ಸೌಜನ್ಯ ಕೊಲೆಯ ಪ್ರಮುಖ ಸಾಕ್ಷಿಯಾಗುವರೇ ಚಿನ್ನಯ್ಯ? ವಿಡಿಯೋದಲ್ಲಿದೆ ಅಚ್ಚರಿಯ ಹೇಳಿಕೆ

Date:

ಸೂಪರ್‌ವೈಸರ್‌ ರಾಜೇಂದ್ರ ರೈ, ”ಸೌಜನ್ಯ ಬಾಡಿಯನ್ನು ವಿಠಲ ತನ್ನ ಹೋಟೆಲಿನಲ್ಲಿ ಮೂಟೆ ಕಟ್ಟಿ ಇಟ್ಟಿದ್ದ, ನಾವು ಹೂತು ಹಾಕಿದೆವು ಎಂದು ಪೊಲೀಸರು ಕೇಳಿದ್ರೆ ಹೇಳು” ಅಂತ ಹೇಳಿದ್ರು. ಇದು ನಮ್ಮ ತಲೆಗೆ ಕಟ್ಟುವ ಕೆಲಸ. ನಾವು ಭಿಕ್ಷೆ ಎತ್ತಿಯಾದರೂ ಬದುಕುತ್ತೇವೆ, ಇಲ್ಲಿರುವುದು ಬೇಡ ಎಂದು ನಾನು, ಅಕ್ಕ, ಭಾವ ತೀರ್ಮಾನ ಮಾಡಿ ಹೊರಟೆವು ಎಂದು ಚಿನ್ನಯ್ಯ ವಿಡಿಯೋದಲ್ಲಿ ಹೇಳಿದ್ದಾನೆ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಬಂದು ದಕ್ಷಿಣಕನ್ನಡ ಜಿಲ್ಲಾ ಎಸ್‌ಪಿ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿ ನಂತರ ನ್ಯಾಯಾಧೀಶರ ಮುಂದೆಯೂ ಹೇಳಿಕೆ ನೀಡಿದ್ದ ದೂರುದಾರ ಚಿನ್ನಯ್ಯ ಎಸ್‌ಐಟಿ ತನಿಖೆಯ ವೇಳೆಗೆ ಸರಿಯಾದ ಜಾಗ ತೋರಿಸದೇ ಎರಡು ವಾರಗಳ ಕಾಲ ಯಾಮಾರಿಸಿದ್ದ. ”ನಾನು ಹೇಳಿದ್ದು ಸುಳ್ಳು, ಬೇರೆಯವರ ಒತ್ತಾಯಕ್ಕೆ ಸುಳ್ಳು ಹೇಳಿದ್ದೆ, ಅಧಿಕೃತ ಶವಗಳನ್ನು ಮಾತ್ರ ಹೂತಿದ್ದೇನೆಎಂದು ಹೇಳಿ ಧರ್ಮಸ್ಥಳದ ಪರ ಇರುವ ತಂಡಕ್ಕೆ ಸಿಹಿಸುದ್ದಿ ಕೊಟ್ಟಿದ್ದ. ಆದರೆ, ತಾನು ಪೊಲೀಸರ ಮುಂದೆ ತಂದಿದ್ದ ತಲೆ ಬುರುಡೆ ಸೌಜನ್ಯ ಮಾವ ವಿಠಲ ಗೌಡ ತಂದುಕೊಟ್ಟಿದ್ದು ಎಂದು ಹೇಳಿದ್ದು, ಒಂದರ್ಥದಲ್ಲಿ ಸರಿಯಾದ ಸಾಕ್ಷ್ಯಗಳನ್ನು ಕಲೆ ಹಾಕಲು ಎಸ್‌ಐಟಿಗೆ ನೆರವಾಗಿದೆ ಎಂದೇ ಹೇಳಬಹುದು. ಮೊದಲ ಹೇಳಿಕೆಯನ್ನು ಬದಲಿಸಿದ್ದೇ ಈಗ ಚಿನ್ನಯ್ಯನಿಗೆ ಮುಳುವಾಗಿದೆ, ಆತ ಜೈಲಿನಲ್ಲಿದ್ದಾನೆ. ಆದರೆ ಆತ ಎರಡು ವರ್ಷಗಳ ಹಿಂದೆ ಸೌಜನ್ಯ ಹೋರಾಟಗಾರರನ್ನು ಭೇಟಿಯಾಗಿದ್ದಾಗ ಆಡಿದ್ದ ಮಾತುಗಳು ಈಗ ಬಹಳ ಸದ್ದು ಮಾಡುತ್ತಿವೆ. ಚಿನ್ನಯ್ಯನ ಹೇಳಿಕೆಗಳು ಸೌಜನ್ಯ ಪ್ರಕರಣಕ್ಕೆ ಮತ್ತೆ ಮರು ಜೀವ ನೀಡುವುದೇ ಎಂಬ ಕುತೂಲಹ ಎಲ್ಲರದ್ದಾಗಿದೆ.

ಚಿನ್ನಯ್ಯನ ಮಹತ್ವದ ಹೇಳಿಕೆಯ ವಿಡಿಯೋ ಕಂತು ಕಂತುಗಳಲ್ಲಿ ಬಿಡುಗಡೆಯಾಗುತ್ತಿವೆ. 2023ರಲ್ಲಿ ಸಂತೋಷ್‌ ರಾವ್‌ ನಿರಪರಾಧಿ ಎಂದು ಸಿಬಿಐ ಕೋರ್ಟ್‌ ತೀರ್ಪು ಬಂದ ನಂತರ, ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ದಕ್ಷಿಣ ಕನ್ನಡದಲ್ಲಿ ಭಾರೀ ಪ್ರತಿಭಟನೆಗಳಾಗಿದ್ದವು. ನಂತರ ಅದು ಇಡೀ ರಾಜ್ಯಕ್ಕೆ ವಿಸ್ತರಿಸಿತ್ತು. ಆ ಸಮಯದಲ್ಲಿ ಚಿನ್ನಯ್ಯ ಎಂಬ ವ್ಯಕ್ತಿ ವಿಠಲ ಗೌಡರಿಗೆ ಕರೆ ಮಾಡಿ ತಾನು ಪಾಪಪ್ರಜ್ಞೆಯಿಂದ ಪೊಲೀಸರ ಮುಂದೆ ಹೇಳಿಕೆ ನೀಡುವುದಾಗಿ ತಿಳಿಸಿದ್ದ. ಆ ನಂತರ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಮನೆಗೂ ಪತ್ನಿ ಸಮೇತ ಬಂದು ನೂರಾರು ಶವ ಹೂತು ಹಾಕಿರುವ ವಿಚಾರ, ಅಲ್ಲಿ ಅನುಮಾನಾಸ್ಪದವಾಗಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾತಾಡಿದ್ದ. ಆಗ ಆತನ ಹೇಳಿಕೆಗಳನ್ನು ವಿಡಿಯೋ ದಾಖಲೀಕರಣ ಮಾಡಿಕೊಂಡಿದ್ದರು. ಆ ವಿಡಿಯೋಗಳು ಎರಡು ದಿನಗಳಿಂದ ವೈರಲ್‌ ಆಗುತ್ತಿವೆ. ಅದರಲ್ಲಿ ಆತ ಹೇಳಿರುವ ಒಂದು ಹೇಳಿಕೆ ಬಹಳ ಮಹತ್ವದ್ದಾಗಿದ್ದು ಸೌಜನ್ಯ ಪ್ರಕರಣಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಸಾಕ್ಷಿಯಾಗಬಲ್ಲುದೇ ಎಂಬ ಚರ್ಚೆ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವೈರಲ್‌ ಆದ ವಿಡಿಯೋದಲ್ಲಿ ಆತ ಹೇಳಿದ್ದೇನು ಗೊತ್ತೇ?

ನಾನು ತಮಿಳುನಾಡಿನವನಾಗಿದ್ದು 1994ರಿಂದ 2015ರವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಕಾರ್ಮಿಕನಾಗಿದ್ದೆ. ಸೌಜನ್ಯ ಸಾವಿಗೆ ಸಂಬಂಧಿಸಿದಂತೆ ನಾನು ಏನಾದರೂ ಸಾಕ್ಷಿ ಹೇಳಬಹುದು ಎಂಬ ಕಾರಣಕ್ಕೆ ನನ್ನನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಹೇಳಿದ್ದಾನೆ. ಸೂಪರ್‌ವೈಸರ್‌ ರಾಜೇಂದ್ರ ರೈ ಒಂದು ಕತೆ ಕಟ್ಟಿದ್ರು, ಸೌಜನ್ಯ ಬಾಡಿಯನ್ನು ವಿಠಲ ಅವರ ಹೋಟೇಲಿನಲ್ಲಿ ಮೂಟೆ ಕಟ್ಟಿ ಇಟ್ಟಿದ್ದ, ನಾವು ಹೂತು ಹಾಕಿದೆವು ಎಂದು ಪೊಲೀಸರು ಕೇಳಿದ್ರೆ ಹೇಳಿ ಅಂತ ಹೇಳ್ತಾರೆ. ಮನೆಗೆ ಬಂದು ನಾವೆಲ್ಲ ಮಾತಾಡಿಕೊಂಡು ಒಂದು ತೀರ್ಮಾನಕ್ಕೆ ಬಂದೆವು. ಇದು ನಮ್ಮ ತಲೆಗೆ ಕಟ್ಟುವ ಕೆಲಸ ಎಂದುಕೊಂಡು ನಾವು ಭಿಕ್ಷೆ ಎತ್ತಿಯಾದರೂ ಬದುಕುತ್ತೇವೆ, ಇಲ್ಲಿರುವುದು ಬೇಡ. ಊರಿಗೆ ಹೋಗಿ ಏನಾದರೂ ಕೆಲಸ ಮಾಡಿ ಬದುಕುತ್ತೇವೆ ಎಂದು ನನ್ನ ಅಕ್ಕ ಭಾವ ನಾವೆಲ್ಲ ತೀರ್ಮಾನ ಮಾಡಿ ಹೊರಡುತ್ತೇವೆ.

Netravathi

ಪ್ರಕೃತಿ ಚಿಕಿತ್ಸಾಲಯದ ಎದುರಿಗೆ ದ್ವಾರದಲ್ಲಿ ಎರಡು ಸಿಸಿ ಟಿವಿ ಕ್ಯಾಮೆರಾ ಇಟ್ಟಿರ್ತಾರೆ. ಆಪೋಸಿಟ್‌ ಬಸ್‌ ಸ್ಟ್ಯಾಂಡ್‌ನಲ್ಲಿ ಎರಡೂ ಕಡೆ ಕ್ಯಾಮೆರಾ ಫಿಕ್ಸ್‌ ಮಾಡಿರ್ತಾರೆ. ಅದರಲ್ಲಿ ಮಣ್ಣಸಂಕದವರೆಗೂ ರೆಕಾರ್ಡ್‌ ಆಗುತ್ತಿರುತ್ತದೆ. ಕೆಲಸ ಮಾಡುವಾಗ, ಕಸಕ್ಕೆ ಬೆಂಕಿ ಕೊಡುವಾಗ, ಏನೇ ಕೆಲಸ ಮಾಡಿದರೂ ನೇತ್ರಾವತಿ ಸ್ನಾನಘಟ್ಟದ ಆಫೀಸಿನ ಟಿವಿಯಿಂದ ನೋಡಬಹುದು. ಈ ಕೇಸಿನಲ್ಲಿ ಆ ಬಸ್‌ಸ್ಟ್ಯಾಂಡ್‌ ಅನ್ನೇ ತೆಗೆದು ಬಿಟ್ಟಿದ್ದಾರೆ. ಪ್ರಕೃತಿ ಚಿಕಿತ್ಸಾಲಯದ ಹಿಂದಿನ ಗೇಟಿನಲ್ಲಿ ಕೆಲಸದ ಮಹಿಳೆಯರು ಹೋಗುತ್ತಿದ್ದರು. ಅಲ್ಲಿಯೇ ಈ ಮೂವರ ಮನೆಗಳು ಇವೆ. ಈ ಕೇಸು ಬಂದ ನಂತರ ಆ ಗೇಟು ಕ್ಲೋಸ್‌ ಮಾಡಿ ಬಿಟ್ರು. ಆ ಗೇಟಿನ ಎದುರು ಒಂದು ಮನೆ ಇತ್ತು. ಆ ಮನೆ ಯಜಮಾನ ಸತ್ತಾಗ ನಾವೇ ಸುಟ್ಟು ಹಾಕಿದೆವು. ಧರ್ಮಸ್ಥದಿಂದ ಟ್ರ್ಯಾಕ್ಟರ್‌ನಲ್ಲಿ ಸೌದೆ ತಂದು ಸುಟ್ಟು ಹಾಕಿದ್ದೆವು. ಯಾಕಂದ್ರೆ ಆ ಜಾಗ ಧರ್ಮಸ್ಥಳದವರಿಗೆ ಬೇಕಿತ್ತು. ಇದು ನನಗೆ ಗೊತ್ತಿದ್ದ ಮಾಹಿತಿ.

ಒಂದು ದಿನ ನಾನು ಊರಿಗೆ ಹೋಗಿದ್ದೆ, ಬಾಲಕೃಷ್ಣ ಮ್ಯಾನೇಜರ್‌ ಫೋನ್‌ ಮಾಡಿ ಎಲ್ಲಿ ಹೋಗಿದ್ದಿ ಮಾರಾಯ, ಇಲ್ಲಿ ಹೆಣ ಬಿದ್ದರೂ ತೆಗೆಯಲು ಜನ ಇಲ್ಲ. ಬರುವುದಿದ್ದರೆ ಬೇಗ ಬಾ, ಇಲ್ಲದಿದ್ದರೆ ನಿನ್ನ ಮನೆಗೆ ಬೀಗ ಹಾಕುತ್ತೇವೆ ಅಂದ್ರು. ನಾನು ಬರುವಾಗ ಬೆಳಿಗ್ಗೆ ಹತ್ತು ಗಂಟೆ ಆಗಿತ್ತು. ನಾಲ್ಕೈದು ವ್ಯಾನ್‌ ಬಂತು. ಶ್ವಾನದಳ ತಂದಿದ್ರು. ಆಗ ಹೆಣ ಇದೆ ಅಂತ ಗೊತ್ತಾಯ್ತು, ಹೋದೆ. ಮಂಗಳೂರಿನಿಂದ ಬಂದ ಪೊಲೀಸರು ಅವರಾರೂ ಹೆಣ ಇದ್ದ ಜಾಗಕ್ಕೆ ಹೋಗಲಿಲ್ಲ. ಬೆಳ್ತಂಗಡಿ ಮತ್ತು ಧರ್ಮಸ್ಥಳ ಪೊಲೀಸರು ಮಾತ್ರ ಶವ ಇದ್ದ ಜಾಗಕ್ಕೆ ಹೋಗಿದ್ರು. ಮತ್ತೆ ಅರ್ಧಗಂಟೆ ಕಾರ್ಯಾಚರಣೆ ಮಾಡಿ ಪೊಲೀಸರು ನಾಯಿ ಕರೆದುಕೊಂಡು ಹೊರಟ್ರು. ಡೆಡ್‌ಬಾಡಿ ತೆಗೊಂಡು ಹೋದ್ರು. ಅದು ಸೌಜನ್ಯಳ ಶವ ಅಂತ ಗೊತ್ತಾಯ್ತು. ನಂತರ ಬಾಲಕೃಷ್ಣ ಪೂಜಾರಿ ಅವರು ಸೌಜನ್ಯ ತಾಯಿಯನ್ನು ಬೆನಕ ಆಸ್ಪತ್ರೆಯಲ್ಲಿ ಕೂಡಿ ಹಾಕಿದ್ರು. ಮಾನಸಿಕ ಅಸ್ವಸ್ಥರಾಗಿದ್ದಾರೆ ಹೊರಗೆ ಬಿಡಬೇಡಿ ಅಂತ ಕೂಡಿ ಹಾಕಿ, ತಂದೆಯನ್ನು ಸಾಕ್ಷಿ ಹೇಳಲು ಬೆಳ್ತಂಗಡಿ ಪೊಲೀಸ್‌ ಸ್ಟೇಷನ್‌ಗೆ ಕರೆದುಕೊಂಡು ಹೋದ್ರು. ನಾನು ಡೆಡ್‌ ಬಾಡಿ ನೋಡಲು ಹೋದರೆ, ಬ್ಯಾರೆಲ್‌ ಎಲ್ಲ ಅಡ್ಡ ಇಟ್ಟಿದ್ರು, ಕಿಟಕಿ ಕೂಡಾ ಕ್ಲೋಸ್‌ ಮಾಡಿದ್ರು. ಮತ್ತೆ ಸ್ವಲ್ಪ ದಿನ ಆದಾಗ ರವಿ ಪೂಜಾರಿ ಎಣ್ಣೆ ಹಾಕಿಕೊಂಡು ಭಯಭೀತಿಯಿಂದ ಇದ್ದ. ಆಗ ಕಾಫಿ ಅಂಗಡಿಯವರಿಗೆ ಮೂರು ಸಾವಿರ ಸಾಲ ಕೊಟ್ಟೆ, ಮನೆಯಲ್ಲಿ ಸ್ವಲ್ಪ ಹಣ ಇಟ್ಟಿದ್ದೇನೆ ಎಂದು. ಎಲ್ಲಿಂದ ಅಷ್ಟು ಹಣ ಎಂದು ಕೇಳಿದ್ರೆ, ಚಿಕ್ಕ ದಣಿಗಳು ಇಪ್ಪತ್ತೈದು ಸಾವಿರ ಕೊಟ್ರು ಎಂದು ಹೇಳಿದ. ಯಾಕೆ ಅಂತ ಕೇಳಿದ್ರೆ ನಿನಗೆ ಏನು ಗೊತ್ತು, ಆವತ್ತು ನಾನು ಫೋನ್‌ ಮಾಡಿದಾಗ ನೀನು ಬಂದಿದ್ರೆ ಗೊತ್ತಾಗ್ತಿತ್ತು. ನನಗೆ ಗೊತ್ತು, ಯಾರಿಗೂ ಹೇಳಬೇಡ ಅಂದ. ಬಹಳ ಬೇಜಾರಾಯ್ತು. ಮರುದಿನ ಬೆಳಿಗ್ಗೆ ಹ್ಯಾಂಗ್‌ ಮಾಡಿಕೊಂಡ ಎಂಬ ಸುದ್ದಿ ಬಂತು. ಬೆಳಿಗ್ಗೆ ವಿಠಲದ ಹೋಟೆಲಿನಲ್ಲಿ ಕಾಫಿ ಕುಡಿದು ತಿಂಡಿ ತಿಂದು ಪೇಪರ್‌ ಓದಿ ಬಂದಿದ್ದ ಅಂತೆ. ನಮಗೆ ನೋಡಲೂ ಬಿಡಲಿಲ್ಲ. ಅಷ್ಟು ಬೇಗ ಶವ ಇಳಿಸಿ ಮನೆಗೆ ಕೊಟ್ಟು ಬಂದಿದ್ರು. ನನಗೆ ಅಷ್ಟು ಫ್ರೆಂಡ್‌ ಆಗಿದ್ದ. ಅವನನ್ನು ರೂಂ ಬಾಯ್ಗಳೇ ಕೊಲೆ ಮಾಡಿದ್ದು. ರಾಧಾಕೃಷ್ಣ, ಯೋಗೇಶ್‌ ಅವರೇ ಮಾಡಿದ್ದಾರೆ. ತಿಂಡಿ ತಿಂದು ಬಂದು ಹ್ಯಾಂಗ್‌ ಮಾಡಿಕೊಂಡಿರಲು ಸಾಧ್ಯವೇ ಇಲ್ಲ. ಒಂದು ಸಾಕ್ಷಿಯನ್ನು ಸಾಯಿಸಿದ್ರು, ಇನ್ನು ನಮ್ಮನ್ನೂ ಮುಗಿಸುತ್ತಾರೆ ಅಂತ ನಮಗೆ ಭಯ ಶುರುವಾಯ್ತು.

ರಾಜೇಂದ್ರ ರೈ ಒಂದು ಕತೆ ಕಟ್ಟಿದ್ರು, ಪೊಲೀಸರು ಕೇಳಿದ್ರೆ ಸೌಜನ್ಯ ಶವವನ್ನು ವಿಠಲ ಹೋಟೆಲಿನಲ್ಲಿ ಮೂಟೆ ಕಟ್ಟಿ ಇಟ್ಟಿದ್ದ, ನಾವು ಹೂತು ಹಾಕಿದೆವು ಎಂದು ಹೇಳಿ ಎಂದು ಹೇಳ್ತಾರೆ. ಇದು ನಮ್ಮ ತಲೆಗೆ ಕಟ್ಟುವ ಕೆಲಸ ಎಂದುಕೊಂಡು ನಾವು ಭಿಕ್ಷೆ ಎತ್ತಿಯಾದರೂ ಬದುಕುತ್ತೇವೆ. ಊರಿಗೆ ಹೋಗಿ ಏನಾದರೂ ಕೆಲಸ ಮಾಡು ಬದುಕುತ್ತೇವೆ ಎಂದು ನನ್ನ ಅಕ್ಕ ಭಾವ ನಾವೆಲ್ಲ ತೀರ್ಮಾನ ಮಾಡಿ ಹೊರಡುತ್ತೇವೆ. ಜೀವನ ಮೂಲ ಅಂತ ಮೂಲ ವೇತನದಿಂದ ಕಾಸು ಹಿಡಿದುಕೊಳ್ತಾರೆ. ಇಪ್ಪತ್ತೈದು ವರ್ಷ ಕೆಲಸ ಮಾಡಿದಾಗ ಮೂರೂವರೆ ಲಕ್ಷ ಕೊಡಬೇಕಿತ್ತು. ಆದರೆ ನಮಗೆ ಐವತ್ತು ಸಾವಿರ ಕೊಟ್ಟು ಸಹಿ ಹಾಕಿಸಿಕೊಂಡು ಕಳಿಸಿದ್ರು. ಸೌಜನ್ಯ ಕೇಸಿನಲ್ಲಿ ಪ್ರತಿಭಟನೆ ನಡೆಯುತ್ತಿರುವುದು ನೋಡಿ ನಾನು ಹೂತು ಹಾಕಿರುವ ಶವಗಳ ಬಗ್ಗೆ ಮಾಹಿತಿ ನೀಡಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಎಂದು ಬಂದಿದ್ದೇನೆ. ಬೇರೆ ಯಾರೂ ಒತ್ತಡ ಹಾಕಿ ಹೇಳಿಸುತ್ತಿಲ್ಲ.

ಸೌಜನ್ಯ ಕೇಸಿಗಿಂತ ಮೊದಲು ಆನೆ ಮಾವುತ ನಾರಾಯಣ ಸಫಲ್ಯ ಇದ್ರು. ಅವರ ತಂಗಿ ಯಮುನಾ ಗಂಗಾಗೆ ಗಾರ್ಡನ್‌ ಸೂಪರ್ವೈಸರ್‌ ರಾಜೇಂದ್ರ ರೈ ಲೈನ್‌ ಹೊಡಿತಿದ್ರು. ಆಕೆಗೆ ಮದುವೆ ಆಗಿಲ್ಲ ಅಂತ ಹೇಳೋದು, ಗಾರ್ಡನ್‌ನಲ್ಲಿ ಕೆಲಸ ಮಾಡುವಾಗ ಚುಡಾಯಿಸುತ್ತಿದ್ರು. ನಾರಾಯಣ ದೇವಸ್ಥಾನದಲ್ಲಿ ಅಶ್ವತ್ಥ ಮರ ಸುತ್ತುತ್ತಿದ್ದ. ಅವನು ಹುಚ್ಚ ಹೊಡೆದು ಓಡಿಸಿ ಅಂತ ಮ್ಯಾನೇಜರ್‌ ಹೇಳಿದಾಗ ನಾವು ಸಕ್ಕತ್‌ ಹೊಡಿತಿದ್ದೆವು. ಬೈಯ್ಯುತ್ತ ಓಡ್ತಿದ್ದ. ನಂತರ ರಿಕ್ಷಾ ಚಾಲಕರು ಆತ ಹುಚ್ಚ ಅಲ್ಲ, ಆತನ ಜಮೀನು ಇದೆ. ಅವರ ಜಾಗ ಖಾಲಿ ಮಾಡಿಸಲು ಹೀಗೆ ಮಾಡ್ತಿದ್ದಾರೆ ಎಂತ ಹೇಳಿದ್ರು. ಒಂದು ದಿನ ರಾತ್ರಿ ಅವರ ಮನೆಗೆ ನುಗ್ಗಿದ ಉದಯ್‌ ಜೈನ್‌ ಮತ್ತು ರಾಜೇಂದ್ರ ರೈ ಯಮುನಾ ಅತ್ಯಾಚಾರ ಮಾಡ್ತಾರೆ. ಆಗ ನಾರಾಯಣ ಬರ್ತಾರೆ. ಅವರು ನೋಡಿದ್ರು ಅಂತ ಇಬ್ಬರನ್ನೂ ಕೊಲೆ ಮಾಡಿ, ಆಕೆಯ ಕಿವಿಯೋಲೆ ಕಸಿದು, ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯನ್ನು ಹೊರಗೆ ಎಸೆದು ದರೋಡೆ ಅಂತ ಬಿಂಬಿಸಲು ಯತ್ನಿಸಿದ್ದಾರೆ. ಮರುದಿನ ಪೊಲೀಸ್‌ ನಾಯಿ ಆ ಜಾಗದಿಂದ ಹೊಸ ಬಸ್‌ ನಿಲ್ದಾಣಕ್ಕೆ ಹೋಗಿ ನಿಂತುಬಿಟ್ಟಿದೆ. ಅಂದ್ರೆ ಆರೋಪಿಗಳು ಬಸ್‌ಹತ್ತಿ ಹೋಗಿದ್ದಾರೆ ಎಂದು ನಂಬುವಂತೆ ಮಾಡಿದ್ರು. ಎಂದು ಜೋಡಿ ಕೊಲೆಯ ಬಗ್ಗೆಯೂ ಮಾತಾಡಿದ್ದಾರೆ.

SIT Sowjanya case Uday jain
ಉದಯ್‌ ಜೈನ್‌

ಸೌಜನ್ಯ ಕುಟುಂಬ ಆರೋಪಿಸುತ್ತಿರುವ ಉದಯ್‌ ಜೈನ್‌ನ ನಡವಳಿಕೆ ಬಗ್ಗೆ ವಿವರವಾಗಿ ಮಾತನಾಡಿದ್ದಾನೆ. ಉದಯ್‌ ರಾತ್ರಿ ಹಗಲು ರಿಕ್ಷಾ ಓಡಿಸುತ್ತಿದ್ದ, ರಿಕ್ಷಾದಲ್ಲೇ ಮಲಗುತ್ತಿದ್ದ. ಪಂಚೆ ಉಟ್ಟುಕೊಂಡೇ ರಿಕ್ಷಾ ಓಡಿಸುತ್ತಿದ್ದ. ಪ್ರತಿಮಾ ಸ್ಟುಡಿಯೋದಲ್ಲಿ ಮಲಗುತ್ತಿದ್ದ. ಪ್ರವಾಸಿಗಳನ್ನು ಬಾಹುಬಲಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಬಿಡುತ್ತಿದ್ದ ಆತ ರಿಕ್ಷಾದಲ್ಲಿಯೇ ಕುಳಿತು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಅಷ್ಟು ಕ್ರೂರ ಪಾಪಿ ಅವನು. ಬೇರೆ ಊರಿನಿಂದ ಬಂದ ಒಂಟಿ ಹೆಂಗಸರನ್ನು ಟಾರ್ಗೆಟ್‌ ಮಾಡಿ ಅವರನ್ನು ಕಾಡಿಗೆ ಕರೆದುಕೊಂಡು ಹೋಗಿ ಕೆಡಿಸುತ್ತಿದ್ದ. ಹಣ ಕೊಡುತ್ತಿದ್ದನೋ ಗೊತ್ತಿಲ್ಲ. ಬೇರೆ ರಿಕ್ಷಾದವರು ನೀನು ಕ್ಯೂನಲ್ಲಿ ನಿಲ್ಲದೇ ಎಲ್ಲೆಲ್ಲಿ ಓಡಿಸ್ತಿ ಅಂತ ಬೈತಿದ್ರು. ನಾನು ಜೈನ ಅಂತ ಕತೆ ಓಡಿಸ್ತಿದ್ದ.

ರತ್ನರಾಜ ಅಂತ ಬೆಟ್ಟದಲ್ಲಿ ಸ್ಟುಡಿಯೊ ಇಟ್ಟುಕೊಂಡಿದ್ದರು. ಅವರಿಗೆ ಸಹಾಯ ಮಾಡಲು ಉದಯ್‌ ಬರುತ್ತಿದ್ದ. ಪ್ರವಾಸಿಗರ ಫೋಟೋ ವಾರಕ್ಕೊಮ್ಮೆ ಪೋಸ್ಟ್‌ ಮಾಡೋದು ಕೆಲಸ. ಕೆಲವರ ಹೆಸರಿನ ರಸೀದಿ ಬರೆಯದೇ ನೇರವಾಗಿ ಕಳಿಸಿಕೊಡುತ್ತಿದ್ದರು. ಆ ಹಣದಲ್ಲಿ ಬಜ್ಜಿ ಬೋಂಡ ತಂದು ಗೆಳೆಯರೆಲ್ಲ ಕೂತು ತಿಂತಿದ್ರು. ನನಗೂ ಕೊಡ್ತಿದ್ರು. ಧೀರಜ್‌ ಜೈನ್‌ ಬೆಟ್ಟಕ್ಕೆ ಬರಲು ಕಾರಣವೇ ಇಲ್ಲ. ಆತನ ತಂದೆ ಮ್ಯಾನೇಜರ್‌ ಆಗಿದ್ರು. ಈಗ ಅವರು ಸತ್ತ ನಂತರ ಅವನಿಗೇ ಮ್ಯಾನೇಜರ್‌ ಕೆಲಸ ಕೊಟ್ಟಿದ್ದಾರೆ. ಹರ್ಷೇಂದ್ರ ಹೆಗ್ಗಡೆ ಮಗ ನಿಶ್ಚಲ್‌ ಜೈನ್ ಜೊತೆಗೆ ಓಡಾಡುತ್ತಾ ಇರುತ್ತಿದ್ದ. ಅವನ ಒಡನಾಟ ಉದಯ್‌ ಜೈನ್‌ಗೆ ಇತ್ತು. ಹೊರ ಪ್ರಪಂಚಕ್ಕೆ ಕಾಣಿಸುತ್ತಿರಲಿಲ್ಲ. ಸಣ್ಣ ದಣಿಯ ಗೇಟ್‌ ಕೀಪರ್‌ ಚಿನ್ನಯ್ಯ ಅಂತ ಇದ್ದರು, ಅವರನ್ನು ಹತ್ತು ಸಾವಿರ ಹಣ ಕೊಟ್ಟು ಬಿಡಿಸ್ತಾರೆ. ಆ ನಂತರ ಪರಮೇಶ್ವರ್‌ ಅಂತ ಗೇಟ್‌ ಕೀಪರ್‌ ಆಗಿ ಬರ್ತಾನೆ. ಬೇರೆ ಜಿಲ್ಲೆಗಳಿಂದ ಕಷ್ಟ ಹೇಳಿಕೊಳ್ಳಲು ಬಂದ ಒಂಟಿ ಹೆಂಗಸರನ್ನು ಟಾರ್ಗೆಟ್‌ ಮಾಡುವುದೇ ಇವನ ಕೆಲಸ. ಹರ್ಷೇಂದ್ರನ ಜೊತೆಗೆ ಮಹಿಳೆಯರು ಮಾತಾಡುವಾಗ ನೋಟ್‌ ಮಾಡಿಕೊಳ್ತಿದ್ದ. ಒಮ್ಮೆ ನಾನು ಗಂಡಸರ ಟಾಯ್ಲೆಟ್‌ ತೊಳೆಯುತ್ತಿದ್ದಾಗ ಆತ ಹೆಂಗಸರ ಟಾಯ್ಲೆಟ್‌ನಿಂದ ಹೊರ ಬರುತ್ತಿದ್ದ. ನಾನು ಅವನನ್ನು ಕೇಳಿದೆ, ಹೆಂಗಸರ ಟಾಯ್ಲೆಟ್‌ನಲ್ಲಿ ಏನು ಕೆಲಸ ಅಂತ ಕೇಳಿದಾಗ ಬಲ್ಬ್‌ ಹೋಗಿತ್ತು, ಅದಕ್ಕೆ ಹಾಕಲು ಹೋಗಿದ್ದೆ ಅಂತ ಹೇಳಿದ. ಬಲ್ಬ್‌ ಹಾಕೋದು ಎಲೆಕ್ಟ್ರೀಷಿಯನ್‌ ಕೆಲಸ ಇವನ್ಯಾಕೆ ಹೋದ ಅಂತ, ಆಕೆ ಅಲ್ಲಿಂದ ಒಬ್ಬ ಮಹಿಳೆ ಹೊರಗೆ ಬಂದ್ರು. ಆಗ ನಾನು ಆಕೆಗೆ ಏನಾಯ್ತು, ಅವ ಯಾಕೆ ಬಂದ ಎಂದು ಕೇಳಿದಾಗ ಆಕೆ ಕೈನಲ್ಲಿ ಮಾಡಿದ ಅಂತ ಹೇಳಿದ್ರು. ನನಗೆ ಬಹಳ ಬೇಸರವಾಯ್ತು. ಇಂಥದ್ದೆಲ್ಲ ಅಲ್ಲಿ ನಡಿತಿದೆಎಂದು ವಿವರಿಸಿದ್ದಾನೆ.

ಶವ ಹೂತ ಪ್ರಕರಣಕ್ಕೆ ಈಗ ವಿಠಲ ಗೌಡ ಮುಖ್ಯ ಸಾಕ್ಷಿ

ಜುಲೈನಲ್ಲಿ ಎರಡು ವಾರಗಳ ಕಾಲ ನೇತ್ರಾವತಿ ದಡದಲ್ಲಿ ಸುರಿಯುವ ಮಳೆ ಲೆಕ್ಕಿಸದೇ ಎಸ್‌ಐಟಿ ತಂಡ ಶೋಧಕಾರ್ಯ ನಡೆಸಿತ್ತು. ನಂತರ ಚಿನ್ನಯ್ಯ ತೋರಿಸಿದ ಹದಿಮೂರು ಜಾಗಗಳಲ್ಲಿ ಹುಡುಕಾಡಿದಾಗ ಎರಡು ಜಾಗಗಳಲ್ಲಿ ಮಾತ್ರ ಮಾನವ ಮೂಳೆ ಸಿಕ್ಕಿತ್ತು. ಎಸ್‌ಐಟಿ ತನಿಖೆಗೆ ಸರ್ಕಾರ ಸಣ್ಣ ಮಟ್ಟಿನ ಬ್ರೇಕ್‌ ಹಾಕಿತ್ತು. ಬುರುಡೆ ಹುಡುಕಾಟ ನಿಲ್ಲಿಸಿದ್ದ ಎಸ್‌ಐಟಿ ಕಳೆದ ಒಂದು ತಿಂಗಳಲ್ಲಿ ಹಲವರನ್ನು ಕರೆಸಿ ವಿಚಾರಣೆ ನಡೆಸಿದೆ. ಹಲವು ಹೊಸ ದೂರುಗಳನ್ನು ದಾಖಲಿಸಿಕೊಂಡಿದೆ.

snana ghatta

ಮುಖ್ಯವಾಗಿ ದೂರು ಕೊಡುವಾಗ ತಂದುಕೊಟ್ಟ ಬುರುಡೆ ವಿಠಲ ತಂದುಕೊಟ್ಟಿದ್ದು ಎಂಬ ಚಿನ್ನಯ್ಯನ ಹೇಳಿಕೆ ಈಗ ಎಸ್‌ಐಟಿ ತನಿಖೆಗೆ ಬೂಸ್ಟ್‌ ನೀಡಿದೆ. ವಿಠಲ ಅವರನ್ನು ಬುರುಡೆ ತಂದಿದ್ದ ಬಂಗ್ಲೆಗುಡ್ಡೆಯ ಜಾಗಕ್ಕೆ ಸ್ಥಳ ಮಹಜರಿಗೆ ಕರೆದೊಯ್ದ ಎಸ್‌ಐಟಿ ತಂಡಕ್ಕೆ ನಾಲ್ಕು ಮನುಷ್ಯರ ತಲೆ ಬುರುಡೆ, ಒಂದಷ್ಟು ಮೂಳೆಗಳು ಕಂಡಿವೆ, ಅವೂ ನೆಲದ ಮೇಲ್ಭಾಗದಲ್ಲೇ ಇದ್ದವು ಎಂದು ವರದಿಯಾಗಿದೆ. ಆಗ ಮೂಳೆಗಳನ್ನು ವಶಕ್ಕೆ ಪಡೆದಿರಲಿಲ್ಲ. ವಾರದ ನಂತರ ವಿಠಲ ಅವರನ್ನು ಆ ಸ್ಥಳಕ್ಕೆ ಫೊರೆನ್ಸಿಕ್‌ ತಂಡದ ಜೊತೆಗೆ ಹೋಗಿ ಮೂಳೆಗಳನ್ನು ಸಂಗ್ರಹಿಸಿದ್ದರು. ಅಷ್ಟೇ ಅಲ್ಲ ಇನ್ನೂ ಕೆಲವು ಜಾಗಗಳಲ್ಲಿ ಮೂಳೆಗಳು ಸಿಕ್ಕಿದ್ದವು. ಎಸ್‌ಐಟಿ ತನಿಖೆ ಶುರುವಾಗಿ ಶವ ಹೂತ ನೇತ್ರಾವತಿಯ ದಡದಲ್ಲಿ ಉತ್ಖನನ ಶುರುವಾಗುತ್ತಿದ್ದಂತೆ ಬೆಳ್ತಂಗಡಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೇಶವ ಗೌಡ ಮತ್ತು ಹಾಲಿ ಉಪಾಧ್ಯಕ್ಷ ಮಂಜುನಾಥ ರಾವ್‌ ತಾವೇ ಮುಂದೆ ಬಂದು ಮಾಧ್ಯಮಗಳ ಮುಂದೆ, ಪೊಲೀಸರು ಅನಾಥ ಶವಗಳನ್ನು ಮಹಜರು ನಡೆಸಿ, ಪೋಸ್ಟ್‌ ಮಾರ್ಟಂ ಮಾಡಿಸಿ ಹೂಳಲು ಗ್ರಾಮ ಪಂವಾಯ್ತಿಯವರಿಗೆ ನೀಡುತ್ತಾರೆ. ಅದನ್ನು ಕೆಲಸಗಾರರ ಕೈಯಲ್ಲಿ ಹೂತು ಹಾಕಿಸಿದ್ದೇವೆ. ಅದಕ್ಕೆ ದಾಖಲೆಗಳಿವೆ ಎಂದು ಹೇಳಿದ್ದರು. ಈಗ ಎಸ್‌ಐಟಿ ಅವರನ್ನೂ ವಿಚಾರಣೆಗೆ ಒಳಪಡಿಸಿದೆ.

ಬೆಳ್ತಂಗಡಿ ಪೊಲೀಸರು ಎರಡು ವರ್ಷದ ಹಿಂದೆ ಅನಾಥ ಶವ ಹೂತಿರುವ ದಾಖಲೆಗಳನ್ನು ನಾಶಪಡಿಸಿದ್ದಾರೆ. ಗ್ರಾಮಪಂಚಾಯ್ತಿಯ ದಾಖಲೆಗಳು ಸುಳ್ಳು, ಪೋರ್ಜರಿ ಸಹಿಗಳು ಎಂದು ಮೊದಲ ನೋಟದಲ್ಲೇ ತಿಳಿಯುವ ಸಂಗತಿ. ಇನ್ನು ಸೌಜನ್ಯ ಪ್ರಕರಣದ ನಂತರ ನೇತ್ರಾವತಿಯ ತೀರದಲ್ಲಿ ಅನುಮಾನಾಸ್ಪದ ಸಾವುಗಳ ಸಂಖ್ಯೆ ಕಡಿಮೆಯಾದವು ಎಂಬ ವಾಸ್ತವವೇ ಹಿಂದಿನ ಸಾವುಗಳ ಕಾರಣವನ್ನು ಸಾರಿ ಹೇಳುತ್ತವೆ.

ಇದನ್ನೂ ಓದಿ ʼಕೊಂದವರು ಯಾರು?’ ಆಂದೋಲನ- ಸಮಾಜದ ತಳಮಟ್ಟದವರೆಗೆ ವಿಸ್ತರಿಸುವ ಚಿಂತನೆ

ಚಿನ್ನಯ್ಯ ಹೇಳಿಕೆಯ ಪ್ರಕಾರ, ದಿನಕ್ಕೆ ಎರಡು ಮೂರು ಶವ ಹೂತು ಹಾಕುತ್ತಿದ್ದನಂತೆ. ಮ್ಯಾನೇಜರ್‌ ಕರೆದಾಗ ಹೋಗಿಲ್ಲ ಅಂದ್ರೆ ಮನೆಗೆ ಬಂದು ದೌರ್ಜನ್ಯ ಮಾಡ್ತಿದ್ರು. ಇಪ್ಪತ್ತೈದು ರೂಪಾಯಿ ಸಂಬಳ ಇತ್ತು. ಅದನ್ನು ನಮ್ಮ ಮೇಲೆ ಎಸೆಯುತ್ತಿದ್ರು. ಯಾಕಂದ್ರೆ ನಾವು ಕಸ ಎತ್ತೋರು, ಶವ ಹೂಳೋರು ಎಂಬ ಕಾರಣಕ್ಕೆ. ನನಗೆ ಶವ ಹೂಳೋದು ಬಹಳ ಕಷ್ಟದ ಕೆಲಸ ಆಗಿತ್ತು. ಮನೆಗೆ ಹೋಗುವಾಗ ಮಕ್ಕಳಿಗೆ ಹುಷಾರಿರುತ್ತಿರಲಿಲ್ಲ. ಹೇಗೋ ಮಾಡಿಕೊಂಡು ಹೋಗುತ್ತಿದ್ದೆವು. ಹೆಚ್ಚು ಹೆಣ್ಣುಮಕ್ಕಳ ಶವ ಇರುತ್ತಿತ್ತು. ಶಾಲಾ ಮಕ್ಕಳ ಪೆಟಿಕೋಟ್‌ ಇರ್ತಿತ್ತು. ನಿಕ್ಕರ್‌ ಇರ್ತಿರಲಿಲ್ಲ. ಹೊಟ್ಟೆಗೆ ಸೀರೆ ಕಟ್ಟಿ ಸೇತುವೆಯಿಂದ ಇಳಿಸ್ತಿದ್ರು ಅನ್ನಿಸ್ತದೆ. ಶಾಲೆಯ ಬ್ಯಾಗ್‌ ಸಹಿತ ಮಣ್ಣು ಮಾಡ್ತಿದ್ದೆ. ಒಂದು ಹುಡುಗಿಯ ಶವ ಸಿಕ್ಕಿತ್ತು. ಬ್ಯಾಗಿನಲ್ಲಿರುವ ಪುಸ್ತಕ ಚೆಕ್‌ ಮಾಡಿದಾಗ, ಅದು ಪಟ್ರಮೆಯ ಹುಡುಗಿ ಅಂತ ಗೊತ್ತಾಯ್ತು. ಇಲ್ಲೇ ಹತ್ತಿರದ ಊರು, ಮನೆಯವರನ್ನು ಕರೆಸಿ ಸರ್‌ ಅಂತ ಪೊಲೀಸರಿಗೆ ಹೇಳಿದಾಗ, ಬೇಡ ಸುಮ್ಮನೆ ಮಣ್ಣು ಮಾಡು ಎಂದು ಹೇಳಿದ್ರು. ನಂತರ ನಾನು ಬ್ಯಾಗ್‌ ಸಹಿತ ಮಣ್ಣು ಮಾಡಿದ್ದೆ. ಪಕ್ಕದಲ್ಲಿಯೇ ಇದ್ದ ಟ್ಯಾಪಿಂಗ್‌ ಮಾಡುವ ಮನೆಯವರು ನೀರು ಕೊಟ್ಟು ಸಹಾಯ ಮಾಡಿದ್ರು. ಅದು ನನಗೆ ಈಗಲೂ ಕಾಡುತ್ತಿದೆ. ಅಡ್ರೆಸ್‌ ಇದ್ದರೂ ಮನೆಗೆ ತಲುಪಿಸಿಲ್ಲ ಅಂತ ಬೇಜಾರಾಗಿತ್ತು. ನನಗೆ ಬೆಳ್ತಂಗಡಿ ಮತ್ತು ಧರ್ಮಸ್ಥಳ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪ್ರತಿ ದಿನ ಸಂಜೆ ಪೊಲೀಸರಿಗೆ ಧರ್ಮಸ್ಥಳದಿಂದ ಹಣದ ಕವರ್‌ ಹೋಗ್ತಿತ್ತುಎಂದು 2023ರಲ್ಲಿ ರೆಕಾರ್ಡ್‌ ಮಾಡಲಾಗಿದೆ ಎನ್ನಲಾದ ವಿಡಿಯೋದಲ್ಲಿ ಚಿನ್ನಯ್ಯ ಹೇಳಿದ್ದಾನೆ.

̇

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...