ಈಗ ನಡೆಯುತ್ತಿರುವ ಪ್ರತಿಭಟನೆಗಳ ಮೂಲ ಆರ್ಥಿಕ ಸ್ವರೂಪವೇ ಹೌದು. ಸತತ 45 ವರ್ಷಗಳ ತೀವ್ರ ಆರ್ಥಿಕ ನಿರ್ಬಂಧಗಳಿಗೆ ಒಳಪಟ್ಟಿದೆ ಇರಾನ್. ಅಮೆರಿಕದ ಕ್ರೂರ, ಅಮಾನವೀಯ ನೀತಿಗೆ ತತ್ತರಿಸಿದೆ. ಇರಾನ್‌ನ ತೈಲ ರಫ್ತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಅಮೆರಿಕ ಹೇರಿರುವ ಕಠಿಣ ನಿರ್ಬಂಧಗಳು ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿದಿವೆ. ಈ ನಿರ್ಬಂಧಗಳಿಂದಾಗಿ ಇರಾನ್ ಕರೆನ್ಸಿಯ ಮೌಲ್ಯ ತೀವ್ರವಾಗಿ ಕುಸಿದಿದ್ದು, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.
ಡಿಸೆಂಬರ್ 28ರಂದು ರಾಜಧಾನಿ ತೆಹ್ರಾನ್ ಸೇರಿದಂತೆ ಇರಾನಿನಾದ್ಯಾಂತ ಪ್ರತಿಭಟನೆಗಳು ಭುಗಿಲೆದ್ದವು. ಈಗಾಗಲೇ 45 ವರ್ಷಗಳಿಂದ ತೀವ್ರ ಆರ್ಥಿಕ ನಿರ್ಬಂಧಗಳಿಗೆ ಒಳಪಟ್ಟಿದ್ದ ಇರಾನ್ 42% ಹಣದುಬ್ಬರ, ಭ್ರಷ್ಟಾಚಾರ, ಆರ್ಥಿಕ ಅವ್ಯವಸ್ಥೆ ಹಾಗೂ ಆರು ತಿಂಗಳಲ್ಲಿ ಇಸ್ರೇಲ್ ಮತ್ತು ಅಮೆರಿಕ ತನ್ನ ಮೇಲೆ ನೆಡೆಸಿದ 12 ದಿನಗಳ ಯುದ್ಧದ ಪರಿಣಾಮವಾಗಿ ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದೆ. ಇರಾನ್‌ನಲ್ಲಿರುವ ‘ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್’ (HRANA) ಎಂಬ ಸರ್ಕಾರೇತರ ಸಂಸ್ಥೆ ಪ್ರಕಾರ ಈವರೆಗೂ 646 ಜನರು ಮೃತಪಟ್ಟಿರುವುದು ದೃಢಪಟ್ಟಿದೆ; ಈ ಪೈಕಿ 505 ಪ್ರತಿಭಟನಾಕಾರರು, 9 ಮಕ್ಕಳು, 133 ಮಿಲಿಟರಿ ಮತ್ತು ಕಾನೂನು ಜಾರಿ ಅಧಿಕಾರಿಗಳು, ಒಬ್ಬ ಪ್ರಾಸಿಕ್ಯೂಟರ್ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾಗದ 7 ಸಾಮಾನ್ಯ ನಾಗರಿಕರು ಸೇರಿದ್ದಾರೆ. ಜೊತೆಗೆ ಇನ್ನೂ 579 ಸಾವುಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಅಂಕಿ-ಅಂಶಗಳು ಕೇವಲ ದೃಢೀಕರಿಸಲ್ಪಟ್ಟ ಕನಿಷ್ಠ ಸಂಖ್ಯೆಗಳಾಗಿದ್ದು, ವಾಸ್ತವ ಸಾವಿನ ಸಂಖ್ಯೆ ಇದಕ್ಕಿಂತ ಗಣನೀಯವಾಗಿ ಹೆಚ್ಚಿರುವ ಸಾಧ್ಯತೆಯಿದೆ ಎಂದು ಒತ್ತಿ ಹೇಳಲಾಗಿದೆ. ರಾಯಿಟರ್ಸ್ (Reuters) ವರದಿಯ ಪ್ರಕಾರ, ಇರಾನ್ ಪ್ರತಿಭಟನೆಗಳ ಸಮಯದಲ್ಲಿ ಸುಮಾರು 2,000 ಜನ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಬಹುತೇಕ ಸಾವುಗಳು ಪಶ್ಚಿಮ ಅಜೆರ್ಬೈಜಾನ್, ಇಸ್ಫಾಹನ್ ಮತ್ತು ಸಿಸ್ತಾನ್ ಮತ್ತು ಬಲೂಚಿಸ್ತಾನ್ ನಗರಗಳಲ್ಲಿ ಆಗಿವೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್ ಹಲವಾರು ದಶಕಗಳಿಂದ ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸುಧಾರಣೆ ಮತ್ತು ಮಾನವ ಹಕ್ಕುಗಳಿಗಾಗಿ ದೊಡ್ಡ ಮಟ್ಟದ ಜನಸಾಮಾನ್ಯರ ಪ್ರತಿಭಟನೆಗಳನ್ನು ಕಂಡಿದೆ. ಪ್ರಮುಖವಾಗಿ 2009ರ ‘ಹಸಿರು ಚಳವಳಿ’ಯಲ್ಲಿ ಅಧ್ಯಕ್ಷರಾಗಿ ಮಹಮೂದ್ ಅಹ್ಮದಿನೆಜಾದ್ ಅವರ ವಿಜಯವನ್ನು “ಚುನಾವಣಾ ಅಕ್ರಮ” ಎಂದು ವಿರೋಧಿಸಿ ಜನರು ಬೀದಿಗಿಳಿದ್ದರು. 2019ರಲ್ಲಿ ಪೆಟ್ರೋಲ್ ಬೆಲೆಯನ್ನು ಸರ್ಕಾರ ಏಕಾಏಕಿ ಶೇ. 50ರಿಂದ ಶೇ. 300ರಷ್ಟು ಹೆಚ್ಚಿಸಿದ್ದಕ್ಕೆ ‘ಬ್ಲಡಿ ನವೆಂಬರ್’ ಚಳವಳಿಯಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಸುಮಾರು 500 ಜನ ಬಲಿಯಾಗ್ಗಿದ್ದರು. 2022ರಲ್ಲಿ ಹಿಜಾಬ್ ಧರಿಸದ ಕಾರಣಕ್ಕೆ ತೀವ್ರವಾಗಿ ಥಳಿಸಿ ಬಂಧಿಸಲ್ಪಟ್ಟ 22 ವರ್ಷದ ಮಹ್ಸಾ ಅಮಿನಿ ಪೊಲೀಸ್ ವಶದಲ್ಲಿ ಸಾವನ್ನಪ್ಪಿದ ನಂತರ ‘ಜನ್, ಜಿಯಾನ್, ಅಜಾದಿ’ (ಮಹಿಳೆ, ಜೀವನ, ಸ್ವಾತಂತ್ರ್ಯ) ಎಂಬ ಘೋಷಣೆಯೊಂದಿಗೆ ಮಹಿಳೆಯರು ದೊಡ್ಡ ಹೋರಾಟ ಮಾಡಿದರು. ಸುಮಾರು 500ಕ್ಕೂ ಹೆಚ್ಚು ಪ್ರತಿಭಟನಾಕಾರರು ಈ ಹೋರಾಟದಲ್ಲಿ ಸಾವನ್ನಪ್ಪಿದ್ದರು.

ಈಗ ನಡೆಯುತ್ತಿರುವ ಪ್ರತಿಭಟನೆಗಳು ಮೂಲದಲ್ಲಿ ಆರ್ಥಿಕ ಸ್ವರೂಪದ್ದಾಗಿದೆ. ಸತತ 45 ವರ್ಷಗಳಿಂದ ತೀವ್ರ ಆರ್ಥಿಕ ನಿರ್ಬಂಧನೆಗೆ ಒಳಪಟ್ಟಿರುವ ಇರಾನ್ ಅಮೆರಿಕದ ಕ್ರೂರ, ಅಮಾನವಿಯ ನೀತಿಗೆ ತತ್ತರಿಸಿದೆ. ಅಮೆರಿಕವು ಇರಾನ್‌ನ ತೈಲ ರಫ್ತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ವಿಧಿಸಿರುವ ಕಠಿಣ ನಿರ್ಬಂಧಗಳು ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿದಿವೆ. ಈ ನಿರ್ಬಂಧಗಳಿಂದಾಗಿ ಇರಾನ್‌ನ ಕರೆನ್ಸಿ ಮೌಲ್ಯ ತೀವ್ರವಾಗಿ ಕುಸಿದಿದ್ದು, ಅಗತ್ಯ ವಸ್ತುಗಳ ಬೆಲೆಗಳು ಸಾಮಾನ್ಯ ಜನರಿಗೆ ಎಟುಕದಂತೆ ಗಗನಕ್ಕೇರಿವೆ. ಉದಾಹರಣೆಗೆ: ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಗೆ ತಡೆ ಇರುವುದರಿಂದ, ಕ್ಯಾನ್ಸರ್ ಮತ್ತು ಇತರೆ ವಿರಳ ಕಾಯಿಲೆಗಳಿಗೆ ಬೇಕಾದ ಜೀವ ಉಳಿಸುವ ಔಷಧಗಳನ್ನು ಆಮದು ಮಾಡಿಕೊಳ್ಳಲು ಕೂಡ ಇರಾನ್‌ಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾವಿರಾರು ಸಾಮಾನ್ಯ ರೋಗಿಗಳು ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಮತ್ತು ಮದ್ದಿಲ್ಲದೆ ಪ್ರತಿದಿನ ಪರದಾಡುವಂತಾಗಿದೆ. 40,000 – 60,000 ರಿಯಾಲ್ ಇದ್ದ ಅಕ್ಕಿ ಬೆಲೆ 2,00,000-2,50,000 ರಿಯಾಲ್ ಆಗಿದೆ. ಈ ಕಷ್ಟಕಾರ್ಪಣ್ಯದ ವಿರುದ್ದ ಜನ ಸಹಜವಾಗಿಯೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಅವು ಕೆಲವೇ ದಿನಗಳಲ್ಲಿ ಹಿಂಸಾತ್ಮಕ ರೂಪ ಪಡೆದು ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟದ ರೂಪದಲ್ಲಿ ಬೇರೆ ಬೇರೆ ನಗರ, ಪಟ್ಟಣಗಳಿಗೆ ಹಬ್ಬಿತು. ಪ್ರತಿಭಟನಾಕಾರರು ಗನ್ ಮತ್ತು ಬಾಂಬ್ ಬಳಸಿ ದೊಡ್ಡ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಗಳನ್ನು ಕೊಂದಿದ್ದಾರೆ. ವಿವಿಧ ಸ್ಥಳಗಳಲ್ಲಿ ನಡೆದ ಹಿಂಸಾಚಾರದ ವಿಡಿಯೊ ತುಣುಕುಗಳನ್ನು ಬಿಡುಗಡೆ ಮಾಡಿರುವ ಆಡಳಿತ ಇದರಲ್ಲಿ ಬಹುತೇಕ ಮಂದಿ ವಿದೇಶಿ ಬೇಹುಗಾರಿಕೆ (ಮೊಸಾದ್, ಸಿ.ಐ.ಎ, ಎಮ್.ಐ.6) ಭಾಗವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

“ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಮತ್ತು ಜನರ ಜೀವನ ಕಷ್ಟಕರವಾಗಿರುವುದನ್ನು ಒಪ್ಪುತ್ತಾ ಇದನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಮತ್ತು ಭದ್ರತಾ ಪಡೆಗಳು ಗರಿಷ್ಠ ಸಂಯಮವನ್ನು ತೋರಬೇಕು. ಹಿಂಸಾತ್ಮಕ ನಡವಳಿಕೆಯನ್ನು ತಪ್ಪಿಸಿ, ಜನರ ಬೇಡಿಕೆಗಳನ್ನು ಆಲಿಸಬೇಕು ಮತ್ತು ಅವರೊಂದಿಗೆ ಮಾತುಕತೆ ನಡೆಸಬೇಕು” ಎಂದು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಪ್ರಾರಂಭದಲ್ಲಿ ಹೇಳಿದ್ದಾರೆ. ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಂತೆ “ದೇಶದ ಸ್ಥಿರತೆಗೆ ಭಂಗ ತರುವವರನ್ನು ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ “ಸಾವಿರ ಗೌರವಾನ್ವಿತ ಜನರ ರಕ್ತದಿಂದ ಇಸ್ಲಾಮಿಕ್ ಗಣರಾಜ್ಯ ಅಧಿಕಾರಕ್ಕೆ ಬಂದಿದೆ. ಈ ವಿಧ್ವಂಸಕ ಶಕ್ತಿಗಳ ಮುಂದೆ ನಾವು ಯಾವುದೇ ಕಾರಣಕ್ಕೂ ಮಂಡಿಯೂರುವುದಿಲ್ಲ ಅಥವಾ ಹಿಂದೆ ಸರಿಯುವುದಿಲ್ಲ” ಎಂದು ಹೇಳಿದರೆ, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ “ಅಮೆರಿಕ ಮತ್ತು ಇಸ್ರೇಲ್ ಈ ಪ್ರತಿಭಟನೆಗಳನ್ನು ಪ್ರಚೋದಿಸುತ್ತಿವೆ. ನಾವು ಯಾವುದೇ ಯುದ್ಧಕ್ಕೂ ಸಿದ್ಧರಿದ್ದೇವೆ” ಎಂದು ವಿದೇಶಿ ಹಸ್ತಕ್ಷೇಪದ ಆರೋಪ ಹೊರಿಸುತ್ತಾ ಎಚ್ಚರಿಕೆ ಕೊಟ್ಟಿದ್ದಾರೆ.
ಇದ್ದಕ್ಕೆ ವಿರುದ್ದವಾಗಿ ಇರಾನ್ನಿನಲ್ಲಿ “ರಾಷ್ಟ್ರೀಯ ಐಕ್ಯತೆ ಮತ್ತು ಶಾಂತಿ-ಸೌಹಾರ್ದತೆಯ ಗೌರವ” ಎಂಬ ಶೀರ್ಷಿಕೆಯಡಿ ಜನವರಿ 12ರಂದು ಇರಾನ್‌ನ ವಿವಿಧ ಪ್ರಾಂತ್ಯಗಳಲ್ಲಿ ದೊಡ್ಡ ಮೆರವಣಿಗೆಗಳು ನಡೆದವು. ಇರಾನ್ ಧ್ವಜವನ್ನು ಹಿಡಿದು ಸಾಗಿದ ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. “ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪ ನಮಗೆ ಮಂಜೂರಾಗಿಲ್ಲ” ಎಂದು ಗುಡುಗಿದ್ದಾರೆ. “ದೇಶದಲ್ಲಿ ಆರ್ಥಿಕ ಸಂಕಷ್ಟವಿದೆ. ಅದರ ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡುವುದು ಜನರ ಹಕ್ಕು. ಆದರೆ ಹಿಂಸೆಯಲ್ಲಿ ತೊಡಗಿರುವ ಈ ಗಲಭೆಕೋರರು ಇರಾನ್ ದೇಶದವರಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ವಿವಿದ ಭಾಗಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ 25 ಲಕ್ಷಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದರು ಎಂದು ಅಂದಾಜಿಸಲಾಗುತ್ತಿದೆ.


ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಪಂಚದ ಬೀದಿ ರೌಡಿಯ ಹಾಗೆ ವೆನೆಜುವೆಲಾ ಅಧ್ಯಕ್ಷ ಮದುರೊ ಮತ್ತು ಅವರ ಪತ್ನಿಯನ್ನು ಅಪಹರಿಸಿ “ವೆನೆಜುವೆಲಾ ಹಂಗಾಮಿ ಅಧ್ಯಕ್ಷ ನಾನೆ” ಎಂದು ಘೋಷಿಸಿಕೋಂಡಿದ್ದಾರೆ. ಜೊತೆಗೆ ಕ್ಯೂಬ, ಕೊಲಂಬಿಯಾ, ಗ್ರೀನ್ ಲಾಂಡ್ ಮತ್ತು ಇರಾನ್ ಅನ್ನು ವಶಪಡಿಸಿಕೊಳ್ಳುವ ಅಥವಾ ತಮಗೆ ಬೇಡವಾದ ನಾಯಕನನ್ನು ಕೆಳಗಿರಿಸಿ, ತಮ್ಮ ಕೈಗೊಂಬೆ ನಾಯಕನನ್ನು ಅಧಿಕಾರಕ್ಕೆ ತರುವ ಮಾತುಗಳನ್ನು ಪದೇ ಪದೇ ಆಡುತ್ತಿದ್ದಾರೆ. ಟ್ರಂಪ್ ಅವರು ಇರಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಾ, “ನೀವು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆರಂಭಿಸಿದರೆ, ನಾವು ಕೂಡ ನಿಮ್ಮ ಮೇಲೆ ಗುಂಡು ಹಾರಿಸಲು ಆರಂಭಿಸುತ್ತೇವೆ” ಎಂದಿದ್ದಾರೆ. ಇರಾನ್ ತನ್ನ ಜನರ ಮೇಲೆ ದೌರ್ಜನ್ಯ ಮುಂದುವರಿಸಿದರೆ ಅಮೆರಿಕದ ಸೇನೆಯು ದಾಳಿಗೆ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಹಾಕಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಪುನರ್‌ನಿರ್ಮಿಸಲು ಪ್ರಯತ್ನಿಸಿದರೆ, ಅಮೆರಿಕವು ತಕ್ಷಣವೇ ಮಿಲಿಟರಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಇರಾನ್ ಜೊತೆ ವ್ಯಾಪಾರ ವಹಿವಾಟು ನಡೆಸುವವರ ಮೇಲೆ 25% ಹೆಚ್ಚುವರಿ ಸುಂಕ ಹಾಕಿದ್ದಾರೆ. “ವಾಯುದಾಳಿಗಳು” (Air strikes) ಟ್ರಂಪ್ ಮುಂದಿರುವ ಅನೇಕ ಮಿಲಿಟರಿ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಶ್ವೇತಭವನ ಖಚಿತಪಡಿಸಿದೆ.
ಇರಾನ್ ಗಡಿಯ ಸುತ್ತಲೂ ಸುಮಾರು 35 ರಿಂದ 40 ಅಮೆರಿಕ ಮತ್ತು ನ್ಯಾಟೋ ಸೈನಿಕ ನೆಲೆಗಳು ಇರುವುದು ಇರಾನ್‌ನ ರಾಷ್ಟ್ರೀಯ ಭದ್ರತೆಗೆ ಒಡ್ಡಿರುವ ನಿರಂತರ ಬೆದರಿಕೆ. ಇರಾನ್‌ನ ಪಶ್ಚಿಮಕ್ಕೆ ಇರಾಕ್, ಪೂರ್ವಕ್ಕೆ ಅಫ್ಘಾನಿಸ್ತಾನ ಮತ್ತು ದಕ್ಷಿಣದ ಪರ್ಷಿಯನ್ ಕೊಲ್ಲಿಯ ದೇಶಗಳಾದ ಕುವೈತ್, ಬಹ್ರೇನ್, ಕತಾರ್ ಹಾಗೂ ಯುಎಇ ಗಳಲ್ಲಿ ಅಮೆರಿಕದ ಪ್ರಬಲ ಮಿಲಿಟರಿ ನೆಲೆಗಳಿವೆ. ಬಹ್ರೇನ್‌ನಲ್ಲಿ ಅಮೆರಿಕದ 5ನೇ ನೌಕಾಪಡೆ (5th Fleet) ನೆಲೆಸಿದ್ದರೆ, ಕತಾರ್‌ನಲ್ಲಿರುವ ‘ಅಲ್ ಉದೈದ್’ ವಾಯುನೆಲೆಯು ಮಧ್ಯಪ್ರಾಚ್ಯದಲ್ಲೇ ಅತಿ ದೊಡ್ಡ ಅಮೆರಿಕನ್ ಮಿಲಿಟರಿ ತಾಣವಾಗಿದೆ. ಈ ಸೈನಿಕ ನೆಲೆಗಳು ಇರಾನ್ ಮೇಲೆ ನಿರಂತರ ಕಣ್ಗಾವಲು ಇರಿಸಲು ಮತ್ತು ಅಗತ್ಯ ಬಿದ್ದಾಗ ಕ್ಷಿಪ್ರ ದಾಳಿ ನಡೆಸಲು ಅಮೆರಿಕಕ್ಕೆ ವ್ಯೂಹಾತ್ಮಕ ಬಲವನ್ನು ನೀಡುತ್ತವೆ. ಇವೆಲ್ಲದರ ಹಿನ್ನೆಲೆಯಲ್ಲಿ, ಡಿಸೆಂಬರ್ 2025 ಮತ್ತು ಜನವರಿ 2026ರ ಆರಂಭದ ಅವಧಿಯಲ್ಲಿ, ಮುಕ್ತ ಆಕರ ಗುಪ್ತಚರ (OSINT) ಮತ್ತು ವಿಮಾನ ಸಂಚಾರದ ದತ್ತಾಂಶಗಳು (Flight-tracking data) ಪರ್ಷಿಯನ್ ಗಲ್ಫ್ ಪ್ರಾಂತ್ಯದ ಅಮೆರಿಕನ್ ಸೇನಾ ನೆಲೆಗಳತ್ತ ಅಮೆರಿಕದ ಬೃಹತ್ ಮಿಲಿಟರಿ ಸಾರಿಗೆ ವಿಮಾನಗಳ ಸಂಚಾರದಲ್ಲಿ ಭಾರಿ ಹೆಚ್ಚಳ ತೋರಿಸಿವೆ. ವಿಶೇಷವಾಗಿ ಕತಾರ್‌ನಲ್ಲಿರುವ ಅಲ್ ಉದೈದ್ (Al Udeid) ವಾಯುನೆಲೆಗೆ ಡಜನ್‌ಗಟ್ಟಲೆ C-17 ಗ್ಲೋಬ್‌ಮಾಸ್ಟರ್ III ಮತ್ತು C-5M ಗ್ಯಾಲಕ್ಸಿಯಂತಹ ಬೃಹತ್ ಸರಕು ಸಾಗಣೆ ವಿಮಾನಗಳು ಆಗಮಿಸುತ್ತಿವೆ ಎಂದು ವರದಿಯಾಗಿದೆ.

ಇರಾನಿನಲ್ಲಿ ಪ್ರಜಾಪ್ರಭುತ್ವ ಬಗ್ಗೆ ಮಾತನಾಡುತ್ತಿರುವ ಅಮೆರಿಕ ಇದೇ ಮಾತುಗಳನ್ನು ಹೇಳಿ ಸಿರಿಯಾದಲ್ಲಿ ಅಸ್ಸಾದ್ ಸರ್ಕಾರವನ್ನು ಇಳಿಸಿ ಯಾರನ್ನು ಅಧಿಕಾರಕ್ಕೆ ತಂದಿದೆ ಎಂದು ಮರೆಯಬಾರದು. ಇಸ್ಲಾಮಿಕ್ ಸ್ಟೇಟ್ (ISIS) ಸ್ಥಾಪನೆಗೆ ಕಾರಣಕರ್ತನಾದ ಅಬು ಮೊಹಮ್ಮದ್ ಅಲ್-ಜುಲಾನಿಯನ್ನು ಸಿರಿಯಾದ ಅಧ್ಯಕ್ಷನ್ನನಾಗಿ ಮಾಡಿದೆ. ಹಿಂದೆ ಇದೇ ಅಮೆರಿಕವು ಈತನ ತಲೆಯ ಮೇಲೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.
ಅಲ್ಲಿ ಈಗ ಅಲ್ಪಸಂಖ್ಯಾತರ (ಅಲವೈಟ್, ಕ್ರಿಶ್ಚಿಯನ್ನರು, ಡ್ರೂಜ್, ಕುರ್ಡ್(Kurds) ಕಗ್ಗೊಲೆಗಳು ನೆಡೆಯುತ್ತಿವೆ. ಲ್ಯಾಟಿನ್ ಅಮೆರಿಕ ಮತ್ತು ಅಫ್ರಿಕದ ದೇಶಗಳಲ್ಲಿ ಅಮೆರಿಕದ ಪ್ರಜಾಪ್ರಭುತ್ವ ಹುಡುಕುತ್ತಾ ಹೊದರೆ ಅದರ ಕ್ರೌರ್ಯದ ಉದಾಹರಣೆಗಳು ಅನಂತ. 1979ರ ಇಸ್ಲಾಮಿಕ್ ಕ್ರಾಂತಿಗೂ ಮುಂಚೆ ಹಿಟ್ಲರ್ ಕ್ರೌರ್ಯವನ್ನೂ ನಾಚಿಸುವಂಥ ʼಚಿತ್ರಹಿಂಸೆ ಕೊಠಡಿ’ಗಳನ್ನು (Torture Chambers) ನಡೆಸುತಿದ್ದ ಮೊಹಮ್ಮದ್ ರೇಜಾ ಪಹಲವಿ ಮಗ ರೇಜಾ ಪಹಲವಿಯನ್ನು ಅಧಿಕಾರದಲ್ಲಿ ಕೂರಿಸಲು 45 ವರ್ಷಗಳಿಂದ ವಿಫಲ ಪ್ರಯತ್ನ ನಡೆಸುತ್ತಿದೆ. ಪಾಶ್ಚಿಮಾತ್ಯ ಪ್ರೊಪಾಗಾಂಡ ಯಾವ ಮಟ್ಟದಲ್ಲಿದೆ ಎಂದರೆ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ತಮ್ಮ ಸಾಮ್ರಾಜ್ಯಶಾಹಿ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಸದ್ಯ ಅಮೆರಿಕಗೆ ಬೇಕಿರುವುದು ಸಾಮ್ರಾಜ್ಯಶಾಹಿ ಸರ್ವಾಧಿಕಾರ, ತನ್ನ ಯುದ್ದದಾಹಿ ನಿರಂತರ ಯುದ್ದಗಳ ಮುಂದುವರಿಕೆ. ಒಂದು ಕಡೆ ರಷ್ಯಾ ವಿರುದ್ದ ನಾಟೊ(NATO) ಬಳಸಿಕೊಂಡು ಉಕ್ರೇನ್ ಯುದ್ದ, ಅಫ್ಘಾನಿಸ್ತಾನ, ಸುಡಾನ್, ಸೊಮಾಲಿಯಾ, ಇರಾಕ್, ಸಿರಿಯಾ, ಲೆಬನಾನ್, ಯೆಮೆನ್, ಲಿಬಿಯಾ, ನೈಜೀರಿಯಾ, ವೆನೆಜುವೆಲಾ ಮೇಲೆ ದಾಳಿ ಮಾಡುತ್ತಾ ಮಿಕ್ಕವರನ್ನು ಬೆದರಿಸುತ್ತಾ ಕಚ್ಚಾ ತೈಲ, ನೈಸರ್ಗಿಕ ಸಂಪನ್ಮೂಲಗಳು ಮತ್ತು ಭವಿಷ್ಯದ ತಂತ್ರಜ್ಞಾನದ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿಗೆ ಬೇಕಾಗಿರುವ ಅಪರೂಪದ ಭೂ-ಖನಿಜಗಳ ಕೈವಶ, ಪ್ರಪಂಚದ ಮೇಲೆ ತನ್ನ ನಿರಂತರ ಅಧಿಪತ್ಯ ಸಾಧಿಸುವಿಕೆ, ಮಿಲಿಟರಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತನ್ನ ಏಕಾಧಿಪತ್ಯ ಮುಂದುವರಿಸಲು ಅಮೆರಿಕ ಬಯಸುತ್ತದೆ. ರಷ್ಯಾ ಮತ್ತು ಚೀನಾವನ್ನು ತನಗೆ ಸವಾಲೊಡ್ಡುವ ಪ್ರತಿಸ್ಪರ್ಧಿ ಶತ್ರುಗಳೆಂದು ಪರಿಗಣಿಸುತ್ತದೆ.
ಅಮೆರಿಕವು ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ (Regime change) ಪ್ರಯತ್ನಿಸುತ್ತಿರುವುದು ಇಡೀ ಮಧ್ಯಪ್ರಾಚ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತದೆ ಮತ್ತು ಇದು ಜಾಗತಿಕ ಸುರಕ್ಷತೆಗೆ ಅಪಾಯಕಾರಿ ಎಂದು ರಷ್ಯಾ ಮತ್ತು ಚೀನಾ ಜಂಟಿ ಆತಂಕ ವ್ಯಕ್ತಪಡಿಸಿವೆ. ರಷ್ಯಾ ಇರಾನ್‌ನ ಪರಮಾಣು ಮತ್ತು ಸೈನಿಕ ನೆಲೆಗಳ ಮೇಲೆ ಅಮೆರಿಕ ಅಥವಾ ಇಸ್ರೇಲ್ ದಾಳಿ ನಡೆಸುವುದನ್ನು “ಕೆಂಪು ಗೆರೆ” (Red line) ಎಂದು ಕರೆದಿದೆ. ಒಂದು ವೇಳೆ ಇರಾನ್ ಮೇಲೆ ನೇರ ಸೇನಾ ದಾಳಿ ನಡೆದರೆ, ರಷ್ಯಾ ತಟಸ್ಥವಾಗಿರುವುದಿಲ್ಲ ಮತ್ತು ಇರಾನ್‌ಗೆ ಅಗತ್ಯವಿರುವ ರಕ್ಷಣಾ ತಂತ್ರಜ್ಞಾನ ಹಾಗೂ ಗುಪ್ತಚರ ಮಾಹಿತಿಯನ್ನು ಒದಗಿಸುವುದಾಗಿ ಸೂಚಿಸಿದೆ. ಚೀನಾ ದೇಶ ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು (Sanctions) ಧಿಕ್ಕರಿಸಿ ಇರಾನ್‌ನಿಂದ ತೈಲ ಖರೀದಿಯನ್ನು ಮುಂದುವರಿಸಿದೆ. ಇರಾನ್‌ನ ಆರ್ಥಿಕತೆ ಸಂಪೂರ್ಣವಾಗಿ ಕುಸಿಯದಂತೆ ತಡೆಯಲು ಚೀನಾ ದೊಡ್ಡ ಮಟ್ಟದ ಹೂಡಿಕೆ ಮತ್ತು ವ್ಯಾಪಾರ ಒಪ್ಪಂದಗಳ ಮೂಲಕ ಬೆಂಬಲ ನೀಡುತ್ತಿದೆ. ಯಾವುದೇ ದೇಶದ ಆಂತರಿಕ ವಿಷಯಗಳಲ್ಲಿ (ಪ್ರತಿಭಟನೆಗಳಂತಹವು) ವಿದೇಶಿ ಹಸ್ತಕ್ಷೇಪ ಇರಬಾರದು ಎಂದು ಎರಡೂ ದೇಶಗಳು ಪ್ರತಿಪಾದಿಸಿವೆ. ಇರಾನ್‌ನ ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಅಮೆರಿಕ ತನ್ನ “ಏಕಸ್ವಾಮ್ಯ” (Monopoly) ಸಾಧಿಸಲು ಇತರ ದೇಶಗಳನ್ನು ಬಳಸಿಕೊಳ್ಳಬಾರದು ಎಂದು ವಿಶ್ವಸಂಸ್ಥೆಯಲ್ಲಿ ವಾದಿಸಿವೆ.




