ಒಳಮೀಸಲಾತಿ ಇಷ್ಟು ಸಮಸ್ಯೆಗೆ ಒಳಗಾಗಲು ಕಾಂಗ್ರೆಸ್‌ನ ವಿಳಂಬ ದೋರಣೆಯೇ ಕಾರಣ. ಶೋಷಿತ ಸಮುದಾಯಗಳ ಪರವಾಗಿ, ಅದರಲ್ಲೂ ಶೋಷಿತರಲ್ಲೇ ಅತ್ಯಂತ ಶೋಷಿತರ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಳ್ಳುವುದಕ್ಕೆ ಸಿದ್ದರಾಮಯ್ಯನವರಿಗೆ ಹಿಂಜರಿಕೆ ಯಾಕೆ? ಈ ರೀತಿಯ ಜಡತ್ವಕ್ಕೆ ಕಾಂಗ್ರೆಸ್‌ನಲ್ಲಿರುವ ನಾಯಕತ್ವ ಕಾರಣವಾ? ಅಥವಾ ಬಲಗೈ ಸಮುದಾಯದ ಭಯವಾ?
ಪರಿಶಿಷ್ಟ ಜಾತಿಗಳ ‘ಒಳಮೀಸಲಾತಿ’ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1 ರಂದು ನೀಡಿದ ತೀರ್ಪಿನ ಮೂಲಕ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ವರ್ಗೀಕರಣ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಟ್ಟಿತು. ಅದಾದ ಎರಡು ದಿನಗಳ ನಂತರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ʼಒಳಮೀಸಲಾತಿ ಜಾರಿ ಮಾಡುವ ಮೊದಲ ಸರ್ಕಾರ ನಮ್ಮದಾಗಿರುತ್ತದೆʼ ಎಂದು ಹೇಳಿಕೆ ಕೊಟ್ಟರು.
ಕರ್ನಾಟಕದಲ್ಲಿ, ಸುಪ್ರೀಂ ಕೋರ್ಟ್ ಆದೇಶ ಬಂದ ಮೇಲೂ ಸರ್ಕಾರ ತಕ್ಷಣವಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದಾಗಿ ಮೂರು ತಿಂಗಳ ಬಳಿಕ, ನವೆಂಬರ್ 12ರಂದು ಕಾಂಗ್ರೆಸ್‌ನ ಎಲ್ಲಾ ರಾಜ್ಯದ ʼಪಿಸಿಸಿʼ ಅಧ್ಯಕ್ಷರ ಸಭೆ ನಡೆಯುತ್ತದೆ. ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ, “ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡುತ್ತೇವೆ. ಅದಕ್ಕಾಗಿ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಲಾಗುವುದು. ಆ ಸಮಿತಿ ಕೊಡುವ ತೀರ್ಮಾನಕ್ಕೆ ಎಲ್ಲಾ ರಾಜ್ಯಗಳೂ ಬದ್ಧರಾಗಿರಬೇಕು. ಯಾವ ರಾಜ್ಯ ಸರ್ಕಾರಗಳು ಒಳಮೀಸಲಾತಿ ಆದೇಶವನ್ನು ಕೂಡಲೇ ಜಾರಿಗೆ ತರಕೂಡದು” ಎಂದು ಹೇಳುವ ಮೂಲಕ ಮೊದಲ ಬಾರಿಗೆ ಕಾಂಗ್ರೆಸ್ ದ್ರೋಹ ಬಗೆಯಿತು ಎನ್ನುವುದು ಒಳ ಮೀಸಲಾತಿ ಹೋರಾಟಗಾರರ ಆರೋಪ.
ಮುಖ್ಯವಾಗಿ ಒಳಮೀಸಲಾತಿಗಾಗಿ ಮೂರುವರೆ ದಶಕಗಳಿಂದ ಮಾದಿಗ ಸಮುದಾಯ(ಎಡಗೈ) ಹೋರಾಟ, ಧರಣಿ, ಪ್ರತಿಭಟನೆ ಮಾಡಿಕೊಂಡು ನ್ಯಾಯಯುತ ಪಾಲನ್ನು ಕೇಳುತ್ತಾ ಬಂದಿತ್ತು. ಆದರೆ, ಅನ್ಯಾಯದ ತೀರ್ಮಾನದ ವಿರುದ್ಧ ಮಾದಿಗ ಸಮುದಾಯ ಮತ್ತೆ ಬೀದಿಗಿಳಿದು ಹೋರಾಟ ಮುಂದುವರೆಸಿತು. ಅದಕ್ಕಾಗಿ ಅರೆಮನಸ್ಸಿನಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ʼಒಳಮೀಸಲಾತಿ ಜಾರಿಗಾಗಿ ಏಕಸದಸ್ಯ ಆಯೋಗʼವನ್ನು ನೇಮಕ ಮಾಡಿತು.
ʼಆಯೋಗ ರಚನೆಯಾಗಿ ಎರಡು ತಿಂಗಳಾದರೂ ಸಮಾಜ ಕಲ್ಯಾಣ ಇಲಾಖೆ ಅವರಿಗೆ ಒಂದು ಆಫೀಸನ್ನೂ ಕೊಡದೆ ವಿಳಂಬ ಧೋರಣೆ ತೋರಿದೆʼ ಎಂದೂ ಕೆಲವರು ಆರೋಪಿಸಿದ್ದರು.
ಇದನ್ನೂ ಓದಿ : ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ
ನ್ಯಾ.ನಾಗಮೋಹನ್ ದಾಸ್ ಅವರು ಇಡೀ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಮನೆಮನೆ ಸಮೀಕ್ಷೆ ಸೇರಿದಂತೆ, ಆನ್ಲೈನ್ ಮೂಲಕವೂ ಸಮೀಕ್ಷೆ ನಡೆಸಿದರು. ಜೊತೆಗೆ ಸರ್ಕಾರದ ಇಲಾಖೆಗಳಿಂದಲೂ ಕೂಡ ಅಗತ್ಯ ದತ್ತಾಂಶ ಪಡೆದರು. ಈ ಸಮೀಕ್ಷೆಯಲ್ಲಿ 1.07ಕೋಟಿಗೂ ಅಧಿಕ ಪರಿಶಿಷ್ಟ ಸಮುದಾಯದ ಜನರು ಭಾಗವಹಿಸಿದರು. ನಂತರ ಆಯೋಗವು, 2025ರ ಮಾರ್ಚ್ 27 ರಂದು ಮಧ್ಯಂತರ ವರದಿ ನೀಡಿತು. ನಂತರ 2025ರ ಆಗಸ್ಟ್ ತಿಂಗಳಿನಲ್ಲಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.

ವರದಿಯಲ್ಲಿ ಏನಿತ್ತು?
ಸಮೀಕ್ಷೆಯ ವರದಿಯಲ್ಲಿ ಪ್ರವರ್ಗ A (59 ಜಾತಿಗಳು) – 1%, ಪ್ರವರ್ಗ B (18 ಜಾತಿಗಳು) – 6%, ಪ್ರವರ್ಗ C (17 ಜಾತಿಗಳು) – 5% , ಪ್ರವರ್ಗ D (4 ಜಾತಿಗಳು) – 4%, ಪ್ರವರ್ಗ E (AK, AD, AA) – 1% ಸೇರಿದಂತೆ ಒಟ್ಟು ಇದ್ದ 17% ಮೀಸಲಾತಿಯಲ್ಲಿ ಹಂಚಿಕೆ ಮಾಡಿತು. ಇದರಲ್ಲಿ ಮುಖ್ಯವಾಗಿ ಅತ್ಯಂತ ಹಿಂದುಳಿದ, ಅತೀ ಹಿಂದುಳಿದ, ಸಾಪೇಕ್ಷವಾಗಿ ಹಿಂದುಳಿದ ಎನ್ನುವ ಮಾನದಂಡದ ಆಧಾರದ ಮೇಲೆ ವರದಿ ತಯಾರು ಮಾಡಲಾಗಿತ್ತು.
“ಕೆಲವು ಜಾತಿಗಳಿಗೆ ಮೀಸಲಾತಿಯ ಸವಲತ್ತು ತಲುಪಲೇ ಇಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಉತ್ತಮ ಸ್ಥಿತಿಯಲ್ಲಿರುವವರು ತಮಗಿಂತ ವಂಚಿತರಾದವರಿಗೆ ಎಳ್ಳಷ್ಟು ತ್ಯಾಗ ಮಾಡಬೇಕಿದೆ. ಹಸಿದವರಿಗೆ ಮೊದಲು ಉಣಲು ಕೊಡಬೇಕು. ಚೆನ್ನಾಗಿ ಉಂಡವರು ಸ್ವಲ್ಪ ತ್ಯಾಗ ಮಾಡಬೇಕು. ಈ ನೀತಿಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಆದ್ಯತೆಯ ಮೇಲೆ ಹಂಚಿಕೆ ಮಾಡಬೇಕು” ಎಂದು ವರದಿಯ ಮಧ್ಯ ಭಾಗದಲ್ಲಿ ಉಲ್ಲೇಖಿಸಲಾಗಿತ್ತು. ಈ ಮೇಲಿನ ಅಷ್ಟೂ ಮಾತಿನಂತೆ ನ್ಯಾ.ನಾಗಮೋಹನ್ ದಾಸ್ ಅವರು ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸುವ ರೀತಿಯಲ್ಲಿ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಿದ್ದರು.
ಈ ವರದಿಯನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಜಾರಿ ಮಾಡಬೇಕಿದ್ದ ಸರ್ಕಾರ, ಮತ್ತೆ ಎಡವಟ್ಟು ಮಾಡಿಕೊಂಡಿತು. ಅದು 2025ರ ಆಗಸ್ಟ್ 20ರಂದು ಪ್ರವರ್ಗ ಎ (ಎಡಗೈ), ಪ್ರವರ್ಗ ಬಿ (ಬಲಗೈ) ಮತ್ತು ಪ್ರವರ್ಗ ಸಿ (ಸ್ಪೃಶ್ಯ) ಎಂದು ವರ್ಗೀಕರಿಸಿ, 6-6-5ರ ಆಧಾರದಲ್ಲಿ ಮೀಸಲಾತಿ ಹಂಚಿಕೆ ಮಾಡುವ ಬಗ್ಗೆ ತೀರ್ಮಾನಿಸಿತು. ಆಯೋಗದ ತೀರ್ಮಾನವನ್ನೇ ಸರ್ಕಾರ ಬುಡಮೇಲು ಮಾಡಿ ಅಲೆಮಾರಿ ಸಮುದಾಯಗಳಿಗೆ ಆಯೋಗ ಕೊಟ್ಟಿದ್ದ 1% ಮೀಸಲಾತಿಯನ್ನು ಸ್ಪೃಶ್ಯ ಸಮುದಾಯದ ಗುಂಪಿಗೆ ಸೇರಿಸಿತು. ತಬ್ಬಲಿ ಅಲೆಮಾರಿಗಳನ್ನು ಮತ್ತೆ ತಬ್ಬಲಿಗಳನ್ನಾಗಿ ಮಾಡಲು ಹೊರಟಿತು.
ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ ಮತ್ತು ಈಗ ಇರುವ ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಅಸ್ಪೃಶ್ಯ ಅಲೆಮಾರಿಗೆಳಿಗೆ 1% ಮೀಸಲಾತಿಯನ್ನು ಕೊಟ್ಟಿದ್ದಾರೆ. ಇವುಗಳನ್ನು ಅತೀ ಹಿಂದುಳಿದ ಜಾತಿಗಳು ಎಂದು ಪರಿಗಣಿಸಲಾಗಿತ್ತು. ಹೀಗಾಗಿ ಅವರಿಗೆ ಪ್ರತ್ಯೇಕ ಮೀಸಲಾತಿ ಕೊಡಲಿಲ್ಲವೆಂದರೆ, ಅಲೆಮಾರಿಗಳು ಎಂದಿಗೂ ಮುಂದೆ ಬರಲಾಗುವುದಿಲ್ಲ ಎಂದು ಎಲ್ಲಾ ಆಯೋಗಗಳು ಹೇಳಿವೆ. ಆದರೆ ಸಿದ್ದರಾಮಯ್ಯ ಸರ್ಕಾರ ಮಾತ್ರ, ಅಲೆಮಾರಿಗಳನ್ನು ಇಡೀ ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ಮುಂದುವರೆದ ಸಮುದಾಯಗಳ ಒಟ್ಟಿಗೆ ಸೇರಿಸಿ ಬೀದಿಗೆ ತಳ್ಳಿತು.
ತಬ್ಬಲಿ ಅಲೆಮಾರಿಗಳು, ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ದೆಹಲಿಯಲ್ಲಿರುವ ರಾಹುಲ್ ಗಾಂಧಿ ತನಕ ಹೋದರು. ಯಾವುದೇ ಪ್ರಯೋಜನವಾಗದೆ ವಾಪಸ್ಸಾದರು. ಮಾತು ಕೊಟ್ಟಿದ್ದ ಅನೇಕ ಕಾಂಗ್ರೆಸ್ಸಿಗರು ಅಲೆಮಾರಿಗಳನ್ನು ಕೈಬಿಟ್ಟರು. ಉದ್ಯೋಗದ ವಿಚಾರದಲ್ಲಿ ಪ್ರವರ್ಗ ʼಸಿʼ ನಲ್ಲಿ 5 ಹುದ್ದೆಗಳಿದ್ದರೆ, 1 ಹುದ್ದೆ ಅಲೆಮಾರಿಗಳಿಗೆ ಸಿಗುತ್ತದೆ. ಅಥವಾ ಅಲೆಮಾರಿಗಳಲ್ಲಿ ಅರ್ಹರು ಇಲ್ಲದಿದ್ದರೆ ಮೇಲಿನ ಸಮುದಾಗಳಿಗೆ ಸಿಗುತ್ತದೆ ಎಂದು ಹೇಳಿದರು. ನಾಲ್ಕು ದಾಟಿದ ನಂತರವೇ ಐದು ಬರುವುದು! ಹಾಗಾಗಿ ಅತ್ಯಂತ ಹಿಂದುಳಿದ ಅಲೆಮಾರಿಗಳ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದನ್ನು ತಾನೇ ಸ್ಪಷ್ಟವಾಗಿ ತೋರಿಸಿಕೊಂಡಿತು.
2024ರ ಆಗಸ್ಟ್ 1 ಸುಪ್ರೀಂ ಕೋರ್ಟ್ ಆದೇಶ ಬಂದ ದಿನದಿಂದ ಇಲ್ಲಿಯ ತನಕ ಸರ್ಕಾರ ಒಂದಲ್ಲ ಒಂದು ನೆಪ ಹೇಳುತ್ತ ಮೀಸಲಾತಿ ಜಾರಿ ಮಾಡುವುದನ್ನು ತಡಮಾಡುತ್ತಲೇ ಬಂದಿದೆ.
ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಏರಿಸಿದ್ದವರೇ, ಕೇಂದ್ರ ಸರ್ಕಾರಕ್ಕೆ ಸಂವಿಧಾನದ 9ನೇ ಶೆಡ್ಯೂಲ್ ಅನ್ವಯ ಪರಿಗಣಿಸಬೇಕೆಂದು 2023ರ ಮಾರ್ಚ್ 4ರಂದು ಕಳುಹಿಸಿದ ಪ್ರಸ್ತಾವ ಇನ್ನೂ ಧೂಳು ತಿನ್ನುತ್ತಿದೆ. ಒಳ ಮೀಸಲಾತಿ ಬಗ್ಗೆ ಮೊಸಳೆ ಕಣ್ಣಿರು ಸುರಿಸುವ ಬಿಜೆಪಿ ಯಾಕೆ ಹೆಚ್ಚುವರಿ ಮೀಸಲಾತಿಯನ್ನು ಕೇಂದ್ರ ಸರ್ಕಾರದ ಮೂಲಕ ಜಾರಿ ಮಾಡಲು ಇಚ್ಛಾಶಕ್ತಿ ತೋರುತ್ತಿಲ್ಲ ಎಂಬುದು ಯಕ್ಷಪ್ರಶ್ನೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಿಗೆ ಇದ್ದ 15% ಮೀಸಲಾತಿಯನ್ನು 17%ಗೆ ಹೆಚ್ಚಿಸಿರುವ ಬಗ್ಗೆ ಹಾಗೂ ಅದು ಇನ್ನೂ ಕಾನೂನಾಗಿಲ್ಲ ಎನ್ನುವ ಬಗ್ಗೆ ನ್ಯಾ.ನಾಗಮೋಹನ್ ದಾಸ್ ಅವರ ಗಮನಕ್ಕೆ ಬಂದಿರುತ್ತದಲ್ಲವೇ? ಕಾನೂನಿನ ಅಡ್ಡಿ ಆತಂಕಗಳು ಇದ್ದಾಗಿಯೂ ನ್ಯಾಯಮೂರ್ತಿಗಳು 17%ಗೆ ಒಳಮೀಸಲಾತಿಯನ್ನು ಹಂಚಿಕೆ ಮಾಡಿಕೊಟ್ಟರು. ಇದನ್ನು ಪ್ರಶ್ನಿಸಿ ಅನೇಕರು ಹೈಕೋರ್ಟ್ ಬಾಗಿಲು ತಟ್ಟಿದ್ದಾರೆ. ಇದನ್ನೇ ನೆಪವಾಗಿ ಇಟ್ಟುಕೊಂಡ ರಾಜ್ಯ ಕಾಂಗ್ರೆಸ್ ಸರ್ಕಾರ, ಒಳಮೀಸಲಾತಿ ವಿಷಯ ಕೋರ್ಟ್‌ನಲ್ಲಿದೆ ಎಂದು ನೆಪ ಹೂಡುವುದು ಮುಂದುವರೆಸಿತು.
ಇತ್ತೀಚೆಗೆ ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಕಾವು ವಿಧಾನಸೌದಕ್ಕೆ ತಾಕುತ್ತಿದ್ದಂತೆ, ದಲಿತ ಸಮುದಾಯದ ಮಂತ್ರಿಗಳು ಮತ್ತು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ, ಒಳ ಮೀಸಲಾತಿ ಗೊಂದಲದಿಂದ ನೇಮಕಾತಿ ವಿಳಂಬ ಆಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು. ಅಲ್ಲದೇ ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಪರಿಶಿಷ್ಟ ಜಾತಿಗಳ (ಒಳಮೀಸಲಾತಿ) ವಿಧೇಯಕಕ್ಕೆ ಸಹಿಯನ್ನೂ ಹಾಕಿಸಿಕೊಂಡು ಬಂದರು.
ಅಂದರೆ ಸರ್ಕಾರ, ಉದ್ಯೋಗ ನೇಮಕಾತಿ ಮಾಡದಿರಲು ಒಳಮೀಸಲಾತಿಯೇ ಅಡ್ಡಿಯಾಗಿದೆ ಎಂದು ಬಿಂಬಿಸುತ್ತಿದೆ. ತಮ್ಮ ಪಾಲಿನ ನ್ಯಾಯಯುತ ಹಕ್ಕುನ್ನು ಕೇಳುತ್ತಿದ್ದವರನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸುವ ಮಟ್ಟಕ್ಕೆ ಸರ್ಕಾರ ಇಳಿದಿದೆ. ಒಳಮೀಸಲಾತಿಯ ವಿಳಂಬಕ್ಕೆ ಸರ್ಕಾರದ ವಿಳಂಬ ನೀತಿಯೂ ಕಾರಣ ಎಂದು ಕಾಣುತ್ತದೆ. ಸರ್ಕಾರದ ಮುಖ್ಯ ವೇದಿಕೆಯಲ್ಲಿರುವುದು ಬಲಗೈ ಸಮುದಾಯದವರಾಗಿರುವುದರಿಂದಲೂ ಒಳಮೀಸಲಾತಿ ತಡವಾಗುತ್ತಿರಬಹುದು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ.

ಇನ್ನು ಎಡಗೈ ಸಮುದಾಯದ ನಾಯಕರಾದ ಕೆ ಎಚ್.ಮುನಿಯಪ್ಪ ಮತ್ತು ಆರ್.ಬಿ.ತಿಮ್ಮಾಪುರ ಅವರಿಗೆ ಕಳೆದ ಮೂವತ್ತೈದು ವರ್ಷಗಳಿಂದ ನಡೆದ ಒಳಮೀಸಲಾತಿ ಹೋರಾಟದ ಚಳವಳಿಯ ಜೊತೆಗೆ ಅಷ್ಟಾಗಿ ಸಂಬಂಧವಿಲ್ಲ. ಮತ್ತೆ ಒಳಮೀಸಲಾತಿಯ ವಿಚಾರದ ಕುರಿತು ಸರಿಯಾದ ನಿಲುವು ಇವರಿಬ್ಬರಿಗೂ ಎರಡು ದಶಕಗಳ ಹಿಂದೆ ಇರಲಿಲ್ಲ. ಇವೆಲ್ಲವೂ ಸಹ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡದಿರಲು ಸ್ಪಷ್ಟ ಕಾರಣವೇ ಹೊರತು, ಒಳಮೀಸಲಾತಿ ಕೇಳುತ್ತಿದ್ದ ಹೋರಾಟಗಾರರಲ್ಲ. ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕಾಂಗ್ರೆಸ್ ಸರ್ಕಾರಕ್ಕೆ ಒಳಮೀಸಲಾತಿಯನ್ನು ಜಾರಿಗೆ ತರಲು ಇಷ್ಟವಿಲ್ಲದಂತೆ ಕಾಣುತ್ತದೆ.
ಆಯೋಗದ ವರದಿಯಲ್ಲಿರುವಂತೆ, ಪ್ರವರ್ಗ ʼಎʼ ನಲ್ಲಿ 4.97 ಲಕ್ಷ, ಪ್ರವರ್ಗ ʼಬಿʼ ನಲ್ಲಿ 34.91 ಲಕ್ಷ, ಪ್ರವರ್ಗ ʼಸಿʼ ನಲ್ಲಿ 28.63 ಲಕ್ಷ, ಪ್ರವರ್ಗ ʼಡಿʼ ನಲ್ಲಿ 26.97 ಲಕ್ಷ ಮತ್ತು ಪ್ರವರ್ಗ ʼಇʼ ನಲ್ಲಿ 4.52 ಲಕ್ಷ ಜನಸಂಖ್ಯೆ ಬಂದಿತ್ತು. ಇದೂ ಸಹ ಬಲಗೈ ಸಮುದಾಯವರ ಅಸಮಾಧಾನಕ್ಕೆ ಕಾರಣವಾಯಿತು. ಬಲಗೈ ಸಮುದಾಯದ ಸಂಖ್ಯೆಗಿಂತ, ಎಡಗೈ ಸಮುದಾಯದ ಜನಸಂಖ್ಯೆ ಸುಮಾರು 6 ಲಕ್ಷಕ್ಕೂ ಅಧಿಕ ಬಂದಿತ್ತು.
“ಎರಡರಿಂದ ಮೂರು ಸಮುದಾಯಗಳು ಹೊಲೆಯ ಸಂಬಂಧಿತ ಅಂದರೆ ಬಲಗೈಗೆ ಸೇರಬೇಕು. ನಾಗಮೋಹನ್ ದಾಸ್ ಕುತಂತ್ರ ಮಾಡಿದ್ದಾರೆ. ಎಡಗೈ ಜಾತಿಗಳ ಜನಸಂಖ್ಯೆಯನ್ನು ಹೆಚ್ಚು ತೋರಿಸಿದ್ದಾರೆ. ಇದರಿಂದ ದೊಡ್ಡ ಅನ್ಯಾಯ ಮಾಡಿದ್ದಾರೆ. ನಮಗೆ 6% ಕೊಡಿ. ಎಡಗೈ ಜಾತಿಗಳಿಗೆ 5% ಕೊಡಿ” ಎಂದು ಆಯೋಗದ ವರದಿ ಬಂದ ಮೊದಲ ದಿನವೇ ಸರ್ಕಾರದ ಒಳಗೂ ಹೊರಗೂ ಆಕ್ರೋಶ ಆರಂಭವಾಯಿತು. ಇಂದಿಗೂ ಈ ಆಕ್ರೋಶ ನಿಂತಿಲ್ಲ. ಬಲಗೈ ಸಮುದಾಯಕ್ಕೆ ಸೇರಿದವರು ಪ್ರತಿಭಟನೆ ಮಾಡಿ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಯಾಗಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಒಂದೇ ದಿನಕ್ಕೆ ರಾಜ್ಯಪಾಲರ ಬಳಿ ಹೋಗಿ ಒಳಮೀಸಲಾತಿ ವಿಧೇಯಕಕ್ಕೆ ಸಹಿ ಮಾಡಿಸಿ, ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟು, ಅದಾಗಿ ಎರಡೇ ಗಂಟೆಗಳಲ್ಲಿ ʼ56,432 ಹುದ್ದೆಗಳನ್ನು ನೇಮಕ ಮಾಡುತ್ತೇವೆ. ಇದಕ್ಕೆ ಒಳಮೀಸಲಾತಿ ಅನ್ವಯವಾಗುವುದಿಲ್ಲʼ ಎಂದು ಮತ್ತೆ ಒಳಮೀಸಲಾತಿ ಜಾರಿಗೆ ಹಿಂದೇಟು ಹಾಕಿತು.
ʼಒಬಿಸಿʼ ವರ್ಗದಲ್ಲಿ ಒಳ ಮೀಸಲಾತಿ ಜಾರಿಯಾಗಿ ಮೂರು-ನಾಲ್ಕು ದಶಕಗಳೇ ಕಳೆದಿವೆ. ಅಲ್ಲಿ ಬಾರದ ಸಮಸ್ಯೆ ಪರಿಶಿಷ್ಟ ಜಾತಿಗಳ ವಿಷಯದಲ್ಲಿ ಯಾಕೆ? ಒಬಿಸಿ ಮೀಸಲಾತಿ ವರ್ಗೀಕರಣ ವಿಚಾರ ಬಂದಾಗ, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ತೋರಿಸಿದ ಇಚ್ಛಾಶಕ್ತಿಯನ್ನು, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋರುತ್ತಿಲ್ಲವೇಕೆ ಎನ್ನುವುದು ಸದ್ಯದ ವಾದ.
ಬಿಜೆಪಿ ಆಡುತ್ತಿರುವ ಕಳ್ಳಾಟ
ಕಾಂಗ್ರೆಸ್ ಸರ್ಕಾರ ತೋರುತ್ತಿರುವ ಈ ರೀತಿಯ ವಿಳಂಬ ಧೋರಣೆಯನ್ನು ಬಿಜೆಪಿ ಮತ್ತು ಸಂಘಪರಿವಾರ ಹೈಜಾಕ್ ಮಾಡಬಹುದು. ಒಂದು ಕಡೆ ಮಾದಿಗ ಸಮುದಾಯದ ಮಾದಾರ ಚೆನ್ನಯ್ಯ ಸ್ವಾಮಿಯನ್ನು ಹಿಡಿದಿಟ್ಟುಕೊಂಡು ಸಂಪೂರ್ಣವಾಗಿ ಎಡಗೈ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆರ್ಎಸ್ಎಸ್ ಹವಣಿಸುತ್ತಿದೆ. ಇನ್ನೊಂದೆಡೆ ಅದೇ ಬಿಜೆಪಿಯಲ್ಲಿರುವ ಬಲಗೈ ಸಮುದಾಯದ ಎನ್.ಮಹೇಶ್ ಮತ್ತು ಛಲವಾದಿ ನಾರಾಯಣಸ್ವಾಮಿ ಅಂತವರನ್ನು ಬಳಸಿಕೊಂಡು, ಒಳಮೀಸಲಾತಿ ಜಾರಿಯಾಗದ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಸಂಘಪರಿವಾರ ಕುತಂತ್ರ ಬಲೆ ಹೆಣೆದು, ಎರಡೂ ಸಮುದಾಯಗಳನ್ನು ಎತ್ತಿಕಟ್ಟಿ ಆಟ ನೋಡ್ತಿದೆ.

ಕಾಂಗ್ರೆಸ್ ಇಚ್ಛಾಶಕ್ತಿ
ಒಳಮೀಸಲಾತಿ ಇಷ್ಟು ಸಮಸ್ಯೆಗೆ ಒಳಗಾಗಲು ಕಾಂಗ್ರೆಸ್‌ನ ವಿಳಂಬ ದೋರಣೆಯೇ ಕಾರಣ. ಶೋಷಿತ ಸಮುದಾಯಗಳ ಪರವಾಗಿ, ಅದರಲ್ಲೂ ಶೋಷಿತರಲ್ಲೇ ಅತ್ಯಂತ ಶೋಷಿತರ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಳ್ಳುವುದಕ್ಕೆ ಸಿದ್ದರಾಮಯ್ಯನವರಿಗೆ ಹಿಂಜರಿಕೆ ಯಾಕೆ? ಈ ರೀತಿಯ ಜಡತ್ವಕ್ಕೆ ಕಾಂಗ್ರೆಸ್ನಲ್ಲಿರುವ ನಾಯಕತ್ವದ ಕಾರಣವಾ? ಅಥವಾ ಬಲಗೈ ಸಮುದಾಯದ ಭಯವಾ?
ಮುಂದೊಂದು ದಿನ ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಎಂದು ಭಾವಿಸುವುದಾದರೆ ಅದು ಬಲಗೈ ಸಮುದಾಯದ ಡಾ ಜಿ ಪರಮೇಶ್ವರ್, ಎಚ್.ಸಿ. ಮಹಾದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ್ ಖರ್ಗೆ. ಈ ಮೂವರಿಗೂ ಇಡೀ ದಲಿತ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತ ಇಚ್ಚಾಶಕ್ತಿ ಇಲ್ಲದೇ ಹೋಯಿತಾ?
ಸಿದ್ದರಾಮಯ್ಯನವರಂತ ನಾಯಕರೇ ಗಟ್ಟಿ ಧ್ವನಿಯಲ್ಲಿ ತೀರ್ಮಾನ ಕೈಗೊಳ್ಳದೆ, ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆಯ್ತು ಎಂದು ತಿಪ್ಪೆಸಾರಿಸುವ ಕೆಲಸ ಮಾಡುವುದು, ಅತ್ಯಂತ ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕೆ ಕೊಳ್ಳಿ ಇಟ್ಟಂತಲ್ಲದೆ ಮತ್ತೇನಲ್ಲ!





