“ಮೈಸೂರಿನ ಹೋರಾಟಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೋರಾಟದ ಬೆಂಕಿ ರಾಜ್ಯಕ್ಕೆ ಕಾಡ್ಗಿಚ್ಚಿನಂತೆ ಹಬ್ಬುತ್ತದೆ ಎಂಬುದು ಸಿದ್ದರಾಮಯ್ಯನವರಿಗೆ ಸ್ಪಲ್ಪ ದಿನಗಳಲ್ಲಿ ತಿಳಿಯಲಿದೆ” ಎಂದಿದ್ದಾರೆ ಹಿರಿಯ ಹೋರಾಟಗಾರ ಎಸ್.ಮಾರೆಪ್ಪ.
ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ (ಒಳಮೀಸಲಾತಿ) ಮತ್ತಷ್ಟು ಕಗ್ಗಂಟಾಗಿದೆ. ಸ್ಪಷ್ಟವಾದ ನಿಲುವು ತಾಳದ ಸರ್ಕಾರ ಗೊಂದಲಗಳ ಮೇಲೆ ಗೊಂದಲ ಸೃಷ್ಟಿಸಿ, ನಂಬಿಕೆಗಳನ್ನು ಹುಸಿಗೊಳಿಸಿದೆ ಎಂಬ ಆಕ್ರೋಶ ಮಡುಗಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟೂರಾದ ಸಿದ್ದರಾಮನ ಹುಂಡಿಯಿಂದ ಮೈಸೂರಿನವರೆಗೆ ಪಾದಯಾತ್ರೆಯನ್ನು ನಡೆಸುವುದಾಗಿ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ ಘೋಷಿಸಿದೆ. ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನದಂದು, ಅಂದರೆ ನಾಳೆ (ಡಿ.6ರಂದು) ಆರಂಭವಾಗುವ ಪಾದಯಾತ್ರೆಯು ಟಿ.ನರಸೀಪುರ, ಬನ್ನೂರು, ವ್ಯಾಸರಾಯಪುರ ಮೂಲಕ ಸಾಗಿ ಡಿಸೆಂಬರ್ 11ರಂದು ಮೈಸೂರು ಪ್ರವೇಶಿಸುತ್ತದೆ. ಅಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಪುರಭವನದ ಬಳಿ ಪ್ರತಿಭಟನಾ ಸಮಾವೇಶವನ್ನು ಹೋರಾಟಗಾರರು ಆಯೋಜಿಸಿದ್ದಾರೆ. ಆದರೆ, ಪಾದಯಾತ್ರೆಗೂ ಮತ್ತು ಪುರಭವನದಲ್ಲಿ ನಡೆಯಬೇಕಾದ ಕಾರ್ಯಕ್ರಮಕ್ಕೂ ಅನುಮತಿ ನೀಡದಿರುವುದು ಸರ್ಕಾರದ ಮೇಲೆ ಮತ್ತಷ್ಟು ಸಿಟ್ಟಾಗಲು ಕಾರಣವಾಗಿದೆ.
“ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ, ಪ್ರತಿಭಟನಾ ಹಕ್ಕನ್ನು ಕಿತ್ತುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಅಪಾಯಕಾರಿ ಬಿಜೆಪಿ ಅಧಿಕಾರಕ್ಕೇರುತ್ತದೆ ಎಂಬ ಭಯದಲ್ಲಿ ಕಾಂಗ್ರೆಸ್‌ನವರನ್ನು ಗೆಲ್ಲಿಸಿದೆವು. ಆದರೆ ಇವರು ಮತ್ತಷ್ಟು ಅಪಾಯಕಾರಿಯಾಗಿ ವರ್ತಿಸುತ್ತಿದ್ದಾರೆ” ಎನ್ನುವುದು ಹಿರಿಯ ಹೋರಾಟಗಾರರ ಆಕ್ರೋಶ.
“ಸಿದ್ದರಾಮನ ಹುಂಡಿಯಲ್ಲೂ, ಮೈಸೂರಿನಲ್ಲೂ, ಎಲ್ಲೂ ಪ್ರತಿಭಟನೆಗೆ ಅನುಮತಿ ನೀಡುವುದಿಲ್ಲ ಎಂದು ಮೈಸೂರು ಎಸ್‌ಪಿ ನಿರ್ದಾಕ್ಷಿಣ್ಯವಾಗಿ, ಖಡಾಖಂಡಿತವಾಗಿ ಹೇಳಿದ್ದಾರೆ. ನೀವು ಬೆಂಗಳೂರಿಗೆ ಹೋಗಿ ಹೋರಾಟ ಮಾಡಿ ಎಂದು ದರ್ಪದಿಂದ, ನಿರ್ಲಕ್ಷ್ಯತನದಿಂದ ತಿಳಿಸಿದ್ದಾರೆ. ಆದರೂ ನಾಳೆ ನಾವು ಸಿದ್ದರಾಮನ ಹುಂಡಿಯಲ್ಲಿ ಹೋರಾಟ ಮಾಡಲೇಬೇಕು. ಮೈಸೂರು ಪೊಲೀಸರು ಹೋರಾಟವನ್ನು ಹತ್ತಿಕ್ಕುತ್ತಾರೆ ಎಂದರೆ ಅವರ ಸರ್ವಾಧಿಕಾರಿ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು. ಸಿದ್ದರಾಮಯ್ಯನವರ ಜಿಲ್ಲೆಯ ಪೊಲೀಸ್ ಇಲಾಖೆಯು ಸಿದ್ದರಾಮಯ್ಯನವರಂತೆಯೇ ವರ್ತನೆ ಮಾಡುತ್ತಿದೆ. ಇದನ್ನು ಖಂಡಿಸಿ ನಾಳೆಯ ಹೋರಾಟವನ್ನು ಇನ್ನಷ್ಟು ಕೆಚ್ಚಿನಿಂದ ಮುನ್ನಡೆಸಬೇಕು. ಪೊಲೀಸರು ನಮ್ಮನ್ನು ತಡೆಯಬಹುದೇ ಹೊರತು ನಮ್ಮ ಹೋರಾಟವನ್ನಲ್ಲ. ಬಹುಶಃ ಈ ಹೋರಾಟದ ಬೆಂಕಿ ಕಾಡ್ಗಿಚ್ಚಿನಂತೆ ರಾಜ್ಯಕ್ಕೆ ಹಬ್ಬುತ್ತದೆ ಎಂಬುದು ಸಿದ್ದರಾಮಯ್ಯನವರಿಗೆ ಸ್ಪಲ್ಪ ದಿನಗಳಲ್ಲಿ ತಿಳಿಯಲಿದೆ” ಎಂದು ಎಚ್ಚರಿಸಿದ್ದಾರೆ ಹಿರಿಯ ಹೋರಾಟಗಾರ ಎಸ್.ಮಾರೆಪ್ಪ.
ಇದನ್ನೂ ಓದಿರಿ: ಸ್ಕೀಮ್ ನೌಕರರ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರಕ್ಕೆ ಫೆಬ್ರವರಿವರೆಗೆ ಗಡುವು: ವರಲಕ್ಷ್ಮಿ
“ಸಿದ್ದರಾಮನ ಹುಂಡಿಯಿಂದ ಹೋರಾಟ ನಡೆಸುವುದು ಖಚಿತ. ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದೇವೆ. ಸರ್ಕಾರ ಅನುಮತಿ ಕೊಡದಿದ್ದರೂ ಹೋರಾಟ ಕೈಬಿಡುವುದಿಲ್ಲ” ಎಂಬ ನಿರ್ಧಾರಕ್ಕೆ ಸಾಮಾಜಿಕ ನ್ಯಾಯ ವೇದಿಕೆ ಬಂದಿದೆ.
ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಏಕಸದಸ್ಯ ಆಯೋಗವು ಕೊಟ್ಟಿದ್ದ ವರದಿ ಜಾರಿಯಾಗಿದ್ದಾರೆ ಇಷ್ಟೆಲ್ಲ ಸಮಸ್ಯೆಗಳು ಬಿಗಡಾಯಿಸುತ್ತಲೇ ಇರಲಿಲ್ಲ ಎಂಬ ಅಭಿಪ್ರಾಯ ದಟ್ಟವಾಗುತ್ತಿದೆ. ರಾಜಕೀಯ ಉದ್ದೇಶಗಳನ್ನಿಟ್ಟುಕೊಂಡು ಜಸ್ಟಿಸ್ ದಾಸ್ ಅವರ ವರದಿಯನ್ನು ಪರಿಷ್ಕರಿಸಿದ್ದ ರಾಜ್ಯ ಸರ್ಕಾರ, ‘ಮಾದಿಗ (ಎಡಗೈ) ಮತ್ತು ಸಂಬಂಧಿತ ಜಾತಿಗಳಿಗೆ ಶೇ. 6, ಹೊಲೆಯ (ಬಲಗೈ) ಮತ್ತು ಸಂಬಂಧಿತ ಜಾತಿಗಳಿಗೆ ಶೇ. 6 ಹಾಗೂ ಬಲಾಢ್ಯ ಸ್ಪೃಶ್ಯರೊಂದಿಗೆ ಅಲೆಮಾರಿ ಮತ್ತು ಅತಿ ಸೂಕ್ಷ್ಮ ಸಮುದಾಯಗಳನ್ನು ಸೇರಿಸಿ ಶೇ. 5ರಷ್ಟು ಮೀಸಲಾತಿ ಸೂತ್ರವನ್ನು ಜಾರಿಗೆ ತಂದಿತ್ತು. ಇದರ ಜೊತೆಗೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಬರೆಸಿರುವವರು ಎಡ ಮತ್ತು ಬಲ- ಎರಡು ಗುಂಪುಗಳಲ್ಲೂ ಮೀಸಲಾತಿ ಸೌಲಭ್ಯ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಒಂದು ಪರ್ಸೆಂಟ್ ಇರಬಹುದಾದ ಎಕೆ, ಎಡಿ, ಎಎಗಳಿಗೂ ಶೇ. 12ರಷ್ಟು ಮೀಸಲಾತಿ ನೀಡಿದಂತಾಗಿದೆ ಎಂಬ ಕನಿಷ್ಠ ಪ್ರಜ್ಞೆಯೂ ಸರ್ಕಾರಕ್ಕೆ ಇಲ್ಲವಾಗಿತ್ತು. ಇತ್ತ ಅಲೆಮಾರಿಗಳು ಜಸ್ಟಿಸ್ ದಾಸ್ ಆಯೋಗದ ಶಿಫಾರಸ್ಸಿನಂತೆ ನಮ್ಮನ್ನು ಪ್ರತ್ಯೇಕವಾಗಿರಿಸಿ ಶೇ. 1ರಷ್ಟು ಮೀಸಲಾತಿಯನ್ನು ಕೊಡಬೇಕೆಂದು ಹೋರಾಡುತ್ತಿದ್ದಾರೆ; ಕೆಲವರು ಹೈಕೋರ್ಟ್ ಮೆಟ್ಟಿಲನ್ನೂ ಏರಿದ್ದಾರೆ.
ಇದೆಲ್ಲದರ ನಡುವೆ ಮತ್ತೊಂದು ಗೊಂದಲ ಏರ್ಪಟ್ಟಿದೆ. ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟುಗಳು ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ, 2022’ರ ಅಡಿಯಲ್ಲಿ ಒಳ ಮೀಸಲಾತಿ ಹೆಚ್ಚಳವನ್ನು ಜಾರಿಗೊಳಿಸದಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ.
ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿತ್ರ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೇರಿದಂತೆ ಹಲವಾರು ಅರ್ಜಿಗಳನ್ನು ಆಲಿಸಿದ ನಂತರ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಮಧ್ಯಂತರ ಆದೇಶವನ್ನು ಹೊರಡಿಸಿದೆ.
“ಅರ್ಜಿಗಳು ಇತ್ಯರ್ಥವಾಗುವವರೆಗೆ ನೇಮಕಾತಿ ಅಥವಾ ಹೆಚ್ಚಿದ ಮೀಸಲಾತಿ ಆಧಾರದ ಮೇಲೆ ನೇಮಕಾತಿಗಳಿಗೆ ಯಾವುದೇ ಅಧಿಸೂಚನೆಗಳನ್ನು ಹೊರಡಿಸಬಾರದು. ಈಗಾಗಲೇ ಪ್ರಾರಂಭವಾಗಿರುವ ನೇಮಕಾತಿಗಳನ್ನು ಮುಂದುವರಿಸಬಹುದು, ಆದರೆ ಈ ನೇಮಕಾತಿಗಳು ಸದ್ಯ ಸಲ್ಲಿಸಲಾಗಿರುವ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ನೇಮಕಾತಿ ಪ್ರಕ್ರಿಯೆ ನಡೆಸಬಹುದಾದರೂ ಒಳಮೀಸಲಾತಿಗೆ ಯಾವ ಮೀಸಲಾತಿ ಪ್ರಮಾಣವನ್ನು ಸರ್ಕಾರ ಒದಗಿಸುತ್ತದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಸಮಿತಿಯನ್ನು ನೇಮಿಸಿ ಮೀಸಲಾತಿ ಹೆಚ್ಚಳದ ನಿರ್ಧಾರ ಪ್ರಕಟಿಸಲಾಗಿತ್ತು. ಸಮಿತಿ ನೀಡಿದ ಶಿಫಾರಸ್ಸಿನ ಅನ್ವಯ ಎಸ್‌ಟಿ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೂ, ಎಸ್‌ಸಿ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೂ ಹೆಚ್ಚಳ ಮಾಡಲಾಗಿತ್ತು. ಆದರೆ ಮೀಸಲಾತಿ ಹೆಚ್ಚಳವು ಕಾನೂನಾತ್ಮಕ ಊರ್ಜಿತದ ತೊಡಕನ್ನು ಎದುರಿಸುತ್ತಲೇ ಇತ್ತು. ಇದನ್ನು ಸಮರ್ಪಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೊಳ್ಳಲಿಲ್ಲ. ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳೆರಡೂ ಪ್ರಮಾದ ಎಸಗಿವೆ.
ಇದನ್ನೂ ಓದಿರಿ: ಗಾಂಧಿ ಮತ್ತು ನಾರಾಯಣ ಗುರುಗಳ ಭೇಟಿಗೆ ಮೂಲವಾಗಿತ್ತು ʼವೈಕಂ ಹೋರಾಟʼ
ಒಳಮೀಸಲಾತಿ ಸಂಬಂಧ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿ, 2024ರ ಆಗಸ್ಟ್ 1ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ನಂತರ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕೆ ನೇಮಕವಾದ ಜಸ್ಟಿಸ್ ದಾಸ್ ಆಯೋಗವು ಶೇ.17ರಷ್ಟು ಮೀಸಲಾತಿ ಅನ್ವಯವೇ ಒಳಮೀಸಲಾತಿಯ ಶಿಫಾರಸ್ಸು ಮಾಡಿತ್ತು. ಕನಿಷ್ಠ ಪಕ್ಷ ಆಯೋಗದ ವರದಿಯನ್ವಯ ಯಥಾವತ್ತು ಒಳಮೀಸಲಾತಿ ಜಾರಿಗೆ ತಂದಿದ್ದರೂ, ಮೀಸಲಾತಿ ಪ್ರಮಾಣ ಶೇ. 15ಕ್ಕೆ ಇಳಿದಾಗಲೂ ಯಾವುದೇ ತೊಡಕಾಗುತ್ತಿರಲಿಲ್ಲ. ಕಾರಣ ಶೇ. 17ರ ಅನುಪಾತವನ್ನು ಶೇ. 15ಕ್ಕೆ ಇಳಿಸುವುದು ತಪ್ಪಾಗುತ್ತಿರಲಿಲ್ಲ. ಶೇ.17ರಷ್ಟು ಮೀಸಲಾತಿ ಊರ್ಜಿತವಾಗಿಲ್ಲವೆಂದು ಕೋರ್ಟ್ ನಿಲುವು ತಾಳಿದರೆ, ಶೇ.15ರ ಮೀಸಲಾತಿಯನ್ನೇ ಹಂಚಿಕೆ ಮಾಡಬೇಕಾಗುತ್ತದೆ. ಆಗ ಸರ್ಕಾರ ಯಾವ ವರದಿಯನ್ನು ಅವಲಂಬಿಸುತ್ತದೆ? ಈಗ ಹಂಚಿಕೆ ಮಾಡಲಾಗಿರುವ ಮೀಸಲಾತಿ ಅನುಪಾತವನ್ನು (6:6:5) ಬದಲಿಸಿದರೆ ಯಾವ ಸಮುದಾಯ ಸುಮ್ಮನಿರುತ್ತದೆ?
ಮೂವತ್ತೈದು ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಮಾದಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನಂತೂ ಕಿಂಚಿತ್ತೂ ಅಲುಗಾಡಿಸಿದರೂ ದೊಡ್ಡ ಪೆಟ್ಟನ್ನೇ ಸರ್ಕಾರ ತಿನ್ನಬೇಕಾಗುತ್ತದೆ. ಜಸ್ಟಿಸ್ ಸದಾಶಿವ ಆಯೋಗದ ವರದಿ ಸೂಚಿಸಿದ ಶೇ. 6ರಷ್ಟು ಮೀಸಲಾತಿ ಪ್ರಮಾಣಕ್ಕೆ ಮಾದಿಗ ಸಮುದಾಯ ಕಳೆದೊಂದು ದಶಕದಿಂದಲೂ ಸ್ಥಿರವಾಗಿ ನಿಂತಿದೆ. ಸದಾಶಿವ ಆಯೋಗದಿಂದ ಹಿಡಿದು ಜಸ್ಟಿಸ್ ನಾಗಮೋಹನ ದಾಸ್ ಆಯೋಗದ ವರದಿವರೆಗೆ ಇತರೆ ಸಮುದಾಯಗಳ ಮೀಸಲಾತಿ ಪ್ರಮಾಣ ಬದಲಾದರೂ ಮಾದಿಗ ಮತ್ತು ಅಲೆಮಾರಿಗಳ ಮೀಸಲಾತಿ ಹಂಚಿಕೆಯ ಪ್ರಮಾಣ ಬದಲಾಗಲಿಲ್ಲ ಎಂಬುದು ಗಮನಾರ್ಹ. ಅಂದರೆ “ಕನಿಷ್ಠ 6 ಪರ್ಸೆಂಟ್ ಆದರೂ ಕೊಟ್ಟು ನಮ್ಮ ಹೋರಾಟಕ್ಕೆ ಬೆಲೆ ಕೊಡಿ, ನಮಗೆ ಇನ್ನೂ ಹೆಚ್ಚಿನ ಪಾಲು ಸಿಗಬೇಕೆಂಬುದು ನಿಜವಾದರೂ ಇಷ್ಟಾದರೂ ಮಾಡಿಬಿಡಿ” ಎಂಬುದು ಸಮುದಾಯದ ಅಂತಃಕರಣದ ನುಡಿ. ಸರ್ಕಾರ ಮಾಡಿಕೊಂಡಿರುವ ಎಡವಟ್ಟನ್ನು ನೋಡಿದರೆ, ಇನ್ನಾವುದೇ ಸಮುದಾಯದ ಮೀಸಲಾತಿ ಪ್ರಮಾಣ ಅದಲು ಬದಲಾದರೂ ಸರ್ಕಾರ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ. ಇಲ್ಲವೇ, ಶೇ.17ರಷ್ಟು ಮೀಸಲಾತಿ ಪ್ರಮಾಣವನ್ನು ಹೇಗಾದರೂ ಸಮರ್ಥಿಸುವ ಕೆಲಸ ಮಾಡಬೇಕಾಗುತ್ತದೆ.
“ಶೇ. 15ರ ಮೀಸಲಾತಿ ಅನ್ವಯ ಹಂಚಿಕೆ ಮಾಡಿದ್ದ ಜಸ್ಟಿಸ್ ಸದಾಶಿವ ಆಯೋಗವು ನಮಗೆ ಶೇ.6ರಷ್ಟು ಮೀಸಲಾತಿ ಕೊಟ್ಟಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. 17ರಷ್ಟು ಮೀಸಲಾತಿ ಪ್ರಮಾಣದಲ್ಲಿ ಶೇ.6ರಷ್ಟು ಮೀಸಲಾತಿಯನ್ನು ಜೆ.ಸಿ. ಮಾಧುಸ್ವಾಮಿ ಉಪಸಮಿತಿ ನಿರ್ಧರಿಸಿತ್ತು. ಜಸ್ಟಿಸ್ ದಾಸ್ ಅವರ ಆಯೋಗವೂ ಶೇ. 6ರಷ್ಟು ಮೀಸಲಾತಿಯನ್ನು ಮಾದಿಗರಿಗೆ ಉಳಿಸಿಕೊಂಡಿತ್ತು. ಯಾವುದೇ ಕಾರಣಕ್ಕೂ ಮಾದಿಗರ ಪಾಲನ್ನು ಕಡಿಮೆ ಮಾಡಲು ಬಿಡುವುದಿಲ್ಲ. ಯಾರಿಗೆ ಎಷ್ಟಾದರೂ ಕೊಟ್ಟುಕೊಳ್ಳಲಿ. ಮಾದಿಗರ ಪಾಲನ್ನು ಶೇ.6ಕ್ಕಿಂತ ಕಡಿಮೆ ಇಳಿಸುವಂತಿಲ್ಲ” ಎನ್ನುವ ಮಾರೆಪ್ಪ, “ಹಲವು ರಾಜ್ಯಗಳಲ್ಲಿ ಈಗಾಗಲೇ ಶೇ.50ರಷ್ಟು ಮೀಸಲಾತಿ ಮಿತಿಯನ್ನು ಮೀರಲಾಗಿದೆ. ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ, ಕೋರ್ಟ್‌ನಲ್ಲಿ ಸಮರ್ಥವಾಗಿ ವಾದವನ್ನು ಮಂಡಿಸಬೇಕು. ಆದರೆ ಸರ್ಕಾರ ಬೇಕಂತಲೇ ವಿಳಂಬನೀತಿ ಅನುಸರಿಸುವಂತೆ ಕಾಣುತ್ತಿದೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
“ಒಳಮೀಸಲಾತಿ ಖಚಿತ ಆಗಬೇಕಾದರೆ, ಸರ್ಕಾರ ಕಾಯ್ದೆಯ ಮೂಲಕ ರಕ್ಷಣೆ ನೀಡಬೇಕು. ಕೇವಲ ಶಿಕ್ಷಣ, ಉದ್ಯೋಗ ನೇಮಕಾತಿಗೆ ಮಾತ್ರ ಮೀಸಲಾತಿ ಒದಗಿಸಬೇಕೆಂದು ನಿರ್ದಿಷ್ಟವಾಗಿ ಸುಪ್ರೀಂ ಕೋರ್ಟ್ ಹೇಳಿಲ್ಲ. ಹೀಗಾಗಿ ಎಲ್ಲೆಲ್ಲಿ ಮೀಸಲಾತಿ ಕೊಡಬಹುದೋ ಅಲ್ಲೆಲ್ಲ ಒಳಮೀಸಲಾತಿಯನ್ನು ಸರ್ಕಾರ ಜಾರಿಗೆ ತರಬೇಕು. ಸಮಗ್ರವಾದ ಒಳಮೀಸಲಾತಿಗಾಗಿ ನಾವು ಒತ್ತಾಯಿಸುತ್ತಿದ್ದೇವೆ. ಎಸ್‌ಸಿಎಸ್‌ಪಿ- ಟಿಎಸ್‌ಪಿ ಅಡಿ ಹಂಚಿಕೆಯಾಗುವ ಅನುದಾನದಲ್ಲೂ ಒಳಮೀಸಲಾತಿಯ ಅನುಪಾತವನ್ನೇ ಅಳವಡಿಸಿಕೊಳ್ಳಬೇಕು. ಈಗಾಗಲೇ ಗುತ್ತಿಗೆ ಪದ್ಧತಿಯಲ್ಲಿ ಮೀಸಲಾತಿ ತಂದಿದ್ದಾರೆ. ಅಲ್ಲೂ ಮೀಸಲಾತಿ ವರ್ಗೀಕರಣ ಆಗಬೇಕು” ಎನ್ನುತ್ತಾರೆ ಹಿರಿಯ ಹೋರಾಟಗಾರ ಬಸವರಾಜ ಕೌತಾಳ್.
ಮತ್ತೊಂದೆಡೆ ಬಿ.ಆರ್. ಭಾಸ್ಕರ್ ಪ್ರಸಾದ್ ಮುಂದಾಳತ್ವದ ಕ್ರಾಂತಿಕಾರಿ ಪಾದಯಾತ್ರೆ ತಂಡದವರು ‘ವಿಧಾನಸೌಧ ಮುತ್ತಿಗೆ’ ಕಾರ್ಯಕ್ರಮವನ್ನು ನಾಳೆಯೇ (ಡಿಸೆಂಬರ್ 6) ಹಮ್ಮಿಕೊಂಡಿದ್ದು ಅದನ್ನೂ ತಡೆ ಹಿಡಿಯುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಎಂದಿನಂತೆ ಹೈಕೋರ್ಟ್ ಆದೇಶವನ್ನು ತೋರಿಸಿ, “ಸೂಕ್ಷ್ಮ ಪ್ರದೇಶವಾದ ವಿಧಾನಸೌಧ ಸುತ್ತಮತ್ತ ಯಾವುದೇ ಹೋರಾಟವನ್ನು ಹಮ್ಮಿಕೊಳ್ಳಬಾರದು, ಫ್ರೀಡಂಪಾರ್ಕ್‌ನಲ್ಲಿ ಮಾತ್ರವೇ ಹೋರಾಟ ನಡೆಸಬೇಕು” ಎಂದು ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಇದನ್ನೂ ಓದಿರಿ: ಸಂಚಾರ್ ಸಾಥಿ | ‘ಡಿಜಿಟಲ್ ಗೂಢಾಚಾರಿಕೆ’ಗೆ ಹೊರಟಿತ್ತೇ ಮೋದಿ ಸರ್ಕಾರ?
ಈ ಕುರಿತು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಭಾಸ್ಕರ್ ಪ್ರಸಾದ್, “ಕಾನೂನು ಬದ್ಧವಾಗಿ ನಾವು ನಮ್ಮ ಒಳಮೀಸಲಾತಿ ಹಕ್ಕನ್ನು ಕೇಳಬಾರದೆಂದು ಈ ನೆಲದ ಯಾವ ಕಾನೂನು ಹೇಳುವುದಿಲ್ಲ. ಮತ್ತು ನೀವೂ ಅದನ್ನು ಹೇಳಲಾಗದು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಾಬಾಸಾಹೇಬರ ಪರಿನಿಬ್ಬಾಣದ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದಾಗ, ‘ಮುಖ್ಯಮಂತ್ರಿಗಳೇ, ಮೊದಲು ತಾವು ಸಂಪೂರ್ಣ ಒಳಮೀಸಲಾತಿ ಜಾರಿಗೊಳಿಸಿ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿರಿ. ಆಗ ಮಾತ್ರ ನಿಮಗೆ ಬಾಬಾಸಾಹೇಬರ ಪಾದ ಸ್ಪರ್ಶಿಸುವ ಅರ್ಹತೆ ಬರುತ್ತದೆ. ಇಲ್ಲದಿದ್ದರೆ ನೀವು ಸಂವಿಧಾನ ಮತ್ತು ಸಾಮಾಜಿಕ ಸಮಾನತೆಯ ಆಶಯದ ವಿರೋಧಿಗಳಾಗುತ್ತೀರಿ’ ಎಂದು ಮಾಧ್ಯಮದ ಮುಂದೆ ಹೇಳಿಕೊಳ್ಳುವುದು ಯಾವ ಕಾನೂನು ಉಲ್ಲಂಘನೆಯೂ ಆಗಲ್ಲ. ನೀವು ಆ ಕಾರಣಕ್ಕಾಗಿ ನಮ್ಮನ್ನು ತಡೆಯುವಂತಿಲ್ಲ. ಶಾಂತಿಯುತವಾಗಿ ನಡೆಯುವ ಇಂತಹ ನಮ್ಮ ನ್ಯಾಯದ ಕೂಗಿನ ಕಾರಣಕ್ಕಾಗಿ ನೀವು ನಮ್ಮನ್ನು ತಡೆಯಬಹುದೆಂದು ಈ ನೆಲದ ಯಾವ ಕಾನೂನು ನಿಮಗೆ ಪರ್ಮಿಟ್ ಮಾಡಲ್ಲ. ಯಾವುದೇ ಕಾನೂನು ಮೀರಿದ ಕ್ರಮಕ್ಕೆ ನೀವುಗಳು ಮುಂದಾಗಿ, ಶೋಷಿತ ಸಮುದಾಯದ ಹಸಿದ ಹೊಟ್ಟೆಯ ಮೇಲೆ ಹೊಡೆಯುವ ಪಾಪದ ಕೆಲಸ ತಾವು ಮಾಡಬಾರದೆಂದು ಈ ಮೂಲಕ ಮತ್ತೊಮ್ಮೆ ವಿನಂತಿಸುತ್ತೇನೆ. ನಮ್ಮ ನ್ಯಾಯದ ದನಿಯ ಜೊತೆ ನಿಮ್ಮ ಸಹಕಾರವೂ ಇರಲಿ” ಎಂದು ಆಗ್ರಹಿಸಿದ್ದಾರೆ.
ಅಲೆಮಾರಿಗಳ ಕೂಗಿಗೆ ಯಾವ ಬೆಲೆ?
ಅಲೆಮಾರಿಗಳ ನೋವಂತೂ ಹೇಳತೀರದು. ಸ್ಪೃಶ್ಯರೊಂದಿಗೆ ಸೇರಿಸಿರುವುದರಿಂದ ಅನ್ಯಾಯವಾಗಿದೆ. ನಮಗೆ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿಯನ್ನು ನೀಡಲೇಬೇಕು ಎಂದು ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಮೊದಲೇ ಬಾರಿಗೆ ರಾಜ್ಯದ ಮೂಲೆಮೂಲೆಯಿಂದ ಅಲೆಮಾರಿಗಳು ಬೆಂಗಳೂರಿಗೆ ಹರಿದು ಬಂದು ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ಗಮನ ಸೆಳೆಯಲು ದೆಹಲಿಯ ಜಂತರ್ ಮಂತರ್‌ಗೂ ಹೋಗಿ ಚಳವಳಿ ನಡೆಸಿದ್ದಾರೆ. “ದೀಪಾವಳಿ ಮುಗಿದ ಮೇಲೆ ಎಲ್ಲವನ್ನೂ ಸರಿಪಡಿಸುತ್ತೇವೆ” ಎಂದು ದೆಹಲಿಯಿಂದ ಹೋರಾಟಗಾರರನ್ನು ವಾಪಸ್ ಕರೆಸಿಕೊಂಡ ಸರ್ಕಾರ, ಕೊಟ್ಟ ಮಾತು ಮರೆತಂತೆ ಕಾಣುತ್ತಿದೆ. ಮೊನ್ನೆ ನಡೆದ ಕ್ಯಾಬಿನೆಟ್ ಕೂಡ ಶೇ.1ರಷ್ಟು ಮೀಸಲಾತಿಯ ಬಗ್ಗೆ ತುಟಿಬಿಚ್ಚಲಿಲ್ಲ. ಮತ್ತೆ ಹೋರಾಟಕ್ಕೆ ಮುಂದಾಗಿರುವ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ, ಈಗ ಬೆಳಗಾವಿ ಚಲೋ ಹಮ್ಮಿಕೊಂಡಿದೆ.
ಒಳಮೀಸಲಾತಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಸ್ಪಷ್ಟ ಮತ್ತು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲೇ ಇಲ್ಲ. ಪದೇಪದೇ ಅನ್ಯಾಯ ಎಸಗುತ್ತಲೇ, ಗೊಂದಲಗಳನ್ನು ಸೃಷ್ಟಿಸುತ್ತಲೇ ಮುಂದುವರಿಯಿತು. ಈಗ ಅಕ್ಷರಶಃ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಈವರೆಗೆ ಸಹಿಸಿಕೊಂಡು ಬಂದ ಹೋರಾಟಗಾರರ ತಾಳ್ಮೆಯ ಕಟ್ಟೆಯೊಡೆಯುವ ಸಾಧ್ಯತೆಯೂ ನಿಚ್ಚಳವಾಗಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




