ಮಾತೃತ್ವ ರಜೆ ಒಂದು ವರ್ಷಕ್ಕೆ ಏರಿಸಿ: ಇದು ಕರುಣೆಯಲ್ಲ, ಮಹಿಳೆಯರ ಘನತೆಯ ಹಕ್ಕು

Date:

ನಿಯಮಗಳಡಿಯಲ್ಲಿ ನೀಡಬೇಕಾದ ಸೌಲಭ್ಯಗಳನ್ನೇ ಸರಿಯಾದ ನೀಡದ ಕಾರಣದಿಂದಾಗಿ ಮಹಿಳೆ ತನ್ನ ವೃತ್ತಿ ಜೀವನದ ಕನಸನ್ನೇ ಬದಿಗೊತ್ತಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಿರುವಾಗ ಒಂದು ವರ್ಷದ ಮಾತೃತ್ವ ರಜೆ ಅತ್ಯಗತ್ಯ. ಮಾತೃತ್ವ ರಜೆ ಮಹಿಳೆಯರ ಘನತೆ, ಆರೋಗ್ಯದ ಆಧಾರದಲ್ಲಿ ಮೂಲಭೂತ ಹಕ್ಕು.

‘ಹೆರಿಗೆ ಎಂಬುದು ಮಹಿಳೆಯ ಮತ್ತೊಂದು ಜನನ’ ಎಂದರೆ ತಪ್ಪಾಗಲಾರದು. ಇದು ಬರೀ ಒಂದು ದೈಹಿಕ ಪ್ರಕ್ರಿಯೆಯಲ್ಲ, ಇಡೀ ಕುಟುಂಬ ವ್ಯವಸ್ಥೆಯಲ್ಲಾಗುವ ಬದಲಾವಣೆ. ಹೆರಿಗೆ ಬಳಿಕ ಮಹಿಳೆಯ ಮಾನಸಿಕ, ದೈಹಿಕ ಆರೋಗ್ಯದಲ್ಲಿ ಅಗಾಧವಾದ ಬದಲಾವಣೆ ಉಂಟಾಗುತ್ತದೆ. ಹೀಗಿರುವಾಗ ಹೆರಿಗೆ ಬಳಿಕ ವಿಶ್ರಾಂತಿ ಪಡೆಯುವುದು ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಬಹಳ ಅತ್ಯಗತ್ಯ. ಇದಕ್ಕಾಗಿಯೇ ಮಹಿಳೆಯರಿಗೆ ಮಾತೃತ್ವ ರಜೆಯನ್ನು ನೀಡಲಾಗುತ್ತದೆ. ಆದರೆ ಆರು ತಿಂಗಳ ಈ ರಜೆ ಮಹಿಳೆಯ ವಿಶ್ರಾಂತಿಗೆ ಸಾಕಾಗುತ್ತದೆಯೇ, ದೇಹದ ಬದಲಾವಣೆಗೆ ಮಾನಸಿಕವಾಗಿ ಒಗ್ಗಿಕೊಳ್ಳಲು ಪರ್ಯಾಪ್ತವೇ? ಖಂಡಿತವಾಗಿ ಇಲ್ಲ.

ಸದ್ಯ ಆರು ತಿಂಗಳುಗಳ ಮಾತೃತ್ವ ರಜೆಯನ್ನು ನೀಡಲಾಗುತ್ತದೆ. ಆದರೆ ಈ ರಜೆಯನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕು ಎಂಬುದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸೇರಿದಂತೆ ಹಲವು ಮಹಿಳಾಪರ ಸಂಘಟನೆಗಳ, ಸಂಸ್ಥೆಗಳ ಆಗ್ರಹವಾಗಿದೆ. ಆದರೆ ಇಂದಿಗೂ ಹಲವು ಸಂಸ್ಥೆಗಳು ಆರು ತಿಂಗಳುಗಳ ಮಾತೃತ್ವ ರಜೆಯನ್ನೂ ನೀಡದಿರುವುದು ಖೇದಕರ.

ಇದನ್ನು ಓದಿದ್ದೀರಾ? ಮೂರನೇ ಮಗುವಿಗೆ ಜನ್ಮ ನೀಡಿದರೆ 50,000 ರೂ., ಗಂಡು ಮಗು ಜನಿಸಿದರೆ ಹಸು ನೀಡುತ್ತೇವೆ: ಆಂಧ್ರಪ್ರದೇಶ ಸಂಸದ ಘೋಷಣೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸದ್ಯ ನಿಯಮ ಏನು ಹೇಳುತ್ತದೆ?

ದೇಶದಲ್ಲಿ ಮಾತೃತ್ವ ಪ್ರಯೋಜನ ಕಾಯಿದೆ, 1961 (Maternity Benefit Act, 1961) ಮತ್ತು 2017ರ ತಿದ್ದುಪಡಿಯ ಅನ್ವಯ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಪೂರ್ಣ ವೇತನದೊಂದಿಗೆ ಮಾತೃತ್ವ ರಜೆಯನ್ನು ಪಡೆಯಬಹುದಾಗಿದೆ. ಮೊದಲ ಮತ್ತು ಎರಡನೇ ಮಗು ಜನಿಸಿದಾಗ 26 ವಾರಗಳ ಅಂದರೆ ಸುಮಾರು ಆರು ತಿಂಗಳು ರಜೆಯನ್ನು ಮಹಿಳೆ ಪಡೆಯಬಹುದು. ಮೂರನೇ ಮತ್ತು ನಂತರದ ಮಗುವಿಗೆ ಜನ್ಮ ನೀಡಿದರೆ ಮೂರು ತಿಂಗಳ ರಜೆಯನ್ನು ಪಡೆಯಲು ಮಹಿಳೆಯರು ಅರ್ಹರಾಗಿದ್ದಾರೆ.

ಒಂದು ವೇಳೆ ಮೂರು ತಿಂಗಳೊಳಗಿನ ಮಗುವನ್ನು ದತ್ತು ಪಡೆದರೆ ಅಥವಾ ಬಾಡಿಗೆ ತಾಯ್ತನ (surrogacy) ಮೂಲಕ ಮಗುವನ್ನು ಪಡೆಯುವ ತಾಯಂದಿರು ಮಗುವನ್ನು ಹಸ್ತಾಂತರಿಸಿದ ದಿನಾಂಕದಿಂದ 12 ವಾರಗಳ ಅಂದರೆ ಸರಿಸುಮಾರು ಮೂರು ತಿಂಗಳು ರಜೆ ಪಡೆಯಲು ಅರ್ಹರಾಗಿದ್ದಾರೆ. ಹಾಗೆಯೇ ಗರ್ಭಪಾತ ಮಾಡಿಸಿಕೊಳ್ಳುವುದಾದರೆ ಅಥವಾ ಗರ್ಭಪಾತವಾದರೆ ವೈದ್ಯಕೀಯ ಪುರಾವೆಗಳೊಂದಿಗೆ ಆರು ವಾರಗಳ ವೇತನ ಸಹಿತ ರಜೆಯನ್ನು ಪಡೆಯಲು ಮಹಿಳೆಯರು ಅರ್ಹರಾಗಿದ್ದಾರೆ.

ಒಂದು ಸಂಸ್ಥೆಯಲ್ಲಿ 12 ತಿಂಗಳಲ್ಲಿ ಕನಿಷ್ಠ 80 ದಿನಗಳ ಕಾಲ ಕೆಲಸ ಮಾಡಿದ ಮಹಿಳೆಯರು ಮಾತ್ರ ಮಾತೃತ್ವ ರಜೆಗೆ ಅರ್ಹರಾಗಿರುತ್ತಾರೆ. 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಗರ್ಭಾವಸ್ಥೆಯಲ್ಲಿ ಅಥವಾ ಮಾತೃತ್ವ ರಜೆಯ ಅವಧಿಯಲ್ಲಿ ಮಹಿಳಾ ಉದ್ಯೋಗಿಯನ್ನು ಯಾವುದೇ ಸಂಸ್ಥೆ ವಜಾ ಮಾಡುವುದು ಕಾನೂನುಬಾಹಿರವಾಗಿದೆ ಮತ್ತು ಗಂಭೀರ ಅಪರಾಧವಾಗಿದೆ.

ಯಾವ ದೇಶಗಳಲ್ಲಿ ಎಷ್ಟು ರಜೆ ಇದೆ?

ಅಂತಾರಾಷ್ಟ್ರೀಯ ಶ್ರಮ ಸಂಸ್ಥೆ (ILO), ಪ್ರಕಾರ 120ಕ್ಕೂ ಹೆಚ್ಚು ದೇಶಗಳು ವೇತನ ಸಹಿತ ಮಾತೃತ್ವ ರಜೆಯನ್ನು ನೀಡುತ್ತವೆ. ಮುಖ್ಯವಾಗಿ ಯೂರೋಪಿಯನ್ ದೇಶಗಳು ಮತ್ತು ಕೆಲವು ಏಷ್ಯಾ ಮತ್ತು ಉತ್ತರ ಅಮೆರಿಕ ದೇಶಗಳು ಆರು ತಿಂಗಳಿಗಿಂತ ಅಧಿಕ ಮಾತೃತ್ವ ರಜೆಯನ್ನು ನೀಡುತ್ತದೆ. ವಿಶ್ವದಲ್ಲೇ ಅತ್ಯಧಿಕ ಮಾತೃತ್ವ ರಜೆ ನೀಡುವುದು ರೊಮೇನಿಯಾ. ಈ ದೇಶ 104 ವಾರಗಳು ಅಂದರೆ ಬರೋಬ್ಬರಿ ಎರಡು ವರ್ಷಗಳ ಕಾಲ ಮಾತೃತ್ವ ರಜೆ ನೀಡುತ್ತದೆ. ಮೊದಲ 126 ದಿನಗಳು 85% ವೇತನ, ನಂತರ ಕನಿಷ್ಠ ವೇತನ ಸಹಿತ ರಜೆ ನೀಡುತ್ತದೆ. ದಕ್ಷಿಣ ಕೊರಿಯಾ 91 ವಾರಗಳ ಮಾತೃತ್ವ ರಜೆಯನ್ನು ನೀಡುತ್ತದೆ. ಮೊದಲ 90 ದಿನಗಳು ಪೂರ್ಣ ವೇತನ, ನಂತರ ಭಾಗಶಃ ವೇತನವನ್ನು ನೀಡುತ್ತದೆ. ಪೋಲ್ಯಾಂಡ್, ಬಲ್ಗೇರಿಯಾ, ಸ್ವೀಡನ್, ನಾರ್ವೆ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಐಸ್‌ಲ್ಯಾಂಡ್ ದೇಶಗಳಲ್ಲಿ ಆರು ತಿಂಗಳುಗಳಿಗಿಂತ ಅಧಿಕ ವೇತನ ಸಹಿತ ಮಾತೃತ್ವ ರಜೆಯನ್ನು ನೀಡಲಾಗುತ್ತದೆ. ಇದೇ ರೀತಿ ಭಾರತದಲ್ಲಿಯೂ ಒಂದು ವರ್ಷ ಮಾತೃತ್ವ ರಜೆ ನೀಡಬೇಕು ಎಂಬುದು ಹಲವು ಮಹಿಳಾಪರ ಹೋರಾಟಗಾರರ ಆಗ್ರಹವಾಗಿದೆ.

ಇದನ್ನು ಓದಿದ್ದೀರಾ? ಅತಿಥಿ ಉಪನ್ಯಾಸಕರ ಗೌರವಧನ 5ರಿಂದ 8 ಸಾವಿರ ಹೆಚ್ಚಳಕ್ಕೆ ಸಿಎಂ ಸಮ್ಮತಿ: ಮುಷ್ಕರ ಹಿಂಪಡೆಯಲು ಮನವಿ

ಈ ಬಗ್ಗೆ ಈದಿನ. ಕಾಮ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತೆ, ಸಂಶೋಧಕಿ, ಆಲ್ಟರ್ನೇಟಿವ್ ಲಾ ಫೋರಂನ(ಎಎಲ್‌ಎಫ್‌) ಅಶ್ವಿನಿ ಬೋಧ್, “ಮಾತೃತ್ವ ರಜೆಯನ್ನು ಒಂದು ವರ್ಷಕ್ಕೆ ಏರಿಸಬೇಕು ಎಂಬ ಆಗ್ರಹ ಒಪ್ಪುವಂತದ್ದು. ಹೆತ್ತ ಬಳಿಕ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತದೆ. ಮಹಿಳೆಯ ಆರೋಗ್ಯದ ದೃಷ್ಟಿಯಿಂದ ದೀರ್ಘಾವಧಿಯ ಆರಾಮ ಅತ್ಯಗತ್ಯ. ಅದರ ಜತೆಗೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ಸೌಲಭ್ಯ ಲಭ್ಯವಾಗುವಂತೆ ಮಾಡುವುದು ಮುಖ್ಯ. ಹಲವು ಫಾಕ್ಟರಿ, ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಆರು ತಿಂಗಳ ಮಾತೃತ್ವ ರಜೆಯೂ ಲಭ್ಯವಾಗುತ್ತಿಲ್ಲ. ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಕೆಲಸದಿಂದ ತೆಗೆದುಹಾಕಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಜತೆಗೆ ಈ ರಜೆಯು ಮಹಿಳೆಯ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿರಬೇಕೇ ಹೊರತು, ಮಹಿಳೆ ಮಗುವನ್ನು ನೋಡಿಕೊಳ್ಳಲು ನೀಡುವ ರಜೆ ಎಂದಾಗಬಾರದು. ಮಗುವಿನ ಲಾಲನೆ-ಪಾಲನೆ ಇಡೀ ಕುಟುಂಬದ ಜವಾಬ್ದಾರಿ. ಮಹಿಳೆಯೊಬ್ಬಳ ಹೊಣೆಯಲ್ಲ. ಈ ನಿಟ್ಟಿನಲ್ಲಿ ಪಿತೃತ್ವ ರಜೆಯನ್ನೂ ಹೆಚ್ಚಿಸಬೇಕು. ಮಗುವನ್ನು ನೋಡಿಕೊಳ್ಳುವುದು, ಮಗುವಿನ ಆರೈಕೆ ಮಾಡುವುದು ತಂದೆಯ ಜವಾಬ್ದಾರಿಯೂ ಆಗಿದೆ. ಈ ಸೂಕ್ಷ್ಮತೆ ಇಂದಿನ ಸಮಾಜದಲ್ಲಿ ಅತಿ ಮುಖ್ಯ” ಎಂದು ಅಭಿಪ್ರಾಯಿಸಿದ್ದಾರೆ.

ಮಾತೃತ್ವ ರಜೆ ನಮ್ಮ ಹಕ್ಕೆಂದು ತಿಳಿಯದ ಮಹಿಳೆಯರು

ಮಾತೃತ್ವ ರಜೆ ಮಾತ್ರವಲ್ಲದೆ 50 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಕಡ್ಡಾಯವಾಗಿ ಶಿಶುಪಾಲನಾ ಕೇಂದ್ರಗಳನ್ನು ಒದಗಿಸಬೇಕು ಮತ್ತು ತಾಯಂದಿರಿಗೆ ದಿನಕ್ಕೆ ನಾಲ್ಕು ಬಾರಿ ಭೇಟಿ ನೀಡಲು ಅವಕಾಶ ನೀಡಬೇಕು ಎಂದೂ ನಿಯಮ ಹೇಳುತ್ತದೆ. ಮಾತೃತ್ವ ರಜೆಯ ನಂತರ ಕೆಲಸದ ಸ್ವರೂಪಕ್ಕೆ ಅನುಗುಣವಾಗಿ ವರ್ಕ್ ಫ್ರಮ್ ಹೋಮ್ ನೀಡುವ ಆಯ್ಕೆಯನ್ನು ಪರಿಗಣಿಸಬಹುದು ಎಂದು ನಿಯಮ ಹೇಳುತ್ತದೆ. ಆದರೆ ಹಲವು ಸಂಸ್ಥೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಇನ್ನು ಅದೆಷ್ಟೋ ಮಹಿಳೆಯರಿಗೆ ಮಾತೃತ್ವ ರಜೆ ನಮ್ಮ ಹಕ್ಕು ಎಂದು ತಿಳಿದೇ ಇಲ್ಲ.

ನಿಯಮಗಳಡಿಯಲ್ಲಿ ನೀಡಬೇಕಾದ ಸೌಲಭ್ಯಗಳನ್ನೇ ಸರಿಯಾಗಿ ನೀಡದ ಕಾರಣದಿಂದಾಗಿ ಮಹಿಳೆ ತನ್ನ ವೃತ್ತಿ ಜೀವನದ ಕನಸನ್ನೇ ಬದಿಗೊತ್ತಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಮಗುವನ್ನು ನೋಡಿಕೊಳ್ಳುವುದು ಹೆತ್ತ ಮಹಿಳೆಯ ಜವಾಬ್ದಾರಿ ಎಂದುಕೊಳ್ಳುವ ಈ ಪುರುಷ ಪ್ರಧಾನ ಸಮಾಜದಲ್ಲಿ ಕುಟುಂಬದ ಒತ್ತಡದಿಂದಾಗಿ ಮಹಿಳೆಯರು ಉದ್ಯೋಗವನ್ನೇ ತೊರೆಯಬೇಕಾದ ಸಂದಿಗ್ಧ ಸ್ಥಿತಿಯನ್ನೂ ಎದುರಿಸಬೇಕಾಗುತ್ತಿದೆ. ಕೆಲವು ಸಂದರ್ಭದಲ್ಲಿ ತಾಯಿ ಮಗುವಿಗೆ ನೀಡಬೇಕಾದ ಆರೈಕೆಯ ಹೊಣೆಗೆ ಸಿಲುಕಿ ಅದೆಷ್ಟೋ ತಾಯಂದಿರು ಉದ್ಯೋಗ ಬಿಡಬೇಕಾಗುತ್ತದೆ. ಹೀಗಿರುವಾಗ ಒಂದು ವರ್ಷದ ಮಾತೃತ್ವ ರಜೆ ಅತ್ಯಗತ್ಯ. ಮಾತೃತ್ವ ರಜೆ ಮಹಿಳೆಯರ ಘನತೆ, ಆರೋಗ್ಯದ ಆಧಾರದಲ್ಲಿ ಮೂಲಭೂತ ಹಕ್ಕು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...