ಭಾರತದ ಅರ್ಥ ವ್ಯವಸ್ಥೆಯ 7.4% ಬೆಳವಣಿಗೆ ಅಂದಾಜು: ವಾಸ್ತವಕ್ಕೆ ಎಷ್ಟು ಹತ್ತಿರ?

Date:

GDP ಬೆಳವಣಿಗೆಯ ರಾಜಕೀಯ ಅರ್ಥವನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ. GDP ದರವು ಕೇವಲ ಆರ್ಥಿಕ ಸೂಚ್ಯಂಕವಲ್ಲ; ಅದು ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸುವ ರಾಜಕೀಯ ಸಾಧನವೂ ಹೌದು. ‘ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ’ ಎಂಬ ಚಿತ್ರಣ ಅಂತರರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸಲು, ಜಾಗತಿಕ ವೇದಿಕೆಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಉಪಯೋಗವಾಗುತ್ತದೆ.

ಕಳೆದ ಒಂದು ದಶಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ವಿಶ್ವ ಮಂಚದಲ್ಲಿ ನಿರಂತರವಾಗಿ ಗಮನ ಸೆಳೆದಿದೆ. ಕೇಂದ್ರ ಸರ್ಕಾರ 2025–26 ಆರ್ಥಿಕ ವರ್ಷಕ್ಕೆ ಭಾರತೀಯ ಆರ್ಥಿಕತೆ 7.4 ಪ್ರತಿಶತದ ದರದಲ್ಲಿ ಬೆಳೆಯಲಿದೆ ಎಂದು ಘೋಷಿಸಿರುವುದು ಈ ಬೆಳವಣಿಗೆ ಕಥನದ ಪ್ರಮುಖ ಭಾಗವಾಗಿದೆ. ಶೇ. 7.4ರಷ್ಟು ಬೆಳೆಯುವ ಸಾಧ್ಯತೆ ಇದೆ ಎಂದು ಸರ್ಕಾರ ಅಂದಾಜು ಮಾಡಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜು ವರದಿಯಲ್ಲಿ ಈ ಲೆಕ್ಕಾಚಾರವನ್ನು ನೀಡಲಾಗಿದೆ. 2024–25ರಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಶೇ. 6.5ರಷ್ಟು ಹೆಚ್ಚಾಗಿದ್ದು, ಪ್ರಸಕ್ತ ಹಣಕಾಸು ವರ್ಷ (2025–26ರಲ್ಲಿ) ದಲ್ಲಿ ಭಾರತದ ಆರ್ಥಿಕತೆ ಶೇ. 7.4ರ ಮಟ್ಟಕ್ಕೆ ಏರಬಹುದು ಎಂದು ಸರ್ಕಾರ ಅಂದಾಜಿಸಿದೆ. ಇದು ಪ್ರಪಂಚದ ಎಲ್ಲ ರಾಷ್ಟ್ರಗಳಿಗಿಂತಲೂ ಅತೀ ವೇಗದ ಬೆಳವಣಿಗೆ ದರ.

ಜಾಗತಿಕ ಆರ್ಥಿಕತೆಯು ಮಂದಗತಿ, ಭೌಗೋಳಿಕ–ರಾಜಕೀಯ ಅಸ್ಥಿರತೆ, ಅಮೆರಿಕದ ಟ್ಯಾರಿಫ್ ರಾಜಕೀಯ, ನಿರಂತರ ಹಣದುಬ್ಬರ ಮತ್ತು ಬಂಡವಾಳ ಹರಿವಿನ ಅನಿಶ್ಚಿತತೆಯ ನಡುವೆಯೇ ಸಾಗುತ್ತಿರುವ ಈ ಸಂದರ್ಭದಲ್ಲಿ, ಭಾರತ ಇಂತಹ ಉನ್ನತ ಬೆಳವಣಿಗೆ ದರವನ್ನು ಸಾಧಿಸುತ್ತಿದೆ ಎಂಬ ಹೇಳಿಕೆ ಸಹಜವಾಗಿಯೇ ಪ್ರಶಂಸೆಯ ಜೊತೆಗೆ ಸಂಶಯವನ್ನೂ ಹುಟ್ಟುಹಾಕುತ್ತದೆ. ಈ ಅಂದಾಜು ಎಷ್ಟು ವಾಸ್ತವಿಕ, ಅದು ಸಾಮಾನ್ಯ ಜನರ ಜೀವನದಲ್ಲಿ ಹೇಗೆ ಪ್ರತಿಬಿಂಬಿಸುತ್ತದೆ, ಮತ್ತು ಈ ಅಂಕಿ–ಅಂಶಗಳ ಹಿಂದೆ ಇರುವ ವಿಧಾನಶಾಸ್ತ್ರ ಹಾಗೂ ರಾಜಕೀಯ ಅರ್ಥವೇನು ಎಂಬ ಪ್ರಶ್ನೆಗಳು ಇಂದಿನ ಚರ್ಚೆಯ ಕೇಂದ್ರಬಿಂದುವಾಗಿವೆ.

ಸರ್ಕಾರದ ಅಧಿಕೃತ ವಾದದ ಪ್ರಕಾರ, ಮೂಲಸೌಕರ್ಯಗಳಲ್ಲಿ ನಡೆದ ಬೃಹತ್ ಸಾರ್ವಜನಿಕ ಹೂಡಿಕೆ, ಉತ್ಪಾದನಾ–ಸಂಬಂಧಿತ ಪ್ರೋತ್ಸಾಹ (PLI) ಯೋಜನೆಗಳು, ಡಿಜಿಟಲೀಕರಣ, ಹಣಕಾಸು ಒಳಗೊಂಡಿಕೆ ಮತ್ತು ಸೇವಾ ಕ್ಷೇತ್ರದ ಚೇತನತೆ ಭಾರತದ ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸಿವೆ. ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ, ವಿದ್ಯುತ್ ಮತ್ತು ಡಿಜಿಟಲ್ ಮೂಲಸೌಕರ್ಯಗಳಲ್ಲಿ ಹೆಚ್ಚಿದ ಸರ್ಕಾರಿ ವೆಚ್ಚ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿದೆ ಎಂದು ಸರ್ಕಾರ ಹೇಳುತ್ತದೆ. ಜೊತೆಗೆ, ಜನಸಾಂಖ್ಯಿಕ ಲಾಭ, ಯುವಜನಸಂಖ್ಯೆ ಮತ್ತು ವಿಶಾಲ ದೇಶೀಯ ಮಾರುಕಟ್ಟೆಯನ್ನೂ ಬೆಳವಣಿಗೆಯ ಆಧಾರಗಳಾಗಿ ಮುಂದಿಡಲಾಗುತ್ತದೆ. ಆದರೆ ಅರ್ಥಶಾಸ್ತ್ರದ ದೃಷ್ಟಿಯಲ್ಲಿ ಪ್ರಶ್ನೆ ಎಂದರೆ ಕೇವಲ ಬೆಳವಣಿಗೆಯ ವೇಗವಲ್ಲ; ಅದು ಹೇಗೆ, ಯಾರಿಗೆ ಮತ್ತು ಯಾವ ಗುಣಮಟ್ಟದಲ್ಲಿ ಎಂಬುದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಅಧಿಕೃತ ಚಿತ್ರಣವನ್ನು ಗಂಭೀರವಾಗಿ ಪ್ರಶ್ನಿಸುವ ಪ್ರಮುಖ ಧ್ವನಿಗಳಲ್ಲಿ ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣಿಯನ್ ಪ್ರಮುಖರು. ಇತ್ತೀಚಿನ ಸಂದರ್ಶನಗಳು ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ಅವರು, ಪ್ರಕಟವಾಗುತ್ತಿರುವ GDP ಬೆಳವಣಿಗೆ ದರಗಳು ನೆಲಮಟ್ಟದ ಆರ್ಥಿಕ ವಾಸ್ತವಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿಲ್ಲ ಎಂದು ವಾದಿಸಿದ್ದಾರೆ. ಅವರ ಪ್ರಕಾರ, ಉದ್ಯೋಗ ಸೃಷ್ಟಿ, ನಿಜವಾದ ವೇತನ ವೃದ್ಧಿ, ಖಾಸಗಿ ಹೂಡಿಕೆ ಮತ್ತು ಖಾಸಗಿ ಉಪಭೋಗದ ಅಂಕಿ–ಅಂಶಗಳನ್ನು ನೋಡಿದರೆ, 7–7.5 ಪ್ರತಿಶತದ ಬೆಳವಣಿಗೆ ಸಾಮಾನ್ಯ ಜನರಿಗೆ ಅನುಭವವಾಗುತ್ತಿರುವುದು ಸ್ಪಷ್ಟವಾಗುತ್ತಿಲ್ಲ. ವಿಶೇಷವಾಗಿ, GDP ಬೆಳವಣಿಗೆಯೊಂದಿಗೆ ಹೋಲಿಸಿದರೆ ಖಾಸಗಿ ಉಪಭೋಗದ ವೃದ್ಧಿ ಕೇವಲ 3–4 ಪ್ರತಿಶತದ ಮಟ್ಟದಲ್ಲಿರುವುದು ಗಂಭೀರ ವಿರೋಧಾಭಾಸವನ್ನು ತೋರಿಸುತ್ತದೆ ಎಂದು ಅವರು ಸೂಚಿಸುತ್ತಾರೆ.

ಸುಬ್ರಮಣಿಯನ್ ಅವರ ವಿಮರ್ಶೆಯ ಕೇಂದ್ರಬಿಂದು GDP ಲೆಕ್ಕಾಚಾರದ ವಿಧಾನದಲ್ಲಿನ ಬದಲಾವಣೆಗಳಾಗಿದೆ. 2011–12 ಅನ್ನು ಆಧಾರ ವರ್ಷವನ್ನಾಗಿ ಮಾಡಿಕೊಂಡು GDP ಸರಣಿಯನ್ನು ಮರುಗಣನೆ ಮಾಡಿದ ನಂತರ, ಅಸಂಘಟಿತ ಕ್ಷೇತ್ರದ ಉತ್ಪಾದನೆ ಮತ್ತು ಮೌಲ್ಯವರ್ಧನೆಯನ್ನು ಅಂದಾಜು ಮಾಡುವ ವಿಧಾನದಲ್ಲಿ ಮಹತ್ವದ ಬದಲಾವಣೆಗಳು ನಡೆದಿವೆ. ಭಾರತದ ಆರ್ಥಿಕತೆಯಲ್ಲಿ ಉದ್ಯೋಗ ಮತ್ತು ಆದಾಯದ ದೊಡ್ಡ ಭಾಗವನ್ನು ಹೊತ್ತಿರುವ ಅಸಂಘಟಿತ ಕ್ಷೇತ್ರವು ನೋಟು ರದ್ದುಪಡಿಕೆ, GST ಜಾರಿಗೆ ಸಂಬಂಧಿಸಿದ ಆರಂಭಿಕ ಅಡಚಣೆಗಳು ಮತ್ತು ಕೋವಿಡ್‑19 ಮಹಾಮಾರಿಯಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಆದರೆ ಈ ಹಾನಿಯ ತೀವ್ರತೆ GDP ಅಂಕಿ–ಅಂಶಗಳಲ್ಲಿ ಸಮರ್ಪಕವಾಗಿ ಪ್ರತಿಫಲಿಸುತ್ತಿಲ್ಲ ಎಂಬುದು ಅವರ ಪ್ರಮುಖ ಆಕ್ಷೇಪ. ಅಸಂಘಟಿತ ಕ್ಷೇತ್ರದ ಚಟುವಟಿಕೆಗಳನ್ನು ಸಂಘಟಿತ ಕಾರ್ಪೊರೇಟ್ ವಲಯದ ಅಂಕಿ–ಅಂಶಗಳ ಮೂಲಕ ಅಂದಾಜು ಮಾಡುವ ಪ್ರಾಕ್ಸಿ ವಿಧಾನವು ಭಾರತದಂತಹ ಅಸಮಾನ ಮತ್ತು ವೈವಿಧ್ಯಮಯ ಆರ್ಥಿಕತೆಯಲ್ಲಿ ವಾಸ್ತವಿಕ ಚಿತ್ರಣವನ್ನು ಮಸುಕುಗೊಳಿಸುವ ಅಪಾಯ ಹೊಂದಿದೆ ಎಂಬ ಎಚ್ಚರಿಕೆಯನ್ನು ಅವರು ನೀಡುತ್ತಾರೆ.

ಅರವಿಂದ್ ಸುಬ್ರಮಣಿಯನ್ ಅವರು ಮತ್ತೊಂದು ಪ್ರಮುಖ ಅಂಶವನ್ನು ಸೂಚಿಸುವುದು GDP ಬೆಳವಣಿಗೆ ಮತ್ತು ಇತರ ಮಹತ್ವದ ಆರ್ಥಿಕ ಸೂಚ್ಯಂಕಗಳ ನಡುವಿನ ಅಸಂಗತತೆಯಾಗಿದೆ. ಉದಾಹರಣೆಗೆ, ಅಧಿಕೃತ GDP ಅಂದಾಜುಗಳಿಂದ ಹೊರಬರುವ ‘implied inflation’ ಪ್ರಮಾಣ ಮತ್ತು ವಾಸ್ತವದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ತೋರಿಸುವ ಹಣದುಬ್ಬರದ ಮಟ್ಟಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ. ಇದೇ ರೀತಿಯಾಗಿ, ವಿದೇಶಿ ನೇರ ಹೂಡಿಕೆ (FDI) GDPಗೆ ಹೋಲಿಸಿದರೆ ಕಡಿಮೆಯಾಗಿರುವುದು ಮತ್ತು ಖಾಸಗಿ ಹೂಡಿಕೆಗಳು ಹಲವು ವರ್ಷಗಳಿಂದ ನಿರೀಕ್ಷಿತ ಮಟ್ಟಕ್ಕೆ ಚೇತರಿಸಿಕೊಳ್ಳದಿರುವುದು 7.4 ಪ್ರತಿಶತದ ಬೆಳವಣಿಗೆ ದರದ ದೀರ್ಘಕಾಲಿಕ ಸ್ಥಿರತೆಯ ಬಗ್ಗೆ ಅನುಮಾನ ಹುಟ್ಟುಹಾಕುತ್ತದೆ.

ಈ ಬೆಳವಣಿಗೆ ದರದ ಮತ್ತೊಂದು ಮೂಲಭೂತ ಪ್ರಶ್ನೆ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದೆ. ಇಂತಹ ವೇಗದ ಬೆಳವಣಿಗೆ ವ್ಯಾಪಕ ಮತ್ತು ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕೆಂಬುದು ಆರ್ಥಿಕ ಸಿದ್ಧಾಂತದ ಸಾಮಾನ್ಯ ನಿರೀಕ್ಷೆ. ಆದರೆ ಭಾರತದಲ್ಲಿ ನಿರುದ್ಯೋಗದ ಪ್ರಮಾಣ, ವಿಶೇಷವಾಗಿ ಯುವಜನರಲ್ಲಿ, ಇನ್ನೂ ಗಂಭೀರವಾಗಿಯೇ ಉಳಿದಿದೆ. ಕಾರ್ಮಿಕ ಶಕ್ತಿಯಲ್ಲಿ ಭಾಗವಹಿಸುವಿಕೆ ಕಡಿಮೆಯಾಗಿರುವುದು, ಅನೌಪಚಾರಿಕ ಮತ್ತು ಅಸ್ಥಿರ ಉದ್ಯೋಗಗಳ ಹೆಚ್ಚಳ ಹಾಗೂ ಮಹಿಳಾ ಉದ್ಯೋಗದ ಕೊರತೆಗಳು ಬೆಳವಣಿಗೆ ಮತ್ತು ಒಳಗೊಂಡಿಕೆಯ ನಡುವಿನ ಅಂತರವನ್ನು ತೋರಿಸುತ್ತವೆ. ಈ ಹಿನ್ನೆಲೆಗಳಲ್ಲಿ, GDP ಬೆಳವಣಿಗೆ ದರವು ‘ಉದ್ಯೋಗವಿಲ್ಲದ ಬೆಳವಣಿಗೆ’ಯ ಸೂಚಕವೋ ಎಂಬ ಪ್ರಶ್ನೆ ಮತ್ತಷ್ಟು ತೀವ್ರವಾಗುತ್ತದೆ.

ಬಳಕೆಯ ದೃಷ್ಟಿಯಿಂದಲೂ ಚಿತ್ರ ಸಂಪೂರ್ಣ ಸಮತೋಲನದಲ್ಲಿಲ್ಲ. ಮೇಲ್ಮಟ್ಟದ ಮತ್ತು ನಗರ ಮಧ್ಯಮ ವರ್ಗದ ಬಳಕೆ ಹೆಚ್ಚುತ್ತಿರುವುದು ಗೋಚರವಾದರೂ, ಗ್ರಾಮೀಣ ಪ್ರದೇಶಗಳು ಮತ್ತು ಕಡಿಮೆ ಆದಾಯದ ವರ್ಗಗಳಲ್ಲಿ ಖರೀದಿ ಶಕ್ತಿ ಇನ್ನೂ ದುರ್ಬಲವಾಗಿದೆ ಎಂಬುದನ್ನು ಹಲವು ಸಮೀಕ್ಷೆಗಳು ಸೂಚಿಸುತ್ತವೆ. ಆಹಾರ ಬೆಲೆಗಳ ಏರಿಕೆ, ಇಂಧನ ವೆಚ್ಚ, ಆರೋಗ್ಯ ಮತ್ತು ಶಿಕ್ಷಣದ ಖಾಸಗಿ ಖರ್ಚುಗಳು ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಒತ್ತಡ ತರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಉನ್ನತ GDP ಬೆಳವಣಿಗೆ ದರವು ಎಲ್ಲರಿಗೂ ಸಮಾನ ಲಾಭ ನೀಡುತ್ತಿದೆ ಎಂದು ಹೇಳುವುದು ಕಷ್ಟ; ಇದು ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎಂಬ ಹೋಲಿಕೆಯನ್ನು ನೆನಪಿಸುತ್ತದೆ.

ಇಲ್ಲಿ GDP ಬೆಳವಣಿಗೆಯ ರಾಜಕೀಯ ಅರ್ಥವನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ. GDP ದರವು ಕೇವಲ ಆರ್ಥಿಕ ಸೂಚ್ಯಂಕವಲ್ಲ; ಅದು ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸುವ ರಾಜಕೀಯ ಸಾಧನವೂ ಹೌದು. ‘ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ’ ಎಂಬ ಚಿತ್ರಣ ಅಂತರರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸಲು, ಜಾಗತಿಕ ವೇದಿಕೆಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಮತ್ತು ದೇಶೀಯ ರಾಜಕೀಯದಲ್ಲಿ ಸರ್ಕಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಉಪಯೋಗವಾಗುತ್ತದೆ. ಈ ಕಾರಣದಿಂದಲೇ GDP ಅಂಕಿ–ಅಂಶಗಳ ಸುತ್ತಲಿನ ಚರ್ಚೆಗಳು ರಾಜಕೀಯ ಬಣ್ಣ ಪಡೆಯುತ್ತವೆ ಎಂದು ವಿಮರ್ಶಕರು ಎಚ್ಚರಿಸುತ್ತಾರೆ.

ಈ ಲೇಖನ ಓದಿದ್ದೀರಾ?: I-PAC ಕಚೇರಿಯ ಮೇಲಿನ ಇ.ಡಿ ದಾಳಿ, ವಾಟರ್‌ಗೇಟ್ ಹಗರಣವನ್ನು ನೆನಪಿಸುತ್ತದೆಯೇ?

ಅರವಿಂದ್ ಸುಬ್ರಮಣಿಯನ್ ಮತ್ತು ಇತರ ಅರ್ಥಶಾಸ್ತ್ರಜ್ಞರು ಈ ಹಿನ್ನೆಲೆಯಲ್ಲಿ ಬೆಳವಣಿಗೆಯ ಗುಣಮಟ್ಟದ ಮೇಲೆ ಹೆಚ್ಚು ಗಮನ ನೀಡಬೇಕೆಂದು ಒತ್ತಾಯಿಸುತ್ತಾರೆ. ಉತ್ಪಾದಕತೆ ಹೆಚ್ಚಳ, ಮಾನವ ಸಂಪನ್ಮೂಲ ಹೂಡಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲಪಡಿಕೆ, ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ನಿಜವಾದ ಬೆಂಬಲವಿಲ್ಲದೆ ಕೇವಲ GDP ಅಂಕಿ–ಅಂಶಗಳ ಮೂಲಕ ಆರ್ಥಿಕ ಯಶಸ್ಸನ್ನು ಅಳೆಯುವುದು ಅಪೂರ್ಣ ಮತ್ತು ಭ್ರಾಂತಿದಾಯಕ ದೃಷ್ಟಿಕೋನವಾಗಿದೆ ಎಂದು ಅವರು ವಾದಿಸುತ್ತಾರೆ.

ಅಂತೆಯೇ, 7.4 ಪ್ರತಿಶತ ಬೆಳವಣಿಗೆ ಅಂದಾಜು ಸಂಪೂರ್ಣವಾಗಿ ತಪ್ಪು ಎಂದು ತಿರಸ್ಕರಿಸುವುದು ಸಹ ಸರಳೀಕರಣವಾಗುತ್ತದೆ. ಡಿಜಿಟಲ್ ಸೇವೆಗಳು, ಹಣಕಾಸು ತಂತ್ರಜ್ಞಾನ, ಸ್ಟಾರ್ಟ್‌ಅಪ್ ಪರಿಸರ ಮತ್ತು ಕೆಲವು ಉತ್ಪಾದನಾ ಉಪಕ್ಷೇತ್ರಗಳಲ್ಲಿ ನಿಜವಾಗಿಯೂ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತಿವೆ. ಆದರೆ ಈ ಬೆಳವಣಿಗೆ ಸಮಗ್ರ, ಸಮನ್ವಿತ ಮತ್ತು ದೀರ್ಘಕಾಲಿಕವಾಗಬೇಕಾದರೆ, ಅಂಕಿ–ಅಂಶಗಳ ವಿಶ್ವಾಸಾರ್ಹತೆ, ಅಸಂಘಟಿತ ಕ್ಷೇತ್ರದ ಪುನಶ್ಚೇತನ, ಗುಣಮಟ್ಟದ ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಒಳಗೊಂಡಿಕೆ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ನೈಜ ಉತ್ತರಗಳು ಅಗತ್ಯ. ಒಟ್ಟಿನಲ್ಲಿ, ಭಾರತದ 7.4 ಪ್ರತಿಶತ ಆರ್ಥಿಕ ಬೆಳವಣಿಗೆ ಅಂದಾಜು ಒಂದು ಕಡೆ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸಿದರೆ, ಮತ್ತೊಂದು ಕಡೆ ಆರ್ಥಿಕ ನೀತಿ ಮತ್ತು ಅಂಕಿ–ಅಂಶಗಳ ಕುರಿತು ಅಗತ್ಯವಾದ ವಿಮರ್ಶಾತ್ಮಕ ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಭಾರತದ ಆರ್ಥಿಕ ಯಶಸ್ಸನ್ನು ಕೇವಲ ಬೆಳವಣಿಗೆ ದರದಿಂದಲ್ಲ, ಆದರೆ ಅದು ಎಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಎಷ್ಟು ಅಸಮಾನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಎಷ್ಟು ಜನರ ಜೀವನಮಟ್ಟವನ್ನು ಸುಧಾರಿಸುತ್ತದೆ ಎಂಬುದರಿಂದಲೇ ಅಳೆಯಬೇಕಾಗಿದೆ.

ಈ ಚರ್ಚೆಯ ಅಂತ್ಯದಲ್ಲಿ ಅರವಿಂದ್ ಸುಬ್ರಮಣಿಯನ್ ಅವರ ಇತ್ತೀಚಿನ ಎಚ್ಚರಿಕೆಯನ್ನು ಗಮನಿಸದೆ ಮುನ್ನಡೆಯಲು ಸಾಧ್ಯವಿಲ್ಲ. ಮುಂದಿನ ವರ್ಷದ, ಅಂದರೆ 2026–27 (Fiscal 2027) ಆರ್ಥಿಕ ಬೆಳವಣಿಗೆಯ ಕುರಿತು ಅವರು ನಿರೀಕ್ಷೆಗಳನ್ನು ಇಳಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಅವರ ಮಾತಿನಲ್ಲಿ, “ವರ್ಷದ ಅಂತ್ಯಕ್ಕೆ ಈ ವರ್ಷದಷ್ಟೇ ಬೆಳವಣಿಗೆ ದರ ಉಳಿದಿದ್ದರೂ, ಭಾರತ ಅದನ್ನು ಅದೃಷ್ಟವೆಂದು ಹಾಗೂ ಒಳ್ಳೆಯ ಸಾಧನೆ ಎಂದು ಪರಿಗಣಿಸಬೇಕು.” ಈ ಮಾತು ಆತ್ಮವಿಶ್ವಾಸವನ್ನಲ್ಲ, ವಾಸ್ತವಿಕತೆಯನ್ನು ಪ್ರತಿಬಿಂಬಿಸುತ್ತದೆ.

ಇದರಿಂದ ಹೊರಹೊಮ್ಮುವ ನಿರ್ಣಯ ಸ್ಪಷ್ಟವಾಗಿದೆ. ಭಾರತದ ಆರ್ಥಿಕತೆಯು ನಿಜವಾಗಿಯೂ ಈ ನಿಟ್ಟಿನಲ್ಲಿ ಬೆಳೆಯುವ ಸಂಭಾವ್ಯ ಹೊಂದಿದೆ, ಆದರೆ ಅದು ಅಂಕಿ–ಅಂಶಗಳ ಮೇಲೆ ಮಾತ್ರ ಗಮನಹರಿಯಬಿಟ್ಟರೆ ನಿಜವಾದ ಅಭಿವೃದ್ಧಿ ಅನ್ನಿಸಲಾರದು. ಜಾಗತಿಕ ಅನಿಶ್ಚಿತತೆಗಳು, ಒಳನಾಡಿನ ಉದ್ಯೋಗ ಮತ್ತು ಬಳಕೆಯ ಸಂಕಷ್ಟಗಳು, ಹಾಗೂ ಅಸಂಘಟಿತ ಕ್ಷೇತ್ರದ ನಿಧಾನ ಪುನಶ್ಚೇತನವನ್ನು ಗಮನಿಸಿದರೆ, 7.4 ಪ್ರತಿಶತದಂತಹ ಬೆಳವಣಿಗೆ ದರವನ್ನು ಸಾಧಿಸುವುದಕ್ಕಿಂತ ಇರುವ ಬೆಳವಣಿಗೆಯ ದರದ ಸ್ಥಿರವಾಗಿ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ವರ್ಷಗಳ ಆರ್ಥಿಕ ಚರ್ಚೆಗಳಲ್ಲಿ ‘ಎಷ್ಟು ವೇಗವಾಗಿ ಬೆಳೆಯುತ್ತಿದ್ದೇವೆ’ ಎಂಬ ಪ್ರಶ್ನೆಯ ಬದಲು, ‘ಎಷ್ಟು ಸ್ಥಿರವಾಗಿ, ಸಮತೆಯಿಂದ ಮತ್ತು ಉದ್ಯೋಗ ಸೃಷ್ಟಿಸುವ ರೀತಿಯಲ್ಲಿ ಬೆಳೆಯುತ್ತಿದ್ದೇವೆ’ ಎಂಬ ಪ್ರಶ್ನೆಯೇ ಕೇಂದ್ರಸ್ಥಾನ ಪಡೆಯಬೇಕು. ಅರವಿಂದ್ ಸುಬ್ರಮಣಿಯನ್ ಅವರ ಎಚ್ಚರಿಕೆಯ ಅರ್ಥವೂ ಇದುವೇ: ನಿರೀಕ್ಷೆಗಳನ್ನು ಮಿತಿಗೊಳಿಸಿ, ವಾಸ್ತವಿಕತೆಯನ್ನು ಒಪ್ಪಿಕೊಂಡು, ಬೆಳವಣಿಗೆಯ ಗುಣಮಟ್ಟದ ಮೇಲೆ ಗಂಭೀರವಾಗಿ ಗಮನಹರಿಸುವುದು ಈಗ ಭಾರತದ ಆರ್ಥಿಕ ನೀತಿಗೆ ಅತ್ಯಾವಶ್ಯಕ. ಜೊತೆಗೆ, ಅಭಿವೃದ್ಧಿಯ ಮಾನದಂಡವನ್ನು ಕೇವಲ ಆದಾಯ ಮತ್ತು ಉತ್ಪಾದನೆಯ ಅಂಕಿ–ಅಂಶಗಳಿಗೆ ಸೀಮಿತಗೊಳಿಸದೆ, ಶುದ್ಧ ಗಾಳಿ, ಸುರಕ್ಷಿತ ನೀರು ಮತ್ತು ಪರಿಸರದ ಸ್ಥಿರತೆಯನ್ನೂ, ಸುಸ್ಥಿರ ಬೆಳವಣಿಗೆಯನ್ನು – ಅಭಿವೃದ್ಧಿಯ ಅವಿಭಾಜ್ಯ ಪೂರ್ವಭಾವಿ ಅಂಶಗಳಾಗಿ ಪರಿಗಣಿಸಬೇಕಾಗಿದೆ. ಜನರ ಆರೋಗ್ಯ ಮತ್ತು ಪರಿಸರದ ರಕ್ಷಣೆಯನ್ನು ಬಲಿಕೊಟ್ಟು ಸಾಧಿಸುವ ಬೆಳವಣಿಗೆ ದೀರ್ಘಕಾಲಿಕವಾಗಿರಲಾರದು ಎಂಬ ಸತ್ಯವನ್ನು ನೀತಿ ರೂಪಕರು ಮತ್ತು ಸರ್ಕಾರ ಈಗ ಗಂಭೀರವಾಗಿ ಅಂಗೀಕರಿಸಬೇಕಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...