ಇಂದಿರಾ ಕಿಟ್ - ಬಡ ಕುಟುಂಬಗಳು ಎಣ್ಣೆ ಮತ್ತು ಬೇಳೆಗಾಗಿ ಪ್ರತಿ ತಿಂಗಳು ಸರಾಸರಿ 300-400 ರೂಪಾಯಿ ಖರ್ಚು ಮಾಡುವುದನ್ನು ತಡೆಯುತ್ತದೆ. ಪರಿಣಾಮ, ಅವರ ಉಳಿತಾಯ ಹೆಚ್ಚುತ್ತದೆ. ಇತರ ಅಗತ್ಯಗಳ ಕೊಳ್ಳುವಿಕೆಗೆ ಸಾಧ್ಯವಾಗುವಂತೆ ಮಾಡುತ್ತದೆ.
ಕರ್ನಾಟಕದಲ್ಲಿ ಯಾವೊಬ್ಬ ವ್ಯಕ್ತಿಯೂ ಒಂದೊತ್ತು ಕೂಡ ಹಸಿವಿನಿಂದ ಇರಬಾರದು, ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂಬ ಘೋಷಣೆಯೊಂದಿಗೆ 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಚಯಿಸಿದ ಯೋಜನೆ ‘ಅನ್ನಭಾಗ್ಯ’. ಭಾರತದಲ್ಲಿಯೇ ಮೊದಲ ಬಾರಿಗೆ ‘ಅನ್ನಭಾಗ್ಯ ಯೋಜನೆ’ ಜಾರಿಯಾದದ್ದು ನಮ್ಮಲ್ಲೇ ಎಂಬ ಹೆಗ್ಗಳಿಕೆಯೂ ಕರ್ನಾಟಕಕ್ಕಿದೆ. ಇದೀಗ, ಅನ್ನಭಾಗ್ಯ ಯೋಜನೆಯು ಮತ್ತೊಂದು ಮೈಲಿಗಲ್ಲು ಸಾಧಿಸಲು ಹೊರಟಿದೆ. ಹಾಲಿ ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ‘ಇಂದಿರಾ ಕಿಟ್’ (ಪೌಷ್ಠಿಕ ಆಹಾರ ಕಿಟ್) ಒದಗಿಸಲು ನಿರ್ಧರಿಸಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2ನೇ ಬಾರಿಗೆ ಅಧಿಕಾರ ಬಂದ ಬಳಿಕ, ಅನ್ನಭಾಗ್ಯ ಯೋಜನೆಗೆ ಮಾರ್ಪಾಡು ಮಾಡಿತು. ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ 5 ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿ 5 ಕೆ.ಜಿ ಸೇರಿಸಿ, ತಲಾ ಒಟ್ಟು 10 ಕೆ.ಜೆ ಅಕ್ಕಿ ವಿತರಿಸಲು ಆರಂಭಿಸಿತು. ಇದೀಗ, ಹೆಚ್ಚುವರಿಯಾಗಿ ನೀಡುತ್ತಿದ್ದ 5 ಕೆ.ಜಿ ಅಕ್ಕಿಯ ಬದಲಾಗಿ ‘ಇಂದಿರಾ ಕಿಟ್’ ಹೆಸರಿನಲ್ಲಿ ಪೌಷ್ಠಿಕ ಆಹಾರ ವಿತರಿಸಲು ಮುಂದಾಗಿದೆ.
ಇಂದಿರಾ ಕಿಟ್‌ನಲ್ಲಿ 1 ಕೆ.ಜಿ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ ಹಾಗೂ 1 ಕೆ.ಜಿ ಉಪ್ಪು ವಿತರಣೆ ಮಾಡಲು ಸರ್ಕಾರ ಯೋಜಿಸಿದೆ. ಅದಕ್ಕಾಗಿ, ಆಯವ್ಯಯದಲ್ಲಿ ಅನ್ನಭಾಗ್ಯ ಯೋಜನೆಗಾಗಿ ಹಂಚಿಕೆ ಮಾಡಿರುವ 6,426 ಕೋಟಿ ರೂ. ಅನುದಾನದಲ್ಲಿ 6119.52 ಕೋಟಿ ರೂ.ಗಳನ್ನು ಇಂದಿರಾ ಕಿಟ್‌ಗೆ ಒದಗಿಸಲು ಬಜೆಟ್‌ಅನ್ನು ಮರುಹಂಚಿಕೆ ಮಾಡುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA)ಯಡಿ ರಾಜ್ಯದ 1.15 ಕೋಟಿ ಕುಟುಂಬಗಳಿಗೆ (ಸುಮಾರು 4.5 ಕೋಟಿ ಜನರು) ಪಡಿತರ ವ್ಯವಸ್ಥೆಯಡಿ ಅಕ್ಕಿ ನೀಡಲಾಗುತ್ತಿದೆ. ಆದರೆ, ಕೇವಲ ಅಕ್ಕಿ ವಿತರಣೆಯಿಂದ ಹೊಟ್ಟೆ ತುಂಬಬಹುದಾದರೂ, ಪೋಷಕಾಂಶದ ಕೊರತೆ ನೀಗುವುದಿಲ್ಲ. ಆದ್ದರಿಂದ, ಜನರಿಗೆ ಪ್ರೋಟೀನ್, ಫ್ಯಾಟ್ ಹಾಗೂ ಇತರ ಪೋಷಕಕ ಆಹಾರದ ಅಗತ್ಯವಿದೆ. ಅದಕ್ಕಾಗಿ, ಬಡ ಕುಟುಂಬಗಳಿಗೆ ಪೋಷಕ ಆಹಾರ ಒದಗಿಸುವುದು, ಬಡವರಲ್ಲಿ ಪೌಷ್ಠಿಕತೆಯ ಪ್ರಮಾಣ ಹೆಚ್ಚಿಸಲು ‘ಇಂದಿರಾ ಕಿಟ್’ ನೆರವಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಕರ್ನಾಟಕದಲ್ಲಿ ಇಂದಿಗೂ, ಹಲವಾರು ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರು ಪೌಷ್ಠಿಕ ಆಹಾರ ಮತ್ತು ಅಗತ್ಯ ಪೋಷಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-2025ರ ವರದಿ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 2.3 ಕೋಟಿ ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ, 8-10 ಲಕ್ಷ ಮಕ್ಕಳು, ಸುಮಾರು 1.5 ಕೋಟಿ ಮಹಿಳೆಯರು ಹಾಗೂ 20 ಲಕ್ಷ ವಯೋವೃದ್ಧರು ಸೇರಿದ್ದಾರೆ.
ಅಂದರೆ, ರಾಜ್ಯದಲ್ಲಿರುವ ಜನರಲ್ಲಿ ಸರಿಸುಮಾರು 22-25% ಜನರು ಅಪೌಷ್ಠಿಕತೆಯ ಸವಾಲನ್ನು ಎದುರಿಸುತ್ತಿದ್ದಾರೆ. ಈ ಬೃಹತ್ ಪ್ರಮಾಣದ ಜನರಲ್ಲಿ ಪೌಷ್ಠಿಕತೆಯ ಪ್ರಮಾಣ ಹೆಚ್ಚಲು ಸರ್ಕಾರದ ನೆರವು ಅಗತ್ಯವಾದದ್ದು.
2024ರಲ್ಲಿ ಈದಿನ.ಕಾಮ್ ಕೂಡ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯಾದ್ಯಂತ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ, ‘ಅನ್ನಭಾಗ್ಯ ಯೋಜನೆಯಡಿ ಕೇವಲ ಅಕ್ಕಿ ಬದಲು ಬೇಳೆ, ಸಿರಿಧಾನ್ಯ, ಎಣ್ಣೆ ಇತ್ಯಾದಿ ಆಹಾರ ಧಾನ್ಯಗಳನ್ನು ಒದಗಿಸಿದರೆ ಅನುಕೂಲವೇ’ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಸಮೀಕ್ಷೆಯಲ್ಲಿ ಉತ್ತರಿಸಿದ 85% ಜನರು ‘ಪೌಷ್ಠಿಕಾಂಶಯುಕ್ತ ಆಹಾರ ವಿತರಣೆ’ ಅಗತ್ಯವೆಂದು ಹೇಳಿದ್ದವು. ಬೇಳೆ-ಸಿರಿಧಾನ್ಯಗಳನ್ನು ಒದಗಿಸುವುದರಿಂದ ಪೋಷಕ ಆಹಾರದ ಕೊರತೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೆಂದು ಸಮೀಕ್ಷೆಗೆ ಒಳಪಟ್ಟವರು ಹೇಳಿದ್ದರು.
ಈ ಲೇಖನ ಓದಿದ್ದೀರಾ?: ಎಸ್‌ಟಿ ಒಳಮೀಸಲಾತಿ ಮುನ್ನಲೆಗೆ; ‘ನಾಯಕ- ಕುರುಬ’ರ ನಡುವೆ ಬಿಕ್ಕಟ್ಟು ಮೂಡುವುದೇ?
ಸಮೀಕ್ಷೆಯಲ್ಲಿ ದೊರೆತ ಜನಾಭಿಪ್ರಾಯವನ್ನು ಈದಿನ.ಕಾಮ್ ಪ್ರಕಟಿಸಿತ್ತು. ಸರ್ಕಾರದ ಗಮನಕ್ಕೆ ತಂದಿತ್ತು. ಇದೀಗ, ಸರ್ಕಾರವು ‘ಇಂದಿರಾ ಕಿಟ್’ (Integrated Nutrition and Dietary Intake Revitalization Approach – ಸಮಗ್ರ ಪೌಷ್ಟಿಕತೆ ಮತ್ತು ಆಹಾರ ಸೇವನೆಯ ಪುನರುಜ್ಜೀವನ ವಿಧಾನ) ಜಾರಿಗೆ ತಂದಿದೆ. ಬಡವರಿಗೆ ಮತ್ತಷ್ಟು ನೆರವಾಗಲು ಮುಂದಾಗಿದೆ. ಇಂದಿರಾ ಕಿಟ್‌ನಿಂದಾಗಿ ದೈನಂದಿನ ಆಹಾರದಲ್ಲಿ ಪ್ರೋಟೀನ್ (ಬೇಳೆ), ಕಾರ್ಬೊಹೈಡ್ರೇಟ್ (ಸಕ್ಕರೆ) ಮತ್ತು ಫ್ಯಾಟ್ (ಎಣ್ಣೆ) ಸಮತೋಲನ ಇರಲಿದೆ.
ಇಂದಿರಾ ಕಿಟ್ ಜಾರಿಯಿಂದಾಗಿ, ನಾಲ್ವರು ಸದಸ್ಯರಿರುವ ಒಂದು ಕುಟುಂಬಕ್ಕೆ ಪ್ರತಿ ತಿಂಗಳು 20 ಕೆ.ಜಿ ಅಕ್ಕಿಯ ಜೊತೆಗೆ ತೊಗರಿ ಬೇಳೆ, ಎಣ್ಣೆ, ಸಕ್ಕರೆ ಹಾಗೂ ಉಪ್ಪು – ತಲಾ 1 ಕೆ.ಜಿ ಇರುವ ಕಿಟ್ ದೊರೆಯಲಿದೆ. ನಾಲ್ಕಕ್ಕಿಂತ ಹೆಚ್ಚು ಮಂದಿ ಇದ್ದರೆ, ಕಿಟ್‌ನಲ್ಲಿನ ಎಲ್ಲ ಸಾಮಗ್ರಿಗಳು ತಲಾ 1.5 ಕೆ.ಜಿ ಇರಲಿವೆ. ಇದು ಆಹಾರದಲ್ಲಿನ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸರ್ಕಾರ ಭಾವಿಸಿದೆ. ಆದಾಗ್ಯೂ, ಉಪ್ಪು-ಸಕ್ಕರೆ ಬದಲಾಗಿ, ಇನ್ನೂ 1 ಕೆ.ಜಿ ತೊಗರಿ ಬೇಳೆಯನ್ನೇ ವಿತರಿಸುವುದು ಉಪಯುಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸರ್ಕಾರದ ‘ಇಂದಿರಾ ಕಿಟ್’ ಪರಿಚಯವನ್ನು ಸಾಮಾಜಿಕ ನ್ಯಾಯದ ಮತ್ತೊಂದು ಹೆಜ್ಜೆ ಎಂದು ಬಣ್ಣಿಸಲಾಗಿದೆ. ಬಡ ಕುಟುಂಬಗಳು ಎಣ್ಣೆ ಮತ್ತು ಬೇಳೆಗಾಗಿ ಪ್ರತಿ ತಿಂಗಳು ಸರಾಸರಿ 300-400 ರೂಪಾಯಿ ಖರ್ಚು ಮಾಡುವುದನ್ನು ತಡೆಯುತ್ತದೆ. ಪರಿಣಾಮ, ಅವರ ಉಳಿತಾಯ ಹೆಚ್ಚುತ್ತದೆ. ಇತರ ಅಗತ್ಯಗಳ ಕೊಳ್ಳುವಿಕೆಗೆ ಸಾಧ್ಯವಾಗುವಂತೆ ಮಾಡುತ್ತದೆ ಎನ್ನಲಾಗಿದೆ. ಜೊತೆಗೆ, ತೊಗರಿ ಬೆಳೆವ ರೈತರಿಗೆ ಆರ್ಥಿಕ ನೆರವು-ಭದ್ರತೆ ದೊರೆಯಲಿದೆ.




