ಭಾರತದ ನ್ಯಾಯ ವ್ಯವಸ್ಥೆಯಲ್ಲಿ, ವಿಶೇಷವಾಗಿ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ, ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಿ ದೀರ್ಘಕಾಲ ಬಂಧನದಲ್ಲಿ ಇರಿಸಿ ನಂತರ ಖುಲಾಸೆಗೊಳಿಸುವ ಪ್ರಕರಣಗಳು ಹೆಚ್ಚುತ್ತಿವೆ. ಅಕ್ಷರಧಾಮ ದೇವಾಲಯ ದಾಳಿ ಪ್ರಕರಣದಲ್ಲಿ ಮೂವರು ಮುಸ್ಲಿಮರ ಖುಲಾಸೆ, ಯುಪಿಯ ಸಮಾಜವಾದಿ ಪಕ್ಷದ ಮುಖಂಡ ಮೊಯಿದ್ ಖಾನ್ ಖುಲಾಸೆ ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ.
2002ರ ಸೆಪ್ಟೆಂಬರ್ 24ರಂದು ಗುಜರಾತ್‌ನ ಅಹಮದಾಬಾದ್‌ನ ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿಯಲ್ಲಿ 33 ಜನರು ಸಾವನ್ನಪ್ಪಿದ್ದರು ಮತ್ತು 86 ಜನರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮೂವರು ಮುಸ್ಲಿಂಮರಾದ ಅಬ್ದುಲ್ ರಶೀದ್ ಸುಲೇಮಾನ್ ಅಜ್ಮೇರಿ, ಮುಹಮ್ಮದ್ ಫಾರೂಕ್ ಮುಹಮ್ಮದ್ ಹಫೀಜ್ ಶೇಖ್ ಮತ್ತು ಮುಹಮ್ಮದ್ ಯಾಸಿನ್ ಅವರನ್ನು ಕಳೆದ ವಾರ ಅಹಮದಾಬಾದ್‌ನ ವಿಶೇಷ ಭಯೋತ್ಪಾದನಾ ತಡೆ ಕಾಯ್ದೆ (ಪೋಟಾ) ನ್ಯಾಯಾಲಯವು ಖುಲಾಸೆಗೊಳಿಸಿದೆ.
ದಾಳಿ ಸಂದರ್ಭದಲ್ಲಿ ಅಹಮದಾಬಾದ್ ನಿವಾಸಿಗಳಾದ ಸುಲೇಮಾನ್ ಅಜ್ಮೇರಿ ಮತ್ತು ಮುಹಮ್ಮದ್ ಫಾರೂಕ್ ಮುಹಮ್ಮದ್ ಹಫೀಜ್ ಶೇಖ್ ಭಾರತದಲ್ಲಿ ಇರಲಿಲ್ಲ ಮತ್ತು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಖುಲಾಸೆಗೊಂಡವರಿಗೆ ನ್ಯಾಯ ಸಿಗಲು ಆರು ವರ್ಷಗಳು ಬೇಕಾಯಿತು ಎಂದು ಮದನಿ ತೀವ್ರ ವಿಷಾದ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇತರ ಮೂವರು ವ್ಯಕ್ತಿಗಳನ್ನು ಈ ಹಿಂದೆಯೇ ಖುಲಾಸೆಗೊಳಿಸಿದೆ. ಈ ಖುಲಾಸೆಯು ವಿದ್ವಂಸಕ ಪ್ರಕರಣಗಳಲ್ಲಿ ಮುಸ್ಲಿಮರನ್ನು ಆರೋಪಿಯನ್ನಾಗಿಸಿ ದಶಕದ ನಂತರ ಖುಲಾಸೆಗೊಳಿಸುತ್ತಿರುವ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ.
2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಇದೀಗ ಅವರನ್ನು ಖುಲಾಸೆಗೊಳಿಸಿದೆ.
ಡಿಎನ್‌ಎ ಪರೀಕ್ಷೆಯಲ್ಲಿ ಅವರು ವಿರುದ್ಧ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಕೋರ್ಟ್ ಹೇಳಿದೆ. ಆದರೆ, ಪ್ರಕರಣ ನಡೆದ ಬಳಿಕೆ ಯೋಗಿ ಸರ್ಕಾರದ ಬುಲ್ಡೋಜರ್ ಮೊಯಿನ್ ಖಾನ್ ಅವರಿಗೆ ಸೇರಿದ್ದ ಬೇಕರಿ, ವಾಣಿಜ್ಯ ಕಟ್ಟಡವನ್ನು ನೆಲಸಮ ಮಾಡಿತ್ತು. ಬೇಕರಿಯ ನೌಕರ ಅತ್ಯಾಚಾರ ಪ್ರಕರಣ ದೋಷಿಯಾಗಿದ್ದಾನೆ. ಆದರೆ ಮೊಯಿನ್ ಅವರನ್ನು ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇದನ್ನು ರಾಜಕೀಕರಣಗೊಳಿಸಿದ್ದರು. ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ್ದ ಯೋಗಿ, ತಕ್ಕ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ ಎರಡು ದಿನದಲ್ಲಿ ಮೊಯಿನ್ ಖಾನ್ ಗೆ ಸೇರಿದ್ದ ಕಟ್ಟಡವನ್ನು ನೆಲಸಮ ಮಾಡಲಾಗಿತ್ತು. ಇದೀಗ ಖಾನ್ ಖುಲಾಸೆಗೊಂಡಿದ್ದಾರೆ. ಈಗ ಯೋಗಿ ಸರ್ಕಾರದ ಅಪರಾಧಕ್ಕೆ ಯಾವ ಶಿಕ್ಷೆಯಿದೆ?
ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಒಂದು ಭಯಾನಕ ಮಾದರಿ ಇದೇ. ಭಯೋತ್ಪಾದನಾ ದಾಳಿಗಳಾದ ತಕ್ಷಣ, ಕೆಲವು ನಿರ್ದಿಷ್ಟ ಹೆಸರುಗಳು, ನಿರ್ದಿಷ್ಟ ಧರ್ಮದ ಯುವಕರು ಆರೋಪಿಗಳಾಗುತ್ತಾರೆ. ವರ್ಷಗಳ ಕಾಲ ಕಾರಾಗೃಹ, ಹಿಂಸೆ, ಸಾಮಾಜಿಕ ಬಹಿಷ್ಕಾರ, ಕುಟುಂಬಗಳ ಕಣ್ಣೀರು ಅಂತಿಮವಾಗಿ ದಶಕಗಳ ನಂತರ ನ್ಯಾಯಾಲಯದಿಂದ ಒಂದೇ ಸಾಲಿನ ತೀರ್ಪು ಹೊರ ಬರತ್ತೆ.“ಪುರಾವೆಗಳ ಕೊರತೆಯಿಂದ ಖುಲಾಸೆ.” ಅಂತ.
ಆದರೆ ಈ ಪ್ರಕರಣ ಮಾತ್ರವಲ್ಲ, ಹಿಂದಿನ ಹಲವು ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಮುಸ್ಲಿಂ ಆರೋಪಿಗಳು ದೀರ್ಘಕಾಲ ಸೆರೆಯಲ್ಲಿದ್ದ ನಂತರ ಖುಲಾಸೆಗೊಂಡಿದ್ದಾರೆ. ಇಂತಹ ಪ್ರಕರಣಗಳು ನ್ಯಾಯ ವ್ಯವಸ್ಥೆಯಲ್ಲಿ ಇರುವ ಪಕ್ಷಪಾತ ಮತ್ತು ತನಿಖಾ ಲೋಪಗಳನ್ನು ಬಯಲು ಮಾಡುತ್ತವೆ.
ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ಹಲವು ಭಯೋತ್ಪಾದನೆ ಪ್ರಕರಣಗಳಲ್ಲಿ ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿ, ಹಿಂಸೆಗೆ ಒಳಪಡಿಸಿ, ನಂತರ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.
ಮುಂಬೈ ರೈಲು ಸ್ಫೋಟಗಳು (2006): 2006ರ ಜುಲೈ 11ರಂದು ಮುಂಬೈನ ಉಪನಗರ ರೈಲುಗಳಲ್ಲಿ ನಡೆದ ಏಳು ಸ್ಫೋಟಗಳಲ್ಲಿ 189 ಜನರು ಸಾವನ್ನಪ್ಪಿದ್ದರು ಮತ್ತು 800ಕ್ಕೂ ಹೆಚ್ಚು ಗಾಯಗೊಂಡಿದ್ದರು. 13 ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿ, ಅವರನ್ನು ಸಿಮಿ ಮತ್ತು ಲಷ್ಕರ್-ಎ-ತೈಬಾ ಸದಸ್ಯರೆಂದು ಆರೋಪಿಸಲಾಯಿತು. ಅವರು ಸುಮಾರು 19 ವರ್ಷಗಳ ಕಾಲ ಸೆರೆಯಲ್ಲಿದ್ದರು (ಒಬ್ಬರು ಕಮಲ್ ಅನ್ಸಾರಿ 2021ರಲ್ಲಿ ಕೋವಿಡ್‌ನಿಂದ ಜೈಲಿನಲ್ಲೇ ಸಾವನ್ನಪ್ಪಿದರು). 2025ರ ಜುಲೈ 21ರಂದು ಬಾಂಬೆ ಹೈಕೋರ್ಟ್ 12 ಜನರನ್ನು ಖುಲಾಸೆಗೊಳಿಸಿತು.

ಮಲೇಗಾಂವ್ ಸ್ಫೋಟಗಳು (2006): 2006ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಮಲೇಗಾಂವ್‌ನಲ್ಲಿ ನಡೆದ ಸ್ಫೋಟಗಳಲ್ಲಿ 40 ಜನರು ಸಾವನ್ನಪ್ಪಿದ್ದರು. ಒಂಬತ್ತು ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿ, ಸಿಮಿ ಸದಸ್ಯರೆಂದು ಆರೋಪಿಸಲಾಯಿತು. ಅವರು 10 ವರ್ಷಗಳ ಕಾಲ ಸೆರೆಯಲ್ಲಿದ್ದರು. 2016ರಲ್ಲಿ ಸೆಷನ್ಸ್ ಕೋರ್ಟ್ ಅವರನ್ನು ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ ನಿರ್ದೋಶಿಗಳು ಅಂತ ಬಿಡುಗಡೆ ಮಾಡಿತು.

ಮಕ್ಕಾ ಮಸೀದಿ ಸ್ಫೋಟ (2007, ಹೈದರಾಬಾದ್): 2007ರ ಮೇ 18ರಂದು ಹೈದರಾಬಾದ್‌ನ ಮಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ 14 ಜನರು ಸಾವನ್ನಪ್ಪಿದ್ದರು. ನಾಲ್ವರು ಮುಸ್ಲಿಂ ವ್ಯಕ್ತಿಗಳಾದ ಶೋಯಬ್ ಜಗಿರ್ದಾರ್, ಅಬ್ದುಲ್ ನಯೀಮ್, ಎಂಡಿ ಇಮ್ರಾನ್ ಖಾನ್ ಮತ್ತು ಸೈಯದ್ ಇಮ್ರಾನ್ ಅವರನ್ನು ಬಂಧಿಸಿ, ಹುಜಿಗೆ ಸಂಬಂಧಿಸಿದಂತೆ ಆರೋಪಿಸಲಾಯಿತು. ಅವರು 7 ವರ್ಷಗಳ ಕಾಲ ಸೆರೆಯಲ್ಲಿದ್ದರು. 2014ರಲ್ಲಿ ಸೆಷನ್ಸ್ ಕೋರ್ಟ್ ಅವರನ್ನು ಖುಲಾಸೆಗೊಳಿಸಿತು, ಆರೋಪಗಳನ್ನು ಬೆಂಬಲಿಸುವ ಸಾಕ್ಷ್ಯಗಳಿಲ್ಲ ಎಂದು ಹೇಳಿತು.

ಇರ್ಷಾದ್ ಅಲಿ ಮತ್ತು ಮೌರಿಫ್ ಕಮರ್ ಪ್ರಕರಣ (2005): 2005ರಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳಾದ ಇರ್ಷಾದ್ ಅಲಿ ಮತ್ತು ಮೌರಿಫ್ ಕಮರ್ ಅವರನ್ನು ಅಲ್-ಬದ್ರ್ ಬ್ರಿಗೇಡ್ ಸದಸ್ಯರೆಂದು ಬಂಧಿಸಲಾಯಿತು. ಅವರು ಮಾಜಿ ಇಂಟೆಲಿಜೆನ್ಸ್ ಬ್ಯೂರೋ ಮಾಹಿತಿದಾರರು. ಅವರು 11 ವರ್ಷಗಳ ಕಾಲ ಸೆರೆಯಲ್ಲಿದ್ದರು. 2017ರಲ್ಲಿ ದೆಹಲಿ ಟ್ರಯಲ್ ಕೋರ್ಟ್ ಅವರನ್ನು ಖುಲಾಸೆಗೊಳಿಸಿತು, ಅವರನ್ನು ತಪ್ಪಾಗಿ ಫ್ರೇಮ್ ಮಾಡಲಾಗಿತ್ತು ಎಂದು ಹೇಳಿತು. ಪೊಲೀಸ್ ತನಿಖೆಯಲ್ಲಿ ಲೋಪಗಳಿದ್ದವು.
ನಿಸಾರುದ್ದೀನ್ ಅಹ್ಮದ್ ಪ್ರಕರಣ (1994): 1994ರಲ್ಲಿ 19 ವರ್ಷದ ನಿಸಾರುದ್ದೀನ್ ಅಹ್ಮದ್ ಅವರನ್ನು ಬಾಬ್ರಿ ಮಸೀದಿ ಧ್ವಂಸದ ಮೊದಲ ವಾರ್ಷಿಕೋತ್ಸವದಂದು ಐದು ರೈಲು ಸ್ಫೋಟಗಳಲ್ಲಿ ಭಾಗಿಯಾಗಿದ್ದರು ಎಂದು ಬಂಧಿಸಲಾಯಿತು. ಅವರು 23 ವರ್ಷಗಳ ಕಾಲ ಸೆರೆಯಲ್ಲಿದ್ದರು. 2016ರಲ್ಲಿ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು, ಆರೋಪಗಳನ್ನು ಬೆಂಬಲಿಸುವ ಸಾಕ್ಷ್ಯಗಳಿಲ್ಲ ಎಂದು ಹೇಳಿತು.
ಹುಬ್ಬಳ್ಳಿ ಸಿಮಿ ಪ್ರಕರಣ (2008): 2008ರಲ್ಲಿ 17 ಮುಸ್ಲಿಂ ವ್ಯಕ್ತಿಗಳನ್ನು ಸಿಮಿ ಅಂದರೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ ಸದಸ್ಯರೆಂದು ಬಂಧಿಸಿ, ದೇಶದ ವಿರುದ್ಧ ಯುದ್ಧ ಮತ್ತು ಸ್ಫೋಟಕಗಳನ್ನ ಹೊಂದಿದ್ದಾರೆ ಎಂದು ಆರೋಪಿಸಲಾಯಿತು. ಅವರು 7 ವರ್ಷಗಳ ಕಾಲ ಸೆರೆಯಲ್ಲಿದ್ದರು. 2015ರಲ್ಲಿ ಹುಬ್ಬಳ್ಳಿ ಸೆಷನ್ಸ್ ಕೋರ್ಟ್ ಅವರನ್ನು ಖುಲಾಸೆಗೊಳಿಸಿತು, ಆರೋಪಗಳನ್ನು ಬೆಂಬಲಿಸುವ ಸಾಕ್ಷ್ಯಗಳಿಲ್ಲ ಎಂದು ಹೇಳಿತು.
ಹೈದರಾಬಾದ್ ಕಾನ್ಸ್ಪಿರಸಿ ಪ್ರಕರಣ (2010): 2010ರಲ್ಲಿ ರಿಯಾಜ್ ಖಾನ್ ಮತ್ತು ಅಬ್ದುಲ್ ಸಯೀದ್ ಅವರನ್ನು ಮಕ್ಕಾ ಮಸೀದಿ ಸ್ಫೋಟಕ್ಕೆ ಪ್ರತೀಕಾರವಾಗಿ ಪೊಲೀಸರನ್ನು ಕೊಲ್ಲುವ ಸಂಚು ರೂಪಿಸಿದ್ದರು ಎಂದು ಬಂಧಿಸಲಾಯಿತು. ಅವರು 7 ವರ್ಷಗಳ ಕಾಲ ಸೆರೆಯಲ್ಲಿದ್ದರು. 2017ರಲ್ಲಿ ಅಡಿಷನಲ್ ಮೆಟ್ರೋಪಾಲಿಟನ್ ಸೆಷನ್ಸ್ ಜಡ್ಜ್ ಅವರನ್ನು ಖುಲಾಸೆಗೊಳಿಸಿದರು. ಸಾಕ್ಷ್ಯಗಳಿಲ್ಲ ಎಂದು ಹೇಳಿತು. ಪ್ರಕರಣದಲ್ಲಿ ಐದು ಶಂಕಿತರು ಸಾವನ್ನಪ್ಪಿದ್ದರು.
ಸೂರತ್ ಸಿಮಿ ಪ್ರಕರಣ (2001): 2001ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಂ ಶಿಕ್ಷಣದ ಕುರಿತು ಸೆಮಿನಾರ್‌ನಲ್ಲಿ ಭಾಗವಹಿಸಿದ್ದ 127 ಮುಸ್ಲಿಂ ವ್ಯಕ್ತಿಗಳನ್ನು ಸಿಮಿ ಸದಸ್ಯರೆಂದು ಯುಎಪಿಎ ಅಡಿ ಬಂಧಿಸಲಾಯಿತು. ಅವರು ವಿವಿಧ ಅವಧಿಗಳ ಕಾಲ ಸೆರೆಯಲ್ಲಿದ್ದರು (ಉದಾ: ಮೊಹಮ್ಮದ್ ಅಬ್ದುಲ್ ಹೈ 14 ತಿಂಗಳು). ಐದು ಜನರು ವಿಚಾರಣೆ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. 2021ರ ಮಾರ್ಚ್ 6ರಂದು ಸೂರತ್ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು, ಪ್ರಾಸಿಕ್ಯೂಷನ್ ಸಾಕ್ಷ್ಯಗಳನ್ನು ಒದಗಿಸಲು ವಿಫಲವಾಯಿತು ಎಂದು ಹೇಳಿತು.
ಮೊಹಮ್ಮದ್ ಇಲ್ಯಾಸ್ ಪ್ರಕರಣ (1996): 1996ರ ಏಪ್ರಿಲ್ 27ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಸ್ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದರು. ಮೊಹಮ್ಮದ್ ಇಲ್ಯಾಸ್ ಅವರನ್ನು ಹರ್ಕತ್-ಉಲ್-ಅನ್ಸಾರ್ ಸಂಬಂಧಿಸಿದಂತೆ ಆರೋಪಿಸಲಾಯಿತು. ಅವರು 28 ವರ್ಷಗಳ ಕಾಲ ಸೆರೆಯಲ್ಲಿದ್ದರು. 2025ರ ನವೆಂಬರ್ 10ರಂದು ಅಲಹಾಬಾದ್ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು.
ಆದರೆ ಇಲ್ಲಿ ಪ್ರಶ್ನೆ ಬರೋದು, ನಿರಪರಾಧಿಯನ್ನು ಬಂಧಿಸಿದವರು ಯಾರಿಗೆ ಉತ್ತರ ಕೊಡಬೇಕು? ಕಳೆದುಹೋದ 6, 10, 15 ವರ್ಷಗಳಿಗೆ ಪರಿಹಾರ ಯಾರು ಕೊಡುತ್ತಾರೆ?
2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, UAPA ಕಾನೂನಿನ ಬಳಕೆ ಶೇ. 50ಕ್ಕಿಂತ ಹೆಚ್ಚು ಏರಿಕೆಯಾಗಿದೆ. 2019ರ ವರದಿ ಪ್ರಕಾರ, ಕಳೆದ 10 ವರ್ಷಗಳಲ್ಲಿ ನಡೆದ ಶೇ 91ರಷ್ಟು ದ್ವೇಷ ಅಪರಾಧಗಳು ಮೋದಿ ಸರ್ಕಾರದ ಕಾಲದಲ್ಲೇ ನಡೆದಿವೆ. ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ಹಾಗೂ ರಾಜ್ಯಗಳ ATS ವಿಭಾಗಗಳು ಸಾವಿರಾರು ಮುಸ್ಲಿಮರನ್ನು ಬಂಧಿಸಿವೆ. ಅವರಲ್ಲಿ ಬಹುತೇಕರು ನಂತರ ಖುಲಾಸೆಯಾಗಿದ್ದಾರೆ. ಬಂಧಿಸಿದ ನಂತರ ಅವರನ್ನು ವಿಚಾರಣೆಯ ಹೆಸರಿನಲ್ಲಿ ಕಿರುಕುಳ ನೀಡುವುದು ಇನ್ನೂ ಭಯಾನಕ.

ಒಬ್ಬ ಯುವಕ 20ನೇ ವಯಸ್ಸಿನಲ್ಲಿ ಬಂಧಿತನಾದರೆ, 30 ಅಥವಾ 35ಕ್ಕೆ ಹೊರಬರುವಾಗ ಆತನ 15 ವರ್ಷ ಕಳೆದು ಹೋಗಿರುತ್ತದೆ. ಉದ್ಯೋಗ ಇಲ್ಲ, ಸಮಾಜದಲ್ಲಿ ‘ಆರೋಪಿ’ ಎಂಬ ಮುದ್ರೆ, ಕುಟುಂಬ ಮಾನಸಿಕವಾಗಿ ಚೂರಾಗಿರುತ್ತದೆ, ನ್ಯಾಯಾಲಯ ಖುಲಾಸೆ ಮಾಡಿದರೂ, ಸಮಾಜ ಮನ್ನಣೆ ನೀಡುವುದಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಟದ ಹೆಸರಿನಲ್ಲಿ, ನಿರ್ದಿಷ್ಟ ಸಮುದಾಯದ ಮೇಲೆ ಅನುಮಾನ ಪಡುವುದು, ಇನ್ನೆಷ್ಟು ಕಾಲ ಮುಂದುವರಿಯುತ್ತದೆ? ನ್ಯಾಯ ವ್ಯವಸ್ಥೆ ಒಂದು ಶಿಕ್ಷಾ ಯಂತ್ರವಾಗಬಾರದು. ಅದು ರಕ್ಷಣೆ ನೀಡುವ ವ್ಯವಸ್ಥೆಯಾಗಬೇಕು. ಒಬ್ಬ ನಿರಪರಾಧಿ ದಶಕ ಜೈಲಿನಲ್ಲಿ ಕಳೆಯುವುದೇ, ದೇಶದ ಭದ್ರತೆನಾ? ನ್ಯಾಯ ತಡವಾದರೆ ಅದು ನ್ಯಾಯವೇ? ಅಕ್ಷರಧಾಮ ಪ್ರಕರಣದ ಖುಲಾಸೆ ಒಂದು ಸಂತೋಷದ ಸುದ್ದಿ ಹೌದು. ಆದರೆ ಕಳೆದುಹೋದ ಬದುಕನ್ನ ಯಾರು ಮರಳಿ ಕೊಡುತ್ತಾರೆ?





