ರಾಷ್ಟ್ರಗೀತೆಗೆ ಅಪಮಾನ: ಬಿಜೆಪಿ, ಆರೆಸ್ಸೆಸ್‌ ಹುನ್ನಾರಗಳು

Date:

ರವಿಂದ್ರನಾಥ್ ಟ್ಯಾಗೋರರ ಸಾಹಿತ್ಯವನ್ನು ಓದಿದವರು, ಅವರ ಬದುಕನ್ನು ಅರ್ಥ ಮಾಡಿಕೊಂಡವರು ಯಾರೂ ಸಹ ಅವರು ಬ್ರಿಟಿಷ್ ಆಡಳಿತ, ವಸಾಹತುಶಾಹಿಯ ಪರವಾಗಿದ್ದರು ಎಂಬ ವಾದವನ್ನು ಒಪ್ಪುವುದಿಲ್ಲ. ಠಾಗೋರರ ದೇಶಾಭಿಮಾನವನ್ನು ಆರ್ಥಮಾಡಿಕೊಳ್ಳಬೇಕಾದರೆ ಅವರು ರಚಿಸಿದ ದೇಶಭಕ್ತಿಗೀತೆಗಳ ಸಂಕಲನ ನೈವೇದ್ಯ(1901) ಓದಬೇಕು.

ಬಿಜೆಪಿ ಸಂಸದ, ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬಂಕಿಮಚಂದ್ರ ಚಟರ್ಜಿಯವರ ‘ವಂದೇ ಮಾತರಂ’ ಗೀತೆಗೆ 150 ವರ್ಷಗಳು ತುಂಬಿದ ಪ್ರಯುಕ್ತ ಆರ್.ಎಸ್.ಎಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ “ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ಬ್ರಿಟಿಷರನ್ನು ಸ್ವಾಗತಿಸಲು ರಚಿಸಿದ್ದು, ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು” ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಇದು ಕೇವಲ ಕಾಗೇರಿಯವರ ಅಭಿಪ್ರಾಯ ಮಾತ್ರವಾಗಿರದೆ ಸಮಸ್ತ ಬಿಜೆಪಿ ಮತ್ತು ಆರ್.ಎಸ್.ಎಸ್ ವಾದವಾಗಿದೆ. ಇದರ ಮೂಲಕ ಭಾರತೀಯರೆಲ್ಲರೂ ಒಪ್ಪಿ ಗೌರವಿಸುತ್ತಿರುವ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಕುರಿತು ಬಿಜೆಪಿ ಮತ್ತು ಆರ್.ಎಸ್.ಎಸ್ ನವರ ತಿರಸ್ಕರಾದ ಭಾವ ಮತ್ತೆ ಸಾಬೀತಾಗಿದೆ.

ಸಂವಿಧಾನ ರಚನೆಯ ಸಂದರ್ಭದಲ್ಲಿ ಹಿಂದೂ ಮಹಾಸಭಾ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ “ಈ ಸಂವಿಧಾನದಲ್ಲಿ ಭಾರತೀಯತೆಯ ಅಂಶ ಇಲ್ಲ, ಎಲ್ಲವನ್ನೂ ಪಾಶ್ಚಿಮಾತ್ಯ ದೇಶಗಳಿಂದ ಎರವಲು ಪಡೆಯಲಾಗಿದೆ, ಇದು ಹಿಂದೂ ರಾಷ್ಟ್ರದ ಆತ್ಮವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಅಪಪ್ರಚಾರ ಆರಂಭಿಸಿ, ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚನೆಗೊಂಡ ಸಂವಿಧಾನವನ್ನು ಸ್ವೀಕರಿಸಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಾಗೆಯೇ ಭಾರತೀಯ ತ್ರಿವರ್ಣ ಧ್ವಜವನ್ನು ಸಹ ಒಪ್ಪದೆ “ಮೂರು ಬಣ್ಣ ಮಂಗಳಕರವಲ್ಲ, ಇದರಿಂದ ಭಾರತದ ಐಕ್ಯತೆ ಸಾಧ್ಯವಾಗುವುದಿಲ್ಲ” ಎಂದು ರಾಷ್ಟ್ರಧ್ವಜವನ್ನು ತಿರಸ್ಕರಿಸಿ, ಭಗವಾಧ್ವಜವನ್ನು ಸ್ವೀಕರಿದರು. ಆಗಾಗಿಯೇ ಆರ್.ಎಸ್.ಎಸ್ ತನ್ನ ಕಛೇರಿಯಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ(1947 ರಿಂದ 2001ರವರೆಗೆ) ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ. ಕನಿಷ್ಠಪಕ್ಷ ಸ್ವಾತಂತ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿಯೂ ಸಹ. ಕೊನೆಗೆ, 2002ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಒತ್ತಾಯದ ಮೇರೆಗೆ, RSS ಕಚೇರಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಆರಂಭಿಸಿದರು. ಆದರೆ ಈಗ, ಖಾಸಗಿ ಸಂಸ್ಥೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿ ಇರಲಿಲ್ಲ ಎಂಬ ಕಾರಣವನ್ನು ನೀಡಿ ತಮ್ಮ ಹುಳುಕನ್ನು ಮುಚ್ಚಿಹಾಕಲು ನೋಡುತ್ತಿದ್ದಾರೆ.

Vishweshwar Hegde Kageri

ಪ್ರಸ್ತುತ, ನಮ್ಮ ದೇಶ ಕಂಡ ಮಹಾನ್ ದಾರ್ಶನಿಕ ಸಾಹಿತಿ, “ಗುರುದೇವ” ಎಂದೇ ಖ್ಯಾತರಾದ, ಭಾರತಕ್ಕೆ ಮೊದಲ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ರವಿಂದ್ರನಾಥ್ ಟ್ಯಾಗೋರರು ಬರೆದ “ಭಾರತ ಭಾಗ್ಯ ವಿಧಾತ” ಗೀತೆಯನ್ನು ಇಂಗ್ಲೆಂಡ್ ನ ರಾಜ 5ನೇ ಜಾರ್ಜ್ ಅವರನ್ನು ಸ್ವಾಗತಿಸಲು ರಚಿಸಿದ್ದು, ರಾಷ್ಟ್ರಗೀತೆಯ “ಅಧಿನಾಯಕ” ಪದ ಇಂಗ್ಲೆಂಡ್ ರಾಜನನ್ನು ಸೂಚಿಸುತ್ತದೆ ಎಂದು ಆರಂಭದಿಂದಲೂ ಅಪಪ್ರಚಾರ ಮಾಡಲಾಗುತ್ತಿದೆ.

ಇತ್ತೀಚೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “1913 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿದಾಗ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಇಂಗ್ಲೆಂಡ್ ನ ರಾಜ 5ನೇ ಜಾರ್ಜ್ ಅವರನ್ನು ಶ್ಲಾಘಿಸಿ ಬರೆದದ್ದು” ಎಂಬ ಕಪೋಲಕಲ್ಪಿತ ಕಥೆಯನ್ನು ಹರಿಬಿಡಲಾಗಿದೆ. ಈ ಆರೋಪದ ಸತ್ಯಾಸತ್ಯೆಯನ್ನು ಪರಿಶೀಲಿಸುವ ಗೋಜಿಗೆ ಹೋಗದ ಹಲವರು ಆರೋಪವನ್ನೇ ಸತ್ಯವೆಂದು ನಂಬಿದ್ದಾರೆ.

‘ಭಾರತ ಭಾಗ್ಯ ವಿಧಾತ’ ರಚನೆಗೊಂಡ ಹಿನ್ನಲೆ

ಡಿಸೆಂಬರ್ 11, 1911 ರಂದು ದೆಹಲಿಯನ್ನು ಭಾರತದ ಹೊಸ ರಾಜಧಾನಿಯನ್ನಾಗಿ ಘೋಷಿಸಲಾಯಿತು. ಇದರ ಪ್ರಯುಕ್ತ, ಡಿಸೆಂಬರ್ 12, 1911 ರಂದು, 5ನೇ ಕಿಂಗ್ ಜಾರ್ಜ್ ಮತ್ತು ಕ್ವೀನ್ ಮೇರಿ ದೆಹಲಿ ದರ್ಬಾರ್ ಅನ್ನು ನಡೆಸಿದರು. ಇದೊಂದು ಬೃಹತ್ ಸಾಮ್ರಾಜ್ಯಶಾಹಿ ಸಮಾರಂಭವಾಗಿತ್ತು. ಈ ಕಾರ್ಯಕ್ರಮಕ್ಕೆ ಟ್ಯಾಗೋರರಿಗೆ ಸ್ವಾಗತ ಗೀತೆಯನ್ನು ಬರೆಯಲು ಕೇಳಿಕೊಳ್ಳಲಾಯಿತು. ಇದನ್ನು ತಿರಸ್ಕರಿಸಿದ ಅವರು 1911, ಡಿಸೆಂಬರ್ 11 ರಂದು ಸ್ವಾತಂತ್ರ್ಯ ಚಳವಳಿಗೆ ಸ್ಪೂರ್ತಿ ಮತ್ತು ಚೈತನ್ಯ ನೀಡುವ ಉದ್ದೇಶದಿಂದ ‘ಭಾರತೊ ಭಾಗ್ಯೊ ಬಿಧಾತ’ ಎಂಬ ಗೀತೆಯನ್ನು ರಚಿಸಿದರು. ಮೂಲ ಕವಿತೆಯಲ್ಲಿ ಐದು ಭಾಗಗಳಿದ್ದವು. (ಅದರಲ್ಲಿ ಮೊದಲನೆಯ ಭಾಗವನ್ನು ಮಾತ್ರ ಪ್ರಸ್ತುತ ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲಾಗಿದೆ.)

1911ರ ಡಿಸೆಂಬರ್ 27ರಂದು ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದ ಸಾರ್ವಜನಿಕ ಸಭೆಯಲ್ಲಿ ಮೊದಲ ಬಾರಿಗೆ ಈ ಹೊಸ ಗೀತೆಯನ್ನು ಟ್ಯಾಗೋರರು ಸಂಗೀತ ಸಂಯೋಜಿಸಿ ಹಾಡಿದರು. ಆದರೆ ಅದೇ ವೇದಿಕೆಯಲ್ಲಿ ರಾಮ್ ಭುಜ್ ಚೌಧುರಿಯವರು ರಚಿಸಿದ ವೈಸರಾಯರನ್ನು ಕುರಿತು ಬರೆದ ‘ಬಾದ್ ಶಾ ಹಮಾರಾ’ ಗೀತೆಯನ್ನೂ ಹಾಡಲಾಯಿತು. 5ನೇ ಕಿಂಗ್ ಜಾರ್ಜ್ ಮತ್ತು ರಾಣಿ ಮೇರಿ ಅವರ ದೆಹಲಿ ದರ್ಬಾರ್ ಕುರಿತು “The Historical Records of the Imperial Visit to India 1911” ಎಂಬ ಕೃತಿಯಲ್ಲಿ ಸಂಪೂರ್ಣ ಮಾಹಿತಿಗಳನ್ನು ನೋಡಬಹುದಾಗಿದೆ. ಈ ಕೃತಿಯ ಪುಟ ಸಂಖ್ಯೆ 307-310ರಲ್ಲಿ ದೆಹಲಿ ದರ್ಬಾರಿನ ಕುರಿತು ಮಾಹಿತಿ ನೀಡಲಾಗಿದೆ. ಆ ಸಂದರ್ಭದಲ್ಲಿ ಯಾವುದೇ ಸ್ವಾಗತ ಗೀತೆ ಹಾಡಿರುವ ಮಾಹಿತಿ ಇಲ್ಲ. ಕಿಂಗ್ ಜಾರ್ಜ್ ಮತ್ತು ಕ್ವಿನ್ ಮೇರಿ ಡಿಸೆಂಬರ್ 30, 1911 ರಿಂದ ಜನವರಿ 08, 1992ರ ವರೆಗೆ ಒಟ್ಟು 10 ದಿನಗಳ ಕಾಲ ಕೊಲ್ಕತ್ತಾ ಪ್ರವಾಸದಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಸಹ 5ನೇ ಜಾರ್ಜ್ ಸ್ವಾಗತಿಸಲು ಯಾವುದೇ ಗೀತೆಯನ್ನು ಹಾಡಿರುವ ಉಲ್ಲೇಖವಿಲ್ಲ. ಠಾಗೋರರು ನಿಜಕ್ಕೂ ಜಾರ್ಜ್ ಅನ್ನು ಸ್ವಾಗತಿಸಲೆಂದೇ ಬರೆದಿದ್ದರೆ ಅವರು ನಡೆಸಿದ ಪರೇಡ್ ಗಳ ಸಂದರ್ಭದಲ್ಲಿ ಹಾಡಲಾಗುತ್ತಿತ್ತು.

Tagore

ಆದರೂ ಕೆಲವು ಸಾಮ್ರಾಜ್ಯಶಾಹಿ ಬೆಂಬಲದ ಪತ್ರಿಕೆಗಳು ಟ್ಯಾಗೋರರ ಗೀತೆಯು 5ನೇ ಜಾರ್ಜ್‌ಗಾಗಿ ರಚಿಸಿದ ಸ್ತುತಿಗೀತೆ ಎಂದು ಭಾವಿಸಿ ಬರೆದರು. ಭಾರತವನ್ನು ಮಾತೆಯ ರೂಪದಲ್ಲಿ ನೋಡಲಾಗುತ್ತದೆ. ಭಾರತದ ಅಧಿನಾಯಕ ಎನ್ನುವುದು 5ನೇ ಕಿಂಗ್ ಜಾರ್ಜ್ ಅನ್ನು ಉದ್ದೇಶಿಸಿಯೇ ಹೇಳಲಾಗಿದೆ ಎಂಬ ವಾದ ಹೂಡಿದರು. ಆದರೆ ಈ ವಾದಗಳನ್ನು ಠಾಗೋರರು ಸಾರ್ವಜನಿಕವಾಗಿ ತಳ್ಳಿ ಹಾಕಿದರು. 1937 ರಲ್ಲಿ ಪುಲಿನ್ ಬಿಹಾರಿ ಸೇನ್ ಅವರಿಗೆ ಬರೆದ ಪತ್ರದಲ್ಲಿ ಈ ಗೀತೆ ಬರೆದ ಉದ್ದೇಶವನ್ನು ತಿಳಿಸುತ್ತ “ಮಹಾರಾಜನ(5ನೇ ಕಿಂಗ್ ಜಾರ್ಜ್) ಸೇವೆಯಲ್ಲಿದ್ದ ಒಬ್ಬ ಉನ್ನತ ಅಧಿಕಾರಿ ಚಕ್ರವರ್ತಿಗೆ ಸ್ವಾಗತ ಗೀತೆಯನ್ನು ಬರೆಯಲು ನನ್ನನ್ನು ಕೇಳಿಕೊಂಡರು, ಅದು ನನ್ನ ಹೃದಯವನ್ನು ನಡುಗಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತದ ರಥದ ನಿಯಂತ್ರಣವನ್ನು ಏರಿಳಿತಗಳ ದಾರಿಗಳಿದ್ದರು ದೃಢವಾಗಿ ನಡೆಸುತ್ತಿರುವ ಭಾರತದ ಭಾಗ್ಯ ವಿಧಾತನ(God of Destiny) ವಿಜಯವನ್ನು ಘೋಷಿಸಿದೆ” ಎಂದಿದ್ದಾರೆ. ಮುಂದುವರೆದು, “ಈ ಗೀತೆಯನ್ನು 5ನೇ ಜಾರ್ಜ್ ಸ್ವಗತಕ್ಕೆ ಬರೆದದ್ದೇ ಎಂಬ ಪ್ರಶ್ನೆಗೆ ಉತ್ತರಿಸುವುದೇ ಅಪಮಾನಕಾರಿ” ಎಂದಿದ್ದಾರೆ.

ನಂತರ, 1939 ಡಿಸೆಂಬರ್ 19 ರಂದು ದ ಸ್ಟೇಟ್ಸ್ಮೆನ್ (The Statesman) ಪತ್ರಿಕೆಗೆ ಟ್ಯಾಗೋರ್ ಬರೆದ ಪತ್ರದಲ್ಲಿ“ಜನರು ಓದಿಕೊಂಡಿರುವ ಆ ಅತಿರೇಕದ ನಿಷ್ಠಭಾವನೆ ಅವರದೇ ತಪ್ಪು ವ್ಯಾಖ್ಯಾನವಾಗಿದೆ. ಈ ಕವನದಲ್ಲಿ ಜಾರ್ಜ್ ಅಥವಾ ಯಾವುದಾದರೂ ರಾಜನ ಕುರಿತು ಒಂದು ಶಬ್ದವೂ ಇಲ್ಲ. ನಾನು ಭಾರತ ಭಾಗ್ಯವಿಧಾತನಿಗೆಭಾರತದ ದೈವಶಕ್ತಿಗೆ ಪ್ರಣಾಮ ಸಲ್ಲಿಸಿದ್ದೆ.” ಎಂದು ಹೇಳಿದ್ದಾರೆ. ಆದರೆ ಅಂದು ಬ್ರಿಟಿಷ್ ಸಾಮ್ರಾಜ್ಯಶಾಹಿ ಪರವಾಗಿದ್ದ ಪತ್ರಿಕೆಗಳು ಮಾಡಿದ ತಪ್ಪು ವ್ಯಾಖ್ಯಾನವನ್ನೇ ಮುಂದಿಟ್ಟುಕೊಂಡು 60 ಮತ್ತು 80ರ ದಶಕದಲ್ಲಿಯೂ ಸಹ ಇದೇ ರೀತಿಯ ಟೀಕೆಗಳನ್ನು ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಆರ್.ಎಸ್.ಎಸ್ ಮತ್ತು ಬಿಜೆಪಿ ಕಾಲಕಾಲಕ್ಕೆ ಈ ವಿವಾದವನ್ನು ಪುನಃ ಜೀವಂತಗೊಳಿಸುತ್ತಿವೆ.

ರವಿಂದ್ರನಾಥ್ ಟ್ಯಾಗೋರರ ಸಾಹಿತ್ಯವನ್ನು ಓದಿದವರು, ಅವರ ಬದುಕನ್ನು ಅರ್ಥ ಮಾಡಿಕೊಂಡವರು ಯಾರೂ ಸಹ ಅವರು ಬ್ರಿಟಿಷ್ ಆಡಳಿತ, ವಸಾಹತುಶಾಹಿಯ ಪರವಾಗಿದ್ದರು ಎಂಬ ವಾದವನ್ನು ಒಪ್ಪುವುದಿಲ್ಲ. ಟ್ಯಾಗೋರರ ದೇಶಾಭಿಮಾನವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರು ರಚಿಸಿದ ದೇಶಭಕ್ತಿಗೀತೆಗಳ ಸಂಕಲನ ನೈವೇದ್ಯ(1901) ಓದಬೇಕು. 100 ದೇಶಭಕ್ತಿಗೀತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ಎಂ.ಆರ್.ಸಿ. ನಾಗರಾಜನ್ ಅವರು ಮೂಲ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ವಂದೇ ಮಾತರಂ ಗೀತೆಯ ಹಿನ್ನೆಲೆ

ಬಂಕಿಮಚಂದ್ರ ಚಟರ್ಜಿ(ಚಟ್ಟೋಪಾಧ್ಯಾಯ)ಯವರು ರಚಿಸಿದ ‘ಆನಂದಮಠ’ (1882) ಹದಿನೆಂಟನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಸರ್ಕಾರದ ಮತ್ತು ಮುಸ್ಲಿಂ ಜಮಿನ್ದಾರರ ದಬ್ಬಾಳಿಕೆಯ ವಿರುದ್ಧ ಹಿಂದೂ ಸನ್ಯಾಸಿಗಳು ನಡೆಸುವ ಹೋರಾಟದ ವಸ್ತುವುಳ್ಳ ಕಾದಂಬರಿ. ಇದರಲ್ಲಿ ಬ್ರಿಟಿಷರಿಗಿಂತ ಮುಸ್ಲಿಮರು ಹಿಂದೂಗಳ ಶೋಷಣೆಕಾರರು ಎಂಬರ್ಥದಲ್ಲಿ ಚಿತ್ರಿಸಲಾಗಿದೆ. ಈ ಕಾದಂಬರಿ ‘ವಂದೇ ಮಾತರಂ’ ಗೀತೆಯನ್ನು ಒಳಗೊಂಡಿದೆ. ಈ ಗೀತೆಯನ್ನು ಮೊದಲ ಬಾರಿಗೆ 1896ರಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ರವಿಂದ್ರನಾಥ್ ಟ್ಯಾಗೋರ್ ಅವರು ಹಾಡಿ ಪ್ರಚುರಪಡಿಸಿದರು. ಅಂದಿನಿಂದ ಈ ಗೀತೆ ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಹಾಡಲಾಗುತ್ತಿತ್ತು. ಈ ಗೀತೆ ಸ್ವಾತಂತ್ರ್ಯ ಹೋರಾಟ, ಬಂಗಾಳ ವಿಭಜನೆ ಮತ್ತು ಸ್ವದೇಶಿ ಚಳವಳಿಗಳನ್ನು ಮುನ್ನಡೆಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರಿತು. ಇದನ್ನು ಬ್ರಿಟಿಷರ ವಿರುದ್ಧ ಹಿಂದೂಗಳು, ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮೀಯರು ಒಟ್ಟಾಗಿ ಹಾಡುತ್ತಿದ್ದರು. ಆದರೆ, 1930ರ ನಂತರ ಅದರಲ್ಲಿ ಮೂರ್ತಿಪೂಜೆಯ ಪ್ರಸ್ತಾಪವಿರುವುದರಿಂದ ಅದನ್ನು ಹಾಡಲು ಮುಸ್ಲಿಮರು ನಿರಾಕರಿಸಿದರು.

vande tcEV0L2

ಮೂಲ ವಂದೇ ಮಾತರಂ ಗೀತೆ 6 ಚರಣಗಳನ್ನು ಒಳಗೊಂಡಿತ್ತು. ಅದರಲ್ಲಿ, ಮೊದಲೆರಡು ಚರಣಗಳು ನದಿಗಳು, ಹಸಿರು ಮತ್ತು ಸಮೃದ್ಧಿಯಿಂದ ತುಂಬಿರುವ ಭಾರತದ(ಮಾತೃಭೂಮಿ) ಸುಂದರ ವರ್ಣನೆಯಿದೆ. ಮೂರನೇ ಚರಣದಿಂದ, ಬಂಕಿಮರು ಹಿಂದೂ ದೇವತೆಗಳಾದ ಭೈರವಿ(ಕಾಳಿ), ದುರ್ಗಿ ಮತ್ತು ಸರಸ್ವತಿಯನ್ನು ಭಾರತದ ದೈವಿಕ ಶಕ್ತಿಯ ಸಂಕೇತಗಳಾಗಿ ಉಲ್ಲೇಖಿಸಿರುವುದರಿಂದ ಮುಸ್ಲಿಮರು ಹಾಡಲು ನಿರಾಕರಿಸುತ್ತಿದ್ದರು. ಈ ಹಾಡಿನಲ್ಲಿ ದುರ್ಗಿಯನ್ನು ಶತ್ರು ಸಂಹಾರಿಣಿ ಎಂದು ಸ್ತುತಿಸಿರುವುದರ ಹಿಂದೆ ಮುಸ್ಲಿಮರನ್ನು ಶತ್ರುಗಳನ್ನಾಗಿ ಬಿಂಬಿಸಲಾಗಿತ್ತು. ಇದನ್ನು ಮನಗಂಡ ರವಿಂದ್ರನಾಥ ಟ್ಯಾಗೋರರು ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಸ್ಫೂರ್ತಿಯುತ ಪ್ರಭಾವ ಬೀರುತ್ತಿದ್ದ ‘ವಂದೇಮಾತರಂ’ ಗೀತೆಯಿಂದ ಹಾಡುವುದಕ್ಕೆ ಉಚಿತವಾದ ಸಾಲುಗಳನ್ನು ಆರಿಸಿದರು. ಅದರಲ್ಲಿ ಯಾವುದೇ ಮತಧರ್ಮದ ಅಂಶವಿಲ್ಲದಿರುವುದನ್ನು ಸ್ಪಷ್ಟಪಡಿಸಿದರು.

ಜನಗಣಮನವನ್ನು ರಾಷ್ಟ್ರಗೀತೆಯಾಗಿ ಸ್ವೀಕರಿಸಿದ್ದು

ವಂದೇಮಾತರಂ ಗೀತೆಯನ್ನೇ ರಾಷ್ಟ್ರಗೀತೆಯನ್ನಾಗಿ ಮುಂದುವರೆಸಬೇಕು ಎಂದು ಕಾಂಗ್ರೆಸ್‌ನ ಕೆಲವು ಮುಖಂಡರು ಅಭಿಪ್ರಾಯಪಟ್ಟರು. ಇನ್ನೂ ಕೆಲವರು ಇದು ಹಿಂದೂ ಧಾರ್ಮಿಕ ಗೀತೆ, ಹಾಗಾಗಿ ರಾಷ್ಟ್ರೀಯತೆಯ ಸಭೆಗೆ ಸರಿಹೊಂದುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ, ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯರಾಗಿದ್ದ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಟ್ಯಾಗೋರರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. 1937ರ ಅಕ್ಟೋಬರ್‌ನಲ್ಲಿ ಟ್ಯಾಗೋರರಿಗೆ ಪತ್ರ ಬರೆದು ಈ ಕುರಿತು ಚರ್ಚಿಸಿದಾಗ, ಟ್ಯಾಗೋರರು ಅದು ಹಿಂದೂ ದೇವತೆಯ ಆರಾಧನಾ ಗೀತೆ. ರಾಷ್ಟ್ರಿಯ ಸಭೆಗೆ ಸರಿಹೊಂದದು ಎಂಬ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1937 ರಲ್ಲಿ ಸಾಮೂಹಿಕವಾಗಿ ಅಧಿಕೃತ ಮತ್ತು ಸಾರ್ವಜನಿಕ ಬಳಕೆಗಾಗಿ ಧಾರ್ಮಿಕ ನಿಷ್ಪಕ್ಷಪಾತವಾದ ಮೊದಲ ಎರಡು ಚರಣಗಳನ್ನು ಮಾತ್ರ ಅಳವಡಿಸಿಕೊಳ್ಳಲು ನಿರ್ಧರಿಸಿತು. ಆದರೆ ದೇಶದ ಎಲ್ಲ ಸಮಸ್ಯೆಗಳಿಗೂ ಜವಾಹರಲಾಲ್ ನೆಹರೂ ಅವರನ್ನು ಎಳೆದು ತರುವ ಮೋದಿ ಮತ್ತು ಬಿಜೆಪಿಗರು ನೆಹರೂ ಅವರು ಏಕಪಕ್ಷೀಯವಾಗಿ ನಿರ್ಧರಿಸಿ ವಂದೇ ಮಾತರಂ ಗೀತೆಯಲ್ಲಿದ್ದ ಮಾತೆ ದುರ್ಗೆಯನ್ನು ಸ್ತುತಿಸುವ ಸಾಲುಗಳನ್ನು ಕೈಬಿಟ್ಟಿದ್ದಾರೆ ಎಂಬ ಮತ್ತೊಂದು ಸುಳ್ಳು ಆರೋಪವನ್ನು ಹರಿಬಿಟ್ಟಿದ್ದಾರೆ.

ಟ್ಯಾಗೋರರ “ಭಾರತ ಭಾಗ್ಯವಿಧಾತ” ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಸೂಚಿಸಿದವರಲ್ಲಿ ಮೊದಲಿಗರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಾಗಿದ್ದರು. ಅವರು ಧರ್ಮನಿರಪೇಕ್ಷಿತ ರಾಷ್ಟ್ರವನ್ನು ಕಟ್ಟುವ ದೃಢಸಂಕಲ್ಪ ಹೊಂದಿದ್ದರು. ಅವರ ಆಝಾದ್ ಹಿಂದ್ ಫೌಜ್ ಸೇನೆಯಲ್ಲಿ ಎಲ್ಲ ಧರ್ಮದವರೂ ಇದ್ದರು. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು ಎಲ್ಲರೂ ಒಗ್ಗಟ್ಟಾಗಿದ್ದರು. ಭಾರತ ಸ್ವತಂತ್ರವಾಗಬೇಕೆಂದರೆ, ಪ್ರತಿಯೊಬ್ಬರೂ ವರ್ಗ, ಜಾತಿ, ಲಿಂಗ, ಧರ್ಮವನ್ನು ಮರೆಯಬೇಕಿದೆ ಮತ್ತು ದೇಶಕ್ಕಾಗಿ ಒಂದಾಗಬೇಕಿದೆ ಎಂಬುದು ಅವರ ನಿಲುವಾಗಿತ್ತು. ಅವರು ಜನಗಣಮನ ಗೀತೆ ಭಾರತದ ಎಲ್ಲಾ ಪ್ರದೇಶ ಮತ್ತು ಧರ್ಮಗಳನ್ನು ಪ್ರತಿನಿಧಿಸುತ್ತದೆ ಎಂದು ಬಹುವಾಗಿ ಮೆಚ್ಚಿದ್ದರು. ಟ್ಯಾಗೋರರು ಸಹ ಧರ್ಮ ಮತ್ತು ರಾಷ್ಟ್ರೀಯತೆಯ ಸಂಕುಚಿತ ಮಿತಿಯ ಆಚೆಗೆ ಯೋಚಿಸುವಂತಹ ಮಹಾಮಾನವತಾವಾದಿಯಾಗಿದ್ದರು.

1941ರಲ್ಲಿ ಸ್ವಾತಂತ್ರ್ಯ ಚಳವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿಯೇ ಆಗಸ್ಟ್ 24ರಂದು ಟ್ಯಾಗೋರರು ನಿಧನ ಹೊಂದಿದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಯಿತು. ಅದೇ ವರ್ಷ ಸೆಪ್ಟಂಬರ್ 11ರಂದು ಜರ್ಮನ್-ಇಂಡಿಯನ್ ಸೊಸೈಟಿಯನ್ನು ನೇತಾಜಿ ಸುಭಾಷ್ ಚಂದ್ರ ಬೋಸರು ಹ್ಯಾಂಬರ್ಗ್‌ನಲ್ಲಿ ಉದ್ಘಾಟಿಸಿದರು. ಅಲ್ಲಿ ಅವರು ಟ್ಯಾಗೋರರ ಭಾರತೊ ಭಾಗ್ಯೊ ಬಿಧಾತದ 55 ಸೆಕೆಂಡುಗಳ ಆವೃತ್ತಿಯನ್ನು ಪರಿಚಯಿಸಿದರು. ಚೇಂಬರ್ ಆರ್ಕೆಸ್ಟ್ರಾ ಆಫ್ ರೇಡಿಯೊ ಹ್ಯಾಂಬರ್ಗ್ ಹೆಸರಿನ ಬ್ಯಾಂಡ್ ಅದನ್ನು ನುಡಿಸಿತ್ತು. ಅದು ನೇತಾಜಿಯವರಿಗೆ ಇಷ್ಟವಾಗಿ ಬಾಂಗ್ಲಾ ಭಾಷೆಯಲ್ಲಿದ್ದ ಈ ಗೀತೆಯನ್ನು ಸರಳ ಹಿಂದುಸ್ಥಾನಿಗೆ ಭಾಷಾಂತರಿಸಲು ಕ್ಯಾಪ್ಟನ್ ಆಬಿದ್ ಹಸನ್ ಅವರಿಗೆ ನೇತಾಜಿಯವರು ಹೇಳುತ್ತಾರೆ. ಅದರಂತೆ ಆಬಿದ್ ಹಸನ್ ಅದನ್ನು “ಶುಭ ಸುಖ ಚೈನ್ ಕಿ ಬರ್‌ಖಾ ಬರ್ಸೆ” ಎಂದು ಭಾಷಾಂತರಿಸುತ್ತಾರೆ. ಕ್ಯಾಪ್ಟನ್ ರಾಮ್ ಸಿಂಗ್ ಠಾಕುರ ಸಂಗೀತ ಸಂಯೋಜನೆ ಮಾಡುತ್ತಾರೆ. ನಂತರ ಅದು ಆಝಾದ್ ಹಿಂದ್ ಫೌಜ್‌ನ ರಾಷ್ಟ್ರಗೀತೆಯಾಗುತ್ತದೆ.

ವಂದೇ ಮಾತರಂ ಮತ್ತು ಜನಗಣಮನ ಗೀತೆಗಳ ನಡುವೆ ಯಾವುದನ್ನು ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಬೇಕು ಎಂಬ ಕುರಿತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಪಟೇಲರು, ಅಂಬೇಡ್ಕರ್, ನೆಹರು, ಮತ್ತು ಅಬ್ದುಲ್ ಕಲಾಂ ಆಝಾದ್ ಮೊದಲಾದವರು ಜನಗಣಮನ ಆಯ್ಕೆ ಮಾಡಿದರು, ಅದು ಭಾರತದ ಸರ್ವಜನಾಂಗದ ಏಕತೆ, ವೈವಿಧ್ಯ, ಮತ್ತು ವಿಶ್ವಮಾನವತೆ ಪ್ರತಿಬಿಂಬಿಸುತ್ತದೆ ಎಂದು. 1947ರಲ್ಲಿ ಸ್ವಾತಂತ್ರ್ಯದ ದಿನ ತಮ್ಮ ಮಧ್ಯರಾತ್ರಿಯ ಭಾಷಣದ ನಂತರ ನೆಹರೂ ಅವರು ಇಡೀ ಸಂವಿಧಾನ ಸಭೆಯೊಂದಿಗೆ ಜನ ಗಣ ಮನ ಹಾಡಿದರು. ಒಂದು ವರ್ಷದ ಬಳಿಕ, 1948 ಆಗಸ್ಟ್ 25ರಂದು, 1942ರಲ್ಲಿ ಸುಭಾಷ್ ಚಂದ್ರ ಬೋಸರು ಆರಿಸಿಕೊಂಡಿದ್ದ “ಜನಗಣಮನ”ದ ಮೊದಲ ಆವೃತ್ತಿಯನ್ನು ರಾಷ್ಟ್ರಗೀತೆಯಾಗಿಸುವ ಪ್ರಸ್ತಾಪವನ್ನು ನೆಹರೂ ಸಚಿವ ಸಂಪುಟದ ಮುಂದಿಟ್ಟರು. ಎಲ್ಲರೂ ಸಮ್ಮತಿಸಿದರು. 1950ರ ಜನವರಿ 24ರಂದು ಈ ಗೀತೆ ನಮ್ಮ ರಾಷ್ಟ್ರಗೀತೆಯಾಯಿತು. ‘ವಂದೇ ಮಾತರಂ’ಅನ್ನು ‘ರಾಷ್ಟ್ರೀಯ ಹಾಡಾ’ಗಿಯೂ ಅಂಗೀಕರಿಸಲಾಯಿತು.

ಆರ್.ಎಸ್.ಎಸ್ “ಜನಗಣಮನ” ಗೀತೆಯ ಕುರಿತು ಅಪಪ್ರಚಾರ ಮಾಡುವುದರ ಹಿಂದೆ ಬಂಕಿಮಚಂದ್ರ ಚಟರ್ಜಿಯವರು ರಚಿಸಿದ “ವಂದೇ ಮಾತರಂ” ಗೀತೆಯನ್ನು ಸ್ವೀಕರಿಸಲಿಲ್ಲವಲ್ಲ ಎಂಬ ಅಸಹನೆಯೂ ಇರಬಹುದು. ಏಕೆಂದರೆ, ವಂದೇ ಮಾತರಂನಲ್ಲಿ ಬರುವ ಮಾತೃಭೂಮಿ ಕಲ್ಪನೆ ಆರ್.ಎಸ್.ಎಸ್ ಪ್ರತಿಪಾದಿಸುವ ಮಾತೃಭೂಮಿ ಕಲ್ಪನೆಗೆ ಸಾಮ್ಯತೆಗಳು ಇರುವುದರಿಂದ. ಹಾಗೂ ಆನಂದಮಠ ಕಾದಂಬರಿ ಹಿಂದೂ ರಾಷ್ಟ್ರ ಪರಿಕಲ್ಪನೆಗೆ ಮತ್ತು ಮುಸ್ಲಿಂ ದ್ವೇಷಕ್ಕೆ ಬೆಂಬಲ ಸೂಚಿಸುತ್ತದೆ ಎಂಬ ಕಾರಣಕ್ಕಾಗಿ. ಆದರೆ ಆರ್.ಎಸ್.ಎಸ್ ಸ್ವತಃ ಈ ಗೀತೆಯನ್ನು ತಮ್ಮ ಸಂಘದ ಪ್ರಾರ್ಥನಾ ಗೀತೆಯಾಗಿ ಸ್ವೀಕರಿಸಬಹುದಾಗಿತ್ತು, ಹಾಗೆ ಮಾಡದೆ ನರಹರ್ ನಾರಾಯಣ್ ಭಿಡೆ ರಚಿಸಿದ  “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಹಾಡನ್ನು ಅಳವಡಿಸಿಕೊಂಡಿತು.

ಇದನ್ನೂ ಓದಿ ಬಿಹಾರವು ಚಂಡೀಗಢದಂತೆ ಅಲ್ಲ; ಎಕ್ಸಿಟ್ ಪೋಲ್‌ ತಿರಸ್ಕರಿಸಿದ ದೀಪಾಂಕರ್ ಭಟ್ಟಾಚಾರ್ಯ

ಸ್ವಾತಂತ್ರ್ಯ ಚಳುವಳಿಯ ಸಂದರ್ಭದಿಂದಲೂ ಹಿಂದೂ ಮಹಾಸಭಾ ಮತ್ತು ಆರ್.ಎಸ್.ಎಸ್ ತಮ್ಮ ಹಿಂದೂ ರಾಷ್ಟ್ರೀಯವಾದಿ ಅರ್ಥಾತ್ ಬ್ರಾಹ್ಮಣೀಯ ಹಿಂದೂ ಬಂಡವಾಳಶಾಹಿಯನ್ನು ಒಪ್ಪದ, ಸ್ವೀಕರಿಸದ ಸಂದರ್ಭಗಳಲ್ಲಿ ಯಾವುದೇ ನಿರ್ಧಾರ ಅಥವಾ ನಿರ್ಣಯ ಕೈಗೊಳ್ಳಲಿ ಅವುಗಳನ್ನು ತಿರಸ್ಕರಿಸಿ, ನಿರಂತರವಾಗಿ ಅಪಪ್ರಚಾರ ಮತ್ತು ದಾಳಿಯನ್ನು ಮಾಡುತ್ತಿವೆ. ಮನುಸ್ಮೃತಿಯ ಬದಲಿಗೆ ಭಾರತೀಯ ಸಂವಿಧಾನ, ಭಗವಾಧ್ವಜದ ಬದಲಿಗೆ ತ್ರಿವರ್ಣ ಧ್ವಜ, ವಂದೇ ಮಾತರಂ ಬದಲಿಗೆ ಜನಗಣಮನ ಸ್ವೀಕರಿಸಿದ ಕಾರಣಕ್ಕಾಗಿ ಅಸಹನೆಗೊಂಡು ನಮ್ಮ ರಾಷ್ಟ್ರೀಯ ಸಂಕೇತಗಳ ಕುರಿತು ತೀವ್ರ ಅಗೌರವ ಮತ್ತು ಅಸಮಧಾನ ತೋರುತ್ತಿವೆ. ಇದು ತಾವು ನಿರ್ಧರಿಸಿದ್ದನ್ನೇ ಭಾರತೀಯರು ಸ್ವೀಕರಿಸಬೇಕು ಎಂಬ ಸರ್ವಾಧಿಕಾರತ್ವದ ದೋರಣೆ ಹೊಂದಿರುವುದನ್ನು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ ‘ವಂದೇ ಮಾತರಂ’ ಇತಿಹಾಸ ಬೇರೆಯೇ ಹೇಳುತ್ತದೆ; ಆದರೆ, ಬಿಜೆಪಿ ಅಜೆಂಡಾಗೆ ಸರಿ ಹೊಂದುತ್ತದೆ!

ನಮ್ಮ ದೇಶದ ಸಂವಿಧಾನದ ಅಡಿಯಲ್ಲಿ ಎಲ್ಲಾ ಅಧಿಕಾರ, ಸ್ಥಾನಮಾನಗಳನ್ನು ಅನುಭವಿಸುತ್ತಲೇ ಸಂವಿಧಾನವನ್ನು, ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಪಿತ ಯಾವುದನ್ನೂ ಒಪ್ಪದೆ ಆಚರಣೆಯಲ್ಲಿ ದೇಶದ್ರೋಹಿಗಳಂತೆ ನಡೆದುಕೊಳ್ಳುವ ಸ್ವಯಂ ಘೋಷಿತ ದೇಶಭಕ್ತರಾದ ಬಿಜೆಪಿ ಮತ್ತು ಆರ್.ಎಸ್.ಎಸ್.ನವರ ದೇಶಪ್ರೇಮ ಬೂಟಾಟಿಕೆಯಲ್ಲದೆ ಮತ್ತೇನು? ಇಂದು ನಮ್ಮ ದೇಶದಲ್ಲಿ ಚರ್ಚಿಸಲು ಹಲವು ಸಂಗತಿಗಳಿವೆ. ಆದರೆ ಸುಳ್ಳು ಇತಿಹಾಸದ ಮೂಲಕ ಸಂದರ್ಭಕ್ಕೆ ತಕ್ಕಂತೆ ಹೊಸ ವಿವಾದಗಳನ್ನು ಸೃಷ್ಟಿಸಿ ಅವುಗಳ ಚರ್ಚೆಯಲ್ಲಿಯೇ ಜನರು ಕಾಲಹರಣ ಮಾಡುವಂತೆ, ಮುಕ್ತವಾಗಿ ಚಿಂತಿಸದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುವ ಇಂತಹ ವ್ಯವಸ್ಥಿತ ಸಂಚುಗಳನ್ನು ಭಾರತೀಯರು ಒಟ್ಟಾಗಿ ಎದುರಿಸಬೇಕಿದೆ.

?s=150&d=mp&r=g
ಪ್ರಮೋದ್ ಬೆಳಗೋಡ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...