್ದರೂ, ರಸ್ತೆ ಅಪಘಾತ ಸಾವಿನ ಪ್ರಮಾಣ ಅಧಿಕವಾಗಿರುವುದು ಬೆಳಗಾವಿ ಜಿಲ್ಲೆಯಲ್ಲಿ. 2023ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 2086 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 800 ಮಂದಿ ಮೃತಪಟ್ಟಿದ್ದಾರೆ. ಅಂದರೆ ಒಟ್ಟು ರಸ್ತೆ ಅಪಘಾತದ ಶೇ. 38.35ರಷ್ಟು ಸಾವು ಸಂಭವಿಸಿದೆ.
ಬೆಂಗಳೂರು ನಗರ ಪ್ರದೇಶವಾದ ಕಾರಣ ಸಾಕಷ್ಟು ಆಸ್ಪತ್ರೆಗಳಿವೆ, ರಸ್ತೆ ಅಪಘಾತಕ್ಕೆ ಒಳಗಾದವರಿಗೆ ಸಕಾಲದಲ್ಲಿ ತುರ್ತು ಚಿಕಿತ್ಸೆಯೂ ಲಭಿಸುತ್ತಿವೆ ಎಂದು ಕೊಂಡರೆ, ಉಳಿದ ಕಡೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರಲು ಏನು ಕಾರಣ ಎಂಬುದನ್ನು ಕಂಡುಕೊಳ್ಳಬೇಕಿದೆ.
ದತ್ತಾಂಶ: ಸಂಜು ಎನ್ ಜೆ, ಈದಿನ ರಿಸರ್ಚ್ ಟೀಮ್




