“ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಭಾರತಕ್ಕೆ ನಿಜವಾಗಿಯೂ ಯಾವುದೇ ಕಾಳಜಿಯಿಲ್ಲ. ಭಾರತದ ಕಳಕಳಿ ಏನೇ ಇದ್ದರೂ ಅದು ಕೇವಲ ಶೇಖ್ ಹಸೀನಾ ಮತ್ತು ಅವಾಮಿ ಲೀಗ್‌ಗೆ ಸೀಮಿತವಾಗಿದೆ. ದಶಕಗಳಿಂದ ಭಾರತವು ಬಾಂಗ್ಲಾದೇಶದ ಜನರನ್ನು ಕಡೆಗಣಿಸಿ, ಕೇವಲ ಒಂದು ಪಕ್ಷದ ಸ್ನೇಹಕ್ಕೆ ಜೋತುಬಿದ್ದಿದೆ,” ಎಂದು ಬಾಂಗ್ಲಾದೇಶ್ ನ್ಯಾಶನಲ್ ಪಾರ್ಟಿಯ(ಬಿಎನ್‌ಪಿ) ಹಿರಿಯ ನಾಯಕ ಹಾಗೂ ನೂತನ ಸಂಸದ ಗಯೇಶ್ವರ್ ಚಂದ್ರ ರಾಯ್ ನೇರ ವಾಗ್ದಾಳಿ ನಡೆಸಿದ್ದಾರೆ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್‌ಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಗಳಿಸಿ ಅಧಿಕಾರ ಹಿಡಿಯಲಿರುವ ಹೊತ್ತಿನಲ್ಲೇ, ಭಾರತದ ಪ್ರಮುಖ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಢಾಕಾ-3 ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಗಯೇಶ್ವರ್ ರಾಯ್, ಪಕ್ಷದ ಅತ್ಯುನ್ನತ ಸ್ಥಾಯಿ ಸಮಿತಿಯ ಸದಸ್ಯರೂ ಹೌದು. ಅವರು ತಮ್ಮ ಸಂದರ್ಶನದಲ್ಲಿ ಹಲವು ಮುಖ್ಯ ಸಂಗತಿಗಳನ್ನು ವ್ಯಕ್ತಪಡಿಸಿದ್ದಾರೆ.
‘ಹಿಂದೂ’ ಎಂದರೆ ‘ಆವಾಮಿ ಲೀಗ್’ ಎಂಬ ತಪ್ಪು ಕಲ್ಪನೆ
ಭಾರತದ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, “ಭಾರತವು ಬಾಂಗ್ಲಾದೇಶದ ಹಿಂದೂಗಳನ್ನು ಕೇವಲ ‘ಆವಾಮಿ ಲೀಗ್‌ನ ಮತಬ್ಯಾಂಕ್’ ಎಂಬ ದೃಷ್ಟಿಕೋನದಿಂದ ನೋಡುತ್ತದೆ. ಇಲ್ಲಿನ ಹಿಂದೂಗಳು ಆವಾಮಿ ಲೀಗ್ ಬೆಂಬಲಿಗರು ಎಂಬ ಹಣೆಪಟ್ಟಿಯನ್ನು ಭಾರತವೇ ಕಟ್ಟಿದೆ. ಹೀಗಾಗಿ, ಇಲ್ಲಿ ಆವಾಮಿ ಲೀಗ್ ಅಧಿಕಾರ ಕಳೆದುಕೊಂಡಾಗಲೆಲ್ಲ ಭಾರತಕ್ಕೆ ಹಿಂದೂಗಳ ನೆನಪಾಗುತ್ತದೆ. ಶೇಖ್ ಹಸೀನಾ ಅಧಿಕಾರದಲ್ಲಿದ್ದಾಗ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೂ ಭಾರತ ಮೌನವಾಗಿರುತ್ತದೆ. ಆದರೆ, ಅಧಿಕಾರ ಬದಲಾದ ತಕ್ಷಣ ಮೊಸಳೆ ಕಣ್ಣೀರು ಸುರಿಸುತ್ತದೆ,” ಎಂದು ರಾಯ್ ಹರಿಹಾಯ್ದರು.
ದಾಳಿಗಳು ರಾಜಕೀಯ ಪ್ರೇರಿತ, ಕೋಮುಗಲಭೆಯಲ್ಲ
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದಿದೆ ಎನ್ನಲಾದ ಹಲ್ಲೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದನ್ನು ಕೋಮುಗಲಭೆ ಎಂದು ಕರೆಯಲು ನಿರಾಕರಿಸಿದರು. “ದೇಶದಲ್ಲಿ ನಡೆದಿರುವ ಅಹಿತಕರ ಘಟನೆಗಳು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿವೆ ಹೊರತು ಧರ್ಮದ ಆಧಾರದ ಮೇಲಲ್ಲ. ಆವಾಮಿ ಲೀಗ್‌ನ ಕಾರ್ಯಕರ್ತರು ಎನ್ನುವ ಕಾರಣಕ್ಕೆ ಕೆಲವರ ಮೇಲೆ ಹಲ್ಲೆಯಾಗಿರಬಹುದು, ಅವರು ಹಿಂದೂಗಳಾಗಿರಲಿ ಅಥವಾ ಮುಸ್ಲಿಮರಾಗಿರಲಿ, ಅದು ರಾಜಕೀಯ ಸಂಘರ್ಷ. ಆದರೆ, ಭಾರತೀಯ ಮಾಧ್ಯಮಗಳು ಇದನ್ನು ‘ಹಿಂದೂಗಳ ಮೇಲಿನ ದಾಳಿ’ ಎಂದು ಬಿಂಬಿಸಿ ಸುಳ್ಳು ನಿರೂಪಣೆ ಸೃಷ್ಟಿಸುತ್ತಿವೆ,” ಎಂದು ಅವರು ಆರೋಪಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್ ಬಲ, ಮಾಧ್ಯಮಗಳ ಬೆಂಬಲದಿಂದ ಬಿಜೆಪಿ ಬದುಕಿದೆಯೇ?
ಬಿಎನ್‌ಪಿ ಆಳ್ವಿಕೆಯಲ್ಲಿ ಹಿಂದೂಗಳು ಸುರಕ್ಷಿತ
“ಬಿಎನ್‌ಪಿ ಪಕ್ಷವು ಕೋಮುವಾದಿ ಎಂಬ ಹಣೆಪಟ್ಟಿಯನ್ನು ಭಾರತೀಯ ಮಾಧ್ಯಮಗಳು ಕಟ್ಟಿಕೊಟ್ಟಿವೆ. ಆದರೆ, ಇತಿಹಾಸವನ್ನು ಗಮನಿಸಿದರೆ ಆವಾಮಿ ಲೀಗ್ ಆಳ್ವಿಕೆಗಿಂತ ಬಿಎನ್‌ಪಿ ಆಳ್ವಿಕೆಯಲ್ಲೇ ಹಿಂದೂಗಳು ಹೆಚ್ಚು ಸುರಕ್ಷಿತವಾಗಿದ್ದರು ಎಂಬುದು ಸಾಬೀತಾಗುತ್ತದೆ. ನಾನು ಬಿಎನ್‌ಪಿಯ ಹಿರಿಯ ನಾಯಕನಾಗಿದ್ದು, ಹಿಂದೂ ಸಮುದಾಯದ ಪ್ರಮುಖ ಪ್ರತಿನಿಧಿಯಾಗಿದ್ದೇನೆ. ನಮ್ಮ ಪಕ್ಷದ ಪ್ರಣಾಳಿಕೆ ಮತ್ತು ಸಿದ್ಧಾಂತವು ಎಲ್ಲಾ ಧರ್ಮೀಯರಿಗೂ ಸಮಾನ ಹಕ್ಕು ಮತ್ತು ರಕ್ಷಣೆ ನೀಡುವುದಾಗಿದೆ” ಎಂದು ಗಯೇಶ್ವರ್ ರಾಯ್ ಪ್ರತಿಪಾದಿಸಿದರು.
ಭಾರತಕ್ಕೆ 18 ಕೋಟಿ ಜನರ ಸ್ನೇಹ ಬೇಕಿಲ್ಲವೇ?
ಭಾರತದ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಭಾರತವು ತನ್ನ ನೆರೆಹೊರೆಯ ಸಂಬಂಧವನ್ನು ಕೇವಲ ಒಬ್ಬ ವ್ಯಕ್ತಿ (ಶೇಖ್ ಹಸೀನಾ) ಅಥವಾ ಒಂದು ಕುಟುಂಬದ ಸುತ್ತ ಹೆಣೆದುಕೊಂಡಿದೆ. ಬಾಂಗ್ಲಾದೇಶದ 18 ಕೋಟಿ ಜನರ ಭಾವನೆಗಳಿಗೆ ಭಾರತ ಬೆಲೆ ನೀಡಿಲ್ಲ. ಇಲ್ಲಿನ ಬಹುಸಂಖ್ಯಾತ ಜನತೆ ಬಯಸಿದ ಬದಲಾವಣೆಯನ್ನು ಭಾರತ ಗೌರವಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಅಂತಿಮ. ಭಾರತವು ಇನ್ನು ಮುಂದಾದರೂ ವ್ಯಕ್ತಿಗತ ಸ್ನೇಹವನ್ನು ಬಿಟ್ಟು, ದೇಶಗಳ ನಡುವಿನ ಸ್ನೇಹಕ್ಕೆ ಆದ್ಯತೆ ನೀಡಬೇಕು,” ಎಂದು ಸಲಹೆ ನೀಡಿದರು.
ಗಡಿ ಹತ್ಯೆಗಳ ಬಗ್ಗೆ ಮೌನವೇಕೆ?
ಗಡಿಯಲ್ಲಿ ಬಿಎಸ್‌ಎಫ್‌ನಿಂದ ಬಾಂಗ್ಲಾದೇಶಿ ಪ್ರಜೆಗಳ ಹತ್ಯೆಯಾಗುತ್ತಿರುವ ವಿಷಯವನ್ನು ಪ್ರಸ್ತಾಪಿಸಿದ ಅವರು, “ಪ್ರತಿವರ್ಷ ಗಡಿಯಲ್ಲಿ ನೂರಾರು ಬಾಂಗ್ಲಾದೇಶಿಗರು ಭಾರತೀಯ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಭಾರತಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ. ಬಾಂಗ್ಲಾದೇಶದ ಜನರ ಜೀವಕ್ಕೆ ಬೆಲೆ ಇಲ್ಲವೇ? ಈ ವಿಷಯದಲ್ಲಿ ಭಾರತದ ಮೌನ ಮತ್ತು ನಿರ್ಲಕ್ಷ್ಯವೇ ಇಲ್ಲಿ ಭಾರತ ವಿರೋಧಿ ಭಾವನೆ ಬೆಳೆಯಲು ಮುಖ್ಯ ಕಾರಣ” ಎಂದು ಅಭಿಪ್ರಾಯಪಟ್ಟರು.
ಮುಂದಿನ ಹಾದಿ
ಮುಂಬರುವ ಬಿಎನ್‌ಪಿ ಸರ್ಕಾರವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ ಎಂದ ಅವರು, “ನಾವು ಭಾರತದೊಂದಿಗೆ ಶತ್ರುತ್ವ ಬಯಸುವುದಿಲ್ಲ. ಆದರೆ, ಆ ಸಂಬಂಧ ಪರಸ್ಪರ ಗೌರವ ಮತ್ತು ಸಮಾನತೆಯ ಆಧಾರದ ಮೇಲೆ ಇರಬೇಕು. ಭಾರತವು ತನ್ನ ಹಳೆಯ ಕನ್ನಡಕವನ್ನು ಕಳಚಿ, ಹೊಸ ಬಾಂಗ್ಲಾದೇಶವನ್ನು ನೈಜವಾಗಿ ಅರ್ಥಮಾಡಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು.





